ADVERTISEMENT

ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ ಶತಮಾನದ ಸಂಭ್ರಮ

1924ರಲ್ಲಿ ನಡೆದಿದ್ದ ಐತಿಹಾಸಿಕ ಮಹತ್ವದ ಸಮಾವೇಶ; ಮಹಾತ್ಮ ಗಾಂಧಿ ಅಧ್ಯಕ್ಷತೆ ವಹಿಸಿದ್ದ ಏಕೈಕ ಅಧಿವೇಶನ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2024, 23:45 IST
Last Updated 25 ಡಿಸೆಂಬರ್ 2024, 23:45 IST
<div class="paragraphs"><p>1924ರಲ್ಲಿ ನಡೆದಿದ್ದ ಐತಿಹಾಸಿಕ ಮಹತ್ವದ ಸಮಾವೇಶ; ಮಹಾತ್ಮ ಗಾಂಧಿ ಅಧ್ಯಕ್ಷತೆ ವಹಿಸಿದ್ದ ಏಕೈಕ ಅಧಿವೇಶನ</p></div>

1924ರಲ್ಲಿ ನಡೆದಿದ್ದ ಐತಿಹಾಸಿಕ ಮಹತ್ವದ ಸಮಾವೇಶ; ಮಹಾತ್ಮ ಗಾಂಧಿ ಅಧ್ಯಕ್ಷತೆ ವಹಿಸಿದ್ದ ಏಕೈಕ ಅಧಿವೇಶನ

   

ಮಹಾತ್ಮ: ಲೈಪ್ ಆಫ್ ಮೋಹನದಾಸ್ ಕರಮಚಂದ್ ಗಾಂಧಿ ಪುಸ್ತಕ

1924ರಲ್ಲಿ ಬೆಳಗಾವಿಯಲ್ಲಿ ನಡೆದಿದ್ದ ಕಾಂಗ್ರೆಸ್ ಅಧಿವೇಶನವು ಚಾರಿತ್ರಿಕ ಮಹತ್ವ ಪಡೆದಿದೆ. ಕಾಂಗ್ರೆಸ್ ಸಂಘಟನೆ ಹಾಗೂ ಸ್ವಾತಂತ್ರ್ಯ ಹೋರಾಟ ಎರಡೂ ಬಿಕ್ಕಟ್ಟು ಎದುರಿಸುತ್ತಿದ್ದ ಸಂದರ್ಭದಲ್ಲಿ ನಡೆದಿದ್ದ ಅಧಿವೇಶನವು, ಸ್ವಾತಂತ್ರ್ಯಹೋರಾಟಕ್ಕೆ ಹೊಸ ಚೈತನ್ಯ ತುಂಬಿತ್ತು. ಅಹಿಂಸೆ ಮತ್ತು ಅಸಹಕಾರ ಮಾರ್ಗದ ಮೂಲಕವೇ ಸ್ವಾತಂತ್ರ್ಯ ಹೋರಾಟ ಸಾಗಬೇಕು ಎನ್ನುವ ನಿಶ್ಚಯದ ಧ್ವನಿ ಅಧಿವೇಶನದಲ್ಲಿ ಮೊಳಗಿತ್ತು; ಹಿಂದೂ-ಮುಸ್ಲಿಂ ಏಕತೆ, ಅಸ್ಪೃಶ್ಯತಾ ನಿವಾರಣೆ, ಖಾದಿ ಗ್ರಾಮೋದ್ಯೋಗದಂಥ ವಿಷಯಗಳ ಬಗ್ಗೆ ಸಂಕಲ್ಪ ತೊಡಲಾಗಿತ್ತು. ಐತಿಹಾಸಿಕ ಮಹತ್ವದ  ಅಧಿವೇಶನಕ್ಕೆ ನೂರು ವರ್ಷ ತುಂಬಿದ ಸಂದರ್ಭದಲ್ಲಿ, ಅದರ ಹಲವು ಮಗ್ಗಲುಗಳನ್ನು ಪರಿಚಯಿಸುವ ವಿಶೇಷ ಬರಹಗಳು ಇಲ್ಲಿವೆ

‘ಇಂಗ್ಲಿಷ್ ಪ್ರಭುತ್ವದೊಡನೆ ಅಹಿಂಸಾತ್ಮಕವಾಗಿ ಯುದ್ಧ ಮಾಡಬಲ್ಲ ಸಾಮರ್ಥ್ಯ ಭಾರತಕ್ಕೆ ಇದೆ ಎಂಬುದು ನನ್ನ ಬಲವಾದ ವಿಶ್ವಾಸ. ಈ ಪ್ರಯೋಗ ವಿಫಲವಾಗಿಲ್ಲ, ಸಫಲವಾಗಿದೆ. ಎಷ್ಟು ಸಫಲವಾಗಬೇಕೆಂದು ನಾವು ಬಯಸಿದ್ದೆವೋ ಅಷ್ಟು ಸಫಲವಾಗಿಲ್ಲ ಅಷ್ಟೇ. ಆದರೆ, ನಮಗೆ ನಿರಾಸೆಯಾಗಿಲ್ಲ; ಇದೇ ಮಾರ್ಗದಲ್ಲಿ ಹೋರಾಟ ಮುಂದುವರಿಸೋಣ’ ಹೀಗೆಂದು ಮಹಾತ್ಮ ಗಾಂಧಿ ಅವರು ಗಟ್ಟಿ ದನಿಯಲ್ಲಿ ಹೇಳಿ ಸ್ವಾತಂತ್ರ್ಯ ಹೋರಾಟವನ್ನು ಅಹಿಂಸಾತ್ಮಕವಾಗಿಯೇ ಮುನ್ನಡೆಸುವ ಅಚಲ ನಿರ್ಧಾರವನ್ನು ಪ್ರಕಟಿಸಿದ್ದು ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ. ಈ ಅಧಿವೇಶನಕ್ಕೀಗ ಶತಮಾನೋತ್ಸವದ ಸಂಭ್ರಮ.

ADVERTISEMENT

1924ರ ಡಿಸೆಂಬರ್ 26 ಮತ್ತು 27ರಂದು ನಡೆದ ಈ ಅಧಿವೇಶನ ಸ್ವಾತಂತ್ರ್ಯ ಹೋರಾಟಕ್ಕೆ ಸ್ಪಷ್ಟ ದಿಕ್ಕು, ಕಾಂಗ್ರೆಸ್ ಪಕ್ಷಕ್ಕೆ ಸೈದ್ಧಾಂತಿಕ ಸ್ಪಷ್ಟತೆ ನೀಡಿದ ಮಹತ್ವದ ಸಮಾವೇಶವಾಗಿತ್ತು. ಇದರ ಪ್ರಭಾವ ಮತ್ತು ಪರಿಣಾಮಗಳು ಅತ್ಯಂತ ದೂರಗಾಮಿಯಾಗಿದ್ದವು. ಇದು ಮಹಾತ್ಮ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ನಡೆದ ಏಕೈಕ ಅಧಿವೇಶನ ಕೂಡ ಹೌದು. ಭಿನ್ನಾಭಿಪ್ರಾಯಗಳ ಕಾರಣಕ್ಕೆ ಕಾಂಗ್ರೆಸ್‌ನಲ್ಲಿಯೇ ಸೃಷ್ಟಿಯಾಗಿದ್ದ ಬಣಗಳನ್ನು, ಕಾಂಗ್ರೆಸ್‌ನಿಂದ ದೂರವಾಗುತ್ತಿದ್ದ ಹಿಂದೂ-ಮುಸ್ಲಿಂ ನಾಯಕರನ್ನು ಒಗ್ಗೂಡಿಸಿದ ಬಹಳ ಮುಖ್ಯವಾದ ಅಧಿವೇಶನ ಇದು. ಬ್ರಿಟಿಷರ ವಿರುದ್ಧ ಕಾಂಗ್ರೆಸ್ ಬಳಸಿದ ‘ಚರಕಾಸ್ತ್ರ’ಕ್ಕೆ ಶಕ್ತಿ ತುಂಬಿದ್ದು ಕೂಡ ಇದೇ ಅಧಿವೇಶನ. ಸೇವಾದಳದ ಹುಟ್ಟಿಗೆ ಕಾರಣವಾಗಿದ್ದು ಇದೇ ಅಧಿವೇಶನ. ನಾಡಿನ ಏಕೀಕರಣದ ಹೋರಾಟಕ್ಕೆ ಅಧಿಕೃತ ಚಾಲನೆ ನೀಡಿದ್ದು, ಸ್ವಾತಂತ್ರ್ಯ ಹೋರಾಟವನ್ನು ವಿಸ್ತಾರಗೊಳಿಸಿದ್ದು.. ಹೀಗೆ ಹಲವು ಕಾರಣಗಳಿಂದ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ಐತಿಹಾಸಿಕ ಮಹತ್ವವಿದೆ.

ಈ ಅಧಿವೇಶನದ ಅಧ್ಯಕ್ಷತೆ ವಹಿಸಿ ಮಾತನಾಡಿದ್ದ ಗಾಂಧೀಜಿಯವರು ಚರಕದ ಮಹತ್ವವನ್ನು ದೇಶಕ್ಕೆ ಅರ್ಥ ಮಾಡಿಸಿದ್ದರು. ನೂಲುವ ಮೂಲಕ ಬ್ರಿಟಿಷ್ ಸಾಮ್ರಾಜ್ಯವನ್ನೇ ಅಲುಗಾಡಿಸಬಹುದೆಂಬ ಸತ್ಯವನ್ನು ಹೋರಾಟಗಾರರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಹಿಂದೂ-ಮುಸ್ಲಿಂ ಏಕತೆ ಕೂಡ ಚರಕದಷ್ಟೇ ಮಹತ್ವದ ವಿಷಯ ಎಂದು ಹೇಳಿದ್ದರು. ‘ಧರ್ಮವನ್ನು ವಿಕಾರಗೊಳಿಸಿ, ಅಪಹಾಸ್ಯಗೊಳಿಸಲಾಗುತ್ತಿದೆ. ಕ್ಷುಲ್ಲಕ ವಿಷಯಗಳನ್ನು ಧರ್ಮದ ಹೆಸರಿನಲ್ಲಿ ದೊಡ್ಡದು ಮಾಡುತ್ತಿದ್ದಾರೆ. ಏನು ಬೇಕಾದರೂ ಆಗಲಿ, ಅದನ್ನು ನಡೆಸಿಯೇ ತೀರಬೇಕು ಎನ್ನುತ್ತಿದ್ದಾರೆ ಈ ಮತಾಂಧರು. ವಿರಸ ಹುಟ್ಟಿಸಲು ಆರ್ಥಿಕ ರಾಜಕೀಯ ಕಾರಣಗಳನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ’ ಎಂಬ ಎಚ್ಚರಿಕೆಯನ್ನು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ನೀಡಿದ್ದರು. ಅಂದು ಅವರು ಭಾಷಣದಲ್ಲಿ ಪ್ರಸ್ತಾಪಿಸಿದ ಈ ರೀತಿಯ ಅನೇಕ ವಿಷಯಗಳು ಇಂದಿಗೂ ಬಹಳ ಪ್ರಸ್ತುತ.

‘ಅಸ್ಪೃಶ್ಯತೆಯು ಸ್ವರಾಜ್ಯಕ್ಕೆ ಮತ್ತೊಂದು ಆತಂಕವಾಗಿದೆ. ಹಿಂದೂ– ಮುಸ್ಲಿಂ ಏಕತೆಯ ಸಾಧನೆಯಂತೆಯೇ ಅಸ್ಪೃಶ್ಯತೆ ನಿರ್ಮೂಲನೆಯೂ ಸ್ವರಾಜ್ಯಕ್ಕೆ ಅತ್ಯಗತ್ಯವಾಗಿದೆ’ ಎಂದು ಭಾಷಣದಲ್ಲಿ ಒತ್ತಿ ಹೇಳಿದ್ದ ಗಾಂಧೀಜಿ, ‘ದಮನಕ್ಕೊಳಗಾದ ವರ್ಗಗಳ ಸ್ವಾತಂತ್ರ್ಯವನ್ನು ಮರುಸ್ಥಾಪಿಸುವವರೆಗೆ ಹಿಂದೂಗಳಿಗೆ ಸ್ವರಾಜ್ಯವನ್ನು ಕೇಳುವ ಹಕ್ಕಿಲ್ಲ’ ಎಂದು ಸ್ಪಷ್ಟ ಮಾತುಗಳಲ್ಲಿ ಎಚ್ಚರಿಕೆ ನೀಡಿದ್ದರು.

ಗಾಂಧೀಜಿಯವರ ಸೂಚನೆಯಂತೆಯೇ ಈ ಅಧಿವೇಶನದಲ್ಲಿ ಅಸ್ಪೃಶ್ಯತೆ ನಿವಾರಣೆಗೆ ಸಂಬಂಧಿಸಿದ ನಿರ್ಣಯ ಕೂಡ ಅಂಗೀಕರಿಸಲಾಗಿತ್ತು. ಬಹಳ ಮುಖ್ಯವಾಗಿ ಈ ಅಧಿವೇಶನದಲ್ಲಿ ಗಾಂಧೀಜಿ ಅವರು ಮಾಡಿದ ಭಾಷಣ ರಾಷ್ಟ್ರೀಯ ಕಾಂಗ್ರೆಸ್ ಅನ್ನು ಅಖಂಡ ಭಾರತದ ಜನತೆಯನ್ನು ಪ್ರತಿನಿಧಿಸುವ ಏಕೈಕ ಸಂಸ್ಥೆಯನ್ನಾಗಿ ಪರಿವರ್ತಿಸಿತ್ತು. ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದ್ದ ಶ್ರೀಮಂತರು, ಮೇಲ್ವರ್ಗದ ಬುದ್ಧಿಜೀವಿಗಳು ಖಾದಿಗೆ ಶರಣಾಗಿ ಸರಳ ಜೀವನದ ಮೊರೆಹೋದರು. ಕಾಂಗ್ರೆಸ್‌ನಿಂದ ದೂರವಾಗಿದ್ದವರು ಮರಳಿ ಪಕ್ಷ ಸೇರಲಾರಂಭಿಸಿದರು. ಹೀಗಾಗಿಯೇ ಬೆಳಗಾವಿ ಅಧಿವೇಶನವನ್ನು ಐಕ್ಯತಾ ಸಮಾವೇಶ ಎಂದೂ ಗುರುತಿಸಲಾಗುತ್ತದೆ.

1924ರವರೆಗೆ ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟಗಾರರ ರಾಜಕೀಯ ಸಂಘಟನೆಯಾಗಿತ್ತು. ಆದರೆ ಈ ಅಧಿವೇಶನದ ನಂತರ ಸಮಾಜ ಸುಧಾರಣೆಯ ಜವಾಬ್ದಾರಿಯನ್ನೂ ಅರಿತು, ಸೈದ್ಧಾಂತಿಕ ಸ್ಪಷ್ಟತೆ ಪಡೆದುಕೊಂಡಿತು. ಅಧ್ಯಕ್ಷೀಯ ಭಾಷಣ ಮಾಡಿದ್ದ ಮಹಾತ್ಮ ಗಾಂಧಿ ಅವರು ದೇಶದ ಸಾಮಾಜಿಕ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿ, ಸಮಾಜ ಸುಧಾರಣೆಗಾಗಿಯೂ ಕಾಂಗ್ರೆಸ್ ಶ್ರಮಿಸುವ ಅಗತ್ಯವನ್ನು ಒತ್ತಿ ಹೇಳಿದ್ದರು. ಸಾಮಾಜಿಕ ಸಮಸ್ಯೆಗಳ ವಿರುದ್ಧದ ಹೋರಾಟಕ್ಕೂ ಪಕ್ಷವನ್ನು ಅಣಿಗೊಳಿಸಿದ್ದರು. ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಕೂಡ ಈ ಅಧಿವೇಶನ ಬಹಳ ಮಹತ್ವದ ಕೊಡುಗೆಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿಯೇ ಕಾಂಗ್ರೆಸ್ ಪಕ್ಷ ಈ ಅಧಿವೇಶನದ ಶತಮಾನೋತ್ಸವವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲು ವರ್ಷವಿಡೀ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ.

ನಮ್ಮ ರಾಜ್ಯದಲ್ಲಿ ನಡೆದ ಏಕೈಕ ಸ್ವಾತಂತ್ರ್ಯಪೂರ್ವ ಕಾಂಗ್ರೆಸ್ ಅಧಿವೇಶನವಾಗಿದ್ದ ಬೆಳಗಾವಿ ಅಧಿವೇಶನವನ್ನು ಆಗಿನ ಕರ್ನಾಟಕ ಪ್ರಾಂತೀಯ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಆಯೋಜಿಸಿತ್ತು. ಕೆಪಿಸಿಸಿಯ ಅಂದಿನ ಅಧ್ಯಕ್ಷರಾಗಿದ್ದ ‘ಕರ್ನಾಟಕ ಕೇಸರಿ’ ಖ್ಯಾತಿಯ ಸ್ವಾತಂತ್ರ್ಯ ಹೋರಾಟಗಾರ, ಧೀಮಂತ ನಾಯಕ, ದಿವಂಗತ ಗಂಗಾಧರರಾವ್ ದೇಶಪಾಂಡೆ ಅವರು ಗಾಂಧೀಜಿಯವರ ಮನಸ್ಸು ಗೆಲ್ಲುವಂತೆ ಆಧಿವೇಶನ ಆಯೋಜಿಸಿದ್ದರು. ಅಧಿವೇಶನ ಮುಗಿದ ನಂತರ ಗಾಂಧೀಜಿ ‘ಗಂಗಾಧರರಾವ್ ದೇಶಪಾಂಡೆ ಮತ್ತು ಅವರ ಕಾರ್ಯಕರ್ತರ ತಂಡ ಕಾಂಗ್ರೆಸ್ ಅಧಿವೇಶನವನ್ನು ಅತ್ಯುನ್ನತವಾಗಿ ನಡೆಸಿ, ಯಶಸ್ಸಿನ ಶಿಖರವೇರಿದೆ. ಅವರ ‘ವಿಜಯನಗರ’ವು ಒಂದು ವಿಜಯವಾಗಿತ್ತು’ ಎಂದು ಬರೆದಿದ್ದರು.

ಬೆಳಗಾವಿಯ ಈಗಿನ ಟಿಳಕವಾಡಿಯ ಸುಮಾರು 84 ಎಕರೆ ಜಾಗದಲ್ಲಿ ಈ ಅಧಿವೇಶನ ನಡೆಸಲು ಸಕಲ ಸಿದ್ಧತೆ ನಡೆಸಲಾಗಿತ್ತು. ಅಧಿವೇಶನ ನಡೆಯುವ ಸ್ಥಳಕ್ಕೆ ‘ವಿಜಯನಗರ’ ಎಂದು ಹೆಸರಿಡಲಾಗಿತ್ತು. ಆಕರ್ಷಕ ಸಭಾ ಮಂಟಪ, ದೇಶ ವಿದೇಶಗಳಿಂದ ಬಂದ ಪ್ರತಿನಿಧಿಗಳಿಗೆ ಉಳಿದುಕೊಳ್ಳಲು ಕುಟೀರಗಳನ್ನು ನಿರ್ಮಿಸಲಾಗಿತ್ತು. ಅಧಿವೇಶನಕ್ಕಿಂತ ಒಂದು ವಾರ ಮೊದಲೇ ಬೆಳಗಾವಿಗೆ ಬಂದಿದ್ದ ಗಾಂಧೀಜಿ, ಅವರಿಗಾಗಿಯೇ ವಿಶೇಷವಾಗಿ ಖಾದಿ ಬಟ್ಟೆಯಿಂದ ನಿರ್ಮಿಸಿದ್ದ ‘ಶ್ರೀ ವಿದ್ಯಾರಣ್ಯ ಆಶ್ರಮ’ ಎಂಬ ಹೆಸರಿನ ಕುಟೀರದಲ್ಲಿ ಉಳಿದುಕೊಂಡಿದ್ದರು. ನಾಡಿನ ಸಂಸ್ಕೃತಿ, ಭವ್ಯ ಪರಂಪರೆಯನ್ನು ಸಾರುವ ಹೆಸರು, ವಸ್ತುಗಳನ್ನು ಪ್ರದರ್ಶಿಸಲಾಗಿತ್ತು. ಕುಡಿಯುವ ನೀರಿನ ವ್ಯವಸ್ಥೆಗೆಂದೇ ಬಾವಿಯೊಂದನ್ನು ತೋಡಿ, ಅದಕ್ಕೆ ‘ಪಂಪಾ ಸರೋವರ’ ಎಂದು ಹೆಸರಿಡಲಾಗಿತ್ತು. ‘ಕಾಂಗ್ರೆಸ್ ಬಾವಿ’ ಎಂದೇ ಪ್ರಸಿದ್ಧವಾಗಿರುವ ಈ ಬಾವಿ ಈಗಲೂ ಇದೆ. ಡಾ.ನಾ.ಸು.ಹರ್ಡೀಕರ್ ನೇತೃತ್ವದ ಸೇವಾದಳವು ಸ್ವಚ್ಛತೆ, ಶಿಸ್ತುಪಾಲನೆ ಹೀಗೆ ಎಲ್ಲ ಕೆಲಸಗಳನ್ನು ಸಮರ್ಪಕವಾಗಿ ಮಾಡಿ, ಮಹಾತ್ಮ ಗಾಂಧಿ ಅವರ ಪ್ರೀತಿ ಮತ್ತು ಗೌರವಕ್ಕೆ ಪಾತ್ರವಾಗಿತ್ತು.

ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದ ಗಂಗಾಧರರಾವ್ ದೇಶಪಾಂಡೆ ಗಾಂಧೀಜಿಯವರ ಆಶಯದಂತೆಯೇ ಊಟತಿಂಡಿಯಿಂದ ಹಿಡಿದು ಎಲ್ಲ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಿದ್ದರು. 17 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದ ಈ ಅಧಿವೇಶನದಲ್ಲಿ 16 ನಿರ್ಣಯಗಳನ್ನು ತೆಗೆದುಕೊಳ್ಳಲಾಗಿತ್ತು. ಇದೇ ಸಂದರ್ಭದಲ್ಲಿ ಕನ್ನಡದ ಏಕೀಕರಣ ಸಮಾವೇಶ, ಅಸ್ಪೃಶ್ಯತಾ ನಿವಾರಣಾ ಸಮಾವೇಶ, ಹಿಂದೂ ಮಹಾಸಭಾ, ಖಿಲಾಫತ್ ಸಮ್ಮೇಳನ ಸೇರಿದಂತೆ ಹಲವಾರು ಸಮಾವೇಶಗಳು ನಡೆದು, ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿತ್ತು. ಮೈಸೂರು ಸಂಸ್ಥಾನದ ಬೆಂಬಲದೊಂದಿಗೆ ವಸ್ತು ಪ್ರದರ್ಶನ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವೀಣೆ ಶೇಷಣ್ಣನವರು ಗಾಂಧೀಜಿಯವರ ಮನಗೆದ್ದಿದ್ದರು. ಆಗ ಹದಿಮೂರು ವರ್ಷದ ಬಾಲಕಿಯಾಗಿದ್ದ ಖ್ಯಾತ ಗಾಯಕಿ ಗಂಗೂಬಾಯಿ ಹಾನಗಲ್ ಎಲ್ಲರ ಗಮನ ಸೆಳೆದಿದ್ದರು. ಅಧಿವೇಶನದ ಎರಡನೇ ದಿನದ ಆರಂಭದಲ್ಲಿ ಅವರು ಹಾಡಿದ, ಹುಯಿಲಗೋಳ ನಾರಾಯಣರಾಯರ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಗೀತೆ ಮುಂದೆ ಏಕೀಕರಣದ ಸಂದರ್ಭದಲ್ಲಿ ತಾರಕಮಂತ್ರವಾಗಿತ್ತು. ಒಟ್ಟಾರೆ ಈ ಅಧಿವೇಶನವು ಸಂಘಟನೆ, ಸಮರ್ಥ ಆಯೋಜನೆ, ಶಿಸ್ತುಬದ್ಧ ಕಾರ್ಯಕಲಾಪ, ಪ್ರಜಾತಾಂತ್ರಿಕ ಮೌಲ್ಯಗಳಿಗೆ ಮನ್ನಣೆ ಈ ಎಲ್ಲ ಕಾರಣಗಳಿಂದಾಗಿ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಬಹಳ ಪ್ರಾಮುಖ್ಯ ಪಡೆದುಕೊಂಡಿದೆ.

ಈಗ ಅಧಿವೇಶನದ ಶತಮಾನೋತ್ಸವ ನಮಗೆ ಇತಿಹಾಸ ಮೆಲುಕು ಹಾಕಲು, ತಪ್ಪುಗಳನ್ನು ತಿದ್ದಿಕೊಳ್ಳಲು, ಮಹಾತ್ಮ ಗಾಂಧಿ ಅವರು ತೋರಿದ ಮಾರ್ಗದಲ್ಲಿ ಮುನ್ನಡೆಯಲು ಸುವರ್ಣಾವಕಾಶ ಕಲ್ಪಿಸಿದೆ. ಆದ್ದರಿಂದ ನಮ್ಮ ರಾಜ್ಯ ಸರ್ಕಾರ ಅರ್ಥಪೂರ್ಣವಾಗಿ ಒಂದು ವರ್ಷವಿಡೀ ಶತಮಾನೋತ್ಸವವನ್ನು ಆಚರಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಈಗಾಗಲೇ ‘ಶತಮಾನೋತ್ಸವ ಸಮಿತಿ’ ಹೆಸರಿನ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಹಲವಾರು ಕಾರ್ಯಕ್ರಮಗಳನ್ನು ‘ಗಾಂಧಿ ಭಾರತ’ ಎಂಬ ಹೆಸರಿನಡಿ ಆರಂಭಿಸಲಾಗಿದೆ. ಮುಂದಿನ ಒಂದು ವರ್ಷದಲ್ಲಿ ಒಟ್ಟು 40 ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಲಾಗಿದೆ.

ಗಾಂಧೀಜಿಯವರ ಆದರ್ಶಗಳು ಮರೆಯಾಗುತ್ತಿರುವ ಈ ಹೊತ್ತಿನಲ್ಲಿ ಅವರು ಇನ್ನಷ್ಟು, ಮತ್ತಷ್ಟು ಪ್ರಸ್ತುತರಾಗುತ್ತಿದ್ದಾರೆ. ಹೀಗಾಗಿ ಅವರನ್ನು ಇಂದಿನ ಪೀಳಿಗೆಗೆ ಪರಿಚಯಿಸಲು, ಅರ್ಥ ಮಾಡಿಸಲು ಇದು ಅತ್ಯುತ್ತಮ ಅವಕಾಶ ಎಂದೇ ನನ್ನ ಭಾವನೆ. ಅವರ ಬಗೆಗಿನ ಅಪಪ್ರಚಾರಗಳಿಗೆ ಅವಕಾಶವೇ ಇಲ್ಲದಂತೆ ಮಹಾತ್ಮರನ್ನು ನಾವೆಲ್ಲರೂ ಅರಿಯಬೇಕಾಗಿದೆ; ಜಾಗೃತರಾಗಬೇಕಾಗಿದೆ.

ಕುವೆಂಪು ಕಂಡಂತೆ ಬೆಳಗಾವಿ ಅಧಿವೇಶನ

ಕಾಂಗ್ರೆಸ್‌ ಅಧಿವೇಶನದಲ್ಲಿ ಭಾಗವಹಿಸಲು ಬೆಳಗಾವಿಗೆ ಬಂದಿದ್ದ ಮಹಾತ್ಮ ಗಾಂಧಿ ಅವರನ್ನು ಕಾಣಲು ಆಗತಾನೆ ಬಿ.ಎ. ಓದುತ್ತಿದ್ದ, ಇಂಗ್ಲಿಷಿನಲ್ಲಿ ಬರವಣಿಗೆ ಪ್ರಾರಂಭಿಸಿದ್ದ 20ರ ತರುಣ ಕುವೆಂಪು (ಆಗಿನ್ನೂ ಕೆ.ವಿ.ಪುಟ್ಟಪ್ಪ) ತಮ್ಮ ಸ್ನೇಹಿತರೊಂದಿಗೆ ಹೋಗಿದ್ದರು. ಅದರ ಬಗ್ಗೆ ಸುಮಾರು 50 ವರ್ಷಗಳ ನಂತರ, ಕೇವಲ ನೆನಪಿನ ಆಧಾರದ ಮೇಲೆ ಕುವೆಂಪು ತಮ್ಮ ‘ನೆನಪಿನ ದೋಣಿಯಲ್ಲಿ’ ದಾಖಲಿಸಿದ್ದಾರೆ. ಕುವೆಂಪು ನೆನಪು ಇಲ್ಲಿದೆ:

‘ಕಾಂಗ್ರೆಸ್ ಅಧಿವೇಶನದ ಸಮಯಕ್ಕೆ ಸರಿಯಾಗಿ ಕ್ರಿಸ್‌ಮಸ್ ರಜವೂ ಪ್ರಾರಂಭವಾಗುತ್ತಿತ್ತಾದ್ದರಿಂದ ನಾವು ಕೆಲವರು ವಿದ್ಯಾರ್ಥಿ ಮಿತ್ರರು ಬೆಳಗಾವಿಗೆ ಹೋಗಲು ನಿಶ್ಚಯಿಸಿದೆವು. ಅಧಿವೇಶನದ ಜಾಗಕ್ಕೆ ಸ್ವಲ್ಪ ದೂರವಾಗಿದ್ದ ಬೆಳಗಾವಿಯ ಊರಿನಲ್ಲಿ ಮಿತ್ರರೊಬ್ಬರ ಬಂಧುಗಳ ಮನೆಯಲ್ಲಿಯೆ ನಾವೆಲ್ಲ ಇಳಿದುಕೊಳ್ಳುವಂತೆ ಏರ್ಪಾಡಾಗಿತ್ತು. ಅಲ್ಲಿ ಸ್ನಾನಗೀನ ಮುಗಿಸುತ್ತಿದ್ದೆವು; ಊಟಗೀಟಕ್ಕೆಲ್ಲ ಅಧಿವೇಶನದ ಮಹಾಬೃಹತ್ ಭೋಜನ ಶಾಲೆಗೆ ಹೋಗುತ್ತಿದ್ದೆವು. ಅಧಿವೇಶನದ ಭಾಷಣದ ವೇದಿಕೆಯ ಸುವಿಸ್ತೃತವಾದ ಪ್ರಧಾನ ಮಂಟಪದಷ್ಟೆ ಭವ್ಯವಾಗಿತ್ತು ಆ ಭೋಜನ ಶಾಲೆ. ನನಗಂತೂ ಈ ಊಟ ತಿಂಡಿಯ ಔತಣವನ್ನು ಕಂಡು ಬೆರಗು ಬಡಿದಿತ್ತು. ಕೇಳಿದಷ್ಟು ಸಿಹಿ, ಕೇಳಿದಷ್ಟು ಹಾಲು, ತುಪ್ಪ, ಚಪಾತಿ, ಶ್ರೀಖಂಡ ಮತ್ತು ಏನೇನೊ ನಾನಾ ಪ್ರಾಂತಗಳ ತರತರದ ಭಕ್ಷ್ಯಭೋಜ್ಯಗಳು: ನನ್ನ ಗ್ರಾಮೀಣತೆ ತತ್ತರಿಸಿತ್ತು!’

‘ಆ ಅಧಿವೇಶನದಲ್ಲಿ ರಾಷ್ಟ್ರದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಸುಪ್ರಸಿದ್ಧರಾಗಿದ್ದ ಅನೇಕ ವ್ಯಕ್ತಿಗಳು ನೆರೆದಿದ್ದರು. ಆದರೆ ನಮಗಿದ್ದುದು ಮುಖ್ಯವಾಗಿ ಒಂದೇ ಲಕ್ಷ್ಯ: ಗಾಂಧೀಜಿಯ ದರ್ಶನ! ಅದಕ್ಕಾಗಿ ನಾವು ಅವರು ಅಧಿವೇಶನಕ್ಕೆ ಬರುವ ಹೊತ್ತನ್ನೂ ಅವರು ಪ್ರವೇಶಿಸುವ ಮಹಾದ್ವಾರವನ್ನೂ ಪತ್ತೆಹಚ್ಚಿ ಬಿಸಿಲಿನಲ್ಲಿ ಕಾದೆವು.’

ನೆರೆದ ಜಾತ್ರೆಯ ಜನಜಂಗುಳಿಯ ನಡುವೆ ಆನೆಯೊಂದು ನಡೆದು ಬರುತ್ತಿದ್ದರೆ ಹೇಗೆ ಮೇಲೆದ್ದು ಕಾಣಿಸುವುದೊ ಹಾಗೆ ಜನಸಮುದ್ರದಲ್ಲಿ ತೇಲಿ ಬರುವ ಹಡಗುಗಳಂತೆ ಇಬ್ಬರು ಬೃಹದ್ ವ್ಯಕ್ತಿಗಳು ಬರುತ್ತಿದ್ದುದು ಕಾಣಿಸಿತು. ಗುಸುಗುಸು ಹಬ್ಬಿತು, ಗಾಂಧೀಜಿ ಬರುತ್ತಿದ್ದಾರೆ ಎಂದು. ಕತ್ತು ನಿಕ್ಕುಳಿಸಿ ನೋಡಿದೆ. ಗಾಂಧೀಜಿ ಎಲ್ಲಿ? ಪಕ್ಕದಲ್ಲಿದ್ದವರು ಹೇಳಿದರು: ‘ಮೇಲೆದ್ದು ಕಾಣಿಸುತ್ತಾ ಬರುತ್ತಿದ್ದಾರಲ್ಲಾ ಅವರಿಬ್ಬರು ಆಲಿ ಸಹೋದರರು ಕಣ್ರೀ! ಅವರ ಮಧ್ಯೆ ನಡೆದು ಬರುತ್ತಿದ್ದಾರೆ ಗಾಂಧೀಜಿ.’

‘ಮಹಾತಾಮಸ ಮತ್ತು ಮಹಾರಾಜಸಗಳ ಮಧ್ಯೆ ನಡೆದುಬರುವ ಮಹಾಸಾತ್ವಿಕದಂತೆ ಕಾಣಿಸಿಕೊಂಡರು ಗಾಂಧೀಜಿ. ‘ವಂದೇ ಮಾತರಂ! ಭಾರತ ಮಾತಾಕೀ ಜೈ! ಮಹಾತ್ಮಾ ಗಾಂಧೀ ಕೀ ಜೈ!’ ಮೊದಲಾದ ಘೋಷಗಳು ಕಿವಿ ಬಿರಿಯುವಂತೆ ಗಗನದೇಶವನ್ನೆಲ್ಲ ತುಂಬಿದುವು. ಆ ಉತ್ಸಾಹ ಸಾಗರಕ್ಕೆ ನನ್ನ ಕೀಚು ಕೊರಳೂ ತನ್ನ ದನಿಹನಿಯ ನೈವೇದ್ಯವನ್ನು ನೀಡಿ ಧನ್ಯವಾಗಿತ್ತು!’

ಅಧಿವೇಶನದ ಕೆಲವು ವಿಶೇಷಗಳು

  • ದೆಹಲಿ ಮತ್ತು ಬಾಂಬೆ ಏಕತಾ ಸಮಾವೇಶಗಳ ನಂತರ ನಡೆದ ಕಾರ್ಯಕ್ರಮ ಇದು. ದೇಶದಲ್ಲಿದ್ದ ಎಲ್ಲ ರಾಜಕೀಯ ಪಕ್ಷಗಳನ್ನೂ ಒಂದೇ ವೇದಿಕೆಯಡಿ ತರುವುದು ಕಾರ್ಯಕ್ರಮದ ಉದ್ದೇಶಗಳಲ್ಲೊಂದಾಗಿತ್ತು. ರಾಷ್ಟ್ರದ ಏಕತೆಗಾಗಿ ಎಲ್ಲರೂ ಬೆಳಗಾವಿಯಲ್ಲಿ ಅಧಿವೇಶನಗಳನ್ನು ನಡೆಸಬೇಕು ಎಂದು ಎಲ್ಲ ಮುಖಂಡರಿಗೂ ಆಹ್ವಾನಗಳನ್ನು ಕಳಿಸಲಾಗಿತ್ತು

  • ಅಧಿವೇಶನದ ಸ್ಥಳದಲ್ಲಿ 70 ಅಡಿ ಎತ್ತರ ಗೋಪುರದ ಶೈಲಿಯ ಪ್ರವೇಶ ದ್ವಾರವನ್ನು ನಿರ್ಮಿಸಲಾಗಿತ್ತು. ಅತಿಥಿಗಳಿಗಾಗಿ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸ್ವಾತಂತ್ರ್ಯ ಹೋರಾಟಗಾರರು ಬೃಹತ್ ಶಾಮಿಯಾನ ಹಾಕಿದ್ದರು. ಮದ್ರಾಸ್ ದಕ್ಷಿಣ ರೈಲ್ವೆ ವಿಭಾಗವು ಕಾರ್ಯಕ್ರಮದ ಸ್ಥಳಕ್ಕೆ ಹತ್ತಿರದಲ್ಲಿಯೇ ತಾತ್ಕಾಲಿಕ ರೈಲು ನಿಲ್ದಾಣವನ್ನು ನಿರ್ಮಿಸಿತ್ತು

  • ಎರಡು ಸ್ವಾಗತಗೀತೆಗಳೊಂದಿಗೆ ಕಾರ್ಯಕ್ರಮ ಆರಂಭವಾಗಿತ್ತು: ‘ವಂದೇ ಮಾತರಂ’ ಮತ್ತು ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’

  • ಅಧಿವೇಶನಕ್ಕಾಗಿ ನಾ.ಸು.ಹರ್ಡೀಕರ್ ಮತ್ತು ಅವರ ಸಂಗಡಿಗರು ಮಾಡಿದ್ದ ವ್ಯವಸ್ಥೆಯನ್ನು ಗಾಂಧಿ ಅವರು ಬಹುವಾಗಿ ಮೆಚ್ಚಿಕೊಂಡಿದ್ದರು. ಆದರೆ, ನೈರ್ಮಲ್ಯ ವ್ಯವಸ್ಥೆ ಇನ್ನಷ್ಟು ಉತ್ತಮವಾಗಿರಬಹುದಿತ್ತು ಎಂದಿದ್ದರು. ‘ನೈರ್ಮಲ್ಯದ ವ್ಯವಸ್ಥೆ ಚೆನ್ನಾಗಿಯೇ ಇತ್ತಾದರೂ, ಅದನ್ನು ಇನ್ನಷ್ಟು ವೈಜ್ಞಾನಿಕವಾಗಿ ನಿರ್ವಹಿಸಬಹುದಿತ್ತು’ ಎಂದಿದ್ದರು

  • ಅಧಿವೇಶನದಲ್ಲಿ ಗಾಂಧಿ ಅವರು ಮಾಡಿದ ಭಾಷಣವು ಕಾಂಗ್ರೆಸ್ ಇತಿಹಾಸದಲ್ಲಿಯೇ ಅತ್ಯಂತ ಚುಟುಕು ಭಾಷಣವಾಗಿತ್ತು. ಅದರ ಪೂರ್ಣ ಭಾಷಣದ ಮುದ್ರಿತ ಪ್ರತಿಗಳನ್ನು ಅಧಿವೇಶನದಲ್ಲಿ ಹಂಚಲಾಗಿತ್ತು

  • ಅಧಿವೇಶನದ ನಂತರ ಕರ್ನಾಟಕದಲ್ಲಿ ಮತ್ತು ದೇಶದ ಹಲವು ಭಾಗಗಳಲ್ಲಿ ಖಾದಿ ಗ್ರಾಮೋದ್ಯೋಗ ಮತ್ತು ಗುಡಿ ಕೈಗಾರಿಕೆಗಳು ಹೆಚ್ಚಾಗಿದ್ದವು. ಅಧಿವೇಶನವು ರೈತರಲ್ಲಿ ಜಾಗೃತಿ ಮೂಡಿಸುವಲ್ಲಿಯೂ ಕೊಂಚ ಮಟ್ಟಿಗೆ ಯಶಸ್ವಿಯಾಗಿತ್ತು. ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸತೊಡಗಿದ್ದರು

⇒ಲೇಖಕ: ಸಚಿವ ಮತ್ತು ಬೆಳಗಾವಿ ಅಧಿವೇಶನ, ಶತಮಾನೋತ್ಸವ ಸಮಿತಿ ಅಧ್ಯಕ್ಷ

ತಿದ್ದುಪಡಿ

ಡಿ. 25ರ ‘ಆಳ ಅಗಲ’ದಲ್ಲಿ ಪ್ರಕಟವಾಗಿದ್ದ ‘ಔಷಧ ಗುಣಮಟ್ಟ ನಿಯಂತ್ರಣ ವ್ಯವಸ್ಥೆಗೆ ಗ್ರಹಣ’ ಲೇಖನದಲ್ಲಿ, ‘ಬಳ್ಳಾರಿಯ ವಿಮ್ಸ್‌ನಲ್ಲಿ ಬಾಣಂತಿಯರ ಸಾವಿಗೆ ಅವರಿಗೆ ನೀಡಲಾಗಿದ್ದ ರಿಂಗರ್ ಲ್ಯಾಕ್ಟೇಟ್ ಐ.ವಿ.ದ್ರಾವಣದ ಗುಣಮಟ್ಟ ಕಳಪೆಯಾಗಿದ್ದುದೇ ಕಾರಣ ಎಂದು ರಾಜ್ಯ ಸರ್ಕಾರ ನೇಮಿಸಿದ್ದ ತನಿಖಾ ಸಮಿತಿ ವರದಿ ನೀಡಿದೆ’ ಎಂದು ಪ್ರಕಟವಾಗಿದೆ. ಆದರೆ, ಐ.ವಿ. ದ್ರಾವಣ ಕಳಪೆ ಎಂದು ವರದಿ ನೀಡಿರುವುದು ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ತಜ್ಞ ವೈದ್ಯರ ತಂಡ.    

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.