ಬೆಂಗಳೂರಿನ ಸಂಚಾರ ದಟ್ಟಣೆ ಉದ್ಯಮಿಗಳು ಮತ್ತು ರಾಜ್ಯ ಸರ್ಕಾರದ ನಡುವೆ ವಾಗ್ವಾದಕ್ಕೆ ಕಾರಣವಾಗಿ ವಿವಾದ ಸೃಷ್ಟಿಸಿರುವಂತೆಯೇ, ಸಂಚಾರ ದಟ್ಟಣೆಗೆ ಪರಿಹಾರವಾಗಿ ಸರ್ಕಾರವು ರೂಪಿಸಿರುವ ಸುರಂಗ ಮಾರ್ಗ ಯೋಜನೆಯೂ ವಿವಾದಕ್ಕೆ ಕಾರಣವಾಗಿದೆ. 16.7 ಕಿ.ಮೀ.ಉದ್ದದ ಉತ್ತರ– ದಕ್ಷಿಣ ಕಾರಿಡಾರ್‌ನ ವಿಸ್ತೃತ ಯೋಜನಾ ವರದಿಯಲ್ಲಿನ (ಡಿಪಿಆರ್) ವಿವರಗಳು ಸಾರ್ವಜನಿಕರು, ಜನಪ್ರತಿನಿಧಿಗಳ ಆತಂಕಕ್ಕೆ ಕಾರಣವಾಗಿದೆ. ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಸರ್ಕಾರ ನೇಮಿಸಿದ್ದ ತಜ್ಞರ ಸಮಿತಿಯು ಉದ್ದೇಶಿತ ಯೋಜನೆಯ ರೂಪುರೇಷೆಯಲ್ಲಿ ಅನೇಕ ಲೋಪಗಳಿರುವುದನ್ನು ಬೊಟ್ಟು ಮಾಡಿದೆ. ಮುಖ್ಯವಾಗಿ, ನಗರದ ಜೀವನಾಡಿಯಾದ ಲಾಲ್‌ಬಾಗ್‌ಗೆ ಯೋಜನೆಯಿಂದ ಕಂಟಕವಾಗುವ ಸಾಧ್ಯತೆ ಇದೆ ಎಂದು ಸಮಿತಿ ಹೇಳಿದೆ. ಆದರೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸುರಂಗ ರಸ್ತೆ ಅಗತ್ಯ ಎಂದು ಬಲವಾಗಿ ಪ್ರತಿಪಾದಿಸುತ್ತಿದ್ದಾರೆ
ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಸುರಂಗ ರಸ್ತೆ ನಿರ್ಮಾಣ ಯೋಜನೆ ರಾಜಧಾನಿಯ ಜನರ ಆತಂಕಕ್ಕೆ ಕಾರಣವಾಗಿದೆ. ಲಾಲ್‌ಬಾಗ್‌ನಂತಹ ಪರಿಸರ ಸೂಕ್ಷ್ಮ ಪ್ರದೇಶದ ಮೇಲೆ ಈ ಯೋಜನೆಯು ಪರಿಣಾಮ ಬೀರುವ ಕಳವಳವೂ ವ್ಯಕ್ತವಾಗಿದೆ.
ಹೆಬ್ಬಾಳ ಜಂಕ್ಷನ್‌ನಿಂದ ಸಿಲ್ಕ್ ಬೋರ್ಡ್‌ವರೆಗಿನ 16.7 ಕಿ.ಮೀ ಉದ್ದದ ಉತ್ತರ–ದಕ್ಷಿಣ ಕಾರಿಡಾರ್ ಹಾಗೂ ಕೆ.ಆರ್.ಪುರದಿಂದ ನಾಯಂಡಹಳ್ಳಿವರೆಗಿನ 28.18 ಕಿ.ಮೀ ಉದ್ದದ ಪೂರ್ವ–ಪಶ್ಚಿಮ ಕಾರಿಡಾರ್‌ನ ಪೈಕಿ ಉತ್ತರ –ದಕ್ಷಿಣ ಸುರಂಗ ರಸ್ತೆ ಯೋಜನೆಯನ್ನು ಸರ್ಕಾರ ಆದ್ಯತೆ ಮೇರೆಗೆ ಕೈಗೆತ್ತಿಕೊಂಡಿದೆ.
ಹಿಂದಿನ ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆಯು (ಬಿಬಿಎಂಪಿ) ಯೋಜನೆಯ ವಿಸ್ತೃತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ₹9.5 ಕೋಟಿ ವೆಚ್ಚದಲ್ಲಿ ಸಿದ್ಧಪಡಿಸಲಾಗಿರುವ ಈ ಡಿಪಿಆರ್‌ಗೆ ವಿವಿಧ ವಲಯಗಳಿಂದ ಆಕ್ಷೇಪ ವ್ಯಕ್ತವಾಗಿದ್ದರಿಂದ ಅದರ ಅಧ್ಯಯನಕ್ಕಾಗಿ ಸರ್ಕಾರ ತಜ್ಞರ ಸಮಿತಿ ನೇಮಿಸಿತ್ತು.
ಬಿಎಂಆರ್‌ಸಿಎಲ್ ಕಾರ್ಯನಿರ್ವಾಹಕ ನಿರ್ದೇಶಕರಾದ ಸಿದ್ದನಗೌಡ ಹೆಗ್ಗರೆಡ್ಡಿ ನೇತೃತ್ವದ ಸಮಿತಿಯು ಡಿಪಿಆರ್‌ನಲ್ಲಿ 121 ಲೋಪಗಳಿರುವುದನ್ನು ಗುರುತಿಸಿದೆ. ಅದು ಡಿಪಿಆರ್‌ನಲ್ಲಿ ಉಲ್ಲೇಖಿಸಲಾದ ಪ್ರದೇಶಗಳಿಗೆ ಭೇಟಿ ನೀಡಿ, ಭೂಮಿಯ ಲಭ್ಯತೆ, ಪ್ರವೇಶ ಮತ್ತು ನಿರ್ಗಮನ ದ್ವಾರಗಳು, ಶಾಫ್ಟ್ (ಪ್ರವೇಶ ಮತ್ತು ನಿರ್ಗಮನದ ಸೌಲಭ್ಯಗಳ ತಾಣ) ಬರುವ ಸ್ಥಳ ಇತ್ಯಾದಿಗಳನ್ನು ಪರಿಶೀಲನೆ ಮಾಡಿ ಹಲವು ಪ್ರಶ್ನೆಗಳನ್ನು ಎತ್ತಿದೆ.
ಸಮಿತಿಯ ಮುಖ್ಯ ಆಕ್ಷೇಪಗಳು
ಸುರಂಗ ರಸ್ತೆಯು ಬಹುತೇಕ ಮೆಟ್ರೊ ಮಾರ್ಗಕ್ಕೆ ಪರ್ಯಾಯ
ವಾಗಿಯೇ ಸಾಗುತ್ತದೆ. ಲಾಲ್‌ಬಾಗ್‌ನಲ್ಲಿ ಶಾಫ್ಟ್ ನಿರ್ಮಾಣಕ್ಕೆ ಉದ್ದೇಶಿಸಲಾಗಿದ್ದು, ಅದು ಸೂಕ್ಷ್ಮ ಪರಿಸರ ತಾಣವಾಗಿದೆ
ಪ್ರವೇಶ ಮತ್ತು ನಿರ್ಗಮನದ ರ್‍ಯಾಂಪ್‌ಗಳಲ್ಲಿ ಸಂಚಾರ ದಟ್ಟಣೆಯು ಹೆಚ್ಚಾಗಲಿದ್ದು, ಅದನ್ನು ಸೂಕ್ತವಾಗಿ ನಿರ್ವಹಿಸಬೇಕು. ದಟ್ಟಣೆ ನಿಯಂತ್ರಣಕ್ಕೆ ಡಿಪಿಆರ್‌ನಲ್ಲಿ ವಿವರವಾದ ಕಾರ್ಯತಂತ್ರ ಇಲ್ಲ
ಅರಮನೆ ಮೈದಾನ/ಮೇಖ್ರಿ ವೃತ್ತದ ಪ್ರವೇಶ ಮತ್ತು ನಿರ್ಗಮನ ರ್‍ಯಾಂಪ್‌ನಲ್ಲಿ ಏಕಪಥದ ರಸ್ತೆ ಯೋಜಿಸಲಾಗಿದ್ದು, ಅಲ್ಲಿ ಕನಿಷ್ಠ ಎರಡು ಪಥಗಳ ರಸ್ತೆ ಅಗತ್ಯವಿದೆ
ಯೋಜನೆಯಲ್ಲಿ ಲಂಬ ವಿನ್ಯಾಸದ ಚರಂಡಿಗಳನ್ನು ಪ್ರಸ್ತಾವಿಸಲಾಗಿದ್ದು, ಅವು ನೀರಿನ ಹರಿವಿಗೆ ಪೂರಕವಾಗಿರುವುದಿಲ್ಲ. ಹೀಗಾಗಿ ಚರಂಡಿ ವ್ಯವಸ್ಥೆಯ ಬಗ್ಗೆ ಸೂಕ್ತವಾದ ಹಾಗೂ ವಿವರವಾದ ರೂಪುರೇಷೆ ತಯಾರಿಸುವ ಅಗತ್ಯವಿದೆ
ಹೆಬ್ಬಾಳ ಕೆರೆಯ ಕಾಲುವೆ ಮಾರ್ಗವನ್ನು ಯು–ಟರ್ನ್ ತೆಗೆದುಕೊಳ್ಳುವಂತೆ ಬದಲಾಯಿಸಲು ಪ್ರಸ್ತಾವಿಸಲಾಗಿದೆ. ಆದರೆ, ಕಾಲುವೆಯ ಮಾರ್ಗ ಬದಲಾವಣೆಗೆ ಸಂಬಂಧಿಸಿದಂತೆ ವಿವರವಾದ ಅಧ್ಯಯನ ನಡೆದಿರುವುದು ಕಂಡುಬರುವುದಿಲ್ಲ
ನಾಲ್ಕು ಕಡೆಗಳಲ್ಲಿ ಮಾತ್ರ ಭೂಗರ್ಭದಲ್ಲಿ ನೀರಿನ ಲಭ್ಯತೆಯ ಪರೀಕ್ಷೆ ಮಾಡಲಾಗಿದೆ. ಈ ಸಂಬಂಧ ಇನ್ನೂ ಹೆಚ್ಚಿನ ಎಲೆಕ್ಟ್ರೋ ರೆಸಿಸ್ಟಿವಿಟಿ ಟೋಮೊಗ್ರಫಿ (ಇಆರ್‌ಟಿ) ಪರೀಕ್ಷೆಗಳನ್ನು ಮಾಡುವ ಅಗತ್ಯವಿದೆ
ಮಾನದಂಡಗಳ ಪ್ರಕಾರ, ಮುಂದಿನ 25 ವರ್ಷಗಳಲ್ಲಿ ಹೆಚ್ಚಾಗಬಹುದಾದ ಸಂಚಾರ ದಟ್ಟಣೆಯ ಆಧಾರದಲ್ಲಿ ಸುರಂಗ ರಸ್ತೆಯಲ್ಲಿ ಪಥಗಳನ್ನು ನಿರ್ಧರಿಸಬೇಕು. ಆದರೆ, ಡಿಪಿಆರ್‌ನಲ್ಲಿ ಯೋಜನೆ ಆರಂಭವಾದ ನಂತರದ ಕೇವಲ ಹತ್ತು ವರ್ಷಗಳ ದಟ್ಟಣೆಯನ್ನು ಪರಿಗಣಿಸಲಾಗಿದೆ. ಪ್ರಸ್ತಾವಿತ ಯೋಜನೆಯು 3+3 ಪಥಗಳಾಗಿರುವುದರಿಂದ ಕಾಲಾವಧಿಯನ್ನು 25ಕ್ಕೆ ಏರಿಸಬೇಕು
ಡಿಪಿಆರ್‌ನಲ್ಲಿ ಸಂಚಾರ ದಟ್ಟಣೆ ಹೆಚ್ಚಿರುವ ಸಮಯದ ನಿಖರ ದತ್ತಾಂಶ ಮತ್ತು ಭವಿಷ್ಯದಲ್ಲಿ ಅದು ಎಷ್ಟರ ಮಟ್ಟಿಗೆ ಹೆಚ್ಚಾಗಲಿದೆ ಎನ್ನುವುದರ ಮಾಹಿತಿಯ ಕೊರತೆ ಇದೆ
ಪ್ರವೇಶ ಮತ್ತು ನಿರ್ಗಮನ ದ್ವಾರಗಳ ನಿರ್ಮಾಣ, ಶಾಫ್ಟ್ ನಿರ್ಮಾಣ, ಸುರಂಗ ನಿರ್ಮಾಣ, ಹೆಚ್ಚುವರಿ ಪಥಗಳ ನಿರ್ಮಾಣದ ಬಗ್ಗೆ ವಿವರವಾದ ಯೋಜನೆಯ ಕೊರತೆ
ಯೋಜನೆ ಪೂರ್ಣಗೊಳಿಸಲು ಕಡಿಮೆ ಕಾಲಾವಧಿ ನಿಗದಿಪಡಿಸ
ಲಾಗಿದ್ದು, ಭೂಸ್ವಾಧೀನ, ಸಂಚಾರ ಬದಲಾವಣೆ, ಮರಗಳನ್ನು ಕಡಿಯುವುದು ಇತ್ಯಾದಿ ಅಂಶಗಳತ್ತ ಗಮನಹರಿಸಬೇಕಿತ್ತು
ಭೂಸ್ವಾಧೀನ ಯೋಜನೆಗಳು ಮತ್ತು ಕಾಲಮಿತಿಗಳು, ಮೂಲಸೌಕರ್ಯಗಳ ಸ್ಥಳಾಂತರ ಯೋಜನೆ, ಮರಗಳನ್ನು ಗುರುತು ಮಾಡುವುದು ಮತ್ತು ಅವುಗಳನ್ನು ಬೇರೆ ಕಡೆ ಸ್ಥಳಾಂತರಿಸುವ ಯೋಜನೆ, ಪರಿಸರದ ಮೇಲಾಗುವ ಪರಿಣಾಮದ ಮೌಲ್ಯಮಾಪನ, ಸಾಮಾಜಿಕ ಪರಿಣಾಮಗಳು, ಎಲ್ಲ ಕೆಲಸಗಳ ತಾಂತ್ರಿಕ ವಿವರಗಳು, ವಿಪತ್ತು ನಿರ್ವಹಣೆ ಮತ್ತು ರಕ್ಷಣೆಯ ಸಮಗ್ರ ಯೋಜನೆ ಸೇರಿದಂತೆ ಇನ್ನಿತರ ಕೆಲವು ವಿವರಗಳು ಡಿಪಿಆರ್‌ನಲ್ಲಿ ಇಲ್ಲ
ಸುರಂಗ ಕೊರೆಯುವ ಯಂತ್ರದ ವೆಚ್ಚವನ್ನು ಒಂದು ಕಂಪನಿ ನೀಡಿದ ಮಾಹಿತಿ ಆಧಾರದಲ್ಲಿ ಪರಿಗಣಿಸಲಾಗಿದೆ. ಇದಕ್ಕಾಗಿ ಕರ್ನಾಟಕ ಲೋಕೋಪಯೋಗಿ ಇಲಾಖೆಯ ನಿಯಮಗಳ ಪ್ರಕಾರ ಮೂರು ಸಂಸ್ಥೆಗಳ ಕೊಟೇಷನ್ ಪಡೆಯಬೇಕು
ಭೂಸ್ವಾಧೀನ, ವಿದ್ಯುತ್, ನೀರು ಸರಬರಾಜು ಮುಂತಾದ ಜನ ಉಪಯೋಗಿ ಮೂಲಸೌಕರ್ಯಗಳ ಸ್ಥಳಾಂತರ, ಟೋಲ್ ಸಂಗ್ರಹ ಸೇರಿದಂತೆ ಇನ್ನಿತರ ವ್ಯವಸ್ಥೆಗಳ ವೆಚ್ಚಕ್ಕಾಗಿ ನಿರ್ದಿಷ್ಟ ಮೊತ್ತವನ್ನು ಮೀಸಲಿಡುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಆದರೆ, ಪ್ರತಿಯೊಂದಕ್ಕೂ ವಿವರವಾದ ಅಂದಾಜಿನ ಅಗತ್ಯವಿದೆ
ಭೂಮಿಯ ಗುಣಲಕ್ಷಣದ ಸಮಗ್ರ ಅಧ್ಯಯನ ಅಗತ್ಯ
ಬೆಂಗಳೂರಿನ ಭೂಮಿಯ ಗುಣಲಕ್ಷಣಗಳು ಸಂಕೀರ್ಣವಾಗಿವೆ. ಹಾಗಾಗಿ, ಸುರಂಗ ಮಾರ್ಗ ಹಾದುಹೋಗುವ ಸ್ಥಳದಲ್ಲಿರುವ ಮಣ್ಣು, ಕಲ್ಲು ಸೇರಿದಂತೆ ಭೂವಿಜ್ಞಾನಕ್ಕೆ ಸಂಬಂಧಿಸಿದ ವಿವರಗಳನ್ನು ಇನ್ನಷ್ಟು ವ್ಯವಸ್ಥಿತವಾಗಿ ಅಧ್ಯಯನ ನಡೆಸುವ ಅಗತ್ಯವಿದೆ ಎಂದು ಸಮಿತಿ ಪ್ರತಿಪಾದಿಸಿದೆ.
ಮೆಟ್ರೊ ಸುರಂಗ ಮಾರ್ಗ ನಿರ್ಮಾಣ ಮಾಡುವ ಸಂದರ್ಭದಲ್ಲಿ ಎದುರಾದ ಸವಾಲುಗಳನ್ನು ಪ್ರಸ್ತಾಪಿಸಿರುವ ಸಮಿತಿಯು, ಸುರಂಗ ಕೊರೆಯುವ ಸಂದರ್ಭದಲ್ಲಿ ಎದುರಾಗಬಹುದಾದ ಅನಿರೀಕ್ಷಿತ ಸನ್ನಿವೇಶಗಳನ್ನು ನಿಭಾಯಿಸುವುದಕ್ಕಾಗಿ ಭೂವಿಜ್ಞಾನಕ್ಕೆ ಸಂಬಂಧಿಸಿದಂತೆ ಇನ್ನಷ್ಟು ತಾಂತ್ರಿಕ ಅಧ್ಯಯನದ ಅಗತ್ಯವಿದೆ ಎಂದು ಹೇಳಿದೆ.
ತಿಂಗಳಿಗೆ ಸರಾಸರಿ 150 ಮೀಟರ್‌ಗಳಷ್ಟು ಉದ್ದದ ಸುರಂಗ ಕೊರೆಯಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಮೆಟ್ರೊ ಕಾಮಗಾರಿ ವೇಳೆ ತಿಂಗಳಿಗೆ ಸುಮಾರು 100 ಮೀಟರ್‌ನಷ್ಟೇ ಕೊರೆಯಲು ಸಾಧ್ಯವಾಗಿತ್ತು. ಮೆಟ್ರೊ ಸುರಂಗದ ವ್ಯಾಸ 6.65 ಮೀಟರ್ ಇತ್ತು. ಆದರೆ, ಇಲ್ಲಿ 15.2 ಮೀಟರ್ ವ್ಯಾಸದ ಸುರಂಗ ನಿರ್ಮಾಣದ ಪ್ರಸ್ತಾಪ ಮಾಡಲಾಗಿದೆ. ಹಾಗಾಗಿ, ಯೋಜನೆಯ ಕಾಲಮಿತಿ ನಿಗದಿಪಡಿಸುವಾಗ ಮೆಟ್ರೊ ಯೋಜನೆಗಳಲ್ಲಿ ಪಡೆದ ಪ್ರಾಯೋಗಿಕ ಅನುಭವಗಳನ್ನು ಪರಿಗಣಿಸಬೇಕು ಎಂದು ಸಲಹೆ ನೀಡಿದೆ.
ಭೂಮಿಯ ಗುಣಲಕ್ಷಣಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸದೇ ಇರುವುದರಿಂದ, ಕಾಮಗಾರಿಯ ವೇಳೆ ಎದುರಾಗಬಹುದಾದ ಯಾವುದೇ ಸಮಸ್ಯೆಯನ್ನು ಎದುರಿಸುವುದಕ್ಕಾಗಿ ಸುರಂಗ ನಿರ್ಮಾಣದ ವೆಚ್ಚವನ್ನು ಶೇ 10ರಿಂದ ಶೇ 15ರಷ್ಟು ಹೆಚ್ಚಿಸುವ ಅಗತ್ಯವಿದೆ ಎಂದು ಸಮಿತಿ ವರದಿಯಲ್ಲಿ ತಿಳಿಸಿದೆ.
ಲಾಲ್‌ಬಾಗ್‌ಗೆ ಕಂಟಕ?
ಡಿಪಿಆರ್ ಪ್ರಕಾರ, ಪ್ರಸ್ತಾವಿತ ಸುರಂಗ ಮಾರ್ಗವು ಲಾಲ್‌ಬಾಗ್ ಉದ್ಯಾನದ ಕೆಳಗಡೆ ಹಾದುಹೋಗಲಿದೆ. ಉದ್ಯಾನದ ನೆಲದ ಅಡಿಯಲ್ಲಿ 10 ಪಥಗಳ ರಸ್ತೆ ನಿರ್ಮಾಣವಾಗಲಿದ್ದು, ಎರಡು ಪಥಗಳು ಕೆರೆಯ ಸಮೀಪವೇ ಹಾದುಹೋಗಲಿವೆ. ಪರಿಸರಸೂಕ್ಷ್ಮ ಪ್ರದೇಶವಾಗಿರುವ ಲಾಲ್‌ಬಾಗ್ ವ್ಯಾಪ್ತಿಯಲ್ಲಿ ಈ ಯೋಜನೆಗಾಗಿ ಆರು ಎಕರೆಯಷ್ಟು ಜಮೀನು ಬೇಕಾಗುತ್ತದೆ ಎಂದೂ ಅಂದಾಜಿಸಲಾಗಿದೆ. ಸುರಂಗ ರಸ್ತೆಯ ಪ್ರವೇಶ ನಿರ್ಗಮನದ ಸೌಲಭ್ಯವನ್ನೂ ಇಲ್ಲಿ ಕಲ್ಪಿಸುವ (ಶಾಫ್ಟ್) ಬಗ್ಗೆಯೂ ಡಿಪಿಆರ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಉದ್ಯಾನದ ಪರಿಸರ ಸೂಕ್ಷ್ಮತೆಯನ್ನು ಗಮನದಲ್ಲಿರಿಸಿಕೊಂಡು ಅಲ್ಲಿ ಪ್ರವೇಶ/ನಿರ್ಗಮನದ ಸೌಲಭ್ಯ ಕಲ್ಪಿಸುವ ಪ್ರಸ್ತಾವವನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದು ತಜ್ಞರ ಸಮಿತಿ ಅಭಿಪ್ರಾಯಪಟ್ಟಿದೆ.
ಲಾಲ್‌ಬಾಗ್‌ನಲ್ಲಿ ಸುರಂಗ ಮಾರ್ಗ ನಿರ್ಮಾಣ ಮಾಡುವುದನ್ನು ಪರಿಸರವಾದಿಗಳು ಕೂಡ ವಿರೋಧಿಸಿದ್ದಾರೆ. ಕಾಮಗಾರಿಯಿಂದ ಉದ್ಯಾನದ ಪರಿಸರಕ್ಕೆ ಹಾನಿಯಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
‘ಯೋಜನೆ ಕೈಬಿಡುವುದೇ ಒಳಿತು’
ನಗರದ ಹಿತದೃಷ್ಟಿಯಿಂದ ಸುರಂಗ ರಸ್ತೆ ನಿರ್ಮಾಣ ಯೋಜನೆಯನ್ನು ಕೈಬಿಡುವುದು ಒಳಿತು ಎನ್ನುವವರ ಸಂಖ್ಯೆ ಹೆಚ್ಚಾಗಿದೆ. ಸಮಗ್ರ ಸಂಚಾರ ಯೋಜನೆ ಮತ್ತು ಪರಿಸರದ ಮೇಲಾಗುವ ಪರಿಣಾಮಗಳನ್ನು ಪರಿಗಣಿಸದೆಯೇ ಯೋಜನೆ ಕೈಗೆತ್ತಿಕೊಳ್ಳಲಾಗಿದೆ; ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು, ಜನರು ವಿರೋಧ ವ್ಯಕ್ತಪಡಿಸುತ್ತಿದ್ದರೂ ಅವರು ಯೋಜನೆಯನ್ನು ಮುಂದುವರಿಸುವ ಮಾತುಗಳನ್ನು ಆಡುತ್ತಿದ್ದಾರೆ.
ಬೆಂಗಳೂರಿನ ದಟ್ಟಣೆಗೆ ರಸ್ತೆಗಳನ್ನು ಉತ್ತಮವಾಗಿ ನಿರ್ವಹಿಸುವುದು, ಮೆಟ್ರೊ ರೈಲುಗಳನ್ನು, ಮಾರ್ಗಗಳನ್ನು ಹೆಚ್ಚಿಸುವುದು, ಬಿಎಂಟಿಸಿ ಬಸ್‌ಗಳನ್ನು ಹೆಚ್ಚಿಸುವುದು ಪರಿಹಾರವಾಗಿದೆ. ಅದನ್ನು ಮಾಡದೇ ಜನರ ತೆರಿಗೆಯ ಲಕ್ಷಾಂತರ ಕೋಟಿ ಹಣವನ್ನು ವ್ಯಯ ಮಾಡಿ, ನಗರದ ಪರಿಸರವನ್ನೂ ಹಾನಿ ಮಾಡುವ ಮೂಲಕ ಸರ್ಕಾರವು ಬೆಂಗಳೂರಿಗೆ ಎಂದಿಗೂ ಸರಿಪಡಿಸಲಾಗದಷ್ಟು ಹಾನಿ ಮಾಡಲು ಹೊರಟಿದೆ ಎನ್ನುವ ಅಸಮಾಧಾನ ವ್ಯಾಪಕವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.