ಭಾರತದ ಕ್ರೀಡಾ ಕ್ಷೇತ್ರದಲ್ಲಿ ಉದ್ದೀಪನ ಮದ್ದು ಸೇವನೆ ಪ್ರಕರಣಗಳು ಹೆಚ್ಚಾಗಿದ್ದು, ದೇಶವು ಜಗತ್ತಿನಲ್ಲಿಯೇ ಮುಂಚೂಣಿಯಲ್ಲಿದೆ. ಕ್ರೀಡಾಪಟುಗಳು ಉದ್ದೀಪನ ಮದ್ದು ಸೇವಿಸುವುದನ್ನು ತಡೆಯುವ, ಅವರನ್ನು ಪರೀಕ್ಷಿಸುವ ಮತ್ತು ತಪ್ಪು ಮಾಡಿದ್ದರೆ ಶಿಕ್ಷಿಸುವ ಉದ್ದೇಶದಿಂದ 2022ರಲ್ಲಿ ಕಾಯ್ದೆಯನ್ನು ರೂಪಿಸಲಾಗಿತ್ತು. ಆದರೆ, ಅದಕ್ಕೆ ವಿಶ್ವ ಉದ್ದೀಪನ ಮದ್ದು ಸೇವನೆ ತಡೆ ಸಮಿತಿ (ವಾಡಾ) ಆಕ್ಷೇಪಣೆಗಳನ್ನು ವ್ಯಕ್ತಪಡಿಸಿತ್ತು. ಹೀಗಾಗಿ ಅದನ್ನು ಜಾರಿ ಮಾಡಿರಲಿಲ್ಲ.
ಆ ಕಾಯ್ದೆಯಲ್ಲಿ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಮಂಡಳಿ (ನ್ಯಾಷನಲ್ ಬೋರ್ಡ್ ಫಾರ್ ಆ್ಯಂಟಿ–ಡೋಪಿಂಗ್ ಇನ್ ಸ್ಪೋರ್ಟ್ಸ್) ಸ್ಥಾಪನೆಗೆ ಅವಕಾಶ ಕಲ್ಪಿಸಲಾಗಿತ್ತು. ಈ ಮಂಡಳಿಯಿಂದಾಗಿ, ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (ನಾಡಾ) ಮತ್ತು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಮೇಲ್ಮನವಿ ಸಮಿತಿಗಳ ಮೇಲೆ ಸರ್ಕಾರವು ಹೆಚ್ಚು ನಿಯಂತ್ರಣ ಹೊಂದಲು ಅನುಕೂಲವಾಗುತ್ತದೆ ಎನ್ನುವುದು ‘ವಾಡಾ’ ಮುಖ್ಯ ಆಕ್ಷೇಪಣೆಯಾಗಿತ್ತು.
ಸರ್ಕಾರದ ನಿಯಂತ್ರಣಕ್ಕೆ ವಿರೋಧ: ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಮಂಡಳಿಯ ಸದಸ್ಯರನ್ನು ಕೇಂದ್ರ ಸರ್ಕಾರವೇ ನೇರವಾಗಿ ಆಯ್ಕೆ ಮಾಡುತ್ತದೆ. ಅದು ‘ನಾಡಾ’ವನ್ನು ಮೇಲುಸ್ತುವಾರಿ ಮಾಡುವ ಅಧಿಕಾರ ಹೊಂದಿರುತ್ತದೆ ಮತ್ತು ಉದ್ದೀಪನ ಮದ್ದು ತಡೆ ಸಂಬಂಧ ನಿಯಮಗಳನ್ನು ರೂಪಿಸುತ್ತದೆ ಎಂದು 2022ರ ಕಾಯ್ದೆಯಲ್ಲಿ ಹೇಳಲಾಗಿತ್ತು. ಆದರೆ, ಈ ಅಂಶಗಳು ‘ವಾಡಾ’ ನಿರ್ದಿಷ್ಟಪಡಿಸಿರುವ ಅಂತರರಾಷ್ಟ್ರೀಯ ಮಾನದಂಡಗಳಿಗೆ ವಿರುದ್ಧವಾಗಿವೆ ಎನ್ನುವುದು ಅದರ ಆಕ್ಷೇಪಣೆಯಾಗಿತ್ತು. ರಾಜಕೀಯ, ಆಡಳಿತಾತ್ಮಕ ಹಸ್ತಕ್ಷೇಪವಿಲ್ಲದಂತೆ ‘ನಾಡಾ’ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು ಎನ್ನುವುದು ‘ವಾಡಾ’ ವಾದವಾಗಿತ್ತು. ಈ ಮಸೂದೆಯನ್ನು ಕಾಯ್ದೆಯನ್ನಾಗಿ ಜಾರಿ ಮಾಡಿದರೆ, ಭಾರತದ ಮೇಲೆ ನಿಷೇಧ ಹೇರುವುದಲ್ಲದೇ, ದೆಹಲಿಯಲ್ಲಿರುವ ಉದ್ದೀಪನ ಮದ್ದು ಪ್ರಯೋಗಾಲಯದ (ಎನ್‌ಡಿಟಿಎಲ್) ಮಾನ್ಯತೆ ರದ್ದುಪಡಿಸುವುದಾಗಿಯೂ ‘ವಾಡಾ’ ಎಚ್ಚರಿಕೆ ನೀಡಿತ್ತು. ನಂತರ ಭಾರತದ ಕ್ರೀಡಾ ಸಚಿವಾಲಯವು ‘ವಾಡಾ’ ಅಧಿಕಾರಿಗಳೊಂದಿಗೆ ವಿಸ್ತೃತ ಚರ್ಚೆ ನಡೆಸಿತ್ತು.
ಕೇಂದ್ರ ಕ್ರೀಡಾ ಸಚಿವರ ನೇತೃತ್ವದ ಆಡಳಿತ ಮಂಡಳಿಯು ‘ನಾಡಾ’ದ ಉಸ್ತುವಾರಿ ಮತ್ತು ನಿಯಂತ್ರಣ ಅಧಿಕಾರವನ್ನು ಹೊಂದುವುದಕ್ಕೆ ‘ವಾಡಾ’ ತೀವ್ರವಾಗಿ ಆಕ್ಷೇಪಿಸಿತ್ತು. ಉದ್ದೀಪನ ಮದ್ದು ತಡೆ ಸಂಸ್ಥೆಗಳು (ಎನ್‌ಎಡಿಒ) ಸರ್ಕಾರದ ನಿಯಂತ್ರಣದಲ್ಲಿದ್ದರೆ, ಹಿತಾಸಕ್ತಿ ಸಂಘರ್ಷ ಉಂಟಾಗುತ್ತದೆ. ಹೀಗಾಗಿ ಅದು ಸ್ವತಂತ್ರ ಸಂಸ್ಥೆಯಾಗಿರಬೇಕು ಎನ್ನುವುದು ‘ವಾಡಾ’ ಅಭಿಪ್ರಾಯ. ತಿದ್ದುಪಡಿ ಮಸೂದೆಯಲ್ಲಿ ಮಂಡಳಿಯನ್ನು ಹಾಗೆ ಉಳಿಸಲಾಗಿದೆ. ಆದರೆ, ‘ನಾಡಾ’ ಮತ್ತು ಮೇಲ್ಮನವಿ ಸಮಿತಿಯ ಮೇಲೆ ಸರ್ಕಾರ/ಮಂಡಳಿಗೆ ನಿಯಂತ್ರಣ ಹೇರಲು ಇರುವ ಅವಕಾಶಗಳನ್ನು ತೆಗೆದುಹಾಕಲಾಗಿದೆ; ನಾಡಾ ಮತ್ತು ಮೇಲ್ಮನವಿ ಸಮಿತಿಯು ಸ್ವತಂತ್ರವಾಗಿ ಮತ್ತು ‘ವಾಡಾ’ ರೂಪಿಸಿರುವ ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ.
ದಂಡ ಕಡಿಮೆ: ಹಾಗೆಯೇ ಉದ್ದೀಪನ ಮದ್ದು ಸೇವನೆ ಪ್ರಕರಣಗಳಲ್ಲಿ ಕ್ರೀಡಾಪಟುಗಳನ್ನು ಹೇಗೆ ಉತ್ತರದಾಯಿಗಳನ್ನಾಗಿಸಬೇಕು ಎನ್ನುವ ಅಂಶವನ್ನೂ ತಿದ್ದುಪಡಿ ಮಾಡಲಾಗಿದೆ. ನಿದರ್ಶನಕ್ಕೆ, ಸಣ್ಣ ಮಟ್ಟದ ಅಥವಾ ಆಕಸ್ಮಿಕ ಉಲ್ಲಂಘನೆಯ ಪ್ರಕರಣಗಳಲ್ಲಿ, ಕಡಿಮೆ ದಂಡ ವಿಧಿಸಲು ಅನುವಾಗುವಂತೆ ತಿದ್ದುಪಡಿ ಮಾಡಲಾಗಿದೆ.
ದೇಶದಲ್ಲಿ ಉದ್ದೀಪನ ಮದ್ದು ಸೇವನೆಯನ್ನು ನಿಯಂತ್ರಿಸಲು ‘ನಾಡಾ’ಗೆ ಮಸೂದೆಯು ಶಾಸನಬದ್ಧ ಅಧಿಕಾರವನ್ನು ನೀಡುತ್ತದೆ. ಮಸೂದೆಯ ಪ್ರಕಾರ, ಆಟಗಾರರಷ್ಟೇ ಅಲ್ಲ, ಕೋಚ್‌ಗಳು, ವೈದ್ಯರು, ತರಬೇತುದಾರರು ಮತ್ತು ನೆರವಿನ ಸಿಬ್ಬಂದಿಯೂ ಉದ್ದೀಪನ ಮದ್ದು ಸೇವನೆ ಮಾಡುವಂತಿಲ್ಲ. ನಿಯಮ ಮೀರಿದವರು ವಜಾ, ದಂಡದ ಜತೆಗೆ ಪ್ರಶಸ್ತಿ ಪದಕಗಳನ್ನೂ ಕಳೆದುಕೊಳ್ಳಬೇಕಾಗುತ್ತದೆ. ಅವರು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳದಂತೆ ಅನರ್ಹರನ್ನಾಗಿ ಮಾಡಲಾಗುತ್ತದೆ. ಪರೀಕ್ಷೆ ಮತ್ತು ನಿರ್ವಹಣೆಯ ದೃಷ್ಟಿಯಿಂದ ಕ್ರೀಡಾಪಟುಗಳಿಂದ ದತ್ತಾಂಶ ಸಂಗ್ರಹಿಸಲೂ ಅವಕಾಶ ಕಲ್ಪಿಸಲಾಗಿದೆ. ಆದರೆ, ನಿಜವಾಗಿಯೂ ಅಗತ್ಯ ಇದೆ ಅನ್ನಿಸಿದವರಿಗೆ ವೈದ್ಯಕೀಯ ಬಳಕೆಗೆ (ಟಿಯುಇ) ಮಾತ್ರ ಅವಕಾಶ ನೀಡಲಾಗಿದೆ.
ಸುಧಾರಣೆ ತರುವ ಯತ್ನ: ಉದ್ದೀಪನ ಮದ್ದು ತಡೆ ಕಾಯ್ದೆ ತರುವ ಉದ್ದೇಶವು ದೇಶದ ಕ್ರೀಡಾ ವ್ಯವಸ್ಥೆಯನ್ನು ಸುಧಾರಿಸುವ ಪ್ರಯತ್ನದ ಭಾಗವಾಗಿದೆ. ಭಾರತದ ಕ್ರೀಡಾಪಟುಗಳು ಉದ್ದೀಪನ ಮದ್ದು ಸೇವನೆ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಈ ಮಸೂದೆ ಮಹತ್ವ ಪಡೆದುಕೊಂಡಿದೆ. ಉದ್ದೀಪನ ಮದ್ದು ಸೇವಿಸಿದವರಿಗೆ ದಂಡ ಮತ್ತು ಶಿಕ್ಷೆ ವಿಧಿಸುವ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಹಾಗೂ ಪ್ರಾಮಾಣಿಕ ಕ್ರೀಡಾಪಟುಗಳ ಹಕ್ಕು ಮತ್ತು ವೃತ್ತಿಜೀವನ ರಕ್ಷಣೆಯ ಗುರಿ ಹೊಂದಿದೆ. ಈ ಮಸೂದೆಯು ಕಾಯ್ದೆಯಾಗಿ ಜಾರಿಯಾದರೆ, ಜಗತ್ತಿನ ಕ್ರೀಡಾ ಆಡಳಿತದಲ್ಲಿ ಪ್ರಮುಖ ಪಾಲುದಾರ ರಾಷ್ಟ್ರವಾಗಿರುವ ಭಾರತದ ಸ್ಥಾನ ಮತ್ತಷ್ಟು ಭದ್ರವಾಗಲಿದೆ; ‘ವಾಡಾ’ ಜತೆಗಿನ ದೇಶದ ಸಮಸ್ಯೆ, ಸಂಘರ್ಷಗಳಿಗೂ ಪರಿಹಾರ ಸಿಗಲಿದೆ ಎನ್ನಲಾಗುತ್ತಿದೆ.
* ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಮೇಲ್ಮನವಿ ಸಮಿತಿಯ ನಿರ್ಧಾರದ ವಿರುದ್ಧ ಸ್ವಿಟ್ಜರ್ಲೆಂಡ್‌ನಲ್ಲಿರುವ ಅಂತರರಾಷ್ಟ್ರೀಯ ಕ್ರೀಡಾ ನ್ಯಾಯಮಂಡಳಿ (ಸಿಎಎಸ್) ಮೆಟ್ಟಿಲೇರುವುದಕ್ಕೆ ನಿರ್ದಿಷ್ಟ ಕ್ರೀಡಾ ಸಂಸ್ಥೆಗಳಿಗೆ ಮಾತ್ರ ಈ ಮಸೂದೆ ಅವಕಾಶ ನೀಡುತ್ತದೆ. ‘ವಾಡಾ’, ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ), ಅಂತರರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿ (ಐಪಿಸಿ) ಮತ್ತು ಅಂತರರಾಷ್ಟ್ರೀಯ ಕ್ರೀಡಾ ಒಕ್ಕೂಟಗಳು ಅಂತರರಾಷ್ಟ್ರೀಯ ಕ್ರೀಡಾ ನ್ಯಾಯಮಂಡಳಿಯ ನಿಯಮಗಳು ಹಾಗೂ ಸಂಹಿತೆಯ ಅನುಸಾರ ಮೇನ್ಮನವಿ ಸಲ್ಲಿಸಬಹುದು
* ಅಂತರರಾಷ್ಟ್ರೀಯ ಕ್ರೀಡಾಪಟುಗಳು ಅಥವಾ ಅಂತರರಾಷ್ಟ್ರೀಯ ಕ್ರೀಡಾ ಕೂಟಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಉದ್ದೀಪನ ಮದ್ದು ತಡೆ ಶಿಸ್ತು ಸಮಿತಿಯ ನಿರ್ಧಾರದ ವಿರುದ್ಧ ಸಿಎಎಸ್‌ನಲ್ಲಿ ನೇರವಾಗಿ ಮೇಲ್ಮನವಿ ಸಲ್ಲಿಸುವುದಕ್ಕೂ ಮಸೂದೆ ಅವಕಾಶ ನೀಡುತ್ತದೆ. ಶಿಸ್ತು ಸಮಿತಿಯ ತೀರ್ಮಾನದಿಂದ ತೊಂದರೆಗೆ ಒಳಗಾದ ಕ್ರೀಡಾಪಟು, ‘ನಾಡಾ’, ಅಂತರರಾಷ್ಟ್ರೀಯ ಒಕ್ಕೂಟ, ‘ವಾಡಾ’, ಐಒಸಿ, ಮತ್ತು ಐಪಿಸಿಗಳು ಮೇಲ್ಮನವಿ ಸಲ್ಲಿಸಬಹುದು. ಅಲ್ಲದೇ ‘ನಾಡಾ’ದ ನಿರ್ಧಾರದ ವಿರುದ್ಧ, ಭಾರತದಲ್ಲಿ ಬೇರೆ ಯಾರೂ ಮೇಲ್ಮನವಿ ಸಲ್ಲಿಸದೇ ಇದ್ದ ಪಕ್ಷದಲ್ಲಿ ‘ವಾಡಾ’ವು ನೇರವಾಗಿ ಸಿಎಎಸ್‌ಗೆ ಮನವಿ ಸಲ್ಲಿಸಲು ಅವಕಾಶ ಇದೆ
* ಉದ್ದೀಪನ ಮದ್ದು ತಡೆ ನಿಯಮಗಳ ಉಲ್ಲಂಘನೆ ಎಂದರೆ ಏನು, ಯಾವಾಗ ಉಲ್ಲಂಘನೆಯಾಗುತ್ತದೆ ಎಂಬುದನ್ನು ಮಸೂದೆಯಲ್ಲಿ ವಿವರಿಸಲಾಗಿದೆ. ಅದರ ಪ್ರಕಾರ, (ಅ) ನಿಷೇಧಿತ ವಸ್ತು/ಮದ್ದು ಕ್ರೀಡಾಪಟುಗಳು ಹೊಂದಿರುವುದು ಅಥವಾ ಅವುಗಳಲ್ಲಿನ ಅಂಶ ಕ್ರೀಡಾಳುವಿನ ದೇಹದಲ್ಲಿರುವುದು (ಆ) ನಿಷೇಧಿತ ಮದ್ದು ಬಳಕೆ ಅಥವಾ ಹೊಂದಿರುವುದು ಅಥವಾ ಸೇವನೆಗೆ ಯತ್ನಿಸುವುದು ಅಥವಾ ನಿಷೇಧಿತ ವಿಧಾನವನ್ನು ಅನುಸರಿಸುವುದು (ಇ) ಪರೀಕ್ಷೆಗೆ ಹಾಜರಾಗದೇ ಇರುವುದು ಅಥವಾ ಇರುವ ಸ್ಥಳದ ಬಗ್ಗೆ ಮಾಹಿತಿ ನೀಡದೇ ಇರುವುದು, ಪರೀಕ್ಷೆಗೆ ಮಾದರಿಗಳನ್ನು (ರಕ್ತ, ಮೂತ್ರ ಇತ್ಯಾದಿ) ನೀಡದಿರುವುದು (ಈ) ನಿಷೇಧಿತ ವಸ್ತುಗಳನ್ನು ಕದ್ದು ಸಾಗಿಸುವುದು ಅಥವಾ ಅದಕ್ಕೆ ಯತ್ನಿಸುವುದು ಸೇರಿದಂತೆ ಹಲವು ವಿವರಣೆಗಳನ್ನು ನೀಡಲಾಗಿದೆ
* ಉದ್ದೀಪನ ಮದ್ದು ತಡೆ ಪರೀಕ್ಷೆಯನ್ನು ಮಾಡುವ ಪ್ರತಿಯೊಂದು ಪ್ರಯೋಗಾಲಯವೂ ‘ವಾಡಾ’ದಿಂದ ಮಾನ್ಯತೆ ಪಡೆಯುವುದನ್ನು ಮಸೂದೆ ಕಡ್ಡಾಯಗೊಳಿಸಿದೆ. 2022ರ ಕಾಯ್ದೆಯ ಪ್ರಕಾರ, ಇದು ಕಡ್ಡಾಯವಾಗಿರಲಿಲ್ಲ
ಉದ್ದೀಪನ ಮದ್ದು ಬಳಕೆಯು ಭಾರತದ ಕ್ರೀಡಾ ಕ್ಷೇತ್ರದಲ್ಲಿ ಬೃಹತ್ ಸಮಸ್ಯೆಯಾಗಿ ಕಾಡುತ್ತಿದೆ. ವಿಶ್ವ ಉದ್ದೀಪನ ವಸ್ತು ತಡೆ ಘಟಕದ (ವಾಡಾ) 2023ರ ಅಂಕಿಅಂಶಗಳ ಪ್ರಕಾರ, ನಿಷೇಧಿತ ವಸ್ತುಗಳ ಸೇವನೆಯಲ್ಲಿ ಭಾರತೀಯ ಕ್ರೀಡಾಪಟುಗಳು ಮುಂಚೂಣಿಯಲ್ಲಿದ್ದಾರೆ. 5000ಕ್ಕೂ ಹೆಚ್ಚು ಮಾದರಿಗಳ ಪರೀಕ್ಷಾ ಫಲಿತಾಂಶವನ್ನು ‘ವಾಡಾ’ ವಿಶ್ಲೇಷಣೆಗೆ ಒಳಪಡಿಸಿದೆ.
2023ರ ಅಂಕಿ ಅಂಶಗಳ ಪ್ರಕಾರ, ಭಾರತದಲ್ಲಿ ನಿಷೇಧಿತ ವಸ್ತುಗಳ ಬಳಕೆಯ ಪ್ರಮಾಣ ಶೇ 3.8ರಷ್ಟಿದೆ. 5,606 ಮಾದರಿಗಳ ಪೈಕಿ 214 ಮಾದರಿಗಳಲ್ಲಿ ಉದ್ದೀಪನ ವಸ್ತು ಸೇವಿಸಿರುವುದು ದೃಢಪಟ್ಟಿದೆ. ಇದು ಚೀನಾ, ಅಮೆರಿಕ, ಫ್ರಾನ್ಸ್ ಸೇರಿದಂತೆ ಹಲವು ದೇಶಗಳಿಗಿಂತ ಹೆಚ್ಚು. 5,606 ಪರೀಕ್ಷೆಗಳ ಪೈಕಿ 2,748 ಪರೀಕ್ಷೆಗಳು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಸಂಬಂಧಿಸಿದ್ದಾಗಿತ್ತು. 2022ಕ್ಕೆ ಹೋಲಿಸಿದರೆ ನಿಷೇಧಿತ ವಸ್ತುಗಳ ಬಳಕೆ ದೃಢಪಟ್ಟ ಪ್ರಮಾಣ 2023ರಲ್ಲಿ ಹೆಚ್ಚಾಗಿದೆ. 2022ರಲ್ಲಿ 3,865 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಶೇ 3.2ರಷ್ಟು ಪ್ರಕರಣಗಳು ದೃಢಪಟ್ಟಿದ್ದವು.
2023ರಲ್ಲಿ ಅಥ್ಲೆಟಿಕ್ಸ್ ವಿಭಾಗದಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. 1,223 ಮಾದರಿಗಳಲ್ಲಿ 61 ಮಾದರಿಗಳಲ್ಲಿ ನಿಷೇಧಿತ ವಸ್ತುವಿನ ಬಳಕೆ ದೃಢಪಟ್ಟಿತ್ತು. ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ 38 ಪ್ರಕರಣಗಳು (451 ಮಾದರಿಗಳು) ಪವರ್‌ಲಿಫ್ಟಿಂಗ್ ಮತ್ತು ಕುಸ್ತಿಗಳಲ್ಲಿ ಕ್ರಮವಾಗಿ 28 ಮತ್ತು 10 ಪ್ರಕರಣಗಳು ವರದಿಯಾಗಿದ್ದವು.
ಆಧಾರ: ಪಿಟಿಐ, ಮಾಧ್ಯಮ ವರದಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.