
ರಾಜ್ಯದ 15 ಜಿಲ್ಲೆಗಳಲ್ಲಿ ಮಾಜಿ ದೇವದಾಸಿಯರು ಮತ್ತು ಮಕ್ಕಳ ಆರ್ಥಿಕ ಸಾಮಾಜಿಕ ಸ್ಥಿತಿಗತಿಗಳನ್ನು ಅರಿಯುವ ಉದ್ದೇಶದಿಂದ ಮಹಿಳಾ ಅಭಿವೃದ್ಧಿ ನಿಗಮವು ಕಳೆದ ವರ್ಷ ನಡೆಸಿದ್ದ ಮರು ಸಮೀಕ್ಷೆಯ ವರದಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇತ್ತೀಚೆಗೆ ಸಲ್ಲಿಸಿದ್ದಾರೆ. 2007–08ರಲ್ಲಿ ನಡೆದ ಸಮೀಕ್ಷೆಗೆ ಹೋಲಿಸಿದರೆ, ಈಗ ನಡೆಸಿದ ಸಮೀಕ್ಷೆಯು ರಾಜ್ಯದಲ್ಲಿ ಮಾಜಿ ದೇವದಾಸಿಯರ ಸಂಖ್ಯೆ ಶೇ 50ರಷ್ಟು ಕಡಿಮೆಯಾಗಿದೆ ಎಂದು ಹೇಳಿದೆ. ಆದರೆ, ಅವರ ಆರ್ಥಿಕ, ಸಾಮಾಜಿಕ ಸ್ಥಿತಿಗಳಲ್ಲಿ ಸುಧಾರಣೆಯಾಗಿಲ್ಲ ಎಂದೂ ಹೇಳಿದೆ. ಈ ಸಮೀಕ್ಷೆಯನ್ನು ಸರಿಯಾಗಿ ನಡೆಸಲಾಗಿಲ್ಲ. ಸಂಖ್ಯೆ ಕಡಿಮೆಯಾಗಿರುವುದರಿಂದ ಹಲವು ಮಾಜಿ ದೇವದಾಸಿಯರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಲಿದ್ದಾರೆ ಎಂದು ಅವರ ಪರವಾಗಿ ಕೆಲಸ ಮಾಡುತ್ತಿರುವ ಕೆಲವು ಸಂಘಟನೆಗಳು ದೂರಿವೆ
ರಾಜ್ಯದಲ್ಲಿರುವ ಮಾಜಿ ದೇವದಾಸಿಯರ ಸಂಖ್ಯೆ ಶೇ 50ರಷ್ಟು ಕಡಿಮೆಯಾಗಿದೆ. ಆದರೆ, ಅವರ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿಯಲ್ಲಿ ಹೇಳಿಕೊಳ್ಳುವಂತಹ ಸುಧಾರಣೆಯಾಗಿಲ್ಲ ಎಂದು ಮಹಿಳಾ ಅಭಿವೃದ್ಧಿ ನಿಗಮವು ನಡೆಸಿರುವ ಮರು ಸಮೀಕ್ಷೆಯ ವರದಿ ಹೇಳಿದೆ. ಅನಕ್ಷರತೆ, ನಿರುದ್ಯೋಗ, ಜಮೀನು, ವಸತಿ ಇಲ್ಲದಿರುವುದು ಮುಂತಾದ ಸಮಸ್ಯೆಗಳನ್ನು ಅವರು ಈಗಲೂ ಎದುರಿಸುತ್ತಿದ್ದಾರೆ ಎಂಬುದನ್ನು ಅಂಕಿ ಅಂಶಗಳ ಸಹಿತ ವಿವರಿಸಿರುವ ವರದಿಯು ಮಾಜಿ ದೇವದಾಸಿಯರು ಮತ್ತು ಅವರ ಮಕ್ಕಳ ಜೀವನದ ಮಟ್ಟ ಸುಧಾರಿಸಲು ಸರ್ಕಾರಕ್ಕೆ ಹಲವು ಶಿಫಾರಸುಗಳನ್ನೂ ಮಾಡಿದೆ.
ರಾಜ್ಯದ 15 ಜಿಲ್ಲೆಗಳಲ್ಲಿ (ಬೆಳಗಾವಿ, ವಿಜಯಪುರ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಧಾರವಾಡ, ಹಾವೇರಿ, ಗದಗ, ಕಲಬುರಗಿ, ಯಾದಗಿರಿ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಬಳ್ಳಾರಿ ಮತ್ತು ವಿಜಯನಗರ) 2025ರ ಸೆ.15ರಿಂದ ಡಿ.31ವರಗೆ ಮರು ಸಮೀಕ್ಷೆ ನಡೆಸಲಾಗಿತ್ತು. ಈ ಜಿಲ್ಲೆಗಳಲ್ಲಿ 23,395 ಮಾಜಿ ದೇವದಾಸಿಯರು ಹಾಗೂ ಈ ಕುಟುಂಬದವರ ಒಂದನೇ, ಎರಡನೇ ಮತ್ತು ಮೂರನೇ ತಲೆಮಾರಿನ 90,092 ಜನರು ಇರುವುದನ್ನು ಸಮೀಕ್ಷೆ ಗುರುತಿಸಿದೆ. 2007-2008ರಲ್ಲಿ 14 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಲಾಗಿತ್ತು (ಬಳ್ಳಾರಿಯನ್ನು ವಿಭಜಿಸಿ ವಿಜಯನಗರ ಜಿಲ್ಲೆಯನ್ನು ರಚನೆ ಮಾಡಿರುವುದರಿಂದ ಈಗ ಜಿಲ್ಲೆಗಳ ಸಂಖ್ಯೆ 15 ಆಗಿದೆ). ಆಗಿನ ಸಮೀಕ್ಷೆಯು 46,660 ಮಾಜಿ ದೇವದಾಸಿಯರು ಇದ್ದಾರೆ ಎಂದು ಹೇಳಿತ್ತು. ಆಗಿನ ಅಂಕಿಗಳಿಗೆ ಹೋಲಿಸಿದರೆ, ಈಗ ಮಾಜಿ ದೇವದಾಸಿಯರ ಸಂಖ್ಯೆಯಲ್ಲಿ ಶೇ 50ರಷ್ಟು ಕಡಿಮೆಯಾಗಿದೆ.
ಈ ಎರಡು ಸಮೀಕ್ಷೆಗಳಿಗಿಂತಲೂ ಮೊದಲು 1993-94ನೇ ಸಾಲಿನಲ್ಲಿ ಬೆಳಗಾವಿ, ವಿಜಯಪುರ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಧಾರವಾಡ, ಹಾವೇರಿ, ಗದಗ, ಬಳ್ಳಾರಿ ಮತ್ತು ಕಲಬುರಗಿ... ಈ 10 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಆಗ 22,873 ಮಾಜಿ ದೇವದಾಸಿಯರನ್ನು ಗುರುತಿಸಲಾಗಿತ್ತು.
ಮರು ಸಮೀಕ್ಷೆ ನಡೆದಿದ್ದೇಕೆ?
‘ಮಾಜಿ ದೇವದಾಸಿಯರ ಕಲ್ಯಾಣಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು’ ಎಂದು 2024-25ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದರು. ‘ಈ ಮಹಿಳೆಯರ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಕುರಿತಂತೆ ನಿಖರ ಮಾಹಿತಿ ಸಂಗ್ರಹಿಸಿ, ಪುನರ್ವಸತಿ ಕಲ್ಪಿಸಲು ಮರು ಸಮೀಕ್ಷೆ ನಡೆಸಲಾಗುವುದು’ ಎಂದೂ ಅವರು ಹೇಳಿದ್ದರು.
ರಾಜ್ಯ ಸರ್ಕಾರವು ಕರ್ನಾಟಕ ದೇವದಾಸಿಯರ (ಸಮರ್ಪಣಾ ನಿಷೇಧ) ಕಾಯ್ದೆ –1982, ಕರ್ನಾಟಕ ದೇವದಾಸಿಯರ (ಸಮರ್ಪಣಾ ನಿಷೇಧ) ಕಾಯ್ದೆ –1988 ಹಾಗೂ ತಿದ್ದುಪಡಿ ಕಾಯ್ದೆ 2009 ಅನ್ನು ರದ್ದುಪಡಿಸಿ, ‘ಕರ್ನಾಟಕ ದೇವದಾಸಿ ಪದ್ದತಿ (ತಡೆಗಟ್ಟುವಿಕೆ, ನಿಷೇಧ, ಪರಿಹಾರ ಮತ್ತು ಪುನರ್ವಸತಿ) ಕಾಯ್ದೆ– 2025’ ಅನ್ನು ಜಾರಿಗೊಳಿಸಿತ್ತು. ಹಿಂದೆ ದೇವದಾಸಿ ಪದ್ಧತಿಯಲ್ಲಿ ತೊಡಗಿಕೊಂಡಿದ್ದ ಮಹಿಳೆಯರಿಗೆ ಶೋಷಣೆಯಿಂದ ವಿಮೋಚನೆ, ಅವರ ಮಕ್ಕಳ ಸಬಲೀಕರಣ, ಕುಟುಂಬಕ್ಕೆ ಸಾಮಾಜಿಕ ಗೌರವ ತರುವ ಉದ್ದೇಶದಿಂದ ಈ ಕಾಯ್ದೆಯನ್ನು ರೂಪಿಸಲಾಗಿದೆ.
ಆದರೆ, ಪುನರ್ವಸತಿ ಯೋಜನೆ ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ವಿವಿಧ ಕಾರಣಗಳಿಗೆ ಹಲವು ಮಾಜಿ ದೇವದಾಸಿಯರು ಈ ಹಿಂದೆ ನಡೆದ ಸಮೀಕ್ಷೆಯಿಂದ ಹೊರಗುಳಿದಿರುವುದು ಪತ್ತೆಯಾಗಿತ್ತು. ಅಲ್ಲದೆ, ಸಮೀಕ್ಷೆಗೆ ಒಳಪಟ್ಟವರ ದತ್ತಾಂಶದಲ್ಲಿ ವಯಸ್ಸು, ವಿಳಾಸ, ಕುಟುಂಬದವರ ವಿವರ ಮತ್ತಿತರ ಮಾಹಿತಿಯೂ ಇರಲಿಲ್ಲ. ಹೀಗಾಗಿ, ಹಿಂದಿನ ಸಮೀಕ್ಷೆಯಿಂದ ಹೊರಗುಳಿದವರನ್ನು ಗುರುತಿಸಲು ಮತ್ತು ಅವರ ಶಿಕ್ಷಣ, ಸಾಮಾಜಿಕ, ಆರ್ಥಿಕ ಸ್ಥಿತಿ ಹಾಗೂ ಕುಟುಂಬದ ಮಾಹಿತಿ ಸಂಗ್ರಹಿಸಲು ಮರು ಸಮೀಕ್ಷೆ ನಡೆಸಲಾಗಿತ್ತು.
ವರದಿಯಲ್ಲೇನಿದೆ?: ಆ್ಯಪ್ ಮೂಲಕ ನಡೆಸಲಾದ ಮುರುಸಮೀಕ್ಷೆಯಲ್ಲಿ ಮಾಜಿ ದೇವದಾಸಿಯರ ಆರ್ಥಿಕ, ಸಾಮಾಜಿಕ ವಿವರಗಳನ್ನು ಕಲೆ ಹಾಕಲಾಗಿದೆ. ಎಲ್ಲವನ್ನೂ ಅಂಕಿ ಅಂಶಗಳ ಸಮೇತ ವರದಿಯಲ್ಲಿ ವಿವರಿಸಲಾಗಿದೆ.
ಪರಿಶಿಷ್ಟರೇ ಹೆಚ್ಚು: ಮರು ಸಮೀಕ್ಷೆಯಲ್ಲಿ ಗುರುತಿಸಿದ23,395 ಮಾಜಿ ದೇವದಾಸಿಯರಲ್ಲಿ,ಅತೀ ಹೆಚ್ಚು (ಶೇ 98.3) ಮಂದಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಕ್ಕೆ ಸೇರಿದವರು. ಮಧ್ಯ ವಯಸ್ಸಿನವರು ಶೇ 48.3ರಷ್ಟಿದ್ದರೆ, 60 ವರ್ಷ ದಾಟಿದವರು ಶೇ 45ರಷ್ಟು ಇದ್ದಾರೆ. ಈ ಪೈಕಿ, ಶೇ 40.24 ರಷ್ಟು ದೇವದಾಸಿಯರು ತಮ್ಮ ಕುಟುಂಬದ ಮೇಲೆ ಅವಲಂಬಿತವಾಗಿದ್ದರೆ, ಶೇ 60ರಷ್ಟು ಸ್ವಾವಲಂಬಿಗಳಾಗಿ ಬದುಕುತ್ತಿದ್ದಾರೆ.
7,294 ಮಾಜಿ ದೇವದಾಸಿಯರು ನಿರುದ್ಯೋಗಿಗಳಾಗಿದ್ದಾರೆ. 1,547 ಮಂದಿ ಮಾತ್ರ ಉದ್ಯೋಗದಲ್ಲಿದ್ದಾರೆ. 1,847 ಮಂದಿ ಸ್ವಯಂ ಉದ್ಯೋಗಿಗಳು. 4,398 ಜನ ಇತರೆ ಉದ್ಯೋಗಗಳಲ್ಲಿ ತೊಡಗಿಕೊಂಡಿದ್ದಾರೆ. 8,309 ಮಂದಿ ಗೃಹಿಣಿಯರು.
ಶೇ 68.82ರಷ್ಟು ಮಹಿಳೆಯರಿಗೆ ಹೆಚ್ಚಿನ ವಯಸ್ಸಾಗಿದ್ದರೂ ಬದುಕಿಗಾಗಿ ಕೆಲಸವನ್ನೇ ಅವಲಂಬಿಸಿದ್ದಾರೆ.
ಜಮೀನು, ಮನೆ ಇಲ್ಲ: 19,955 (ಶೇ 85.29) ಮಂದಿ ಕೃಷಿ ಜಮೀನು ಹೊಂದಿಲ್ಲ. 1,039 (ಶೇ 4.40) ಮಂದಿಗೆ ಮಾತ್ರ ಸರ್ಕಾರದಿಂದ ಭೂಮಿ ಮಂಜೂರಾಗಿದೆ. 1,160 (ಶೇ 4.95) ಮಾಜಿ ದೇವದಾಸಿಯರಿಗೆ ವಂಶ ಪಾರಂಪರ್ಯವಾಗಿ ಜಮೀನು ಬಂದಿದೆ. ತಂದೆ/ಸಂಗಾತಿಯಿಂದ 994 (ಶೇ 4.20) ಮಂದಿ ಜಮೀನು ಹೊಂದಿದ್ದರೆ, ಸ್ವಂತ ದುಡಿಮೆಯಿಂದ 210 (ಶೇ 0.90) ಭೂಮಿ ಖರೀದಿಸಿದ್ದಾರೆ.
ಇವರ ಆದಾಯವೂ ತುಂಬಾ ಕಡಿಮೆ ಇದೆ. ಬಹುಪಾಲು ಮಹಿಳೆಯರ (22,907) ಆದಾಯ ₹50 ಸಾವಿರಕ್ಕೂ ಕಡಿಮೆ ಇದೆ ಎಂಬುದು ಸಮೀಕ್ಷೆಯಿಂದ ಗೊತ್ತಾಗಿದೆ.
ಸರ್ಕಾರದಿಂದಲೂ ಸಿಕ್ಕಿಲ್ಲ ಮನೆ: 15,420 ಮಂದಿಗೆ ಸರ್ಕಾರದಿಂದಲೂ ವಸತಿ ಸೌಲಭ್ಯ ಸಿಕ್ಕಿಲ್ಲ. ಮಾಜಿ ದೇವದಾಸಿ ವಸತಿ ಯೋಜನೆಯಡಿ 4,079 ಮಂದಿ ಮನೆ ಹೊಂದಿದ್ದಾರೆ. ಉಳಿದಂತೆ ವಿವಿಧ ಯೋಜನೆಗಳಡಿ, ಪ್ರಧಾನ ಮಂತ್ರಿ ಆವಾಸ್ (ಶಹರ) ಯೋಜನೆಯಡಿ 129, ಪ್ರಧಾನ ಮಂತ್ರಿ ಆವಾಸ್ (ಗ್ರಾಮೀಣ) ಅಡಿ 436, ಡಾ.ಬಿ.ಆರ್.ಅಂಬೇಡ್ಕರ್ ಯೋಜನೆ (ಗ್ರಾಮೀಣ) 642, ಡಾ.ಬಿ.ಆರ್.ಅಂಬೇಡ್ಕರ್ ಯೋಜನೆ (ಶಹರ) 358, ದೇವರಾಜ ಅರಸ್ ವಸತಿ ಯೋಜನೆ (ಶಹರ) 18, ದೇವರಾಜ ಅರಸ್ ವಸತಿ ಯೋಜನೆ (ಗ್ರಾಮೀಣ) 390, ಬಸವ ವಸತಿ ಯೋಜನೆ 179, ವಾಜಪೇಯಿ ವಸತಿ ಯೋಜನೆಯಡಿ 12, ಇತರೆ ವ್ಯವಸ್ಥೆಯಡಿ 1,732 ಮಂದಿ ವಸತಿ ಹೊಂದಿದ್ದಾರೆ.
ಶಿಫಾರಸುಗಳೇನು?
* ಮಾಜಿ ದೇವದಾಸಿಯರು ಮತ್ತು ಅವರ ಮಕ್ಕಳ (1, 2 ಮತ್ತು 3ನೇ ತಲೆಮಾರು) ಅಭಿವೃದ್ದಿಗೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕು
* ಮಾಜಿ ದೇವದಾಸಿಯರ ಕುಟುಂಬಗಳಿಗೆ ಹಾಗೂ ಮಕ್ಕಳಿಗೆ ಗೌರವಯುತ ಹಾಗೂ ಘನತೆಯಿಂದ ಬದುಕುವ ಹಕ್ಕು ಕಲ್ಪಿಸಿ ಕೊಡಬೇಕಿದೆ. ಈ ಕುರಿತು ಸಂವೇದನಾಶೀಲರಾಗಿ ವರ್ತಿಸಲು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಶಾಲಾ ಕಾಲೇಜುಗಳಲ್ಲಿ ಹಾಗೂ ಇನ್ನಿತರ ಕೇಂದ್ರ ಹಾಗೂ ರಾಜ್ಯ ಕಚೇರಿಗಳಲ್ಲಿ ತಂದೆಯ ಹೆಸರು ನಮೂದಿಸುವುದರಿಂದ ವಿನಾಯಿತಿ ನೀಡಲು ಕ್ರಮ ವಹಿಸಬೇಕು
* ಶಿಕ್ಷಣಕ್ಕಾಗಿ ಆರ್ಥಿಕ ಸೌಲಭ್ಯ ಕಲ್ಪಿಸಬೇಕು
* ಅರ್ಜಿ ಹಾಕುವ ಎಲ್ಲ ಮಾಜಿ ದೇವದಾಸಿಯರ ಮಕ್ಕಳನ್ನು ( ವಿದ್ಯಾರ್ಥಿಗಳು) ವಿವಿಧ ಇಲಾಖೆಗಳ ಎಸ್‌ಸಿ, ಎಸ್‌ಟಿ, ಬಿಸಿಎಂ ಮುಂತಾದ ಶೈಕ್ಷಣಿಕ ವಸತಿ ಶಾಲೆ ಹಾಗೂ ವಸತಿ ನಿಲಯಗಳಲ್ಲಿ ಆದ್ಯತೆಯ ಮೇರೆಗೆ ದಾಖಲಾತಿ ಮಾಡಿಕೊಳ್ಳಬೇಕು. ವಿದ್ಯಾರ್ಥಿ ವೇತನ ನೀಡಲು ಯೋಜನೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಕೋಚಿಂಗ್ ನೀಡಬೇಕು
* ಶೇ 97.17 ಮಾಜಿ ದೇವದಾಸಿಯರು ಅನಕ್ಷರಸ್ಥರಾಗಿದ್ದು, ಅವರೆಲ್ಲರೂ ಮಧ್ಯವಯಸ್ಸನ್ನು ದಾಟಿದವರರಾಗಿರುವುದರಿಂದ ಅನೌಪಚಾರಿಕ ಶಿಕ್ಷಣ ಒದಗಿಸಬೇಕು
* ಸದ್ಯ ಕೇವಲ 630 ಮಂದಿ ಮಾತ್ರ ಆರೋಗ್ಯ ವಿಮೆ ಹೊಂದಿದ್ದಾರೆ. ಮಾಜಿ ದೇವದಾಸಿಯರು ಮತ್ತು ಅವರ ಮಕ್ಕಳ ಚಿಕಿತ್ಸೆಗೆ ಅನುಕೂಲವಾಗಲು ಆಯುಷ್ಮಾನ್ ಭಾರತ್ ಕಾರ್ಡುಗಳನ್ನು ವಿತರಿಸಬೇಕು
* ಸರ್ಕಾರಿ ಹಾಗೂ ಖಾಸಗಿ ಕಂಪನಿಗಳಲ್ಲಿ ಮಾಜಿ ದೇವದಾಸಿ ಮಕ್ಕಳಿಗೆ ಉದ್ಯೋಗಾವಕಾಶ ನೀಡಲು ಯೋಜನೆ ರೂಪಿಸಬೇಕು. ವಿವಿಧ ಇಲಾಖೆಗಳ ಮೂಲಕ ಆರ್ಥಿಕ ಚಟುವಟುಕೆಗಳಿಗೆ ಸಹಾಯಧನ ನೀಡಿ ಸ್ವಾವಲಂಬಿಗಳಾಗಿ ಬದುಕಲು ಅವಕಾಶ ಮಾಡಿಕೊಡಲು ವಿಶೇಷ ಕಾರ್ಯಕ್ರಮ ರೂಪಿಸಬೇಕು
* ಕೌಶಲ ಅಭಿವೃದ್ಧಿ ಇಲಾಖೆ ಸೇರಿ ವಿವಿಧ ಇಲಾಖೆಗಳ ಮೂಲಕ ತರಬೇತಿ ಹಾಗೂ ಆರ್ಥಿಕ ಸೌಲಭ್ಯ ಒದಗಿಸಬೇಕು
* ಹೆಚ್ಚಿನ ಮಾಜಿ ದೇವದಾಸಿಯರು ಹಾಗೂ ಮಕ್ಕಳಿಗೆ ಜಾಬ್ ಕಾರ್ಡ್, ಸ್ವಸಹಾಯ ಸಂಘದ ಸದಸ್ಯತ್ವ ಹಾಗೂ ಕ್ರೆಡಿಟ್ ಸೊಸೈಟಿಗಳಲ್ಲಿ ನೋಂದಾಯಿಸಲು ಕ್ರಮವಹಿಸಬೇಕು. ಮಾಜಿ ದೇವದಾಸಿಯರು ಹಾಗೂ ವಯಸ್ಕರ ಮಕ್ಕಳ ತಲಾ ಆದಾಯ ವಾರ್ಷಿಕವಾಗಿ ತುಂಬಾ ಕಡಿಮೆ ಇದ್ದು, ತಲಾ ಆದಾಯ ಹೆಚ್ಚಿಸಲು ಅಗತ್ಯ ಆರ್ಥಿಕ ಆಧಾರಿತ ಸ್ವದ್ಯೋಗ ಸೌಲಭ್ಯ ಒದಗಿಸಬೇಕು
* ಹೆಚ್ಚಿನವರು ನಿವೇಶನ ರಹಿತರಾಗಿರುವುದರಿಂದ ನಿವೇಶನದ ಜೊತೆಗೆ ವಸತಿ ಸೌಲಭ್ಯ ಕಲ್ಪಿಸಬೇಕು. ಆಸಕ್ತಿ ಇರುವ ಮಹಿಳೆಯರಿಗೆ ಕೃಷಿ ಭೂಮಿ ಒದಗಿಸಬೇಕು
* ಸದ್ಯ ₹2,000 ಮಾಶಾಸನವಾಗಿ ನೀಡುತ್ತಿದ್ದು, ಕುಟುಂಬ ನಿರ್ವಹಣೆಗೆ ಕನಿಷ್ಠ ₹5,000 ಮಾಸಾಶನ ನೀಡಬೇಕು
* ಸಮೀಕ್ಷೆಯಲ್ಲಿ ಗುರುತಿಸಿರುವ ಮಾಜಿ ದೇವದಾಸಿಯರಲ್ಲಿ ಹೆಚ್ಚಿನವರು ಹಿರಿಯ ನಾಗರಿಕರಾಗಿದ್ದು, ಹಿರಿಯ ನಾಗರಿಕರಿಗೆ ಸಾಮಾನ್ಯವಾಗಿ ದೊರಕುತ್ತಿರುವ ಎಲ್ಲ ಸವಲತ್ತುಗಳನ್ನು ಇವರಿಗೂ ತಲುಪುವಂತೆ ನೋಡಿಕೊಳ್ಳಬೇಕು. ವಿಶೇಷ ಶಿಬಿರಗಳನ್ನು ಆಯೋಜಿಸಿ ಪಡಿತರ ಚೀಟಿಗಳನ್ನು ವಿತರಿಸಬೇಕು. 10,543 ಮಹಿಳೆಯರು 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದು, ಅವರಿಗೆ ಪ್ರತಿ ಜಿಲ್ಲೆಯಲ್ಲಿ ಒಂದು ಹಿರಿಯ ನಾಗರಿಕರ ಆರೈಕೆ ಕೇಂದ್ರ ಮತ್ತು ವೃದ್ಧಾಶ್ರಮಗಳ ಸೌಲಭ್ಯ ಕಲ್ಪಿಸಬೇಕು
ಮತ್ತೆ ಸಮೀಕ್ಷೆ ನಡೆಸಲ ಆಗ್ರಹ
ಹಿಂದಿನ ಸಮೀಕ್ಷೆಗೆ ಹೋಲಿಸಿದರೆ ಮರುಸಮೀಕ್ಷೆಯಲ್ಲಿ ಮಾಜಿ ದೇವದಾಸಿಯರ ಸಂಖ್ಯೆ ಅರ್ಧದಷ್ಟು ಕಡಿಮೆಯಾಗಿರುವುದಕ್ಕೆ ಕೆಲವು ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಸಮೀಕ್ಷೆ ಸರಿಯಾಗಿ ನಡೆದಿಲ್ಲ ಎಂದು ದೂರಿವೆ.
‘ರಾಜ್ಯ ಸರ್ಕಾರ ನಡೆಸಿದ ಮಾಜಿ ದೇವದಾಸಿಯರ ಮರು ಸಮೀಕ್ಷೆ ಪ್ರಕ್ರಿಯೆಯು ದೇವದಾಸಿ ತಾಯಂದಿರು ಮತ್ತು ಅವರ ಅವಲಂಬಿತರ ಮೇಲಿನ ಅತಿ ದೊಡ್ಡ ಅನ್ಯಾಯ ಹಾಗೂ ಸಂಘಟಿತ ಮೋಸ. 2007-08ರಲ್ಲಿ ನಡೆದ ಸಮೀಕ್ಷೆಗಳಲ್ಲಿ 46,660 ದೇವದಾಸಿಯರನ್ನು ಗುರುತಿಸಲಾಗಿತ್ತು. ಈಗ ನಡೆದ ಮರು ಸಮೀಕ್ಷೆಯಲ್ಲಿ ಕೇವಲ 23,395 ಮಂದಿಯನ್ನು ಗುರುತಿಸಲಾಗಿದೆ. ಅಂದರೆ, ಉಳಿದ ಸಾವಿರಾರು ದೇವದಾಸಿಯರು ಎಲ್ಲಿಗೆ ಹೋದರು? ಹಠಾತ್ ಅಸ್ತಿತ್ವ ಇಲ್ಲದವರಾದರೇ? ಹೊಸಬರನ್ನು ಸೇರಿಸಿಕೊಳ್ಳುವ ನೆಪದಲ್ಲಿ ಈಗಾಗಲೇ ಗುರುತಿಸಲ್ಪಟ್ಟವರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆಯೇ? ಈ ಗಂಭೀರ ವ್ಯತ್ಯಾಸ ಸರ್ಕಾರದ ಸಮೀಕ್ಷೆಯ ನಂಬಿಕೆಯ ಮೇಲೆ ದೊಡ್ಡ ಹೊಡೆತ ಕೊಡುತ್ತದೆ. ಇದು ನಿರ್ಲಕ್ಷ್ಯವಲ್ಲ, ವ್ಯವಸ್ಥಿತವಾಗಿ ನಡೆದ ಮೋಸ’ ಎಂದು ಮುಕ್ತ ದೇವದಾಸಿ ಮಹಿಳಾ ಮತ್ತು ಮಕ್ಕಳ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.
‘ಈ ಮರು ಸಮೀಕ್ಷೆಯ ಪರಿಣಾಮವಾಗಿ ಸಾವಿರಾರು ದೇವದಾಸಿ ತಾಯಂದಿರು ಮತ್ತು ಅವರ ಅವಲಂಬಿತರು ಸರ್ಕಾರದ ಯೋಜನೆಗಳಿಂದ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಅವರಿಗೆ ದೊರಕಬೇಕಿದ್ದ ಶಿಕ್ಷಣ, ಆರೋಗ್ಯ, ವಸತಿ, ಪಿಂಚಣಿ ಹಾಗೂ ಪುನರ್ವಸತಿ ಸೌಲಭ್ಯಗಳಿಗೆ ಎಳ್ಳು ನೀರು ಬಿಟ್ಟಂತಾಗಿದೆ. ಇದು ಕೇವಲ ಅಂಕಿಅಂಶಗಳ ವ್ಯತ್ಯಾಸವಲ್ಲ, ಸಾವಿರಾರು ಕುಟುಂಬಗಳ ಬದುಕಿನ ಮೇಲಿನ ನೇರ ದಾಳಿ. ಸಮೀಕ್ಷೆ ಸಂದರ್ಭದಲ್ಲಿ ಅನೇಕ ಸ್ಥಳಗಳಲ್ಲಿ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡದೆ, ಸಮಗ್ರ ಮಾಹಿತಿ ಸಂಗ್ರಹಿಸದೆ, ಅವಲಂಬಿತರಿಗೆ ಸೂಕ್ತ ಮಾಹಿತಿ ನೀಡದೆ ಕಾರ್ಯನಿರ್ವಹಿಸಿರುವ ದೂರುಗಳಿವೆ. ಹೆಸರಿಗೆ ಮಾತ್ರ ಸಮಿತಿ ರಚಿಸಿ, ಯಾವುದೇ ಸಭೆಗಳನ್ನು ನಡೆಸದೆ, ಕರಪತ್ರಗಳನ್ನು ಹಂಚದೆ, ಪತ್ರಿಕಾ ಪ್ರಕಟಣೆ ನೀಡದೆ ಸಮುದಾಯದವರನ್ನು ಸಂಪೂರ್ಣವಾಗಿ ಕತ್ತಲಲ್ಲಿ ಇಡಲಾಗಿದೆ’ ಎಂದು ವೇದಿಕೆ ಹೇಳಿದೆ.
‘ದೇವದಾಸಿ ತಾಯಂದಿರು ಮತ್ತು ಮಕ್ಕಳಿಗೆ ಸಮೀಕ್ಷೆಯ ಪೂರ್ಣ ವಿವರಗಳನ್ನು ಹಂಚದೆ ಸಮೀಕ್ಷೆಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿರುವುದು ಆತಂಕಕಾರಿ. ಇದು ಇಲಾಖೆಯ ಬೇಜವಾಬ್ದಾರಿತನವನ್ನು ತೋರಿಸುತ್ತದೆ. ಆದ್ದರಿಂದ, ಈ ಮರು ಸಮೀಕ್ಷೆಯನ್ನು ತಕ್ಷಣವೇ ರದ್ದುಪಡಿಸಿ, ಸಮುದಾಯದ ಪ್ರತಿನಿಧಿಗಳನ್ನು ಒಳಗೊಂಡ ಸ್ವತಂತ್ರ ಹಾಗೂ ಪಾರದರ್ಶಕ ಸಮೀಕ್ಷೆಯನ್ನು ಮತ್ತೆ ನಡೆಸಬೇಕು. ಹಿಂದಿನ ಸಮೀಕ್ಷೆಯಲ್ಲಿ ಗುರುತಿಸಲ್ಪಟ್ಟ ಎಲ್ಲ ಮಾಜಿ ದೇವದಾಸಿ ತಾಯಂದಿರು ಮತ್ತು ಅವರ ಅವಲಂಬಿತರ ಹಕ್ಕುಗಳನ್ನು ಕಾಪಾಡಿ, ಯಾವುದೇ ಕುಟುಂಬವೂ ಯೋಜನೆಗಳಿಂದ ಹೊರಗುಳಿಯದಂತೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂದೂ ಅದು ಆಗ್ರಹಿಸಿದೆ
ದೇವದಾಸಿ ಪುನರ್ವಸತಿ ಯೋಜನೆ
ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ದೇವದಾಸಿ ಪುನರ್ವಸತಿ ಯೋಜನೆಯಡಿ 2013-14ರಿಂದ 2024-25ನೇ ಸಾಲಿನವರೆಗೆ 13,663 ಮಾಜಿ ದೇವದಾಸಿಯರಿಗೆ ಸೌಲಭ್ಯ ಒದಗಿಸಿದೆ. 45 ವರ್ಷ ದಾಟಿದ ಮಾಜಿ ದೇವದಾಸಿಯರಿಗೆ ₹2 ಸಾವಿರ ಮಾಶಾಸನ ನೀಡಲಾಗುತ್ತಿದೆ. ಮರಣ ಹೊಂದಿದ ಮಾಜಿ ದೇವದಾಸಿಯರನ್ನು ಹೊರತುಪಡಿಸಿ 25,539 ಮಾಜಿ ದೇವದಾಸಿಯರಿಗೆ ಮಾಸಾಶನ (2022-23ನೇ ಸಾಲಿನಿಂದ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯದ ಮೂಲಕ) ಒದಗಿಸಲಾಗುತ್ತಿದೆ. ನಿವೇಶನ ಹೊಂದಿರುವ ವಸತಿರಹಿತರಿಗೆ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ವಸತಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಇದುವರೆಗೆ 12,089 ದೇವದಾಸಿಯರಿಗೆ ಸೌಲಭ್ಯ ಒದಗಿಸಲಾಗಿದೆ ಎಂದು ಮಹಿಳಾ ಅಭಿವೃದ್ಧಿ ನಿಗಮ ಮಾಹಿತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.