ಭಾರತವು ‘ಜಾಗತಿಕ ಚಿತ್ರಹಿಂಸೆ ಸೂಚ್ಯಂಕ 2025’ರಲ್ಲಿ ‘ಹೆಚ್ಚು ಅಪಾಯಕಾರಿ’ ದೇಶಗಳ ಪಟ್ಟಿಯಲ್ಲಿದೆ. ಸೂಚ್ಯಂಕದಲ್ಲಿ 26 ದೇಶಗಳಲ್ಲಿನ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲಾಗಿದ್ದು, ಭಾರತವು ಹೊಂಡುರಾಸ್, ಬೆಲರೂಸ್, ಕೊಲಂಬಿಯಾ, ಟರ್ಕಿ, ಟ್ಯುನೀಷಿಯಾಗಳ ಸಾಲಿನಲ್ಲಿದೆ. ದೇಶದಲ್ಲಿ ಚಿತ್ರಹಿಂಸೆಯು ವ್ಯಾಪಕವಾಗಿರುವುದಷ್ಟೆ ಅಲ್ಲದೇ, ವ್ಯವಸ್ಥೆಯ ಭಾಗವೇ ಆಗಿದೆ. ಅದರಲ್ಲೂ ದಲಿತರು, ಆದಿವಾಸಿಗಳು, ಮುಸ್ಲಿಮರು, ಲಿಂಗತ್ವ ಅಲ್ಪಸಂಖ್ಯಾತರು ಮತ್ತು ವಲಸೆ ಕಾರ್ಮಿಕರು ಚಿತ್ರಹಿಂಸೆಗೆ ಹೆಚ್ಚು ಗುರಿಯಾಗುತ್ತಿದ್ದಾರೆ. ಸಂತ್ರಸ್ತರು ಮತ್ತು ಅವರ ರಕ್ಷಣೆಗೆ ನಿಲ್ಲುವವರ ವಿರುದ್ಧ ಪ್ರತೀಕಾರಕ್ಕೆ ಮುಂದಾಗುತ್ತಿರುವ ಪ್ರವೃತ್ತಿ ಇದೆ ಎಂದು ವರದಿ ಹೇಳಿದೆ.
ವಿಶ್ವ ಚಿತ್ರಹಿಂಸೆ ವಿರೋಧಿ ಸಂಘಟನೆ (Wor*d Organization Against Torture –OMCT) ಮೊಟ್ಟಮೊದಲ ಬಾರಿಗೆ ಜಾಗತಿಕ ಚಿತ್ರಹಿಂಸೆ ಸೂಚ್ಯಂಕವನ್ನು ಸಿದ್ಧಪಡಿಸಿದೆ. ಅಂತರರಾಷ್ಟ್ರೀಯ ಮಾನವ ಹಕ್ಕುಗಳನ್ನು ಆಧರಿಸಿ ಏಳು ಮಾನದಂಡಗಳ ಆಧಾರವಾಗಿ ಚಿತ್ರಹಿಂಸೆ ಮತ್ತು ಕಿರುಕುಳವನ್ನು ಅಳೆಯಲಾಗಿದೆ. ಭಾರತವು ಜಾಗತಿಕ ಚಿತ್ರಹಿಂಸೆ ಸೂಚ್ಯಂಕ 2025ರಲ್ಲಿ ‘ಹೆಚ್ಚು ಅಪಾಯಕಾರಿ’ (High risk) ದೇಶಗಳ ಪಟ್ಟಿಯಲ್ಲಿದೆ. ತಮಿಳುನಾಡಿನ ‘ಪೀಪಲ್ಸ್ ವಾಚ್’ ಸಂಸ್ಥೆಯ ಸಹಭಾಗಿತ್ವದೊಂದಿಗೆ, 2023–24ರ ದತ್ತಾಂಶ ಆಧರಿಸಿ ಈ ಅಧ್ಯಯನ ನಡೆಸಲಾಗಿದೆ.
ಕಾನೂನು ಜಾರಿ ಕಾರ್ಯಾಚರಣೆಗಳನ್ನು ನಡೆಸುವಾಗ ಮತ್ತು ತನಿಖೆ ಮಾಡುವಾಗ ಪೊಲೀಸರು ಹಾಗೂ ಭದ್ರತಾ ಪಡೆಗಳು ಆರೋಪಿಗಳಿಗೆ ವ್ಯಾಪಕ ಚಿತ್ರಹಿಂಸೆ ನೀಡುತ್ತಿದ್ದು, ತೀವ್ರ ಹಲ್ಲೆ, ಒತ್ತಾಯಪೂರ್ವಕ ತಪ್ಪೊಪ್ಪಿಗೆ, ಕಸ್ಟಡಿ ಸಾವುಗಳು ಹೆಚ್ಚಾಗಿವೆ ಎಂದು ವರದಿ ಉಲ್ಲೇಖಿಸಿದೆ. ಅದರಲ್ಲೂ ದಲಿತರು, ಮುಸ್ಲಿಮರು, ಆದಿವಾಸಿಗಳಂಥ ಅಂಚಿನ ಸಮುದಾಯದವರು ಹೆಚ್ಚು ಚಿತ್ರಹಿಂಸೆಗೆ ಗುರಿಯಾಗುತ್ತಿದ್ದಾರೆ. ನಿದರ್ಶನಕ್ಕೆ, ಪಶ್ಚಿಮ ಬಂಗಾಳದ ಬಾಂಗ್ಲಾದೇಶದ ಗಡಿಯಲ್ಲಿ ಅಲ್ಲಿನ ನಿವಾಸಿಗಳನ್ನು ಕಸ್ಟಡಿಗಳಲ್ಲಿ, ಎನ್‌ಕೌಂಟರ್‌ಗಳಲ್ಲಿ ಹತ್ಯೆ ಮಾಡಲಾಗಿದ್ದು, ಅವರನ್ನು ನ್ಯಾಯಾಲಯದ ವಿಚಾರಣೆಯ ಹಕ್ಕಿನಿಂದ ವಂಚಿತರನ್ನಾಗಿಸಲಾಗಿದೆ. ಕೇಂದ್ರ ಗೃಹ ಸಚಿವಾಲಯ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಂಕಿಅಂಶಗಳ ಪ್ರಕಾರ, 2022 ಮತ್ತು 2023ರ ನಡುವೆ ಅಲ್ಲಿ ಕಸ್ಟಡಿ ಸಾವುಗಳ ಸಂಖ್ಯೆಯಲ್ಲಿ ಶೇ 300ರಷ್ಟು ಹೆಚ್ಚಳವಾಗಿದೆ ಎಂದು ವರದಿ ಹೇಳಿದೆ.
ಗಡಿ ಭದ್ರತಾ ಪಡೆಗಳು, ಪೊಲೀಸರು ಕಾನೂನಿನ ಭಯ ಇಲ್ಲದೇ ಜನರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ; ಅಂಥ ಸಿಬ್ಬಂದಿ, ಪೊಲೀಸರಿಗೆ ಬಡ್ತಿ ನೀಡಲಾಗಿದೆ. ಮಾನವ ಹಕ್ಕು ಹೋರಾಟಗಾರರನ್ನು ಮನಬಂದಂತೆ ಬಂಧಿಸಲಾಗಿದೆ. ಭಾರತದ ರಾಜಕೀಯ ಸ್ಥಿತಿಗತಿ ಮತ್ತು ಸಾಂಸ್ಥಿಕ ರಚನೆಗಳೂ ಅದಕ್ಕೆ ಇಂಬುನೀಡಿವೆ. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಗೆ (ಯುಎಪಿಎ) 2019ರಲ್ಲಿ ತಿದ್ದುಪಡಿ ಮಾಡಲಾಗಿದ್ದು, ಭಿನ್ನಮತವನ್ನು ಹತ್ತಿಕ್ಕುವುದಕ್ಕಾಗಿ ಸಾಮಾಜಿಕ ಕಾರ್ಯಕರ್ತರನ್ನು ಭಯೋತ್ಪಾದಕರೆಂದು ಲೇಪನ ಹಚ್ಚಿದ ಪ್ರಕರಣಗಳೂ ನಡೆದಿವೆ ಎಂದು ವರದಿ ಉಲ್ಲೇಖಿಸಿದೆ.
2023ರಲ್ಲಿ 2,400 ಕಸ್ಟಡಿ ಸಾವುಗಳು ವರದಿಯಾಗಿದ್ದರೆ, 2024ರಲ್ಲಿ 2,739 ಕಸ್ಟಡಿ ಸಾವುಗಳು ವರದಿಯಾಗಿವೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಹೇಳಿದೆ. 2022ರಲ್ಲಿ 1,995 ಮಂದಿ ಕೈದಿಗಳು ಸಾವಿಗೀಡಾಗಿದ್ದರೆ, 159 ಮಂದಿ ಅಸ್ವಾಭಾವಿಕ ಸಾವು ಕಂಡಿದ್ದರು. 2018ರಿಂದ ಕನಿಷ್ಠ ಎಂದರೂ 61 ಮಾನವ ಹಕ್ಕುಗಳ ಹೋರಾಟಗಾರರನ್ನು ಯುಎಪಿಎ ಅಡಿ ಬಂಧಿಸಲಾಗಿತ್ತು. ತೀವ್ರವಾದ ಅಂಗವೈಕಲ್ಯ ಇದ್ದಾಗಲೂ ಪ್ರೊ.ಜಿ.ಎನ್.ಸಾಯಿಬಾಬಾ ಅವರನ್ನು ಬಂಧಿಸಿ, ದೀರ್ಘಕಾಲ ಜೈಲಿನಲ್ಲಿಡಲಾಗಿತ್ತು. ಜಾತಿ ದೌರ್ಜನ್ಯ ಪ್ರಕರಣವನ್ನು ವರದಿ ಮಾಡುವ ವೇಳೆ ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರನ್ನು ಬಂಧಿಸಿ, ಎರಡು ವರ್ಷ ಜೈಲಿನಲ್ಲಿಡಲಾಗಿತ್ತು.
ಚಿತ್ರಹಿಂಸೆಗೆ ಗುರಿಯಾದ ಸಂತ್ರಸ್ತರ ಹಕ್ಕುಗಳು ಸೀಮಿತವಾಗಿವೆ. ಚಿತ್ರಹಿಂಸೆಯನ್ನು ವ್ಯಾಖ್ಯಾನಿಸುವ ಪ್ರತ್ಯೇಕ ನಿಯಮ ಇಲ್ಲವಾಗಿದ್ದು, ಅವರ ದೂರುಗಳನ್ನು ಆಲಿಸುವ, ಪುನರ್ವಸತಿ ಕಲ್ಪಿಸುವ ವ್ಯವಸ್ಥೆ ಇಲ್ಲ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಅಸ್ತಿತ್ವದಲ್ಲಿದ್ದರೂ ಅದಕ್ಕೆ ಅಗತ್ಯವಾದಷ್ಟು ಸ್ವಾತಂತ್ರ್ಯವಿಲ್ಲದೆ, ಸಂತ್ರಸ್ತರ ಬೇಡಿಕೆಗಳಿಗೆ ಕಿವಿಗೊಡದೆ ಅದು ಟೀಕೆಗೆ ಗುರಿಯಾಗಿದೆ ಎಂದು ವರದಿ ವಿವರಿಸಿದೆ.
ಐದು ವಲಯ, 26 ದೇಶ, ಐದು ವಿಭಾಗ
ವಿಶ್ವ ಚಿತ್ರಹಿಂಸೆ ವಿರೋಧಿ ಸಂಘಟನೆಯು ಜಗತ್ತಿನ ಐದು ವಲಯಗಳ 26 ದೇಶಗಳಲ್ಲಿ ದತ್ತಾಂಶಗಳನ್ನು ಸಂಗ್ರಹಿಸಿ ಈ ಸೂಚ್ಯಂಕ ವರದಿ ಸಿದ್ಧಪಡಿಸಿದೆ. ಇದು ಮೊದಲ ವರ್ಷದ ಸೂಚ್ಯಂಕವಾಗಿದ್ದು, ಮುಂದಿನ ವರ್ಷಗಳಲ್ಲಿ ಇದರ ವ್ಯಾಪ್ತಿಯನ್ನು ಇನ್ನಷ್ಟು ದೇಶಗಳಿಗೆ ವಿಸ್ತರಿಸಲಾಗುವುದು ಎಂದು ಸಂಘಟನೆ ಹೇಳಿದೆ. 26 ರಾಷ್ಟ್ರಗಳಲ್ಲಿರುವ 80 ಪಾಲುದಾರರ ಮೂಲಕ 2023 ಮತ್ತು 2024ರ ದತ್ತಾಂಶಗಳನ್ನು ಅದು ಸಂಗ್ರಹಿಸಿದೆ.
ಆಫ್ರಿಕಾ ವಲಯದ ಐದು, ಪಶ್ಚಿಮ ಏಷ್ಯಾ ಮತ್ತು ಉತ್ತರ ಆಫ್ರಿಕಾದ ಮೂರು, ಏಷ್ಯಾ ಮತ್ತು ಪೆಸಿಫಿಕ್ ವಲಯದ ಐದು, ಯೂರೋಪ್ ಮತ್ತು ಮಧ್ಯ ಏಷ್ಯಾದ ಎಂಟು ಹಾಗೂ ಅಮೆರಿಕ ವಲಯದ ಐದು ರಾಷ್ಟ್ರಗಳನ್ನು ಈ ಸೂಚ್ಯಂಕ ಒಳಗೊಂಡಿದೆ.
ಆರು ರಾಷ್ಟ್ರಗಳು ಅತ್ಯಂತ ಹೆಚ್ಚು ಅಪಾಯಕಾರಿ ರಾಷ್ಟ್ರಗಳ ಪಟ್ಟಿಯಲ್ಲಿದ್ದರೆ, ಭಾರತ ಸೇರಿದಂತೆ 13 ರಾಷ್ಟ್ರಗಳು ಹೆಚ್ಚು ಅಪಾಯಕಾರಿ ಸೂಚ್ಯಂಕ ಹೊಂದಿವೆ. ನಾಲ್ಕು ದೇಶಗಳು ಗಣನೀಯ ಪ್ರಮಾಣದ ಅಪಾಯಕಾರಿ ಮತ್ತು ಮೂರು ರಾಷ್ಟ್ರಗಳು ಮಧ್ಯಮ ಮಟ್ಟದ ಅಪಾಯಕಾರಿ ಸೂಚ್ಯಂಕ ಪಡೆದಿವೆ.
ಐದು ವಲಯ 26 ದೇಶಗಳು
ಮಾನದಂಡಗಳು
1. ರಾಜಕೀಯ ಬದ್ಧತೆ
2. ಪೊಲೀಸ್ ದೌರ್ಜನ್ಯ ಮತ್ತು ಸಾಂಸ್ಥಿಕ ಹಿಂಸೆಯನ್ನು ಅಂತ್ಯಗೊಳಿಸುವುದು
3. ಬಂಧನದಲ್ಲಿರುವವರಿಗೆ ಚಿತ್ರಹಿಂಸೆಯಿಂದ ಮುಕ್ತಿ
4. ಚಿತ್ರಹಿಂಸೆ ನೀಡುವವರಿಗೆ ಶಿಕ್ಷೆಯಿಂದ ವಿನಾಯಿತಿ ನೀಡದೇ ಇರುವುದು
5. ಸಂತ್ರಸ್ತರ ಹಕ್ಕುಗಳು
6. ಸರ್ವರಿಗೂ ರಕ್ಷಣೆ
7. ನಾಗರಿಕ ಪಾಲ್ಗೊಳ್ಳುವಿಕೆ ಮತ್ತು ಸಮರ್ಥನೆಯ ಹಕ್ಕು
ಶಿಫಾರಸುಗಳು
* ಚಿತ್ರಹಿಂಸೆ ವಿರುದ್ಧದ ವಿಶ್ವಸಂಸ್ಥೆಯ ನಿರ್ಣಯಗಳು, ಅದರ ಶಿಷ್ಟಾಚಾರ ಮತ್ತು ಅಪಹರಣದಿಂದ ಜನರನ್ನು ರಕ್ಷಿಸುವುದಕ್ಕೆ ಸಂಬಂಧಿಸಿದ ನಿರ್ಣಯಗಳನ್ನು ಅನುಷ್ಠಾನಗೊಳಿಸಬೇಕು
* ತನಿಖೆಯ ವೇಳೆ ಪರಿಣಾಮಕಾರಿಯಾಗಿ ವಿಚಾರಣೆ, ಮಾಹಿತಿ ಕಲೆಹಾಕುವುದಕ್ಕೆ ಸಂಬಂಧಿಸಿದ ಮೆಂಡಿಸ್ ನಿಯಮಗಳನ್ನು ಜಾರಿಗೆ ತರಬೇಕು. ಭಾರಿ ಪ್ರಮಾಣದಲ್ಲಿ ಸೇರಿರುವ ಜನರನ್ನು ನಿರ್ವಹಿಸಲು ಕಾನೂನು ಜಾರಿ ಮತ್ತು ಭದ್ರತಾ ಪಡೆಗಳಿಗೆ ಅಗತ್ಯ ತರಬೇತಿ ನೀಡಬೇಕು
* ಮಾನವ ಹಕ್ಕುಗಳ ಪರವಾಗಿ ಇರುವವರ ವಿರುದ್ಧ ಭಯೋತ್ಪದನಾ ನಿಗ್ರಹ, ರಾಷ್ಟ್ರೀಯ ಭದ್ರತೆ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆಯುವ ಕಾನೂನುಗಳನ್ನು ದುರ್ಬಳಕೆ ಮಾಡುವುದನ್ನು ಕೊನೆಗಾಣಿಸಬೇಕು
* ಇಸ್ತಾಂಬುಲ್ ಮತ್ತು ಮಿನ್ನಸೋಟಾ ಶಿಷ್ಟಾಚಾರಕ್ಕೆ ಅನುಗುಣವಾಗಿ, ಬಿಎನ್‌ಎಸ್ ಸೆಕ್ಷನ್ 192 (2)ರ ಅಡಿಯಲ್ಲಿ ಪೊಲೀಸ್ ವಶದಲ್ಲಿ ಅಥವಾ ನ್ಯಾಯಾಂಗ ಬಂಧನದಲ್ಲಿ ಆದ ಸಾವುಗಳ ಬಗ್ಗೆ ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಸಬೇಕು. ಶವಪರೀಕ್ಷೆ ಮಾಡುವುದಕ್ಕೂ ಮೊದಲು ಮೃತದೇಹವನ್ನು ವೀಕ್ಷಿಸಲು ಅವಕಾಶ ಇರುವ ಕುಟುಂಬಸ್ಥರ ಹಕ್ಕನ್ನು ಎತ್ತಿಹಿಡಿಯುವುದು ಮತ್ತು ಮರಣೋತ್ತರ ಪರೀಕ್ಷೆ ನಡೆಸಿದ ದಿನವೇ ಪರೀಕ್ಷಾ ವರದಿ ಮತ್ತು ಅದರ ವಿಡಿಯೊ ರೆಕಾರ್ಡಿಂಗ್ ನೀಡುವುದನ್ನು ಖಾತರಿ ಪಡಿಸಬೇಕು
* ಮಾನ್ಯತೆಗೆ ಸಂಬಂಧಿಸಿದ ರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳ ಜಾಗತಿಕ ಒಕ್ಕೂಟದ ಉಪಸಮಿತಿಯ ಶಿಫಾರಸುಗಳಿಗೆ ಪೂರಕವಾಗಿ 2019ರ ಮಾನವ ಹಕ್ಕುಗಳ ರಕ್ಷಣಾ ಕಾಯ್ದೆಗೆ ತಿದ್ದುಪಡಿ ತರಬೇಕು. ಆ ಮೂಲಕ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ತನ್ನ ಸ್ವಾತಂತ್ರ್ಯ, ಸ್ವಾಯತ್ತೆ ಮತ್ತು ಪರಿಣಾಮಕಾರಿಯಾಗಿ ತನಿಖೆ ನಡೆಸುವ ಹಕ್ಕುಗಳನ್ನು ಖಾತರಿ ಪಡಿಸಿಕೊಳ್ಳಬೇಕು
ಭಾರತದಲ್ಲಿ ಚಿತ್ರಹಿಂಸೆಯು ಶಿಕ್ಷಾರ್ಹ ಅಪರಾಧ ಎಂದು ಹೇಳುವ ರಾಷ್ಟ್ರೀಯ ಶಾಸನವೇ ಇಲ್ಲ. ಚಿತ್ರಹಿಂಸೆಗೆ ಸಂಬಂಧಿಸಿದ ವಿಶ್ವ ಸಂಸ್ಥೆಯ ನಿಯಮಗಳು ಮತ್ತು ಶಿಷ್ಟಾಚಾರಗಳಿಗೆ (ಯುಎನ್‌ಸಿಎಟಿ) ಅಧಿಕೃತ ಮಾನ್ಯತೆ ಇಲ್ಲ. ದೇಶದಲ್ಲಿ ಚಿತ್ರಹಿಂಸೆಯನ್ನು ನಿವಾರಿಸುವ ಅಥವಾ ತಡೆಗಟ್ಟುವ ವ್ಯವಸ್ಥೆ ತರುವ ದಿಸೆಯಲ್ಲಿ ರಾಜಕೀಯ ಬದ್ಧತೆಯೇ ವ್ಯಕ್ತವಾಗಿಲ್ಲ ಎಂದು ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.