
ಗದಗ ನಗರದಿಂದ 11 ಕಿ.ಮೀ. ದೂರದಲ್ಲಿರುವ ಲಕ್ಕುಂಡಿ ಈಗ ರಾಜ್ಯದ ಹೊರಗೂ ಹೆಸರು ಗಳಿಸಿದೆ. ಚಿನ್ನದ ನಿಧಿ ಸಿಕ್ಕ ನಂತರ ಈ ಗ್ರಾಮವು ದೇಶದ ಗಮನ ಸೆಳೆದಿದೆ. ಲಕ್ಕುಂಡಿಯ ಭವ್ಯ ಪರಂಪರೆಯ ಮರು ಅನ್ವೇಷಣೆಗಾಗಿ ಜ.16ರಿಂದ ಉತ್ಖನನ ಆರಂಭಗೊಂಡಿರುವುದು ಸಂಶೋಧಕರು, ಇತಿಹಾಸಕಾರರಲ್ಲಿ ಕುತೂಹಲ ಮೂಡಿಸಿದೆ.
ಗ್ರಾಮದ ಹುಡುಗ ಪ್ರಜ್ವಲ್ ರಿತ್ತಿ, ಮಾವ ಗುಡದಪ್ಪ ಅವರ ಜೊತೆಗೂಡಿ ತಮ್ಮ ನಿವೇಶನದಲ್ಲಿ ಜನವರಿ 10ರಂದು ತಳಪಾಯ ತೆಗೆಯುವಾಗ 466 ಗ್ರಾಂ ತೂಕದ ಚಿನ್ನದ ನಿಧಿ ಸಿಕ್ಕಿತ್ತು. ಆಗ ಅವರು ಸಿಕ್ಕ ಚಿನ್ನವನ್ನು ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿದ್ದರು. ಅದಾದ ವಾರದ ಬಳಿಕ ರಾಜ್ಯ ಪುರಾತತ್ವ ಇಲಾಖೆ, ಲಕ್ಕುಂಡಿ ಪಾರಂಪರಿಕ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತದ ನೇತೃತ್ವದಲ್ಲಿ ಲಕ್ಕುಂಡಿಯಲ್ಲಿ ಉತ್ಖನನ ಆರಂಭಿಸಿತು.
ಚಿನ್ನದ ನಿಧಿ ಸಿಕ್ಕಿತು ಎಂಬ ಕಾರಣಕ್ಕೆ ಲಕ್ಕುಂಡಿಯಲ್ಲಿ ದಿಢೀರ್ ಉತ್ಖನನ ಆರಂಭಿಸಿಲ್ಲ. ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಉತ್ಖನನ ನಡೆಸಲು ಕಳೆದ ವರ್ಷವೇ ನಿರ್ಧರಿಸಲಾಗಿತ್ತು. ಅದರಂತೆ, ಕಳೆದ ಜೂನ್ 3ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ಖನನಕ್ಕೆ ಚಾಲನೆ ನೀಡಿದ್ದರು. ಆದರೆ, ಬಳಿಕ ಮಳೆಗಾಲ ಆರಂಭಗೊಂಡಿದ್ದರಿಂದ ಕೆಲಸ ಪ್ರಾರಂಭವಾಗಿರಲಿಲ್ಲ. ಎರಡೂ ಏಕಕಾಲದಲ್ಲಿ ನಡೆದಿರುವುದು ಕಾಕತಾಳೀಯ ಅಷ್ಟೇ.
ಚಿನ್ನದ ನಿಧಿ ಸಿಕ್ಕ ಪ್ರಜ್ವಲ್ ರಿತ್ತಿ ಕುಟುಂಬದ ನಿವೇಶನ ಹಾಗೂ ಅಚ್ಚಪ್ಪನ ಬಯಲಿನಲ್ಲಿ ಇತ್ತು ಎನ್ನಲಾದ ಟಂಕಸಾಲೆಗೂ ಕೋಟೆ ವೀರಭದ್ರೇಶ್ವರ ದೇವಸ್ಥಾನ ಕೇಂದ್ರ ಸ್ಥಾನದಲ್ಲಿದೆ. ಹಾಗಂತ, ಚಿನ್ನದ ನಿಧಿ ಶೋಧನೆಗಾಗಿ ಈ ಜಾಗ ಗುರುತಿಸಿಲ್ಲ. ದೇವಸ್ಥಾನದಿಂದ ಸಿದ್ಧರ ಬಾವಿಗೆ ನೇರ ಸಂಪರ್ಕ ಇದ್ದು, ಇಲ್ಲಿ ಉತ್ಖನನ ನಡೆಸಿದರೆ ಮಹತ್ವದ ಅವಶೇಷಗಳು ಸಿಗಬಹುದು ಎಂದು ತಜ್ಞರು ಅಂದಾಜಿಸಿ, ಈ ಜಾಗದಿಂದ ಪುರಾತತ್ವ ಇಲಾಖೆಯ ನಿವೃತ್ತ ಅಧೀಕ್ಷಕ ಹಾಗೂ ಉತ್ಖನನದ ನಿರ್ದೇಶಕ
ಟಿ.ಎಂ.ಕೇಶವ ಅವರ ನೇತೃತ್ವದಲ್ಲಿ ಉತ್ಖನನ ಆರಂಭಿಸಿದ್ದಾರೆ.
ಮೊದಲ ಹಂತದಲ್ಲಿ ₹25 ಲಕ್ಷ ಖರ್ಚು ಮಾಡಿ ಕೋಟೆ ವೀರಭದ್ರೇಶ್ವರ ದೇವಸ್ಥಾನದಿಂದ ಸಿದ್ಧರಬಾವಿವರೆಗಿನ 10x10 ಮೀಟರ್ ಜಾಗದಲ್ಲಿ ನಾಲ್ಕು ಬ್ಲಾಕ್‌ಗಳನ್ನು ಮಾಡಿ ಉತ್ಖನನ ನಡೆಸಲಾಗುತ್ತಿದೆ. ಇಲ್ಲಿಯವರೆಗೆ ನಡೆದಿರುವ ಉತ್ಖನನದಲ್ಲಿ ಲಕ್ಕುಂಡಿಯ ವೈಭವ ಗುರುತಿಸಲು ನೆರವಾಗುವಂತಹ ಯಾವುದೇ ಮಹತ್ವದ ಪ್ರಾಚ್ಯ ಅವಶೇಷ ಸಿಕ್ಕಿಲ್ಲ.
ಜ.17ರಂದು ಎರಡೂವರೆ ಅಡಿಗಳಷ್ಟು ಉತ್ಖನನ ನಡೆಸಿದಾಗ ಶಿವಲಿಂಗದ ಪಾಣಿಪೀಠ ಪತ್ತೆಯಾಗಿತ್ತು. ನಂತರದ ದಿನಗಳಲ್ಲಿ ಸರ್ಪದ ಚಿತ್ರವಿರುವ ಪ್ರಾಚ್ಯ ಅವಶೇಷ, ತಾಮ್ರದ ಘಂಟೆ, ಮಣ್ಣಿನ ಧೂಪದಾರತಿ, ಕಲ್ಲಿನ ಕೈ ಕೊಡಲಿ, ಕಂಬದ ಬೋಧಿಗೆ, ಜಿನ ಚಿತ್ರವಿರುವ ಕಲ್ಲಿನ ಪೀಠ, ನಾಗರಕಲ್ಲು, ಮೂಳೆಯ ತುಂಡುಗಳು, ಮಡಕೆಯ ಚೂರುಗಳು, ಕೆಂಪು ಮಣಿ, ಲೋಹದ ದೀಪದ ತುಣುಕು, ಪಚ್ಚೆ ಕಲ್ಲು, ಕಬ್ಬಿಣದ ಗುಂಡು ಪತ್ತೆಯಾಗಿವೆ. ಇವುಗಳನ್ನೆಲ್ಲಾ ಇತಿಹಾಸ ತಜ್ಞರು ಅಧ್ಯಯನಕ್ಕೆ ಒಳಪಡಿಸಿದ ನಂತರವಷ್ಟೇ ಅವು ಯಾವ ಕಾಲಕ್ಕೆ ಸೇರಿದವು, ಅವುಗಳ ಮಹತ್ವ ಏನು ಎಂಬುದು ಗೊತ್ತಾಗಲಿದೆ.
ನಿವೇಶನದಲ್ಲಿ ಸಿಕ್ಕಿರುವ ಚಿನ್ನಾಭರಣಗಳು
‘ಭಾರತೀಯ ಪುರಾತತ್ವ ಇಲಾಖೆಯು 10x10 ಜಾಗದಲ್ಲಿ ಉತ್ಖನನಕ್ಕೆ ಅನುಮತಿ ನೀಡಿದೆ. ಅದನ್ನು ನಾಲ್ಕು ಭಾಗಗಳಾಗಿ ಮಾಡಿಕೊಳ್ಳಲಾಗಿದೆ. ಆ ಜಾಗದಲ್ಲೆಲ್ಲಾ 10ರಿಂದ 12 ಅಡಿ ಆಳದವರೆಗೆ ಉತ್ಖನನ ನಡೆಸಲಾಗುವುದು. ತರಬೇತಿ ಪಡೆದ ಕುಶಲ ಕಾರ್ಮಿಕರು ಹಂತ ಹಂತವಾಗಿ, ಸೂಕ್ಷ್ಮ ರೀತಿಯಲ್ಲಿ ನಾಲ್ಕು ತಿಂಗಳವರೆಗೆ ಉತ್ಖನನ ನಡೆಸಲಿದ್ದಾರೆ’ ಎಂದು ಲಕ್ಕುಂಡಿ ಪಾರಂಪರಿಕ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ತಿಳಿಸಿದ್ದಾರೆ.
ಲಕ್ಕುಂಡಿ ಗ್ರಾಮದಲ್ಲಿನ ಕೆಲವರು ಪ್ರಾಚೀನ ಕಾಲದ ದೇವಸ್ಥಾನಗಳಿಗೆ ಅಂಟಿಕೊಂಡೇ ಮನೆಯ ಗೋಡೆಗಳನ್ನು ಕಟ್ಟಿಕೊಂಡಿದ್ದಾರೆ. ಇನ್ನು ಕೆಲವರು ದೇವಸ್ಥಾನವನ್ನೇ ಮನೆಯನ್ನಾಗಿ ಮಾಡಿಕೊಂಡಿದ್ದಾರೆ. ಚೌಕಿಮಠ, ಕುಂಬಾರ ಓಣಿಯಲ್ಲಿ ಇಂತಹ ದೃಶ್ಯಗಳು ಕಣ್ಣಿಗೆ ಕಾಣಿಸುತ್ತವೆ. ಅಮೂಲ್ಯವಾದ ಪ್ರಾಚ್ಯ ಅವಶೇಷಗಳು ಕೆಲವರ ಮನೆಯ ಹಿತ್ತಲಿನಲ್ಲಿ, ಕೊಟ್ಟಿಗೆಯಲ್ಲಿ ಮೆಟ್ಟಿಲುಗಳಾಗಿವೆ.
‘ಲಕ್ಕುಂಡಿಯಲ್ಲಿ ಉತ್ಖನನ ಪ್ರಾರಂಭಗೊಂಡ ನಂತರ ಪ್ರಾಚೀನ ದೇವಾಲಯಗಳ ಮಹತ್ವ ಸ್ಥಳೀಯರಿಗೂ ಅರ್ಥವಾಗಿದೆ. ತಮಗೆ ಬೇರೆ ಜಾಗ, ವಸತಿ ವ್ಯವಸ್ಥೆ ಮಾಡಿದರೆ ಅವುಗಳನ್ನು ಬಿಟ್ಟುಕೊಡುವುದಾಗಿ ಸ್ವಇಚ್ಛೆಯಿಂದ ಹೇಳಿದ್ದಾರೆ. ಈಗ ನಡೆದಿರುವ ಉತ್ಖನನದಿಂದ ಮಹತ್ವದ ಅವಶೇಷಗಳು ಲಭ್ಯವಾದರೆ ಇಡೀ ಊರನ್ನೇ ಸ್ಥಳಾಂತರಿಸಬೇಕಾಗಬಹುದು. ಆಗ, ಅದಕ್ಕೆ ಏನೇನು ಕ್ರಮಗಳಿವೆ ಎಂಬುದು ಸರ್ಕಾರದ ಮಟ್ಟದಲ್ಲಿ ನಿರ್ಧಾರವಾಗುತ್ತದೆ’ ಎಂದು ಲಕ್ಕುಂಡಿ ಪಾರಂಪರಿಕ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ರಾಜ್ಯ ಸದಸ್ಯ ಸಿದ್ದು ಪಾಟೀಲ ತಿಳಿಸಿದ್ದಾರೆ.
ರಾಜ್ಯ ಸರ್ಕಾರವು 2025–26ನೇ ಸಾಲಿನ ಬಜೆಟ್‌ನಲ್ಲಿ,‘ಐತಿಹಾಸಿಕ ಲಕ್ಕುಂಡಿಯಲ್ಲಿನ ಪಾರಂಪರಿಕ ದೇವಾಲಯಗಳನ್ನು ವಿಶ್ವ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಗೆ ಸೇರ್ಪಡೆಗೊಳಿಸಲು ಅಗತ್ಯ ಸೌಕರ್ಯಗಳನ್ನು ಒದಗಿಸಲಾಗುವುದು. ಪ್ರಾಚ್ಯ ಅವಶೇಷಗಳ ಸಂರಕ್ಷಣೆಗಾಗಿ ಬಯಲು ವಸ್ತುಸಂಗ್ರಹಾಲಯ ಪ್ರಾರಂಭಿಸಲಾಗುವುದು’ ಎಂದು ಘೋಷಿಸಿತ್ತು.
ಅದರಂತೆ, ಲಕ್ಕುಂಡಿಯಲ್ಲಿ ಈವರೆಗೆ ಸಿಕ್ಕಿರುವ ಪ್ರಾಚ್ಯ ಅವಶೇಷಗಳನ್ನು ಜೋಪಾನವಾಗಿ ಕಾಯ್ದಿರಿಸಲು ವಾರಂಗಲ್ ಮಾದರಿಯ ಬಯಲು ವಸ್ತುಸಂಗ್ರಹಾಲಯ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಲಕ್ಕುಂಡಿಯಲ್ಲಿನ ಬ್ರಹ್ಮ ಜಿನಾಲಯ, ನನ್ನೇಶ್ವರ ದೇವಸ್ಥಾನ, ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಕನ್ನರಬಾವಿ ಮಧ್ಯದ ಜಾಗದಲ್ಲಿರುವ ಸ.ನಂ.2ರಲ್ಲಿನ 3 ಎಕರೆ 1 ಗುಂಟೆ ಜಮೀನನ್ನು ಪ್ರತಿ ಎಕರೆಗೆ ₹38 ಲಕ್ಷ ಬೆಲೆ ನಿಗದಿಗೊಳಿಸಿ, ಖರೀದಿಸಲು ಸರ್ಕಾರ ಅನುಮತಿ ನೀಡಿದೆ.
ಲಕ್ಕುಂಡಿ ವೈಭವವನ್ನು ಮರುಸ್ಥಾಪಿಸುವ ಸಂಬಂಧ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ವಿಶೇಷ ಆಸಕ್ತಿ ವಹಿಸಿದ್ದು, ಕಳೆದ ವರ್ಷ ಪ್ರಾಚ್ಯ ಅವಶೇಷಗಳ ಸಂಗ್ರಹ ಅಭಿಯಾನ ನಡೆಸಿದ್ದರು. ಈ ವೇಳೆ ಮೂರು ದಿನಗಳಲ್ಲಿ 1,100ಕ್ಕೂ ಅಧಿಕ ಅಮೂಲ್ಯ ಶಾಸನ, ಶಿಲ್ಪಕಲೆ, ಮುತ್ತು, ರತ್ನ, ಹವಳ, ನಾಣ್ಯ ಸಂಗ್ರಹಿಸಲಾಗಿತ್ತು. ಲಕ್ಕುಂಡಿ ಗ್ರಾಮದ ಜನರು ತಮ್ಮ ಮನೆಗಳಲ್ಲಿ ಇದ್ದ ಪ್ರಾಚ್ಯ ಅವಶೇಷಗಳು, ಮುತ್ತು, ರತ್ನ, ಹವಳ ಸೇರಿದಂತೆ ವಿವಿಧ ಪಾರಂಪರಿಕ ವಸ್ತುಗಳನ್ನು
ಸ್ವ ಇಚ್ಛೆಯಿಂದ ಸರ್ಕಾರಕ್ಕೆ ನೀಡಿದ್ದರು.
ಲಕ್ಕುಂಡಿಯಲ್ಲಿ ದೊರೆತ ಪ್ರಾಚ್ಯ ಅವಶೇಷಗಳನ್ನು ಇಲ್ಲಿನ ನನ್ನೇಶ್ವರ ದೇವಸ್ಥಾನದ ಪಕ್ಕದ ಬಯಲು ಜಾಗದಲ್ಲಿ ಸಂಗ್ರಹಿಸಿಡಲಾಗಿದೆ
ಆದಾದ ಬಳಿಕ, ಗದಗ ನಗರದ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯದಲ್ಲಿ ನಡೆದ ಇತಿಹಾಸ ಅಕಾಡೆಮಿಯ ವಾರ್ಷಿಕ ಸಮ್ಮೇಳನದಲ್ಲಿ ಸಚಿವ ಎಚ್.ಕೆ.ಪಾಟೀಲ ಅವರು ಸ್ಥಳೀಯ ಇತಿಹಾಸ ಅಧ್ಯಯನದ ಮಹತ್ವದ ಬಗ್ಗೆ ಇತಿಹಾಸಕಾರರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ರಾಜ್ಯದಲ್ಲಿನ 238 ತಾಲ್ಲೂಕುಗಳಲ್ಲಿ ಕೂಡ ಸಮೃದ್ಧ ಇತಿಹಾಸವಿದ್ದು, ಅದರ ಸಾಹಿತ್ಯ ಸೃಷ್ಟಿಗೆ ಮುಂದಾದರೆ ಸರ್ಕಾರದಿಂದ ಆರ್ಥಿಕ ನೆರವು ಒದಗಿಸುವ ಭರವಸೆ ನೀಡಿದ್ದರು.
9ನೇ ಶತಮಾನದಿಂದ 14ನೇ ಶತಮಾನದವರೆಗೆ ಲಕ್ಕುಂಡಿಗೆ ವಿಶೇಷ ಮಹತ್ವ ಇತ್ತು. ಈ ಊರು ಪ್ರಾಚೀನ ಕಾಲದಲ್ಲಿ ಲೊಕ್ಕಿ ಗುಂಡಿ ಎಂದು ಪ್ರಸಿದ್ಧವಾಗಿತ್ತು. 11ನೇ ಶತಮಾನದಲ್ಲಿ ಇದು ಬೆಳ್ವೊಲ 300 ಪ್ರಾಂತ್ಯಕ್ಕೆ ಸೇರಿತ್ತು. ಇದು ‘ದಾನ ಚಿಂತಾಮಣಿ’ ಅತ್ತಿಮಬ್ಬೆಯ ಕರ್ಮಭೂಮಿಯಾಗಿತ್ತು. ಲಕ್ಕುಂಡಿಯು ಬಾದಾಮಿ ಚಾಲುಕ್ಯರು, ಕಲ್ಯಾಣದ ಚಾಲುಕ್ಯರು, ಕಲಚೂರಿಗಳು, ಹೊಯ್ಸಳರು ಮತ್ತು ವಿಜಯನಗರದ ಅರಸರ ಆಳ್ವಿಕೆಗೆ ಒಳಪಟ್ಟಿತ್ತು.
ಸಾವಿರ ವರ್ಷಗಳ ಹಿಂದೆ ಅದರ ಸುವರ್ಣ ಯುಗದಲ್ಲಿ ಲಕ್ಕುಂಡಿ ಎಲ್ಲ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿತ್ತು. ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ 100 ಮೀಟರ್ ಅಂತರದೊಳಗಿರುವ ಅಚ್ಚಪ್ಪನ ಬಯಲಿನಲ್ಲಿ ಟಂಕ ಶಾಲೆ ಇತ್ತು. ಅಲ್ಲಿ ಟಂಕಿಸುತ್ತಿದ್ದ ಲೊಕ್ಕಿ ಮತ್ತು ಗದ್ಯಾಣ ಎಂಬ ಚಿನ್ನದ ನಾಣ್ಯಗಳು ಅವುಗಳ ಗಾತ್ರ ಮತ್ತು ತೂಕಕ್ಕೆ ಪ್ರಸಿದ್ಧವಾಗಿದ್ದವು. ನಾಡಿನ ವಿವಿಧೆಡೆ ಸಿಕ್ಕ ಶಾಸನಗಳಲ್ಲಿ ಈ ನಾಣ್ಯಗಳ ಬಗ್ಗೆ ಉಲ್ಲೇಖ ಇರುವುದರಿಂದ ಅವು ರಾಜ್ಯದೆಲ್ಲೆಡೆ ಬಳಕೆಯಲ್ಲಿದ್ದವು ಎಂದು ಗೊತ್ತಾಗಿದೆ. ದೇವಸ್ಥಾನ, ಶಿಲ್ಪಕಲೆಯ ಹೊರತಾಗಿ ಲಕ್ಕುಂಡಿಯ ಇತಿಹಾಸ ಚಾಲುಕ್ಯ ಮತ್ತು ಹೊಯ್ಸಳ ಸಂಸ್ಕೃತಿಗಳ ಅದ್ಭುತ ಸಂಗಮವನ್ನು ತೆರೆದಿಡುತ್ತದೆ ಎಂದು ಇತಿಹಾಸ ತಜ್ಞರು ಹೇಳುತ್ತಾರೆ.
2003–04ರಲ್ಲಿ ಕೂಡ ಇಲ್ಲಿ ಉತ್ಖನನ ನಡೆದಿತ್ತು. ಗ್ರಾಮದ ಅಲ್ಲಮಪ್ರಭು ಮಠದ ಹಿಂಭಾಗ ನಡೆದ ಉತ್ಖನನದ ವೇಳೆ ಶಿಲಾಯುಗಕ್ಕೆ ಸಂಬಂಧಿಸಿದ ಅವಶೇಷಗಳು ಸಿಕ್ಕಿದ್ದವು.
‘ಲಕ್ಕುಂಡಿಯ ಇತಿಹಾಸ ತುಂಬ ಪ್ರಾಚೀನವಾಗಿದೆ. ಇಲ್ಲಿನ 32 ಪ್ರಕಟಿತ ಶಾಸನಗಳ ಪಠ್ಯ ಹಿಡಿದು ಲಕ್ಕುಂಡಿಯಲ್ಲಿ ನೂರಕ್ಕೂ ಹೆಚ್ಚು ಬಾರಿ ಅಡ್ಡಾಡಿದ್ದೇನೆ. ಪ್ರತಿಬಾರಿ ಬಂದಾಗಲೂ ಹೊಸ ಹೊಸ ಶಾಸನಗಳು ಸಿಕ್ಕಿವೆ’ ಎನ್ನುತ್ತಾರೆ ‘ಲಕ್ಕುಂಡಿಯ ಶಾಸನಗಳು’ ಕೃತಿಯ ಲೇಖಕಿ, ಇತಿಹಾಸ ತಜ್ಞೆ ಹನುಮಾಕ್ಷಿ ಗೋಗಿ.
‘ಲಕ್ಕುಂಡಿಯಲ್ಲಿ ರಾಷ್ಟ್ರಕೂಟರ ಕಾಲದ ವೀರಗಲ್ಲುಗಳು ಸಿಕ್ಕಿವೆ. ಈ ಪ್ರದೇಶವನ್ನು ಅತಿ ಹೆಚ್ಚು ಸಮಯ ಆಳಿದ ಕಲ್ಯಾಣದ ಚಾಲುಕ್ಯರು, ಕಲಚೂರಿ ಯಾದವರು, ವಿಜಯನಗರ ರಾಜರ ಶಾಸಗಳು ಸಿಕ್ಕಿವೆ. ‘ಲಕ್ಕುಂಡಿಯ ಶಾಸನಗಳು’ ಕೃತಿಯಲ್ಲಿ 110 ಶಾಸನಗಳ ಬಗ್ಗೆ ಉಲ್ಲೇಖಿಸಲಾಗಿತ್ತು. 2008ರ ನಂತರ ಮತ್ತೆ 45 ಶಾಸನಗಳನ್ನು ಗುರುತಿಸಿದ್ದೇನೆ. ಈ ಕಾರ್ಯಕ್ಕೆ ಸ್ಥಳೀಯರಾದ ಇತಿಹಾಸ ತಜ್ಞ ಅ.ದ.ಕಟ್ಟಿಮನಿ ಅವರ ನೆರವು ಸಾಕಷ್ಟಿದೆ’ ಎಂದು ಹೇಳುತ್ತಾರೆ ಅವರು.
ಗ್ರಾಮದ 16 ತಾಣಗಳನ್ನು ಈಗಾಗಲೇ ರಾಜ್ಯ ಸಂರಕ್ಷಿತ ಸ್ಮಾರಕಗಳು ಎಂದು ಘೋಷಿಸಲಾಗಿದೆ. ಇದರ ಜತೆಗೆ ಇನ್ನೂ ಎಂಟು ದೇವಸ್ಥಾನಗಳನ್ನು ಫೆಬ್ರುವರಿ ಅಂತ್ಯದೊಳಗೆ ಸಂರಕ್ಷಿತ ಸ್ಮಾರಕಗಳಾಗಿ ಘೋಷಣೆ ಮಾಡಲಾಗುವುದು ಎಂದು ಸಚಿವ ಎಚ್.ಕೆ. ಪಾಟೀಲ ತಿಳಿಸಿದ್ದಾರೆ. ಇಷ್ಟೆ ಅಲ್ಲದೇ, ಇನ್ನೂ 20 ದೇವಸ್ಥಾನಗಳನ್ನು ರಾಜ್ಯ ಸಂರಕ್ಷಿತ ಸ್ಮಾರಕಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡುವ ಸಂಬಂಧ ಒಂದು ತಿಂಗಳ ಒಳಗಾಗಿ ಸಮಗ್ರ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಪ್ರಾಧಿಕಾರದ ಆಯುಕ್ತರಿಗೆ ಸೂಚಿಸಿದ್ದಾರೆ.
ಗ್ರಾಮದಲ್ಲಿ 101 ದೇವಸ್ಥಾನ, 101 ಕಲ್ಯಾಣಿಗಳಿದ್ದವು ಎಂಬ ಉಲ್ಲೇಖವಿದೆ. ಇದರಲ್ಲಿ ಬೆರಳೆಣಿಕೆಯಷ್ಟು ದೇವಸ್ಥಾನ ಮತ್ತು ಕಲ್ಯಾಣಿಗಳು ಉಳಿದಿವೆ. ಅದರಲ್ಲಿ ಕೆಲವು ಗ್ರಾಮದಲ್ಲಿನ ಕೃಷಿ ಭೂಮಿ, ವಾಸದ ಮನೆಗಳಲ್ಲಿ ಚದುರಿಹೋಗಿವೆ. ಉಳಿದವು ಭೂಗರ್ಭದಲ್ಲಿ ಸೇರಿಕೊಂಡಿವೆ.
‘ಲಕ್ಕುಂಡಿಯ ದೇಗುಲಗಳು ದಾಳಿಯಿಂದ ಹಾಳಾಗಿಲ್ಲ. ಕಾಲನ ಹೊಡೆತ ಮತ್ತು ಜನರ ಅವಗಣಗೆ ಸಿಕ್ಕು ಹಾಳಾಗಿವೆ. ಹಾಗಾಗಿ, ಇಲ್ಲಿ ಉತ್ಖನನ ಕಾರ್ಯ ಸಮಗ್ರವಾಗಿ ನಡೆದರೆ ಮಾತ್ರ ಲಕ್ಕುಂಡಿಯ ವೈಭವ ಮತ್ತೆ ಗೋಚರಿಸಲಿದೆ’ ಎಂಬುದು ತಜ್ಞರ ಅಭಿಪ್ರಾಯ.
ಲಕ್ಕುಂಡಿಯಲ್ಲಿ ಈಗ ನಡೆದಿರುವ ಉತ್ಖನನದ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಉತ್ಪ್ರೇಕ್ಷೆಯ ಸುದ್ದಿಗಳೇ ಹರಿದಾಡುತ್ತಿವೆ. ಅಲ್ಲಿ ಅತಿ ದೊಡ್ಡ ಚಿನ್ನದ ನಿಕ್ಷೇಪ ಇದೆಯಂತೆ, ಕೂದಲು ಇರುವ ಘಟಸರ್ಪ ಅದನ್ನು ಕಾಯುತ್ತಿದೆಯಂತೆ ಎಂಬ ಮೂಢನಂಬಿಕೆ ಮೂಡಿಸುವ ಸುದ್ದಿಗಳು ಹರಿದಾಡುತ್ತಿರುವುದಕ್ಕೆ ಪ್ರಜ್ಞಾವಂತರು ತೀವ್ರ ಅಸಹನೆ ವ್ಯಕ್ತಪಡಿಸಿದ್ದಾರೆ.
9ನೇ ಶತಮಾನದಿಂದ 14ನೇ ಶತಮಾನದವರೆಗೆ ಲಕ್ಕುಂಡಿಗೆ ವಿಶೇಷ ಮಹತ್ವ ಇತ್ತು. ಈ ಊರು ಪ್ರಾಚೀನ ಕಾಲದಲ್ಲಿ ಲೊಕ್ಕಿ ಗುಂಡಿ ಎಂದು ಪ್ರಸಿದ್ಧವಾಗಿತ್ತು. 11ನೇ ಶತಮಾನದಲ್ಲಿ ಇದು ಬೆಳ್ವೊಲ 300 ಪ್ರಾಂತ್ಯಕ್ಕೆ ಸೇರಿತ್ತು. ಇದು ‘ದಾನ ಚಿಂತಾಮಣಿ’ ಅತ್ತಿಮಬ್ಬೆಯ ಕರ್ಮಭೂಮಿಯಾಗಿತ್ತು. ಲಕ್ಕುಂಡಿಯು ಬಾದಾಮಿ ಚಾಲುಕ್ಯರು ಕಲ್ಯಾಣದ ಚಾಲುಕ್ಯರು ಕಲಚೂರಿಗಳು ಹೊಯ್ಸಳರು ಮತ್ತು ವಿಜಯನಗರದ ಅರಸರ ಆಳ್ವಿಕೆಗೆ ಒಳಪಟ್ಟಿತ್ತು. ಸಾವಿರ ವರ್ಷಗಳ ಹಿಂದೆ ಅದರ ಸುವರ್ಣ ಯುಗದಲ್ಲಿ ಲಕ್ಕುಂಡಿ ಎಲ್ಲ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿತ್ತು. ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ 100 ಮೀಟರ್ ಅಂತರದೊಳಗಿರುವ ಅಚ್ಚಪ್ಪನ ಬಯಲಿನಲ್ಲಿ ಟಂಕ ಶಾಲೆ ಇತ್ತು. ಅಲ್ಲಿ ಟಂಕಿಸುತ್ತಿದ್ದ ಲೊಕ್ಕಿ ಮತ್ತು ಗದ್ಯಾಣ ಎಂಬ ಚಿನ್ನದ ನಾಣ್ಯಗಳು ಅವುಗಳ ಗಾತ್ರ ಮತ್ತು ತೂಕಕ್ಕೆ ಪ್ರಸಿದ್ಧವಾಗಿದ್ದವು. ನಾಡಿನ ವಿವಿಧೆಡೆ ಸಿಕ್ಕ ಶಾಸನಗಳಲ್ಲಿ ಈ ನಾಣ್ಯಗಳ ಬಗ್ಗೆ ಉಲ್ಲೇಖ ಇರುವುದರಿಂದ ಅವು ರಾಜ್ಯದೆಲ್ಲೆಡೆ ಬಳಕೆಯಲ್ಲಿದ್ದವು ಎಂದು ಗೊತ್ತಾಗಿದೆ. ದೇವಸ್ಥಾನ ಶಿಲ್ಪಕಲೆಯ ಹೊರತಾಗಿ ಲಕ್ಕುಂಡಿಯ ಇತಿಹಾಸ ಚಾಲುಕ್ಯ ಮತ್ತು ಹೊಯ್ಸಳ ಸಂಸ್ಕೃತಿಗಳ ಅದ್ಭುತ ಸಂಗಮವನ್ನು ತೆರೆದಿಡುತ್ತದೆ ಎಂದು ಇತಿಹಾಸ ತಜ್ಞರು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.