ADVERTISEMENT

ಆಳ–ಅಗಲ| ಇ20 ಪೆಟ್ರೋಲ್‌: ನೀಗದ ಗೊಂದಲ, ಮಾಲೀಕರು-ಚಾಲಕರ ಆತಂಕ

ಹೊಸ ಪೆಟ್ರೋಲ್‌ನಿಂದ ಇಂಧನ ಕ್ಷಮತೆ ಕುಸಿತ, ವಾಹನಕ್ಕೆ ಹಾನಿ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 0:20 IST
Last Updated 2 ಸೆಪ್ಟೆಂಬರ್ 2025, 0:20 IST
ಬೆಂಗಳೂರಿನ ಪೆಟ್ರೋಲ್ ಬಂಕ್ ಒಂದರಲ್ಲಿ ಇ20 ಪೆಟ್ರೋಲ್ ಎಂದು ಫಲಕ ಹಾಕಿರುವುದು
ಬೆಂಗಳೂರಿನ ಪೆಟ್ರೋಲ್ ಬಂಕ್ ಒಂದರಲ್ಲಿ ಇ20 ಪೆಟ್ರೋಲ್ ಎಂದು ಫಲಕ ಹಾಕಿರುವುದು   
ದೇಶದಾದ್ಯಂತ ಶೇ 20ರಷ್ಟು ಎಥೆನಾಲ್‌ ಮಿಶ್ರಿತ (ಇ20) ಪೆಟ್ರೋಲ್‌ ಪೂರೈಕೆ ಗುರಿಯನ್ನು ಸಾಧಿಸಿರುವ ಹೊತ್ತಿನಲ್ಲೇ, ಕೇಂದ್ರದ ಜೈವಿಕ ಇಂಧನ ಪ್ರೋತ್ಸಾಹ ನೀತಿಯ ವಿರುದ್ಧ ಮಿಶ್ರ ಅಭಿಪ್ರಾಯಗಳು ವ್ಯಕ್ತವಾಗಿವೆ. ಜುಲೈನಿಂದ ದೇಶದ ಎಲ್ಲ ಪೆಟ್ರೋಲ್‌ ಬಂಕ್‌ಗಳಲ್ಲಿ ಇ20 ಪೆಟ್ರೋಲ್‌ ಮಾತ್ರ ಲಭ್ಯವಿದೆ. ಈ ಪೆಟ್ರೋಲ್‌ ಹಳೆಯ ವಾಹನಗಳಿಗೆ ಹೊಂದಾಣಿಕೆಯಾಗುತ್ತಿಲ್ಲ ಎಂಬ ಕೂಗು ಚಾಲಕರು ಮತ್ತು ಮಾಲೀಕರಿಂದ ಕೇಳಿಬರುತ್ತಿದೆ. ಇಂಧನ ಕ್ಷಮತೆ ಕುಸಿತ, ಎಂಜಿನ್‌ಗೆ ಹಾನಿಯಂತಹ ಸಮಸ್ಯೆಗಳ ಬಗ್ಗೆ ಜನರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸ್ತಾಪಿಸುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರ ಜನರ ಆಕ್ಷೇಪಣೆಗಳನ್ನು ತಳ್ಳಿಹಾಕಿದ್ದು, ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.

ದೇಶದಲ್ಲಿರುವ ಪೆಟ್ರೋಲ್‌, ಡೀಸೆಲ್‌ ಮತ್ತು ಇತರ ಇಂಧನ ಬೇಡಿಕೆಯನ್ನು ಪೂರೈಸುವುದಕ್ಕಾಗಿ ಭಾರತವು ಶೇ 85ರಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಹೊರದೇಶಗಳಿಂದ ತೈಲದ ಖರೀದಿಯನ್ನು ಕಡಿಮೆ ಮಾಡುವುದರ ಜೊತೆಗೆ ಇಂಗಾಲದ ಹೊರಸೂಸುವಿಕೆಗೆ ಕಡಿವಾಣ ಹಾಕುವ ಉದ್ದೇಶದಿಂದ ಪರಿಸರ ಸ್ನೇಹಿ ಇಂಧನ ಬಳಕೆಗೆ ಕೇಂದ್ರ ಸರ್ಕಾರ ಉತ್ತೇಜನ ನೀಡುತ್ತಿದೆ. ಅದರಲ್ಲೊಂದು, ಪೆಟ್ರೋಲ್‌ಗೆ ಸಸ್ಯಜನ್ಯವಾದ ಎಥೆನಾಲ್‌ ಅನ್ನು ಬೆರೆಸಿ ಮಾರಾಟ ಮಾಡುವುದು. 2001ರಿಂದಲೂ ಈ ಕಾರ್ಯಕ್ರಮ ಜಾರಿಯಲ್ಲಿದೆ. ಪೆಟ್ರೋಲ್‌ಗೆ ಮಿಶ್ರಣ ಮಾಡುವ ಎಥೆನಾಲ್‌ ಪ್ರಮಾಣವನ್ನು ಹಂತ ಹಂತವಾಗಿ ಹೆಚ್ಚಿಸುತ್ತಾ ಬರಲಾಗಿದ್ದು, ಅದೀಗ ಶೇ 20ಕ್ಕೆ ತಲುಪಿದೆ. ಈ ವರ್ಷದ ಜುಲೈನಿಂದ ದೇಶದಲ್ಲಿರುವ ಎಲ್ಲಾ ಪೆಟ್ರೋಲ್‌ ಬಂಕ್‌ಗಳಲ್ಲಿ ಶೇ 20ರಷ್ಟು ಎಥೆನಾಲ್‌ ಮಿಶ್ರಿತ ಪೆಟ್ರೋಲ್ (ಇಬಿಪಿ 20 ಅಥವಾ ಇ20) ಮಾತ್ರ ಲಭ್ಯವಿದೆ. ಇದು ವಿವಾದವನ್ನೂ, ಗೊಂದಲವನ್ನೂ ಸೃಷ್ಟಿಸಿದೆ. 

ಪೆಟ್ರೋಲ್‌ ವಾಹನಗಳ ಮಾಲೀಕರು, ಚಾಲಕರು ಪ್ರತಿ ದಿನ ಪೆಟ್ರೋಲ್‌ ಬಂಕ್‌ಗಳಲ್ಲಿ ಅಲ್ಲಿನ ಸಿಬ್ಬಂದಿಯೊಂದಿಗೆ ಜಗಳವಾಡುವ ಪರಿಸ್ಥಿತಿ ತಲೆದೋರಿದೆ. ಇ20 ಪೆಟ್ರೋಲ್‌ ಸರಿ ಇಲ್ಲ. ಎಥೆನಾಲ್‌ ಬೆರೆಸದ ಪೆಟ್ರೋಲ್‌ ಕೊಡಿ ಎಂದು ಆಗ್ರಹಿಸುತ್ತಿದ್ದಾರೆ. ಅವರ ಕೋಪಕ್ಕೆ ಕಾರಣವೂ ಇದೆ. ಇ20 ಪೆಟ್ರೋಲ್‌ ಪೂರೈಕೆ ಆರಂಭವಾದ ನಂತರ ವಾಹನಗಳ ಕಾರ್ಯಕ್ಷಮತೆ ಕುಗ್ಗಿದೆ. ಎಂಜಿನ್‌ನಲ್ಲಿ ತಾಂತ್ರಿಕ ದೋಷಗಳು ಕಾಣಿಸಿಕೊಳ್ಳುತ್ತಿವೆ. ತುಂಬಾ ಹಳೆಯ ವಾಹನಗಳ ಎಂಜಿನ್‌ಗಳು ಹಾಳಾಗಿದ್ದೂ ಇದೆ. ಇದರಿಂದ ವಾಹನಗಳ ನಿರ್ವಹಣೆಯ ವೆಚ್ಚ ಹೆಚ್ಚಾಗುತ್ತಿದ್ದು, ಜನರ ಜೇಬಿಗೆ ಹೊರೆಯಾಗಲು ಆರಂಭಿಸಿದೆ. ಹೊಸ ಪೆಟ್ರೋಲ್‌ ಹಾಕಿಸಿಕೊಂಡ ಬಹುತೇಕ ಬೈಕ್‌, ಕಾರುಗಳ ಇಂಧನ ಕ್ಷಮತೆ (ಮೈಲೇಜ್‌) ಗಣನೀಯವಾಗಿ ಕುಸಿತ ಕಂಡಿದೆ. ಕಾರುಗಳಲ್ಲಿ ಪ್ರತಿ ಲೀಟರ್‌ಗೆ ನಾಲ್ಕೈದು ಕಿ.ಮೀನಷ್ಟು ಇಳಿಕೆಯಾಗಿದೆ ಎಂಬುದು ಬಹುತೇಕ ಗ್ರಾಹಕರ ಹೇಳಿಕೆ.

ಆದರೆ, ಸರ್ಕಾರ ಇದನ್ನು ಒಪ್ಪುತ್ತಿಲ್ಲ. ವಾಹನಗಳ ಇಂಧನ ಕ್ಷಮತೆ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಬಹುದು. ಕೆಲವು ರಬ್ಬರ್‌ ಬಿಡಿಭಾಗಗಳು/ ಗ್ಯಾಸ್ಕೆಟ್‌ಗಳನ್ನು ಬದಲಿಸಿದರೆ ಈ ಸಮಸ್ಯೆಯೂ ಪರಿಹಾರವಾಗುತ್ತದೆ ಎಂಬುದು ಅದರ ವಾದ. ಆದರೆ, ಇದು ಜನರಿಗೆ ಸಮಾಧಾನ ತಂದಿಲ್ಲ.

ADVERTISEMENT

ಗೊಂದಲ ಏಕೆ?: 2000ದ ದಶಕದಲ್ಲಿ ಭಾರತದಲ್ಲಿ ಎಥೆನಾಲ್‌ ಮಿಶ್ರಿತ ಪೆಟ್ರೋಲ್‌ ಪೂರೈಕೆ ಆರಂಭವಾಯಿತು. ಆರಂಭದಲ್ಲಿ ಶೇ 5ರಷ್ಟಿದ್ದ ಎಥೆನಾಲ್‌ ಪ್ರಮಾಣವನ್ನು
ಶೇ 10ಕ್ಕೆ ಏರಿಸಲಾಯಿತು. ಇತ್ತೀಚಿನವರೆಗೂ ಈ ಪೆಟ್ರೋಲ್‌ ಅನ್ನೇ ಗ್ರಾಹಕರು ಬಳಸುತ್ತಿದ್ದರು. ಈ ಪ್ರಮಾಣವನ್ನು ಶೇ 20ಕ್ಕೆ ಹೆಚ್ಚಿಸಿದಾಗ ಸಮಸ್ಯೆ ತಲೆದೋರಿದೆ. 2023ರ ಏಪ್ರಿಲ್‌ ನಂತರ ತಯಾರಿಸಲಾದ ವಾಹನಗಳು ಇ20 ಪೆಟ್ರೋಲ್‌ ಬಳಕೆಗೆ ಯೋಗ್ಯವಾಗಿದೆ ಎಂದು ಹೇಳಲಾಗುತ್ತಿದೆ. ಅದಕ್ಕೂ ಹಳೆಯ ವಾಹನಗಳಿಗೆ ಈ ಪೆಟ್ರೋಲ್‌ ಹೊಂದಿಕೆಯಾಗುತ್ತಿಲ್ಲ ಎಂಬುದು ವಾಹನ ಉದ್ಯಮದ ತಜ್ಞರು ಹಾಗೂ ಗ್ರಾಹಕರ ಅಭಿಪ್ರಾಯ. ಬಿಎಸ್‌– 6 ಹಂತದ ವಾಹನಗಳಲ್ಲೂ ಸಮಸ್ಯೆಗಳು ಕಾಣಿಸಿಕೊಂಡಿವೆ. 2023ರ ಏಪ್ರಿಲ್‌ ನಂತರ ತಯಾರಿಸಲಾದ ವಾಹನಗಳಲ್ಲಿ, ವಾಹನವು ಇ5, ಇ10 ಪೆಟ್ರೋಲ್‌ ಬಳಸಲು ಯೋಗ್ಯ ಎಂದಷ್ಟೇ ಇದೆ. ಇತ್ತೀಚೆಗೆ ತಯಾರಾಗುತ್ತಿರುವ ವಾಹನಗಳ ಟ್ಯಾಂಕ್‌ ಮುಚ್ಚಳದಲ್ಲಿ ‘ಇ20 ಪೆಟ್ರೋಲ್‌ ಬಳಸಲು ಅರ್ಹ’ ಎಂಬ ಉಲ್ಲೇಖ ಇದೆ. 

ಕೆಲವು ವಾಹನ ತಯಾರಿಕಾ ಕಂಪನಿಗಳು ತಮ್ಮ ಹಳೆಯ ವಾಹನಗಳನ್ನು ಇ20 ಪೆಟ್ರೋಲ್‌ ಬಳಸಿ ಪರೀಕ್ಷೆಗೆ ಒಳಪಡಿಸಿಲ್ಲ ಎಂದು ಆರಂಭದಲ್ಲಿ ಹೇಳಿಕೆ ನೀಡಿದ್ದರೂ ನಂತರ ತಮ್ಮ ಹೇಳಿಕೆ ಬದಲಿಸಿವೆ. ದೇಶದ ಅತಿದೊಡ್ಡ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ ಸೇರಿದಂತೆ ಕೆಲವು ಕಂಪನಿಗಳು ಇ20 ಪೆಟ್ರೋಲ್‌ ಕಿಟ್‌ ಅನ್ನು ಸಿದ್ಧಪಡಿಸಿವೆ ಎಂದು ವರದಿಯಾಗಿದೆ. ಹೊಸ ಪೆಟ್ರೋಲ್‌ಗೆ ವಾಹನವನ್ನು ಹೊಂದಿಸಲು ಅಗತ್ಯವಾದ ಬಿಡಿಭಾಗಗಳನ್ನು ಈ ಕಿಟ್‌ ಹೊಂದಿದೆ. 

ಇತ್ತೀಚೆಗೆ ನವದೆಹಲಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಭಾರತೀಯ ವಾಹನ ತಯಾರಿಕಾ ಸೊಸೈಟಿಯ (ಎಸ್‌ಐಎಎಂ) ಕಾರ್ಯನಿರ್ವಾಹಕ ನಿರ್ದೇಶಕ ಪಿ.ಕೆ.ಬ್ಯಾನರ್ಜಿ, ‘ಹಳೆಯ ವಾಹನಗಳಲ್ಲಿ ಇ20 ಪೆಟ್ರೋಲ್‌ ಬಳಸುವುದರಿಂದ ಇಂಧನ ಕ್ಷಮತೆ ಸ್ವಲ್ಪ ಕಡಿಮೆಯಾಗಬಹುದು. ಆದರೆ, ವಾಹನಕ್ಕೆ ಯಾವುದೇ ಸಮಸ್ಯೆ ಇಲ್ಲ. ಕೆಲವು ಸಮಯದಿಂದ ಎಲ್ಲ ವಾಹನಗಳು ಇ20 ಪೆಟ್ರೋಲ್‌ ಅನ್ನೇ ಬಳಸುತ್ತಿವೆ. ಆದರೆ, ಎಲ್ಲೂ ವಾಹನ ಹಾಳಾಗಿ ನಿಂತ ಉದಾಹರಣೆ ಇಲ್ಲ. ಒಂದು ವೇಳೆ ಅಂತಹ ಯಾವುದೇ ಸಮಸ್ಯೆ ಬಂದರೆ ಕಂಪನಿಗಳು ವಾರಂಟಿ, ವಿಮೆಯ ಕ್ಲೇಮುಗಳಿಗೆ ಸ್ಪಂದಿಸಲಿವೆ’ ಎಂದು ಹೇಳಿದ್ದರು. ಆದರೆ, ಇ20 ಪೆಟ್ರೋಲ್‌ನಿಂದ ವಾಹನಕ್ಕೆ ಹಾನಿಯಾದರೆ, ಅದಕ್ಕೆ ವಿಮಾ ಕಂಪನಿಗಳು ಪರಿಹಾರ ನೀಡುತ್ತವೆಯೇ ಇಲ್ಲವೇ ಎಂಬ ಬಗ್ಗೆ ಗೊಂದಲ ಇದೆ. 

‘ಭಾರತದಲ್ಲಿ ಹಳೆಯ ವಾಹನಗಳನ್ನು ಹೊಂದಿರುವವರೇ ಹೆಚ್ಚು. ವಾಹನ ತಯಾರಿಕಾ ಕಂಪನಿಗಳು ಕೂಡ ಈ ಬಗ್ಗೆ ತಮ್ಮ ಗ್ರಾಹಕರಿಗೆ ತಿಳಿ ಹೇಳುವ ಕೆಲಸವನ್ನು ಮಾಡುತ್ತಿಲ್ಲ. ಸರ್ಕಾರವೂ ತನ್ನ ನಿರ್ಧಾರದ ಬಗ್ಗೆ ದೇಶದ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಿಲ್ಲ. ಇ20 ಪೆಟ್ರೋಲ್‌ ಕಾರಣಕ್ಕೆ ಹೊಸ ವಾಹನಗಳನ್ನು ಖರೀದಿಸುವ ಸಾಮರ್ಥ್ಯ ಬಹುತೇಕರಿಗೆ ಇಲ್ಲ. ಇ20 ಪೆಟ್ರೋಲ್‌ ಬಗ್ಗೆ ನಮಗೆ ಆಕ್ಷೇಪ ಇಲ್ಲ. ಆದರೆ, ಹಳೆಯ ವಾಹನಗಳಿಗೆ ಹೊಂದುವಂತಹ ಪೆಟ್ರೋಲ್‌ ಲಭ್ಯವಿರುವಂತೆ ಸರ್ಕಾರ ನೋಡಿಕೊಳ್ಳಬೇಕು. ಪೆಟ್ರೋಲ್‌ ಬಂಕ್‌ಗಳಲ್ಲಿ ತಮಗೆ ಬೇಕಾದ ಪೆಟ್ರೋಲ್‌ ಖರೀದಿಸುವ ಆಯ್ಕೆ ಇರಬೇಕು’ ಎಂಬುದು ಬಹುತೇಕ ಗ್ರಾಹಕರ ಅಭಿಪ್ರಾಯ. ಇದೇ ವಾದವನ್ನು ಮುಂದಿಟ್ಟುಕೊಂಡು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಪೀಠ ವಜಾ ಮಾಡಿದೆ. ‌

ಪಳೆಯುಳಿಕೆ ಇಂಧನದ ಮೇಲೆ ಅವಲಂಬನೆ ತಪ್ಪಿಸುವುದಕ್ಕಾಗಿ ಸರ್ಕಾರ ಜೈವಿಕ ಇಂಧನ ನೀತಿಯನ್ನು ರೂಪಿಸಿದ್ದು, ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರುತ್ತಿದೆ. ಹೀಗಾಗಿ, ಜನರಿಂದ ವಿರೋಧ ವ್ಯಕ್ತವಾದರೂ ಅದು ತನ್ನ ನಿರ್ಧಾರದಿಂದ ಹಿಂದೆ ಸರಿಯುವ ಸಾಧ್ಯತೆ ಕ್ಷೀಣ ಎಂದೂ ಹೇಳಲಾಗುತ್ತಿದೆ.

ದರ ಕಡಿಮೆ ಏಕಿಲ್ಲ?

ಶೇ 20ರಷ್ಟು ಎಥೆನಾಲ್‌ ಮಿಶ್ರಣ ಮಾಡಿದರೂ ಸರ್ಕಾರ ಪೆಟ್ರೋಲ್‌ ದರವನ್ನು ಕಡಿಮೆ ಮಾಡಿಲ್ಲ ಏಕೆ ಎಂಬುದು ಹಲವರ ಪ್ರಶ್ನೆ. ಇದಕ್ಕೂ ಸರ್ಕಾರ ಉತ್ತರಿಸಿದೆ. ಎಥೆನಾಲ್‌ನ ಬೆಲೆ ಹೆಚ್ಚಿದೆ. ಪ್ರತಿ ಲೀಟರ್‌ಗೆ ₹71.32ರಷ್ಟಿದೆ. ಇ20 ಪೆಟ್ರೋಲ್‌ ತಯಾರಿಸಲು ಬಳಸುವ ಮೋಟರ್‌ ಸ್ಪಿರಿಟ್‌ನ ದರವೂ ಹೆಚ್ಚಾಗಿದೆ. ಜೋಳ ಆಧಾರಿತ ಎಥೆನಾಲ್‌ ಬೆಲೆ ₹52.92ರಿಂದ ₹71.86ಕ್ಕೆ ಏರಿದೆ ಎಂದು ಅದು ಹೇಳಿದೆ.

ಸರ್ಕಾರದ ವಾದವೇನು?

  • ಇಂಧನ ಆಮದು ಅವಲಂಬನೆ ಕಡಿಮೆ ಮಾಡಲು, 2070ರ ವೇಳೆಗೆ ಶೂನ್ಯ ಇಂಗಾಲದ ಗುರಿ ಸಾಧಿಸಲು ಈ ಕ್ರಮ ಅನಿವಾರ್ಯ‌

  • ವಿಸ್ತೃತ ಅಧ್ಯಯನ, ವಾಹನ ಉದ್ದಿಮೆಗಳ ಸಂಘಟನೆಯೊಂದಿಗೆ ಚರ್ಚಿಸಿದ ನಿರ್ಧಾರ ಕೈಗೊಂಡೇ ಈ ನಿರ್ಧಾರ ಕೈಗೊಳ್ಳಲಾಗಿದೆ. 

  • ಎಥೆನಾಲ್‌ನಿಂದಾಗಿ ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ಸಿಗುತ್ತದೆ. ಗ್ರಾಮೀಣ ರೈತರಿಗೆ ಅನುಕೂಲವಾಗುತ್ತದೆ. ಉದ್ಯೋಗವೂ ಸೃಷ್ಟಿಯಾಗುತ್ತದೆ

  • ಇ20 ಪೆಟ್ರೋಲ್‌ನಿಂದ ವಾಹನಗಳ ವೇಗವರ್ಧನೆ ಉತ್ತಮವಾಗಿರುತ್ತದೆ. ಆರಾಮದಾಯಕ ಪ್ರಯಾಣವೂ ಸಾಧ್ಯ. ಇಂಗಾಲ ಉಗುಳುವಿಕೆ ಕಡಿಮೆಯಾಗುತ್ತದೆ

  • ಇ10 ಪೆಟ್ರೋಲ್‌ ಬಳಸುತ್ತಿದ್ದ ನಾಲ್ಕು ಚಕ್ರಗಳ ವಾಹನಗಳ ಇಂಧನ ಕ್ಷಮತೆ ಶೇ 1ರಿಂದ ಶೇ 2ರಷ್ಟು, ಉಳಿದ ವಾಹನಗಳಲ್ಲಿ ಶೇ 3ರಿಂದ 6ರಷ್ಟು ಕಡಿಮೆಯಾಗಬಹುದು. ರಬ್ಬರ್‌ ಬಿಡಿಭಾಗಗಳನ್ನು ಬದಲಿಸುವುದರಿಂದ, ಎಂಜಿನ್‌ ಟ್ಯೂನಿಂಗ್‌ ಮಾಡುವುದರಿಂದ ಇದನ್ನು ಸರಿಪಡಿಸಬಹುದು

  • 2009ರಿಂದಲೂ ದೇಶದ ವಾಹನಗಳು ಎಥೆನಾಲ್‌ ಮಿಶ್ರಣದ ಪೆಟ್ರೋಲ್‌ ಅನ್ನೇ ಬಳಸುತ್ತಿವೆ. ಇ10 ಪೆಟ್ರೋಲ್‌ ಬಳಸುತ್ತಿರುವ ವಾಹನಗಳಲ್ಲಿ ಇಂಧನ ಕ್ಷಮತೆಯ ಕುಸಿತ ಪ್ರಮಾಣ ತುಂಬಾ ಕಡಿಮೆ

  • ಮೊದಲಿನಂತೆ ಎಥೆನಾಲ್‌ ಮುಕ್ತ ಪೆಟ್ರೋಲ್‌ ಆಯ್ಕೆಗೆ ಈಗ ಹೋಗುವುದರಿಂದ ದೇಶವು ಇಂಧನ ಪರಿವರ್ತನೆಯಲ್ಲಿ ಮತ್ತು ಮಾಲಿನ್ಯ ನಿಯಂತ್ರಣದಲ್ಲಿ ಸಾಧಿಸಿರುವ ಯಶಸ್ಸು ನಷ್ಟವಾಗುತ್ತದೆ   

ವಿದೇಶಗಳಲ್ಲಿ...

  • ಬ್ರೆಜಿಲ್‌, ಅಮೆರಿಕ ಮತ್ತು ಐರೋಪ್ಯ ಒಕ್ಕೂಟದ ಹಲವು ದೇಶಗಳು ಎಥೆನಾಲ್‌ ಮಿಶ್ರಿತ ಪೆಟ್ರೋಲ್‌ ಬಳಸುತ್ತಿವೆ

  •  ಬೆಜ್ರಿಲ್‌ನಲ್ಲಿ 1970ರ ದಶಕದಿಂದಲೇ ಎಥೆನಾಲ್‌ ಮಿಶ್ರಿತ ಪೆಟ್ರೋಲ್‌ ಲಭ್ಯವಿದೆ. ಕಬ್ಬಿನಿಂದ ಭಾರಿ ಪ್ರಮಾಣದಲ್ಲಿ ಎಥೆನಾಲ್‌ ಅನ್ನು ಉತ್ಪಾದಿಸಲಾಗುತ್ತದೆ. ಫ್ಲೆಕ್ಸ್‌ -ಫ್ಯುಯೆಲ್‌ ತಂತ್ರಜ್ಞಾನದಲ್ಲಿ ತಯಾರಿಸಿದ ವಾಹನಗಳು ಅಲ್ಲಿ ಈಗ ಹೆಚ್ಚು ಮಾರಾಟವಾಗುತ್ತಿವೆ. ಈ ವಾಹನಗಳು ಯಾವುದೇ ಪ್ರಮಾಣದಲ್ಲಿ ಎಥೆನಾಲ್‌ ಮಿಶ್ರಿತ ಪೆಟ್ರೋಲ್‌ ಹಾಗೂ ಎಥೆನಾಲ್‌ ರಹಿತ ಪೆಟ್ರೋಲ್‌ನಿಂದಲೂ ಚಲಿಸುವ ಸಾಮರ್ಥ್ಯ ಹೊಂದಿವೆ

  •  ಅಮೆರಿಕದಲ್ಲಿ 2005ರಿಂದಲೇ ಎಥೆನಾಲ್‌ ಮಿಶ್ರಿತ ಪೆಟ್ರೋಲ್‌ ಬಳಸಲಾಗುತ್ತಿದೆ. ಎ10 ಪೆಟ್ರೋಲ್‌ ಬಳಕೆ ಹೆಚ್ಚಿದೆ. ಕೆಲವು ಕಡೆಗಳಲ್ಲಿ ಇ51, ಇ85 ಪೆಟ್ರೋಲ್‌ ಕೂಡ ಲಭ್ಯವಿವೆ

  • ಯುರೋಪಿನ ಫ್ರಾನ್ಸ್‌, ಜರ್ಮನಿ, ಬ್ರಿಟನ್‌ನಲ್ಲಿ ಇ10 ಪೆಟ್ರೋಲ್‌ ಬಳಕೆಯಲ್ಲಿದೆ. ಉಳಿದ ರಾಷ್ಟ್ರಗಳಲ್ಲಿ ಇ5 ಪೆಟ್ರೋಲ್‌ ಜನಪ್ರಿಯ

ಇ–ಪೆಟ್ರೋಲ್‌ ಹರಿದು ಬಂದು ಹಾದಿ

2001: ಎಥೆನಾಲ್‌ ಮಿಶ್ರಿತ ಪೆಟ್ರೋಲ್‌ (ಇಬಿಪಿ) ಯೋಜನೆ ಮಹಾರಾಷ್ಟ್ರದ ಮಿರಾಜ್‌ ಮತ್ತು ಉತ್ತರ ಪ್ರದೇಶದ ಬರೇಲಿಯಲ್ಲಿ ಪ್ರಯೋಗಿಕವಾಗಿ ಜಾರಿ

2003: ಯೋಜನೆ ಅಧಿಕೃತವಾಗಿ ಅನುಷ್ಠಾನ. ಒಂಬತ್ತು ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ 5ರಷ್ಟು ಎಥೆನಾಲ್‌ ಮಿಶ್ರಿತ (ಇ5) ಪೆಟ್ರೋಲ್‌ ಗ್ರಾಹಕರಿಗೆ ಪೂರೈಕೆ

2006: ಇ5 ಪೆಟ್ರೋಲ್‌ ಪೂರೈಕೆ 20 ರಾಜ್ಯಗಳಿಗೆ ವಿಸ್ತರಣೆ 

2018: ಜೈವಿಕ ಇಂಧನ ರಾಷ್ಟ್ರೀಯ ನೀತಿ ರೂಪಿಸಿದ ಸರ್ಕಾರ. 2030ರ ಒಳಗಾಗಿ ಶೇ 20ರಷ್ಟು ಎಥೆನಾಲ್‌ ಮಿಶ್ರಿತ ಪೆಟ್ರೋಲ್‌ ಮತ್ತು ಶೇ 5ರಷ್ಟು ಜೈವಿಕ ಡೀಸೆಲ್‌ ಮಿಶ್ರಣ ಮಾಡಿದ ಡೀಸೆಲ್‌ ಬಳಸುವ ಗುರಿ ನಿಗದಿ

2019: ಶೇ 10ರಷ್ಟು ಎಥೆನಾಲ್‌ ಮಿಶ್ರಿತ (ಇ10) ಪೆಟ್ರೋಲ್‌ ಮಾರಾಟ ಆರಂಭ

2022: ದೇಶದಾದ್ಯಂತ ಇ10 ಪೆಟ್ರೋಲ್‌ ಮಾರಾಟದ ಗುರಿ ಸಾಧನೆ

2022: ರಾಷ್ಟ್ರೀಯ ಜೈವಿಕ ಇಂಧನ ನೀತಿಗೆ ತಿದ್ದುಪಡಿ. 2025–26ರ ವೇಳೆಗೆ ಪೆಟ್ರೋಲ್‌ಗೆ ಶೇ 20ರಷ್ಟು ಎಥೆನಾಲ್‌ ಮಿಶ್ರಣದ ಗುರಿ ತಲುಪುವ ಪ್ರಸ್ತಾವ. 2030ರ ವೇಳೆಗೆ ಶೇ 5ರಷ್ಟು ಎಥೆನಾಲ್‌ ಮಿಶ್ರಿತ ಡೀಸೆಲ್‌ ಅಥವಾ ಜೈವಿಕ ಡೀಸೆಲ್‌ನ ನೇರ ಮಾರಾಟದ ಗುರಿ ನಿಗದಿ

2023ರ ಏಪ್ರಿಲ್‌ 1: ಇ20 ಪೆಟ್ರೋಲ್‌ ಯೋಜನೆಗೆ ಚಾಲನೆ. ಪೆಟ್ರೋಲ್‌ಗೆ ಬೆರೆಸುವ ಎಥೆನಾಲ್‌ ಪ್ರಮಾಣ
ಶೇ 14.06ಕ್ಕೆ ಹೆಚ್ಚಳ

2025ರ ಏಪ್ರಿಲ್‌: ಎಲ್ಲ ಹೊಸ ವಾಹನಗಳು ಇ20 ಪೆಟ್ರೋಲ್‌ಗೆ ಹೊಂದುವಂತೆ ಇರುವುದನ್ನು ಕಡ್ಡಾಯಗೊಳಿಸಿದ ಸರ್ಕಾರ

2025ರ ಜುಲೈ: ಪೆಟ್ರೋಲ್‌ಗೆ ಶೇ 20ರಷ್ಟು ಎಥೆನಾಲ್‌ ಮಿಶ್ರಣ ಮಾಡುವ ಗುರಿ ಸಾಧನೆ

ಆಧಾರ: ರಾಷ್ಟ್ರೀಯ ಜೈವಿಕ ಇಂಧನ ನೀತಿ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ, ಪಿಐಬಿ, ಬಿಬಿಸಿ, ರಾಯಿಟರ್ಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.