ADVERTISEMENT

ಆಳ ಅಗಲ | ದೀಪಾವಳಿಗೆ ಯುನೆಸ್ಕೊ ಪ್ರಭೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 0:28 IST
Last Updated 11 ಡಿಸೆಂಬರ್ 2025, 0:28 IST
<div class="paragraphs"><p>ದೀಪಾವಳಿ (ಪ್ರಾತಿನಿಧಿಕ ಚಿತ್ರ)</p></div>

ದೀಪಾವಳಿ (ಪ್ರಾತಿನಿಧಿಕ ಚಿತ್ರ)

   
ದೀಪಾವಳಿ ಭಾರತದ ಪ್ರಮುಖ ಹಬ್ಬ. ಕತ್ತಲಿನ ಮೇಲೆ ಬೆಳಕಿನ ವಿಜಯವನ್ನು ಸಂಕೇತಿಸುವ ಈ ಹಬ್ಬಕ್ಕೆ ಜಾಗತಿಕ ಮನ್ನಣೆ ದೊರಕಿದೆ. ದೀಪಾವಳಿಯನ್ನು ‘ಮಾನವಕುಲದ ಅಮೂರ್ತ ಸಾಂಸ್ಕೃತಿಕ ಪರಂಪರೆ’ ಎಂದು ಯುನೆಸ್ಕೊ ಗುರುತಿಸಿದೆ. ಹಬ್ಬಕ್ಕೆ ಸಂಬಂಧಿಸಿದ ಆಚರಣೆಗಳನ್ನು ರಕ್ಷಿಸುವ ದಿಸೆಯಲ್ಲಿ ಮತ್ತು ಭವಿಷ್ಯದ ತಲೆಮಾರುಗಳಿಗೆ ಅದನ್ನು ದಾಟಿಸುವ ದೃಷ್ಟಿಯಿಂದ ಈ ಮನ್ನಣೆಯು ಮುಖ್ಯ ಪಾತ್ರ ವಹಿಸಲಿದೆ ಎನ್ನುವ ವಿಶ್ವಾಸ ವ್ಯಕ್ತವಾಗಿದೆ.

ದೇಶದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯಲ್ಲಿ ಆಚರಿಸಲ್ಪಡುವ ದೀಪಾವಳಿಯು ಜನರ ಬದುಕು, ಭಾವನೆ, ಪುರಾಣ, ಐತಿಹ್ಯಗಳೊಂದಿಗೆ ನಂಟು ಹೊಂದಿದ್ದು, ಅತ್ಯಂತ ಸಂಭ್ರಮದಿಂದ ಆಚರಿಸುವ ಹಬ್ಬವಾಗಿದೆ. ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯು (ಯುನೆಸ್ಕೊ) ದೀಪಾವಳಿಯನ್ನು ‘ಮಾನವಕುಲದ ಅಮೂರ್ತ ಸಾಂಸ್ಕೃತಿಕ ಪರಂಪರೆ’ಯ ಪಟ್ಟಿಗೆ ಸೇರಿಸಿದೆ. ಯುನೆಸ್ಕೊದಿಂದ ಈ ಗೌರವಕ್ಕೆ ‍ಪಾತ್ರವಾಗಿರುವ ಭಾರತದ 16ನೇ ಸಾಂಸ್ಕೃತಿಕ ಕಲೆ/ ಆಚರಣೆ ಇದು. ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಯುನೆಸ್ಕೊದ ಅಂತರಸರ್ಕಾರಿ ಸಮಿತಿಯ 20ನೇ ಅಧಿವೇಶನದಲ್ಲಿ ಈ ಘೋಷಣೆಯನ್ನು ಮಾಡಲಾಗಿದೆ.

ಪರಂಪರೆ ಎಂದರೆ, ಕೇವಲ ಕಟ್ಟಡ ಅಥವಾ ಸ್ಮಾರಕ ಅಲ್ಲ; ಜೀವಂತ ಆಚರಣೆಗಳೂ ಅದರ ಭಾಗವಾಗಿವೆ. ಜಾನ‍ಪದ, ಸಾಮಾಜಿಕ ಆಚರಣೆ, ಹಬ್ಬ, ಪ್ರಕೃತಿಗೆ ಸಂಬಂಧಿಸಿದ ಆಚರಣೆಗಳೂ ಸಾಂಸ್ಕೃತಿಕ ಪರಂ‍ಪರೆಯಲ್ಲಿರುತ್ತವೆ. ಅವುಗಳನ್ನು ಸಂರಕ್ಷಿಸಿ, ಮುಂದಿನ ತಲೆಮಾರುಗಳಿಗೆ ಕೊಂಡೊಯ್ಯುವ ದಿಸೆಯಲ್ಲಿ ಸಮುದಾಯಗಳನ್ನು, ಸರ್ಕಾರಗಳನ್ನು ಉತ್ತೇಜಿಸುವುದು ಈ ಮನ್ನಣೆಯ ಮುಖ್ಯ ಧ್ಯೇಯ.

ADVERTISEMENT

ದೀಪಾವಳಿ ಬೆಳಕಿನ ಹಬ್ಬ. ದೇಶದಾದ್ಯಂತ ವಿಭಿನ್ನ ಸಮುದಾಯಗಳು, ವ್ಯಕ್ತಿಗಳು ಹಬ್ಬವನ್ನು ಭಿನ್ನ ರೀತಿಯಲ್ಲಿ ಆಚರಿಸುತ್ತಾರೆ. ಅಕ್ಟೋಬರ್ ಅಥವಾ ನವೆಂಬರ್ (ಕಾರ್ತಿಕ) ಮಾಸದಲ್ಲಿ ಆಚರಿಸಲಾಗುವ ಈ ಹಬ್ಬವನ್ನು ಹಟ್ಟಿ ಹಬ್ಬ ಎಂದೂ ಕರೆಯಲಾಗುತ್ತದೆ. ಕತ್ತಲೆಯ ಮೇಲೆ ಬೆಳಕಿನ, ಕೇಡಿನ ವಿರುದ್ಧ ಒಳಿತಿನ ವಿಜಯವನ್ನು ಹಬ್ಬವು ಸಂಕೇತಿಸುತ್ತದೆ. ಕಾಲಾತೀತವಾದ ಹಬ್ಬವಾಗಿರುವ ದೀಪಾವಳಿಯನ್ನು ಭಾರತವಷ್ಟೇ ಅಲ್ಲದೆ ಜಗತ್ತಿನ ಹಲವು ಭಾಗಗಳಲ್ಲಿಯೂ ಆಚರಿಸಲಾಗುತ್ತದೆ. 

ಹಬ್ಬದ ಸಂದರ್ಭದಲ್ಲಿ ಮನೆಗಳನ್ನು, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸಿ, ಸಿಂಗರಿಸಲಾಗುತ್ತದೆ. ಮನೆ, ಅಂಗಳದಲ್ಲಿ ದೀಪಗಳನ್ನು ಹಚ್ಚಿ ಮನೆಮಂದಿಯೆಲ್ಲಾ ಸಂಭ್ರಮಿಸುತ್ತಾರೆ. ಪಟಾಕಿಗಳನ್ನು ಸಿಡಿಸಿ, ಸಮೃದ್ಧಿಗಾಗಿ ಪ್ರಾರ್ಥಿಸುತ್ತಾರೆ. ಸಾಮಾಜಿಕ ಬಂಧಗಳನ್ನು ಗಟ್ಟಿಗೊಳಿಸುವ, ಒಳಗೊಳ್ಳುವಿಕೆಯನ್ನು ಹೆಚ್ಚು ಮಾಡುವ, ಕರುಣೆ, ಕೃತಜ್ಞತೆ ಮತ್ತು ಭರವಸೆಯಂಥ ಮೌಲ್ಯಗಳನ್ನು ಬಿತ್ತುವ ಶಕ್ತಿ ಹಬ್ಬಕ್ಕಿದೆ. ಸ್ಥಳೀಯ ಆರ್ಥಿಕತೆ ಮತ್ತು ಸೃಜನಶೀಲ ಅಭಿವ್ಯಕ್ತಿಯನ್ನೂ ದೀಪಾವಳಿ ಉತ್ತೇಜಿಸುತ್ತದೆ ಎಂದು ಭಾರತ ಸರ್ಕಾರವು ಯುನೆಸ್ಕೊಗೆ ಮಾಡಿದ್ದ ನಾಮ ನಿರ್ದೇಶನದಲ್ಲಿ ಪ್ರತಿಪಾದಿಸಿತ್ತು.

ದೀಪಾವಳಿಯು ಜನರು, ಕುಟುಂಬಗಳು ಮತ್ತು ಸಮುದಾಯಗಳು ಒಟ್ಟಿಗೆ ಸೇರುವ, ಉಡುಗೊರೆ, ಸಿಹಿ ಪದಾರ್ಥಗಳನ್ನು ವಿನಿಮಯ ಮಾಡಿಕೊಳ್ಳುವ ಸಮಯವಾಗಿದೆ. ಜತೆಗೆ, ಒಟ್ಟಿಗೆ ಊಟ ಸವಿಯುವುದು, ಸಂಗೀತ, ನೃತ್ಯ ಮತ್ತು ಆಚರಣೆಗಳನ್ನೂ ಇದು ಒಳಗೊಂಡಿದೆ. ಸಂಪ್ರದಾಯಗಳನ್ನು ಹೇಗೆ ವಿಧ್ಯುಕ್ತವಾಗಿ ಪಾಲಿಸಬೇಕು ಎನ್ನುವ ಜ್ಞಾನವು ತಲೆಮಾರುಗಳಿಂದ ತಲೆಮಾರಿಗೆ ಅನೌಪಚಾರಿಕವಾಗಿ, ಕಥೆಗಳ ಮೂಲಕ, ಪ್ರತ್ಯಕ್ಞ ಕಲಿಕೆಯ ಮೂಲಕ ಹರಿದುಬರುತ್ತಲೇ ಇದೆ. ದೇವಾಲಯಗಳು, ಶಾಲೆಗಳು, ಸಾಂಸ್ಕೃತಿಕ ಸಂಘಟನೆಗಳು ಮತ್ತು ಡಿಜಿಟಲ್ ವೇದಿಕೆಗಳು ಹಬ್ಬದ ಸಂಪ್ರದಾಯವನ್ನು ಕಾಪಾಡುವಲ್ಲಿ ಮತ್ತು ಪ್ರಚಾರ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂಬ ಪ್ರತಿಪಾದನೆಯನ್ನು ಯುನೆಸ್ಕೊ ಉಲ್ಲೇಖಿಸಿದೆ. 

ಆಯ್ಕೆ ಪ್ರಕ್ರಿಯೆ ಹೇಗೆ?

ಯುನೆಸ್ಕೊ, ಪ್ರಾಚ್ಯ ವಸ್ತು ಸ್ಮಾರಕಗಳು, ಪಾರಂಪರಿಕ ಕಟ್ಟಡಗಳು, ನೈಸರ್ಗಿಕವಾದ ಪ್ರವಾಸಿ ತಾಣಗಳಿಗೆ ಪಾರಂಪರಿಕ ತಾಣ ಎಂಬ ಮಾನ್ಯತೆ ನೀಡುತ್ತದೆ. ಅದೇ ಮಾದರಿಯಲ್ಲಿ ಚಾಲ್ತಿಯಲ್ಲಿಯಲ್ಲಿರುವ ಸಂಪ್ರದಾಯಗಳು, ಆಚರಣೆಗಳು, ಸಾಮಾಜಿಕ ಪದ್ಧತಿಗಳನ್ನು ಆಯ್ಕೆ ಮಾಡಿ ಅವುಗಳನ್ನು ‘ಮಾನವಕುಲದ ಸಾಂಸ್ಕೃತಿಕ ಪರಂಪರೆ’ಯ ಪಟ್ಟಿಗೆ ಸೇರಿಸಲಾಗುತ್ತದೆ. 

ಮೌಖಿಕ ಸಂಪ್ರದಾಯಗಳು, ಪ್ರದರ್ಶನ ಕಲೆಗಳು, ಸಾಮಾಜಿಕ/ಧಾರ್ಮಿಕ ಆಚರಣೆಗಳು/ಹಬ್ಬ/ಉತ್ಸವಗಳು, ಪ್ರಕೃತಿ/ಸಾರ್ವತ್ರಿಕ ಜ್ಞಾನ ಮತ್ತು ಸಾಂಪ್ರದಾಯಿಕ ಕರಕುಶಲ ಕಲೆಗಳನ್ನು ಈ ಮಾನ್ಯತೆ ನೀಡಲು ಯುನೆಸ್ಕೊ ಪರಿಗಣಿಸುತ್ತದೆ.  ಸದ್ಯ, 140 ದೇಶಗಳ 700 ಕಲೆ/ಆಚರಣೆ/ಉತ್ಸವಗಳು/ ಸಾಂಸ್ಕೃತಿಕ ಪರಂಪರೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಇದರಲ್ಲಿ ಭಾರತದ 16 ಕಲೆ/ ಆಚರಣೆಗಳು ಸೇರಿವೆ. 

ಈ ಪಟ್ಟಿಗೆ ಆಯ್ಕೆಯಾಗಬೇಕಾದರೆ ಯಾವುದೇ ಆಚರಣೆಯು ಪ್ರಮುಖವಾಗಿ ಮೂರು ಮಾನದಂಡಗಳಿಗೆ ಹೊಂದುವಂತಿರಬೇಕು. ಎಲ್ಲರನ್ನೂ ಒಳಗೊಳ್ಳುವಂತಿರಬೇಕು, ಪ್ರಾತಿನಿಧಿಕರವಾಗಿರಬೇಕು ಮತ್ತು ಸಮುದಾಯ ಆಧಾರಿತವಾಗಿರಬೇಕು. ಸಮುದಾಯಗಳಲ್ಲಿ ಜೀವಂತವಾಗಿರುವ ಸಂಪ್ರದಾಯ, ಆಚರಣೆಗಳನ್ನು ಸಂರಕ್ಷಿಸಿ, ಮುಂದಿನ ತಲೆಮಾರುಗಳಿಗೂ ಅದನ್ನು ತಲುಪಿಸುವ ಉದ್ದೇಶವೂ ಇದರ ಹಿಂದೆ ಅಡಗಿದೆ. 

ನಾಮನಿರ್ದೇಶನ: ನಿರ್ದಿಷ್ಟ ಕಲೆ/ಆಚರಣೆಯನ್ನು ಈ ಪಟ್ಟಿಗೆ ಸೇರಿಸುವ ಬಗ್ಗೆ ಆಯಾ ದೇಶಗಳು ಯುನೆಸ್ಕೊಗೆ ನಾಮ ನಿರ್ದೇಶನ ಮಾಡಬೇಕು. ಭಾರತವು 2023ರಲ್ಲಿ ದೀಪಾವಳಿಯನ್ನು ಪಟ್ಟಿಗೆ ಸೇರಿಸುವಂತೆ ನಾಮ ನಿರ್ದೇಶನ ಮಾಡಿತ್ತು.  ‌

ಇದಕ್ಕಾಗಿ ಸಂಗೀತ ನಾಟಕ ಅಕಾಡೆಮಿಯು ವಿದ್ವಾಂಸರು, ಕಲಾವಿದರು, ಲೇಖಕರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿರುವ ತಜ್ಞರ ಸಮಿತಿಯೊಂದನ್ನು ರಚಿಸಿತ್ತು. ಸಮಿತಿಯು ಆದಿವಾಸಿಗಳು, ಲಿಂಗತ್ವ ಅಲ್ಪಸಂಖ್ಯಾತರು, ಕೃಷಿಕರು, ಕಲಾವಿದರು, ಧಾರ್ಮಿಕ ಸಂಘಟನೆಗಳು ಸೇರಿದಂತೆ ದೇಶದಾದ್ಯಂತ ವಿವಿಧ ಸಮುದಾಯಗಳನ್ನು ಸಂಪರ್ಕಿಸಿ ಅಭಿಪ್ರಾಯಗಳನ್ನು ಸಂಗ್ರಹಿಸಿತ್ತು. ದೀಪಾವಳಿಯ ಸಾಂಸ್ಕೃತಿಕ  ಮಹತ್ವ, ಅದರ ವೈವಿಧ್ಯ, ವಿವಿಧ  ಸಮುದಾಯಗಳಲ್ಲಿ ಅದನ್ನು ಆಚರಿಸುವ ರೀತಿ ಸೇರಿದಂತೆ ಈ ಹಬ್ಬಕ್ಕೆ ಸಂಬಂಧಿಸಿದ ಎಲ್ಲ ವಿವರಗಳನ್ನೂ ದಾಖಲು ಮಾಡಿಕೊಂಡಿತ್ತು.

ಏನೇನು ಪ್ರಯೋಜನ?

  • ಸ್ಥಳೀಯ ಆಚರಣೆಗಳ ದಾಖಲೀಕರಣ; ಸಂಪ್ರದಾಯಗಳ ರಕ್ಷಣೆಗೆ ಸಮುದಾಯದ ಮುಖಂಡರನ್ನು ಬೆಂಬಲಿಸುವುದು ಮತ್ತು ನಿಯಮಗಳನ್ನು ರೂಪಿಸುವುದು (ಉದಾಹರಣೆಗೆ, ಪಟಾಕಿಗಳನ್ನು ಸಿಡಿಸುವುದಕ್ಕೆ ಸಂಬಂಧಿಸಿ ಸಂಪ್ರದಾಯವನ್ನು ಪಾಲಿಸುತ್ತಲೇ ಪರಿಸರ ಮತ್ತು ಜನರ ರಕ್ಷಣೆಯ ವಿಚಾರಕ್ಕೆ ಗಮನ ಕೊಡುವುದು) 

  • ಆಚರಣೆಗಳಲ್ಲಿ ಸಮುದಾಯದ ಸಕ್ರಿಯ ಪಾಲ್ಗೊಳ್ಳುವಿಕೆ, ಪ್ರಸಾರ, ರಕ್ಷಣಾ ಕ್ರಮಗಳನ್ನು ಗುರುತಿಸಿ, ಅವುಗಳನ್ನು ಜಾಗತಿಕ ಮಟ್ಟದಲ್ಲಿ ಪ್ರತಿಬಿಂಬಿಸುವುದು ಮತ್ತು ರಕ್ಷಣೆಗೆ ಸಹಕಾರ ನೀಡುವುದು     

  • ಸಮುದಾಯದ ಸಹಭಾಗಿತ್ವ, ಸಾಂಸ್ಕೃತಿಕ ಪರಂಪರೆ ಮತ್ತು ವೈವಿಧ್ಯವನ್ನು ಗುರುತಿಸುವುದು

  • ಹಬ್ಬದ ಸಂಪ್ರದಾಯಗಳನ್ನು, ಆಚರಣೆಗಳನ್ನು ಉಳಿಸಿ ಬೆಳೆಸಲು ನೆರವು 

ಈವರೆಗೆ ಈ ಪಟ್ಟಿಗೆ ಸೇರಿದ ಭಾರತದ ಕಲೆ/ಆಚರಣೆಗಳು (ಸೇರ್ಪಡೆಗೊಂಡ ವರ್ಷ)

1. ಕೂಡಿಯಾಟ್ಟಂ: ಕೇರಳದಲ್ಲಿನ ಸಂಸ್ಕೃತದ ರಂಗಕಲೆ (2008)

2. ವೇದ ಪಠಣ, ಮಂತ್ರ ಘೋಷದ ಸಂಪ್ರದಾಯ (2008) 

3.ರಾಮ್‌ಲೀಲಾ: ಸಾಂಪ್ರದಾಯಿಕ ರಾಮಾಯಣ ಪ್ರದರ್ಶನ ಕಲೆ (2008)

4. ರಮ್ಮಣ್‌: ಉತ್ತರಾಖಂಡದ ಗಡವಾಲ್ ಪ್ರಾಂತ್ಯದಲ್ಲಿ ಚಾಲ್ತಿಯಲ್ಲಿರುವ ಧಾರ್ಮಿಕ ಉತ್ಸವ (2009)

5. ಛವೂ ನೃತ್ಯ: ಉತ್ತರ ಭಾರತದ ಜಾರ್ಖಂಡ್‌, ಒಡಿಶಾ ಇನ್ನಿತರ ರಾಜ್ಯಗಳಲ್ಲಿ ಚಾಲ್ತಿಯಲ್ಲಿರುವ ರಾಮಾಯಣ ಆಧಾರಿತ ನೃತ್ಯ ಪ್ರಕಾರ (2010)

6. ರಾಜಸ್ಥಾನದ ಕಾಲ್‌ಬೆಲಿಯಾ ಜಾನಪದ ಹಾಡುಗಳು ಮತ್ತು ನೃತ್ಯಗಳು (2010)

7. ಮುಡಿಯೇಟ್ಟು: ಕೇರಳದಲ್ಲಿ ಪ್ರಚಲಿತದಲ್ಲಿರುವ ಧಾರ್ಮಿಕ ರಂಗ ಮತ್ತು ನೃತ್ಯ ಕಲೆ (2010)

8. ಲಡಾಖ್‌ನಲ್ಲಿ ಬೌದ್ಧ ಭಿಕ್ಕುಗಳು ಮಾಡುವ ಮಂತ್ರಘೋಷ (2012)

9. ಸಂಕೀರ್ತನ: ಮಣಿಪುರದಲ್ಲಿ ಚಾಲ್ತಿಯಲ್ಲಿರುವ, ಕೃಷ್ಣನಿಗೆ ಸಂಬಂಧಿಸಿದ ಗೀತೆಗಳನ್ನು ಚರ್ಮ ವಾದ್ಯ ಸೇರಿದಂತೆ ವಿವಿಧ ಸಂಗೀತ ಪರಿಕರಗಳನ್ನು ನುಡಿಸುವುದರ ಜೊತೆಗೆ ನೃತ್ಯ ಮಾಡುವ ಆಚರಣೆ (2013) 

10. ಪಂಜಾಬ್‌ನ ಜಂಡಿಯಾಲಾ ಗುರು ಗ್ರಾಮದಲ್ಲಿ ಠಠೇರ ಸಮುದಾಯದವರು ತಾಮ್ರ ಮತ್ತು ಕಂಚಿನಿಂದ ಪಾತ್ರೆ ಹಾಗೂ ಇತರ ಪರಿಕರಗಳನ್ನು ತಯಾರಿಸುವ ಸಾಂಪ್ರದಾಯಿಕ ಕರಕುಶಲ ಕಲೆ  (2014)

11. ಯೋಗ (2016)

12. ಕುಂಭಮೇಳ (2017)

13. ಕೋಲ್ಕತ್ತದ ದುರ್ಗಾ ಪೂಜೆ (2021)

14: ಗುಜರಾತ್‌ನ ಗರ್ಬಾ ನೃತ್ಯ (2023)

15:ನೌವ್‌ರೋಜ್‌ (ಹೊಸ ದಿನ): ಭಾರತದಲ್ಲಿ ಪಾರ್ಸಿಗಳು ಆಚರಿಸುವ ಹೊಸ ವರ್ಷದ ಮೊದಲ ದಿನ (2024)

16. ದೀಪಾವಳಿ (2025)

ಆಧಾರ: ಯುನೆಸ್ಕೊ ಇನ್‌ಟ್ಯಾಂಜಿಬಲ್ ಕಲ್ಚರಲ್ ಹೆರಿಟೇಜ್, ಪಿಟಿಐ, ಪಿಐಬಿ, 

ಚಿತ್ರಗಳು:ಸಂಸ್ಕೃತಿ ಸಚಿವಾಲಯ, ಸಂಗೀತ ನಾಟಕ ಅಕಾಡೆಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.