
ರಾಜ್ಯದಲ್ಲಿ ನೋಂದಣಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲು (ಕಾಗದರಹಿತ) ಹೊರಟಿರುವ ಕಂದಾಯ ಇಲಾಖೆಯು ಅದಕ್ಕೆ ಪೂರಕವಾದ ಹೆಜ್ಜೆಯಾಗಿ ಡಿಜಿಟಲ್ ಇ–ಸ್ಟ್ಯಾಂಪ್ (ಡಿಇಎಸ್) ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಈಗ ನೋಂದಣಿ ಮತ್ತು ನೋಂದಣಿಯೇತರ ಛಾಪಾ ಕಾಗದ ವಹಿವಾಟುಗಳಿಗೆ ಬಳಸುವ ‘ಇ–ಸ್ಟ್ಯಾಂಪ್’ ಜಾಗವನ್ನು ಇನ್ನು ಮುಂದೆ ‘ಡಿಜಿಟಲ್ ಇ–ಸ್ಟ್ಯಾಂಪ್’ ತುಂಬಲಿದೆ.
ಈಗಿನ ವ್ಯವಸ್ಥೆಯಲ್ಲಿದ್ದ ಭದ್ರತಾ ಲೋಪವನ್ನು ತೊಡದು ಹಾಕುವುದು ಹೊಸ ವ್ಯವಸ್ಥೆಯ ಒಂದು ಉದ್ದೇಶವಾದರೆ, ಇ–ಸ್ಟ್ಯಾಂಪ್ ವಂಚನೆಯಿಂದ ಸರ್ಕಾರದ ಬೊಕ್ಕಸಕ್ಕೆ ಆಗುತ್ತಿದ್ದ ನಷ್ಟವನ್ನು ತಪ್ಪಿಸುವುದು ಇನ್ನೊಂದು ಉದ್ದೇಶ. ಜನರು ಜಗತ್ತಿನಲ್ಲಿ ಎಲ್ಲೇ ಇದ್ದರೂ ಮನೆಯಲ್ಲೇ ಕುಳಿತು ಸ್ಟ್ಯಾಂಪ್ ಖರೀದಿಸುವುದಕ್ಕೆ ಅವಕಾಶ ಮಾಡಿಕೊಡುವುದು ಈ ಪ್ರಯತ್ನದ ಹಿಂದಿರುವ ಮತ್ತೊಂದು ಸಕಾರಣ.
‘ಈ ವ್ಯವಸ್ಥೆಯನ್ನು ಯಶಸ್ವಿಯಾಗಿ ಅಳವಡಿಸಿಕೊಳ್ಳಲಾಗಿದ್ದು, ಇನ್ನು ಮುಂದೆ ರಾಜ್ಯದಾದ್ಯಂತ ಡಿಜಿಟಲ್ ಇ–ಸ್ಟ್ಯಾಂಪ್ ಕಡ್ಡಾಯವಾಗಲಿದೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಹೊಸ ಸ್ಟ್ಯಾಂಪ್ ಹಾಗೂ ಅದರ ಪ್ರಯೋಜನಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ
ಹಿಂದೆ ನೋಂದಣಿಗಾಗಿ ಛಾಪಾ ಕಾಗದಗಳನ್ನು ಬಳಸಲಾಗುತ್ತಿತ್ತು. ಈ ಕಾಗದಗಳನ್ನು ಮಹಾರಾಷ್ಟ್ರದ ನಾಸಿಕ್‌ನ ಇಂಡಿಯಾ ಸೆಕ್ಯೂರಿಟಿ ಪ್ರೆಸ್‌ನಲ್ಲಿ ಮುದ್ರಿಸಲಾಗುತ್ತಿತ್ತು. ಪರವಾನಗಿ ಪಡೆದ ಸ್ಟ್ಯಾಂಪ್ ಮಾರಾಟಗಾರರು ಈ ಛಾಪಾ ಕಾಗದಗಳನ್ನು ನಾಗರಿಕರಿಗೆ ಒದಗಿಸುತ್ತಿದ್ದರು. 2000ದಲ್ಲಿ ನಕಲಿ ಛಾಪಾ ಕಾಗದ ಹಗರಣ ಬೆಳಕಿಗೆ ಬಂತು. ₹32 ಸಾವಿರ ಕೋಟಿ ಮೌಲ್ಯದ ಈ ಹಗರಣದ ಹಿಂದಿದ್ದ ಕರೀಂ ಲಾಲ್ ತೆಲಗಿಯನ್ನು 2001ರಲ್ಲಿ ಬಂಧಿಸಲಾಯಿತು. ಆ ಬಳಿಕವೂ ಕೆಲವು ತಿಂಗಳು ಛಾಪಾ ಕಾಗದ ಬಳಕೆಯಲ್ಲಿತ್ತು. 2003ರ ಏಪ್ರಿಲ್1ರಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ಛಾಪಾ ಕಾಗದದ ಬಳಕೆಯನ್ನು ಸ್ಥಗಿತಗೊಳಿಸಿ ಆದೇಶ ಹೊರಡಿಸಿತು.
ಆ ಬಳಿಕ ದಾಖಲೆಯ ವಿವರಗಳನ್ನು ₹2 ಮೌಲ್ಯದ ದಾಖಲೆ ಹಾಳೆ (ಡಾಕ್ಯುಮೆಂಟ್ ಶೀಟ್) ಅಥವಾ ಖಾಲಿ ಹಾಳೆಯಲ್ಲಿ ಬರೆಯುವ ಮತ್ತು ಆಯಾ ವ್ಯಾಪ್ತಿಯ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಅಥವಾ ಅಧಿಕೃತ ಬ್ಯಾಂಕುಗಳಲ್ಲಿ ಛಾಪಾ ಕಾಗದದ ಸುಂಕ (ಸ್ಟ್ಯಾಂಪ್ ಡ್ಯೂಟಿ) ಪಾವತಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು.
ಕಂದಾಯ ಇಲಾಖೆಯು 2008ರಲ್ಲಿ ರಾಜ್ಯದಲ್ಲಿ ಪ್ರಾಯೋಗಿಕವಾಗಿ ಇ–ಸ್ಟ್ಯಾಂಪ್ ವ್ಯವಸ್ಥೆ ಪರಿಚಯಿಸಿತು. 2009ರಲ್ಲಿ ಇದನ್ನು ರಾಜ್ಯದಾದ್ಯಂತ ವಿಸ್ತರಿಸಲಾಯಿತು. ಭದ್ರತೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುವ ದಿಸೆಯಲ್ಲಿ ಇದು ಮಹತ್ವದ ಹೆಜ್ಜೆ ಎಂದು ಇಲಾಖೆ ಅಂದು ಪ್ರತಿಪಾದಿಸಿತ್ತು.
ರಾಜ್ಯದಾದ್ಯಂತ ಇ-ಸ್ಟಾಂಪ್‌ಗಳ ವಿತರಣೆ ಜವಾಬ್ದಾರಿಯನ್ನು ಸ್ಟಾಕ್ ಹೋಲಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್‌ಗೆ (ಎಸ್‌ಎಚ್‌ಸಿಐಎಲ್) ನೀಡಲಾಗಿತ್ತು.
ಹೆಚ್ಚು ಸುರಕ್ಷಿತ ಮತ್ತು ಪಾರದರ್ಶಕ ಎಂದು ಬಿಂಬಿಸಲಾಗಿದ್ದ ಇ–ಸ್ಟ್ಯಾಂಪ್ ವ್ಯವಸ್ಥೆಯಲ್ಲೂ ಲೋಪಗಳು ಕಂಡುಬಂದವು.
ಇ-ಸ್ಟ್ಯಾಂಪ್ ಪ್ರಮಾಣಪತ್ರಗಳನ್ನು ಜೆರಾಕ್ಸ್ ಪಡೆದು ನಕಲು ಮಾಡುವುದು ಅಥವಾ ಅವುಗಳಂತೆಯೇ ಕಾಣುವ ಪ್ರತಿಗಳನ್ನು ಸೃಷ್ಟಿಸುವ ಪ್ರಕರಣಗಳು ವರದಿಯಾದವು. ಒಂದು ಉದ್ದೇಶಕ್ಕಾಗಿ ಖರೀದಿಸಿದ ಇ–ಸ್ಟ್ಯಾಂಪ್ ಅನ್ನು ಬೇರೆ ರೀತಿಯ ದಾಖಲೆಗೆ ಬಳಸುವ ಪ್ರಸಂಗಗಳು ನಡೆಯುತ್ತಿರುವುದು ಕೂಡ ಗಮನಕ್ಕೆ ಬಂದವು.
ಇಂತಹ ಕೃತ್ಯಗಳ ಮೂಲಕ ಸ್ಟ್ಯಾಂಪ್ ಶುಲ್ಕ ಪಾವತಿಯನ್ನು ತಪ್ಪಿಸಿ ಇಲಾಖೆಗೆ ವಂಚಿಸುತ್ತಿರುವ ಘಟನೆಗಳು ರಾಜ್ಯದಾದ್ಯಂತ ನಡೆದಿವೆ. ಇದು ರಾಜ್ಯದ ಬೊಕ್ಕಸಕ್ಕೆ ನಷ್ಟವನ್ನು ಉಂಟುಮಾಡಿತ್ತು. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಡಿಜಿಟಲ್ ಇ–ಸ್ಟ್ಯಾಂಪ್ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ನಾಗರಿಕರು ಮಧ್ಯವರ್ತಿಗಳ ನೆರವಿಲ್ಲದೆ ಸ್ವತಃ ಡಿಜಿಟಲ್ ಇ-ಸ್ಟ್ಯಾಂಪ್ ಪಡೆಯಬಹುದು. ಈ ಸೇವೆ 24x7 ಲಭ್ಯ. ಜಗತ್ತಿನಲ್ಲಿ ಎಲ್ಲೇ ಇದ್ದರೂಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಈ ಸ್ಟ್ಯಾಂಪ್ ಪಡೆಯಬಹುದು. ಅದಕ್ಕಾಗಿ ಕಂಪ್ಯೂಟರ್‌ಗೆ ಇಂಟರ್‌ನೆಟ್ ಸಂಪರ್ಕ ಇರಬೇಕಷ್ಟೆ
ಈ ಸೇವೆ ಸಂಪೂರ್ಣ ಡಿಜಿಟಲ್ ಆಗಿರುವುದರಿಂದ ಸುರಕ್ಷಿತವಾಗಿ ಆನ್‌ಲೈನ್ ಮೂಲಕ ಪಾವತಿ ಮಾಡಬಹುದು
ನಾಗರಿಕರು ಆಧಾರ್ ಆಧಾರಿತ ಇ–ಸಹಿ ಅಥವಾ ಡಿಜಿಟಲ್ ಸಹಿ ಪ್ರಮಾಣಪತ್ರ (ಡಿಎಸ್‌ಸಿ) ಬಳಸಿಕೊಂಡು ದಾಖಲೆಗಳಿಗೆ ಡಿಜಿಟಲ್ ಸಹಿ ಮಾಡಬೇಕಾಗುತ್ತದೆ. ಹೀಗಾಗಿ ಇಡೀ ಪ್ರಕ್ರಿಯೆ ಸುರಕ್ಷಿತ
ಆನ್‌ಲೈನ್ ಮೂಲಕವೇ ಎಲ್ಲ ಪ್ರಕ್ರಿಯೆ ನಡೆಯುವುದರಿಂದ ಸ್ಟ್ಯಾಂಪ್‌ನ ನಕಲು ಮಾಡಲು ಸಾಧ್ಯವಿಲ್ಲ. ವ್ಯವಸ್ಥೆ ಹೆಚ್ಚು ಪಾರದರ್ಶಕವಾಗಿರಲಿದೆ. ಶುಲ್ಕ ವಂಚನೆಗೂ ಕಡಿವಾಣ ಬೀಳಲಿದೆ. ಶುಲ್ಕ ನೇರವಾಗಿ ಸರ್ಕಾರದ ಖಜಾನೆಗೆ ಜಮೆ ಆಗುತ್ತದೆ
ಡಿಜಿಟಲ್ ಸ್ಟ್ಯಾಂಪ್ ವಿವರಗಳು ಸ್ವಯಂಚಾಲಿತವಾಗಿ ನೋಂದಣಿ ವ್ಯವಸ್ಥೆಗೆ ಸೇರುತ್ತವೆ. ಕಂದಾಯ ಇಲಾಖೆ ಪರಿಚಯಿಸಲು ಉದ್ದೇಶಿಸಿರುವ ಕಾಗದ ರಹಿತ ನೋಂದಣಿ ವ್ಯವಸ್ಥೆಗೆ ಇದು ಅನುಗುಣವಾಗಿದೆ
ಸ್ಟ್ಯಾಂಪ್‌ನ ತಪ್ಪು ವರ್ಗೀಕರಣ ಹಾಗೂ ವಂಚನೆಗಳಿಗೆ ಕಡಿವಾಣ ಬೀಳುವುದರಿಂದ ಇಲಾಖೆಯ ಆದಾಯವೂ ಹೆಚ್ಚಲಿದೆ
ಈ ಸ್ಟ್ಯಾಂಪ್, ದಾಖಲೆಯ ಪ್ರಮುಖ ಭಾಗವಾಗಿರುವುದರಿಂದ, ಸಹಿ ಮಾಡಿರುವವರ ಗಮನಕ್ಕೆ ಬಾರದಂತೆ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ
ಡಿಜಿಟಲ್ ರೂಪದಲ್ಲಿ ಸಂಗ್ರಹಿಸಲಾದ ದಾಖಲೆಗಳು ಕಾನೂನು ಬದ್ಧ. ಹೀಗಾಗಿ ಭೌತಿಕ ಪ್ರತಿಯ ಅಗತ್ಯವಿಲ್ಲ
ಈಗಾಗಲೇ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದರೆ, ಮತ್ತೆ ಹೊಸದಾಗಿ ಮಾಡಬೇಕಾದ ಅಗತ್ಯವಿಲ್ಲ. ನೇರವಾಗಿ ಪೋರ್ಟಲ್‌ಗೆ ಲಾಗಿನ್ ಆಗಬಹುದು
ಲಾಗಿನ್ ಆದ ಬಳಿಕ ‘ಸ್ಟಾರ್ಟ್ ನ್ಯೂ ಅಪ್ಲಿಕೇಷನ್’ ಎಂಬ ಕೊಂಡಿ ಒತ್ತಿದರೆ, ವಿವಿಧ ಸೇವೆಗಳ ಪಟ್ಟಿ ತೋರಿಸುತ್ತದೆ. ಅದರಲ್ಲಿ ಡಿಜಿಟಲ್ ‘ಇ–ಸ್ಟ್ಯಾಂಪ್’ ಆಯ್ಕೆ ಒತ್ತಬೇಕು
ಸ್ಟ್ಯಾಂಪ್ ಡೌನ್‌ಲೋಡ್ ಮಾಡಿಕೊಳ್ಳಲು ಏಳು ಹಂತಗಳನ್ನು ಪೂರೈಸಬೇಕಾಗುತ್ತದೆ
ಮೊದಲ ಹಂತದಲ್ಲಿ ದಾಖಲೆಯ ವಿಧ (ಉದಾ: ಬಾಡಿಗೆ ಒಪ್ಪಂದ, ಅಫಿಡವಿಟ್, ಮಾರಾಟ ಒಪ್ಪಂದ ಮುಂತಾದ 60 ವಿಧಗಳಿವೆ) ಮತ್ತು ಉಪ ವಿಧಗಳನ್ನು ಆಯ್ಕೆ ಮಾಡಬೇಕಾಗುತ್ತದೆ. ನಂತರ ವಿವರಗಳನ್ನು ಭರ್ತಿ ಮಾಡಬೇಕು
ಅರ್ಜಿದಾರರು ಹಾಗೂ ಸಹಿ ಮಾಡುವ ಎಲ್ಲರೂ ಆಧಾರ್ ಆಧಾರಿತ ಪರಿಶೀಲನೆ ಮೂಲಕ ಗುರುತು ದೃಢೀಕರಿಸಬೇಕು
(ಆಸ್ತಿ ಸಂಬಂಧಿತ ದಾಖಲೆಗಳಿದ್ದರೆ, ಸರ್ಕಾರಿ ದತ್ತಾಂಶದಲ್ಲಿ ದಾಖಲಾಗಿರುವ ಆಸ್ತಿ ಮಾಹಿತಿಯನ್ನು ಈ ವ್ಯವಸ್ಥೆ ಸ್ವಯಂಚಾಲಿತವಾಗಿ ಪರಿಶೀಲಿಸುತ್ತದೆ)
ಸ್ಟ್ಯಾಂಪ್ ಶುಲ್ಕ ಲೆಕ್ಕ ಹಾಕಿದ ನಂತರ, ಖಜಾನೆ ಪಾವತಿ ಗೇಟ್‌ವೇ ಮೂಲಕ ಪಾವತಿ ಮಾಡಬೇಕು
ಶುಲ್ಕ ಪಾವತಿ ದೃಢಪಟ್ಟ ನಂತರ, ಪೋರ್ಟಲ್ ಡಿಜಿಟಲ್ ಇ–ಸ್ಟ್ಯಾಂಪ್ ಸೃಷ್ಟಿಸುತ್ತದೆ. ಇದರಲ್ಲಿ ವಿಶಿಷ್ಟ ಕ್ರಮ ಸಂಖ್ಯೆ, ಕ್ಯೂಆರ್ ಕೋಡ್, ಡಿಜಿಟಲ್ ವಾಟರ್‌ಮಾರ್ಕ್ ಇರುತ್ತದೆ
ದಾಖಲೆಗಳಿಗೆ ಸಹಿ ಹಾಕುವವರಿಗೆ ಅವರ ಮೊಬೈಲ್‌ಗೆ ಇ–ಸಹಿ ಹಾಕುವ ಲಿಂಕ್ ಬರುತ್ತದೆ. ಅದರಲ್ಲಿ ಆಧಾರ್ ಇ–ಸಹಿ ಅಥವಾ ಡಿಜಿಟಲ್ ಸಹಿ ಪ್ರಮಾಣಪತ್ರದ ಮೂಲಕ ಸಹಿ ಹಾಕಬೇಕಾಗುತ್ತದೆ
ಎಲ್ಲರೂ ಸಹಿ ಮಾಡಿದ ನಂತರ ಅಂತಿಮ ಡಿಜಿಟಲ್ ಇ–ಸ್ಟ್ಯಾಂಪ್ ಸಿಗುತ್ತದೆ. ಇದನ್ನು ಡೌನ್‌ಲೋಡ್ ಮಾಡಿ ನೋಂದಣಿಗೆ ಬಳಸಬಹುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.