ADVERTISEMENT

ಟ್ರಂಪ್‌ v/s ಮಸ್ಕ್‌ | ಆತ್ಮೀಯತೆಯಿಂದ ಬದ್ಧ ವೈರದವರೆಗೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2025, 23:27 IST
Last Updated 8 ಜೂನ್ 2025, 23:27 IST
   

ಅಮೆರಿಕದಲ್ಲಿ ಅನಿರೀಕ್ಷಿತ ಬೆಳವಣಿಗೆಗಳು ನಡೆಯುತ್ತಿವೆ. ಆಪ್ತಮಿತ್ರರಂತೆ ಇದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉದ್ಯಮಿ ಇಲಾನ್ ಮಸ್ಕ್ ಬದ್ಧವೈರಿಗಳಂತೆ ಬದಲಾಗಿದ್ದಾರೆ. ಮಸ್ಕ್ ಅವರು ಟ್ರಂಪ್‌ ಸರ್ಕಾರದ ನೀತಿಯನ್ನು ಬಹಿರಂಗವಾಗಿ ಟೀಕಿಸುತ್ತಿದ್ದಾರೆ. ಅದು ಟ್ರಂಪ್‌ ಅವರನ್ನು ಕೆರಳಿಸಿದೆ. ಒಂದು ಕಾಲದ ತಮ್ಮ ಗೆಳೆಯನ ಬಗ್ಗೆ ಟ್ರಂಪ್ ಕಟುವಾಗಿ ವರ್ತಿಸುತ್ತಿದ್ದಾರೆ. ಶ್ವೇತಭವನದಲ್ಲಿ ಹುದ್ದೆಯೊಂದನ್ನು ನಿಭಾಯಿಸುತ್ತಿದ್ದ ಮಸ್ಕ್ ಅವರನ್ನು, ಅಲ್ಲಿಂದಲೂ ಹೊರಹಾಕಲಾಗಿದೆ. ಸಾಮಾಜಿಕ ತಾಣಗಳಲ್ಲಿ ಇಬ್ಬರ ನಡುವೆ ಬಹಿರಂಗ ಸಮರವೇ ನಡೆಯುತ್ತಿದೆ. ಇದು ಸ್ಪೇಸ್‌ ಎಕ್ಸ್‌, ಟೆಸ್ಲಾ ಸೇರಿದಂತೆ ಮಸ್ಕ್ ಅವರ ಉದ್ಯಮಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ 

ಕೆಲವು ವಾರಗಳ ಹಿಂದಿನವರೆಗೂ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಸ್ಪೇಸ್ ಎಕ್ಸ್‌, ಟೆಸ್ಲಾ ಕಂಪನಿಗಳ ಮಾಲೀಕ ಇಲಾನ್ ಮಸ್ಕ್ ಅವರನ್ನು ಅಪರೂ‍ಪದ ಜೋಡಿ ಎಂದೇ ಕರೆಯಲಾಗುತ್ತಿತ್ತು. ಒಬ್ಬರು ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿಯಾದರೆ, ಮತ್ತೊಬ್ಬರು ಜಗತ್ತಿನ ಅತ್ಯಂತ ಶ್ರೀಮಂತ ರಾಷ್ಟ್ರದ ಅಧ್ಯಕ್ಷ. ಆದರೆ, ಇಬ್ಬರ ನಡುವಿನ ಸ್ನೇಹಕ್ಕೆ ಒಂದು ವರ್ಷ ತುಂಬುವುದರ ಒಳಗಾಗಿ ಜೋಡಿಯ ನಡುವೆ ಮನಸ್ತಾಪ ಹುಟ್ಟಿಕೊಂಡಿದ್ದು, ಅದು ಈಗ ದ್ವೇಷ ಸಾಧಿಸುವ ಮಟ್ಟಕ್ಕೆ ಹೋಗಿದೆ. ಇದರ ಫಲವಾಗಿ ಮಸ್ಕ್ ಶ್ವೇತಭವನದಿಂದಲೂ ಹೊರಬಿದ್ದಿದ್ದಾರೆ. 

ಮಸ್ಕ್ ರಾಜಕಾರಣದಿಂದ ಸದಾ ಒಂದು ಅಂತರ ಕಾಪಾಡಿಕೊಂಡೇ ಬಂದಿದ್ದರು. 2016ರಲ್ಲಿ ತಾನು ಹಿಲರಿ ಕ್ಲಿಂಟನ್‌ಗೆ, 2020ರಲ್ಲಿ ಜೋ ಬೈಡನ್‌ಗೆ ಮತ ಹಾಕಿದ್ದಾಗಿ ಹೇಳಿದ್ದರೂ ಅವರು ರಾಜಕೀಯದಿಂದ ದೂರವೇ ಇದ್ದರು. 2024ರ ಜುಲೈನಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾಗ ಟ್ರಂಪ್ ಮೇಲೆ ಹತ್ಯಾ ಯತ್ನ ನಡೆದಿತ್ತು. ಅಲ್ಲಿಂದ ಮಸ್ಕ್ ಅವರು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿದ್ದ ಡೊನಾಲ್ಡ್ ಟ್ರಂಪ್ ಅವರನ್ನು ಬೆಂಬಲಿಸತೊಡಗಿದರು. ತನ್ನ ಒಡೆತನದ ‘ಎಕ್ಸ್’ ವೇದಿಕೆಯಲ್ಲಿ ಟ್ರಂಪ್ ಪರ ಪ್ರಚಾರಕ್ಕೆ ಅನುಕೂಲ ಕಲ್ಪಿಸಿದ್ದಷ್ಟೇ ಅಲ್ಲದೇ, ಅವರಿಗಾಗಿ ಚುನಾವಣೆಯಲ್ಲಿ 25 ಕೋಟಿ ಡಾಲರ್‌ (₹2,145 ಕೋಟಿ) ವೆಚ್ಚವನ್ನೂ ಮಾಡಿದ್ದರು. 

ADVERTISEMENT

ಸಮಾನ ಮನಸ್ಕರು: ಡೊನಾಲ್ಡ್ ಟ್ರಂಪ್ ಮತ್ತು ಮಸ್ಕ್ ನಡುವೆ ಅನೇಕ ಸಾಮ್ಯಗಳಿದ್ದವು. ತೆರಿಗೆ ಕಡಿತ, ವಲಸೆ ನಿಯಂತ್ರಣದಂಥ ಅನೇಕ ವಿಚಾರಗಳಲ್ಲಿ ಇಬ್ಬರ ಅಭಿಪ್ರಾಯಗಳೂ ಒಂದೇ ಆಗಿದ್ದವು. ಇಬ್ಬರೂ ಜೊತೆಯಾಗಿದ್ದರಿಂದ ಪರಸ್ಪರರಿಗೆ ಹಲವು ಅನುಕೂಲಗಳಿದ್ದವು. ಜಗತ್ತಿನ ಸಿರಿವಂತ ಉದ್ಯಮಿಯ ಹಣಕಾಸಿನ ಬೆಂಬಲ ಟ್ರಂಪ್‌ಗೆ ಸಿಕ್ಕಿ, ಚುನಾವಣೆಯಲ್ಲಿ ಗೆದ್ದ ಅವರು ಎರಡನೆಯ ಬಾರಿಗೆ ಅಮೆರಿಕದ ಅಧ್ಯಕ್ಷರಾದರು. ಶ್ವೇತಭವನ ಪ್ರವೇಶಿಸಿದ ಟ್ರಂಪ್, ತಮ್ಮ ಗೆಳೆಯ ಮಸ್ಕ್‌ ಅವರನ್ನು ಮರೆಯಲಿಲ್ಲ. ಅವರನ್ನು ಸರ್ಕಾರದ ಕಾರ್ಯದಕ್ಷತಾ ಇಲಾಖೆಯ (ಡಿಒಜಿಇ) ಮುಖ್ಯಸ್ಥರನ್ನಾಗಿ ಮಾಡಿದರು. ಆಡಳಿತ ಸುಧಾರಣೆಗೆ ಕ್ರಮ ವಹಿಸುವುದರ ಜತೆಗೆ ಅನಗತ್ಯ ವೆಚ್ಚಗಳನ್ನು ಕಡಿತ ಮಾಡುವುದು ಈ ಇಲಾಖೆಯ ಕೆಲಸವಾಗಿತ್ತು. 

ಟ್ರಂಪ್ ಆಡಳಿತದ ಆರಂಭದಲ್ಲಿ ಭಾರಿ ಹುಮ್ಮಸ್ಸಿನಿಂದ ಕಾರ್ಯಪ್ರವೃತ್ತರಾದ ಮಸ್ಕ್, ಯುಎಸ್ ಏಡ್ ಸೇರಿದಂತೆ ಸರ್ಕಾರದ ಹಲವು ಕಾರ್ಯಕ್ರಮಗಳನ್ನು ರದ್ದುಪಡಿಸಿ, ಸಿಬ್ಬಂದಿಯನ್ನು ಕಡಿತಗೊಳಿಸಿದರು. ನೋಡನೋಡುತ್ತಲೇ ಶ್ವೇತಭವನದಲ್ಲಿ ಅವರ ಪ್ರಭಾವ ಹೆಚ್ಚಾಗತೊಡಗಿತು. ಅದರ ಹಿಂದೆಯೇ ಹಲವು ವಿವಾದಗಳೂ ಅವರನ್ನು ಸುತ್ತುವರಿದವು. ಟ್ರಂಪ್ ಅವರ ಆಪ್ತರಿಂದ ಮಸ್ಕ್‌ಗೆ ನಿಧಾನಕ್ಕೆ ವಿರೋಧ ವ್ಯಕ್ತವಾಗಡತೊಗಿತು. ಕೊನೆಗೆ ತಾವೇ ಅಖಾಡಕ್ಕಿಳಿದ ಟ್ರಂಪ್, ಇದೇ ಮಾರ್ಚ್‌ನಲ್ಲಿ ಡಿಒಜಿಇ ಅಧಿಕಾರವನ್ನು ಮೊಟಕುಗೊಳಿಸಿದರು. 

ಇನ್ನೊಂದೆಡೆ, ಮಸ್ಕ್ ಅವರ ರಾಜಕೀಯ ಚಟುವಟಿಕೆಗಳು, ನಕಾರಾತ್ಮಕ ಪ್ರಚಾರದಿಂದ ಅವರ ಉದ್ಯಮಕ್ಕೆ ಪೆಟ್ಟು ಬೀಳತೊಡಗಿತು. ಅದು ಟೆಸ್ಲಾ ಬ್ರ್ಯಾಂಡ್‌ ಮೇಲೆ ಪರಿಣಾಮ ಬೀರಿ, ಜಾಗತಿಕ ಮಾರುಕಟ್ಟೆಯಲ್ಲಿ ಅದರ ಷೇರುಗಳ ಬೆಲೆ ಕುಸಿಯಿತು. 

ಕೊನೆಗೆ, ಮೇ 28ರಂದು ಡಿಒಜಿಇ ಹುದ್ದೆಯಿಂದ ತಾನು ನಿರ್ಗಮಿಸುತ್ತಿರುವುದಾಗಿ ಮಸ್ಕ್‌ ಘೋಷಿಸಿದರು. ತನ್ನ ಇಲಾಖೆಯು ಸರ್ಕಾರದ //18,000 ಡಾಲರ್// (₹15.44 ಲಕ್ಷ ಕೋಟಿ) ಅನ್ನು ಉಳಿಸಿದೆ ಎಂದು ಪ್ರತಿಪಾದಿಸಿದರು. ಆ ಹುದ್ದೆಗೇರಿದ ಸಂದರ್ಭದಲ್ಲಿ ಸರ್ಕಾರದ 2 ಲಕ್ಷ ಕೋಟಿ ಡಾಲರ್‌ (₹172 ಲಕ್ಷ ಕೋಟಿ) ಉಳಿಸುವುದಾಗಿ ಮಸ್ಕ್ ಘೋಷಿಸಿದ್ದರು. 

ಮಸೂದೆಯಿಂದ ಮನಸ್ತಾಪ ಬಯಲಿಗೆ: ಇದರ ನಡುವೆಯೇ, ಟ್ರಂಪ್ ಅವರು ಸುಂಕ ಮತ್ತು ವೆಚ್ಚ ಮಸೂದೆ ತರಲು ಮುಂದಾದರು. ಡಿಒಜಿಇ ಉಳಿಸುವ 172 ಲಕ್ಷ ಕೋಟಿ ಡಾಲರ್‌ ಅನ್ನು ಬಳಿಸಿಕೊಂಡು ಅಮೆರಿಕದಲ್ಲಿ ಗಣನೀಯ ತೆರಿಗೆ ಕಡಿತ ಮಾಡುವುದು ಟ್ರಂಪ್ ಅವರ ಉದ್ದೇಶವಾಗಿತ್ತು. ಇದು ‘ದೊಡ್ಡ, ಸುಂದರ ಮಸೂದೆ’ (ಒಬಿಬಿಬಿ) ಎಂದೇ ಅವರು ಪ್ರತಿಪಾದಿಸಿದರು. ಡಿಒಜಿಇಯಿಂದ ಅರ್ಧದಲ್ಲಿಯೇ ಮಸ್ಕ್ ನಿರ್ಗಮಿಸಿದ ನಂತರವೂ ಟ್ರಂಪ್ ಮಸೂದೆ ತರುವ ದಿಸೆಯಲ್ಲಿ ಮುಂದಡಿ ಇಟ್ಟರು.

ಆದರೆ, ಈ ಮಸೂದೆಯಿಂದ ಅಮೆರಿಕದ ಜನರ ಮೇಲೆ ಸಾಲದ ಹೊರೆ ಹೆಚ್ಚಲಿದೆ ಎನ್ನುವುದು ಮಸ್ಕ್ ಅಭಿಪ್ರಾಯವಾಗಿತ್ತು. ಈ ವಿಚಾರದಲ್ಲಿ ಟ್ರಂಪ್ ಮತ್ತು ಅವರ ರಿಪಬ್ಲಿಕನ್ ಪಕ್ಷದ ಮುಖಂಡರ ಮನವೊಲಿಕೆಯ ಪ್ರಯತ್ನ ನಡೆಸಿದರಾದರೂ, ಅದು ಫಲ ನೀಡಲಿಲ್ಲ. ಅಲ್ಲಿಗೂ ಸುಮ್ಮನಾಗದ ಮಸ್ಕ್, ತನ್ನದೇ ‘ಎಕ್ಸ್‌’ ವೇದಿಕೆಯಲ್ಲಿ ‘ಮಸೂದೆ ತಡೆಯಿರಿ’ ('ಕಿಲ್ ದ ಬಿಲ್’) ಆಂದೋಲನ ಆರಂಭಿಸಿದರು. ಅದು ಟ್ರಂಪ್ ಮತ್ತು ಮಸ್ಕ್ ನಡುವಿನ ಮನಸ್ತಾಪ ಸ್ಫೋಟಗೊಳ್ಳಲು ಕಾರಣವಾಯಿತು. 

ಸುಂಕ ಮತ್ತು ವೆಚ್ಚ ಮಸೂದೆಯು ತನ್ನ ಸರ್ಕಾರದ ಮಹತ್ವದ ಆರ್ಥಿಕ ನೀತಿಯಾಗಿದೆ ಎಂದು ಟ್ರಂಪ್ ‍ಪ್ರಚಾರ ಮಾಡಿದರು. ಅದು ಬೃಹತ್ತಾದ, ಅತಿರೇಕದ ಮಸೂದೆಯಾಗಿದ್ದು, ಕಾಯ್ದೆಯಾಗಿ ಜಾರಿಯಾದರೆ, ದೇಶದ ಸಾಲದ ಹೊರೆ ಹೆಚ್ಚಿಸುವುದರ ಜತೆಗೆ, ಡಿಒಜಿಇ ಮುಖ್ಯಸ್ಥನಾಗಿ ತಾನು ಮಾಡಿದ ಕೆಲಸವನ್ನೂ ನೀರುಪಾಲು ಮಾಡುತ್ತದೆ ಎಂದು ಮಸ್ಕ್ ಮಸೂದೆ ವಿರುದ್ಧ ಪ್ರಚಾರ ಮಾಡತೊಡಗಿದರು. ಅಧ್ಯಕ್ಷರ ವಿರುದ್ಧ ಹೋಗುವುದರ ಬಗ್ಗೆ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಅಂಥವರು ಎಚ್ಚರಿಸಿದರೂ ಮಸ್ಕ್ ಹಿಂದೆ ಸರಿಯಲಿಲ್ಲ. ಮಸ್ಕ್ ವರ್ತನೆಯಿಂದ ತಮಗೆ ಬೇಸರವಾಗಿದೆ ಎಂದು ಟ್ರಂಪ್ ಅವರೇ ಹೇಳಿಕೊಂಡರು. ಮತ್ತೂ ಮುಂದುವರಿದ ಮಸ್ಕ್, ‘ನಾನಿಲ್ಲದಿದ್ದರೆ ಟ್ರಂಪ್ ಅವರು ಚುನಾವಣೆಯಲ್ಲಿ ಸೋಲುತ್ತಿದ್ದರು’ ಎಂದೂ ಪ್ರತಿಪಾದಿಸಿದರು. 

‘ಮಸ್ಕ್‌ಗೆ ತಲೆ ಕೆಟ್ಟಿದೆ’ ಎಂದ ಟ್ರಂಪ್, ‘ಮಸ್ಕ್ ಅವರು ಟ್ರಂಪ್ ಎನ್ನುವ ಮಾನಸಿಕ ವ್ಯಾಧಿಯಿಂದ ಬಳಲುತ್ತಿದ್ದಾರೆ’ ಎಂದಿದ್ದಲ್ಲದೇ, ಸರ್ಕಾರದೊಂದಿಗೆ ಅವರು ಮಾಡಿಕೊಂಡಿರುವ ಒಪ್ಪಂದಗಳನ್ನು ರದ್ದುಪಡಿಸುವ ಬೆದರಿಕೆಯನ್ನೂ ಹಾಕಿದರು. ಆದರೂ ಸುಮ್ಮನಾಗದ ಮಸ್ಕ್, ಮುಂದಿನ ವರ್ಷ ನಡೆಯಲಿರುವ ಮಧ್ಯಂತರ ಚುನಾವಣೆಗಳಲ್ಲಿ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವುದಾಗಿ ಘೋಷಿಸಿರುವುದು ಟ್ರಂಪ್ ಅವರನ್ನು ಕೆರಳಿಸಿದೆ. ತಮ್ಮ ಮತ್ತು ಮಸ್ಕ್‌ ನಡುವಣ ಸಂಬಂಧ ಕೊನೆಗೊಂಡಿದೆ ಎಂದು ಘೋಷಿಸಿರುವ ಟ್ರಂಪ್‌, ಒಂದು ವೇಳೆ ಅವರು ಡೆಮಾಕ್ರಟಿಕ್‌ ಅಭ್ಯರ್ಥಿಗಳನ್ನು ಬೆಂಬಿಸಿದ್ದೇ ಆದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ. 

ಟ್ರಂಪ್ ಅವರಿಂದ ದೂರವಾದ ನಂತರ ಮಸ್ಕ್‌, ಶ್ವೇತಭವನಕ್ಕೆ ಹಲವು ಸವಾಲುಗಳನ್ನು ಒಡ್ಡುತ್ತಿದ್ದಾರೆ. ಇವರ ಮನಸ್ತಾಪದಿಂದ ಅಮೆರಿಕದ ರಾಜಕಾರಣ ಮತ್ತು ಉದ್ಯಮರಂಗದ ಮೇಲೆ ಯಾವ ರೀತಿಯ ಪರಿಣಾಮಗಳು ಉಂಟಾಗಬಹುದು ಎನ್ನುವ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ.

ಸ್ಪೇಸ್‌ ಎಕ್ಸ್‌–ಸರ್ಕಾರದ ಒಪ್ಪಂದಗಳ ಮೇಲೆ ತೂಗುಕತ್ತಿ

ಟ್ರಂಪ್‌ ಮತ್ತು ಮಸ್ಕ್‌ ನಡುವಿನ ಕಲಹವು ಮಸ್ಕ್‌ ಒಡೆತನದ ಸ್ಪೇಸ್‌ ಎಕ್ಸ್‌ ಕಂಪನಿ ಹಾಗೂ ಅಮೆರಿಕ ಸರ್ಕಾರದ ನಡುವೆ ಏರ್ಪಟ್ಟಿರುವ ₹1.89 ಲಕ್ಷ ಕೋಟಿ ಮೊತ್ತದ (2,200 ಕೋಟಿ ಡಾಲರ್‌) ಗುತ್ತಿಗೆ ಒಪ್ಪಂದಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಒಂದು ವೇಳೆ ಒಪ್ಪಂದಗಳು ರದ್ದಾದರೆ, ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಕಾರ್ಯಗಳಿಗೆ ತೀವ್ರ ಹಿನ್ನಡೆಯಾಗಲಿದೆ. 

ಇಬ್ಬರ ನಡುವೆ ವಾಕ್ಸಮರ ಜೋರಾಗುತ್ತಿದ್ದಂತೆಯೇ ಟ್ರಂಪ್‌ ಅವರು, ಮಸ್ಕ್‌ ಮಾಲೀಕತ್ವದ ಕಂಪನಿಗಳೊಂದಿಗೆ ಸರ್ಕಾರ ಮಾಡಿಕೊಂಡಿರುವ ಒಪ್ಪಂದವನ್ನು ರದ್ದು ಮಾಡುವ ಬೆದರಿಕೆಯನ್ನು ‘ಎಕ್ಸ್‌’ನಲ್ಲಿ ಹಾಕಿದ್ದರು. 

ಇದಕ್ಕೆ ಪ್ರತಿಯಾಗಿ ಮಸ್ಕ್‌ ಕೂಡ, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಗಗನಯಾತ್ರಿಗಳನ್ನು ಕರೆದುಕೊಂಡು ಹೋಗಲು ನಾಸಾ ಬಳಸುತ್ತಿರುವ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್‌ ಬಾಹ್ಯಾಕಾಶ ಕೋಶವನ್ನು ವಾಪಸ್‌ ಪಡೆಯುವ ಪ್ರಕ್ರಿಯೆಯನ್ನು ಆರಂಭಿಸುವುದಾಗಿ ‘ಎಕ್ಸ್‌’ನಲ್ಲಿ ಹೇಳಿದ್ದರು. 

ಇದೇ ಪೋಸ್ಟ್‌ಗೆ ಬಳಕೆದಾರರೊಬ್ಬರು ಮಾಡಿದ ಕಮೆಂಟ್‌ಗೆ ‘ಡ್ರ್ಯಾಗನ್‌ ಬಾಹ್ಯಾಕಾಶ ಕೋಶವನ್ನು ವಾಪಸ್‌ ಪಡೆಯುವುದಿಲ್ಲ’ ಎಂದು ಮಸ್ಕ್‌ ಪ್ರತಿಕ್ರಿಯಿಸಿದ್ದರು. 

ನಾಸಾವು ಈಗ ಬಾಹ್ಯಾಕಾಶ ನಿಲ್ದಾಣಕ್ಕೆ ಗಗನಯಾತ್ರಿಗಳನ್ನು ಕಳುಹಿಸಲು ಖಾಸಗಿಯವರ ಬಾಹ್ಯಾಕಾಶ ಕೋಶಗಳನ್ನು ಅವಲಂಬಿಸಿದೆ. ಈ ಸಂಬಂಧ ಸ್ಪೇಸ್‌ ಎಕ್ಸ್‌ನೊಂದಿಗೆ 500 ಕೋಟಿ ಡಾಲರ್‌ (₹42,900 ಕೋಟಿ) ಮೌಲ್ಯದ ಒಪ್ಪಂದ ಮಾಡಿಕೊಂಡಿದೆ. ಸದ್ಯ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್‌ ಕೋಶ ಮಾತ್ರ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ. ಒಂದು ವೇಳೆ ಮಸ್ಕ್‌, ಡ್ರ್ಯಾಗನ್‌ ಅನ್ನು ವಾಪಸ್‌ ಪಡೆದರೆ ನಾಸಾದ ಅಧ್ಯಯನಕ್ಕೆ ತೊಂದರೆಯಾಗಲಿದೆ. 

ಚಂದ್ರ ಮತ್ತು ಮಂಗಳ ಗ್ರಹಕ್ಕೆ ಮಾನವರನ್ನು ಕಳುಹಿಸುವ ಉದ್ದೇಶದಿಂದ ಅದಕ್ಕೆ ಪೂರಕವಾದ ರಾಕೆಟ್‌ಗಳ ಅಭಿವೃದ್ಧಿಗಾಗಿ ನಾಸಾವು ಸ್ಪೇಎಸ್‌ ಎಕ್ಸ್‌ ಜೊತೆಗೆ 1,500 ಕೋಟಿ ಡಾಲರ್‌ (₹1.29 ಲಕ್ಷ ಕೋಟಿ) ವೆಚ್ಚದ ಒಪ್ಪಂದವನ್ನೂ ಮಾಡಿಕೊಂಡಿದೆ. ಇದರ ಅಡಿಯಲ್ಲೇ ಸ್ಪೇಸ್‌ ಎಕ್ಸ್‌ ಫಾಲ್ಕನ್‌–9 ರಾಕೆಟ್‌ಗಳು ಮತ್ತು ಬಹು ಬಳಕೆಯ ಸ್ಟಾರ್‌ಶಿಪ್‌ ರಾಕೆಟ್‌ ಅನ್ನು ಅಭಿವೃದ್ಧಿ ಪಡಿಸಿದೆ.

ಇದಲ್ಲದೇ, ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್‌ನ ರಾಷ್ಟ್ರೀಯ ಭದ್ರತಾ ಉಪಗ್ರಹಗಳನ್ನು ಉಡಾವಣೆ ಮಾಡಲು ಮತ್ತು ಅಮೆರಿಕದ ಗುಪ್ತಚರ ಸಂಸ್ಥೆಯ ಬೇಹುಗಾರಿಕಾ ಉಪಗ್ರಹಗಳ ಗುಚ್ಛಗಳನ್ನು ಅಭಿವೃದ್ಧಿ ಪಡಿಸುವ ಸಂಬಂಧವೂ ಸ್ಪೇಸ್‌ ಎಕ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿವೆ.

‘ಎಪ್‌ಸ್ಟೈನ್‌ ಫೈಲ್ಸ್‌ನಲ್ಲಿ ಟ್ರಂಪ್ ಹೆಸರು’

ಡೊನಾಲ್ಡ್ ಟ್ರಂಪ್ ವಿರುದ್ಧ ಮಸ್ಕ್ ಮಾಡಿದ ಅತ್ಯಂತ ಗಂಭೀರ ಆರೋಪ, ಎಪ್‌ಸ್ಟೈನ್‌ ಫೈಲ್ಸ್‌ಗೆ ಸಂಬಂಧಿಸಿದ್ದು. ‘ಮಹಿಳೆಯರ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ಅಪರಾಧಿ ಜೆಫ್ರಿ ಎಪ್‌ಸ್ಟೈನ್‌ ಹಗರಣದಲ್ಲಿ ಡೊನಾಲ್ಡ್ ಟ್ರಂಪ್ ಅವರ ಹೆಸರೂ ಇದೆ. ಹೀಗಾಗಿಯೇ ಅದಕ್ಕೆ ಸಂಬಂಧಿಸಿದ ದಾಖಲೆಗಳು (ಎಪ್‌ಸ್ಟೈನ್‌) ಇನ್ನೂ ಸಾರ್ವಜನಿಕವಾಗಿ ಬಿಡುಗಡೆಯಾಗಿಲ್ಲ’ ಎಂದು ಮಸ್ಕ್ ಆರೋಪ ಮಾಡಿದ್ದಾರೆ. ಅಧ್ಯಕ್ಷ ಟ್ರಂಪ್‌ ಅವರನ್ನು ವಾಗ್ದಂಡನೆಗೆ ಗುರಿ ಮಾಡಬೇಕು ಎಂಬ ಬೇಡಿಕೆಗೆ ‘ಎಕ್ಸ್‌’ನಲ್ಲಿ ಬೆಂಬಲವನ್ನೂ ಘೋಷಿಸಿದ್ದಾರೆ. ಕೆಲಕಾಲದ ನಂತರ ಮಸ್ಕ್, ಆ ಎಕ್ಸ್ ಪೋಸ್ಟ್‌ಗಳನ್ನು ತೆಗೆದುಹಾಕಿದರೂ ಅದು ಅಮೆರಿಕದಲ್ಲಿ ಸಂಚಲನವನ್ನೇ ಉಂಟುಮಾಡಿದೆ.

ರಾಜಕೀಯ ಪಕ್ಷ ಆರಂಭಿಸಲಿದ್ದಾರೆಯೇ ಮಸ್ಕ್‌?

ಇಂತಹ ಚರ್ಚೆಯೊಂದು ಈಗ ಅಮೆರಿಕದಲ್ಲಿ ನಡೆಯುತ್ತಿದೆ. ಟ್ರಂಪ್‌ ಜೊತೆಗೆ ಸಂಬಂಧ ಹಳಸಿದ ನಂತರ ಮಸ್ಕ್‌ ಅವರು ‘ಎಕ್ಸ್‌’ನಲ್ಲಿ ತಮ್ಮ ಫಾಲೊವರ್ಸ್‌ಗೆ ಈ ಬಗ್ಗೆ ಪ್ರಶ್ನೆಯೊಂದನ್ನು ಕೇಳಿದ್ದಾರೆ. 

‘ಅಮೆರಿಕದ ಶೇ 80ರಷ್ಟು ಜನರನ್ನು ಪ್ರತಿನಿಧಿಸುವ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಲು ಇದು ಸರಿಯಾದ ಸಮಯವೇ’ ಎಂಬ ಪ್ರಶ್ನೆಗೆ, ‘ಎಕ್ಸ್‌’ನಲ್ಲಿ ಮಸ್ಕ್‌ ಅವರನ್ನು ಹಿಂಬಾಲಿಸುವ ಶೇ 80ರಷ್ಟು ಮಂದಿ ‘ಹೌದು’ ಎಂದು ಉತ್ತರಿಸಿದ್ದಾರೆ.

ಶೇ 80ರಷ್ಟು ಮಂದಿ ಹಿಂಬಾಲಕರು ತಮ್ಮ ಪ್ರಸ್ತಾವದ ಪರವಾಗಿ ಮಾತನಾಡಿರುವುದನ್ನೂ ಅವರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ‘ದಿ ಅಮೆರಿಕ ಪಾರ್ಟಿ’ ಎಂಬ ಹೆಸರನ್ನೂ ಇಟ್ಟಿದ್ದಾರೆ.

ಆಧಾರ: ಪಿಟಿಐ, ಬಿಬಿಸಿ, ರಾಯಿಟರ್ಸ್, ಟೈಮ್ ಮ್ಯಾಗಜೀನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.