ADVERTISEMENT

ವಿದೇಶ ವಿದ್ಯಮಾನ | ಡೊನಾಲ್ಡ್ ಟ್ರಂಪ್ ‘ತೆರಿಗೆ ತಂತ್ರಗಾರಿಕೆ’

ಮೆಕ್ಸಿಕೊ, ಕೆನಡಾ, ಚೀನಾ ಮೇಲೆ ತೆರಿಗೆ ಹೇರಿಕೆ; ವಿದೇಶದ ಪ್ರತ್ಯುತ್ತರದ ನಡುವೆಯೇ ‘ಸಂಧಾನ’ ಮಾತುಕತೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2025, 23:44 IST
Last Updated 4 ಫೆಬ್ರುವರಿ 2025, 23:44 IST
   

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತವೂ ಸೇರಿದಂತೆ ಹಲವು ದೇಶಗಳ ಮೇಲೆ ಸುಂಕ ಹೇರುವುದಾಗಿ ಹೇಳುತ್ತಲೇ ಇದ್ದರು. ಆದರೆ, ಭಾರತವನ್ನು ಹೊರತುಪಡಿಸಿ ಕೆನಡಾ, ಮೆಕ್ಸಿಕೊ ಮತ್ತು ಚೀನಾ ಮೇಲೆ ಅವರು ತೆರಿಗೆ ಹೇರಿದಾಗ ಹಲವರು ಅಚ್ಚರಿ ಮತ್ತು ಕಳವಳ ವ್ಯಕ್ತಪಡಿಸಿದ್ದರು. ಅವರ ಈ ಕ್ರಮದ ಹಿಂದಿನ ಉದ್ದೇಶವೇ ಬೇರೆ ಎನ್ನುವುದು ಈಗ ಸ್ಪಷ್ಟವಾಗುತ್ತಿದೆ. ತಮ್ಮ ದೇಶವನ್ನು ಕಾಡುತ್ತಿರುವ ಅಕ್ರಮ ವಲಸಿಗರ ಒಳನುಸುಳುವಿಕೆ, ಮಾದಕ ದ್ರವ್ಯ ಕಳ್ಳಸಾಗಣೆಯಂಥ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅವರು ತೆರಿಗೆ ಹೇರಿಕೆಯನ್ನು ಸಾಧನವನ್ನಾಗಿ ಬಳಸಿಕೊಂಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ        

ಫೆ.4ರಿಂದ ಅನ್ವಯವಾಗುವಂತೆ ಕೆನಡಾ, ಮೆಕ್ಸಿಕೊದ ಎಲ್ಲ ಉತ್ತನ್ನಗಳ ಮೇಲೆ ಶೇ 25ರಷ್ಟು ಹಾಗೂ ಚೀನಾದ ಸರಕುಗಳ ಮೇಲೆ ಶೇ 10ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದರು. 

ಟ್ರಂಪ್ ಅವರ ತೆರಿಗೆ ಅಸ್ತ್ರಕ್ಕೆ ಆ ರಾಷ್ಟ್ರಗಳಿಂದಲೂ ಪ್ರತಿ ಅಸ್ತ್ರಗಳು ಪ್ರಯೋಗವಾದವು. ಕೆನಡಾ, ಅಮೆರಿಕದ ಉತ್ಪನ್ನಗಳ ಮೇಲೆ ಶೇ 25ರಷ್ಟು ಸುಂಕ ವಿಧಿಸುವುದಾಗಿ ಘೋಷಿಸಿತು. ಚೀನಾ ಕೂಡ ಅಮೆರಿಕದ ಕಲ್ಲಿದ್ದಲು, ಎಲ್‌ಎನ್‌ಜಿ ಮೇಲೆ ಶೇ 15ರಷ್ಟು ಮತ್ತು ಕಚ್ಚಾ ತೈಲ, ಶಸ್ತಾಸ್ತ್ರಗಳ ಮೇಲೆ ಶೇ 10ರಷ್ಟು ಸುಂಕ ವಿಧಿಸುವುದಾಗಿ ಘೋಷಿಸಿತು.      

ADVERTISEMENT

ಸ್ವದೇಶದಲ್ಲೇ ವಿರೋಧ

ಟ್ರಂಪ್ ನಿರ್ಧಾರಕ್ಕೆ ಮೊದಲು ಅಮೆರಿಕದಿಂದಲೇ ವಿರೋಧ ವ್ಯಕ್ತವಾಯಿತು. ತೆರಿಗೆ ಹೇರಿಕೆಯ ಹೊರೆಯು ಅಮೆರಿಕದ ಗ್ರಾಹಕರ ಮೇಲೆ ಬೀಳಲಿದ್ದು, ಸರಕುಗಳ ಬೆಲೆ ಹೆಚ್ಚಾಗಲಿದೆ ಎನ್ನುವ ಅಭಿಪ್ರಾಯ ಕೇಳಿಬಂದವು. ಮಾರಾಟಕ್ಕೆ ಅಣಿಯಾಗಿರುವ ಸರಕುಗಳ ಬೆಲೆ ಹೆಚ್ಚಿಸುವುದಷ್ಟೇ ಅಲ್ಲ, ಇತರೆ ವಸ್ತುಗಳನ್ನು ತಯಾರಿಸಲು ಬೇಕಾದ ಮಧ್ಯಂತರ ಸರಕುಗಳ ಬೆಲೆಯೂ ಇದರಿಂದ ಹೆಚ್ಚಾಗುತ್ತದೆ ಎಂದು ಬಾಸ್ಟನ್‌ನ ಫೆಡರಲ್ ರಿಸರ್ವ್ ಅಧ್ಯಕ್ಷೆ ಸೂಸಾನ್ ಎಂ.ಕಾಲಿನ್ಸ್ ಪ್ರತಿಕ್ರಿಯಿಸಿದರು. 

ಇಷ್ಟಾದರೂ, ಟ್ರಂಪ್ ಸರ್ಕಾರ ತೆರಿಗೆ ವಿಧಿಸಿದ್ದನ್ನು ಸಮರ್ಥಿಸಿಕೊಂಡಿತು. ಕೆನಡಾ, ಚೀನಾ ಮತ್ತು ಮೆಕ್ಸಿಕೊದಿಂದ ಅಮೆರಿಕದ ಒಳಗೆ ಫೆಂಟಾನಿಲ್ (ಮಾದಕ ದ್ರವ್ಯ) ಪ್ರವೇಶಿಸುತ್ತಿದ್ದು, ಅದು ಜನರನ್ನು ಕೊಲ್ಲುತ್ತಿದೆ; ಜತೆಗೆ ವಲಸಿಗರು ಒಳಬರುತ್ತಿದ್ದು, ದೇಶದ ಭದ್ರತೆಗೆ ಧಕ್ಕೆ ಉಂಟಾಗುತ್ತಿದೆ ಎನ್ನುವುದು ಶ್ವೇತಭವನದ ಸಮರ್ಥನೆ.

ಚೀನಾ, ಕೆನಡಾ ಮತ್ತು ಮೆಕ್ಸಿಕೊಗಳಿಂದ ಅಮೆರಿಕಕ್ಕೆ ವಾರ್ಷಿಕ 1 ಲಕ್ಷ ಕೋಟಿ ಡಾಲರ್ (₹87.06 ಲಕ್ಷ ಕೋಟಿ) ಮೊತ್ತದ ಸರಕುಗಳು ಆಮದಾಗುತ್ತಿದ್ದು, ಒಟ್ಟು ಆಮದಿನಲ್ಲಿ ಈ ರಾಷ್ಟ್ರಗಳ ಪಾಲು ಮೂರನೇ ಒಂದರಷ್ಟಿದೆ. ಅಮೆರಿಕದ ತೆರಿಗೆ ಹೇರಿಕೆ, ಅದಕ್ಕೆ ಪ್ರತಿಯಾಗಿ ಇತರೆ ದೇಶಗಳೂ ಪ್ರತೀಕಾರದ ಕ್ರಮಕ್ಕೆ ಮುಂದಾಗಿರುವುದರಿಂದ ವ್ಯಾಪಾರ ಸಮರ ಏರ್ಪಡುತ್ತದೆ. ಪೂರೈಕೆ ಸರಪಳಿಗೆ ಹಾನಿಯಾಗಿ, ಅಂತರರಾಷ್ಟ್ರೀಯ ವ್ಯಾಪಾರ ವ್ಯವಸ್ಥೆಯನ್ನು ಪತನಗೊಳಿಸುವುದಲ್ಲದೇ, ದೇಶಗಳ ಆರ್ಥಿಕತೆಗಳಿಗೂ ಪೆಟ್ಟು ನೀಡುವ ಸಾಧ್ಯತೆಗಳಿವೆ ಎನ್ನುವ ಕಳವಳ ವ್ಯಕ್ತವಾಯಿತು.  

ಮುಂದೇನು ಘಟಿಸಬಹುದು ಎನ್ನುವ ಕದನ ಕುತೂಹಲ ಮೂಡಿರುವಾಗಲೇ ಟ್ರಂಪ್ ಅವರು ಅನಿರೀಕ್ಷಿತ ನಿರ್ಧಾರ ಕೈಗೊಂಡಿದ್ದಾರೆ. ಕೆನಡಾ, ಮೆಕ್ಸಿಕೊದಿಂದ ಬರುವ ಸರಕುಗಳ ಮೇಲೆ ಶೇ 25ರಷ್ಟು ಸುಂಕ ಹೇರಿದ್ದ ತಮ್ಮ ನಿರ್ಧಾರವನ್ನು 30 ದಿನಗಳ ಮಟ್ಟಿಗೆ ತಡೆಹಿಡಿದಿದ್ದಾರೆ. ತಮ್ಮ ಸಾಂಪ್ರದಾಯಿಕ ಎದುರಳಿಯಾದ ಚೀನಾ ಮೇಲೆ ವಿಧಿಸಿದ್ದ ತೆರಿಗೆ ಮಾತ್ರ ಜಾರಿಯಲ್ಲಿರಲಿದೆ ಎಂದಿದ್ದಾರೆ. 

ಟ್ರಂಪ್ ಅವರ ವರ್ತನೆಯನ್ನು ಹಲವು ವಿಧದಲ್ಲಿ ವಿಶ್ಲೇಷಿಸಲಾಗುತ್ತಿವೆ. ಅವರು ಕೆನಡಾ ಮತ್ತು ಮೆಕ್ಸಿಕೊ ಮೇಲೆ ತೆರಿಗೆ ಹೇರಿದ್ದರ ಹಿಂದೆ ಬೇರೆಯದೇ ಉದ್ದೇಶಗಳಿದ್ದವು ಎನ್ನಲಾಗುತ್ತಿದೆ. ಅಮೆರಿಕಕ್ಕೆ ಕೆನಡಾ ಹಾಗೂ ಮೆಕ್ಸಿಕೊ ಗಡಿಗಳಿಂದ ದೊಡ್ಡ ಪ್ರಮಾಣದಲ್ಲಿ ವಲಸಿಗರು ಬರುತ್ತಿದ್ದಾರೆ. ಹಾಗೆಯೇ, ಭಾರಿ ಪ್ರಮಾಣದಲ್ಲಿ ಮಾದಕ ವಸ್ತುಗಳನ್ನೂ ದೇಶದೊಳಗೆ ಕಳ್ಳಸಾಗಣೆ ಮಾಡಲಾಗುತ್ತಿದೆ. ತೆರಿಗೆಯನ್ನು ಅಸ್ತ್ರವಾಗಿಸಿಕೊಂಡು, ಅದಕ್ಕೆಲ್ಲ ಪರಿಹಾರ ಕಂಡುಕೊಳ್ಳುವ ಸಲುವಾಗಿಯೇ ಟ್ರಂಪ್ ಅವರು ತೆರಿಗೆ ಹೇರುವ ಕಾರ್ಯತಂತ್ರ ಅನುಸರಿಸಿದರು ಎನ್ನಲಾಗುತ್ತಿದೆ.

ಮೊದಲು ತೆರಿಗೆ ಹೇರಿಕೆ, ನಂತರ ಮಾತುಕತೆ

ಸದ್ಯಕ್ಕೆ, ಟ್ರಂಪ್ ಅವರು ಅಂದುಕೊಂಡಂತೆಯೇ ವಿದ್ಯಮಾನಗಳು ಘಟಿಸಿವೆ. ತೆರಿಗೆ ಹೇರಿಕೆ ಘೋಷಣೆ ಮಾಡಿದ ನಂತರ ಅಮೆರಿಕದ ಅಧ್ಯಕ್ಷರೊಂದಿಗೆ ಮೆಕ್ಸಿಕೊದ ಪ್ರಧಾನಿ ಕ್ಲಾಡಿಯಾ ಶೈನ್‌ಬಾಮ್ ಮತ್ತು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ‘ಸಂಧಾನ’ ಮಾತುಕತೆ ನಡೆಸಿದ್ದಾರೆ. ತಾವು ಮೆಕ್ಸಿಕೊ ಪ್ರಧಾನಿ ಕ್ಲಾಡಿಯಾ ಅವರೊಂದಿಗೆ ಒಂದು ಒಪ್ಪಂದಕ್ಕೆ ಬಂದಿರುವುದಾಗಿ ಟ್ರಂಪ್ ಅವರೇ ಹೇಳಿದ್ದಾರೆ. ಜಸ್ಟಿನ್ ಟ್ರುಡೊ ಅವರೊಂದಿಗೆ ನಡೆಸಿದ ಆರಂಭದ ಮಾತುಕತೆಯೂ ಅತ್ಯುತ್ತಮವಾಗಿತ್ತು ಎಂದು ಹೇಳಿರುವ ಅವರು, ಮಾತುಕತೆ ಮುಂದುವರೆಸುವುದಾಗಿಯೂ ತಿಳಿಸಿದ್ದಾರೆ.

ಮಾತುಕತೆಯ ಫಲವಾಗಿ ಕೆನಡಾವು ಗಡಿಯಲ್ಲಿ ಈ ಹಿಂದೆ ಘೋಷಿಸಿದಂತೆ 90 ಕೋಟಿ ಡಾಲರ್ (₹7,835 ಕೋಟಿ) ಯೋಜನೆಯನ್ನು ಮುಂದುವರೆಸಲಿದೆ. ಜತೆಗೆ, ಗಡಿಯಲ್ಲಿ ಹೆಚ್ಚುವರಿ ತಂತ್ರಜ್ಞಾನ ಮತ್ತು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸುತ್ತದೆ. ತಮ್ಮ ಅನೇಕ ಬೇಡಿಕೆಗಳಿಗೆ ಕೆನಡಾ ಸಮ್ಮತಿಸಿದೆ ಎಂದೂ ಟ್ರಂಪ್ ತಿಳಿಸಿದ್ದಾರೆ. ಮೆಕ್ಸಿಕೊ ಕೂಡ ವಲಸಿಗರ ನುಸುಳುವಿಕೆ ತಡೆಯಲು ಮತ್ತು ಮಾದಕ ವಸ್ತುಗಳ ಕಳ್ಳಸಾಗಣೆ ತಡೆಯಲು ಅಮೆರಿಕದ–ಮೆಕ್ಸಿಕೊ ಗಡಿಯಲ್ಲಿ 10,000 ಹೆಚ್ಚುವರಿ ಸೇನಾ ಸಿಬ್ಬಂದಿ ನಿಯೋಜಿಸಲು ಸಮ್ಮತಿಸಿದೆ. 

ಚೀನಾ, ತಾನೂ ಅಮೆರಿಕದ ಸರಕುಗಳಿಗೆ ತೆರಿಗೆ ವಿಧಿಸುವುದರ ಜತೆಗೆ ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ (ಡಬ್ಲ್ಯುಟಿಒ) ಈ ಬಗ್ಗೆ ದೂರು ದಾಖಲಿಸುವುದಾಗಿ ಅಮೆರಿಕದಲ್ಲಿ ಚೀನಾ ರಾಯಭಾರಿಯಾಗಿರುವ ಫು ಕಾಂಗ್ ತಿಳಿಸಿದ್ದಾರೆ. ತೆರಿಗೆ ಹೇರಿಕೆಯು ಡಬ್ಲ್ಯುಟಿಒ ನಿಯಮಗಳ ಉಲ್ಲಂಘನೆಯಾಗಿದೆ; ಅಮೆರಿಕವು ಚೀನಾವನ್ನು ಪ್ರತೀಕಾರದ ಕ್ರಮಗಳಿಗೆ ಮುಂದಾಗುಂವತೆ ಪ್ರಚೋದಿಸುತ್ತಿದೆ ಎಂದೂ ಅವರು ಹೇಳಿದ್ದಾರೆ. ವ್ಯಾಪಾರ ಸಮರದಲ್ಲಿ ಯಾರೊಬ್ಬರೂ ಗೆಲ್ಲಲು ಸಾಧ್ಯವಾಗುವುದಿಲ್ಲ ಎನ್ನುವುದು ಅವರ ನಿಲುವು. 

ಕೆಲವು ಮೂಲಗಳ ಪ್ರಕಾರ, ಟ್ರಂಪ್ ಅವರು ಚೀನಾದೊಂದಿಗೆ ಕೂಡ ಮಾತುಕತೆ ನಡೆಸುವ ಸಂಭವ ಇದೆ. ಮುಂದಿನ ಒಂದೆರಡು ದಿನಗಳಲ್ಲಿ ಅವರು ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರ ಜತೆಗೆ ಮಾತನಾಡಲಿದ್ದಾರೆ ಎನ್ನಲಾಗುತ್ತಿದೆ. 

ತೆರಿಗೆ ಹೇರಿಕೆಯನ್ನು ಅಮೆರಿಕ ತನ್ನ ಕಾರ್ಯಸಾಧನೆಗೆ ಬಳಸಿಕೊಳ್ಳುತ್ತಿದೆ ಎನ್ನುವುದನ್ನು ಟ್ರಂಪ್ ಮಾತುಗಳೇ ದೃಢಪಡಿಸಿವೆ. ತೆರಿಗೆ ವಿಧಿಸುವುದು ಆರ್ಥಿಕತೆಯ ಅಥವಾ ಬೇರೆ ಯಾವುದೇ ರೀತಿಯ ಕಾರ್ಯಸಾಧನೆಗೆ ಅತ್ಯಂತ ಉಪಯುಕ್ತವಾದ ಸಾಧನವಾಗಿದೆ ಎಂದು ಟ್ರಂಪ್ ಅವರೇ ಹೇಳಿರುವುದು ಅವರ ಕಾರ್ಯತಂತ್ರಕ್ಕೆ ನಿದರ್ಶನವಾಗಿದೆ. ‘ತೆರಿಗೆ ಹೇರಿಕೆ ನಿಮಗೆ ಒಳ್ಳೆಯ ಫಲವನ್ನೇ ನೀಡುತ್ತದೆ. ಅದರಿಂದ ನಾವು ತುಂಬಾ ಶಕ್ತಿಶಾಲಿಗಳಾಗಿ, ಶ್ರೀಮಂತ ರಾಷ್ಟ್ರವಾಗಿ ಹೊರಹೊಮ್ಮಬಹುದಾಗಿದೆ ಎನ್ನುವುದು ಅವರ ಮಾರ್ಮಿಕ ಮಾತು.    

ಭಾರತದ ಮೇಲೆ ತೆರಿಗೆ ಯಾಕಿಲ್ಲ

ಭಾರತದಿಂದ ಅಮೆರಿಕಕ್ಕೆ ರಫ್ತು ಮಾಡಲಾಗುವ ಸರಕುಗಳ ಮೇಲೆಯೂ ತೆರಿಗೆ ಹಾಕುವ ಬೆದರಿಕೆಯನ್ನು ಡೊನಾಲ್ಡ್‌ ಟ್ರಂಪ್‌ ಒಡ್ಡಿದ್ದರು. 'ಭಾರತವು ಅಮೆರಿಕದ ಉತ್ಪನ್ನಗಳ ಮೇಲೆ ಹೆಚ್ಚು ತೆರಿಗೆ ವಿಧಿಸುತ್ತದೆ. ಆದರೆ, ಅಮೆರಿಕ, ಭಾರತದ ಉತ್ಪನ್ನಗಳಿಗೆ ತೆರಿಗೆ ವಿಧಿಸುತ್ತಿಲ್ಲ' ಎಂದು ಅವರು ಹೇಳಿದ್ದರು. ಆದರೆ, ಮೆಕ್ಸಿಕೊ, ಚೀನಾ ಮತ್ತು ಕೆನಡಾಗಳ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸುವ ನಿರ್ಧಾರವನ್ನು ಘೋಷಿಸುವ ಸಂದರ್ಭದಲ್ಲಿ ಟ್ರಂಪ್‌ ಭಾರತವನ್ನು ಕೈಬಿಟ್ಟಿದ್ದಾರೆ. 

ಸದ್ಯ ತೆರಿಗೆ ಭಾರದಿಂದ ಭಾರತ ತಪ್ಪಿಸಿಕೊಂಡಿದೆ. ಆದರೆ, ಮುಂದಿನ ದಿನಗಳಲ್ಲಿ ಟ್ರಂಪ್‌ ಭಾರತದ ಮೇಲೂ ತೆರಿಗೆ ಸಮರ ಸಾರಬಹುದು ಎಂದೂ ಹೇಳಲಾಗುತ್ತಿದೆ. ತಮ್ಮ ಮೊದಲ ಅವಧಿಯಲ್ಲಿ ಅವರು ಭಾರತದ ಮೇಲೆ ಹೆಚ್ಚಿನ ತೆರಿಗೆ ವಿಧಿಸಿದ್ದರು. ಅದಕ್ಕೆ ಪ್ರತಿಯಾಗಿ ಭಾರತ ಕೂಡ ತೆರಿಗೆ ಹೆಚ್ಚಿಸಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಎರಡೂ ದೇಶಗಳ ನಡುವೆ ವಾಣಿಜ್ಯಾತ್ಮಕ ಸಂಬಂಧ ಸದೃಢವಾಗಿದೆ. ಹೀಗಾಗಿ, ಟ್ರಂಪ್‌ ಭಾರತದ ಸರಕುಗಳಿಗೆ ಹೆಚ್ಚುವರಿ ತೆರಿಗೆ ವಿಧಿಸಲಾರರು ಎಂಬ ವಾದವೂ ಇದೆ.  ಭಾರತವು ಅಲ್ಲಿನ ಉತ್ಪನ್ನಗಳ ಮೇಲೆ ಸರಾಸರಿ ಶೇ 10ರಿಂದ ಶೇ 11ರಷ್ಟು ತೆರಿಗೆ ವಿಧಿಸುತ್ತಿದೆ. .

ಭಾರತ ಮತ್ತು ಅಮೆರಿಕದ ನಡುವಣ ವ್ಯಾಪಾರ ಸಂಬಂಧ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಬೆಳೆಯುತ್ತಿದೆ. 2023–24ನೇ ಸಾಲಿನಲ್ಲಿ ಎರಡೂ ದೇಶಗಳ ನಡುವೆ ‌₹9.91 ಲಕ್ಷ ಕೋಟಿ ಮೌಲ್ಯದ ಸರಕುಗಳ ವ್ಯಾಪಾರ ನಡೆದಿದೆ (ಸೇವಾ ವಲಯ ಸೇರಿದರೆ ಈ ಮೊತ್ತ ₹15 ಲಕ್ಷ ಕೋಟಿ ದಾಟುತ್ತದೆ). ಭಾರತದ ಪಾಲಿಗೆ ಅಮೆರಿಕ ಅತಿ ದೊಡ್ಡ ರಫ್ತು ಮಾರುಕಟ್ಟೆ.

ಜಾಗತಿಕ ಮಟ್ಟದ ವ್ಯಾಪಾರದಲ್ಲಿ ಚೀನಾವು ತಂತ್ರಜ್ಞಾನ, ತಯಾರಿಕಾ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅಮೆರಿಕಕ್ಕೆ ಪೈಪೋಟಿ ನೀಡುತ್ತಿದೆ. ಆದರೆ, ಭಾರತವು ಈ ಕ್ಷೇತ್ರಗಳಲ್ಲಿ ಅಮೆರಿಕಕ್ಕೆ ಪೈಪೋಟಿ ನೀಡುವಷ್ಟರ ಮಟ್ಟಿಗೆ ಬೆಳೆದಿಲ್ಲ. ಭಾರತದಲ್ಲಿ ಹೆಚ್ಚಿರುವ ಔಷಧಗಳ ಉತ್ಪಾದನೆ, ವಾಹನಗಳ ಉದ್ಯಮ, ರಾಸಾಯನಿಕಗಳು, ಟೆಕ್ಸ್‌ಟೈಲ್‌ ಕೈಗಾರಿಕೆಗಳು ಅಮೆರಿಕದ ಉದ್ದಿಮೆಗಳಿಗೆ ದೊಡ್ಡ ಪೈಪೋಟಿ ನೀಡುವುದಿಲ್ಲ. ಹೀಗಾಗಿ, ಅಮೆರಿಕ ಭಾರತದ ಬಗ್ಗೆ ಟ್ರಂಪ್‌ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ ಎಂಬುದು ಕೆಲವು ತಜ್ಞರ ವಿಶ್ಲೇಷಣೆ. 

ಜೊತೆಗೆ, ಟ್ರಂಪ್‌ ತೆರಿಗೆ ವಿಧಿಸುವ ಬೆದರಿಕೆ ಒಡ್ಡುತ್ತಿದ್ದಂತೆಯೇ ಭಾರತವು ಅಮೆರಿಕದೊಂದಿಗಿನ ವಾಣಿಜ್ಯ ಸಂಬಂಧದಲ್ಲಿ ರಕ್ಷಣಾತ್ಮಕ ನಿಲುವು ತೆಗೆದುಕೊಳ್ಳಲು ಮುಂದಾಗಿದೆ. ಇತ್ತೀಚೆಗೆ ಮಂಡಿಸಿರುವ ಬಜೆಟ್‌ನಲ್ಲಿ ವಿದೇಶದಿಂದ ಆಮದು ಮಾಡಿಕೊಳ್ಳುವ ದೊಡ್ಡ ಎಂಜಿನ್‌ ಸಾಮರ್ಥ್ಯದ ಮೋಟಾರ್‌ ಸೈಕಲ್‌ಗಳು, ಐಷಾರಾಮಿ ಕಾರುಗಳ ಮೇಲಿನ ಸುಂಕವನ್ನು ಇಳಿಸುವ ಘೋಷಣೆ ಮಾಡಿದೆ. ಇದು ಹಾರ್ಲೆ ಡೇವಿಡ್‌ಸನ್‌ನಂತಹ ಅಮೆರಿಕ ಬೈಕ್‌ ತಯಾರಿಕಾ ಕಂಪನಿಗಳು, ಎಲಾನ್‌ ಮಸ್ಕ್‌ ಒಡೆತನದ ಟೆಸ್ಲಾ ಸೇರಿದಂತೆ ಇನ್ನಿತರ ಅಮೆರಿಕ ವಾಹನ ತಯಾರಿಕ ಕಂಪನಿಗಳಿಗೆ ಅನುಕೂಲ ಕಲ್ಪಿಸಲಿದೆ.  

ಎರಡೂ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧವೂ ಉತ್ತಮವಾಗಿದ್ದು, ಇದು ಕೂಡ ಟ್ರಂಪ್‌ ಅವರ ಮೃದು ನಿಲುವಿಗೆ ಕಾರಣ ಎಂದು ಹೇಳಲಾಗುತ್ತಿದೆ. ಪ್ರಧಾನಿ ಮೋದಿ ಅವರು ಇದೇ 13ರಂದು ಅಮೆರಿಕಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ.

ಭಾರತಕ್ಕೆ ಲಾಭ?

ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಸಮರವು ಭಾರತದ ರಫ್ತುದಾರರಿಗೆ ಅನುಕೂಲ ಕಲ್ಪಿಸಲಿದೆ ಎಂದು ಹೇಳಲಾಗುತ್ತಿದೆ. 

ಟ್ರಂಪ್‌ ಅವರು ಮೊದಲ ಬಾರಿಗೆ ಅಧ್ಯಕ್ಷರಾಗಿದ್ದಾಗ ಚೀನಾದ ಸರಕುಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸಿದ್ದರು. ಈ ನಿರ್ಧಾರದಿಂದಾಗಿ ಹೆಚ್ಚು ಪ್ರಯೋಜನ ಪಡೆದ ದೇಶಗಳ ಪೈಕಿ ಭಾರತ ನಾಲ್ಕನೇ ಸ್ಥಾನದಲ್ಲಿತ್ತು. ಈಗಲೂ ಇದು ಪುನರಾವರ್ತನೆಯಾಗಲಿದೆ ಎನ್ನಲಾಗಿದೆ. 

ಆಧಾರ: ಪಿಟಿಐ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ, ಬಿಬಿಸಿ, ಭಾರತೀಯ ರಾಯಭಾರ ಕಚೇರಿ ವೆಬ್‌ಸೈಟ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.