ADVERTISEMENT

ಆಳ–ಅಗಲ | ಮಕ್ಕಳ ಮೇಲೆ ಎಐ ದೌರ್ಜನ್ಯ: ಅಂಕುಶವೇ ಇಲ್ಲದ ಅವಿವೇಕ

ಸುಕೃತ ಎಸ್.
Published 20 ನವೆಂಬರ್ 2025, 0:23 IST
Last Updated 20 ನವೆಂಬರ್ 2025, 0:23 IST
   

ಇಂದಿನ ಆಧುನಿಕ ಯುಗದಲ್ಲಿ ಮಕ್ಕಳು ಮಾಹಿತಿಗಾಗಿ ತಂತ್ರಜ್ಞಾನದ ಮೇಲೆ ಬಹುವಾಗಿ ಅವಲಂಬಿತರಾಗಿದ್ದಾರೆ. ಈ ತಂತ್ರಜ್ಞಾನವೇ ಅವರಿಗೆ ಮಾರಕವೂ ಆಗಿದೆ. ದುಷ್ಕೃತ್ಯ ಎಸಗುವವರು ಮಕ್ಕಳನ್ನು ಲೈಂಗಿಕ ದೌರ್ಜನ್ಯದ ಸಂತ್ರಸ್ತರನ್ನಾಗಿ ಮಾಡುತ್ತಿದ್ದಾರೆ.

ಕೃತಕ ಬುದ್ಧಿಮತ್ತೆ (ಎಐ) ಕಾಲಘಟ್ಟದಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಈ ತಂತ್ರಜ್ಞಾನವೇ ಅಸ್ತ್ರವಾಗಿದೆ. ಲೈಂಗಿಕವಾಗಿ ಉದ್ರೇಕಗೊಳಿಸಲು ಮಕ್ಕಳೇ ಚಾಟ್‌ ಮಾಡುತ್ತಿದ್ದಾರೆ ಎನ್ನುವಂತೆ ಚಾಟ್‌ ಸೃಷ್ಟಿಸುವುದು, ತಂತ್ರಜ್ಞಾನದ ಮೂಲಕ ಮಕ್ಕಳ ಚಿತ್ರಗಳನ್ನು ನಗ್ನಗೊಳಿಸಿ ಅಶ್ಲೀಲ ವಿಡಿಯೊಗಳಲ್ಲಿ ಬಳಸಿಕೊಳ್ಳವುದು... ಇಂತಹ ಅತಿರೇಕಗಳು ವ್ಯಾಪಕವಾಗಿ ನಡೆಯುತ್ತಿವೆ.

ವಿಶ್ವ ಸಂಸ್ಥೆಯ ‘ಜೆನರೇಟಿವ್‌ ಎಐ: ಎ ನ್ಯೂ ಥ್ರೆಟ್‌ ಫಾರ್‌ ಆನ್‌ಲೈನ್‌ ಚೈಲ್ಡ್‌ ಸೆಕ್ಸುವಲ್ ಎಕ್ಸ್‌ಪ್ಲಾಯ್ಟೇಷನ್‌ ಆ್ಯಂಡ್‌ ಅಬ್ಯೂಸ್‌’ ವರದಿಯಲ್ಲಿ ಈ ಎಲ್ಲವನ್ನೂ ವಿವರಿಸಲಾಗಿದೆ. 2023ರಿಂದ ಈಚೆಗೆ ಇಂಥ ಪ್ರಕರಣಗಳು ಹೆಚ್ಚಾಗಿವೆ. ತಮಗೆ ಗೊತ್ತಿಲ್ಲದಂತೆ ಮಕ್ಕಳು ಸಂತ್ರಸ್ತರಾಗುತ್ತಿದ್ದಾರೆ. ಪ್ರೌಢಾವಸ್ಥೆಗೆ ಬಂದಿರುವ ಮಕ್ಕಳೇ (ಬಹುಪಾಲು ಪ್ರಕರಣಗಳಲ್ಲಿ ಹೆಣ್ಣುಮಕ್ಕಳು) ಇಂಥ ಕೃತ್ಯಗಳಲ್ಲಿ ಸಂತ್ರಸ್ತರಾಗುತ್ತಾರೆ.

ADVERTISEMENT

ವಿಶ್ವಸಂಸ್ಥೆಯ ಪ್ರಕಾರ, ಅಶ್ಲೀಲ ವಿಡಿಯೊ ವೀಕ್ಷಣೆ ಮಾಡುವ ಒಟ್ಟು ಪುರುಷರಲ್ಲಿ ಮಕ್ಕಳ ಅಶ್ಲೀಲ ವಿಡಿಯೊವನ್ನು ಶೇ 65ರಷ್ಟು ಮಂದಿ ವೀಕ್ಷಿಸುತ್ತಾರೆ. ಇವರಲ್ಲಿ ಶೇ 37ರಷ್ಟು ಪುರುಷರು ತಮ್ಮ ಲೈಂಗಿಕ ಬಯಕೆಯನ್ನು ತೀರಿಸಿಕೊಳ್ಳಲು ಮಕ್ಕಳನ್ನು ನೇರವಾಗಿ ಬಳಸಿಕೊಳ್ಳುತ್ತಾರೆ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವವರಲ್ಲಿ ಪುರುಷರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಹೆಚ್ಚು ‘ನೈತಿಕ’ ಎನ್ನುವ ವಾದ

ಎಐ ಮೂಲಕ ಅಶ್ಲೀಲ ವಿಡಿಯೊ ಸೃಷ್ಟಿಸುವವರ ಮೂಲ ಉದ್ದೇಶ ಹಣ ಮಾಡುವುದು. ಎಐ ತಂತ್ರಜ್ಞಾನದ ತಿಳಿವಳಿಕೆ ಇರುವವರು ಮತ್ತೊಬ್ಬರಿಗಾಗಿ ವಿಡಿಯೊ ಸೃಷ್ಟಿಸಿ ಹಣ ಮಾಡುತ್ತಾರೆ. ಇಲ್ಲವೇ ಮತ್ತೊಬ್ಬರ ಮಾನ ಕಳೆಯುವುದಕ್ಕಾಗಿ, ಬ್ಲ್ಯಾಕ್‌ಮೇಲ್‌ ಮಾಡಿ ಹಣ ಗಳಿಸುವುದಕ್ಕಾಗಿ ವಿಡಿಯೊ ಮಾಡುತ್ತಾರೆ. ಕೆಲವರು ಎಐ ತಂತ್ರಜ್ಞಾನದಲ್ಲಿ ತಮಗಿರುವ ಕೌಶಲ ತೋರಿಸುವುದಕ್ಕೂ ಇಂಥ ವಿಡಿಯೊಗಳನ್ನು ಸೃಷ್ಟಿಸುತ್ತಾರೆ. ಮಕ್ಕಳ ಮೇಲಿನ ದೌರ್ಜನ್ಯದ ವಿಡಿಯೊ ನೋಡುವುದಕ್ಕಿಂತ ಎಐ ತಂತ್ರಜ್ಞಾನದ ಮೂಲಕ ಸೃಷ್ಟಿಸಿದ ವಿಡಿಯೊವು ಹೆಚ್ಚು ನೈತಿಕವಾಗಿರುತ್ತದೆ ಎನ್ನುವುದು ದುಷ್ಕೃತ್ಯ ಎಸಗುವವರ ವಾದ ಎನ್ನುವುದನ್ನು ವರದಿಯಲ್ಲಿ ವಿವರಿಸಲಾಗಿದೆ.

ಎಐ: ದೌರ್ಜನ್ಯದ ಮುಖಗಳು

  • ಎಐ ಚಾಟ್‌ ಮಾದರಿ: ಲೈಂಗಿಕವಾಗಿ ಉದ್ರೇಕಗೊಳ್ಳಲು ಮಕ್ಕಳೇ ಚಾಟ್‌ ಮಾಡುತ್ತಿದ್ದಾರೆ ಎನ್ನುವಂತೆ ಚಾಟ್‌ ಮಾದರಿಗಳನ್ನು ಸೃಷ್ಟಿಸುವುದು

  • ತರಬೇತಿ: ಮಕ್ಕಳ ಮೇಲೆ ಹೇಗೆಲ್ಲಾ ಲೈಂಗಿಕ ದೌರ್ಜನ್ಯ ಎಸಗಬಹುದು ಎನ್ನುವ ಬಗ್ಗೆ ಮಾರ್ಗಸೂಚಿ, ತರಬೇತಿ, ಸಲಹೆಗಳನ್ನು ನೀಡುವಂಥ ಕಂಟೆಂಟ್‌ ಸೃಷ್ಟಿ

  • ಚಿತ್ರ ಸೃಷ್ಟಿ: ಮಕ್ಕಳ ಅಶ್ಲೀಲ ಚಿತ್ರಗಳನ್ನು ಸೃಷ್ಟಿಸಲು ಎಐಗೆ ಪ್ರೇರೇಪಿಸುವಂತಹ ಸಂದೇಶಗಳು

  • ಮರುಸೃಷ್ಟಿ: ಈಗಾಗಲೇ ಇರುವ ಮಕ್ಕಳ ಅಶ್ಲೀಲ ಚಿತ್ರಗಳನ್ನು ಬಳಸಿಕೊಂಡು ಮತ್ತೊಮ್ಮೆ ಬೇರೆ ರೀತಿಯ ಅಶ್ಲೀಲ ಚಿತ್ರಗಳನ್ನು ಸೃಷ್ಟಿಸುವುದು

  • ಫೋಟೊ ಬಳಕೆ: ಮಕ್ಕಳ ಅಶ್ಲೀಲ ಚಿತ್ರಗಳನ್ನು ಸೃಷ್ಟಿಸುವುದಕ್ಕಾಗಿಯೇ ಮಕ್ಕಳ ಚಿತ್ರಗಳನ್ನು ಸೆರೆಹಿಡಿಯುವುದು

ಮತ್ತೆ ಮತ್ತೆ ಸಂತ್ರಸ್ತರು

  • ಎಐ ಚಾಟ್‌ ಮಾದರಿ ಸಿದ್ಧಪಡಿಸುವುದು: ಈಗಾಗಲೇ ಇರುವ ಮಕ್ಕಳ ಅಶ್ಲೀಲ ಚಿತ್ರಗಳನ್ನು ಮತ್ತು ಹೊಸದಾಗಿ ಸೆರೆಹಿಡಿದ ಚಿತ್ರಗಳನ್ನು ಎಐ ಡಾಟಾಬೇಸ್‌ಗೆ ನೀಡಲಾಗುತ್ತದೆ. ಇದರಿಂದ ಮಕ್ಕಳ ಹೊಸ ಹೊಸ ಅಶ್ಲೀಲ ಚಿತ್ರಗಳನ್ನು ಸೃಷ್ಟಿಸಲಾಗುತ್ತದೆ. ಎಲ್‌ಎಐಒಎನ್‌–5ಬಿ ಎನ್ನುವ ಟ್ರೇನಿಂಗ್ ಡಾಟಾಬೇಸ್‌ಗೆ ಈಗಾಗಲೇ ಲಭ್ಯ ಇರುವ ಸುಮಾರು 3,000 ಮಕ್ಕಳ ಅಶ್ಲೀಲ ಚಿತ್ರಗಳನ್ನು ಮತ್ತು ಕೆಲವು ಹೊಸದಾಗಿ ತೆಗೆದ ಚಿತ್ರಗಳನ್ನು ನೀಡಲಾಗಿದೆ

  • ಹೊಸ ಚಿತ್ರಗಳ ಬಳಕೆ: ಪೋಷಕರು ತಾವು ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಬೇರೆ ಯಾವುದೇ ಆನ್‌ಲೈನ್‌ ವೇದಿಕೆಗಳಲ್ಲಿ ಹಂಚಿಕೊಂಡ ತಮ್ಮ ಮಕ್ಕಳ ಚಿತ್ರಗಳನ್ನು ಬಳಸಿಕೊಳ್ಳಲಾಗುತ್ತದೆ. ಇಂಥ ಚಿತ್ರಗಳನ್ನು ಬಳಸಿಕೊಂಡು ಮಕ್ಕಳನ್ನು ನಗ್ನವಾಗಿರುವಂತೆ ಚಿತ್ರ ಸೃಷ್ಟಿಸಲಾಗುತ್ತದೆ. ‘ನ್ಯೂಡಿಟಿ’ ಆ್ಯಪ್‌ಗಳು ಲಭ್ಯವಿವೆ. ಇಲ್ಲಿ ಯಾರದ್ದೇ ಚಿತ್ರಗಳನ್ನು ಹಾಕಿದರೆ, ಅದು ಅವರ ನಗ್ನ ಚಿತ್ರಗಳನ್ನು ರೂಪಿಸಿ ಕೊಡುತ್ತದೆ. ಇಂಥ ಆ್ಯಪ್‌ಗಳ ಮೂಲಕವೇ ಮಕ್ಕಳ ನಗ್ನಚಿತ್ರ ಸೃಷ್ಟಿಸಲಾಗುತ್ತದೆ

  • ಚಿತ್ರ ತಿದ್ದುವುದು: ಒಂದು ವೇಳೆ, ಮಗುವೊಂದು ಈಗಾಗಲೇ ಸಂತ್ರಸ್ತವಾಗಿರುತ್ತದೆ. ಅದರ ಪೋಷಕರು ಈ ಬಗ್ಗೆ ದೂರು ನೀಡಿ, ನ್ಯಾಯಾಲಯದ ಮೆಟ್ಟಿಲನ್ನೂ ಹತ್ತಿರುತ್ತಾರೆ. ಆನ್‌ಲೈನ್‌ನ ಎಲ್ಲಾ ವೇದಿಕೆಗಳಿಂದ ಅಶ್ಲೀಲ ಚಿತ್ರ ಅಥವಾ ವಿಡಿಯೊವನ್ನು ತೆಗೆದುಹಾಕಿ ಎಂದು ನ್ಯಾಯಾಲಯ ತೀರ್ಪನ್ನೂ ನೀಡುತ್ತದೆ. ಆದರೂ ಅಶ್ಲೀಲ ವಿಡಿಯೊ ಸೃಷ್ಟಿಸುವವರಿಗೆ ಕೃತಕ ಬುದ್ಧಿಮತ್ತೆಯು ಈ ಎಲ್ಲ ಚಿತ್ರ ಮತ್ತು ವಿಡಿಯೊಗಳನ್ನು ಹುಡುಕಿಕೊಡುತ್ತದೆ. ಸ್ವಲ್ಪ ತಿದ್ದುಪಡಿ ಮೂಲಕ ಇವುಗಳನ್ನು ಮತ್ತೊಮ್ಮೆ ಬಳಸಿಕೊಳ್ಳಲಾಗುತ್ತದೆ

  • ದೊಡ್ಡವರ ಚಿತ್ರಗಳನ್ನು ಸಣ್ಣವರಂತೆ ಮಾಡುವುದು: ಎಐ ತಂತ್ರಜ್ಞಾನ ಬಳಸಿಕೊಂಡು ದೊಡ್ಡವರ ಚಿತ್ರಗಳನ್ನು ಸಣ್ಣ ವಯಸ್ಸಿನ ಮಕ್ಕಳಂತೆ ಸೃಷ್ಟಿಸಲಾಗುತ್ತದೆ. ಸಾರ್ವಜನಿಕ ವಲಯದಲ್ಲಿ ಹೆಸರುವಾಸಿ ಆಗಿರುವವರ ಚಿತ್ರಗಳನ್ನು ಬಳಸಿಕೊಂಡು ಇದೇ ರೀತಿ ಚಿತ್ರಗಳನ್ನು ತಿದ್ದಿ, ಅವರಿಗೆ ಅವಮಾನ ಆಗುವಂತೆ ಮಾಡುವ ಉದ್ದೇಶವೂ ಇಂಥ ಕೃತ್ಯದ ಹಿಂದಿದೆ

ಸಂತ್ರಸ್ತರನ್ನು ಗುರುತಿಸಲು ತೊಡಕು

ಎಐ ಮೂಲಕ ಅಶ್ಲೀಲ ವಿಡಿಯೊ ಸೃಷ್ಟಿಸಲು ಬಳಕೆಯಾಗುವ ಸಂತ್ರಸ್ತರನ್ನು ಗುರುತಿಸುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಇದರಿಂದಾಗಿ ಮಕ್ಕಳನ್ನು ರಕ್ಷಿಸಲೂ ಸಾಧ್ಯವಾಗುತ್ತಿಲ್ಲ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿಡಿಯೊವನ್ನೇ ಇಟ್ಟುಕೊಂಡು ಎಐ ತಂತ್ರಜ್ಞಾನದ ಮೂಲಕ ಸಣ್ಣ ಪುಟ್ಟ ಬದಲಾವಣೆ ಮಾಡಲಾಗುತ್ತದೆ. ಉದಾಹರಣೆಗೆ, ಮಕ್ಕಳ ಕೈಗೆ ಆರನೇ ಬೆರಳು ಸೇರಿಸುವುದು, ಕಣ್ಣು ಮಿಟುಕಿಸುತ್ತಿಲ್ಲ ಎಂಬಂತೆ ಮಾಡಲಾಗುತ್ತದೆ.

ಅಶ್ಲೀಲ ವಿಡಿಯೊವನ್ನು ಸೃಷ್ಟಿಸುವುದು ಮತ್ತು ಇಂಥ ವಿಡಿಯೊಗಳನ್ನು ಇಟ್ಟುಕೊಳ್ಳುವುದು ಎಲ್ಲ ದೇಶಗಳಲ್ಲಿಯೂ ಅಪರಾಧ. ಆದರೆ, ಎಐ ತಂತ್ರಜ್ಞಾನದ ಮೂಲಕ ವಿಡಿಯೊ ಸೃಷ್ಟಿಸುವುದು, ವಿಡಿಯೊ ನೋಡುವುದು ಅಪರಾಧವಲ್ಲ. ನೈಜ ವಿಡಿಯೊಕ್ಕೆ ಕೆಲವು ತಿದ್ದುಪಡಿ ಮಾಡಿ, ‘ಇದು ಎಐ ತಂತ್ರಜ್ಞಾನದಿಂದ ಸೃಷ್ಟಿಸಿದ ವಿಡಿಯೊ’ ಎಂದು ಪೊಲೀಸರನ್ನು ನಂಬಿಸುವುದು ಅಪರಾಧಿಗಳಿಗೆ ಸುಲಭವಾಗುತ್ತದೆ.

ದೇಶದಲ್ಲಿ ಪ್ರತ್ಯೇಕ ಕಾನೂನಿಲ್ಲ

ಭಾರತದಲ್ಲಿ ಮಕ್ಕಳ ಮೇಲಿನ ದೌರ್ಜನ್ಯದ ವಿಡಿಯೊಗಳನ್ನು ಚಿತ್ರೀಕರಿಸುವುದು, ಇಂಥ ವಿಡಿಯೊಗಳನ್ನು ಇಟ್ಟುಕೊಳ್ಳುವುದು ಪೋಕ್ಸೊ ಕಾಯ್ದೆಯಡಿ ಅಪರಾಧ ಎಂದು ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಐಟಿ ಕಾಯ್ದೆ, ಐಟಿ ನಿಯಮಗಳು, ಡಿಜಿಟಲ್‌ ವೈಯಕ್ತಿಕ ದತ್ತಾಂಶ ರಕ್ಷಣೆ ಕಾಯ್ದೆ ಹೀಗೆ ವಿವಿಧ ಕಾಯ್ದೆಗಳ ಅಡಿಯಲ್ಲಿ ಮಕ್ಕಳೂ ಸೇರಿ ಎಲ್ಲರಿಗೂ ರಕ್ಷಣೆ ನೀಡಲಾಗಿದೆ. ಆದರೆ, ಎಐ ತಂತ್ರಜ್ಞಾನದ ಮೂಲಕ ಸೃಷ್ಟಿಸುವ ವಿಡಿಯೊಗಳಿಗೆ ಯಾವುದೇ ತಡೆ ಇಲ್ಲ. ಇದು ಅಕ್ರಮವೂ ಅಲ್ಲ.

ತಂತ್ರಜ್ಞಾನವನ್ನು ಬಳಸಿಕೊಂಡು ಅಶ್ಲೀಲ ವಿಡಿಯೊ, ಚಿತ್ರ, ಡೀಪ್‌ಫೇಕ್‌ ಚಿತ್ರ ಸೃಷ್ಟಿಸುವುದಕ್ಕೆ ಬ್ರಿಟನ್‌ನಲ್ಲಿ ನಿರ್ಬಂಧ ಹೇರಿ, ಕಾನೂನು ರೂಪಿಸಲಾಗಿದೆ. 2025ರ ಫೆಬ್ರುವರಿಯಲ್ಲಿ ಕಾನೂನು ಜಾರಿಗೆ ತರಲಾಗಿದೆ. ಜಗತ್ತಿನಲ್ಲಿಯೇ ಮೊದಲ ಬಾರಿಗೆ ಬ್ರಿಟನ್‌ ಇಂಥ ಕಾನೂನು ರೂಪಿಸಿದೆ.

ಐದು ವರ್ಷಗಳಿಂದ ಭಾರತದಲ್ಲೇ ಅತಿ ಹೆಚ್ಚು

ಅಶ್ಲೀಲ ವಿಡಿಯೊಗಳಿಗಾಗಿ ಮಕ್ಕಳನ್ನು ಅತಿ ಹೆಚ್ಚು ಬಳಸಿಕೊಂಡ ದೇಶ ಭಾರತ. ಸತತ ಐದು ವರ್ಷಗಳಿಂದಲೂ ಪರಿಸ್ಥಿತಿ ಹೀಗೆಯೇ ಇದೆ. ಎನ್‌ಸಿಎಂಇಸಿ ಸಂಸ್ಥೆಯ ಮಾಹಿತಿ ಇದು. 

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವಿಡಿಯೊ, ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಿದಾಗ, ಅಮೆರಿಕ ಮೂಲದ ಅಂಥ ಆನ್‌ಲೈನ್‌ ವೇದಿಕೆಗಳು ಈ ಸಂಸ್ಥೆಗೆ ಮಾಹಿತಿ ನೀಡುತ್ತವೆ. ಈ ಸಂಸ್ಥೆಯಿಂದ ಮಾಹಿತಿ ವಿನಿಮಯಕ್ಕೆ ಭಾರತ ಸರ್ಕಾರವು 2019ರಲ್ಲಿ ಒಪ್ಪಂದ ಮಾಡಿಕೊಂಡಿದೆ. (ಈ ಮಾಹಿತಿಯು ಎಐ ತಂತ್ರಜ್ಞಾನದ ಮೂಲಕ ಸೃಷ್ಟಿದ ವಿಡಿಯೊ/ಚಿತ್ರಗಳದ್ದಲ್ಲ)

ಅನುದಾನ ಬಿಡುಗಡೆ ಮಾಡದ ಕೇಂದ್ರ

ಮಹಿಳೆ ಮತ್ತು ಮಕ್ಕಳ ವಿರುದ್ಧ ಸೈಬರ್‌ ಅಪರಾಧ ತಡೆ ಯೋಜನೆಯನ್ನು (ಸಿಸಿಪಿಡಬ್ಲುಸಿ) 2017–18ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು. ಜಾರಿಗೆ ತಂದ ವರ್ಷ ಎಲ್ಲಾ ಕೇಂದ್ರಾಡಳಿತ ಪ್ರದೇಶ ಮತ್ತು ರಾಜ್ಯಗಳಿಗೆ ಅನುದಾನ ಬಿಡುಗಡೆ ಮಾಡಿತ್ತು. ಆ ಬಳಿಕ ಈ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರವು ಹೆಚ್ಚಿನ ಹಣವನ್ನು ಬಿಡುಗಡೆ ಮಾಡಿಯೇ ಇಲ್ಲ. 2019–20ನೇ ಆರ್ಥಿಕ ವರ್ಷದ ಬಳಿಕ ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ ಸೇರಿ ಕೆಲವೇ ರಾಜ್ಯಗಳಿಗೆ ಅಲ್ಪವೇ ಮೊತ್ತವನ್ನು ಬಿಡುಗಡೆ ಮಾಡಿದೆ.

ಮಕ್ಕಳ ಮೇಲೆ ನಡೆಯುವ ಇಂಥ ಸೈಬರ್‌ ಅಪರಾಧಗಳ ಬಗ್ಗೆ ಲೋಕಸಭೆಯಲ್ಲಾಗಲಿ, ರಾಜ್ಯಸಭೆಯಲ್ಲಾಗಲಿ ಕೇಳಿರುವ ಪ್ರಶ್ನೆಗಳ ಸಂಖ್ಯೆ ಬಹಳ ಕಡಿಮೆ. ಸೈಬರ್‌ ಅಪರಾಧ ತಡೆಯ ಬಗ್ಗೆ ಕೇಂದ್ರ ಸರ್ಕಾರವು ತೆಗೆದುಕೊಂಡ ಕ್ರಮಗಳ ಬಗ್ಗೆ ಸಂಸದರು ಪ್ರಶ್ನೆ ಕೇಳಿದ್ದಾರೆ. ‘ಪೊಲೀಸ್‌ ಮತ್ತು ಶಾಂತಿ–ಸುವ್ಯವಸ್ಥೆಯು ರಾಜ್ಯಗಳ ಜವಾಬ್ದಾರಿ’ ಎಂದು ಕೇಂದ್ರ ಸರ್ಕಾರ ಉತ್ತರ ನೀಡಿದೆ. ಮಕ್ಕಳ ಮೇಲೆ ನಡೆಯುತ್ತಿರುವ ಸೈಬರ್‌ ಅಪರಾಧಗಳ ಬಗ್ಗೆ ಕರ್ನಾಟಕವೂ ಸೇರಿದಂತೆ ಇತರೆ ರಾಜ್ಯಗಳು ತೆಗೆದುಕೊಂಡ ಕ್ರಮಗಳ ಬಗ್ಗೆ ವರದಿಯಾಗಿಲ್ಲ. ಇದಕ್ಕಾಗಿ ಅನುದಾನ ಮೀಸಲಿಟ್ಟ ಬಗ್ಗೆಯೂ ಮಾಹಿತಿ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.