ADVERTISEMENT

ಆಳ– ಅಗಲ | ಆಗುಂಬೆ ಘಾಟಿಯಲ್ಲಿ ಸುರಂಗ ಮಾರ್ಗ: ಪರಿಸರ V/S ಅಭಿವೃದ್ಧಿ

ಸೂಕ್ಷ್ಮ ಪರಿಸರಕ್ಕೆ ಧಕ್ಕೆಯ ಆತಂಕ

ಪ್ರವೀಣ್‌ ಕುಮಾರ್‌ ಪಿ.ವಿ
Published 18 ಫೆಬ್ರುವರಿ 2026, 23:30 IST
Last Updated 18 ಫೆಬ್ರುವರಿ 2026, 23:30 IST
ಆಗುಂಬೆ ಘಾಟಿಯಲ್ಲಿನ ಹಿಮ್ಮುರಿ ತಿರುವುಗಳ ವಿಹಂಗಮ ನೋಟ: ಪ್ರಜಾವಾಣಿ ಚಿತ್ರ/ ಫಕ್ರುದ್ದೀನ್ ಎಚ್‌.
ಆಗುಂಬೆ ಘಾಟಿಯಲ್ಲಿನ ಹಿಮ್ಮುರಿ ತಿರುವುಗಳ ವಿಹಂಗಮ ನೋಟ: ಪ್ರಜಾವಾಣಿ ಚಿತ್ರ/ ಫಕ್ರುದ್ದೀನ್ ಎಚ್‌.   

ರಾಷ್ಟ್ರೀಯ ಹೆದ್ದಾರಿ 169 ಎ. ಉಡುಪಿ ಜಿಲ್ಲೆಯನ್ನು ಶಿವಮೊಗ್ಗ ಜಿಲ್ಲೆ ಜೊತೆ ಬೆಸೆಯುತ್ತದೆ. ಪಶ್ಚಿಮ ಘಟ್ಟದ ಮೂಲಕ ಹಾದು ಹೋಗುವ ಈ ಹೆದ್ದಾರಿ ಆಗುಂಬೆ ಘಾಟಿ ಮೂಲಕ ಸಾಗುತ್ತದೆ. ರಸ್ತೆಯು ಆಗುಂಬೆ ಘಾಟಿ ಭಾಗದಲ್ಲಿ ತೀರಾ ಕಿರಿದಾಗಿದೆ. ಇಲ್ಲಿನ ರಸ್ತೆ ಕೆಲವೆಡೆ 5 ಮೀಟರ್‌ಗಳಷ್ಟೂ ಅಗಲವಿಲ್ಲ. 14 ಹಿಮ್ಮುರಿ (ಹೇರ್‌ಪಿನ್) ತಿರುವುಗಳನ್ನು ಹೊಂದಿರುವ ಈ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ಅವಕಾಶ ಇಲ್ಲ. ಪ್ರಯಾಣಿಕರು ಲಘು ವಾಹನಗಳ ಮೂಲಕ ಅಥವಾ ಮಿನಿ ಬಸ್‌ಗಳ ಮೂಲಕ ಮಾತ್ರ ಸಂಚರಿಸಬಹುದಷ್ಟೆ.  

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಿಂದ ಆರಂಭಗೊಳ್ಳುವ ಈ ಘಾಟಿಯು ಜಿಲ್ಲೆಯನ್ನು ಚಿಕ್ಕಮಗಳೂರು ಜಿಲ್ಲೆ ಮತ್ತು ಕರಾವಳಿ ಜೊತೆಗೆ ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿದೆ. ಆಗುಂಬೆ ಘಾಟಿಯಲ್ಲಿ ಪ್ರತಿದಿನ 10 ಸಾವಿರಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತವೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಿಂದ ಆಗುಂಬೆವರೆಗಿನ 31 ಕಿ.ಮೀ ಉದ್ದದ ರಸ್ತೆಯನ್ನು ದ್ವಿಪಥವನ್ನಾಗಿ ಅಭಿವೃದ್ಧಿ ಪಡಿಸಲಾಗಿದೆ. ಹೆಬ್ರಿಯಿಂದ ಉಡುಪಿವರೆಗಿನ 32 ಕಿ.ಮೀ ಉದ್ದದ ರಸ್ತೆಯ ಚತುಷ್ಪಥ ಕಾಮಗಾರಿ ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದೆ ಎನ್ನುತ್ತವೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ (ಎನ್ಎಚ್‌ಎಐ) ಮೂಲಗಳು.

ಮೇಗರವಳ್ಳಿಯಿಂದ ಆಗುಂಬೆ ನಡುವೆ ಸುಮಾರು ಮೂರು ಕಿ.ಮೀ ಉದ್ದದ ರಸ್ತೆಯನ್ನು ದ್ವಿಪಥಗೊಳಿಸುವ ಕಾಮಗಾರಿ ಅರಣ್ಯ ಇಲಾಖೆಯ ಅನುಮತಿ ವಿಳಂಬದ ಕಾರಣದಿಂದಾಗಿ ಇನ್ನೂ ಅನುಷ್ಠಾನವಾಗಿಲ್ಲ. ಆಗುಂಬೆಯಿಂದ ಸೋಮೇಶ್ವರವರೆಗಿನ 10 ಕಿ.ಮೀ ಉದ್ದದ ಆಗುಂಬೆ ಘಾಟಿಯ ಭಾಗ ಹಾಗೂ ಸೋಮೇಶ್ವರದಿಂದ ಹೆಬ್ರಿವರೆಗಿನ 10.6 ಕಿ.ಮೀ ಉದ್ದದ ರಸ್ತೆ ಇನ್ನೂ ವಿಸ್ತರಣೆ ಆಗಿಲ್ಲ. ವಿಸ್ತರಣೆಗೆ ಬಾಕಿ ಇರುವ ಸುಮಾರು 20 ಕಿ.ಮೀ ಉದ್ದದ ರಸ್ತೆಯು ದಟ್ಟ ಕಾನನದೊಳಗೆ ಹಾದುಹೋಗುತ್ತದೆ. 

ADVERTISEMENT

ಇತ್ತೀಚಿನ ವರ್ಷಗಳಲ್ಲಿ ಈ ಘಾಟಿಯನ್ನು ಬಳಸುವ ಕಾರು ಮತ್ತಿತರ ವಾಹನಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ. ಮಳೆಗಾಲದಲ್ಲಿ ಭೂಕುಸಿತ ಉಂಟಾದಾಗ, ಮರಗಳು ಬಿದ್ದಾಗ, ವಾಹನಗಳು ಕೆಟ್ಟು ನಿಂತಾಗಲೆಲ್ಲ ಆಗುಂಬೆ ಘಾಟಿಯಲ್ಲಿ ವಾಹನ ದಟ್ಟಣೆ ಸಮಸ್ಯೆ ಎದುರಾಗುವುದು ಮಾಮೂಲಿ. ಘಾಟಿಯಲ್ಲಿ ವಾಹನ ದಟ್ಟಣೆ ಉಂಟಾದಾಗ ಕೆಲವೊಮ್ಮೆ ಈ ಮಾರ್ಗದಲ್ಲಿ ವಾಹನಗಳ ಸಾಲು ಕಿಲೋಮೀಟರ್‌ಗಟ್ಟಲೆ ಬೆಳೆಯುತ್ತದೆ. ಇಲ್ಲಿ ರಸ್ತೆಯೂ ಕಿರಿದಾಗಿರುವುದರಿಂದ ಸಂಚಾರವನ್ನು ಸಹಜ ಸ್ಥಿತಿಗೆ ತರಲು ಹರಸಾಹಸ ಪಡಬೇಕಾಗುತ್ತದೆ.   

ತೀರಾ ಕಡಿದಾಗಿರುವ, ದಟ್ಟವಾದ ನಿತ್ಯಹರಿದ್ವರ್ಣದ ಕಾಡುಗಳಿಂದ ಆವೃತವಾಗಿರುವ ಈ ಘಾಟಿಯಲ್ಲಿ ರಸ್ತೆ ವಿಸ್ತರಣೆಗೆ ಇರುವ ಅವಕಾಶಗಳು ಕಡಿಮೆ. ಆಗುಂಬೆ ಘಾಟಿಯ 14 ತಿರುವುಗಳ ಸಂಖ್ಯೆಯನ್ನು ಕಡಿತಗೊಳಿಸುವ ಪ್ರಸ್ತಾವವಿತ್ತು. ಭಾರಿ ಸಂಖ್ಯೆಯಲ್ಲಿ ಮರಗಳನ್ನು ಕಡಿಯಬೇಕಾಗುತ್ತದೆ ಎಂಬ ಕಾರಣಕ್ಕೆ ಆ ಪ್ರಸ್ತಾವ ಕಾರ್ಯಸಾಧುವಲ್ಲ ಎಂಬ ನಿರ್ಧಾರಕ್ಕೆ ಪ್ರಾಧಿಕಾರ ಬಂದಿತ್ತು. ಆಗುಂಬೆ ಘಾಟಿಯ ಸೂಕ್ಷ್ಮ ಪರಿಸರ ವ್ಯವಸ್ಥೆಗೆ ಹೆಚ್ಚಿನ ಹಾನಿ ಆಗದಂತೆ ರಸ್ತೆ ಅಭಿವೃದ್ಧಿ ಮಾಡಲು ಸುರಂಗ ಮಾರ್ಗ ನಿರ್ಮಿಸುವ ಬಗ್ಗೆ ಚರ್ಚೆ ಹಿಂದಿನಿಂದಲೂ ನಡೆಯುತ್ತಿದೆ. 

ಚರ್ಚೆ ಮತ್ತೆ ಮುನ್ನೆಲೆಗೆ: ಈ ಹೆದ್ದಾರಿಯಲ್ಲಿ 30.75ನೇ ಕಿ.ಮೀಯಿಂದ (ಆಗುಂಬೆ) 51.60 ಕಿ.ಮೀ (ಹೆಬ್ರಿ) ನಡುವೆ (20.85 ಕಿ.ಮೀ) ಪಾದಚಾರಿ ಮಾರ್ಗ ಒಳಗೊಂಡ ದ್ವಿಪಥ ರಸ್ತೆ ನಿರ್ಮಾಣಕ್ಕೆ ಡಿಪಿಆರ್‌ ತಯಾರಿಸಲು ಕೇಂದ್ರದ ಭೂಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ₹2.33 ಕೋಟಿ ಮೊತ್ತದ ಟೆಂಡರ್‌ ಕರೆದಿರುವುದು ಸುರಂಗ ಮಾರ್ಗದ ಚರ್ಚೆ ಮತ್ತೆ ಮುನ್ನೆಲೆಗೆ ಬರುವಂತೆ ಮಾಡಿದೆ. ಡಿಪಿಆರ್ ವ್ಯಾಪ್ತಿಯು ನಿರ್ದಿಷ್ಟವಾಗಿ ಸುರಂಗ ವಿನ್ಯಾಸ ತಜ್ಞರು ಮತ್ತು ಹಿರಿಯ ಭೂ-ಭೌತಶಾಸ್ತ್ರಜ್ಞರ ತೊಡಗಿಸಿಕೊಳ್ಳುವಿಕೆ ಒಳಗೊಂಡಿದೆ; ಸುರಂಗ ಮಾರ್ಗ ನಿರ್ಮಾಣದ ಆಯ್ಕೆಯ ಕಾರ್ಯಸಾಧ್ಯತೆ ಪರೀಕ್ಷಿಸಲು, ವಿವರವಾದ ಭೂ-ತಾಂತ್ರಿಕ ಪರಿಶೀಲನೆಗೂ ಅವಕಾಶ ಕಲ್ಪಿಸಲಾಗಿದೆ.

ಪರಿಸರವಾದಿಗಳ ಆತಂಕ: ಇದರ ಬೆನ್ನಲ್ಲೇ, ಪರಿಸರ ಕಾರ್ಯಕರ್ತರು ಕಳವಳ ವ್ಯಕ್ತಪಡಿಸಿದ್ದು, ಆಗುಂಬೆ ಘಾಟಿಯಲ್ಲಿ ಸುರಂಗ ಕೊರೆದಿದ್ದೇ ಆದರೆ, ಅದು ಭೂಕುಸಿತಕ್ಕೆ ಕಾರಣವಾಗಬಲ್ಲುದು ಎಂದಿದ್ದಾರೆ. 

‘ಆಗುಂಬೆ ಘಾಟಿ ಸೋಮೇಶ್ವರ ವನ್ಯಜೀವಿಧಾಮದೊಳಗೆ ಹಾದುಹೋಗಿದೆ. ಈ ಘಾಟಿ ರಸ್ತೆಯ ಇಕ್ಕೆಲಗಳಲ್ಲೂ ದಟ್ಟ ಕಾನನವಿದ್ದು, ಅದು ಕಾಳಿಂಗ ಸರ್ಪ, ಸಿಂಹಬಾಲದ ಸಿಂಗಳೀಕ ಸೇರಿದಂತೆ ಹಲವು ಅಪರೂಪದ ಜೀವವೈವಿಧ್ಯದ ಆವಾಸಸ್ಥಾನ. ಇಲ್ಲಿ ಹುಟ್ಟುವ, ಹರಿಯುವ ಸಣ್ಣ ಪುಟ್ಟ ತೊರೆಗಳು ಘಟ್ಟದ ಕೆಳಗಿನ ನದಿಗಳನ್ನು ವರ್ಷಪೂರ್ತಿ ಜೀವಂತವಾಗಿಟ್ಟಿದೆ. ಇಲ್ಲಿ ಕಡಿದಾದ ಬೆಟ್ಟಗಳ ಇರುವಿಕೆಯ ಕಾರಣಕ್ಕೆ ತೀರ್ಥಹಳ್ಳಿ, ಶೃಂಗೇರಿ, ಕೊಪ್ಪ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆ ಬರುತ್ತದೆ. ಈ ನಿಸರ್ಗ ಸಂಪತ್ತು ಒದಗಿಸುವ ಪರಿಸರ ಸೇವೆ ಜನಸಮುದಾಯದ ಜೀವನೋಪಾಯಕ್ಕೆ ಅಮೂಲ್ಯವಾದುದು’ ಎನ್ನುತ್ತಾರೆ ಪರಿಸರ ಕಾರ್ಯಕರ್ತ ನಾಗರಾಜ ಕೂವೆ.

‘ಮಳೆಗಾಲದಲ್ಲಿ ಆಗುಂಬೆ ಘಾಟಿಯಲ್ಲಿ ಪದೇ ಪದೇ ಭೂಕುಸಿತ ಸಂಭವಿಸುತ್ತಿದೆ. ಅಲ್ಲಿ ರಸ್ತೆ ವಿಸ್ತರಣೆಗಾಗಿ ಅಕ್ಕಪಕ್ಕದ ಗುಡ್ಡಗಳನ್ನು ಕಡಿದರೆ ಭೂಕುಸಿತ ಮತ್ತಷ್ಟು ಜಾಸ್ತಿ ಆಗಲಿದೆ. ಕೆಲವು ತಿರುವುಗಳಲ್ಲಿ ರಸ್ತೆ ವಿಸ್ತರಣೆ ಮಾಡಲು ಬೇಕಾಗುವಷ್ಟು ಜಾಗವೂ ಇಲ್ಲ. ಅಲ್ಲಿ ಜೆಸಿಬಿ, ಹಿಟಾಚಿಯಂತಹ ಭಾರಿ ಯಂತ್ರಗಳನ್ನು ಬಳಸಿ ಕಾಮಗಾರಿ ನಡೆಸುವುದು ಅವೈಜ್ಞಾನಿಕ. ಅದರ ಬದಲು ಈಗ ಇರುವ ರಸ್ತೆಗೆ ಪ್ರತಿವರ್ಷ ಡಾಂಬರು ಹಾಕಿ ಚೆನ್ನಾಗಿ ನಿರ್ವಹಣೆ ಮಾಡುವುದು ಜನರಿಗೂ ಇಲ್ಲಿನ ವನ್ಯಜೀವಿಗಳಿಗೂ ಒಳ್ಳೆಯದು. ಆಗುಂಬೆ ಘಾಟಿಯಂತಹ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ರಸ್ತೆ ವಿಸ್ತರಣೆಯಂತಹ  ಅವೈಜ್ಞಾನಿಕ ಯೋಜನೆಗಳಿಗೆ ರಾಜ್ಯ ಸರ್ಕಾರ ಅವಕಾಶ ಕೊಡಬಾರದು. ಸುರಂಗ ಮಾರ್ಗಕ್ಕೆ ಡಿಪಿಆರ್ ತಯಾರಿಸಲು ವನ್ಯಜೀವಿ ವಿಭಾಗ ಬಿಡಬಾರದು’ ಎಂಬುದು ಅವರ ಆಗ್ರಹ. 

ಆಗುಂಬೆ ವೈಶಿಷ್ಟ್ಯ

* ಪಶ್ಚಿಮ ಘಟ್ಟದ ಪ್ರಮುಖ ಪ್ರದೇಶ, ಅಪರೂಪದ ಜೀವ ವೈವಿಧ್ಯ, ಪರಿಸರ ಸೂಕ್ಷ್ಮ ತಾಣ

* ಸಮುದ್ರ ಮಟ್ಟದಿಂದ 2,700 ಅಡಿಗಳಷ್ಟು ಎತ್ತರದಲ್ಲಿರುವ ಪ್ರದೇಶ  

* ಅತಿ ಹೆಚ್ಚು ಮಳೆಯಾಗುವ ಪ್ರದೇಶ ಎಂಬ ಹೆಗ್ಗಳಿಕೆ

* ಕಾಳಿಂಗ ಸರ್ಪ, ಸಿಂಹಬಾಲ ಸಿಂಗಳೀಕಗಳ ಆವಾಸ

* ರುದ್ರ ರಮಣೀಯ ಪ್ರಕೃತಿ ಸೌಂದರ್ಯ, ನಯನ ಮನೋಹರ ಸೂರ್ಯಾಸ್ತಕ್ಕೆ ಹೆಸರುವಾಸಿ

ಆತಂಕ ಏನೇನು?

* ಸುರಂಗ ನಿರ್ಮಾಣದಿಂದ ಭೂಪದರಕ್ಕೆ ಹಾನಿಯಾಗಬಹುದು

* ಭೂಕುಸಿತದ ಸಮಸ್ಯೆ ತೀವ್ರವಾಗಬಹುದು 

* ಕಾಮಗಾರಿಯಿಂದ ಅರಣ್ಯ ನಾಶದ ಜೊತೆಗೆ ಪ್ರಾಣಿ ಸಂಕುಲಕ್ಕೂ ತೊಂದರೆ

ಜೀವವೈವಿಧ್ಯದ ಮೇಲೆ ಪರಿಣಾಮ

ಆಗುಂಬೆ ಘಾಟಿಯ ಸೂಕ್ಷ್ಮ ಪರಿಸರದಲ್ಲಿ ಸುರಂಗ ಮಾರ್ಗ, ದ್ವಿಪಥ ರಸ್ತೆ, ಪಾದಚಾರಿ ಮಾರ್ಗ ನಿರ್ಮಿಸಿದರೆ, ಅದರ ದುಷ್ಪರಿಣಾಮ ಗಳನ್ನು ಇಲ್ಲಿನ ಸಮೃದ್ಧ ಜೀವವೈವಿಧ್ಯ ಹಾಗೂ ಘಟ್ಟದ ಮೇಲಿನ ಮತ್ತು ಕೆಳಗಿನ ರೈತರು ಎದುರಿಸಬೇಕಾಗುತ್ತದೆ. ಇಲ್ಲಿನ ಸೂಕ್ಷ್ಮ ಭೂರಚನೆ, ಮಣ್ಣಿನ ಗುಣಗಳನ್ನು ಗಮನಿಸಿದಾಗ ಇಲ್ಲಿ ಸುರಂಗ ಮಾರ್ಗದ ಹೆಸರಿನಲ್ಲಿ ಭೂಮಿ ಕೊರೆಯುವುದು ಮೂರ್ಖತನ. ಭಾರಿ ಯಂತ್ರಗಳನ್ನು ಬಳಸಿ ಭೂಮಿಯನ್ನು ಕೊರೆಯುವುದರಿಂದ, ಈ ಪ್ರದೇಶದಲ್ಲಿ ಭೂಕುಸಿತ ನಿಶ್ಚಿತ. ಆವಾಸ ಸ್ಥಾನ ನಾಶವಾದರೆ ಭವಿಷ್ಯದಲ್ಲಿ ಕಾಳಿಂಗ ಸರ್ಪಗಳು ಜನವಸತಿ ಪ್ರದೇಶಗಳತ್ತ ಮುಖಮಾಡುತ್ತವೆ. ಆನೆ, ಕಾಟಿ, ಹುಲಿಗಳಂತೆ ಅವುಗಳ ವರ್ತನೆಗಳಲ್ಲೂ ಬದಲಾವಣೆ ಆಗಬಹುದು. ಇದರಿಂದ ಮಾನವ–ಕಾಳಿಂಗ ಸರ್ಪ ಸಂಘರ್ಷ ಹುಟ್ಟಬಹುದು.

–ನಾಗರಾಜ ಕೂವೆ, ಪರಿಸರ ಕಾರ್ಯಕರ್ತ

ಸಮಸ್ಯೆಗಳಿಗೆ ಹೆದ್ದಾರಿ ವಿಸ್ತರಣೆ ಪರಿಹಾರ

ಆಗುಂಬೆ ಘಾಟಿಯು ಕರಾವಳಿಯೊಂದಿಗೆ ಮಧ್ಯಕರ್ನಾಟಕ ಹಾಗೂ ಮಲೆನಾಡನ್ನು ಬೆಸೆಯುವ ರಾಜಮಾರ್ಗ. ನಿತ್ಯ ಇಲ್ಲಿ ಸಾವಿರಾರು ವಾಹನಗಳು ಓಡಾಡುತ್ತವೆ. ಆಸ್ಪತ್ರೆಗೆ ರೋಗಿಗಳು, ಕರಾವಳಿ ಭಾಗಕ್ಕೆ ಆಹಾರ ಸಾಮಗ್ರಿ, ತರಕಾರಿ, ಹಣ್ಣು ಪೂರೈಕೆಯ ಜೊತೆಗೆ ಅಲ್ಲಿಂದ ಮತ್ಸ್ಯ ಹಾಗೂ ಪೆಟ್ರೋಲಿಯಂ ಉತ್ಪನ್ನಗಳು ಇತ್ತ ಕಡೆ ಬರುತ್ತಿವೆ. ಪ್ರಮುಖ ಧಾರ್ಮಿಕ ಕೇಂದ್ರಗಳ ಜೊತೆಗೆ ಕೇರಳ–ಕರ್ನಾಟಕದ ಸಂಪರ್ಕದ ಕೊಂಡಿಯೂ ಹೌದು. ವರ್ಷದಿಂದ ವರ್ಷಕ್ಕೆ ಈ ಮಾರ್ಗದಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿದ್ದು, ಅದೇ ರೀತಿ ಭೂ ಕುಸಿತವೂ ಸಂಭವಿಸುತ್ತಿರುತ್ತದೆ. ಮಳೆಗಾಲದಲ್ಲಿ ವಾಹನ ಸಂಚಾರ ಸ್ಥಗಿತ ಗೊಳ್ಳುತ್ತದೆ. ಹೀಗಾಗಿ ಅಲ್ಲಿನ ಸಮಸ್ಯೆ ನಿವಾರಣೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎರಡು ಅವಕಾಶಗಳನ್ನು ಅವಲೋಕಿಸುತ್ತಿದೆ. ಅದರ ಭಾಗವಾಗಿ ಘಾಟಿಯ ಈಗಿನ ಕಿರಿದಾದ ರಸ್ತೆಯನ್ನು ವಿಸ್ತರಿಸಲು ಹಾಗೂ ಸುರಂಗ ಮಾರ್ಗ ನಿರ್ಮಾಣದ ಬಗ್ಗೆ ಡಿಪಿಆರ್ ತಯಾರಿಸಲು ಈಗ ಟೆಂಡರ್‌ ಕರೆದಿದೆ. ರಸ್ತೆಯ ವಿಸ್ತರಣೆ, ಸುರಂಗ ಮಾರ್ಗ ಇವೆರಡರಲ್ಲಿ ಯಾವುದು ಸೂಕ್ತ ಆಯ್ಕೆ ಎಂಬುದರ ಬಗ್ಗೆ ತಜ್ಞರ ವರದಿ ಆಧರಿಸಿ ನಂತರ ಕ್ರಮ ಕೈಗೊಳ್ಳಲಿದೆ.  

 –ಬಿ.ವೈ.ರಾಘವೇಂದ್ರ, ಶಿವಮೊಗ್ಗ ಸಂಸದ

‍ಪೂರಕ ಮಾಹಿತಿ: ವೆಂಕಟೇಶ್‌ ಜಿ.ಎಚ್‌.

ಸಿಂಹಬಾಲದ ಸಿಂಗಳೀಕ
ಕಾಳಿಂಗ ಸರ್ಪ
ನಾಗರಾಜ್‌ ಕೂವೆ
ಬಿ.ವೈ.ರಾಘವೇಂದ್ರ
ಆಗುಂಬೆ ಘಾಟಿಯ ಹಿಮ್ಮುರಿ ತಿರುವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.