ADVERTISEMENT

ಆಳ-ಅಗಲ | UPI APP: ವಿದೇಶಿ ಕಂಪನಿಗಳದ್ದೇ ಪಾರಮ್ಯ

ವಿಶ್ವನಾಥ ಎಸ್.
Published 20 ನವೆಂಬರ್ 2023, 0:30 IST
Last Updated 20 ನವೆಂಬರ್ 2023, 0:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಭಾರತದಲ್ಲಿ ಡಿಜಿಟಲ್‌ ಪಾವತಿ ಸೇವೆಯು ವೇಗವಾಗಿ ಬೆಳವಣಿಗೆ ಕಾಣುತ್ತಿದೆ. ಅದರಲ್ಲಿಯೂ ಮುಖ್ಯವಾಗಿ ಏಕೀಕೃತ ಪಾವತಿ ವ್ಯವಸ್ಥೆ (ಯುಪಿಐ) ಜಾರಿಗೆ ಬಂದಾಗಿನಿಂದ ಡಿಜಿಟಲ್ ಪಾವತಿ ಇನ್ನಷ್ಟು ಸುಲಭ ಮತ್ತು ಕ್ಷಿಪ್ರಗೊಂಡಿದೆ. ರಾಷ್ಟ್ರೀಯ ಪಾವತಿ ನಿಗಮದಲ್ಲಿ (ಎನ್‌ಪಿಸಿಐ) ಇರುವ ಮಾಹಿತಿಯ ಪ್ರಕಾರ ಭಾರತದಲ್ಲಿ 60ಕ್ಕೂ ಅಧಿಕ ಯುಪಿಐ ಆ್ಯಪ್‌ಗಳಿವೆ. ಆದರೆ ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಿರುವುದು ಮಾತ್ರ ವಿದೇಶಿ ಒಡೆತನದ ಫೋನ್‌ಪೇ ಮತ್ತು ಗೂಗಲ್‌ ಪೇ

ದಿನಬೆಳಗಾದರೆ ಹಾಲು, ಹಣ್ಣು, ತರಕಾರಿ ಖರೀದಿಸಲು, ಅಷ್ಟೇ ಏಕೆ ಒಂದು ಕಪ್‌ ಕಾಫಿ ಕುಡಿದರೂ ಅದರ ಹಣವನ್ನು ಮೊಬೈಲ್‌ ಮೂಲಕವೇ ಪಾವತಿಸುವುದು ಈಗ ಸರ್ವೇ ಸಾಮಾನ್ಯ. ಕಿರಾಣಿ ಅಂಗಡಿಯಿಂದ ಹಿಡಿದು ಮಾಲ್‌ಗಳವರೆಗೆ ಎಲ್ಲೆಡೆಯೂ ಕ್ಯುಆರ್ ಕೋಡ್‌ ಸೌಲಭ್ಯ ಇರುವುದರಿಂದ ಯುಪಿಐ ಆ್ಯಪ್‌ ಮೂಲಕ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿಸುವುದು ರೂಢಿಯಾಗಿಬಿಟ್ಟಿದೆ. ನಗದಾಗಿ ಕೊಡಲು ಹೋದರೆ ವಿಚಿತ್ರವಾಗಿ ನೋಡುವ, ‘ಫೋನ್‌ ಪೇ ಇಲ್ವಾ? ಸ್ಕ್ಯಾನ್ ಮಾಡಿ’ ಎಂದು ಹೇಳುವಷ್ಟರಮಟ್ಟಿಗೆ ವ್ಯಾಪಾರಿಗಳೂ ಬದಲಾಗಿದ್ದಾರೆ.

ADVERTISEMENT

ದೇಶದಲ್ಲಿ ಡಿಜಿಟಲ್‌ ಪಾವತಿ ಹೆಚ್ಚು ವೇಗ ಪಡೆದುಕೊಂಡಿದ್ದು ಕೋವಿಡ್‌ ಸಾಂಕ್ರಾಮಿಕ ಆರಂಭವಾದಾಗ. ಸೋಂಕು ಹರಡುವ ಭೀತಿಯಿಂದ ಜನರು ಡಿಜಿಟಲ್‌ ಪಾವತಿಯ ಮೊರೆ ಹೋಗುವುದು ಅನಿವಾರ್ಯ ಆಯಿತು. ಡಿಜಿಟಲ್‌ ಪಾವತಿಯು ಜನಪ್ರಿಯ ಆಗುವಲ್ಲಿ ಯುಪಿಐ ಆ್ಯಪ್‌ಗಳ ಪಾತ್ರ ಬಹಳ ಮುಖ್ಯವಾಗಿದೆ. ದೇಶದಲ್ಲಿ ಸರಿಸುಮಾರು 60ಕ್ಕೂ ಅಧಿಕ ಆ್ಯಪ್‌ಗಳಿವೆ. ಆದರೆ ಅದರಲ್ಲಿ ಹೆಚ್ಚು ಬಳಕೆ ಆಗುತ್ತಿರುವುದು ಫೋನ್‌ಪೇ, ಗೂಗಲ್‌ ಪೇ, ಪೇಟಿಎಂ, ಅಮೆಜಾನ್‌ ಪೇನಂತಹ ಯುಪಿಐ ಆ್ಯಪ್‌ಗಳು ಮಾತ್ರ. ಇವುಗಳಲ್ಲಿ ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಿರುವುದು ವಿದೇಶಿ ಕಂಪನಿಗಳ ಒಡೆತನದ ಫೋನ್‌ಪೇ ಮತ್ತು ಗೂಗಲ್‌ ಪೇ ಎನ್ನುವುದೇ ಅಚ್ಚರಿ ವಿಷಯ.

ಯುಪಿಐ ಆ್ಯಪ್‌ಗಳ ಮೂಲಕ ನಡೆಯುತ್ತಿರುವ ವಹಿವಾಟಿನಲ್ಲಿ ವಾಲ್‌ಮಾರ್ಟ್‌ ಒಡೆತನದ ಫೋನ್‌ ಪೇ ಮತ್ತು ಗೂಗಲ್‌ ಒಡೆತನದ ಜಿ–ಪೇ ಪಾಲು ಒಟ್ಟಾರೆ ಶೇ 81.2ರಷ್ಟಿದೆ. ಇನ್ನು ಮೂರನೇ ಸ್ಥಾನದಲ್ಲಿ ಇರುವ ಭಾರತದ ಪೇಟಿಎಂನ ಷೇರುಪಾಲನ್ನು ಸೇರಿಸಿದರೆ ಶೇ 95.9ರಷ್ಟು ಆಗುತ್ತದೆ. ಅಂದರೆ ಯುಪಿಐ ಆ್ಯಪ್‌ ಮಾರುಕಟ್ಟೆಯನ್ನು ಮೂರು ಕಂಪನಿಗಳು ಮಾತ್ರವೇ ಆಳುತ್ತಿದ್ದು, ಅದರಲ್ಲಿ ಮೊದಲ ಎರಡು ಕಂಪನಿಗಳು ವಿದೇಶದ್ದಾಗಿವೆ.

ವಿದೇಶದ್ದೇ ಆಗಿರುವ ಅಮೆಜಾನ್ ಪೇ ಕಂಪನಿಯೂ ಯುಪಿಐ ಆ್ಯಪ್‌ನಲ್ಲಿ ಐದನೇ ಸ್ಥಾನದಲ್ಲಿ ಗುರುತಿಸಿಕೊಳ್ಳುತ್ತಿದ್ದು, ಬಹಳ ವೇಗವಾಗಿ ತನ್ನ ಮಾರುಕಟ್ಟೆ ಪಾಲನ್ನು ಹೆಚ್ಚಿಸಿಕೊಳ್ಳಲು ಕಾರ್ಯಯೋಜನೆ ರೂಪಿಸಿದೆ. ಆದರೆ, ಸದ್ಯ ಅದು ಹೊಂದಿರುವುದು ಶೇ 1ರಷ್ಟು ಮಾರುಕಟ್ಟೆ ಪಾಲು ಮಾತ್ರ. ಜನಪ್ರಿಯ ಸಾಮಾಜಿಕ ಮಾಧ್ಯಮ ಆಗಿರುವ ವಾಟ್ಸ್‌ಆ್ಯಪ್‌ ಸಹ ತನ್ನದೇ ಪಾವತಿ ಸೌಲಭ್ಯ ಹೊಂದಿದ್ದರೂ ಮಾರುಕಟ್ಟೆಯಲ್ಲಿ ಸೀಮಿತ ಮಟ್ಟಿಗೆ ಬಳಕೆಯಲ್ಲಿದೆ.

2016–17ರ ಮೊದಲ ತ್ರೈಮಾಸಿಕದಲ್ಲಿ ಪ್ರಮುಖ ಐದು ಕಂಪನಿಗಳು ಶೇ 9–10ರಷ್ಟು ಮಾರುಕಟ್ಟೆ ಷೇರುಪಾಲು ಹೊಂದಿದ್ದವು. ಆದರೆ ನಂತರದ ತ್ರೈಮಾಸಿಕದಲ್ಲಿಯೇ ಮೊದಲೆರಡು ಕಂಪನಿಗಳ ಪಾಲು ಶೇ 15ಕ್ಕೂ ಹೆಚ್ಚು ಏರಿಕೆ ಕಂಡಿತು. ನಾಲ್ಕನೇ ತ್ರೈಮಾಸಿಕದ ವೇಳೆಗೆ ಫೋನ್‌ಪೇ ಶೇ 45ರಷ್ಟು ಮತ್ತು ಗೂಗಲ್‌ ಪೇ ಶೇ 35ರಷ್ಟು ಷೇರುಪಾಲು ಹೊಂದಿತು. ನಂತರದಲ್ಲಿಯೂ ಮಾರುಕಟ್ಟೆ ಪಾಲು ಹೆಚ್ಚಾಗುತ್ತಲೇ ಇದೆ.

ಮೊಬೈಲ್‌ ಪಾವತಿ:

ಮೊಬೈಲ್‌ ಫೋನ್ ಆ್ಯಪ್‌ಗಳನ್ನು ಬಳಸಿ ಮಾಡುವ ಪಾವತಿಯು ಇಳಿಕೆ ಕಾಣುತ್ತಿದೆ. 2023ರ ಮೊದಲ ಆರು ತಿಂಗಳಲ್ಲಿ ಮೊಬೈಲ್ ಪಾವತಿಯ ಮೂಲಕ 5,215 ಕೋಟಿ ವಹಿವಾಟು ನಡೆದಿದೆ. 2022ರ ಮೊದಲ ಆರು ತಿಂಗಳಲ್ಲಿ 5,540 ಕೋಟಿ ವಹಿವಾಟು ಆಗಿದೆ. ಮೌಲ್ಯದ ಲೆಕ್ಕದಲ್ಲಿ ₹95 ಲಕ್ಷ ಕೋಟಿಯಿಂದ ₹132 ಲಕ್ಷ ಕೋಟಿಗೆ ಶೇ 38.9ರಷ್ಟು ಏರಿಕೆ ಕಂಡಿದೆ.

ಸಂಸದರ ವಿರೋಧ: ಡಿಜಿಟಲ್‌ ಹಣ ಪಾವತಿ ವ್ಯವಸ್ಥೆಯಲ್ಲಿ ವಿದೇಶಿ ಕಂಪನಿಗಳು ಮೇಲುಗೈ ಹೊಂದಿರುವುದಕ್ಕೆ ಬಿಜೆಪಿಯ ಸಂದದರನ್ನೂ ಒಳಗೊಂಡು ಹಲವು ಸಂಸದರು ವಿರೋಧ ವ್ಯಕ್ತಪಡಿಸಿದ್ದು, ಈ ಸಂಬಂಧ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಲು ಮುಂದಾಗಿದ್ದಾರೆ ಎಂದು ವರದಿಯಾಗಿತ್ತು. 

ಈ ಕುರಿತು ಪಕ್ಷಗಳು ಒಂದು ಸ್ಪಷ್ಟವಾದ ನಿಲುವನ್ನು ಇನ್ನಷ್ಟೇ ತಳೆಯಬೇಕಿದೆ. ಹೀಗಾಗಿ ಈಗಲೇ ತಮ್ಮ ಹೆಸರನ್ನು ಬಹಿರಂಗಪಡಿಸಬಾರದು ಎಂದೂ ಸಂಸದರು ಹೇಳಿದ್ದರು. ಪಾವತಿ ವ್ಯವಸ್ಥೆಯಲ್ಲಿ ವಿದೇಶಿ ಕಂಪನಿಗಳ ಮೇಲುಗೈ ಇದ್ದರೆ ಅದರಿಂದ ಅಪಾಯ ಎದುರಾಬಹುದು ಎಂದೂ ಅವರು ಕಳವಳ ವ್ಯಕ್ತಪಡಿಸಿದ್ದರು. ಸಂಸದೀಯ ಸಮಿತಿಯ ಮುಂದೆಯೂ ವಿಷಯ ಪ್ರಸ್ತಾಪಿಸುವುದಾಗಿ ತಿಳಿಸಿದ್ದರು. ಆದರೆ, ಸಂಸತ್‌ನಲ್ಲಿ ಆಗಲಿ, ಸಂಸದೀಯ ಸಮಿತಿ ಎದುರಾಗಲಿ ವಿಷಯ ಪ್ರಸ್ತಾಪಿಸಲಾಗಿದೆಯೇ ಎಂಬುದು ವರದಿ ಆಗಿಲ್ಲ.

ಸಾಂದರ್ಭಿಕ ಚಿತ್ರ

ಎನ್‌ಪಿಸಿಐ ನಿಯಮ ಹೇಳುವುದೇನು?

ಪಾವತಿ ನಿಗಮವು 2021ರ ಮಾರ್ಚ್‌ನಲ್ಲಿ ಯುಪಿಐ ಆ್ಯಪ್‌ಗಳಿಗೆ ನಿರ್ದಿಷ್ಟ ಕಾರ್ಯಾಚರಣೆ ಪ್ರಕ್ರಿಯೆಗಳನ್ನು ನೀಡಿದೆ. ಒಂದು ನಿರ್ದಿಷ್ಟ ಕಂಪನಿಯ ಮಾರುಕಟ್ಟೆ ಪಾಲು ಶೇ 30ರಷ್ಟನ್ನು ಮೀರುವಂತಿಲ್ಲ. ಒಂದೊಮ್ಮೆ ಹೆಚ್ಚಿನ ಪಾಲು ಹೊಂದಿದ್ದರೆ 2023ರ ಜನವರಿ ಒಳಗಾಗಿ ಕಡಿಮೆ ಮಾಡಿಕೊಳ್ಳಬೇಕು ಎನ್ನುವ ಗಡುವು ನೀಡಲಾಗಿತ್ತು. ಆದರೆ ಕೆಲವು ಕಂಪನಿಗಳು ನಡೆಸಿದ ಲಾಬಿಯಿಂದಾಗಿ ಗಡುವು 2024ರ ಡಿಸೆಂಬರ್ 31ರವರೆಗೆ ವಿಸ್ತರಣೆ ಆಗಿದೆ.  ಯುಪಿಐ ಆ್ಯಪ್‌ಗಳ ಮಾರುಕಟ್ಟೆ ಪಾಲು (ಪೈ ಚಾರ್ಟ್‌) ಫೋನ್‌ಪೇ;46.4% ಗೂಗಲ್‌ ಪೇ;34.8% ಪೇಟಿಎಂ;14.7% ಕ್ರೆಡ್‌;0.5% ಇತರೆ;3.5%

ಯುಪಿಐ ಆ್ಯಪ್‌ ಬಳಕೆ ಎಲ್ಲೆಲ್ಲಿ ಹೆಚ್ಚು ಬಳಕೆ:

ದಿನಸಿ ಸೂಪರ್‌ಮಾರ್ಕೆಟ್‌ ಹೊಟೇಲ್‌ ರೆಸ್ಟೋರೆಂಟ್ ಮೊಬೈಲ್‌ ರೀಚಾರ್ಜ್‌ ಫಾಸ್ಟ್‌ ಫುಡ್‌ ರೆಸ್ಟೋರೆಂಟ್‌ ಡಿಪಾರ್ಟ್‌ಮೆಂಟಲ್‌ ಸ್ಟೋರ್‌ಗಳು ಬೇಕರಿ ಮೆಡಿಕಲ್ ಮಧ್ಯಮ ಬಳಕೆ: ಡೈರಿ ವಿದ್ಯುತ್ ನೀರು ಗ್ಯಾಸ್‌ ಬಿಲ್ ಪಾವತಿಗೆ ಬಟ್ಟೆ ಖರೀದಿಗೆ ಇತರೆ: ಎಲೆಕ್ಟ್ರಾನಿಕ್ಸ್ ಮಳಿಗೆ ಸಲೂನ್ ಬ್ಯೂಟಿ ಪಾರ್ಲರ್‌ ಆನ್‌ಲೈನ್‌ ಖರೀದಿ ಟ್ಯಾಕ್ಸಿ

ಯುಪಿಐ: ರಿಟೇಲ್‌ ವಹಿವಾಟಿನಲ್ಲಿ ಸಿಂಹಪಾಲು

ದೇಶದಲ್ಲಿ ಡಿಜಿಟಲ್‌ ರೂಪದಲ್ಲಿ ನಡೆಯುತ್ತಿರುವ ವಹಿವಾಟಿನಲ್ಲಿ ಯುಪಿಐ ಪಾಲು ಗರಿಷ್ಠ ಪ್ರಮಾಣದಲ್ಲಿ ಇದೆ. ಇದರಲ್ಲಿಯೂ ಚಿಲ್ಲರೆ ವಹಿವಾಟಿಗೆ ಯುಪಿಐ ಮೂಲಕ ಹಣ ಪಾವತಿಸುವುದು ಹೆಚ್ಚಾಗುತ್ತಿದೆ ಎನ್ನುತ್ತದೆ ಪಿಡಬ್ಲ್ಯುಸಿ ಇಂಡಿಯಾ ವರದಿ

75%: 2022–23ರಲ್ಲಿ ಡಿಜಿಟಲ್‌ ವಹಿವಾಟಿನಲ್ಲಿ ಯುಪಿಐ ವಹಿವಾಟಿನ ಪಾಲು  

90%: 2026–27ರ ವೇಳೆಗೆ ಡಿಜಿಟಲ್‌ ವಹಿವಾಟಿನಲ್ಲಿ ಯುಪಿಐ ಹೊಂದಲಿರುವ ಪಾಲು

8371 ಕೋಟಿ: 2022–23ರಲ್ಲಿ ಯುಪಿಐ ಮೂಲಕ ನಡೆದಿರುವ ವಹಿವಾಟುಗಳು ಸಂಖ್ಯೆ

37900 ಕೋಟಿ: 2026–27ರ ವೇಳೆಗೆ ಯುಪಿಐ ಮೂಲಕ ನಡೆಯಲಿರುವ ವಹಿವಾಟುಗಳ ಸಂಖ್ಯೆ

ಪಾವತಿಯ ಹೊಸ ಆಯ್ಕೆಗಳು

ರಾಷ್ಟ್ರೀಯ ಪಾವತಿ ನಿಗಮವು (ಎನ್‌ಪಿಸಿಐ) ಈಚೆಗಷ್ಟೇ ಕೆಲವು ಹೊಸ ಪಾವತಿ ಆಯ್ಕೆಗಳನ್ನು ಜಾರಿಗೊಳಿಸಿದೆ. ಅದರಲ್ಲಿ ಮುಖ್ಯವಾಗಿರುವುದು ಯುಪಿಐ ಲೈಟ್ ಎಕ್ಸ್‌ ಟ್ಯಾಪ್‌ ಆ್ಯಂಡ್‌ ಪೇ ಹಲೋ ಯುಪಿಐ ಕ್ರೆಡಿಟ್‌ ಲೈನ್‌ ಇತ್ಯಾದಿ. Hello UPI!: ಧ್ವನಿ ಆಧಾರಿತ ಯುಪಿಐ ಪಾವತಿ ಆಯ್ಕೆ ಇದಾಗಿದೆ. ಯುಪಿಐ ಆ್ಯಪ್‌ನಲ್ಲಿ ವಾಯ್ಸ್‌ ಕಮಾಂಡ್‌ ದೂರವಾಣಿ ಕರೆ ಮತ್ತು ಐಒಟಿ ಸಾಧನಗಳ ಮೂಲಕ ಪಾವತಿ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಸದ್ಯಕ್ಕೆ ಹಿಂದಿ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ಮಾತ್ರವೇ ಇದು ಲಭ್ಯ. ಬಿಲ್‌ಪೇ ಕನೆಕ್ಟ್‌: ಮೆಸೇಜಿಂಗ್ ಆ್ಯಪ್‌ ಮೂಲಕ ‘Hi’ ಎಂಬ ಸಂದೇಶ ಕಳುಹಿಸಿ ಬಿಲ್ ವಿವರ ಪಡೆಯಬಹುದಷ್ಟೇ ಅಲ್ಲದೆ ಬಿಲ್ ಮೊತ್ತ ಪಾವತಿಸಬಹುದು. ಸ್ಮಾರ್ಟ್‌ಫೋನ್‌ ಅಥವಾ ಮೊಬೈಲ್‌ ಡೇಟಾ ಇಲ್ಲದೆಯೇ ಮಿಸ್ಡ್‌ ಕಾಲ್ ನೀಡಿಯೂ ಬಿಲ್‌ ಪಾವತಿಸಬಹುದು. ಮಿಸ್ಡ್‌ ಕಾಲ್‌ ನೀಡಿದಾಕ್ಷಣ ಗ್ರಾಹಕರಿಗೆ ದೃಢೀಕರಿಸಲು ಮತ್ತು ಪಾವತಿ ಅಧಿಕೃತಗೊಳಿಸುವ ಕರೆ ಬರುತ್ತದೆ.  ಧ್ವನಿ ಆಧಾರಿತ ಬಿಲ್‌ ಪಾವತಿ ವ್ಯವಸ್ಥೆಯನ್ನೂ ನೀಡಲಾಗಿದೆ. ಯುಪಿಐ ಲೈಟ್ ಎಕ್ಸ್‌: ಆಫ್‌ಲೈನ್ ಪಾವತಿಗೆ ಇದನ್ನು ಜಾರಿಗೊಳಿಸಲಾಗಿದೆ. ಇಂಟರ್‌ನೆಟ್‌ ಸಂಪರ್ಕ ಇಲ್ಲದೆಯೇ ಹಣ ರವಾನೆ ಮತ್ತು ಸ್ವೀಕಾರ ಸಾಧ್ಯ. ನಿಯರ್ ಫೀಲ್ಡ್‌ ಕಮ್ಯುನಿಕೇಷನ್‌ (ಎನ್‌ಎಫ್‌ಎಸ್‌) ಬೆಂಬಲಿಸುವ ಎಲ್ಲ ಸಾಧನಗಳಲ್ಲಿಯೂ ಇದು ಕೆಲಸ ಮಾಡುತ್ತದೆ. ಕಡಿಮೆ ಸಮಯದಲ್ಲಿ ಹಣ ವರ್ಗಾವಣೆ ಆಗುತ್ತದೆ. ಯುಪಿಐ ಲೈಟ್ ಪಾವತಿ ಮಿತಿ ಹೆಚ್ಚಳ ಯುಪಿಐ ಲೈಟ್‌ ವಾಲೆಟ್‌ ಮೂಲಕ ಮಾಡುವ ಪಾವತಿಗಳ ಮಿತಿಯನ್ನು ಈಗಿರುವ ₹200ರಿಂದ ₹500ಕ್ಕೆ ಹೆಚ್ಚಿಸಲಾಗಿದೆ. ಯುಪಿಐ ಲೈಟ್‌ ವಾಲೆಟ್‌ ಮೂಲಕ ಹಣ ಪಾವತಿ ಮಾಡುವಾಗ ಎರಡು ಹಂತಗಳ ಸುರಕ್ಷತೆ ಇಲ್ಲದೇ ಇರುವುದರಿಂದ (ಅಂದರೆ ಬಳಕೆದಾರರು ನಾಲ್ಕು ಅಥವಾ ಆರು ಅಂಕಿಗಳ ಪಾಸ್‌ವರ್ಡ್‌ ನಮೂದಿಸುವ ಅಗತ್ಯ ಇಲ್ಲ) ಯುಪಿಐ ಲೈಟ್‌ ವಾಲೆಟ್‌ನಲ್ಲಿ ಇರಿಸಬಹುದಾದ ಮೊತ್ತದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ‌ಅದನ್ನು ₹2 ಸಾವಿರದಲ್ಲಿಯೇ ಉಳಿಸಿಕೊಳ್ಳಲಾಗಿದೆ.

ಮಂಕಾಗಿದೆ ಭೀಮ್‌ ಆ್ಯಪ್‌ ಭೀಮ್‌–

ರಾಷ್ಟ್ರೀಯ ಪಾವತಿ ನಿಮಗವು (ಎನ್‌ಪಿಸಿಐ) ಅಭಿವೃದ್ಧಿಪಡಿಸಿರುವ ಮೊಬೈಲ್ ಪಾವತಿ ಆ್ಯಪ್‌ ಇದಾಗಿದೆ. 2016ರ ಡಿಸೆಂಬರ್ 30ರಂದು ಇದನ್ನು ಬಿಡುಗಡೆ ಮಾಡಲಾಯಿತು. ನಗದು ರಹಿತ ವಹಿವಾಟಿಗೆ ಉತ್ತೇಜನ ನೀಡುವ ಉದ್ದೇಶದಿಂದ ಇದನ್ನು ಬಿಡುಗಡೆ ಮಾಡಲಾಗಿದೆ. ಆದರೆ ಪ್ರತಿಸ್ಪರ್ಧಿ ಆ್ಯಪ್‌ಗಳಿಗೆ ಹೋಲಿಸಿದರೆ ಇದರ ಒಟ್ಟು ಬಳಕೆಯು ತೀರಾ ಕಡಿಮೆ ಇದೆ. ತಾಂತ್ರಿಕ ದೋಷ ಮತ್ತು ಬೇರೆ ಆ್ಯಪ್‌ಗಳ ಬಳಕೆಯು ಇದಕ್ಕಿಂತಲೂ ಸುಲಭ ಆಗಿರುವುದರಿಂದ ಇದರ ಬಳಕೆ ಕಡಿಮೆ ಆಗುತ್ತಲೇ ಬರುತ್ತಿದೆ. 2022ರ ಅಕ್ಟೋಬರ್‌ನಲ್ಲಿ ₹8523 ಕೋಟಿ ಮೌಲ್ಯದ ವಹಿವಾಟು ನಡೆದಿತ್ತು. ಇದು 2023ರ ಅಕ್ಟೋಬರ್‌ನಲ್ಲಿ ₹8174 ಕೋಟಿಗೆ ಇಳಿಕೆ ಕಂಡಿದೆ. 2023ರ ಅಕ್ಟೋಬರ್‌ನಲ್ಲಿ ಫೋನ್‌ಪೇ ಮೂಲಕ ₹838371 ಕೋಟಿ ಮೌಲ್ಯದ ವಹಿವಾಟು ನಡೆದಿದೆ. ಪ್ರಮುಖ ಆ್ಯಪ್‌ಗಳ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಇರುವ ಕ್ರೆಡ್‌ನ ವಹಿವಾಟು ಮೌಲ್ಯಕ್ಕೆ ಹೋಲಿಸಿದರೂ (₹34691) ಭೀಮ್‌ ಆ್ಯಪ್‌ ವಹಿವಾಟು ಮೌಲ್ಯ ತೀರಾ ಕಡಿಮೆ ಇದೆ.

ಯುಪಿಐ ವಹಿವಾಟು (%) 2023ರ ಅಕ್ಟೋಬರ್‌ನಲ್ಲಿ

ಆಧಾರ: ಎನ್‌ಪಿಸಿಐ, ಪಿಟಿಐ, ವೈರ್ಲ್ಡ್‌ಲೈನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.