ADVERTISEMENT

ಆಳ-ಅಗಲ: ಲಸಿಕೆಯ ಅಂಕೆಗೆ ಸಿಗದ ಹಕ್ಕಿಜ್ವರ

ಅಮೃತ ಕಿರಣ ಬಿ.ಎಂ.
Published 11 ಫೆಬ್ರುವರಿ 2026, 0:30 IST
Last Updated 11 ಫೆಬ್ರುವರಿ 2026, 0:30 IST
<div class="paragraphs"><p>ಎಐ ಚಿತ್ರ: ಹಳೇಮನಿ</p></div>

ಎಐ ಚಿತ್ರ: ಹಳೇಮನಿ

   
ಜಾಗತಿಕವಾಗಿ ಇನ್ನೂ ತಯಾರಾಗಿಲ್ಲ ಪರಿಣಾಮಕಾರಿ ಔಷಧ, ಭಾರತದಲ್ಲಿ ಲಸಿಕೆ ಅಭಿವೃದ್ಧಿಗೆ ಆಮೆ ವೇಗ

ಅಮೆರಿಕ, ಯುರೋಪ್‌ನ ವಿವಿಧ ದೇಶಗಳಲ್ಲಿ ಕಳೆದ ವರ್ಷ ಸಾಕಷ್ಟು ಅವಾಂತರ ಸೃಷ್ಟಿಸಿದ್ದ ಹಕ್ಕಿಜ್ವರದ (ಏವಿಯನ್ ಇನ್‌ಫ್ಲುಯೆನ್ಜಾ) ಪ್ರಭಾವ ಇನ್ನೇನು ಕಡಿಮೆಯಾಯಿತು ಎನ್ನುತ್ತಿರುವಾಗಲೇ ಅದು ಮಗ್ಗಲು ಬದಲಿಸಿದೆ. ಈ ಬಾರಿ ಏಷ್ಯಾದಲ್ಲೂ ತನ್ನ ಜಾಡು ವಿಸ್ತರಿಸಿಕೊಂಡಿದೆ. ನಮ್ಮ ದೇಶದಲ್ಲಿ ಅದರಲ್ಲೂ ದಕ್ಷಿಣ ಭಾರತದಲ್ಲಿ ವ್ಯಾಪಕವಾಗುತ್ತಿರುವ ಲಕ್ಷಣಗಳು ಕಾಣಿಸುತ್ತಿವೆ.

ತಮಿಳುನಾಡಿನ ಚೆನ್ನೈ ನಗರ ಸೇರಿದಂತೆ ಅಡ್ಯಾರ್, ವೆಲಚೇರಿ, ತಿರುವಣ್ಮಿಯೂರ್‌ ಜಿಲ್ಲೆಗಳಲ್ಲಿ ಕೆಲವು ದಿನಗಳ ಹಿಂದೆ ಬೃಹತ್ ಸಂಖ್ಯೆಯ ಕಾಗೆಗಳು ಹಕ್ಕಿಜ್ವರ ಸೋಂಕಿನಿಂದ ಮೃತಪಟ್ಟವು. ಮೃತಪಟ್ಟ ಕಾಗೆಯಲ್ಲಿ ಎಚ್‌5ಎನ್‌1 ಸೋಂಕಿನ ಇರುವಿಕೆಯನ್ನು ಭೋಪಾಲ್‌ನ ಐಸಿಎಆರ್ ಪ್ರಯೋಗಾಲಯ ಖಚಿತಪಡಿಸಿತು. ಆಂಧ್ರಪ್ರದೇಶದ ಅನ್ನಮಯ್ಯ ಮತ್ತು ಚಿತ್ತೂರು ಜಿಲ್ಲೆಗಳಲ್ಲೂ ಸೋಂಕು ದೃಢಪಟ್ಟಿದ್ದು, ಸರ್ಕಾರ ಹೈ ಅಲರ್ಟ್ ಘೋಷಿಸಿದೆ. 

ADVERTISEMENT

ಕೇರಳದಲ್ಲೂ ಕಳೆದ ವರ್ಷಾಂತ್ಯದಲ್ಲೇ ಇದರ ಹಾವಳಿ ಶುರುವಾಗಿತ್ತು. ಕೊಟ್ಟಾಯಂ, ಕೊಲ್ಲಂ ಜಿಲ್ಲೆಗಳಲ್ಲಿ ಕೋಳಿಗಳಲ್ಲಿ ಸೋಂಕು ಖಚಿತಪಡುತ್ತಿದ್ದಂತೆಯೇ ಅವುಗಳ ಸಾಗಾಟವನ್ನು ನಿರ್ಬಂಧಿಸಲಾಯಿತು. ಸೋಂಕುಪೀಡಿತ ಹಕ್ಕಿಗಳನ್ನು ಕೊಲ್ಲಲಾಯಿತು. ವಲಸೆ ಹಕ್ಕಿಗಳ ಮೇಲೆ ನಿಗಾ ಇಡುವಂತೆ ಪುದುಚೇರಿ ಸರ್ಕಾರ ಆದೇಶ ಹೊರಡಿಸಿದೆ. ಬಿಹಾರದ ದರ್ಬಾಂಗ್ ಜಿಲ್ಲೆಯಲ್ಲಿ ವೈರಸ್ ಕಂಡುಬಂದಿದ್ದು, ತೀವ್ರ ನಿಗಾಕ್ಕೆ ಸೂಚಿಸಲಾಗಿದೆ. ಕೇಂದ್ರದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು ರಾಷ್ಟ್ರೀಯ ಕ್ರಿಯಾ ಯೋಜನೆ ನಿಯಮಗಳನ್ನು ಜಾರಿಗೆ ತರುವಂತೆ ಸೋಂಕು ಬಾಧಿತ ರಾಜ್ಯಗಳಿಗೆ ನಿರ್ದೇಶನ ನೀಡಿದೆ.

485 ಪ್ರಭೇದದ ಹಕ್ಕಿಗಳಲ್ಲಿ ಸೋಂಕು: 

ಹಕ್ಕಿಜ್ವರದ ವ್ಯಾಪ್ತಿ ಅಂದುಕೊಂಡಿದ್ದಕ್ಕಿಂತ ತುಸು ಹೆಚ್ಚೇ ಇದೆ. ಕೋಳಿಗಳನ್ನೂ ಒಳಗೊಂಡಂತೆ ಅಂದಾಜು 485 ಪ್ರಭೇದದ ಹಕ್ಕಿಗಳಲ್ಲಿ ಎಚ್‌5ಎನ್‌1 ವೈರಾಣುವಿನ ಇರುವಿಕೆಯನ್ನು ಗುರುತಿಸಲಾಗಿದೆ. ಹಕ್ಕಿಗಳಷ್ಟೇ ಅಲ್ಲದೇ, ಸಸ್ತನಿಗಳನ್ನೂ ಇದು ಬಿಟ್ಟಿಲ್ಲ. ಸೀಲ್‌, ಸಮುದ್ರದ ನೀರುನಾಯಿ, ಡಾಲ್ಫಿನ್, ನರಿ, ಹಸು, ಕುರಿಗಳಲ್ಲೂ ಕಾಣಿಸಿಕೊಂಡಿದ್ದು, ಸರ್ವವ್ಯಾಪಿ ಎನಿಸಿದೆ. ಇಲ್ಲಿಯವರೆಗೆ 15 ಕೋಟಿ ಹಕ್ಕಿಗಳ ದೇಹವನ್ನು ವೈರಾಣು ಹೊಕ್ಕಿದೆ ಎಂದು ಅಂದಾಜಿಸಲಾಗಿದೆ. ಜಾನುವಾರುಗಳ ಜತೆ ನಿಕಟ ಸಂಪರ್ಕದಲ್ಲಿ ಇರುವ ವ್ಯಕ್ತಿಗಳಿಗೂ ಈ ಸೋಂಕು ಹರಡಬಹುದು ಎಂಬುದು ತಜ್ಞರ ಅಂದಾಜು.

ವೈರಾಣು ಪ್ರಾಣಿ–ಪಕ್ಷಿಗಳಿಂದ ಮನುಷ್ಯರಿಗೆ ಹರಡುವ ಸಾಧ್ಯತೆ ಇದೆ. ಆದರೆ ಅದು ಅಪಾಯದ ಮಟ್ಟದಲ್ಲಿ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ ) ಸ್ಪಷ್ಟಪಡಿಸಿದೆ. ಒಂದು ವೇಳೆ ವೈರಾಣು ರೂಪಾಂತರ ಹೊಂದಿ, ಮನುಷ್ಯನಿಂದ–ಮನುಷ್ಯನಿಗೆ ಹರಡಲು ಶುರುವಾದರೆ, ಕೋವಿಡ್ ರೀತಿಯ ಮತ್ತೊಂದು ಸಾಂಕ್ರಾಮಿಕ ಎದುರಿಸಲು ಜಗತ್ತು ಸಿದ್ಧವಾಗಬೇಕಿದೆ.

ಪ್ರಬಲ ಲಸಿಕೆಗಳ ಸಂಶೋಧನೆ ಪ್ರಕ್ರಿಯೆ ತುಂಬಾ ನಿಧಾನಗತಿಯಲ್ಲಿರುವ ಕಾರಣ, ವೈರಸ್‌ ಹರಡುವಿಕೆ ತಡೆಯಲು, ಸೋಂಕಿತ ಹಕ್ಕಿಗಳನ್ನು ಕೊಲ್ಲುವುದೊಂದೇ ಸದ್ಯಕ್ಕಿರುವ ಮಾರ್ಗ. ಈಗಾಗಲೇ ಅಭಿವೃದ್ಧಿಪಡಿಸಿರುವ ಕೆಲ ಲಸಿಕೆಗಳು ಅಷ್ಟು ಪರಿಣಾಮಕಾರಿ ಆಗಿಲ್ಲ. ಇದು ‘ಸೀಸನಲ್‌ ಫ್ಲೂ’ ರೀತಿ ಆಗಾಗ್ಗೆ ಕಾಣಿಸಿಕೊಂಡು ಮಾಯವಾಗುವ ಕಾರಣ, ದೀರ್ಘಕಾಲ ಬಾಧಿಸದು ಎಂಬ ಕಾರಣಕ್ಕೆ ಲಸಿಕೆ ತಯಾರಿಕೆಯ ಗಂಭೀರ ಪ್ರಯತ್ನಗಳು ನಡೆಯುತ್ತಿಲ್ಲ ಎಂಬ ಅಭಿಪ್ರಾಯ ಇದೆ.  

ವೈರಸ್‌ಗಳಲ್ಲಿ ‘ರೂಪಾಂತರ’ (ಮ್ಯುಟೇಷನ್‌) ಎಂಬುದು ಸಹಜ ಪ್ರಕ್ರಿಯೆ ಆಗಿದ್ದರೂ, ಹಕ್ಕಿಜ್ವರಕ್ಕೆ ಕಾರಣವಾಗಿರುವ ಎಚ್‌5ಎನ್‌1 ವೈರಾಣು ಪ್ರತಿ ಬಾರಿಯೂ ಹೊಸ ಅತಿಥೇಯ ಜೀವಿಯ (ಹೋಸ್ಟ್) ದೇಹವನ್ನು ಹೊಕ್ಕು ದಿಗಿಲು ಮೂಡಿಸುತ್ತಿದೆ. ಈಗ ಹೆಚ್ಚು ಬಾಧಿಸುತ್ತಿರುವ ಎಚ್‌5ಎನ್‌1 ವೈರಾಣು, ಈಗಾಗಲೇ ಅಭಿವೃದ್ಧಿಪಡಿಸಿರುವ ಲಸಿಕೆಯ ಎಚ್‌ಎನ್‌ ವೈರಾಣು ತಳಿಗಳಿಗಿಂತ ಭಿನ್ನವಾಗಿದ್ದು, ಲಸಿಕೆಯ ಲಗಾಮಿಗೆ ಸಿಗುತ್ತಿಲ್ಲ.

ವೈರಾಣು ಸಂರಚನೆ: 

ಸಾಮಾನ್ಯ ಜ್ವರ, ನೆಗಡಿಗೆ (ಫ್ಲೂ) ಇನ್‌ಫ್ಲುಯೆನ್ಜಾ ‘ಎ’ ವೈರಸ್‌ ಕಾರಣ. ಈ ವೈರಸ್‌ನ ಮೇಲ್ಭಾಗದಲ್ಲಿ ಎರಡು ರೀತಿಯ ಪ್ರೊಟೀನ್‌ಗಳು (ಹೆಮಗ್ಲುಟೆನಿನ್‌–H ಮತ್ತು ನ್ಯೂರಾಮಿನಿಡೇಸ್‌ –N) ಅಂಟಿಕೊಂಡಿವೆ. 18 ರೀತಿಯ ಹೆಮಗ್ಲುಟೆನಿನ್ (ಎಚ್‌1ನಿಂದ ಎಚ್‌18ವರೆಗೆ) ಹಾಗೂ 11 ವಿಧದ ನ್ಯೂರಾಮಿನಿಡೇಸ್‌ನ (ಎನ್‌1ನಿಂದ ಎನ್11ವರೆಗೆ) ಉಪತಳಿಗಳನ್ನು ಗುರುತಿಸಲಾಗಿದೆ. ಈ ಪ್ರೊಟೀನ್‌ಗಳ ಸಂರಚನೆಯ ಪೈಕಿ, ಎಚ್‌3ಎನ್‌1 ಹಾಗೂ ಎಚ್‌5ಎನ್‌1 ಹೆಚ್ಚು ಅಪಾಯಕಾರಿ ಎನಿಸಿವೆ. 

ಎಂಆರ್‌ಎನ್‌ಎ ಲಸಿಕೆಗಳಿಗೆ ಬೇಡಿಕೆ: ಕೋವಿಡ್ ಅವಧಿಯಲ್ಲಿ ಸಾಕಷ್ಟು ಪ್ರಚಲಿತಕ್ಕೆ ಬಂದು, ಅಪಾರ ವಿಶ್ವಾಸಾರ್ಹತೆ ಗಳಿಸಿರುವ ‘ಎಂಆರ್‌ಎನ್‌ಎ’ (mRNA) ಕಾರ್ಯ ವಿಧಾನದ ಲಸಿಕೆಗಳಿಗೆ ಈಗ ಹೆಚ್ಚು ಒತ್ತು ನೀಡಲಾಗುತ್ತಿದೆ. ಇವುಗಳನ್ನು ಕಡಿಮೆ ಅವಧಿಯಲ್ಲಿ ಅಭಿವೃದ್ಧಿಪಡಿಸಬಹುದು ಹಾಗೂ ವೈರಾಣು ಮತ್ತೆ ರೂಪಾಂತರಕ್ಕೆ ಒಳಗಾದಲ್ಲಿ, ಹೊಸ ಉಪತಳಿಗಳನ್ನೂ ಅದು ನಿಗ್ರಹಿಸಬಲ್ಲದು ಎಂಬುದು ಅದರ ಜನಪ್ರಿಯತೆಗೆ ಕಾರಣ.

ಎಂಆರ್‌ಎನ್‌ಎ ಕಾರ್ಯವಿಧಾನದ ಲಸಿಕೆಗಳ ಕ್ಲಿನಿಕಲ್ ಹಂತದ ‌ಪ್ರಯೋಗಗಳು ಈಗಾಗಲೇ ಚಾಲ್ತಿಯಲ್ಲಿವೆ. ‘ಆರ್ಕ್ಟುರಸ್‌ ಥೆರಪೂಟಿಕ್ಸ್‌‘ ಸಂಸ್ಥೆಯು 2024ರ ಡಿಸೆಂಬರ್‌ನಲ್ಲಿ ಎಂಆರ್‌ಎನ್‌ಎ ಲಸಿಕೆಯ ಮೊದಲ ಕ್ಲಿನಿಕಲ್ ಪ್ರಯೋಗವನ್ನು ಕೈಗೊಂಡಿದ್ದು, ಲಸಿಕೆಯ ಸುರಕ್ಷತೆ ಮತ್ತು ರೋಗನಿರೋಧಕ ಶಕ್ತಿಯ ಪ್ರತಿಕ್ರಿಯೆಯನ್ನು ವಿಶ್ಲೇಷಣೆ ಮಾಡುತ್ತಿದೆ. ಮೊಡೆರ್ನಾ ಸಂಸ್ಥೆಯೂ ಎಂಆರ್‌ಎನ್‌ಎ ಮಾದರಿಯ ಲಸಿಕೆ ಅಭಿವೃದ್ಧಿಯಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿವೆ.

ಹೇಗೆ ನಡೆಯುತ್ತಿದೆ ಲಸಿಕೆ ಅಭಿವೃದ್ಧಿ?

ಇದೇ ಜನವರಿಯಲ್ಲಿ ರಷ್ಯಾ ಸೇಂಟ್ ಪೀಟರ್‌ಬರ್ಗ್‌ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ‌‘ರಿವರ್ಸ್ ಜನೆಟಿಕ್ಸ್‘ ತತ್ವದ ಆಧಾರದ ಲಸಿಕೆಯು ಈಗಿನ ರೂಪಾಂತರಿ ವಿರುದ್ಧ ಹೋರಾಡಲು ಸಮರ್ಥವಾಗಿದೆ ಎನ್ನಲಾಗಿದೆ. ಅರ್ಜೆಂಟೀನಾದ ಸಂಗೇರಿಯಂ ಬಯೋಟೆಕ್, ಎಂಆರ್‌ಎನ್‌ಎ ಸ್ವರೂಪದ ಲಸಿಕೆ ಅಭಿವೃದ್ಧಿಯಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿದೆ. ಈ ತಂತ್ರಜ್ಞಾನವನ್ನು ಬಡ–ಮಧ್ಯಮ ಆದಾಯದ ದೇಶಗಳೊಂದಿಗೆ ಹಂಚಿಕೊಳ್ಳಲು ಸಿದ್ಧವಾಗಿದೆ.

ಅಮೆರಿಕದಲ್ಲಿ ಸಾರ್ವಜನಿಕರಿಗೆ ಯಾವುದೇ ಎಚ್‌5ಎನ್‌1 ಲಸಿಕೆ ಲಭ್ಯವಿಲ್ಲ. ಹಳೆಯ ರೂಪಾಂತರಿ ವಿರುದ್ಧ ಹೋರಾಡಬಲ್ಲ ಸಾಮರ್ಥ್ಯದ ಲಸಿಕೆಗಳನ್ನು ಶೇಖರಿಸಿ ಇಟ್ಟುಕೊಂಡಿದ್ದು, ತುರ್ತು ಸಂದರ್ಭದಲ್ಲಿ ಬಳಸಲು ನಿರ್ಧರಿಸಿದೆ. ಸನೋಫಿ ಪಾಶ್ಚರ್ ಮತ್ತು ಜಿಎಸ್‌ಕೆ ಕಂಪನಿಗಳಿಗೆ ಲಸಿಕೆ ಉತ್ಪಾದಿಸಲು ಪರವಾನಗಿ ನೀಡಿದೆ. 

ಮೊಡರ್ನಾ ಮತ್ತು ಆರ್ಕ್ಟುರಸ್ ಥೆರಪ್ಯೂಟಿಕ್ಸ್ ಸಂಸ್ಥೆಗಳು ಹೊಸ ತಲೆಮಾರಿನ ಎಂಆರ್‌ಎನ್‌ಎ ಲಸಿಕೆ ಕ್ಯಾಂಡಿಟೇಟ್‌ಗಳನ್ನು ಅಭಿವೃದ್ಧಿಪಡಿಸಲು ಸರ್ಕಾರದಿಂದ ಪರವಾನಗಿ ಪಡೆದಿವೆ. ವಾಷಿಂಗ್ಟನ್ ವಿಶ್ವವಿದ್ಯಾಲಯವು ಮೂಗಿನ ಮೂಲಕ ಹಾಕುವ ಲಸಿಕೆ ಅಭಿವೃದ್ಧಿಪಡಿಸಿದ್ದು, ಪರಿಣಾಮಕಾರಿಯಾಗಿದೆ ಎಂದು ಹೇಳಿಕೊಂಡಿದೆ. 

2025ರಲ್ಲಿ ಜಾನುವಾರು ಸೋಂಕು ತಡೆಯಬಲ್ಲ ಏಳು ಲಸಿಕೆ ಕ್ಯಾಂಡಿಡೇಟ್‌ಗಳ ಪ್ರಾಯೋಗಿಕ ಪರೀಕ್ಷೆಗೆ ಅಮೆರಿಕ ಅನುಮತಿ ನೀಡಿತು. ಈ ಪೈಕಿ ಮೆಡ್ಜೀನ್‌ನ ಎಚ್‌5ಎನ್‌1 ಲಸಿಕೆಯು ಅಂತಿಮ ಹಂತ ಪ್ರವೇಶಿಸಿತು. ಈ ನಿಟ್ಟಿನಲ್ಲಿ ಉಳಿದ ಕಡೆಗಳಲ್ಲಿ ಪ್ರಯತ್ನಗಳು ಅಷ್ಟಾಗಿ ನಡೆದಿಲ್ಲ. 

ಭಾರತದಲ್ಲಿ ನಿಧಾನ

ಭಾರತದಲ್ಲಿ ಏವಿಯನ್ ಇನ್‌ಫ್ಲುಯೆನ್ಜಾ ವಿರುದ್ಧ ಹೋರಾಡಬಲ್ಲ ಲಸಿಕೆಯ ಅಭಿವೃದ್ಧಿಗೆ ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಯ (ಎನ್‌ಐವಿ) ಜೊತೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) 2025ರಲ್ಲಿ ಮುಂದಾಯಿತು.

ಜಂಟಿಯಾಗಿ ಸಂಶೋಧನೆ ಮತ್ತು ಅಭಿವೃದ್ಧಿ ಕೈಗೊಳ್ಳಲು ಆಸಕ್ತಿ ವ್ಯಕ್ತಪಡಿಸುವಂತೆ ಅರ್ಹ ಸಂಘ ಸಂಸ್ಥೆಗಳು, ತಯಾರಕರಿಗೆ ಕಳೆದ ವರ್ಷದ ಫೆಬ್ರುವರಿಯಲ್ಲಿ ಐಸಿಎಂಆರ್‌ ಆಹ್ವಾನ ನೀಡಿತ್ತು. ಸಾಂಪ್ರದಾಯಿಕ ಅಥವಾ ಎಂಆರ್‌ಎನ್‌ಎ ಆಧಾರಿತ ಲಸಿಕೆ ಅಭಿವೃದ್ಧಿಗೆ ಎನ್‌ಐವಿಯಲ್ಲಿ ಸಿದ್ಧತೆಗಳು ನಡೆದಿವೆ. 2026ರ ಅಂತ್ಯಕ್ಕೆ ಲಸಿಕೆಯ ಕ್ಯಾಂಡಿಟೇಟ್ ಸಿದ್ಧವಾಗುವ ಸಾಧ್ಯತೆಯಿದ್ದು, ಆ ನಂತರ ಲಸಿಕೆಯನ್ನು ಹಲವು ಹಂತಗಳಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಎಂದು ಮೂಲಗಳು ತಿಳಿಸಿವೆ. 

ಸೀರಂ ಇನ್‌ಸ್ಟಿಟ್ಯೂಟ್, ಜೆನ್ನೋವಾ ಬಯೋಫಾರ್ಮಾ ಕಂಪನಿ, ಐಸಿಎಂಆರ್–ಎನ್‌ಐವಿ ಜಂಟಿಯಾಗಿ ವಿವಿಧ ಮಾದರಿಯ ಲಸಿಕೆ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿವೆ.  

ಭೋಪಾಲ್‌ನ ಐಸಿಎಆರ್ ಪ್ರಯೋಗಾಲಯ ಅಭಿವೃದ್ಧಿಪಡಿಸಿದ ಕಡಿಮೆ ರೋಗಕಾರಕ ಹಕ್ಕಿಜ್ವರ ಎಚ್‌9ಎನ್‌2 ತಡೆ ಲಸಿಕೆಯು ಕಳೆದ ವರ್ಷ ಮಾರುಕಟ್ಟೆಯಲ್ಲಿತ್ತು. ಆದರೆ ಅದರ ಬಳಕೆ ಸೀಮಿತವಾಗಿದ್ದು, ಆರು ತಿಂಗಳು ಮಾತ್ರ ರಕ್ಷಣೆ ನೀಡಬಲ್ಲದು ಎನ್ನಲಾಗಿದೆ. ಮೇಲಾಗಿ ಈಗಿನ ರೂಪಾಂತರಿ ವೈರಾಣುವನ್ನು ಎದುರಿಸುವ ಬಗ್ಗೆ ಇನ್ನೂ ಖಚಿತತೆ ಇಲ್ಲ. 

ಏನಿದು ಎಂಆರ್‌ಎನ್‌ಎ, ಕೆಲಸ ಹೇಗೆ?

ಲಸಿಕೆ ತಯಾರಿಕೆಗೂ ಮುನ್ನ, ವೈರಸ್‌ಗಳು ಹೊಂದಿರುವ ಪ್ರೊಟೀನ್ ಸಂಯೋಜನೆಯನ್ನು ತಿಳಿಯುವುದು ಅತಿಮುಖ್ಯ. ಈ ಪ್ರಕ್ರಿಯೆಯಲ್ಲಿ ಎಂಆರ್‌ಎನ್‌ಎ ಒಂದು ಟೆಂಪ್ಲೇಟ್‌ ಅಥವಾ ವಾಹಕದ ರೀತಿಯಲ್ಲಿ ಕೆಲಸ ಮಾಡುತ್ತದೆ. ಡಿಎನ್‌ಎಯಿಂದ ರೈಬೋಸೋಮ್‌ಗಳಿಗೆ ಆನುವಂಶಿಕ ಮಾಹಿತಿಯನ್ನು ರವಾನಿಸುವ ವಾಹಕವಾಗಿ ಮೆಸೆಂಜರ್ ರೈಬೋನ್ಯೂಕ್ಲಿಯಿಕ್ ಆಮ್ಲ (mRNA) ಕಾರ್ಯ ನಿರ್ವಹಿಸುತ್ತದೆ. ನಿರ್ದಿಷ್ಟ ಪ್ರೊಟೀನ್‌ವೊಂದನ್ನು ಉತ್ಪಾದನೆ ಮಾಡುವುದಕ್ಕೆ ರೈಬೊಸೋಮ್‌ಗಳಿಗೆ ಸೂಚನೆಗಳನ್ನು ರವಾನಿಸುವ ಇದು, ನಂತರದಲ್ಲಿ ತಾನೇ ಆ್ಯಂಟಿಜನ್‌ (ಪ್ರತಿಕಾಯ) ಆಗಿ ಕೆಲಸ ಮಾಡಲು ಶುರುಮಾಡಿ, ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು (ಇಮ್ಯೂನ್ ಸಿ‌ಸ್ಟಂ) ಪ್ರಚೋದಿಸುತ್ತದೆ. 

ಪ್ರಕ್ರಿಯೆ:

ವೈರಾಣುವಿನ ಪ್ರೊಟೀನ್ ಸಂಕೇತಗಳನ್ನು ಎಂಆರ್‌ಎನ್‌ಎ ಮೂಲಕ ಎಂಆರ್‌ಎನ್‌ಎ ಲಸಿಕೆಗಳು ದೇಹಕ್ಕೆ ಪರಿಚಯಿಸುತ್ತವೆ. ತಕ್ಷಣವೇ, ದೇಹದ ಜೀವಕೋಶಗಳು ಎಂಆರ್‌ಎನ್‌ಎ ಸಂಕೇತಗಳನ್ನು ಬಳಸಿಕೊಂಡು ವೈರಾಣುವಿನ  ಪ್ರೊಟೀನ್‌ಗಳನ್ನೇ ಹೆಚ್ಚೆಚ್ಚು ಉತ್ಪಾದಿಸಲು ಆರಂಭಿಸುತ್ತವೆ. ಆಗ ಪ್ರತಿರಕ್ಷಣಾ ವ್ಯವಸ್ಥೆಯು ಜಾಗೃತಗೊಂಡು, ಇವು ಹೊರಗಿನ ಕಣಗಳು ಎಂಬುದನ್ನು ಗುರುತಿಸಲು ಶುರು ಮಾಡುತ್ತದೆ. ತಕ್ಷಣವೇ, ಶತ್ರುಗಳ ವಿರುದ್ಧ ಹೋರಾಡಬಲ್ಲ ಪ್ರತಿಕಾಯಗಳನ್ನು ದೇಹ ಉತ್ಪಾದಿಸಲು ತೊಡಗುತ್ತದೆ. ದೇಹವನ್ನು ಹೊಕ್ಕಿರುವ ವೈರಲ್‌ ಪ್ರೊಟೀನ್‌ಗಳನ್ನು ತಟಸ್ಥಗೊಳಿಸುತ್ತದೆ. ಈ ತಂತ್ರಗಾರಿಕೆಯ ಕಾರಣಕ್ಕೆ ಎಂಆರ್‌ಎನ್‌ಎ ಕಾರ್ಯ ವಿಧಾನದ ಲಸಿಕೆಗಳು ಜನಪ್ರಿಯತೆ ಗಳಿಸಿವೆ.  

ಆಧಾರ: ಅಮೆರಿಕದ ರೋಗ ನಿಯಂತ್ರಣ ಮತ್ತು ಮುನ್ನೆಚ್ಚರಿಕೆ ಕೇಂದ್ರ (ಸಿಡಿಸಿ), ಡಬ್ಲ್ಯುಎಚ್‌ಒ, ಸೈನ್ಸ್‌ ಡೈರೆಕ್ಟ್, ಅಮೆರಿಕನ್ ಸೊಸೈಟಿ ಫಾರ್ ಮೈಕ್ರೊಬಯಾಲಜಿ ವೆಬ್‌ಸೈಟ್‌, ಐಸಿಎಂಆರ್ ಸುತ್ತೋಲೆಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.