ADVERTISEMENT

ಆಳ ಅಗಲ | ಟ್ರಂಪ್ ಪೌರತ್ವ ನೀತಿ: ಭಾರತೀಯರ ಕನಸಿಗೆ ಕೊಳ್ಳಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2025, 1:02 IST
Last Updated 25 ಜನವರಿ 2025, 1:02 IST
<div class="paragraphs"><p>ಟ್ರಂಪ್</p></div>

ಟ್ರಂಪ್

   

ಅಮೆರಿಕ ಸಂವಿಧಾನದ 14ನೇ ತಿದ್ದುಪಡಿಯು ದೇಶದಲ್ಲಿ ಜನಿಸಿದ ಮಕ್ಕಳಿಗೆ ಪೌರತ್ವ ನೀಡುತ್ತದೆ. ಅಮೆರಿಕದಲ್ಲಿ ನೆಲಸಿರುವ ಅಕ್ರಮ ವಲಸಿಗರ ಮಕ್ಕಳಿಗೂ ಇದು ಅನ್ವಯವಾಗುತ್ತದೆ ಎಂದು ಇದುವರೆಗೆ ವ್ಯಾಖ್ಯಾನಿಸಲಾಗುತ್ತಿತ್ತು. ಅಮೆರಿಕದ 47ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ತಕ್ಷಣವೇ ಈ ಕಾನೂನಿನ ವ್ಯಾಖ್ಯಾನವನ್ನು ಬದಲಿಸಿರುವ ಡೊನಾಲ್ಡ್ ಟ್ರಂಪ್ ಅವರು, ಫೆ.20ರ ನಂತರ ಅಕ್ರಮ ವಲಸಿಗರಿಗೆ ಮತ್ತು ಅಮೆರಿಕದ ನಾಗರಿಕರಲ್ಲದವರಿಗೆ ಹುಟ್ಟುವ ಮಕ್ಕಳಿಗೆ ಪೌರತ್ವ ನೀಡಲಾಗದು ಎಂದು ಘೋಷಿಸಿದ್ದಾರೆ. ದೇಶದಲ್ಲಿ ಅಕ್ರಮವಾಗಿ ನೆಲಸಿರುವ  ಪೋಷಕರಿಗೆ ಹುಟ್ಟಿದ ಮಕ್ಕಳಿಗೆ ಮತ್ತು ತಾತ್ಕಾಲಿಕವಾಗಿ ಕಾನೂನುಬದ್ಧವಾಗಿ ಅಮೆರಿಕಕ್ಕೆ ಬಂದಿರುವವರಿಗೆ ದೇಶದಲ್ಲಿ ಹುಟ್ಟುವ ಮಕ್ಕಳಿಗೆ ಪೌರತ್ವವನ್ನು ಖಾತರಿಪಡಿಸುವಂಥ ದಾಖಲೆಗಳನ್ನು (ಸಾಮಾಜಿಕ ಭದ್ರತಾ ಕಾರ್ಡ್‌, ಪಾಸ್‌ಪೋರ್ಟ್) ವಿತರಿಸಬಾರದು ಎಂದು ಅಧಿಕಾರಿಗಳಿಗೆ ಟ್ರಂಪ್ ಕಾರ್ಯಾದೇಶ ಹೊರಡಿಸಿದ್ದಾರೆ. 

ಅಕ್ರಮ ವಲಸಿಗರೊಂದಿಗೆ ಅವರ ಮಕ್ಕಳನ್ನೂ (ಅಮೆರಿಕದಲ್ಲಿ ಹುಟ್ಟಿದ್ದರೂ) ದೇಶದಿಂದ ಹೊರಹಾಕಲು ತಾನು ಬಯಸುವುದಾಗಿ ಟ್ರಂಪ್ 2024ರ ಡಿಸೆಂಬರ್‌ನಲ್ಲಿ ಹೇಳಿದ್ದರು. ‘ನಾನು ಕುಟುಂಬಗಳನ್ನು ಒಡೆಯಲು ಪ್ರಯತ್ನಿಸುವುದಿಲ್ಲ. ಹಾಗಾಗಿ ಪೋಷಕರೊಂದಿಗೆ ಮಕ್ಕಳನ್ನೂ ದೇಶದಿಂದ ಹೊರಗೆ ಕಳಿಸುವುದು ನನಗಿರುವ ಏಕೈಕ ದಾರಿ’ ಎಂದಿದ್ದರು‌.

ADVERTISEMENT

ಅಮೆರಿಕ ಸಂವಿಧಾನಕ್ಕೆ 1865ರಲ್ಲಿ 13ನೇ ತಿದ್ದುಪಡಿಯನ್ನು ತಂದು, ಗುಲಾಮ ಪದ್ಧತಿಯನ್ನು ನಿಷೇಧಿಸಲಾಯಿತು. ಕ್ರೂರ ಪದ್ಧತಿಯಿಂದ ಮುಕ್ತರಾದ, ಅಮೆರಿಕದಲ್ಲಿ ಹುಟ್ಟಿದ ಮಾಜಿ ಗುಲಾಮರ ಪೌರತ್ವದ ಪ್ರಶ್ನೆ ಉದ್ಭವಿಸಿತು. ಅದಕ್ಕಾಗಿ, 1868ರಲ್ಲಿ ಅಮೆರಿಕದ ಸಂವಿಧಾನಕ್ಕೆ 14ನೇ ತಿದ್ದುಪಡಿ ತರಲಾಯಿತು. ಈ ತಿದ್ದುಪಡಿಯ ವ್ಯಾಪ್ತಿಗೆ ದೇಶದ ಪೌರತ್ವ ಪಡೆಯದ ಪೋಷಕರ ಮಕ್ಕಳೂ ಸೇರಲು ಕಾರಣವಾಗಿದ್ದು ವೊಂಗ್ ಕಿಮ್ ಆರ್ಕ್ ಎನ್ನುವ ಚೀನಾ ಮೂಲದ ವಲಸಿಗರ ಮಗ.

24 ವರ್ಷದ ವೊಂಗ್, ಚೀನಾದಿಂದ ಅಮೆರಿಕಕ್ಕೆ ವಲಸೆ ಹೋಗಿದ್ದ ಪೋಷಕರಿಗೆ ಅಮೆರಿಕದಲ್ಲೇ ಹುಟ್ಟಿದ ಮಗ. ಆತ ಒಮ್ಮೆ ಕಾರ್ಯನಿಮಿತ್ತ ಚೀನಾಕ್ಕೆ ಭೇಟಿ ನೀಡಿ ಮತ್ತೆ ಅಮೆರಿಕಕ್ಕೆ ವಾಪಸ್ ಹೋದಾಗ, ಅಲ್ಲಿನ ವಲಸೆ ಅಧಿಕಾರಿಗಳು ದೇಶದೊಳಗೆ ಪ್ರವೇಶ ಮಾಡಲು ಆತನಿಗೆ ಅನುಮತಿ ನೀಡಲಿಲ್ಲ. ಅದನ್ನು ಅಲ್ಲಿನ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ ವೊಂಗ್, ತಾನು ಅಮೆರಿಕದಲ್ಲಿಯೇ ಹುಟ್ಟಿರುವುದರಿಂದ, ಸಂವಿಧಾನದ 14ನೇ ತಿದ್ದುಪಡಿಯ ಅನ್ವಯ ತನ್ನ ಪೋಷಕರ ವಲಸೆ ಸ್ಥಿತಿಗತಿ ಮುಖ್ಯವಾಗುವುದಿಲ್ಲ ಎಂದು ವಾದ ಮಂಡಿಸಿದ. 1898ರ ವೊಂಗ್ ಕಿಮ್ ಆರ್ಕ್ ಮತ್ತು ಯುನೈಟೆಡ್ ಸ್ಟೇಟ್ಸ್ ಪ್ರಕರಣದಲ್ಲಿ ಸು‍ಪ್ರೀಂ ಕೋರ್ಟ್ ವಲಸಿಗರಿಗೆ ಹುಟ್ಟುವ ಮಕ್ಕಳಿಗೂ ಪೌರತ್ವ ನೀಡಬೇಕು ಎಂದು ತೀರ್ಪು ನೀಡಿತು. ಅಂದಿನಿಂದ ವಲಸಿಗರ ವರ್ಣ ಮತ್ತು ಪೋಷಕರ ವಲಸೆಯ ಸ್ಥಿತಿಗತಿಯನ್ನು ಪರಿಗಣಿಸದೆಯೇ ಅಮೆರಿಕದಲ್ಲಿ ಹುಟ್ಟುವ ಮಕ್ಕಳಿಗೆ ಪೌರತ್ವ ಸಿಗತೊಡಗಿತು.   

ಆದೇಶ ಜಾರಿ ಸುಲಭವಲ್ಲ

ಸುಮಾರು ಒಂದೂವರೆ ಶತಮಾನದಿಂದ ದೇಶದಲ್ಲಿ ಅಸ್ತಿತ್ವದಲ್ಲಿರುವ ಸಾಂವಿಧಾನಿಕ ನಿಯಮವನ್ನು ಟ್ರಂಪ್ ಅವರು ಆಡಳಿತಾತ್ಮಕ ಕ್ರಮದಿಂದ ರದ್ದುಪಡಿಸಲು ಹೊರಟಿದ್ದಾರೆ. ಆದರೆ, ಕಾರ್ಯಾದೇಶ ಹೊರಡಿಸುವ ಮೂಲಕವೇ ಹುಟ್ಟಿನಿಂದ ದತ್ತವಾಗುವ ಪೌರತ್ವವನ್ನು ರದ್ದುಪಡಿಸಲು ಸಾಧ್ಯವಿಲ್ಲ ಎನ್ನುವುದು ಅಲ್ಲಿನ ಸಂವಿಧಾನ ತಜ್ಞರ ಅಭಿಪ್ರಾಯ.

‘ಇದು ಅಮೆರಿಕದ ದೊಡ್ಡ ಸಂಖ್ಯೆಯ ಜನರ ಬದುಕಿನ ಮೇಲೆ ಪರಿಣಾಮ ಬೀರಲಿದೆ. ಆದರೆ, ಇದನ್ನು ಟ್ರಂಪ್ ಏಕಪಕ್ಷೀಯವಾಗಿ ನಿರ್ಧರಿಸಲು ಸಾಧ್ಯವಿಲ್ಲ. ಅಮೆರಿಕದ ಅಧ್ಯಕ್ಷರು ಪೌರತ್ವಕ್ಕೆ ಸಂಬಂಧಿಸಿದ ನಿಯಮವನ್ನು ಅತ್ಯಂತ ಸಂಕುಚಿತವಾಗಿ ವ್ಯಾಖ್ಯಾನಿಸಲು ತಮ್ಮ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಆದರೆ, ಪೌರತ್ವ ನಿರಾಕರಣೆಯು ಕಾನೂನಿನ ತೊಡಕುಗಳಿಗೆ ಕಾರಣವಾಗುತ್ತದೆ. ಅಂತಿಮವಾಗಿ, ಇದು ಸುಪ್ರೀಂ ಕೋರ್ಟ್‌ನಲ್ಲಿ  ತೀರ್ಮಾನವಾಗಬೇಕಾದ ವಿಚಾರ’ ಎನ್ನುವುದು ತಜ್ಞರ ನಿಲುವು. 

ಹುಟ್ಟಿನ ಮೂಲದ ಪೌರತ್ವ ನಿರಾಕರಣೆಗೆ ಕಾನೂನು ತಿದ್ದುಪಡಿಯ ಅಗತ್ಯವಿದೆ. ಅದಕ್ಕೆ ಸಂಸತ್‌ನ ಎರಡೂ ಸದನಗಳಲ್ಲಿ (ಜನಪ್ರತಿನಿಧಿ ಸಭೆ ಮತ್ತು ಸೆನೆಟ್‌) ಮೂರನೇ ಎರಡರಷ್ಟು ಬಹುಮತ ಅಗತ್ಯವಿದ್ದು, ಅಮೆರಿಕದ ರಾಜ್ಯಗಳ ಪೈಕಿ ಶೇ 75ರಷ್ಟು ರಾಜ್ಯಗಳು ಅದನ್ನು ಅನುಮೋದಿಸಬೇಕಾಗುತ್ತದೆ. 

2022ರ ಅಂಕಿಅಂಶದ ಪ್ರಕಾರ, ಅಮೆರಿಕದ 12 ಲಕ್ಷ ನಾಗರಿಕರು ಅಕ್ರಮ ವಲಸಿಗ ಪೋಷಕರಿಗೆ ಹುಟ್ಟಿದವರಾಗಿದ್ದಾರೆ. ಅವರ ಪೈಕಿ ಅನೇಕರು ಮದುವೆಯಾಗಿ, ಮಕ್ಕಳ ಪೋಷಕರಾಗಿದ್ದಾರೆ. ಈಗ ಹುಟ್ಟಿನ ಆಧಾರದಲ್ಲಿ ಪೌರತ್ವ ರದ್ದುಪಡಿಸುವ ನಿಯಮ ಜಾರಿ ಮಾಡಿದರೆ, 2050ರ ಹೊತ್ತಿಗೆ ಅಮೆರಿಕದಲ್ಲಿ ಅಕ್ರಮ ವಲಸಿಗರ ಸಂಖ್ಯೆಯು 47 ಲಕ್ಷಕ್ಕೆ ಏರಲಿದೆ ಎಂದು ‘ವಲಸೆ ನೀತಿ ಸಂಸ್ಥೆ’ ಎನ್ನುವ ಚಿಂತಕರ ಚಾವಡಿ ತಿಳಿಸಿದೆ. 

ವ್ಯಾಪಕ ವಿರೋಧ: ಟ್ರಂಪ್ ಪೌರತ್ವದ ಬಗೆಗಿನ ಹೊಸ ನಿಯಮ ಘೋಷಿಸಿದ ಕೂಡಲೇ ಅಮೆರಿಕದಲ್ಲೇ ಅದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ವಿರೋಧ ಪಕ್ಷವಾಗಿರುವ ಡೆಮಾಕ್ರಟಿಕ್ ಪಕ್ಷದ ಹಿಡಿತದಲ್ಲಿರುವ ರಾಜ್ಯಗಳ ನ್ಯಾಯಾಲಯಗಳಲ್ಲಿ ಇದನ್ನು ಪ್ರಶ್ನಿಸಿ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ. 22 ರಾಜ್ಯಗಳು, ಎರಡು ನಗರಗಳು ಮತ್ತು ಅನೇಕ ನಾಗರಿಕ ಸಂಘಟನೆಗಳು ನ್ಯಾಯಾಲಯದ ಮೊರೆ ಹೋಗಿವೆ.

ಈ ಪೈಕಿ ವಾಷಿಂಗ್ಟನ್, ಅರಿಜೋನಾ, ಇಲಿನಾಯ್ ಮತ್ತು ಒರೆಗಾನ್ ರಾಜ್ಯಗಳ ಮನವಿಗೆ ಸಂಬಂಧಿಸಿದಂತೆ ಸಿಯಾಟಲ್ ನ್ಯಾಯಾಲಯವು ವಿಚಾರಣೆ ನಡೆಸಿದ್ದು, ಕಾರ್ಯಾದೇಶಕ್ಕೆ 14 ದಿನಗಳ ತಡೆ ನೀಡಿದೆ. ಈ ಕಾರ್ಯಾದೇಶವು ತನಗೆ ಅಚ್ಚರಿ ಉಂಟುಮಾಡಿದೆ ಎಂದಿರುವ ನ್ಯಾಯಾಧೀಶರು, ಇದು ಸಂವಿಧಾನದ ನೇರ ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದು ಸುಪ್ರೀಂ ಕೋರ್ಟ್‌ನಲ್ಲಿ ಇತ್ಯರ್ಥವಾಗಲಿದೆ ಎಂದು ಸರ್ಕಾರದ ಪರ ವಕೀಲರು ಹೇಳಿದ್ದಾರೆ.  

ದೊಡ್ಡ ಸಂಖ್ಯೆಯ ಭಾರತೀಯರು ಕೂಡ ಅಲ್ಲಿ ಹುಟ್ಟಿದ ಕಾರಣಕ್ಕೆ ಅಮೆರಿಕದ ಪೌರತ್ವ ಪಡೆದಿದ್ದಾರೆ. ಭಾರತದಿಂದ ವಲಸೆ ಹೋಗಿ ಅಲ್ಲಿ ವಿವಿಧ ಉದ್ಯೋಗಗಳಲ್ಲಿ ನಿರತರಾಗಿರುವ 10 ಲಕ್ಷಕ್ಕೂ ಹೆಚ್ಚು ಮಂದಿ ಗ್ರೀನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿ ಕಾಯುತ್ತಿದ್ದು, ತಮಗೆ ಪೌರತ್ವ ಸಿಗದಿದ್ದರೂ ಇಲ್ಲಿ ಹುಟ್ಟುವ ತಮ್ಮ ಮಕ್ಕಳಿಗಾದರೂ ಸಿಗಲಿ ಎನ್ನುವ ಆಶಯದೊಂದಿಗೆ ಬದುಕುತ್ತಿದ್ದಾರೆ. ಅವರೆಲ್ಲ ಬದುಕು ಮತ್ತು ಕನಸಿಗೆ ಟ್ರಂಪ್ ಅವರ ನೀತಿಯಿಂದಾಗಿ ಕೊಳ್ಳಿ ಬಿದ್ದಂತಾಗಿದೆ.   

ಭಾರತೀಯರ ಮೇಲೆ ಪರಿಣಾಮ ಹೇಗೆ?

ಟ್ರಂಪ್‌ ಅವರು ಹೊರಡಿಸಿರುವ ಕಾರ್ಯಾದೇಶವು ಅಮೆರಿಕದಲ್ಲಿ ನೆಲಸಿರುವ ಅಕ್ರಮ ವಲಸಿಗರಿಗೆ ಮಾತ್ರ ಸೀಮಿತವಾಗಿಲ್ಲ. ಎಚ್‌1–ಬಿ/ಎಚ್‌2ಬಿ ವೀಸಾ, ವಿದ್ಯಾರ್ಥಿ/ಪ್ರವಾಸಿ ವೀಸಾದಂತಹ ವೀಸಾಗಳ ಮೂಲಕ ಅಮೆರಿಕದಲ್ಲಿ ತಾತ್ಕಾಲಿಕವಾಗಿ ಕಾನೂನುಬದ್ಧವಾಗಿ ನೆಲಸಿರುವವರಿಗೂ ಅನ್ವಯವಾಗುತ್ತದೆ. ಜಗತ್ತಿನ ವಿವಿಧ ದೇಶಗಳಿಂದ ಅಮೆರಿಕಕ್ಕೆ ಉದ್ಯೋಗ, ಉನ್ನತ ಶಿಕ್ಷಣದ ಉದ್ದೇಶಕ್ಕೆ ಲಕ್ಷಾಂತರ ಮಂದಿ ತೆರಳುತ್ತಾರೆ. ಇದರಲ್ಲಿ ಭಾರತೀಯರು ದೊಡ್ಡ ಸಂಖ್ಯೆಯಲ್ಲಿದ್ದಾರೆ. 

‘ಎಚ್‌1–ಬಿ’ ಯು ವಲಸೆಯೇತರ ವೀಸಾ ಆಗಿದ್ದು, ಅಮೆರಿಕದ ಕಂಪನಿಗಳಿಗೆ ಹೊರದೇಶಗಳ ಪರಿಣತ ವೃತ್ತಿಪರರಿಗೆ ಅಮೆರಿಕದಲ್ಲಿ ಕೆಲಸ ನೀಡಲು ಅವಕಾಶ ನೀಡುತ್ತದೆ. ಈ ವೀಸಾದ ಅಡಿಯಲ್ಲಿ ಅಮೆರಿಕಕ್ಕೆ ತೆರಳುವವರಲ್ಲಿ ಭಾರತೀಯರೇ ಮುಂದೆ ಇದ್ದಾರೆ. ಭಾರತದ ಎಂಜಿನಿಯರ್‌ಗಳು ಹಾಗೂ ಇತರ ಕ್ಷೇತ್ರಗಳ ತಜ್ಞರನ್ನು ತಂತ್ರಜ್ಞಾನ ಹಾಗೂ ಇತರ ಕಂಪನಿಗಳು ಕರೆಸಿಕೊಳ್ಳುತ್ತವೆ.

ಎಚ್‌1– ಬಿ ವೀಸಾಗಳಲ್ಲಿ ಶೇ 72ರಷ್ಟನ್ನು ಭಾರತದವರೇ ಪಡೆಯುತ್ತಿದ್ದಾರೆ. ಚೀನಾದ ನಾಗರಿಕರು ಶೇ 12ರಷ್ಟು ಪಡೆಯುತ್ತಿದ್ದಾರೆ. ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್‌ ಮತ್ತು ಗಣಿತ ಕ್ಷೇತ್ರಗಳಲ್ಲಿ ದುಡಿಯುವವರು ಈ ವೀಸಾವನ್ನು ಪಡೆಯುತ್ತಿದ್ದಾರೆ. ಕಂಪ್ಯೂಟರ್‌ಗೆ ಸಂಬಂಧಿಸಿದ ಉದ್ಯೋಗದಲ್ಲಿರುವ ಶೇ 65ರಷ್ಟು ಮಂದಿ ಈ ವೀಸಾದ ಫಲಾನುಭವಿಗಳು.  

ಕಳೆದ ವರ್ಷದ ಏಪ್ರಿಲ್‌ನಿಂದ ಸೆಪ್ಟೆಂಬರ್‌ ನಡುವಿನ ಅವಧಿಯಲ್ಲಿ ಅಮೆರಿಕ 1.3 ಲಕ್ಷ ಎಚ್‌1ಬಿ ವೀಸಾ ವಿತರಿಸಿತ್ತು. ಈ ಪೈಕಿ 24,766 ವೀಸಾಗಳನ್ನು ಭಾರತದ ತಂತ್ರಜ್ಞಾನ ಕಂಪನಿಗಳೇ ಪಡೆದಿದ್ದವು. ಇನ್ಫೊಸಿಸ್‌ಗೆ 8,140 ವೀಸಾಗಳನ್ನು ನೀಡಿದ್ದರೆ, ಟಿಸಿಎಸ್‌ 5,274 ವೀಸಾ ಪಡೆದಿತ್ತು. 

ವೃತ್ತಿಪರರಲ್ಲದೆ, ಭಾರತದ ಯುವಕರು ದೊಡ್ಡ ಸಂಖ್ಯೆಯಲ್ಲಿ ಉನ್ನತ ಶಿಕ್ಷಣ ಪಡೆಯುವುದಕ್ಕಾಗಿ ಅಮೆರಿಕಕ್ಕೆ ತೆರಳುತ್ತಾರೆ. ಓಪನ್‌ ಡೋರ್ಸ್‌ ವರದಿ ಪ್ರಕಾರ, 2023–24ರಲ್ಲಿ ಭಾರತದ 3.30 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಮೆರಿಕದಲ್ಲಿ ಶಿಕ್ಷಣ ಪಡೆಯುತ್ತಿದ್ದರು. 

ಇಲ್ಲಿಯವರೆಗೂ ಎಚ್‌1–ಬಿ ವೀಸಾ, ವಿದ್ಯಾರ್ಥಿ ವೀಸಾ ಸೇರಿದಂತೆ ಇತರ ವೀಸಾಗಳ ಅಡಿಯಲ್ಲಿ ಅಮೆರಿಕಕ್ಕೆ ತೆರಳಿದ ಭಾರತೀಯರಿಗೆ ಅಲ್ಲಿ ಮಗು ಜನಿಸಿದರೆ, ಆ ಮಗುವಿಗೆ ಅಮೆರಿಕದ ಪೌರತ್ವ ಸಿಗುತ್ತಿತ್ತು. ಹೊಸ ಕಾರ್ಯಾದೇಶದ ಪ್ರಕಾರ, ಇನ್ನು ಮುಂದೆ ಅಮೆರಿಕದ ಅಧಿಕೃತ ಪೌರತ್ವ ಹೊಂದಿಲ್ಲದ ಭಾರತೀಯರಿಗೆ ಅಲ್ಲಿ ಮಗು ಜನಿಸಿದರೆ, ಆ ಮಗು ಅಮೆರಿಕದ ಪ್ರಜೆಯಾಗುವುದಿಲ್ಲ. ಅಲ್ಲಿನ ಶಾಶ್ವತ ಪೌರತ್ವ ಪಡೆಯಲು ಗ್ರೀನ್ ಕಾರ್ಡ್‌ಗಾಗಿಯೇ ಅವರು ಕಾಯಬೇಕಾಗುತ್ತದೆ (ಸದ್ಯ 10 ಲಕ್ಷಕ್ಕೂ ಹೆಚ್ಚು ಭಾರತೀಯರು ಗ್ರೀನ್ ಕಾರ್ಡ್‌ಗಾಗಿ ಅರ್ಜಿ ಹಾಕಿ ಕಾಯುತ್ತಿದ್ದಾರೆ).  

ಇಲ್ಲಿಯವರೆಗೂ ಅಮೆರಿಕದಲ್ಲಿ ಹುಟ್ಟಿದ ವ್ಯಕ್ತಿಗೆ 21 ವರ್ಷ ಆದ ಬಳಿಕ, ಪೋಷಕರು ಆತ/ಆಕೆಯೊಂದಿಗೆ ನೆಲಸಿದ್ದರೆ ಪೋಷಕರಿಗೂ ಅಮೆರಿಕ ಪೌರತ್ವ ಸಿಗುತ್ತಿತ್ತು. ಈ ನೀತಿಯಿಂದಾಗಿ ಗ್ರೀನ್ ಕಾರ್ಡ್‌ಗಾಗಿ ವರ್ಷಾನುಗಟ್ಟಲೆ ಕಾದರೂ ಕಾರ್ಡ್‌ ಸಿಗದ ಭಾರತೀಯರು ಅಮೆರಿಕದ ಪ್ರಜೆಗಳಾಗುತ್ತಿದ್ದರು. ಅಕ್ರಮವಾಗಿ ಅಮೆರಿಕ ಪ್ರವೇಶಿಸಿದವರು ಕೂಡ ಮಕ್ಕಳ ಪೌರತ್ವದ ಕಾರಣದಿಂದ ಅಮೆರಿಕದ ಪೌರತ್ವ ಹೊಂದುತ್ತಿದ್ದರು. ಆದರೆ, ಇನ್ನು ಮುಂದೆ ಅದಕ್ಕೂ ಅವಕಾಶ ಇಲ್ಲ. 

ಜನನ ಪ್ರವಾಸೋದ್ಯಮ

ಮಕ್ಕಳಿಗೆ ಅಮೆರಿಕದ ಪೌರತ್ವ ಸಿಗಬೇಕು ಎಂಬ ಉದ್ದೇಶದಿಂದ ಗರ್ಭಿಣಿಯರು ಅಮೆರಿಕಕ್ಕೆ ತೆರಳಿ ಅಲ್ಲಿ ಮಗುವಿಗೆ ಜನ್ಮ ನೀಡುವ ರೂಢಿಯೂ ಚಾಲ್ತಿಯಲ್ಲಿದ್ದು, ಇದನ್ನು ‘ಜನನ ಪ್ರವಾಸೋದ್ಯಮ’ ಎಂದು ಕರೆಯಲಾಗಿದೆ. ಈ ಕಾರಣಕ್ಕೆ ಅಮೆರಿಕಕ್ಕೆ ಬರುವವರಿಗೆ ಪೌರತ್ವ ನೀಡಬಾರದು ಎಂಬುದು ಟ್ರಂಪ್‌ ನಿಲುವು.

ಆಧಾರ: ಪಿಟಿಐ, ಬಿಬಿಸಿ, ಪ್ಯೂ ರಿಸರ್ಚ್ ವರದಿ, ನ್ಯೂಯಾರ್ಕ್ ಟೈಮ್ಸ್, ರಾಯಿಟರ್ಸ್

ಅಕ್ರಮ ಮಾರ್ಗದಲ್ಲಿ ಅಮೆರಿಕದತ್ತ ಸಾಗುತ್ತಿರುವ ವಲಸಿಗರು

ವೀಸಾ ನಿಯಂತ್ರಣದಿಂದಲೂ ಹೊಡೆತ

ಪೌರತ್ವ ಕಾರ್ಯಾದೇಶ ಒಂದೆಡೆಯಾದರೆ, ಟ್ರಂಪ್ ಅವರು ಎಚ್‌1–ಬಿ ವೀಸಾದ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಲು ಹೊರಟಿರುವುದು ಕೂಡ ಭಾರತೀಯರಿಗೆ ಹಿನ್ನಡೆ ತರಲಿದೆ. 

‌ಅಮೆರಿಕದ ಕಂಪನಿಗಳು ಹೊರದೇಶಗಳ ತಂತ್ರಜ್ಞರಿಗೆ ಉದ್ಯೋಗ ನೀಡುವುದರ ವಿರುದ್ಧವಾದ ನಿಲುವನ್ನು ಟ್ರಂಪ್‌ ಹೊಂದಿದ್ದಾರೆ. ಹೊರದೇಶದವರು ಅಮೆರಿಕದ ಉದ್ಯೋಗಗಳನ್ನು ಕಸಿದುಕೊಳ್ಳುತ್ತಿದ್ದಾರೆ. ಕಂಪನಿಗಳು ಸ್ಥಳೀಯ ಪ್ರತಿಭಾವಂತರನ್ನೇ ನೇಮಿಸಿಕೊಳ್ಳಬೇಕು ಎಂಬ ಮಾತನ್ನು ಬಹಿರಂಗವಾಗಿಯೇ ಹೇಳಿದ್ದಾರೆ. ಇದಕ್ಕೆ ಎಲಾನ್‌ ಮಸ್ಕ್ ಸೇರಿದಂತೆ ಅಲ್ಲಿನ ಹಲವು ಉದ್ಯಮಿಗಳು, ಭಾರತ ಮೂಲದ ಜನಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಟ್ರಂಪ್‌ ಪಟ್ಟು ಹಿಡಿದು ವೀಸಾ ನಿಯಮಗಳನ್ನು ಬಿಗಿಗೊಳಿಸಿದರೆ, ಅಮೆರಿಕಕ್ಕೆ ತೆರಳಿ ಅಲ್ಲಿ ಉದ್ಯೋಗ ಮಾಡುವ, ನೆಲಸುವ ಸಾವಿರಾರು ಭಾರತೀಯರ ಕನಸಿಗೆ ಧಕ್ಕೆ ಉಂಟಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.