ADVERTISEMENT

ಆಳ–ಅಗಲ: ಶತಮಾನ ಕಂಡ ಚಾಮರಾಜನಗರ ಜಿಲ್ಲೆಯ 35 ಶಾಲೆಗಳು! ಏನಿದೆ ಪರಿಸ್ಥಿತಿ?

ಸರ್ಕಾರಿ ಶಾಲೆಗಳ ಸಾಧ್ಯತೆ–ಸಮಸ್ಯೆ; ಇಂಗ್ಲಿಷ್ ಕಲಿಕೆ, ಶಿಕ್ಷಕರ ಪರಿಣತಿ, ಮೂಲಸೌಕರ್ಯಕ್ಕೆ ಬೇಕಿದೆ ಒತ್ತು

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 23:31 IST
Last Updated 17 ಆಗಸ್ಟ್ 2025, 23:31 IST
<div class="paragraphs"><p>ಚಾಮರಾಜನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಪೇಟೆ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ , ಮಧ್ಯದಲ್ಲಿ</p></div>

ಚಾಮರಾಜನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಪೇಟೆ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ , ಮಧ್ಯದಲ್ಲಿ

   

ಕರ್ನಾಟಕದಲ್ಲಿ ಶತಮಾನ ಕಂಡ 3200ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿವೆ. ಕೆಲವು ಶಾಲೆಗಳಲ್ಲಿ ಹೆಚ್ಚು ವಿದ್ಯಾರ್ಥಿಗಳಿದ್ದು, ಊರಿನ ಜನರ ಸಹಕಾರದಿಂದ ಚೆನ್ನಾಗಿ ನಡೆಯುತ್ತಿವೆ. ಹಲವು ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ ಕಾರಣಕ್ಕೆ ಮುಚ್ಚುವ ಭೀತಿ ಎದುರಿಸುತ್ತಿವೆ. ಶೈಕ್ಷಣಿಕವಾಗಿ ಈಗಷ್ಟೇ ಮುಂದುವರಿಯುತ್ತಿರುವ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಇಂತಹ 35 ಶಾಲೆಗಳಿವೆ. ಆ ಶಾಲೆಗಳ ಸ್ಥಿತಿಗತಿ, ಅಲ್ಲಿರುವ ಬೋಧನಾ ವ್ಯವಸ್ಥೆ ಹಾಗೂ ಇನ್ನಿತರ ವಿಚಾರಗಳನ್ನು ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಇಬ್ಬರು ಹಿರಿಯರು ಈ ಲೇಖನದಲ್ಲಿ ವಿವರಿಸಿದ್ದಾರೆ.

––––––––––––

ADVERTISEMENT

ಚಾಮರಾಜನಗರ ಪಟ್ಟಣದ ನಡುಭಾಗದಲ್ಲಿ 1905ರಲ್ಲಿ ಆರಂಭವಾಗಿ ನೂರಿಪ್ಪತ್ತು ವರ್ಷ ಕಳೆದಿರುವ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಯ ಅಧ್ಯಾಪಕಿಯರು ಅಲ್ಲಿಯ ಪುಟ್ಟ ಹೆಣ್ಣುಮಗಳನ್ನು ತೋರಿಸಿ, ‘ಇವಳು ತುಂಬಾ ಚಟುವಟಿಕೆಯವಳು, ಕಚೇರಿಯಿಂದ ಕೀಲಿ ಕೊಂಡು ಹೋಗಿ ಎಲ್ಲ ತರಗತಿಗಳ ಬಾಗಿಲು ತೆರೆಯುವಳು’ ಎಂದರು. ಆಕೆಯ ನೋಟ್ ಬುಕ್ ನೋಡಿದರೆ ಹಾಳೆಯ ತುಂಬ ಪೆನ್ಸಿಲಿನಲ್ಲಿ ತಪ್ಪಿಲ್ಲದಂತೆ ಪದ-ವಾಕ್ಯಗಳನ್ನು ಬರೆದಿದ್ದಳು. ಆಕೆಗೆ ತಂದೆ ತಾಯಿ ಇಲ್ಲ, ಇರುವುದು ಅಜ್ಜಿ, ಅಣ್ಣ ಮಾತ್ರ. ಅದೇ ಚಾಮರಾಜನಗರ ಜಿಲ್ಲೆಯ ಮುಕ್ಕಡಹಳ್ಳಿ ಶತಮಾನ ಶಾಲೆಯಲ್ಲೂ ಏಳೆಂಟು ವರ್ಷದ ಹೆಣ್ಣುಮಗಳು ಮಾತು ಬರದೇ ಸಂಜ್ಞಾ ಭಾಷೆಯವಳಾಗಿದ್ದಳು. ಮೇಷ್ಟ್ರು, ಆಕೆ ಎಲ್ಲದರಲ್ಲೂ ಮುಂದಿದ್ದಾಳೆ ಎಂದರು. ಗುಂಡ್ಲುಪೇಟೆಯ ಮಾಡ್ರಳ್ಳಿ ಶತಮಾನ ಶಾಲೆಗೆ ಒಂದು ಗೃಹಾಧಾರಿತ ಮಗು ಸೇರಿದೆ. ಅದಕ್ಕೆ ಮನೆಗೇ ಬಿಸಿಯೂಟ ಕಳಿಸಬೇಕು. ದೇಮಳ್ಳಿಯಲ್ಲೂ ಮೂರನೇ ತರಗತಿಯಲ್ಲಿ ಒಂದೇ ಒಂದು ಬುದ್ಧಿಮಾಂದ್ಯ ಮಗು ಇದೆ. ಮಿಕ್ಕಂತೆ ಆ ತರಗತಿಗೆ ಮಕ್ಕಳೇ ಇಲ್ಲ. 

ಸರ್ಕಾರಿ ಶತಮಾನ ಶಾಲೆಯ ಹೆಣ್ಣುಮಕ್ಕಳ ವಿಚಾರವನ್ನೇ ಇಲ್ಲಿ ಆರಂಭಕ್ಕೆ ಯಾಕೆ ಪ್ರಸ್ತಾಪಿಸಬೇಕೆಂದರೆ, ಜಿಲ್ಲೆಯ ಎಲ್ಲ ಶಾಲೆ ಅಥವಾ ಇತರೆ ಸರ್ಕಾರಿ ಸಂಸ್ಥೆಗಳಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವ ಬಹುತೇಕ ಹೆಣ್ಣುಮಕ್ಕಳ ಸ್ಥಿತಿಗತಿ ಸಮಾನ ಥರದ್ದೇ ಆಗಿರುತ್ತದೆ. ಕಾಸುಳ್ಳವರು ಅಲ್ಲಲ್ಲೇ ಇರುವ ಆಕ್ಸ್‌ಫರ್ಡ್, ಇಂಟರ್‌ನ್ಯಾಷನಲ್, ಮಿಲೇನಿಯಂ ಮತ್ತು ಮಠಗಳು, ರಾಜಕಾರಣಿಗಳು ಸ್ಥಾಪಿಸಿದ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸುತ್ತಿರುವುದೇನೋ ಸರೀ; ಬಡವರೂ ಸಾಧ್ಯವಾದಷ್ಟು ಮಟ್ಟಿಗೆ ಗಂಡುಮಕ್ಕಳನ್ನು ಖಾಸಗಿ ಶಾಲೆಗೂ, ಹೆಣ್ಣುಮಕ್ಕಳನ್ನು ಸರ್ಕಾರಿ ಶಾಲೆಗೂ ಸೇರಿಸುವುದಿದೆ. ಇಷ್ಟಾಗಿ ಒಬ್ಬ ಶಿಕ್ಷಕಿ ಈಗ ಹೆಣ್ಣುಮಕ್ಕಳಿಗೆ ಪ್ರಜ್ಞಾಪೂರ್ವಕವಾಗೋ, ಅಪ್ರಜ್ಞಾಪೂರ್ವಕವಾಗಿಯೋ ಓದಬೇಕೆಂಬ ತಹತಹ ಇದೆಯೆಂದರು. ಹುತ್ತೂರು, ಲೊಕ್ಕನಹಳ್ಳಿ ಶಾಲೆಯ ಕಡತಗಳಲ್ಲಿ 1945ರಲ್ಲಿ ಸೋಲಿಗ ಬುಡಕಟ್ಟು ಮತ್ತು ಊರ ಹೆಣ್ಣುಮಕ್ಕಳು ಶಾಲೆಗೆ ಸೇರಿದ ದಾಖಲೆಯಿದೆ. ಇದರ ಕುರುಹಾಗಿಯೋ ಏನೋ ಎಲ್ಲ ಶಾಲೆಗಳಲ್ಲೂ ಸಾವಿತ್ರಿ ಬಾ ಫುಲೆಯ ಚಿತ್ರಪಟವಿದೆ. 

ಸರ್ಕಾರಿ ಶಾಲೆಗಳಲ್ಲೂ ಇತ್ತೀಚೆಗೆ ಹಂತ ಹಂತವಾಗಿ ಕನ್ನಡದೊಂದಿಗೆ ಇಂಗ್ಲಿಷ್ ಮಾಧ್ಯಮವನ್ನು ಚಾಲ್ತಿಗೆ ತರುತ್ತಿರುವುದುಂಟು. ಆದರೆ, ಇಂಗ್ಲಿಷ್ ಪಠ್ಯ ಬೋಧಿಸುವ ಶಿಕ್ಷಕರಿಗೆ ಆ ಭಾಷೆಯ ಪರಿಣತಿ ಎಷ್ಟಿರಬಹುದು ಎಂಬುದೇ ಅನುಮಾನ. ಇಂಗ್ಲಿಷ್ ಮಾಧ್ಯಮವೆಂದು ಹೇಳಿಕೊಳ್ಳುವ ಕಾನ್ವೆಂಟ್ ಶಾಲೆಗಳಲ್ಲೂ ಆ ಭಾಷೆಯ ವ್ಯಾಕರಣ ಬಲ್ಲವರು ಎಷ್ಟು ಶಿಕ್ಷಕರು ಇರುತ್ತಾರೋ? ಅದೂ ಸಂದೇಹವೆ. ಒಟ್ಟಿನಲ್ಲಿ ಸರ್ಕಾರಿ ಶಾಲೆಯ ಅಧ್ಯಾಪಕರೆಲ್ಲ ಹೇಳುವಂತೆ, ಎಲ್ಲ ಆಧುನಿಕತೆಯೊಂದಿಗೆ ಮಾಧ್ಯಮ ಸಂಗತಿಯೂ ತಂದೆ ತಾಯಂದಿರ ಹೊಸ ಭ್ರಮೆ! ಕೆಲವು ಇಂಗ್ಲಿಷ್‌ ಮಾಧ್ಯಮ ಶಾಲೆಗಳಲ್ಲಿ ಬಡವರಿಂದ ಆರಂಭಕ್ಕೆ ಇದ್ದಷ್ಟು ಡೊನೇಷನ್ ಕಟ್ಟಿಸಿಕೊಂಡು ಉಳಿದದ್ದನ್ನು ಆಮೇಲೆ ಕಟ್ಟಿ ಅಂದು, ತಂದೆತಾಯಂದಿರು ತಮಗಿರುವ ಕಷ್ಟದಿಂದಾಗಿ ಉಳಿದ ಹಣ ಕಟ್ಟದೇ ಹೋದರೆ ಮಗುವಿನ ಟಿ.ಸಿ ತೆಗೆದುಕೊಂಡು ಹೋಗಿ ಎನ್ನುವುದುಂಟು. ಮಗುವಿನ ಓದಿನ ಕ್ರಮ ಸರಿಯಿಲ್ಲದಿದ್ದರೆ  ಟಿ.ಸಿ ಕೊಟ್ಟು ಕಳಿಸುವುದು ಇದ್ದೇ ಇರುತ್ತದೆ. ಅಂಥ ಮಕ್ಕಳು ಸರ್ಕಾರಿ ಶಾಲೆಗೆ ಬಂದು ಶಿಕ್ಷಣ ಮುಂದುವರಿಸಿರುವುದುಂಟು. ಉಮ್ಮತ್ತೂರು ಶಾಲೆಯ ಶಿಕ್ಷಕಿ ಸುಪ್ರಿಯ, ‘ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ನನ್ನ ಮಗನನ್ನು ಕಾನ್ವೆಂಟ್‌ಗೆ ಸೇರಿಸಿಲ್ಲ. ನಾನಿರುವ ಈ ಶಾಲೆಗೇ ಕನ್ನಡ ಮಾಧ್ಯಮಕ್ಕೇ ಸೇರಿಸಿದ್ದೇನೆ’ ಎಂದರು.

ಉಮ್ಮತ್ತೂರು ಶಾಲೆಗೆ ಶತಮಾನೋತ್ಸವದ ವಿಶೇಷ ಅನುದಾನ ನೀಡಲಾಗಿದೆ. ಆದರೆ, ಇಲ್ಲಿ ಶತಮಾನದ ಕಟ್ಟಡವೇ ಇಲ್ಲ. ಇದೊಂದೇ ಅಲ್ಲ ಕೊತ್ತಲವಾಡಿ, ದೊಡ್ಡಿಂದುವಾಡಿ, ಕುಣುಗಳ್ಳಿ, ಮಧುವನಹಳ್ಳಿ, ಹೊಸಮಾಲಂಗಿ, ಕೊಳ್ಳೇಗಾಲ ಇಲ್ಲೆಲ್ಲ ಬೋರ್ಡಿನಲ್ಲಿ ಶತಮಾನ ಶಾಲೆ ಎಂದಿದ್ದು, ಕಟ್ಟಡಗಳನ್ನು ಕೆಡವಲಾಗಿದೆ. ಹಳೆಯದಾಗಿತ್ತು, ಬೀಳುವ ಸ್ಥಿತಿಯಲ್ಲಿತ್ತು, ಮಕ್ಕಳನ್ನು ಕೂರಿಸಲು ಭಯವಾಗುತ್ತಿತ್ತು ಎಂಬುದು ಇದಕ್ಕೆ ಕಾರಣ. ಇದರೊಂದಿಗೆ ಹರವೆ, ಹರದನಹಳ್ಳಿ, ಹುತ್ತೂರು, ಗುಂಡೇಗಾಲ, ಹುಂಡೀಪುರ, ಆಲಳ್ಳಿ ಈ ಗ್ರಾಮಗಳಲ್ಲಿ ಶತಮಾನದ ಕಟ್ಟಡಗಳು ಉಪಯೋಗಿಸಲಾಗದೆ ಕಸ ತುಂಬಿಕೊಂಡಿವೆ. ಹರವೆ ಶಾಲೆಯ ಚಾವಣಿಯಲ್ಲಿ ಆಲ, ಬೇವಿನ ಗಿಡ ಬೆಳೆದು ಅದರ ಬೇರು ಗೋಡೆಗಳಲ್ಲಿ ಇಳಿದಿದೆ. ಇನ್ನು ಇಂಥ ಸ್ಥಳಗಳಲ್ಲಿ ರಾತ್ರಿ ಅನೈತಿಕ ಚಟುವಟಿಕೆ ನಡೆದು ಪೊಲೀಸ್ ಕಂಪ್ಲೇಂಟ್ ಕೊಟ್ಟಿರುವುದೂ ಇದೆ. ಕತ್ತಲಾದಲ್ಲಿ ಬಿಸಿಯೂಟದ ಅಡುಗೆ ಮನೆಗೆ ನುಗ್ಗಿ ಮೊಟ್ಟೆ ಬೇಯಿಸಿ, ಪಾನಗೋಷ್ಠಿ ನಡೆಸುವುದಿದೆ. ಮಧುವನಹಳ್ಳಿ ಶಾಲೆಯಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಕಿತ್ತು ಹಾಕಲಾಗಿದೆ. ಆದರೆ, ಹಳ್ಳಿಗಳಲ್ಲಿ ಗುಡಿ ಗೋಪುರದ ದೇವರುಗಳು ನಾನಾ ಬಣ್ಣಗಳೊಡನೆ ಎದ್ದು ಕಾಣುತ್ತಾ, ಒಂದೆರಡು ಕಡೆ ದೇವಸ್ಥಾನಗಳಿಂದಲೇ ಶಾಲಾ ಮೈದಾನದ ಒತ್ತುವರಿ ಆಗಿದೆ. ಇದು ಪ್ರತ್ಯೇಕ ಪುಟಗಳ ವಿವರವಾಗುತ್ತದೆ.  

ಚಂದಕವಾಡಿ, ಹಂಗಳ, ಕಬ್ಬಳ್ಳಿ, ದೊಡ್ಡಿಂದುವಾಡಿ, ಮುಡಿಗುಂಡ, ಮಧುವನಹಳ್ಳಿ, ರಾಮಾಪುರ, ಕುಣಗಳ್ಳಿ, ಗುಂಡ್ಲುಪೇಟೆ ಈ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಿದ್ದು, ಕೆಲವೆಡೆ ಇಂಗ್ಲಿಷ್- ಕನ್ನಡ ಮಾಧ್ಯಮ ಎರಡೂ ಇದ್ದು ಈ ಶಾಲೆಗಳು ಚೆನ್ನಾಗಿಯೇ ನಡೆಯುತ್ತಿವೆ. ಹಂಗಳ ಶಾಲೆಯ ಮುಖ್ಯ ಶಿಕ್ಷಕಿಯರು, ‘2012ರಲ್ಲಿ ಇದೇ ಗ್ರಾಮದಲ್ಲಿ ಒಂದು ಖಾಸಗಿ ಶಾಲೆಯಿತ್ತು. ಆಗ ನಮ್ಮ ಸರ್ಕಾರಿ ಶಾಲೆಯಲ್ಲಿದ್ದ ಮುಖ್ಯೋಪಾಧ್ಯಾಯ ರವಿಕುಮಾರ್ ಅವರ ಶಿಸ್ತು, ಶ್ರಮ, ಮತ್ತಿತರ ಸಹಶಿಕ್ಷಕರ ಸಹಕಾರದಿಂದ ಶಾಲೆಗೆ ಹೆಚ್ಚು ಮಕ್ಕಳು ಸೇರ್ಪಡೆಯಾಗಿ, ಪಾಠ ಚೆನ್ನಾಗಿ ನಡೆದು ಆ ಖಾಸಗಿ ಶಾಲೆ ಮುಚ್ಚಿಹೋಯಿತು’ ಎಂದರು. ಈಗಲೂ ಅದೇ ಶಿಸ್ತಿನಲ್ಲಿ ಶಾಲೆ ಹೆಚ್ಚು ಸಂಖ್ಯೆಯ ಮಕ್ಕಳೊಡನೆ ನಡೆಯುತ್ತಿದೆ ಎಂದರು. ಶಿಕ್ಷಕರು ಹೇಳಿದ್ದೆಂದರೆ, ಮಕ್ಕಳು ಪ್ರಾಥಮಿಕ ಹಂತದಲ್ಲಿಯೇ ಇಂಗ್ಲಿಷ್ ಕಲಿತಾಕ್ಷಣ ಬುದ್ಧಿವಂತರಾಗಿಬಿಡುವುದಿಲ್ಲ, ಅದಕ್ಕೆ ಸಾಕಷ್ಟು ಕಾಲ ಬೇಕು, ಅದನ್ನು ನಾವು ಮಕ್ಕಳ ಕಲಿಕಾ ಕ್ರಮವನ್ನು ಕಂಡೇ ಗ್ರಹಿಸಿದ್ದೇವೆ ಎನ್ನುತ್ತಾರೆ. ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ್ದೇವೆ ಅಂದಾಕ್ಷಣ ಎಷ್ಟು ಜನಕ್ಕೆ ಉದ್ಯೋಗ ಸಿಗುವ ಸಾಧ್ಯತೆ ಇದೆ? ಯಾವ ಮಾಧ್ಯಮದಲ್ಲಿ ಓದಿದರೂ ಉದ್ಯೋಗಾವಕಾಶ ಅವರವರ ಬುದ್ಧಿವಂತಿಕೆ, ಆಲೋಚನಾಶಕ್ತಿ, ಗ್ರಹಿಕೆ, ಕೌಶಲಕ್ಕೆ ಸಂಬಂಧಿಸಿದ್ದು’ ಎಂದರು. 

ಚಂದಕವಾಡಿ ಶಾಲೆಯಲ್ಲಿ ಅಧ್ಯಾಪಕರ ಕೊರತೆ ಇದ್ದರೂ ಇರುವ ಶಿಕ್ಷಕರು ಸಂಜೆಯ ಹೊತ್ತು ತಂದೆ ತಾಯಂದಿರಿಗೆ ದೂರವಾಣಿ ಮಾಡಿ ಮನೆಯಲ್ಲಿ ಮಕ್ಕಳ ಓದನ್ನು ವಿಚಾರಿಸುವ ಪರಿಪಾಟ ಇಟ್ಟುಕೊಂಡಿದ್ದಾರೆ. ಒಬ್ಬೊಬ್ಬ ಶಿಕ್ಷಕರಿಗೆ ಆಯಾ ದಿನ ಇಷ್ಟು ಮಕ್ಕಳ ವಿಚಾರಣೆ ಎಂದು ಹಂಚಿಕೊಂಡಿರುವುದುಂಟು. ಗುಂಡ್ಲುಪೇಟೆ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬ ಬಂದು, ‘ಈಗ ನಮ್ಮ ತರಗತಿಗೆ ಯಾರೂ ಮೇಷ್ಟ್ರು ಬಂದಿಲ್ಲ ಸಾರ್’ ಎಂದ. ‘ಹೀಗೆ ಏನಿದ್ದರೂ ಬಂದು ವಿವರ ತಿಳಿಸಬೇಕೆಂದು ಮಕ್ಕಳಿಗೆ ಹೇಳಿಕೊಟ್ಟಿದ್ದೇವೆ’ ಎಂದರು ಶಿಕ್ಷಕರು. ಅಲ್ಲಿಯ ದೈಹಿಕ ಶಿಕ್ಷಣ ಶಿಕ್ಷಕ ಸಿದ್ಧಶೆಟ್ಟರು ಬೆಳಿಗ್ಗೆ ಎಂಟು ಗಂಟೆಗೆ ಶಾಲೆಗೆ ಬಂದರೆ ಅವರು ಮನೆಗೆ ವಾಪಸ್ಸಾಗುವುದು ಸಂಜೆ ಆರು ಗಂಟೆಗೆ. ಮಿಕ್ಕಂತೆ ಶಾಲೆಯಲ್ಲಿ ಅವರ ಕಾಯಕಸೇವೆ ಇಡೀ ದಿನ ಇರುತ್ತದೆ. ಅವರು ಬಂದ ಮೇಲೆ ಶಾಲಾ ಕಾಂಪೌಂಡ್‌ನಲ್ಲಿ ಬಾಟಲುಗಳು ಬೀಳುವುದು ಕಡಿಮೆಯಾಗಿದೆಯಂತೆ. ಆದರೆ, ಕಡಿಮೆ ಸಂಖ್ಯೆಯ ಮಕ್ಕಳಿರುವಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿರುವುದಿಲ್ಲ. ಬಹುತೇಕ ಶಾಲೆಗಳಲ್ಲಿ ಸ್ನಾತಕೋತ್ತರ ಪದವೀಧರರಿದ್ದಾರೆ. ಮಕ್ಕಳ ಸಂಖ್ಯೆ ಹೆಚ್ಚಿರುವ ಶಾಲೆಗಳಲ್ಲಿ ಅಧ್ಯಾಪಕರ ಶಿಸ್ತು, ಶ್ರಮ ಮತ್ತು ಊರವರ, ‘ನನ್ನ ಶಾಲೆ-ನನ್ನ ಕೊಡುಗೆ’ಯ ಸಹಕಾರ ಇರುವುದು ಎದ್ದು ಕಾಣುತ್ತದೆ. ಇಂಥ ಕಡೆ ಶಾಲಾ ವಾರ್ಷಿಕೋತ್ಸವ, ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಗಳಿಗಾಗಿ ಊರವರೆಲ್ಲ ಸೇರಿ ಲಕ್ಷಾಂತರ ಹಣ ಖರ್ಚು ಮಾಡುವುದಿದೆ.  

ದೊಡ್ಡಿಂದುವಾಡಿ ಶಾಲೆಯಲ್ಲಿ ಶಾಲಾ ಆರಂಭದ ದಿನ ಅಲಂಕರಿಸಿದ ವ್ಯಾನಿನಲ್ಲಿ ಮಕ್ಕಳನ್ನು ಅವರ ತಂದೆತಾಯಿಗಳೊಡನೆ ಸಂಭ್ರಮದಿಂದ ಕರೆತರುವುದಿದೆ. ಲೊಕ್ಕನಹಳ್ಳಿ ಶಾಲೆಯಲ್ಲಿ ತಂದೆ–ತಾಯಿಗಳೊಡನೆ ಮಕ್ಕಳನ್ನು ಕೂರಿಸಿ ಹೂವಿಟ್ಟ ಅಕ್ಕಿ ತಟ್ಟೆಯಲ್ಲಿ ಅಕ್ಷರ ತಿದ್ದಿಸುವುದುಂಟು. ಕೆಲವು ಕಡೆ ಶಾಲೆಗೆ ಮಕ್ಕಳನ್ನು ಸೇರಿಸಲು ಬರುವ ತಂದೆ ತಾಯಿ, ಮಕ್ಕಳ ನಾಮಧೇಯವೇ ಆದಿಯಾಗಿ ಅವರ ವಾಸ್ತವ್ಯ, ಉದ್ಯೋಗ ಮಾಹಿತಿಯನ್ನೆಲ್ಲ ಅಧ್ಯಾಪಕರೇ ತುಂಬಬೇಕು. ಚಂದಕವಾಡಿಯ ಮುಖೋಪಾಧ್ಯಾಯರು ಆ ಕಾಯಕವನ್ನು ಸಂತೋಷದಿಂದಲೇ ಮಾಡುತ್ತಿದ್ದರು. 2024ರ ಸಾಲಿನಲ್ಲಿ ಚಾಮರಾಜನಗರದ ಶತಮಾನ ಕಂಡ ನಾಲ್ಕು ಶಾಲೆಗಳಿಗೆ ಹೆಚ್ಚುವರಿ ಅನುದಾನ ಸಿಕ್ಕಿದೆ. 

‘ಇತ್ತೀಚೆಗೆ ಶಾಲೆಯಲ್ಲಿ ಬಹುತೇಕ ಕಡೆ ದ್ವಿಭಾಷಾ ಮಾಧ್ಯಮ ಜಾರಿಗೆ ಬರುತ್ತಿರುವುದರಿಂದ ಕೊಠಡಿಗಳು ಮತ್ತು ಶಿಕ್ಷಕರ ಅಗತ್ಯವಿದೆ. ಇಂಗ್ಲಿಷ್, ಕನ್ನಡ ತರಗತಿಗಳನ್ನು ಬೇರೆ ಬೇರೆಯಾಗಿಯೇ ನಿರ್ವಹಿಸಬೇಕಿದೆ. ಇಬ್ಬರು ಮೂವರು ಶಿಕ್ಷಕರು, ಐವತ್ತಕ್ಕೂ ಮಿಕ್ಕು ಮಕ್ಕಳಿದ್ದಲ್ಲಿ ಒಂದರಿಂದ ಏಳನೆಯ ತರಗತಿವರೆಗೆ, ಬೆಳಗಿನಿಂದ ಸಂಜೆಯವರೆಗೆ ಪಾಠ ಮಾಡುವುದು ಕಷ್ಟ’ ಎನ್ನುತ್ತಾರೆ ಅಧ್ಯಾಪಕರು. ಇದರೊಂದಿಗೆ ಇಲಾಖೆ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರನ್ನು, ಮುಖ್ಯೋಪಾಧ್ಯಾಯರನ್ನು ನೇಮಿಸುವುದುಂಟು. ಶಿಕ್ಷಕರು, ಮಕ್ಕಳು ಕಡಿಮೆಯಿದ್ದು, ಶಾಲಾಭಿವೃದ್ಧಿ ಮಂಡಳಿಯ ಸಹಕಾರವೂ ಇಲ್ಲದಿದ್ದರೆ ಶಾಲೆ ಮುಚ್ಚಿಹೋಗುವತ್ತ ಹೆಜ್ಜೆಯಿಡುತ್ತದೆ. ಈ ದಿಕ್ಕಿನಲ್ಲಿ ಕುಂತೂರು, ಮಾಡ್ರಳ್ಳಿ, ಹುಂಡೀಪುರ, ದೇಮಳ್ಳಿ ಜತೆಗೆ ಚಾಮರಾಜನಗರದ ಮುಖ್ಯ ಪಟ್ಟಣದ ಪೇಟೆ ಪ್ರೈಮರಿ ಶಾಲೆ ಇದೆ. ಇಲ್ಲೆಲ್ಲ ಐವತ್ತಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಮಕ್ಕಳಿದ್ದಾರೆ. ತೀರಾ ಕಡಿಮೆ ಮಕ್ಕಳಿರುವ ಶಾಲೆಯಲ್ಲಿ ಸಾಮಾನ್ಯ ಒಂದೇ ಕೋಮಿನ ಮಕ್ಕಳಿರುತ್ತಾರೆ. ದೇಮಳ್ಳಿಯ  ಹಿರಿಯರು ಆಡಿದ ಮಾತೆಂದರೆ ‘ಗ್ರಾಮದಲ್ಲಿ ಯುವಕರೂ ಇಲ್ಲ, ಹೆಣ್ಣುಮಕ್ಕಳೂ ಇಲ್ಲ, ಮದುವೆ ಕಾರ್ಯವೂ ಇಲ್ಲ, ಇನ್ನು ಶಾಲೆಗೆ ಮಕ್ಕಳು ಎಲ್ಲಿಂದ ಬರಬೇಕು?’

ಕನ್ನಡ-ಇಂಗ್ಲಿಷ್ ಮಾಧ್ಯಮದ ಸಮಸ್ಯೆಯೊಂದಿಗೆ, ನಾನಾ ಸಿಲಬಸ್‌ಗಳ ತರತಮ ಪಠ್ಯದ ಶಾಲೆಗಳು ಸೃಷ್ಟಿಯಾಗಿ, ಅದರೊಂದಿಗೆ ತಂದೆ–ತಾಯಿಗಳ ಮಾಧ್ಯಮ ಭ್ರಮೆಯೂ ಸೇರಿ ಮಕ್ಕಳ ಮನಸ್ಸಿನಲ್ಲಿ ಕೀಳರಿಮೆಯನ್ನೂ, ಮೇಲರಿಮೆಯನ್ನೂ ಸೃಷ್ಟಿಸುವ ಶಿಕ್ಷಣ ಕ್ರಮ ಈ ಹೊತ್ತಿನದಾಗಿದೆ. ಸರ್ಕಾರಕ್ಕೆ ಈ ಇಲಾಖೆ ಲೆಕ್ಕಕ್ಕೇ ಇಲ್ಲದಿರುವಂಥದ್ದು. ಈ ನಿರಾಸಕ್ತಿ ಪ್ರಾಥಮಿಕ ಹಂತದಿಂದಲೇ ಆರಂಭವಾಗಿ ಕಾಲೇಜು ಮತ್ತು ವಿಶ್ವವಿದ್ಯಾಲಯದವರೆಗೆ ಬೆಳೆಯುತ್ತ ಅದೆಲ್ಲದರ ಅವನತಿ ಕಂಡುಬರುತ್ತಿದೆ. ಅದರ ನಡುವೆಯೂ, ತಾವು  ಕಾಯಕ ಮಾಡುತ್ತಿರುವ ಶಾಲಾ ಮಕ್ಕಳ ಭವಿಷ್ಯ ಹಸನಾಗಬೇಕೆಂದು ದುಡಿಯುತ್ತಿರುವ ನಿಷ್ಠಾವಂತ ಶಿಕ್ಷಕ- ಶಿಕ್ಷಕಿಯರ ಸಮೂಹ ಅವರದೇ ದಾಖಲೆ ಸಮೇತ ಚಾಮರಾಜನಗರ ಜಿಲ್ಲೆಯಾದ್ಯಂತ ಕಂಡುಬರುತ್ತದೆ. ಇದೀಗ ಶಾಲಾ ಶಿಕ್ಷಕರ ಮುಖ್ಯ ಜವಾಬ್ದಾರಿ ಅಂದರೆ ಪ್ರಾಥಮಿಕ ಹಂತದಲ್ಲಿ ಕನ್ನಡದೊಂದಿಗೆ ಇಂಗ್ಲಿಷನ್ನೂ ಚೆನ್ನಾಗಿ ಕಲಿಸಬೇಕಾಗಿದೆ.

ಚಾಮರಾಜನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಪೇಟೆ ಹಿರಿಯ ಪ್ರಾಥಮಿಕ ಶಾಲೆಯ ನೋಟ
ಕೊಳ್ಳೇಗಾಲ ತಾಲ್ಲೂಕಿನ ಮಧುವನಹಳ್ಳಿಯಲ್ಲಿರುವ ಶತಮಾನ ಕಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರವೇಶದ್ವಾರ

ಹೇಗಿದೆ ಬಿಸಿಯೂಟದ ನಿರ್ವಹಣೆ?

ಸರ್ಕಾರಿ ಶಾಲೆಯಲ್ಲಿ 200 300 ಮಕ್ಕಳಿದ್ದಲ್ಲಿ ನಿಜಕ್ಕೂ ಬಿಸಿಯೂಟದ್ದು ಸಮಸ್ಯೆ. ಅದರ ಕೆಲಸ ಅಧಿಕ. ತರಗತಿಯಲ್ಲಿ ಪಾಠದ ಹೊತ್ತಿನಲ್ಲಿ ಎಷ್ಟು ಮಕ್ಕಳು ಇಂದು ಮೊಟ್ಟೆ ತೆಗೆದುಕೊಳ್ಳುತ್ತಾರೆ ಮತ್ತೆಷ್ಟು ಮಕ್ಕಳು ಬಾಳೆಹಣ್ಣು ಕೇಳುತ್ತಾರೆ ಎಂಬುದರ ನಿಖರ ಮಾಹಿತಿ ಸಂಗ್ರಹಿಸಬೇಕು. ಯಾಕೆಂದರೆ ಮನೆಯಲ್ಲಿ ಹೇಳಿಕೊಟ್ಟಂತೆ ಅವು ಈ ದಿನ ಮನೆ ದೇವರ ವಾರ ಮೊಟ್ಟೆ ತಿನ್ನುವುದಿಲ್ಲ ಎನ್ನುತ್ತವೆ. ಮೊಟ್ಟೆ ಬದಲು ಬಾಳೆಹಣ್ಣು ತರಬೇಕು. ಈ ಸಂಬಂಧ ಮೇಲಧಿಕಾರಿಗಳಿಗೆ ತರಗತಿಯಲ್ಲಿ ಮಕ್ಕಳಿಂದಲೇ ಸಮಜಾಯಿಷಿ ಕೊಡಿಸಬೇಕು ಎನ್ನುತ್ತಾರೆ ಶಿಕ್ಷಕರು. ವಾರಕ್ಕೆರಡು ದಿನ ಸರ್ಕಾರ ಮೊಟ್ಟೆ ಕೊಡಲು ಹೇಳಿದ್ದರೆ ಅಜೀಂ ಪ್ರೇಮ್‌ಜಿ ಸಂಸ್ಥೆಯವರು ನಾಲ್ಕು ದಿನ ಕೊಡುತ್ತಿದ್ದಾರೆ. ಆದರೆ ಮೊಟ್ಟೆಯ ಬೆಲೆ ಏರುಪೇರು ಆದಲ್ಲಿ ಆ ಹಣವನ್ನು ಯಾವುದರಿಂದ ಭರಿಸಬೇಕು? ಇಷ್ಟಾಗಿಯೂ ಬಹುತೇಕ ಎಲ್ಲಾ ಶಾಲೆಗಳೂ ಬಿಸಿಯೂಟದ ಕಾರ್ಯಕ್ರಮವನ್ನು ಚೆನ್ನಾಗಿಯೇ ನಿರ್ವಹಿಸುತ್ತಿವೆ. ರಾಮಾಪುರದ ಶಾಲೆಯಲ್ಲಿ ಬಿಸಿಯೂಟ ತಯಾರಿಕೆಯ ಸ್ಥಳಕ್ಕೆ ಭದ್ರತೆ ಇದ್ದಂತಿಲ್ಲ. ಅಡುಗೆ ಮಾಡುವಲ್ಲಿ ದಲಿತ ಹೆಣ್ಣುಮಕ್ಕಳು ಭಾಗವಹಿಸುವರೇ ಎನ್ನುವಲ್ಲಿ ಅಧ್ಯಾಪಕರು ‘ಅಂಥ ವೇಳೆ ಮೊದಲು ನಾವೇ ಊಟ ಮಾಡುತ್ತೇವೆ’ ಎಂದರು. ಇದು ಮೆಚ್ಚಬೇಕಾದದ್ದು. ರಮ್ಯ ಪ್ರಕೃತಿಯ ತಾಣದ ನಡುವೆ ಇರುವ ಬಾಚಳ್ಳಿ ಶಾಲೆಯಲ್ಲಿ ಬಿಸಿಯೂಟಕ್ಕೆ ಹಕ್ಕಿಪಕ್ಷಿಗಳೂ ಬಂದಿದ್ದವು. ಅಲ್ಲಿಯ ಮಕ್ಕಳು ಸಂಜೆ ಮೂರೂವರೆಯಲ್ಲಿ ಊಟ ಮಾಡುತ್ತಿರಲು ಇಷ್ಟು ತಡವಾಗಿ ಯಾಕೆ ಎಂದು ಕೇಳಿದ್ದಕ್ಕೆ ‘ಮಧ್ಯಾಹ್ನದ ಅನ್ನ ಉಳಿದಿತ್ತು ಈಗ ಎರಡನೇ ಸರ್ತಿ ಮನೆಯಲ್ಲಿ ರಾತ್ರಿ ಊಟ ಮಾಡುವುದಿಲ್ಲ’ ಅಂದರು. ನಿಜಕ್ಕೂ ಈ ಬಿಸಿಯೂಟ ಮತ್ತು ಜಿಲ್ಲಾ ಪಂಚಾಯತಿಗೆ ಸೇರುವ ಕೂಸಿನ ಮನೆ ಯೋಜನೆ ದೊಡ್ಡದು. ಆದರೆ ಹಣವಿರುವವರಿಗೆ ಈ ಊಟ ಬಡವರ ಮಕ್ಕಳ ಶಾಲೆಯ ಅಗತ್ಯವೇ ಇಲ್ಲ.

ಊರ ಹೆಮ್ಮೆಯ ಗುರುತಾಗಿ ಉಳಿಸಿ

ಶತಮಾನದ ಶಾಲೆಯ ಕಟ್ಟಡಗಳನ್ನು ಕೆಲವು ಕಡೆ ಉರುಳಿಸಿರುವುದನ್ನು ಬಿಟ್ಟರೆ ಇದೀಗ ಇರುವಂಥವನ್ನು ಊರ ಹೆಮ್ಮೆಯ ಗುರುತಾಗಿ ಉಳಿಸಿಕೊಳ್ಳಬಹುದು. ಕೆಲವು ಕಡೆ ಇವು ರಿಪೇರಿಯಾಗಿ ಚೆನ್ನಾಗಿಯೇ  ನಡೆಯುತ್ತಿವೆ. ಈ ಶಾಲೆಗಳು ಅಲ್ಲೇ  ಬೃಹತ್ತಾಗಿ ಬೆಳೆದು ನಿಂತಿರುವ ಅರಳಿ ಮರಗಳೊಡನೆ ಎಷ್ಟೋ ಜರುಗಿ ಹೋದ ಕಥೆಗಳನ್ನು ಒಡಲಲ್ಲಿಟ್ಟುಕೊಂಡು ನಿಂತಿವೆ. ನೂರು ವರ್ಷಗಳಲ್ಲಿ ಈ ಶಾಲೆಗಳಲ್ಲಿ ಅಕ್ಷರಾಭ್ಯಾಸಗೈದು ಪ್ರಪಂಚವೆಲ್ಲ ಹರಡಿಹೋದವರ ಲೆಕ್ಕ ಇಡಲು ಸಾಧ್ಯವೇ? ಅಂಥ ಕೆಲವರ  ಸಹಾಯ ಹಸ್ತವೂ ಇದೆ. ಚಾಮರಾಜನಗರದ ಪೇಟೆ ಪ್ರೈಮರಿ ಶಾಲೆಯಲ್ಲಿ ಕನ್ನಡದ ಲೇಖಕ ಕುವೆಂಪು ಅವರ ಪ್ರಿಯ ಶಿಷ್ಯ ಡಾ. ಪ್ರಭುಶಂಕರ  ಹಿಂದೆ ಶಿಕ್ಷಣ ಮಂತ್ರಿಗಳಾಗಿದ್ದ ಪ್ರೊ.ಬಿ.ಕೆ.ಚಂದ್ರಶೇಖರ್ ಮತ್ತು ಗೃಹಮಂತ್ರಿಗಳಾಗಿದ್ದ ಬಿ.ರಾಚಯ್ಯನವರು ಓದಿದ್ದರಂತೆ. ಸರ್ ಮಿರ್ಜಾ ಇಸ್ಮಾಯಿಲ್ ಈ ಶಾಲೆಗೆ ಭೇಟಿ ಕೊಟ್ಟಿದ್ದರು. ತೀರಾ ಸಣ್ಣ ಸಣ್ಣ ಹಳ್ಳಿಗಳಲ್ಲಿರುವ  ಶಾಲೆಗಳ ಉದ್ಘಾಟನೆಗಾಗಿ ಕಳೆದ ದಶಕಗಳಲ್ಲಿ ಶಿಕ್ಷಣ ಮಂತ್ರಿಗಳಾಗಿದ್ದ  ಆರ್.ಬದರೀನಾರಾಯಣ ಎಸ್‌.ಆರ್.ಕಂಠಿ ಲೋಕೋಪಯೋಗಿ ಸಚಿವರಾಗಿದ್ದ ಎಚ್.ಎಂ.ಚೆನ್ನಬಸಪ್ಪ ಮತ್ತು ಕೆ.ಸಿ.ರೆಡ್ಡಿ ಬ್ರಿಟಿಷ್ ದೊರೆಗಳು ಆಗಮಿಸಿದ್ದರ  ಶಿಲಾ ಫಲಕಗಳು ಜತೆಗೆ ಶಾಲಾ ಕಟ್ಟಡಕ್ಕೆ ಸ್ಥಳ ದಾನ ಮಾಡಿದ ಮಹನೀಯರ ದಾಖಲೆಗಳೂ ಇವೆ. ಕಬ್ಬಳ್ಳಿಯಲ್ಲಿ ಶತಮಾನದ ಹಿಂದೆಯೇ ಶಿಕ್ಷಕರಿಗೆ ಶಾಲೆಯ ಎದುರೇ ವಸತಿಗೃಹಗಳನ್ನು ನಿರ್ಮಿಸಿ ಕೊಡಲಾಗಿದೆ!

**********

ಸಹಕಾರ: ರಘು.ಬಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.