ಅಣ್ವಸ್ತ್ರ ಹೊಂದಿರುವ ರಾಷ್ಟ್ರ ತಮ್ಮದಾಗಿದ್ದು, ತಾವು ಸೋಲುವ ಸ್ಥಿತಿ ಬಂದರೆ, ಅರ್ಧ ಜಗತ್ತನ್ನು ನಾಶಪಡಿಸುವುದಾಗಿ ಪಾಕಿಸ್ತಾನದ ಸೇನಾ ಪಡೆಗಳ ಮುಖ್ಯಸ್ಥ ಆಸಿಮ್ ಮುನೀರ್ ಅಮೆರಿಕದ ನೆಲದಲ್ಲಿ ನಿಂತು ಅಕ್ಷರಶಃ ಬೆದರಿಕೆ ಹಾಕಿದ್ದಾರೆ. ಆಸಿಮ್ ಮುನೀರ್ ಮಾತುಗಳು ಭಾರತಕ್ಕಷ್ಟೇ ಅಲ್ಲ, ‘ಅರ್ಧ ಜಗತ್ತಿಗೇ’ ಒಡ್ಡಿದ ಬೆದರಿಕೆಯಾಗಿದೆ. ಪಾಕಿಸ್ತಾನದ ರೀತಿಯಲ್ಲೇ ಚೀನಾ ಮತ್ತು ಉತ್ತರ ಕೊರಿಯಾದಲ್ಲಿಯೂ ಅಣ್ವಸ್ತ್ರಗಳಿದ್ದು, ಅಲ್ಲಿಯೂ ಸರ್ವಾಧಿಕಾರಿಗಳೇ ಆಡಳಿತ ನಡೆಸುತ್ತಿದ್ದಾರೆ. ಇವರೆಲ್ಲರೂ ವಿಶ್ವಶಾಂತಿಗೆ ಕಂಟಕವಾಗುವಂಥ ಸ್ವಭಾವ, ಸಾಮರ್ಥ್ಯ ಹೊಂದಿದ್ದು, ಅಪಾಯಕಾರಿಗಳಾಗಿದ್ದಾರೆ. ಇದರಲ್ಲಿ ವಿಶ್ವದ ‘ದೊಡ್ಡಣ್ಣ’ ಎಂದೇ ಕರೆಸಿಕೊಳ್ಳುವ ಅಮೆರಿಕದ ಬೆಂಬಲ ಅಥವಾ ‘ಮೌನ ಸಮ್ಮತಿ’ಯ ಪಾಲೂ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ
ಜನರಲ್ ಆಸಿಮ್ ಮುನೀರ್, ಪಾಕಿಸ್ತಾನದ ಸೇನಾ ಮುಖ್ಯಸ್ಥ. ಅವರು ಪಾಕ್‌ನ ಮುಂದಿನ ಅಧ್ಯಕ್ಷ ರಾಗುವ ಕನಸು ಕಾಣುತ್ತಿದ್ದಾರೆ ಎನ್ನುವ ವರದಿಗಳು ಇತ್ತೀಚೆಗೆ ಹರಿದಾಡಿದ್ದವು. ಆದರೆ, ಅಧ್ಯಕ್ಷರಿಗಿಂತಲೂ ಅವರೇ ಪ್ರಭಾವಿಯಾಗಿದ್ದು, ದೇಶದ ಒಳಗಷ್ಟೇ ಅಲ್ಲ, ಹೊರಗೂ ಪಾಕಿಸ್ತಾನವನ್ನು ಪ್ರತಿನಿಧಿಸುತ್ತಿದ್ದಾರೆ. ಶ್ವೇತಭವನದ ಆಹ್ವಾನದ ಮೇರೆಗೆ ಆಸಿಮ್ ಮುನೀರ್ ಇದೇ ಜೂನ್‌ನಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ್ದರು. ಇದೀಗ ಎರಡನೇ ಬಾರಿ ಅಮೆರಿಕಕ್ಕೆ ಭೇಟಿ ನೀಡಿರುವ ಮುನೀರ್, ಅಲ್ಲಿ ಆಡಿರುವ ಮಾತುಗಳು ಅವರ ಮನಃಸ್ಥಿತಿಯನ್ನೂ, ಪಾಕಿಸ್ತಾನ ಸೇರಿದಂತೆ ಸರ್ವಾಧಿಕಾರಿ ಆಡಳಿತವಿರುವ, ಅಣ್ವಸ್ತ್ರ ಹೊಂದಿರುವ ರಾಷ್ಟ್ರಗಳ ಪರಿಸ್ಥಿತಿ ಯನ್ನೂ ಬಿಂಬಿಸುತ್ತಿವೆ.
ಅಮೆರಿಕದಲ್ಲಿ ನಿಂತು ಭಾರತಕ್ಕೆ ಸಂಬಂಧಿಸಿದ ಹಲವು ವಿಚಾರಗಳ ಬಗ್ಗೆ ಮುನೀರ್ ಪ್ರಸ್ತಾಪಿಸಿದ್ದಾರೆ. ‘ಕಾಶ್ಮೀರ ವಿವಾದವು ಭಾರತದ ಆಂತರಿಕ ವಿಚಾರವಲ್ಲ, ಅದು ಬಗೆಹರಿಯದ ಅಂತರರಾಷ್ಟ್ರೀಯ ವಿವಾದ’ ಎಂದಿದ್ದಾರೆ. ‘ಭಾರತವು ಸಿಂಧೂ ನದಿಗೆ ಅಣೆಕಟ್ಟುಗಳನ್ನು ಕಟ್ಟಲಿ, ನಂತರ 10 ಕ್ಷಿಪಣಿಗಳಿಂದ ನಾವು ಅವುಗಳನ್ನು ಧ್ವಂಸ ಮಾಡುತ್ತೇವೆ’ ಎಂದಿದ್ದಾರೆ. ‘ಭಾರತವು ಮರ್ಸಿಡಿಸ್ ಕಾರ್ ಇದ್ದಂತೆ. ಪಾಕಿಸ್ತಾನವು ಕಲ್ಲು ಸಾಗಿಸುವ ಟ್ರಕ್ ಇದ್ದಂತೆ. ಟ್ರಕ್ ಕಾರಿಗೆ ಡಿಕ್ಕಿ ಹೊಡೆದರೆ, ಯಾರಿಗೆ ನಷ್ಟ ಹೇಳಿ’ ಎಂದೂ ಪ್ರಶ್ನಿಸಿದ್ದಾರೆ.
ಪಾಕ್‌ನಲ್ಲಿ ಅಧ್ಯಕ್ಷ, ಪ್ರಧಾನಿ ಅವರಿಗಿಂತಲೂ ಸೇನಾ ಮುಖ್ಯಸ್ಥರೇ ಪ್ರಭಾವಿ ಹಾಗೂ ನಿರ್ಣಾಯಕ. ಪಾಕಿಸ್ತಾನ ಜನ್ಮ ತಾಳಿದಂದಿನಿಂದಲೂ ಯಾವ ಪ್ರಧಾನಿಯೂ ಅಲ್ಲಿ ಪೂರ್ಣಾವಧಿ ಆಡಳಿತ ನಡೆಸಿಯೇ ಇಲ್ಲ. ಮಿಲಿಟರಿ ದಂಗೆಯ ಮೂಲಕ ಸೇನಾ ಮುಖ್ಯಸ್ಥ ಪ್ರಧಾನಿಯನ್ನು ಪದಚ್ಯುತಗೊಳಿಸುವುದು, ಪದಚ್ಯುತ ಪ್ರಧಾನಿ ದೇಶ ತೊರೆದು ಹೋಗುವುದು ಇಲ್ಲವೇ ಹತ್ಯೆಗೆ ಒಳಗಾಗುವುದು ಅಲ್ಲಿ ಹಲವು ಭಾರಿ ಘಟಿಸಿದೆ. ಈ ದಿಸೆಯಲ್ಲಿ ಆಸಿಮ್ ಮುನೀರ್ ಮಾತುಗಳಿಗೆ ವಿಶೇಷ ಮಹತ್ವ ಪ್ರಾಪ್ತವಾಗಿದೆ.
ಆದರೂ ಹಲವು ಸಂದರ್ಭಗಳಲ್ಲಿ ಅಣ್ವಸ್ತ್ರ ಬಳಕೆಯ ಮಾತುಗಳು ಕೇಳಿಬಂದಿದ್ದವು. 1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನದ ಅಂದಿನ ವಿದೇಶಾಂಗ ಕಾರ್ಯದರ್ಶಿ ಶಂಷಾದ್ ಅಹಮದ್, ‘ತನ್ನ ಭೂಪ್ರದೇಶ ರಕ್ಷಿಸಿಕೊಳ್ಳಲು ದೇಶವು ಅಣ್ವಸ್ತ್ರ ಬಳಸಲು ಹಿಂಜರಿ ಯುವುದಿಲ್ಲ’ ಎಂದಿದ್ದರು. 2019ರಲ್ಲಿ ಭಾರತವು ಪಾಕಿಸ್ತಾನದ ಬಾಲಾಕೋಟ್ ಮೇಲೆ ‘ನಿರ್ದಿಷ್ಟ ಕಾರ್ಯಾಚರಣೆ’ ನಡೆಸಿದಾಗಲೂ ಇಂಥದ್ದೇ ಪ್ರತಿಕ್ರಿಯೆಗಳು ಬಂದಿದ್ದವು. ಪಹಲ್ಗಾಮ್ ದಾಳಿಯ ನಂತರ, ಮೇ 7ರಿಂದ 10ರವರೆಗೆ ಎರಡೂ ರಾಷ್ಟ್ರಗಳ ನಡುವೆ ಸೇನಾ ಸಂಘರ್ಷದ ಸಮಯದಲ್ಲೂ ಅಣ್ವಸ್ತ್ರ ದಾಳಿಯ ಬಗ್ಗೆ ಚರ್ಚೆಗಳು ನಡೆದಿದ್ದವು. ಮೇ 10ರಂದು ಬೆಳಿಗ್ಗೆ ಪಾಕಿಸ್ತಾನದ ಪ್ರಧಾನಿ, ಅಧ್ಯಕ್ಷರು ಅಣ್ವಸ್ತ್ರಗಳ ಮೇಲುಸ್ತುವಾರಿ ಹೊಂದಿರುವ ನ್ಯಾಷನಲ್ ಕಮಾಂಡ್ ಅಥಾರಿಟಿಯ ಸಭೆ ಕರೆದಿದ್ದರು ಎಂದೂ ವರದಿಯಾಗಿತ್ತು. ಇವುಗಳಲ್ಲಿ ಸತ್ಯ ಎಷ್ಟು ಎನ್ನುವುದು ಸ್ಪಷ್ಟವಾಗಿಲ್ಲ.
ಪಹಲ್ಗಾಮ್ ದಾಳಿಯ ನಂತರ ಭಾರತ ಕೈಗೊಂಡ ರಾಜತಾಂತ್ರಿಕ ಕ್ರಮಗಳು, ಆಪರೇಷನ್ ಸಿಂಧೂರ, ಸೇನಾ ಸಂಘರ್ಷ ನಡೆದಾಗಿನಿಂದಲೂ ಧರ್ಮದ ಹೆಸರಿನಲ್ಲಿ ಪಾಕಿಸ್ತಾನದ ಜನರ ಮನಸ್ಸನ್ನು ಗೆಲ್ಲುವ ಪ್ರಯತ್ನ ವನ್ನು ಮುನೀರ್ ಮಾಡುತ್ತಲೇ ಇದ್ದಾರೆ. ಧಾರ್ಮಿಕ ಶಿಕ್ಷಣ ಪಡೆದಿರುವ ಮೊದಲ ಪಾಕ್ ಸೇನಾ ಮುಖ್ಯಸ್ಥರಾಗಿರುವ ಮುನೀರ್, ಧಾರ್ಮಿಕ ಪರಿಭಾಷೆಯಲ್ಲಿ ಮಾತನಾಡುವ ಮೂಲಕ ಜನರನ್ನು ಪ್ರಚೋದಿಸಲು ಯತ್ನಿಸುತ್ತಿದ್ದಾರೆ.
ಎರಡು ರಾಷ್ಟ್ರಗಳ ನಡುವಿನ ವಿಚಾರಗಳನ್ನು ಚರ್ಚಿಸಲು ನಿರ್ದಿಷ್ಟ ಸ್ಥಳ, ಸಂದರ್ಭ, ವೇದಿಕೆಗಳಿರುತ್ತವೆ; ರಾಜತಾಂತ್ರಿಕ ರೀತಿ–ರಿವಾಜುಗಳು ಇರುತ್ತವೆ; ಮಾತುಕತೆಗೆ ಅದರದ್ದೇ ಆದ ಪರಿಭಾಷೆಯೂ ಇರುತ್ತದೆ. ಈ ಎಲ್ಲವನ್ನೂ ಮೀರಿ, ಮೂರನೇ ರಾಷ್ಟ್ರದಿಂದ ಯುದ್ಧದ ಸಂದೇಶ ಬಿತ್ತರಿಸುವುದು, ದಾಳಿಯ ಪರಿಭಾಷೆಯಲ್ಲಿ ಮಾತನಾಡುವುದು, ಕೆಣಕುವುದು ಎರಡೂ ರಾಷ್ಟ್ರಗಳ ನಡುವಿನ ಸಂಬಂಧಕ್ಕೆ ಮತ್ತಷ್ಟು ಹಾನಿಯುಂಟುಮಾಡುತ್ತದೆ. ಮುನೀರ್ ಹೇಳಿಕೆಗೆ ಭಾರತ ನೀಡಿರುವ ತೀಕ್ಷ್ಣ ಪ್ರತಿಕ್ರಿಯೆ ಇದಕ್ಕೆ ಪುಷ್ಟಿನೀಡುವಂತಿದೆ.
ಪಾಕಿಸ್ತಾನದ ಬಳಿ 170ರಷ್ಟು ಅಣ್ವಸ್ತ್ರ ಸಿಡಿತಲೆಗಳಿವೆ ಎಂದು ‘ಸಿಪ್ರಿ’ಯ ಇತ್ತೀಚಿನ ವರದಿ ಹೇಳಿದೆ. ತನ್ನ ಮಿತ್ರ ರಾಷ್ಟ್ರ ಚೀನಾದ ನೆರವಿನೊಂದಿಗೆ ಅದು ತನ್ನ ಅಣ್ವಸ್ತ್ರ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುತ್ತಿದೆ. 2024ರಲ್ಲಿ ಪಾಕಿಸ್ತಾನವು ವಿಮಾನ, ಭೂಮಿ ಮತ್ತು ಸಮುದ್ರದಿಂದ ಉಡಾಯಿಸಬಲ್ಲಂತಹ ಗುರಿ ನಿರ್ದೇಶಿಸಿದ ಕ್ಷಿಪಣಿಗಳು, ಕೆಳಮಟ್ಟದಲ್ಲಿ ಹಾರಾಡುವ ಸಾಮರ್ಥ್ಯವಿರುವ ಕ್ಷಿಪಣಿಗಳನ್ನು ಅಭಿವೃದ್ಧಿ ಪಡಿಸುವ ಕಾರ್ಯವನ್ನು ಮುಂದುವರಿಸಿತ್ತು ಎಂದು ‘ಸಿಪ್ರಿ’ ವರದಿ ಹೇಳಿದೆ. ಇದರ ಜೊತೆಗೆ ಅಣ್ವಸ್ತ್ರ ತಯಾರಿಕೆಯಲ್ಲಿ ಬಳಸಲಾಗುವ ಪರಮಾಣು ವಿದಳನ ವಸ್ತುಗಳನ್ನು ಸಂಗ್ರಹಿಸುತ್ತಿದ್ದು, ಅಣ್ವಸ್ತ್ರ ಯೋಜನೆಯನ್ನು ಇನ್ನಷ್ಟು ವಿಸ್ತರಿಸುತ್ತಿದೆ ಎಂದು ‘ಸಿಪ್ರಿ’ ಹೇಳಿದೆ.
ಸರ್ವಾಧಿಕಾರದ ರೀತಿಯ ಆಡಳಿತವಿರುವ ಚೀನಾ ಮತ್ತು ಉತ್ತರ ಕೊರಿಯಾವೂ ಅಣ್ವಸ್ತ್ರಗಳನ್ನು ಹೊಂದಿವೆ. ‘ಸಿಪ್ರಿ’ ವರದಿ ಪ್ರಕಾರ ಚೀನಾದ ಬಳಿ 600 ಅಣ್ವಸ್ತ್ರ ಸಿಡಿತಲೆಗಳಿವೆ. ಈ ಪೈಕಿ 24 ಪರಮಾಣು ಬಾಂಬ್‌ಗಳನ್ನು ಅದು ಸನ್ನದ್ಧ ಸ್ಥಿತಿಯಲ್ಲಿ ಇರಿಸಿದೆ. ಚೀನಾ ಈವರೆಗೆ ಯಾವುದೇ ದೇಶದ ವಿರುದ್ಧ ಅಣ್ವಸ್ತ್ರ ದಾಳಿಯ ಬೆದರಿಕೆ ಒಡ್ಡಿಲ್ಲ. ಆದರೆ, ಪಾಕಿಸ್ತಾನಕ್ಕೆ ಅಣ್ವಸ್ತ್ರ ಹಾಗೂ ಸೇನಾ ಅಭಿವೃದ್ಧಿಗೆ ಸಕಲ ನೆರವನ್ನೂ ನೀಡುತ್ತಿದೆ.
ಅಮೆರಿಕ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳ ವಿರೋಧದ ನಡುವೆಯೂ ಅಣ್ವಸ್ತ್ರವನ್ನು ಪರೀಕ್ಷೆಗೆ ಒಳಪಡಿಸಿರುವ ರಾಷ್ಟ್ರ ಉತ್ತರ ಕೊರಿಯಾ. ‘ಸಿಪ್ರಿ’ ಪ್ರಕಾರ ಅದರ ಬಳಿ 50 ಅಣ್ವಸ್ತ್ರ ಸಿಡಿತಲೆಗಳಿವೆ. ಪಾಕಿಸ್ತಾನವೇ ಉತ್ತರ ಕೊರಿಯಾಕ್ಕೆ ಅಣ್ವಸ್ತ್ರ ತಂತ್ರಜ್ಞಾನವನ್ನು ನೀಡಿದೆ ಎಂದು ಹೇಳಲಾಗುತ್ತಿದೆ. 1970ರ ದಶಕದಿಂದಲೂ ಪಾಕ್–ಉತ್ತರ ಕೊರಿಯಾ ಉತ್ತಮ ಬಾಂಧವ್ಯ ಹೊಂದಿವೆ. 1971ರಲ್ಲಿ ವಿದೇಶಾಂಗ ಸಚಿವರಾಗಿದ್ದ ಝುಲ್ಫಿಕರ್ ಅಲಿ ಭುಟ್ಟೋ ಅವರು ಉತ್ತರ ಕೊರಿಯಾಕ್ಕೆ ಭೇಟಿ ನೀಡಿ, ಸೇನೆಯನ್ನು ಬಲಪಡಿಸಲು ನೆರವು ಕೇಳಿದ್ದರು. 1976ರಲ್ಲಿ ಪ್ರಧಾನಿಯಾಗಿ ಮತ್ತೆ ಭೇಟಿ ನೀಡಿದ್ದರು. 1993ರಲ್ಲಿ ಅವರ ಮಗಳು, ಪ್ರಧಾನಿ ಬೆನೆಜೀರ್ ಭುಟ್ಟೋ ಅವರು ಉತ್ತರ ಕೊರಿಯಾಕ್ಕೆ ಭೇಟಿ ನೀಡಿದ್ದರು. ಪಾಕಿಸ್ತಾನದ ಪರಮಾಣು ವಿಜ್ಞಾನಿ ಎ.ಕ್ಯು.ಖಾನ್ ಅವರು 13 ಬಾರಿ ಉತ್ತರ ಕೊರಿಯಾಕ್ಕೆ ಭೇಟಿ ನೀಡಿದ್ದರು. ಅಷ್ಟೇ ಅಲ್ಲದೇ, 1989–2000ದ ನಡುವೆ ಉತ್ತರ ಕೊರಿಯಾಕ್ಕೆ ಪರಮಾಣು ತಂತ್ರಜ್ಞಾನವನ್ನು ಹಸ್ತಾಂತರಿಸಿರುವ ಕುರಿತು 2004ರಲ್ಲಿ ಸಾರ್ವಜನಿಕವಾಗಿ ತಪ್ಪೊಪ್ಪಿಕೊಂಡಿದ್ದರು. ನಂತರ ಪರ್ವೇಜ್ ಮುಷರಫ್ ಅವರಿಗೆ ಕ್ಷಮಾದಾನವನ್ನೂ ನೀಡಿದ್ದರು.
ಭಾರತವು 2003ರಲ್ಲಿ ಅಣ್ವಸ್ತ್ರ ಬಳಕೆಗೆ ಸಂಬಂಧಿಸಿದಂತೆ ತನ್ನ ನೀತಿಯನ್ನು ಪ್ರಕಟಿಸಿದೆ.
ಯಾವುದೇ ಸಂದರ್ಭದಲ್ಲೂ ವೈರಿಯ ವಿರುದ್ಧ ಅಣ್ವಸ್ತ್ರವನ್ನು ಮೊದಲು ಬಳಸುವುದಿಲ್ಲ ಎಂಬುದು ಭಾರತದ ಸಿದ್ಧಾಂತ. ಒಂದು ವೇಳೆ ವೈರಿ ರಾಷ್ಟ್ರವು ತನ್ನ ಮೇಲೆ ಅಣ್ವಸ್ತ್ರದಿಂದ ದಾಳಿ ನಡೆಸಿದರೆ, ಅದಕ್ಕೆ ಪ್ರತೀಕಾರವಾಗಿ ಪರಮಾಣು ದಾಳಿ ನಡೆಸಲಾಗುವುದು. ತನ್ನ ನೆಲದ ಮೇಲೆ ದಾಳಿ ನಡೆಸಿದರೆ ಅಥವಾ ವಿದೇಶಿ ನೆಲದಲ್ಲಿರುವ ತನ್ನ ಪಡೆಗಳ ಮೇಲೆ ದಾಳಿ ನಡೆಸಿದರೆ ಅದಕ್ಕೆ ಪ್ರತಿಯಾಗಿ ಅಣ್ವಸ್ತ್ರವನ್ನು ಬಳಸಲಾಗುವುದು. ಅಣ್ವಸ್ತ್ರ ಹೊಂದಿರದ ರಾಷ್ಟ್ರದ ವಿರುದ್ಧ ಪರಮಾಣು ಬಾಂಬ್ ದಾಳಿ ನಡೆಸುವುದಿಲ್ಲ ಎಂದೂ ಭಾರತದ ನೀತಿ ಹೇಳುತ್ತದೆ. ಒಂದು ವೇಳೆ, ಯಾವುದೇ ರಾಷ್ಟ್ರವು ದೇಶದ/ ಸೇನೆಯ ಮೇಲೆ ಜೈವಿಕ ಅಥವಾ ರಾಸಾಯನಿಕ ಅಸ್ತ್ರಗಳಿಂದ ದಾಳಿ ನಡೆಸಿದರೆ, ಅಂತಹ ರಾಷ್ಟ್ರದ ಮೇಲೆ ಅಣ್ವಸ್ತ್ರ ದಾಳಿ ನಡೆಸಲಿದೆ ಎಂದು ನೀತಿಯಲ್ಲಿ ಹೇಳಲಾಗಿದೆ.
2016ರಲ್ಲಿ ಅಂದಿನ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು, ಭಾರತ ಈ ನೀತಿಗೆ ಬದ್ಧವಾಗಿರಬೇಕು ಎಂದೇನಿಲ್ಲ ಎಂದು ಹೇಳಿದ್ದು ಭಾರಿ ಸದ್ದು ಮಾಡಿತ್ತು. ನಂತರ ಪರಿಕ್ಕರ್ ಅವರು, ಅದು ತಮ್ಮ ವೈಯಕ್ತಿಕ ಅಭಿಪ್ರಾಯ ಎಂದು ಸ್ಪಷ್ಟನೆ ನೀಡಿದ್ದರು.
ಭಾರತಕ್ಕೆ ಹೋಲಿಸಿದರೆ, ಅಣ್ವಸ್ತ್ರ ಬಳಕೆಗೆ ಸಂಬಂಧಿಸಿದಂತೆ ಪಾಕಿಸ್ತಾನವು ಇಂತಹ ನೀತಿಯನ್ನು ಹೊಂದಿಲ್ಲ. ಪಾಕ್‌ನ ನ್ಯಾಷನಲ್ ಕಮಾಂಡ್ ಅಥಾರಿಟಿಯ (ಎನ್‌ಸಿಎ) ಕಾರ್ಯತಂತ್ರ ಯೋಜನೆಗಳ ವಿಭಾಗದ ಮುಖ್ಯಸ್ಥರಾಗಿದ್ದ ಖಾಲಿದ್ ಕಿದ್ವಾಯಿ ಅವರು 2001ರಲ್ಲಿ ‘ದೇಶವು ಭಾರಿ ಪ್ರಮಾಣದಲ್ಲಿ ಭೂಪ್ರದೇಶ ಕಳೆದುಕೊಂಡಾಗ, ಪ್ರಮುಖ ಸೇನಾ ಆಸ್ತಿಗಳಿಗೆ ಧ್ವಂಸವಾದಾಗ, ಆರ್ಥಿಕವಾಗಿ ದೊಡ್ಡ ಹೊಡೆತ ನೀಡಿದಾಗ ಅಥವಾ ರಾಜಕೀಯ ಅಸ್ಥಿರತೆ ಉಂಟುಮಾಡಿದ ಸಂದರ್ಭಗಳಲ್ಲಿ ಅಣ್ವಸ್ತ್ರಗಳನ್ನು ಬಳಸಬಹುದು’ ಎಂದು ಹೇಳಿದ್ದರು.
ಆಧಾರ: ಪಿಟಿಐ, ಬಿಬಿಸಿ, ‘ಸಿಪ್ರಿ’, ಮಾಧ್ಯಮ ವರದಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.