ADVERTISEMENT

ಆಳ–ಅಗಲ | ಆಧಾರ್ ನಿಯಮ ತಿದ್ದುಪಡಿ: ದತ್ತಾಂಶ ಸುರಕ್ಷತೆಗೆ ಭಂಗ?

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2025, 0:12 IST
Last Updated 21 ಫೆಬ್ರುವರಿ 2025, 0:12 IST
   
ಗ್ರಾಹಕರ ಗುರುತನ್ನು ಖಾತರಿ ಪಡಿಸಿಕೊಳ್ಳಲು ಖಾಸಗಿ ಕಂಪನಿಗಳು ಆಧಾರ್‌ ಸಂಖ್ಯೆ ಕೇಳುವುದನ್ನು 2018ರಲ್ಲಿ ಸುಪ್ರೀಂ ಕೋರ್ಟ್ ನಿರ್ಬಂಧಿಸಿತ್ತು. ಕೇಂದ್ರ ಸರ್ಕಾರವು ಆಧಾರ್ ನಿಯಮಾವಳಿಗೆ ಈಗ ತಿದ್ದುಪಡಿ ತರುವ ಮೂಲಕ ವಿವಿಧ ವಲಯಗಳಲ್ಲಿ ತೊಡಗಿಸಿಕೊಂಡಿರುವ ಖಾಸಗಿ ಸಂಸ್ಥೆಗಳಿಗೂ ಆಧಾರ್‌ ದೃಢೀಕರಣ ಮಾಡಲು ಅವಕಾಶ ಕಲ್ಪಿಸಿದೆ. ಸಾರ್ವಜನಿಕರ ಹಿತಾಸಕ್ತಿಯಿಂದ, ಜನರಿಗೆ ಉತ್ತಮ ಸೇವೆ ನೀಡುವ ಸಲುವಾಗಿ ಈ ತಿದ್ದುಪಡಿ ತರಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ, ಇದರಿಂದಾಗಿ ಖಾಸಗಿಯವರ ಬಳಿ ಸಂಗ್ರಹವಾಗಲಿರುವ ಜನರ ಬಯೊಮೆಟ್ರಿಕ್ ಮತ್ತು ಇತರ ವೈಯಕ್ತಿಕ ದತ್ತಾಂಶದ ಸುರಕ್ಷತೆಗೆ ಸ್ಪಷ್ಟ ಮಾರ್ಗಸೂಚಿಯನ್ನು ರೂಪಿಸಿಲ್ಲ ಎನ್ನುವ ಆಕ್ಷೇಪ ವ್ಯಕ್ತವಾಗಿದೆ

ಕೇಂದ್ರ ಸರ್ಕಾರವು ಆಧಾರ್ ಗುರುತಿನ ಚೀಟಿಯ ದೃಢೀಕರಣಕ್ಕೆ ಸಂಬಂಧಪಟ್ಟ 2020ರ ನಿಯಮಗಳಲ್ಲಿ ಕೆಲವು ತಿದ್ದುಪಡಿ ಮಾಡಿದೆ. ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ‘ಉತ್ತಮ ಆಡಳಿತಕ್ಕಾಗಿ ಆಧಾರ್ ದೃಢೀಕರಣ (ಸಮಾಜ ಕಲ್ಯಾಣ, ನಾವೀನ್ಯ, ಜ್ಞಾನ) ತಿದ್ದುಪಡಿ ನಿಯಮಗಳು–2025’ ಅನ್ನು ಜಾರಿಗೊಳಿಸಿ ಜನವರಿ 31ರಂದು ಅಧಿಸೂಚನೆ ಹೊರಡಿಸಿದೆ.

ಜನರ ಅನುಕೂಲಕ್ಕಾಗಿ ಮತ್ತು ವಿವಿಧ ಸೇವೆಗಳನ್ನು ಪಡೆಯುವ ವಿಧಾನವನ್ನು ಸರಳೀಕರಣಗೊಳಿಸುವುದಕ್ಕಾಗಿ ತಿದ್ದುಪಡಿ ತಂದಿರುವುದಾಗಿ ಕೇಂದ್ರ ಹೇಳಿದೆ. ಇದುವರೆಗೆ ಸರ್ಕಾರಿ ಇಲಾಖೆಗಳು, ಸಂಸ್ಥೆಗಳು ಮತ್ತು ಖಾಸಗಿ ವಲಯದ ಬ್ಯಾಂಕ್, ವಿಮೆ ಮುಂತಾದ ಹಣಕಾಸು ಸಂಸ್ಥೆಗಳು, ದೂರಸಂಪರ್ಕ ಕಂಪನಿಗಳಿಗೆ ಮಾತ್ರ ಆಧಾರ್‌ ದೃಢೀಕರಣ (‌ಬಯೊಮೆಟ್ರಿಕ್ ಮತ್ತು ಮುಖಚಹರೆ ಪತ್ತೆ ವಿಧಾನ) ಮಾಡಲು ಅವಕಾಶ ಇತ್ತು. ಕೇಂದ್ರ ಸರ್ಕಾರವು ಈಗ ತಂದಿರುವ ತಿದ್ದುಪಡಿಯು ಇ–ಕಾಮರ್ಸ್‌, ಪ್ರಯಾಣ, ಪ್ರವಾಸೋದ್ಯಮ, ಆತಿಥ್ಯ ಮತ್ತು ಆರೋಗ್ಯದಂತಹ ವಲಯಗಳಲ್ಲಿ ತೊಡಗಿಕೊಂಡಿರುವ ಖಾಸಗಿ ಕಂಪನಿಗಳಿಗೂ ಆಧಾರ್‌ ದೃಢೀಕರಣ ಸೌಲಭ್ಯ ಬಳಸಲು ಅವಕಾಶ ಕಲ್ಪಿಸುತ್ತದೆ. ‌

‘ಇ–ಕಾಮರ್ಸ್, ಪ್ರಯಾಣ, ಪ್ರವಾಸೋದ್ಯಮ, ಆತಿಥ್ಯ, ಆರೋಗ್ಯ ಮುಂತಾದ ವಲಯಗಳ ವಿವಿಧ ಸೇವೆಗಳನ್ನು ಪಡೆಯಲು ಸಾರ್ವಜನಿಕ ಹಿತಾಸಕ್ತಿಯಿಂದ ಈ ತಿದ್ದುಪಡಿ ತರಲಾಗಿದೆ’ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ತಿಳಿಸಿದೆ. ಆದರೆ, ಇದು ಜನರ ಖಾಸಗಿ ಮಾಹಿತಿ ಸೋರಿಕೆಯ ಆತಂಕಕ್ಕೆ ಕಾರಣವಾಗಿದೆ. ಬಯೊಮೆಟ್ರಿಕ್ ವಿವರ ಸೇರಿದಂತೆ ವಿವಿಧ ಬಳಕೆದಾರರ ಖಾಸಗಿ ದತ್ತಾಂಶದ ರಕ್ಷಣೆಯ ಸಂಬಂಧ ತಿದ್ದುಪಡಿ ನಿಯಮದಲ್ಲಿ ಸ್ಪಷ್ಟ ಮಾರ್ಗಸೂಚಿಯೇ ಇಲ್ಲ ಎನ್ನುವ ಆರೋಪ ವ್ಯಕ್ತವಾಗಿದೆ.

ADVERTISEMENT

ತಿದ್ದುಪಡಿ ಏನು?

2020ರಲ್ಲಿ ರೂಪಿಸಿದ ನಿಯಮಾವಳಿಯಲ್ಲಿ 3ನೇ ನಿಯಮವು ಆಧಾರ್‌ ದೃಢೀಕರಣದ ಉದ್ದೇಶಗಳ ಬಗ್ಗೆ ಹೇಳುತ್ತದೆ. ಇದರಲ್ಲಿ ಎರಡು ಉಪನಿಯಮಗಳೂ ಇವೆ.

ಉಪನಿಯಮ (1): ಉತ್ತಮ ಆಡಳಿತ, ಸಾರ್ವಜನಿಕ ಹಣದ ಸೋರಿಕೆ ತಡೆ, ಜನರ ಜೀವನ ಸುಧಾರಣೆಗೆ ಉತ್ತೇಜನ ನೀಡುವುದು ಮತ್ತು ಅವರಿಗೆ ಉತ್ತಮ ಸೌಲಭ್ಯ ಕಲ್ಪಿಸುವ ದಿಸೆಯಲ್ಲಿ ಮನವಿ ಮಾಡಿರುವ ಸಂಸ್ಥೆಗಳಿಗೆ ಈ ಕೆಳಗಿನ ಉದ್ದೇಶಗಳಿಗಾಗಿ ಆಧಾರ್‌ ದೃಢೀಕರಣಕ್ಕೆ ಕೇಂದ್ರ ಸರ್ಕಾರವು ಅನುಮತಿ ನೀಡಬಹುದು. ಅವುಗಳೆಂದರೆ...

ಎ) ಉತ್ತಮ ಆಡಳಿತವನ್ನು ಖಾತರಿ ಪಡಿಸಲು ಡಿಜಿಟಲ್‌ ವೇದಿಕೆಗಳ (ಪ್ಲಾಟ್‌ಫಾರ್ಮ್‌) ಬಳಕೆ;

ಬಿ) ಸಾಮಾಜಿಕ ಕಲ್ಯಾಣ ಯೋಜನೆಗಳ ಹಣದ ಅಪವ್ಯಯ ತಡೆ ಮತ್ತು

ಸಿ) ನಾವೀನ್ಯಕ್ಕೆ ಬೆಂಬಲ ಮತ್ತು ಜ್ಞಾನ ಹಂಚಿಕೆಗೆ ಅವಕಾಶ

ಈಗ ಪರಿಷ್ಕರಣೆ ಮಾಡಲಾಗಿರುವ ನಿಯಮದಲ್ಲಿ 3ನೇ ನಿಯಮದ ಉಪನಿಯಮ (1)ಕ್ಕೆ ತಿದ್ದುಪಡಿ ತರಲಾಗಿದ್ದು, ‘ಉತ್ತಮ ಆಡಳಿತ, ಸಾರ್ವಜನಿಕ ಹಣದ ಸೋರಿಕೆ ತಡೆ, ಜನರ ಜೀವನ ಸುಧಾರಣೆಗೆ ಉತ್ತೇಜನ ನೀಡುವುದು ಮತ್ತು ಅವರಿಗೆ ಉತ್ತಮ ಸೇವೆಗಳ ಸೌಲಭ್ಯ ಕಲ್ಪಿಸುವ ದಿಸೆಯಲ್ಲಿ’ ಎಂಬ ಪದಗಳನ್ನು ಕೈಬಿಡಲಾಗಿದೆ.‌

ಉಪನಿಯಮದ ಕಲಂ (ಎ)ಯ ಬಳಿಕ ಮತ್ತೊಂದು ಕಲಂ (ಎಎ) ಸೇರ್ಪಡೆಗೊಳಿಸಲಾಗಿದೆ. ಅದರಲ್ಲಿ ‘ನಿವಾಸಿಗಳ ಜೀವನ ಸುಧಾರಣೆಗೆ ಉತ್ತೇಜನ ನೀಡುವುದು ಮತ್ತು ಉತ್ತಮ ಸೇವೆ ದೊರೆಯುವಂತೆ ಮಾಡುವುದು’ ಎಂದು ವಿವರಿಸಲಾಗಿದೆ.

ಮುಗಿಯದ ಆತಂಕ

ಆಧಾರ್‌ ದತ್ತಾಂಶದ ಸುರಕ್ಷತೆಯ ಬಗ್ಗೆ ಆತಂಕ ಇಂದಿನದ್ದಲ್ಲ. ದೇಶದ ಪ್ರತಿ ಪ್ರಜೆಗೂ ವಿಶಿಷ್ಟ ಗುರುತಿನ ಸಂಖ್ಯೆ ನೀಡುವ ಪರಿಕಲ್ಪನೆಯನ್ನು ಕೇಂದ್ರ ಸರ್ಕಾರ ಮುಂದಿಟ್ಟ ದಿನದಿಂದಲೂ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಆಧಾರ್‌ ಮೂಲಕ ಸರ್ಕಾರ ಸಂಗ್ರಹಿಸಿರುವ ದತ್ತಾಂಶಗಳ ಸುರಕ್ಷತೆಯ ಬಗ್ಗೆ ಆತಂಕವನ್ನು ಜನರು ವ್ಯಕ್ತಪಡಿಸುತ್ತಲೇ ಇದ್ದಾರೆ. ಈ ವಿಚಾರ ನ್ಯಾಯಾಲಯದ ಮೆಟ್ಟಿಲು ಕೂಡ ಏರಿದೆ. ದತ್ತಾಂಶ ಸುರಕ್ಷಿತ, ಈ ಬಗ್ಗೆ ಆತಂಕ ಬೇಡ ಎಂದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಹೇಳುತ್ತಲೇ ಬಂದಿದ್ದರೂ ಜನರಲ್ಲಿರುವ ಕಳವಳ ದೂರವಾಗಿಲ್ಲ. ಇದಕ್ಕೆ ಪೂರಕವೆಂಬಂತೆ ದತ್ತಾಂಶ ಸೋರಿಕೆಯ ಹಲವು ಪ್ರಕರಣಗಳೂ ವರದಿಯಾಗಿವೆ.

ಅನುಮತಿ ಕಡ್ಡಾಯ

ಆಧಾರ್ ದೃಢೀಕರಣ ಸೌಲಭ್ಯವನ್ನು ಬಳಸಿಕೊಳ್ಳುವುದಕ್ಕೆ ಖಾಸಗಿ ಸಂಸ್ಥೆಗಳು ಕೇಂದ್ರ ಸರ್ಕಾರದ ಅನುಮತಿ ಪಡೆಯಬೇಕು ಎಂದು ತಿದ್ದುಪಡಿ ಹೇಳುತ್ತದೆ. ಆಧಾರ್‌ ದೃಢೀಕರಣಕ್ಕಾಗಿ ಮನವಿ ಮಾಡುವ ಪ್ರಸ್ತಾವವನ್ನು ಕಂಪನಿಗಳು ಸಂಬಂಧಪಟ್ಟ ರಾಜ್ಯ ಮತ್ತು ಕೇಂದ್ರ ಸರ್ಕಾರಿ ಇಲಾಖೆ/ಸಚಿವಾಲಯಗಳಿಗೆ ಸಲ್ಲಿಸಬೇಕು. ಆ ಮನವಿಯನ್ನು ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರವು (ಯುಐಡಿಎಐ) ಪರಿಶೀಲಿಸುತ್ತದೆ. ಅಂತಿಮವಾಗಿ, ಕೇಂದ್ರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯು ಅನುಮತಿ ನೀಡುವ ನಿರ್ಧಾರ ಕೈಗೊಳ್ಳುತ್ತದೆ. ಆಧಾರ್ ದೃಢೀಕರಣಕ್ಕಾಗಿ ಅನುಮತಿ ಪಡೆಯಲು ಮನವಿ ಮಾಡುವಾಗ ಕಂಪನಿಗಳು ‘ರಾಷ್ಟ್ರದ ಹಿತಾಸಕ್ತಿ’ಗೆ ಬದ್ಧವಾಗಿರಬೇಕು ಎಂದು ತಿದ್ದುಪಡಿ ಹೇಳುತ್ತದೆ.

ಸೆಕ್ಷನ್‌ ರದ್ದು ಮಾಡಿದ್ದ ‘ಸುಪ್ರೀಂ’

2016ರಲ್ಲಿ ಕೇಂದ್ರ ಸರ್ಕಾರ ಆಧಾರ್ ಕಾಯ್ದೆಯನ್ನು ಜಾರಿಗೊಳಿಸಿದಾಗ ಕಾಯ್ದೆಯ 57ನೇ ಸೆಕ್ಷನ್‌ ಬಗ್ಗೆ ವಿವಿಧ ವಲಯಗಳಿಂದ ಆಕ್ಷೇಪ ವ್ಯಕ್ತವಾಗಿತ್ತು. ಖಾಸಗಿಯವರೂ ಗ್ರಾಹಕರಿಂದ ‌ಆಧಾರ್‌ ಕಾರ್ಡ್‌/ಅದರ ಮಾಹಿತಿ ಪಡೆಯುವುದಕ್ಕೆ ಈ ಸೆಕ್ಷನ್‌ ಅವಕಾಶ ನೀಡಿತ್ತು. ಈ ಪ್ರಕರಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. 2018ರಲ್ಲಿ ಈ ಸೆಕ್ಷನ್‌ ಅನ್ನು ರದ್ದು ಪಡಿಸಿದ್ದ ಸುಪ್ರೀಂ ಕೋರ್ಟ್‌, ‘ಇದು ಅಸಾಂವಿಧಾನಿಕ. ಇದರಿಂದ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ’ ಎಂದು ಹೇಳಿತ್ತು. 2019ರಲ್ಲಿ ಆಧಾರ್ ಕಾಯ್ದೆಗೆ ತಿದ್ದುಪಡಿ ತಂದ ಕೇಂದ್ರ ಸರ್ಕಾರವು, ಜನ ಸ್ವಯಂಪ್ರೇರಿತವಾಗಿ ಆಧಾರ್ ಮಾಹಿತಿಯನ್ನು ಹಂಚಿಕೊಳ್ಳಬಹುದು ಎಂದಿತ್ತು. ಇದನ್ನೂ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದ್ದು, ಪ್ರಕರಣ ವಿಚಾರಣೆಯ ಹಂತದಲ್ಲಿದೆ.

ಇದರ ನಡುವೆಯೇ, ಕೇಂದ್ರ ಸರ್ಕಾರವು ತಿದ್ದುಪಡಿ ‌ಮಾಡುವ ಮೂಲಕ ಖಾಸಗಿಯವರಿಗೆ ಆಧಾರ್ ದೃಢೀಕರಣದ ಅವಕಾಶ ಕಲ್ಪಿಸಿರುವುದು ಸುಪ್ರೀಂ ಕೋರ್ಟ್‌ನ 2018ರ ತೀರ್ಪಿನ ಉಲ್ಲಂಘನೆ ಎಂದು ಕೆಲವರು ಆಕ್ಷೇಪಿಸಿದ್ದಾರೆ. ಹಾಗೆಯೇ ತಿದ್ದುಪಡಿ ನಿಯಮದಲ್ಲಿ ಪ್ರಸ್ತಾಪಿಸಿರುವ ‘ರಾಷ್ಟ್ರದ ಹಿತಾಸಕ್ತಿ’ ಎನ್ನುವುದು ಅಸ್ಪಷ್ಟವಾಗಿದೆ ಎನ್ನುವ ಆಕ್ಷೇಪವೂ ಕೇಳಿಬಂದಿದೆ.

ಕೇಂದ್ರ ಸರ್ಕಾರವು 2023ರ ಏಪ್ರಿಲ್‌ನಲ್ಲಿಯೇ ಹೊಸ ತಿದ್ದುಪಡಿಯ ಕರಡನ್ನು ಸಿದ್ಧಪಡಿಸಿತ್ತು. ಈ ಸಂಬಂಧ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಸಲ್ಲಿಸುವಂತೆ ಕೋರಿತ್ತು. ಅಂತಿಮವಾಗಿ ಈಗ ತಿದ್ದುಪಡಿ ಜಾರಿಗೆ ಬಂದಿದೆ. ಆದರೆ, ಸಾರ್ವಜನಿಕ ಅಭಿಪ್ರಾಯದ ವಿವರಗಳನ್ನು ಕೇಂದ್ರ ಸರ್ಕಾರ ಬಹಿರಂಗಪಡಿಸಿಲ್ಲ.

ಆಧಾರ: ಪಿಟಿಐ, ಯುಐಡಿಎಐ ವೆಬ್‌ಸೈಟ್, 2020ರ ನಿಯಮಗಳು ಮತ್ತು 2025ರ ತಿದ್ದುಪಡಿ ನಿಯಮಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.