ಜಾಗತಿಕ ಆರ್ಥಿಕ ಹಿಂಜರಿತ, ದೇಶದಲ್ಲಿನ ತೀವ್ರ ಹಣದುಬ್ಬರದ ಪರಿಣಾಮವಾಗಿ ಜನಸಾಮಾನ್ಯನ ಗಳಿಕೆ ಗಣನೀಯ ಪ್ರಮಾಣದಲ್ಲೇನೂ ಏರಿಕೆಯಾಗಿಲ್ಲ. ಆದರೆ ಆತನ ದೈನಂದಿನ ಜೀವನದ ವೆಚ್ಚ ಏರಿಕೆಯಾಗುತ್ತಲೇ ಇದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತೆರಿಗೆ ನೀತಿ–ಕ್ರಮಗಳೇ ಇದಕ್ಕೆ ನೇರ ಕಾರಣ. ಎರಡೂ ಸರ್ಕಾರಗಳು ಭಾರಿ ಸುದ್ದಿಯಾಗುವಂತಹ ತೆರಿಗೆ ಹೆಚ್ಚಳ, ಬೆಲೆ ಹೆಚ್ಚಳವನ್ನು ಮಾಡಿಲ್ಲ. ಬದಲಿಗೆ ಸಣ್ಣ–ಸಣ್ಣ ಮಟ್ಟದಲ್ಲಿ ತೆರಿಗೆಗಳನ್ನು ಹೆಚ್ಚಿಸಿವೆ. ಕಚ್ಚಾ ವಸ್ತು ಮತ್ತು ಸಾಗಣೆಗೆ ಬಳಕೆಯಾಗುವ ಇಂಧನದ ಮೇಲೆ ಹೇರಿದ ತೆರಿಗೆ ಸರಪಳಿ ಕ್ರಿಯೆಯಂತೆ ದಿನಬಳಕೆ ವಸ್ತುಗಳ ಬೆಲೆ ವಿಪರೀತ ಏರಿಕೆಯಾಗಿದೆ.
ತೆರಿಗೆ ಭಾರ ಇಳಿಸದ ರಾಜ್ಯ
ತನ್ನ ಆದಾಯ ಹೆಚ್ಚಿಸಿಕೊಳ್ಳಲು 2024–25ನೇ ಸಾಲಿನಲ್ಲಿ ಹಲವು ತೆರಿಗೆಗಳನ್ನು ಹೆಚ್ಚಿಸಿದ್ದ ರಾಜ್ಯ ಸರ್ಕಾರವು, 2025–26ನೇ ಸಾಲಿಗೂ ಅವನ್ನು ಮುಂದುವರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಾರಿಯ ಬಜೆಟ್‌ನಲ್ಲಿ ತೆರಿಗೆ ಹೆಚ್ಚಳವನ್ನು ಉಲ್ಲೇಖಿಸಿಲ್ಲವಾದರೂ, ಈ ಹಿಂದೆ ಹೆಚ್ಚಿಸಿದ್ದ ತೆರಿಗೆಗಳನ್ನು ಇಳಿಸುವ ಪ್ರಸ್ತಾಪವನ್ನೂ ಮಾಡಿಲ್ಲ. ತೆರಿಗೆ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಬಜೆಟ್‌ಗೆ ಅನುಮೋದನೆಯೂ ದೊರೆತಿದೆ. ಬೆನ್ನಲ್ಲೇ ಹಾಲಿನ ದರವನ್ನು ಪ್ರತಿ ಲೀಟರ್‌ಗೆ ₹4ರಂತೆ ಏರಿಕೆ ಮಾಡಿ, ವಿದ್ಯುತ್ ದರ ವಿಪರೀತ ಹೆಚ್ಚಿಸಿ ಸರ್ಕಾರವು ಜನರ ಹೊರೆ ಹೆಚ್ಚಿಸಿದೆ.
ಜಿಎಸ್‌ಟಿ ಜಾರಿಯ ನಂತರ ಸರಕು ಮತ್ತು ಸೇವೆಗಳ ಮೇಲೆ ತೆರಿಗೆ ವಿಧಿಸುವ ಅಧಿಕಾರ ಸಂಪೂರ್ಣವಾಗಿ ಜಿಎಸ್‌ಟಿ ಮಂಡಳಿಗೆ ಹೋಗಿದೆ. ಮದ್ಯ, ರಸ್ತೆ ತೆರಿಗೆ, ನೋಂದಣಿ ಮತ್ತು ಮುದ್ರಾಂಕ, ಇಂಧನದ ಮೇಲಿನ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ವಿಧಿಸಲಷ್ಟೇ ರಾಜ್ಯಗಳಿಗೆ ಅವಕಾಶವಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರವು ಈ ಎಲ್ಲ ತೆರಿಗೆಗಳನ್ನೂ ಗಣನೀಯ ಪ್ರಮಾಣದಲ್ಲೇ ಏರಿಕೆ ಮಾಡಿದೆ. ಜತೆಗೆ ವೃತ್ತಿಪರ ತೆರಿಗೆಯನ್ನೂ ₹100 ಹೆಚ್ಚಿಸಿದೆ. ಪರಿಣಾಮವಾಗಿ ಜನರ ದೈನಂದಿನ ಜೀವನದ ವೆಚ್ಚ ಏರಿಕೆಯಾಗಿದೆ. ಅವುಗಳ ವಿವರ ಇಲ್ಲಿದೆ.
ಇಂಧನದ ಹೊರೆ
2024ರ ಜೂನ್‌ನಲ್ಲಿ ರಾಜ್ಯ ಸರ್ಕಾರವು ಪೆಟ್ರೋಲ್ ಮೇಲಿನ ವ್ಯಾಟ್ ಅನ್ನು ಶೇ25.92ರಿಂದ ಶೇ29.84ಕ್ಕೆ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಶೇ14.34ರಿಂದ ಶೇ18.44ಕ್ಕೆ ಏರಿಕೆ ಮಾಡಿತ್ತು. ಪರಿಣಾಮವಾಗಿ ಎರಡೂ ಇಂಧನಗಳ ಬೆಲೆ ಏರಿಕೆಯಾಗಿತ್ತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಏರಿಕೆಯಾದಂತೆಲ್ಲಾ ಇಂಧನಗಳ ಚಿಲ್ಲರೆ ಮಾರಾಟ ಬೆಲೆಯ ಹೊರೆಯೂ ಹೆಚ್ಚುತ್ತಿದೆ. ಡೀಸೆಲ್ ಬೆಲೆ ಏರಿಕೆಯಾಗಿ ಸಾಗಣೆ ವೆಚ್ಚ ಹೆಚ್ಚಳದಿಂದ ದಿನಬಳಕೆಯ ಎಲ್ಲ ವಸ್ತುಗಳೂ ತುಟ್ಟಿಯಾಗಿವೆ.
ಮೆಟ್ರೊ ಬಲು ದುಬಾರಿ
ಬೆಂಗಳೂರು ಮೆಟ್ರೊ ದರ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಕೆಲವು ನಿಲ್ದಾಣಗಳ ನಡುವಣ ದರ ಶೇ70ರವೆರಗೂ ತುಟ್ಟಿಯಾಗಿದೆ. ಮೆಟ್ರೊ ದರ ಪರಿಷ್ಕರಣೆ ಮಾಡುವವರು ಕೇಂದ್ರ ಸರ್ಕಾರದ ಅಧಿಕಾರಿಗಳು ಆಗಿದ್ದರೂ, ರಾಜ್ಯ ಸರ್ಕಾರದ ಪ್ರತಿನಿಧಿಗಳೂ ಸಂಬಂಧಿತ ಸಮಿತಿ ಮತ್ತು ಮಂಡಳಿಗಳಲ್ಲಿ ಇರುತ್ತಾರೆ.
ಬಿಯರ್ ತುಟ್ಟಿ
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಬಿಯರ್ ಮೇಲಿನ ಸುಂಕ ಈವರೆಗೆ ಮೂರು ಬಾರಿ ಏರಿಕೆಯಾಗಿದೆ. ₹70–75ಕ್ಕೆ ಸಿಗುತ್ತಿದ್ದ ಬಿಯರ್‌ನ ಬೆಲೆ ₹150 ದಾಟಿದೆ. ಪ್ರೀಮಿಯಂ ಬಿಯರ್‌ನ ಬೆಲೆ ₹250 ದಾಟಿದೆ. ಸುಂಕ ಹೆಚ್ಚಳದಿಂದ ಸರ್ಕಾರ ಹೆಚ್ಚಿನ ಆದಾಯ ಸಂಗ್ರಹದ ಗುರಿ ಹಾಕಿಕೊಂಡಿತ್ತಾದರೂ, ನಿರೀಕ್ಷೆಯಷ್ಟು ಆದಾಯ ಬಂದಿಲ್ಲ. ಜತೆಗೆ ಹಲವು ತಿಂಗಳುಗಳಲ್ಲಿ ಬಿಯರ್ ಮಾರಾಟ ಕುಸಿದಿತ್ತು.
ನೋಂದಣಿ ಮತ್ತು ಮುದ್ರಾಂಕ
ನೋಂದಣಿಗೆ ಬಳಕೆಯಾಗುತ್ತಿದ್ದ ಕಡಿಮೆ ಮುಖಬೆಲೆಯ ಇ–ಸ್ಟಾಂಪ್ ಪೇಪರ್‌ಗಳನ್ನು ಸರ್ಕಾರ ಹಿಂದಕ್ಕೆ ಪಡೆಯಿತು. ಈ ಹಿಂದೆ ₹20ರ ಮುಖಬೆಲೆಯ ಕಾಗದ ಬಳಸುತ್ತಿದ್ದೆಡೆಯಲ್ಲಿ, ₹100ರ ಕಾಗದ ಬಳಸುವಂತಾಯಿತು. ಕೃಷಿ ಇಲಾಖೆ, ಪಂಚಾಯತ್ ರಾಜ್, ಪಶುಸಂಗೋಪನಾ ಇಲಾಖೆಯ ವಿವಿಧ ಯೋಜನೆಗಳಿಗೆ ಪ್ರಮಾಣ ಪತ್ರ ಸಲ್ಲಿಸುವ ರೈತರಿಗೆ ಇದರಿಂದ ಹೊರೆ ಹೆಚ್ಚಾಗಿತ್ತು.
ರಸ್ತೆ ತೆರಿಗೆ ಹೆಚ್ಚಳ
ರಾಜ್ಯದಲ್ಲಿ ನೋಂದಣಿಯಾಗುವ ವಾಹನಗಳ ಮೇಲಿನ ರಸ್ತೆ ತೆರಿಗೆಯನ್ನು ಹೆಚ್ಚಿಸುವ ಮಸೂದೆಗೆ 2024ರ ಡಿಸೆಂಬರ್‌ನಲ್ಲಿ ಒಪ್ಪಿಗೆ ದೊರೆತಿತ್ತು. ಇದು ಜಾರಿಗೆ ಬಂದ ನಂತರ ದ್ವಿಚಕ್ರ ವಾಹನಗಳ ಮೇಲೆ ₹500, ಕಾರುಗಳ ಮೇಲೆ ₹1,000 ಮತ್ತು ಸಾರಿಗೆ ವಾಹನಗಳ ಮೇಲೆ ಶೇ 3ರಷ್ಟು ಹೆಚ್ಚುವರಿ ಸೆಸ್ ವಿಧಿಸಿತ್ತು. ₹25 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ಇ.ವಿಗಳ ಮೇಲೆ ಶೇ 10ರಷ್ಟು ಜೀವಿತಾವಧಿ ತೆರಿಗೆ ವಿಧಿಸಿತ್ತು.
ಹಾಲು ತುಟ್ಟಿ
2023ರ ಆಗಸ್ಟ್ 1ರಿಂದ ಅನ್ವಯವಾಗುವಂತೆ ಕೆಎಂಎಫ್ ನಂದಿನಿ ಹಾಲಿನ ಬೆಲೆಯನ್ನು ಪ್ರತಿ ಲೀಟರ್‌ಗೆ ₹3ರಂತೆ ಏರಿಕೆ ಮಾಡಲಾಗಿತ್ತು. ಪರಿಣಾಮವಾಗಿ ಹೋಟೆಲ್‌ಗಳು ಕಾಫಿ–ಟೀ ಮತ್ತು ಹಾಲಿನಿಂದ ಮಾಡಿದ ಇತರ ಪಾನೀಯಗಳ ಬೆಲೆಯನ್ನು ಏರಿಕೆ ಮಾಡಿದ್ದವು. ಇದು ಜನ ಸಾಮಾನ್ಯನ ಹಾಲಿನ ಮೇಲಿನ ವೆಚ್ಚವನ್ನು ಹೆಚ್ಚಿಸಿತ್ತು. 2024ರ ಜುಲೈನಲ್ಲಿ ಕೆಎಂಎಫ್ ಹಾಲಿನ ಪ್ಯಾಕೆಟ್ಟುಗಳ ಗಾತ್ರವನ್ನು ಹೆಚ್ಚಿಸಿ (ಎಲ್ಲ ಪ್ಯಾಕೆಟ್ಟುಗಳಲ್ಲಿ ಹೆಚ್ಚುವರಿ 50 ಎಂಎಲ್ ಹಾಲು), ಪ್ರತಿ ಪ್ಯಾಕೆಟ್ಟಿನ ಬೆಲೆಯನ್ನು ₹2ರಷ್ಟು ಹೆಚ್ಚು ಮಾಡಿತ್ತು. ಜನ ಸಾಮಾನ್ಯ ಪ್ರತಿ ತಿಂಗಳು ಹಾಲಿಗಾಗಿ ಮಾಡುವ ವೆಚ್ಚ ಏರಿಕೆಯಾಗಿತ್ತು. ಈಗ ಮತ್ತೆ ಹಾಲಿನ ದರವನ್ನು ರಾಜ್ಯ ಸರ್ಕಾರ ಹೆಚ್ಚಿಸಿದೆ.
ಕೇಂದ್ರ ಸರ್ಕಾರದ ಸುಂಕ ಹೊರೆ
ಕೇಂದ್ರ ಸರ್ಕಾರವು ಈ ಬಜೆಟ್‌ನಲ್ಲಿ ಆದಾಯ ತೆರಿಗೆ ವಿನಾಯಿತಿಯನ್ನು ಘೋಷಿಸಿದ್ದರೂ, ದೈನಂದಿನ ಬಳಕೆಯ ಹಲವು ವಸ್ತುಗಳ ಮೇಲೆ ಆಮದು ಸುಂಕ, ಆಮದು ಸುಂಕ ಸೆಸ್ ಅನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿದೆ.
ಈ ಹಿಂದಿನ ಬಜೆಟ್‌ಗಳಲ್ಲಿ ಕಲ್ಲಿದ್ದಲಿನ ಮೇಲೆ ಜಿಎಸ್‌ಟಿ (5%), ರಾಯಧನ (30%), ಪ್ರತಿ ಟನ್‌ನ ಮೇಲೆ ₹400 ಸೆಸ್ ವಿಧಿಸಿದ ಕಾರಣ ಗೃಹಬಳಕೆ ಮತ್ತು ನಿರ್ಮಾಣ ಸಾಮಗ್ರಿಗಳ ಬೆಲೆ ವಿಪರೀತ ಎನ್ನುವಷ್ಟು ಏರಿಕೆಯಾಗಿತ್ತು. ಕಲ್ಲಿದ್ದಲ್ಲಿನ ಮೇಲಿನ ಒಟ್ಟಾರೆ ತೆರಿಗೆ ಏರಿಕೆಯಾದ ಕಾರಣ, ಕಬ್ಬಿಣ, ಸಿಮೆಂಟ್, ಜಿಪ್ಸಂ, ರಸಗೊಬ್ಬರ ಮತ್ತು ವಿದ್ಯುತ್ ದರ ಏರಿಕೆಯಾಯಿತು. ವಿದ್ಯುತ್ ದರ ಏರಿಕೆ ಒಂದರಿಂದಲೇ ಬಹುತೇಕ ಗೃಹಬಳಕೆ ವಸ್ತುಗಳ ತಯಾರಿಕೆ ಮತ್ತು ಉತ್ಪಾದನಾ ವೆಚ್ಚ ಹೆಚ್ಚಳವಾಯಿತು. ಜನಸಾಮಾನ್ಯನ ತಿಂಗಳ ವೆಚ್ಚ ಹೆಚ್ಚಾಯಿತು.
ಈ ಮಧ್ಯೆ, ಕೇಂದ್ರವು ಹಲವು ವಸ್ತುಗಳ ದೇಶೀಯ ತಯಾರಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಬಜೆಟ್‌ನಲ್ಲಿ ಆಮದು ಸುಂಕ, ಸೆಸ್ ಹೆಚ್ಚಳ ಮಾಡಿದೆ. ಟಿ.ವಿ ಪ್ಯಾನಲ್‌ಗಳು, ಕಂಪ್ಯೂಟರ್–ಲ್ಯಾಪ್‌ಟಾಪ್ ಪ್ಯಾನಲ್‌ಗಳು, ಮೊಬೈಲ್ ಸಂಪರ್ಕ ಸಾಧನಗಳ ಬಿಡಿಭಾಗಗಳು ಮತ್ತಿತರ ವಸ್ತುಗಳ ಮೇಲೆ ಸುಂಕ ಹೆಚ್ಚಿಸಿದೆ. ಇದೇ ಏಪ್ರಿಲ್ 1ರಿಂದ ಈ ಎಲ್ಲ ವಸ್ತುಗಳಿಗೆ ಜನಸಾಮಾನ್ಯ ಹೆಚ್ಚು ಬೆಲೆ ತೆರಬೇಕಿದೆ. ಅವುಗಳ ವಿವರ ಈ ಮುಂದಿನಂತಿದೆ.
ಟಿವಿ, ಮಾನಿಟರ್ ತುಟ್ಟಿ
ಟಿ.ವಿ, ಮಾನಿಟರ್, ಟಚ್ ಪ್ಯಾನೆಲ್, ಇತರೆ ಎಲ್‌ಇಡಿ ಪ್ಯಾನಲ್‌ಗಳ ಮೇಲಿದ್ದ ಆಮದು ಸುಂಕವನ್ನು ಶೇ 10ರಿಂದ ಶೇ 20ಕ್ಕೆ ಏರಿಕೆ ಮಾಡಲಾಗಿದೆ. ಇದು ಬಿಡಿಭಾಗಗಳ ಮೇಲಿನ ಸುಂಕ ಹೆಚ್ಚಳವಾಗಿದ್ದರೂ, ಗ್ರಾಹಕ ಉತ್ಪನ್ನದ ಬೆಲೆ ಏರಿಕೆಗೆ ಕಾರಣವಾಗಲಿದೆ. ಟಿ.ವಿ ಮತ್ತು ಮಾನಿಟರ್‌ಗಳ ಮಾರುಕಟ್ಟೆ ಬೆಲೆಯಲ್ಲಿ ಶೇ 80ರಷ್ಟು ವೆಚ್ಚ ಪ್ಯಾನಲ್‌ಗಳದ್ದೇ ಇರುತ್ತದೆ. ಹೀಗಾಗಿ ಇನ್ನುಮುಂದೆ ಇವುಗಳನ್ನು ಖರೀದಿಸುವವರು ಹೆಚ್ಚು ಹಣ ನೀಡಬೇಕಾಗುತ್ತದೆ.
ನೇಯ್ದ ಬಟ್ಟೆಗಳು
ಸಿಂಥೆಟಿಕ್ ಮತ್ತು ಪಾಲಿಮರ್ ಬಳಸಿ ರೂಪಿಸಲಾದ ಬಟ್ಟೆಗಳನ್ನು ಹೊರತುಪಡಿಸಿ ಮಿಕ್ಕೆಲ್ಲಾ ಸ್ವರೂಪದ ಬಟ್ಟೆಗಳ ಮೇಲಿನ ಆಮದು ಸುಂಕವನ್ನು ಶೇ10ರಿಂದ ಶೇ 20ಕ್ಕೆ ಏರಿಕೆ ಮಾಡಲಾಗಿದೆ. ಇಂತಹ ಬಹುತೇಕ ಬಟ್ಟೆಯನ್ನು ಭಾರತವು ಚೀನಾದಿಂದ ಆಮದು ಮಾಡಿಕೊಳ್ಳುತ್ತದೆ. ದೇಶೀಯ ಉತ್ಪನ್ನಕ್ಕಿಂತ ಚೀನಾದ ಉತ್ಪನ್ನದ ಬೆಲೆ ಗಣನೀಯ ಪ್ರಮಾಣದಷ್ಟು ಕಡಿಮೆ ಇರುವ ಕಾರಣಕ್ಕೆ ಜವಳಿ ಉದ್ಯಮವು ಚೀನಾವನ್ನು ಅವಲಂಬಿಸಿವೆ. ಈಗ ಸುಂಕ ಏರಿಕೆಯ ಬಿಸಿ ಜವಳಿ ಉದ್ಯಮಕ್ಕೆ ತಟ್ಟಲಿದೆ. ಜನ ಸಾಮಾನ್ಯ ದೈನಂದಿನ ಬಟ್ಟೆ, ಸೂಟು, ಸ್ವೆಟರ್, ಪಾರ್ಟಿವೇರ್ ಎಲ್ಲದಕ್ಕೂ ಹೆಚ್ಚಿನ ಹಣ ಕೊಡಬೇಕಾಗುತ್ತದೆ.
ದೂರಸಂಪರ್ಕ ಸಾಧನಗಳು
ದೂರಸಂಪರ್ಕ ಸಾಧನಗಳಾದ ರೌಟರ್, ಮೋಡಂ, ಲ್ಯಾಂಡ್‌ಲೈನ್ ದೂರವಾಣಿ, ಡಾಟಾ ಕೇಬಲ್ ಮೊದಲಾದವುಗಳು ಮತ್ತು ಅವುಗಳ ಬಿಡಿಭಾಗಗಳ ಮೇಲಿನ ಆಮದು ಸುಂಕವನ್ನು ಶೇ10ರಿಂದ ಶೇ15ಕ್ಕೆ ಹೆಚ್ಚಿಸಲಾಗಿದೆ. ಇವು ನೇರವಾಗಿ ಇಂಟರ್‌ನೆಟ್ ಸೇವಾ ಕಂಪನಿಗಳ ವೆಚ್ಚವನ್ನು ಹೆಚ್ಚಿಸುತ್ತವೆ. ಆದರೆ ಪರೋಕ್ಷವಾಗಿ ಗ್ರಾಹಕ ಆ ಹೊರೆಯನ್ನು ಹೊರಬೇಕಾಗುತ್ತದೆ. ಇದೂ ಸಹ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.