ADVERTISEMENT

ಸಂಖ್ಯೆ-ಸುದ್ದಿ | ವಾಹನ ಮಾರಾಟ ಆಮೆಗತಿ

​ಪ್ರಜಾವಾಣಿ ವಾರ್ತೆ
Published 13 ಜೂನ್ 2022, 20:15 IST
Last Updated 13 ಜೂನ್ 2022, 20:15 IST
   

ಕೋವಿಡ್‌ ಸಾಂಕ್ರಾಮಿಕವು ತೀವ್ರವಾಗಿದ್ದ ಕಾಲಕ್ಕೆ ಹೋಲಿಸಿದರೆ, ದೇಶದಲ್ಲಿ ಈಗ ವಾಹನಗಳ ಮಾರಾಟ ಹೆಚ್ಚಾಗಿದೆ. ಆದರೆ, ಕೋವಿಡ್‌ಗಿಂತಲೂ ಹಿಂದಿನ ಅವಧಿಗೆ ಹೋಲಿಸಿದರೆ, ದೇಶದಲ್ಲಿ ವಾಹನ ಮಾರಾಟ ಇನ್ನೂ ಚೇತರಿಸಿಕೊಂಡಿಲ್ಲ ಎನ್ನುತ್ತವೆ ವಾಹನ ಚಿಲ್ಲರೆ ಮಾರಾಟ ದತ್ತಾಂಶಗಳು. ಈಚಿನ ತಿಂಗಳಲ್ಲಿ ಈ ಚೇತರಿಕೆಯ ಪ್ರಮಾಣವೂ ಕುಸಿಯುತ್ತಿದೆ. ಇಂಧನ ಬೆಲೆಯಲ್ಲಿನ ಏರಿಕೆ, ಥರ್ಡ್‌ ಪಾರ್ಟಿ ವಿಮಾ ಕಂತಿನಲ್ಲಿ ಆದ ಏರಿಕೆ ವಾಹನ ಮಾರಾಟದ ಚೇತರಿಕೆಯನ್ನು ಮುಂದೂಡಬಹುದು ಎಂಬ ಆತಂಕ ವ್ಯಕ್ತವಾಗಿದೆ.

‘2022ರಲ್ಲಿ ವಾಹನ ಮಾರಾಟದಲ್ಲಿ ಆಗುತ್ತಿರುವ ಬದಲಾವಣೆಯನ್ನು 2020 ಮತ್ತು 2021ರಲ್ಲಿ ಆದ ವಾಹನ ಮಾರಾಟದೊಂದಿಗೆ ಹೋಲಿಸಿ ನೋಡಬಾರದು. ಆ ಎರಡೂ ವರ್ಷಗಳಲ್ಲಿ ಕೋವಿಡ್‌ ಇದ್ದ ಕಾರಣ. ವಾಹನಗಳ ಮಾರಾಟ ಕುಸಿದಿತ್ತು. ಆ ಎರಡು ವರ್ಷಗಳಿಗೆ ಹೋಲಿಸಿದರೆ, 2022ರಲ್ಲಿ ವಾಹನ ಮಾರಾಟ ಭಾರಿ ಪ್ರಮಾಣದ ಏರಿಕೆ ಕಂಡಿದೆ. ಆದರೆ, ಈ ಹೋಲಿಕೆ ವೈಜ್ಞಾನಿಕವಲ್ಲ. ಹೀಗಾಗಿ 2019ರಲ್ಲಿ ಇದ್ದ ಸ್ಥಿತಿಗೆ ಈಗಿನ ಮಾರಾಟ ದತ್ತಾಂಶಗಳನ್ನು ಹೋಲಿಸಿ ನೋಡಬೇಕಾಗಿದೆ. 2019ರಲ್ಲಿ ಇದ್ದ ಸ್ಥಿತಿಗೆ 2022ರಲ್ಲಿ ವಾಹನ ಮಾರಾಟ ಇನ್ನೂ ತಲುಪಿಲ್ಲ ಎಂಬುದನ್ನು ಈ ದತ್ತಾಂಶಗಳು ಹೇಳುತ್ತವೆ’ ಎಂದು ಆಟೊಮೊಬೈಲ್‌ ಮಾರಾಟಗಾರರ ಸಂಘಟನೆಗಳ ಒಕ್ಕೂಟ (ಫಾಡಾ) ಹೇಳಿದೆ.

ದೇಶದ ಆರ್ಥಿಕತೆಯ ಬೇರೆಲ್ಲಾ ವಲಯಗಳು ಕೋವಿಡ್‌ಗಿಂತಲೂ ಹಿಂದೆ ಇದ್ದ ಸ್ಥಿತಿಗೆ ಮರಳಿವೆ. ದೇಶದ ತಲಾ ಆದಾಯ ಏರಿಕೆಯಾಗಿದೆ. ದೇಶದ ತಯಾರಿಕಾ ವಲಯದ ಒಟ್ಟು ಉತ್ಪಾದನೆ ಏರಿಕೆಯಾಗಿದೆ. ಆದರೆ ವಾಹನ ಕ್ಷೇತ್ರ ಮಾತ್ರ ಚೇತರಿಕೆ ಕಂಡಿಲ್ಲ. ಇದರ ಜತೆಯಲ್ಲಿ ಇಂಧನ ಬಳಕೆ ಪ್ರಮಾಣವೂ ಈಚಿನ ತಿಂಗಳಲ್ಲಿ ಕುಸಿದಿದೆ.

ADVERTISEMENT



ದ್ವಿಚಕ್ರ ವಾಹನ

2019ರ ಮೇಗೆ ಹೋಲಿಸಿದರೆ, 2022ರ ಮೇ ತಿಂಗಳಿನಲ್ಲಿ ಮಾರಾಟವಾದ ದ್ವಿಚಕ್ರವಾಹನಗಳ ಸಂಖ್ಯೆಯಲ್ಲಿ 1.97 ಲಕ್ಷದಷ್ಟು ಕಡಿಮೆಯಾಗಿದೆ. ದ್ವಿಚಕ್ರ ವಾಹನಗಳ ಥರ್ಡ್‌ ಪಾರ್ಟಿ ವಿಮಾ ಕಂತಿನ ಏರಿಕೆಯು, ಬೇರೆಲ್ಲಾ ವರ್ಗದ ವಾಹನಗಳ ಥರ್ಡ್‌ ಪಾರ್ಟಿವಿಮೆಯಲ್ಲಿನ ಏರಿಕೆಗಿಂತ ಅಧಿಕವಾಗಿತ್ತು. ವಾಹನದ ಆನ್‌ರೋಡ್‌ ಬೆಲೆಯಲ್ಲಿ ಇದರಿಂದ ಏರಿಕೆಯಾಗಿದೆ. ವಾಹನವನ್ನು ಖರೀದಿಸಬೇಕು ಎಂದು ನಿರ್ಧರಿಸುವಲ್ಲಿ, ಗ್ರಾಹಕರು ಹಿಂದೇಟು ಹಾಕಲು ಈ ಅಂಶವೂ ಕಾರಣವಾಗಿದೆ ಎಂದು ಫಾಡಾ ತನ್ನ ವರದಿಯಲ್ಲಿ ಹೇಳಿದೆ.

ಇದರ ಜತೆಯಲ್ಲಿ ಹೆಚ್ಚುತ್ತಿರುವ ಇಂಧನದ ಬೆಲೆಯೂ, ಗ್ರಾಹಕರು ದ್ವಿಚಕ್ರ ವಾಹನಗಳಿಂದ ದೂರ ಇರುವಂತೆ ಮಾಡಿದೆ. ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳ (ಇ.ವಿ) ಮಾರಾಟ ಏರಿಕೆಯಾಗಬೇಕಿತ್ತು. ಆದರೆ, ಇ.ವಿಗಳ ಮಾರಾಟವೂ ಕುಸಿದಿದೆ. ಒಟ್ಟಾರೆಯಾಗಿ, ಗ್ರಾಹಕರು ದ್ವಿಚಕ್ರ ವಾಹನ ಖರೀದಿಗೆ ಹಿಂದೇಟು ಹಾಕುತ್ತಿರುವುದನ್ನು ಈ ದತ್ತಾಂಶಗಳು ಸೂಚಿಸುತ್ತವೆ.

ವಾಹನ; 2019 ಮೇ; 2022 ಮೇ

ದ್ವಿಚಕ್ರ ವಾಹನ; 14,20,563; 12,22,994 (–13.9%)

ವಾಣಿಜ್ಯ ವಾಹನ

2019ರ ಮೇಗೆ ಹೋಲಿಸಿದರೆ 2022ರ ಮೇನಲ್ಲಿ ಮಾರಾಟವಾದ ಎಲ್ಲಾ ಸ್ವರೂಪದ ವಾಣಿಜ್ಯ ವಾಹನಗಳ ಸಂಖ್ಯೆಯಲ್ಲಿ ಶೇ 11.44ರಷ್ಟು ಇಳಿಕೆಯಾಗಿದೆ. ವಾಣಿಜ್ಯ ವಾಹನಗಳ ಮಾರಾಟವು ದೇಶದ ಆರ್ಥಿಕತೆಯು ಚೇತರಿಕೆಯ ಹಾದಿಯಲ್ಲಿರುವುದನ್ನು ಸೂಚಿಸುತ್ತದೆ. ಈ ವಾಹನಗಳ ಮಾರಾಟದಲ್ಲಿ ಆಗಿರುವ ಇಳಿಕೆಯು, ಆರ್ಥಿಕತೆಯು ಸುಸ್ಥಿತಿಯಲ್ಲಿ ಇಲ್ಲ ಎಂಬುದನ್ನು ಸೂಚಿಸುತ್ತದೆ.

ವಾಹನ; 2019 ಮೇ; 2022 ಮೇ

ವಾಣಿಜ್ಯ ವಾಹನ; 75,238; 66,632 (–11.4%)

––––

10.17 % ಲಘು ವಾಣಿಜ್ಯ ವಾಹನಗಳ ಮಾರಾಟದಲ್ಲಿನ ಇಳಿಕೆ

22.38 % ಮಧ್ಯಮ ಗಾತ್ರದ ವಾಣಿಜ್ಯ ವಾಹನಗಳ ಮಾರಾಟದಲ್ಲಿನ ಇಳಿಕೆ

12.48 % ಭಾರಿ ಗಾತ್ರದ ವಾಣಿಜ್ಯ ವಾಹನಗಳ ಮಾರಾಟದಲ್ಲಿನ ಇಳಿಕೆ

ಇ.ವಿ. ಮಾರಾಟಶೇ 19.5ರಷ್ಟು ಇಳಿಕೆ

ಬ್ಯಾಟರಿಚಾಲಿತ ದ್ವಿಚಕ್ರವಾಹನಗಳ (ಇ.ವಿ) ಮಾರುಕಟ್ಟೆಯು ನಿಧಾನವಾಗಿ ವಿಸ್ತರಿಸುವ ಸಾಧ್ಯತೆ ಇತ್ತು. ಆದರೆ, ಬೇಸಿಗೆಯ ಅವಧಿಯಲ್ಲಿ ದೇಶದ ವಿವಿಧ ಕಡೆ ಸುಮಾರು 40ಕ್ಕೂ ಹೆಚ್ಚು ಇ.ವಿ.ಗಳು ಬೆಂಕಿಗಾಹುತಿಯಾದವು. ಇದು ಇ.ವಿಗಳ ಬಗ್ಗೆ ಜನರ ಆಲೋಚನೆ ಬದಲಾಗಲು ಕಾರಣವಾಯಿತು. ಪರಿಣಾಮ, ಇ.ವಿಗಳ ಮಾರಾಟಕ್ಕೆ ಭಾರಿ ಹಿನ್ನಡೆಯಾಯಿತು. ಏಪ್ರಿಲ್‌ ತಿಂಗಳ ಇ.ವಿ. ಮಾರಾಟಕ್ಕೆ ಹೋಲಿಸಿದರೆ, ಮೇ ತಿಂಗಳಲ್ಲಿ ವಾಹನಗಳ ಮಾರಾಟಸುಮಾರು
9 ಸಾವಿರದಷ್ಟು ಕಡಿಮೆಯಾಯಿತು. ಅಂದರೆ ಒಂದೇ ತಿಂಗಳ ಅವಧಿಯಲ್ಲಿ ಇವುಗಳ ಮಾರಾಟದಲ್ಲಿ ಶೇ 19.5ರಷ್ಟು ಕುಸಿತ ಕಂಡುಬಂದಿದೆ ಎಂದು ಫಾಡಾ ದತ್ತಾಂಶಗಳು ಹೇಳುತ್ತವೆ.

ಮಾರುಕಟ್ಟೆ ಪಾಲು ಇಳಿಕೆ: ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಇ.ವಿಗಳ ಪಾಲು ಚಿಕ್ಕದು. ಸಾಕಷ್ಟು ಪ್ರಚಾರ ಹಾಗೂ ಜಾಗೃತಿಯಿಂದಾಗಿ, ಮಾರುಕಟ್ಟೆ ವಿಸ್ತರಣೆಯಾಗುವ ನಿರೀಕ್ಷೆ ಮೂಡಿತ್ತು. ಆದರೆ ಇ.ವಿಗಳಿಗೆ ಬೆಂಕಿ ಹೊತ್ತಿಕೊಳ್ಳುವ ಘಟನೆಗಳು ವರದಿಯಾದ ಬಳಿಕ ಅವುಗಳ ಮಾರಾಟ ಕುಸಿಯಿತು. ಮಾರುಕಟ್ಟೆಯಲ್ಲಿ ಅವುಗಳ ಪಾಲೂ ಕಡಿತಗೊಂಡಿತು. ಮಾರ್ಚ್ ತಿಂಗಳಲ್ಲಿ ಶೇ 4.12ರಷ್ಟಿದ್ದ ಇ.ವಿ. ಪಾಲು ಏಪ್ರಿಲ್ ಹೊತ್ತಿಗೆ ಶೇ 3.77ಕ್ಕೆ ಕುಸಿಯಿತು. ಮೇ ತಿಂಗಳಲ್ಲಿ ಅದು ಶೇ 3.13ಕ್ಕೆ ಬಂದು ನಿಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.