ಡೋಪಿಂಗ್
ತಮಿಳುನಾಡಿನ ಗುಂಡೂರಿನ ಧನಲಕ್ಷ್ಮೀ ಶೇಖರ್ ಬಡತನದ ಬೇಗೆಯಲ್ಲಿ ಬೆಂದ ಕುಟುಂಬದಲ್ಲಿ ಅರಳಿದ ಅಥ್ಲೀಟ್. ಬಾಲ್ಯದಲ್ಲಿಯೇ ಪಿತೃವಿಯೋಗದ ನೋವು ಅನುಭವಿಸಿದ ಹುಡುಗಿ. ಅವರ ತಾಯಿ ಬೇರೆಯವರ ಮನೆಗಳಲ್ಲಿ ಕಸಮುಸುರೆ ಕೆಲಸ ಮಾಡಿ ಕುಟುಂಬದ ಪೋಷಣೆ ಮಾಡಿದ್ದರು. ಅದೆಷ್ಟೋ ರಾತ್ರಿ ಉಪವಾಸ ಮಲಗಿದ್ದರೂ ಧನಲಕ್ಷ್ಮೀಯ ಕಾಲುಗಳಲ್ಲಿ ಅಪಾರ ಶಕ್ತಿ ಇತ್ತು. ಗಟ್ಟಿ ಮನೋಬಲವಿತ್ತು. ಅದಕ್ಕಾಗಿ 100ಮೀ. ಮತ್ತು 200 ಮೀ. ಓಟಗಳಲ್ಲಿ ಜಿಂಕೆಯಂತೆ ಓಡುತ್ತಿದ್ದರು. ಶಾಲೆಯ ಕೂಟಗಳು ಮತ್ತು ಸ್ಥಳೀಯ ಕ್ರೀಡಾಕೂಟಗಳಲ್ಲಿ ಬಹುಬೇಗ ಹೆಸರು ಮಾಡಿದರು. ಮಣಿಕಂಠನ್ ಆರ್ಮುಗಂ ಕೋಚಿಂಗ್‌ನಲ್ಲಿ ಬೆಳೆದರು. ಅವರ ಅದೃಷ್ಟಕ್ಕೆ 2020ರ ಟೋಕಿಯೊ ಒಲಿಂಪಿಕ್ ಕೂಟದಲ್ಲಿ ಭಾರತ ರಿಲೆ ತಂಡವನ್ನು ಪ್ರತಿನಿಧಿಸುವ ಅವಕಾಶವೂ ದೊರೆಯಿತು. 2021ರಲ್ಲಿ ಫೆಡರೇಷನ್ ಕಪ್ ಕೂಟದ 200 ಮೀ. ಓಟದಲ್ಲಿ ದ್ಯುತಿ ಚಾಂದ್ ಮತ್ತು ಹಿಮಾ ದಾಸ್ ಅವರನ್ನು ಹಿಂದಿಕ್ಕಿ ಸುದ್ದಿ ಮಾಡಿದರು. ಇಲ್ಲಿಯವರೆಗೆ ಎಲ್ಲವೂ ಸರಿಯಿತ್ತು.
ಆದರೆ 2022ರಲ್ಲಿ ಅವರು ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ಸಿಕ್ಕಿಬಿದ್ದರು. ಮೂರು ವರ್ಷ ವಾಡಾದಿಂದ (ವಿಶ್ವ ಉದ್ದೀಪನ ಮದ್ದು ತಡೆ ಸಂಸ್ಥೆ) ಅಮಾನತು ಶಿಕ್ಷೆಗೊಳಗಾದರು. ಹೋದ ವರ್ಷ ಶಿಕ್ಷೆ ಮುಗಿಸಿ ಬಂದರು. ರಾಷ್ಟ್ರೀಯ ಕೂಟದಲ್ಲಿ 100 ಮೀ ಓಟದಲ್ಲಿ 11.36 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಆದರೆ ಈಚೆಗಷ್ಟೇ ನಿಷೇಧಿತ ಉದ್ದೀಪನ ಮದ್ದು ‘ಡ್ರಾಸ್ಟಾನೊಲೊನ್’ ಸೇವನೆ ಮಾಡಿದ್ದು ಸಾಬೀತಾಗಿ ಮತ್ತೆ 8 ವರ್ಷಗಳಿಗೆ ಅಮಾನತುಗೊಂಡರು. ಅಲ್ಲಿಗೆ ಅವರ ವೃತ್ತಿಜೀವನವೇ ಮುಗಿದಂತಾಯಿತಲ್ಲವೇ?
***
15 ವರ್ಷಗಳ ಹಿಂದೆ ಧಾರವಾಡ ಜಿಲ್ಲೆಯಲ್ಲಿ ಒಬ್ಬ ದೇಹದಾರ್ಢ್ಯಪಟು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ಹತ್ತಾರು ಪ್ರಶಸ್ತಿ, ಪದಕಗಳು ಅವರಿಗೆ ಒಲಿದಿದ್ದವು. ಒಳ್ಳೆಯ ಸರ್ಕಾರಿ ನೌಕರಿಯೂ ಸಿಕ್ಕಿತ್ತು. ಜೀವನದಲ್ಲಿ ಎಲ್ಲವೂ ಸುಖಮಯವಾಗಿ ನಡೆಯುವ ಸಂಭ್ರಮವೂ ಮನೆಮಾಡಿತ್ತು. ಆದರೆ ಕ್ರಮೇಣ ಆರೋಗ್ಯದಲ್ಲಿ ಏರುಪೇರುಗಳು ಶುರುವಾದವು. ಎದೆಯ ಮಾಂಸಖಂಡಗಳಲ್ಲಿ ಹಾಲಿನ ಗ್ರಂಥಿಗಳು ಕುಡಿಯೊಡೆದವು. ಜೀರ್ಣಶಕ್ತಿ ಏರುಪೇರಾಯಿತು. ಧ್ವನಿ ಬದಲಾಗತೊಡಗಿತು. ಗಾಬರಿಯಿಂದ ವೈದ್ಯರ ಬಳಿ ಓಡಿದರು. ತಪಾಸಣೆಯಿಂದ ಹೊರಬಂದ ಸತ್ಯ ಮೈನಡುಗಿಸುವಂತದ್ದು. ದೇಹದಾರ್ಢ್ಯ ಅಭ್ಯಾಸದ ಸಂದರ್ಭದಲ್ಲಿ ಸೇವಿಸಿದ ನಿಷೇಧಿತ ಮದ್ದುಗಳ ಅಡ್ಡಪರಿಣಾಮದ ಫಲವಾಗಿ ಆರೋಗ್ಯ ಕೈಕೊಟ್ಟಿತ್ತು. ಇಡೀ ಜೀವನ ಔಷಧೋಪಚಾರದಲ್ಲಿಯೇ ಇರುವ ಅನಿವಾರ್ಯ ಬಂದೊದಗಿತು.
***
ಈ ಉದಾಹರಣೆಗಳು ಉದ್ದೀಪನ ಮದ್ದು ಪಿಡುಗಿನ ಎರಡು ಮುಖಗಳಷ್ಟೇ. ಆದರೆ ಡೋಪಿಂಗ್‌ಗೆ ಹಲವಾರು ಕರಾಳ ಮುಖಗಳಿವೆ. ಕ್ರೀಡಾಪಟುವಿನ ವೃತ್ತಿ ಮತ್ತು ವೈಯಕ್ತಿಕ ಜೀವನವನ್ನು ನುಂಗಿಹಾಕುವ ರಾಕ್ಷಸನಂತಿದೆ. ಕ್ರೀಡಾಳುಗಳು ಪಟ್ಟ ಪರಿಶ್ರಮ, ದೇಶದ ಕ್ರೀಡಾವಲಯವು ಇಟ್ಟ ವಿಶ್ವಾಸ ಮತ್ತು ಅವರ ಮೇಲೆ ವಿನಿಯೋಗಿಸಿದ ಸಂಪನ್ಮೂಲಗಳೆಲ್ಲವೂ ವ್ಯರ್ಥವಾಯಿತು. ಇವತ್ತಿಗೂ ಕ್ರೀಡಾಪಟುಗಳಲ್ಲಿ ಕಾಣದ ಕೈಗಳು ಮಾಡಿದ ಹುನ್ನಾರವೇ ಅಥವಾ ವ್ಯವಸ್ಥೆಯ ಲೋಪವೇ ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ. ಉತ್ತರ ಹುಡುಕುತ್ತ ಹೋದರೆ. ಈ ಎಲ್ಲವೂ ಇವೆ.
ನೂರಾರು ಅಥ್ಲೀಟ್‌ಗಳು ಈ ಪಿಡುಗಿಗೆ ಬಲಿಯಾಗುತ್ತಲೇ ಇದ್ದಾರೆ. ಸತತ ನಾಲ್ಕು ವರ್ಷಗಳಿಂದ ವಿಶ್ವದಲ್ಲಿಯೇ ಹೆಚ್ಚು ಡೋಪಿಂಗ್ ಪ್ರಕರಣಗಳು ಪತ್ತೆಯಾದ ದೇಶಗಳ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. 2024ರ ಡೋಪಿಂಗ್ ಪರೀಕ್ಷೆಯ ವರದಿ ಕಳೆದ ತಿಂಗಳು ಬಂದಿದ್ದು, ಭಾರತದಲ್ಲಿ ಉದ್ದೀಪನ ಮದ್ದು ಸೇವನೆ ಪ್ರಮಾಣ ಶೇ 3.6ರಷ್ಟು ದಾಖಲಾಗಿದೆ.
ಈ ವರ್ಷ ಜಪಾನಿನಲ್ಲಿ ಏಷ್ಯನ್ ಕ್ರೀಡಾಕೂಟ ನಡೆಯಲಿದೆ. ಆದ್ದರಿಂದ ಭಾರತ ತಂಡವನ್ನು ಸಿದ್ಧಗೊಳಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಈ ಹೊತ್ತಿನಲ್ಲಿ ಇಂತಹ ಪ್ರಕರಣಗಳು ವರದಿಯಾಗುತ್ತಿರುವುದು ಆತಂಕದ ವಿಷಯ. ಅಲ್ಲದೇ 2030ರಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಆತಿಥ್ಯಕ್ಕೂ ಭಾರತ ಸಿದ್ಧತೆ ಮಾಡಿಕೊಳ್ಳುತ್ತಿದೆ. 2036ರ ಒಲಿಂಪಿಕ್ ಕೂಟದ ಆಯೋಜನೆಗೂ ಭಾರತ ಬಿಡ್ ಪಡೆಯಲು ಪ್ರಯತ್ನಿಸುತ್ತಿದೆ. ಇಂತಹ ಸಂದರ್ಭದಲ್ಲಿ ಡೋಪಿಂಗ್ ನಿಯಂತ್ರಣ ಮಾಡದೇ ಹೋದರೆ ದೊಡ್ಡ ಹಿನ್ನಡೆ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗ ಅನುಭವಿಸುವ ಅಪಾಯವಿದೆಯಲ್ಲವೇ?
ಅದಕ್ಕಾಗಿಯೇ ಹೋದ ವರ್ಷ ಡೋಪಿಂಗ್ ತಡೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರವು ಮಸೂದೆಯನ್ನು ಕೂಡ ಮಂಡಿಸಿದೆ. ಆದರೆ ಇನ್ನೂ ಪೂರ್ಣವಾಗಿ ಕಾರ್ಯಗತಗೊಂಡಿಲ್ಲ. ಈ ಪಿಡುಗು ಸುಲಭಕ್ಕೆ ನಿಯಂತ್ರಣಕ್ಕೆ ಬರುವಂತೆ ಕಾಣುತ್ತಿಲ್ಲವೆಂಬುದನ್ನು ಅಂಕಿ ಸಂಖ್ಯೆಗಳೇ ಸಾಬೀತು ಮಾಡುತ್ತವೆ. ಹಾಗಿದ್ದರೆ ವರ್ಷದಿಂದ ವರ್ಷಕ್ಕೆ ಪ್ರಕರಣಗಳು ಹೆಚ್ಚಾಗಲು ಕಾರಣಗಳೇನು?
‘ಮೂಲತಃ ಕ್ರೀಡಾಪಟುಗಳಲ್ಲಿ ನಿಷೇಧಿತ ಮದ್ದುಗಳ ಕುರಿತ ಅರಿವು ಕಡಿಮೆ. ಪ್ರೌಢಶಾಲೆ ಮಟ್ಟದಿಂದಲೇ ಈ ಕುರಿತು ಜಾಗೃತಿ ಆರಂಭವಾಗಬೇಕು. ಎಲ್ಲಕ್ಕಿಂತ ಮುಖ್ಯವಾಗಿ ದೈಹಿಕ ಶಿಕ್ಷಣ ಶಿಕ್ಷಕರಿಗೆ ಅರಿವು ಮೂಡಿಸಬೇಕು. ಅವರ ಮೂಲಕ ಮಕ್ಕಳಿಗೆ ಶಿಕ್ಷಣ ನೀಡಬೇಕು. ಇವತ್ತು ಭಾರತದಲ್ಲಿ ಕ್ರೀಡಾರಂಗ ಅಪಾರವಾಗಿ ಬೆಳೆಯುತ್ತಿದೆ. ದುಡ್ಡು, ಸೌಲಭ್ಯಗಳು ಮತ್ತು ನೌಕರಿಗಳ ಅವಕಾಶಗಳೂ ಹೆಚ್ಚುತ್ತಿವೆ. ಆದ್ದರಿಂದ ಅಡ್ಡಹಾದಿಯ ಮೂಲಕ ಯಶಸ್ಸು ಸಾಧಿಸುವ ದುರಾಸೆಗೆ ಮಕ್ಕಳು ಬಲಿಯಾಗುತ್ತಿದ್ದಾರೆ. ಮದ್ದು ಪರೀಕ್ಷಾ ವಿಧಾನಗಳು ಬಹಳ ಮುಂದುವರಿದಿವೆ. ತಂತ್ರಜ್ಞಾನ ಬಹಳಷ್ಟು ಸುಧಾರಣೆಯಾಗಿದೆ. ಯಾವುದೇ ನಿಷೇಧಿತ ಮದ್ದು ಸೇವನೆ ಮಾಡಿದರೂ ಒಂದಿಲ್ಲೊಂದು ಹಂತದಲ್ಲಿ ಸಿಕ್ಕಿಬೀಳುವುದು ಖಚಿತ. ಮದ್ದು ತೆಗೆದುಕೊಂಡು ಗೆದ್ದ ನಂತರ ಸಿಕ್ಕಿಹಾಕಿಕೊಂಡು ಗೌರವ ಮತ್ತು ಪದಕ ಕಳೆದುಕೊಳ್ಳುವುದಕ್ಕಿಂತ ಸೋಲುವುದೇ ಮೇಲು ಎಂಬ ತಿಳಿವಳಿಕೆ ಮೂಡಬೇಕು’ ಎಂದು ಫಿಫಾ ಮತ್ತು ಏಷ್ಯಾ ಫುಟ್‌ಬಾಲ್ ಕಾನ್ಫೆಡರೇಷನ್ (ಎಎಫ್‌ಸಿ) ಡೋಪಿಂಗ್ ನಿಯಂತ್ರಣ ಅಧಿಕಾರಿ ಹಾಗೂ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ ವೈದ್ಯಕೀಯ ಸಮಿತಿ ಮುಖ್ಯಸ್ಥ ಡಾ. ಕಿರಣ ಕುಲಕರ್ಣಿ ಹೇಳುತ್ತಾರೆ.
ಭಾರತದಲ್ಲಿ ಇಂದಿಗೂ ಬಹುತೇಕ ಕ್ರೀಡೆಗಳಿಗೆ ಗ್ರಾಮಾಂತರ ಪ್ರದೇಶಗಳಿಂದ ಬರುತ್ತಾರೆ. ಅವರಿಗೆ ಸಾಧನೆ ಮಾಡುವ ಗುರಿ, ಸಾಮರ್ಥ್ಯ ಮತ್ತು ಛಲ ಇರುತ್ತದೆ. ಆದರೆ ಕ್ರೀಡಾಪಟುಗಳು ಸೇವಿಸಬೇಕಾದ ಆಹಾರ, ಅನಾರೋಗ್ಯದಲ್ಲಿ ಬಳಸಬೇಕಾದ ಔಷಧಿಗಳ ಕುರಿತು ಅರಿವು ಇರುವುದಿಲ್ಲ. ತಮ್ಮೊಂದಿಗೆ ಇರುವ ಹಿರಿಯರು ಅಥವಾ ಇನ್ನಾರದೋ ಮಾತು ಕೇಳಿ ತಪ್ಪುದಾರಿ ತುಳಿಯುವವರೇ ಹೆಚ್ಚು. ಆದ್ದರಿಂದ ಪ್ರತಿಯೊಂದು ಹಂತದಲ್ಲಿಯೂ ಕೋಚ್‌ಗಳು, ಕ್ರೀಡಾಪಟುಗಳು ಮತ್ತು ಆಯೋಜಕರಿಗೆ ತಿಳಿವಳಿಕೆ ಕೊಡಬೇಕಿದೆ.
ತಮ್ಮ ಬಳಿ ಬರುವ ಬಹಳಷ್ಟು ಕ್ರೀಡಾಪಟುಗಳಿಗೆ ಇವತ್ತಿಗೂ ನಾಡಾ, ಫೆಡರೇಷನ್‌ಗಳಿಂದ ಬಂದ ಇಮೇಲ್‌ಗಳನ್ನು ಓದಿ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಇಲ್ಲ. ಅಂತಹ ಮಕ್ಕಳಿಗೆ ಶಿಕ್ಷಣ ನೀಡುವುದು ಮುಖ್ಯವಾಗುತ್ತದೆ ಎಂದೂ ವೈದ್ಯರು ಪ್ರತಿಪಾದಿಸುತ್ತಾರೆ.
ಬುಧವಾರ ಮುಂಬೈನಲ್ಲಿ ಉದ್ದೀಪನ ಮದ್ದು ತಡೆಗೆ ಸಂಬಂಧಿಸಿದ ಕಾರ್ಯಾಗಾರದಲ್ಲಿಯೂ ವಾಡಾ ಹೊಸದಾಗಿ ಕೆಲವು ನಿಷೇಧಿತ ಮದ್ದುಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರ ತಿಳಿವಳಿಕೆ ತಳಮಟ್ಟದವರೆಗೂ ಮುಟ್ಟಬೇಕು. ಆದರೆ ಭಾರತದ ವ್ಯವಸ್ಥೆಯಲ್ಲಿ ಇದು ಸುಲಭ ಸಾಧ್ಯವಲ್ಲ?
ಈ ಹಿಂದೆ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕದ ಕಾರ್ಯನಿರ್ವಹಣೆ ಕುರಿತು ವಾಡಾ ಚಾಟಿಯನ್ನೂ ಬೀಸಿತ್ತು. ಕೆಲವು ತಿಂಗಳು ನಿಷೇಧ ಕೂಡ ಹೇರಿತ್ತು.
ಇಲಾಖೆಗಳ ನಡುವಣ ಸಮನ್ವಯ ಕೂಡ ಕಷ್ಟ. ಈಚೆಗೆ ಟಾಪ್ಸ್‌ಗೆ (ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಯೋಜನೆ) ಆಯ್ಕೆ ಪ್ರಕ್ರಿಯೆ ನಡೆಯಿತು. ಆ ಪಟ್ಟಿಯಲ್ಲಿ ಕುಸ್ತಿಪಟು ರಿತೀಕಾ ಹೂಡಾ ಅವರು ಇದ್ದರು. ಈಚೆಗೆ ಉದ್ದೀಪನ ಮದ್ದು ಪ್ರಕರಣದಲ್ಲಿ ಅಮಾನತಾಗಿರುವ ಕುಸ್ತಿಪಟು ಅವರು. ಅವರು ಟಾಪ್ಸ್ ಸೌಲಭ್ಯ ಪಡೆಯಲು ಹೇಗೆ ಅರ್ಹರಾಗುತ್ತಾರೆ? ಆದರೂ ಅವರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ನಂತರ ಅವರನ್ನು ಅನರ್ಹಗೊಳಿಸಲಾಯಿತು. ಇದು ಫೆಡರೇಷನ್‌ಗಳ ಕಾರ್ಯವೈಖರಿಗೆ ಹಿಡಿದ ಕನ್ನಡಿ.
ರಾಜ್ಯ ಸಂಸ್ಥೆಗಳು, ಫೆಡರೇಷನ್, ಭಾರತ ಕ್ರೀಡಾ ಪ್ರಾಧಿಕಾರ ಮತ್ತು ಕೇಂದ್ರ ಕ್ರೀಡಾ ಸಚಿವಾಲಯಗಳು ಒಟ್ಟಾಗಿ ಕಾರ್ಯನಿರ್ವಹಿಸಿದರೆ ಡೋಪಿಂಗ್ ಪಿಡುಗಿಗೆ ಕಡಿವಾಣ ಹಾಕಲು ಸಾಧ್ಯವಾಗಬಹುದು. ಇಲ್ಲದಿದ್ದರೆ ಸಾಧನೆಯ ಶಿಖರದಲ್ಲಿ ಮೆರೆಯಬೇಕಾದ ಪ್ರತಿಭೆಗಳು ಮಣ್ಣುಪಾಲಾಗುತ್ತವೆ. ದೇಶದ ಕ್ರೀಡಾ ವ್ಯವಸ್ಥೆ ನಲುಗುತ್ತದೆಯಲ್ಲವೇ?
ಭಾರತವು ಜಾಗತಿಕ ಮಟ್ಟದಲ್ಲಿ ಕ್ರೀಡೆಯ ಶಕ್ತಿ ಕೇಂದ್ರವಾಗಿದೆ. ನಮ್ಮ ಕ್ರೀಡಾಪಟುಗಳು ಅಡೆತಡೆಗಳನ್ನು ಮೀರಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಪಡೆದಿದ್ದಾರೆ ಮತ್ತು ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದ್ದಾರೆ. ಆದರೆ ಉದ್ದೀಪನ ಮದ್ದಿನ ಬಳಕೆಯು ನ್ಯಾಯಯುತ ಆಟ, ಕ್ರೀಡಾಳುಗಳ ಆರೋಗ್ಯ ಮತ್ತು ದೇಶದ ಘನತೆಯ ಮೇಲೆ ಪರಿಣಾಮ ಬೀರುತ್ತದೆ. ನಿಷೇಧಿತ ಉದ್ದೀಪನ ಮದ್ದು ಸೇವನೆಯನ್ನು ಪತ್ತೆ ಮಾಡುವ ಉತ್ತಮ ಗುಣಮಟ್ಟದ ಕಿಟ್‌ಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಇದರಿಂದಾಗಿ ಅಧಿಕ ವೆಚ್ಚ, ಪರೀಕ್ಷೆಯಲ್ಲಿ ವಿಳಂಬ ಮತ್ತು ಇತರ ಏಜೆನ್ಸಿಗಳ ಮೇಲೆ ಅವಲಂಬಿತರಾಗಬೇಕಾಗುತ್ತದೆ. ಕಿಟ್‌ಗಳು ಅಗ್ಗವಾದರೆ ತಳಮಟ್ಟದ ಕ್ರೀಡಾಕೂಟಗಳಿಂದ ಬಳಕೆಗೆ ಅನುಕೂಲವಾಗಬಹುದು.ಪಿ.ಟಿ. ಉಷಾ, ಭಾರತ ಒಲಿಂಪಿಕ್ ಸಂಸ್ಥೆ ಅಧ್ಯಕ್ಷೆ
ವಾಡಾವು ಪ್ರತಿಯೊಂದು ದೇಶಕ್ಕೂ ಒಂದೇ ಅಂತರರಾಷ್ಟ್ರೀಯ ಪ್ರಯೋಗಾಲಯ ಮಂಜೂರು ಮಾಡುತ್ತದೆ. ನಮ್ಮ ದೇಶದ ಪ್ರಯೋಗಾಲಯ ಚೆನ್ನಾಗಿದೆ. ಇಷ್ಟು ಪ್ರಕರಣಗಳು ವರದಿಯಾಗುತ್ತಿವೆ ಎಂದರೆ, ಅಷ್ಟು ಪರೀಕ್ಷೆಗಳು ಕಟ್ಟುನಿಟ್ಟಾಗಿ ನಡೆಯುತ್ತಿವೆ ಎಂದು ಅರ್ಥ. ಆದರೆ, ನಾಡಾದಲ್ಲಿ ಕಾರ್ಯನಿರ್ವಹಿಸಲು ನುರಿತ ಮತ್ತು ಪರಿಣತ ವೈದ್ಯರನ್ನು ನೇಮಕ ಮಾಡಿಕೊಳ್ಳಬೇಕಿದೆ. ಇದರಿಂದಾಗಿ ಮಾದರಿ ಸಂಗ್ರಹ, ಪರೀಕ್ಷೆಗಳ ಗುಣಮಟ್ಟವನ್ನು ಸುಧಾರಿಸಬಹುದಾಗಿದೆ. ಎಲ್ಲದರೊಂದಿಗೆ ತಪ್ಪಿತಸ್ಥರಿಂದ ಕೇವಲ ಪದಕ ಕಿತ್ತುಕೊಳ್ಳುವುದಷ್ಟೇ ಶಿಕ್ಷೆಯಾಗಬಾರದು. ಅವರಿಗೆ ನೀಡಿರುವ ಎಲ್ಲ ಸೌಲಭ್ಯ ಮತ್ತು ಉದ್ಯೋಗಗಳನ್ನೂ ಕಿತ್ತುಕೊಳ್ಳಬೇಕು.ಡಾ.ಕಿರಣ ಕುಲಕರ್ಣಿ, ಎಎಫ್‌ಸಿ ಡೋಪಿಂಗ್ ನಿಯಂತ್ರಣ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.