ADVERTISEMENT

ಆಳ-ಅಗಲ | ಸಿಸೇರಿಯನ್‌: ಹೆಚ್ಚಳ ತಂದ ಕಳವಳ

ಭಾರತದಲ್ಲಿ ದಕ್ಷಿಣ ರಾಜ್ಯಗಳಲ್ಲಿ ಹೆಚ್ಚು

​ಪ್ರಜಾವಾಣಿ ವಾರ್ತೆ
Published 17 ಜನವರಿ 2025, 0:30 IST
Last Updated 17 ಜನವರಿ 2025, 0:30 IST
<div class="paragraphs"><p>ಸಿಸೇರಿಯನ್‌</p></div>

ಸಿಸೇರಿಯನ್‌

   

(ಸಾಂಕೇತಿಕ ಚಿತ್ರ)

ತಾಯಿ ಮತ್ತು ಮಗುವಿನ ಪ್ರಾಣ ರಕ್ಷಣೆಯಲ್ಲಿ ಸಿಸೇರಿಯನ್ ಪಾತ್ರ ಬಹಳ ಮುಖ್ಯವಾದದ್ದು. ಆದರೆ, ಅದನ್ನು ಬಳಸುವ ರೀತಿಯಲ್ಲಿ ವ್ಯತ್ಯಾಸಗಳಾಗುತ್ತಿವೆ. ಜಾಗತಿಕ, ದೇಶ, ರಾಜ್ಯಮಟ್ಟದಲ್ಲಿ ಸಿಸೇರಿಯನ್‌ ಹೆರಿಗೆಗಳ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದ್ದು, ಅದೀಗ ಅತ್ಯಂತ ಸಹಜ ಶಸ್ತ್ರಚಿಕಿತ್ಸೆಯಾಗಿ ಮಾರ್ಪಟ್ಟಿದೆ ಎಂದು ಹೇಳುತ್ತವೆ ಅಧ್ಯಯನ ವರದಿಗಳು. ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ತಾಯಿ ಮತ್ತು ಮಗುವಿನ ಪ್ರಾಣ ಉಳಿಸುವುದಕ್ಕಾಗಿ ಸಿಸೇರಿಯನ್‌ ಮೂಲಕ ಹೆರಿಗೆ ಮಾಡಿಸಲಾಗುತ್ತದೆ. ಆದರೆ ಈಗ ವೈದ್ಯಕೀಯ ಅಲ್ಲದ ಕಾರಣಗಳಿಗೂ ಸಿಸೇರಿಯನ್‌ ಮೂಲಕ ಹೆರಿಗೆ ಮಾಡಿಸಲಾಗುತ್ತಿದೆ. ಅನಗತ್ಯವಾಗಿ ಸಿಸೇರಿಯನ್‌ ಮೂಲಕ ಹೆರಿಗೆ ಪ್ರಮಾಣ ಹೆಚ್ಚಾಗುತ್ತಿರುವ ಬಗ್ಗೆ ಕಳವಳವೂ ವ್ಯಕ್ತವಾಗಿದೆ. 

ಭಾರತದಲ್ಲಿ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸುವ ಪದ್ಧತಿ ಹೆಚ್ಚಾಗುತ್ತಿದ್ದು, ಇದು ಮಹಿಳೆಯರ ಆರೋಗ್ಯದ ಮೇಲೆ ದೀರ್ಘಕಾಲೀನ ಪರಿಣಾಮಗಳನ್ನು ಬೀರುತ್ತಿದೆ ಎಂದು ಹಲವು ಅಧ್ಯಯನ ವರದಿಗಳು ಹೇಳುತ್ತಿವೆ.  ನಾಲ್ಕು ಮತ್ತು ಐದನೇ ಕುಟುಂಬ ಆರೋಗ್ಯ ಸಮೀಕ್ಷೆಯ ದತ್ತಾಂಶ ಆಧರಿಸಿ ಅಧ್ಯಯನಗಳನ್ನು ಮಾಡಲಾಗಿದ್ದು, ರಾಜ್ಯಗಳಲ್ಲಿನ ಸಿಸೇರಿಯನ್ ಹೆರಿಗೆ ಪ್ರಮಾಣವನ್ನು ವಿಶ್ಲೇಷಿಸಲಾಗಿದೆ. 

ADVERTISEMENT

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಗಳ (ಎನ್‌ಎಫ್‌ಎಚ್‌ಎಸ್‌) ಪ್ರಕಾರ, ದೇಶದಲ್ಲಿ 2005–06ರಲ್ಲಿ ಸಿಸೇರಿಯನ್ ಹೆರಿಗೆಗಳ ಪ್ರಮಾಣವು ಶೇ 8.5ರಷ್ಟಿತ್ತು. 2015–16ರ ಹೊತ್ತಿಗೆ ಶೇ 17.2ಕ್ಕೆ ಏರಿದ್ದ ಈ ಪ್ರಮಾಣವು 2019–21ರ ಹೊತ್ತಿಗೆ ಶೇ 21.5ಕ್ಕೆ ಹೆಚ್ಚಳವಾಗಿತ್ತು. 

ಭಾರತದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಸಿಸೇರಿಯನ್ ಹೆರಿಗೆಗಳು ಹೆಚ್ಚು ನಡೆಯುತ್ತಿವೆ. 2019–21ರ ಅಂಕಿಸಂಖ್ಯೆಯ ಪ್ರಕಾರ, ಖಾಸಗಿ ಆಸ್ಪತ್ರೆಗಳಲ್ಲಿ ಶೇ 47.5ರಷ್ಟು ಸಿಸೇರಿಯನ್ ಹೆರಿಗೆಗಳು ವರದಿಯಾಗಿದ್ದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ 14.3 ದಾಖಲಾಗಿವೆ.  30–40 ವರ್ಷ ವಯಸ್ಸಿನ ಮತ್ತು 40ಕ್ಕೂ ಮೇಲ್ಪಟ್ಟು ವರ್ಷ ವಯಸ್ಸಿನ ಮಹಿಳೆಯರು ಹೆಚ್ಚಾಗಿ ಸಿಸೇರಿಯನ್‌ಗೆ ಒಳಗಾಗುತ್ತಿದ್ದಾರೆ. 

ಆರ್ಥಿಕ ದುರ್ಬಲ ವರ್ಗಗಳ ಮಹಿಳೆಯರಿಗೆ ಅನಿವಾರ್ಯ ಸಂದರ್ಭಗಳಲ್ಲಿ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಿಕೊಳ್ಳಲು ಸರ್ಕಾರವು ಹಲವು ಯೋಜನೆಗಳ ಮೂಲಕ ಸಬ್ಸಿಡಿ ನೀಡುತ್ತದೆ. ಉದಾಹರಣೆಗೆ, ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳ ಮಹಿಳೆಯರಿಗೆ ಸಿಸೇರಿಯನ್ ಮಾಡಿಸಿಕೊಳ್ಳಲು ಜನನಿ ಸುರಕ್ಷಾ ಯೋಜನೆಯ (ಜೆಎಸ್‌ವೈ) ಅಡಿ ಧನಸಹಾಯ ಮಾಡಲಾಗುತ್ತದೆ. ಆದರೆ, ಶೇ 36ರಷ್ಟು ಮಂದಿ ಮಾತ್ರ ಈ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ.    

ಪ್ರದೇಶಾವಾರು ವ್ಯತ್ಯಾಸ: 

ಭಾರತದಲ್ಲಿ ಸಿಸೇರಿಯನ್ ಪ್ರಮಾಣ ಹೆಚ್ಚಾಗುತ್ತಿದ್ದರೂ ದೇಶದೆಲ್ಲೆಡೆ ಒಂದೇ ರೀತಿಯ ಪರಿಸ್ಥಿತಿ ಇಲ್ಲ. ವಿವಿಧ ರಾಜ್ಯಗಳ ನಡುವೆ ಸಿಸೇರಿಯನ್ ಪ್ರಮಾಣದಲ್ಲಿ ವ್ಯತ್ಯಾಸವಿದೆ. ಹಾಗೆಯೇ ಪ್ರದೇಶ, ಕುಟುಂಬದ ಆದಾಯ, ಸಾಕ್ಷರತೆ ಮತ್ತು ಇತರ ಅಂಶಗಳು ಕೂಡ ಸಿಸೇರಿಯನ್ ಪ್ರಮಾಣದ ವ್ಯತ್ಯಾಸಕ್ಕೆ ಕಾರಣವಾಗಿವೆ. ಬಡ ವರ್ಗಗಳಲ್ಲಿ, ಹಿಂದುಳಿದ ಪ್ರದೇಶಗಳಲ್ಲಿ, ಅನಕ್ಷರಸ್ಥರ ನಡುವೆ ಸಿಸೇರಿಯನ್ ಹೆರಿಗೆ ಪ್ರಮಾಣ ಕಡಿಮೆ ಇದೆ. ಉದಾಹರಣೆಗೆ ಅರುಣಾಚಲ ಪ್ರದೇಶದಲ್ಲಿ ಸಿಸೇರಿಯನ್ ಹೆರಿಗೆ ಪ್ರಮಾಣ ಶೇ 14.5 ಇದೆ. ಇದಕ್ಕೆ, ಮಹಿಳೆಯರಲ್ಲಿ ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಬಗ್ಗೆ ಇರುವ ಭಯ, ಅಲ್ಲಿನ ಸಾಂಸ್ಕೃತಿಕ ನಂಬಿಕೆಗಳು, ಆಸ್ಪತ್ರೆಗಳ ಸೌಲಭ್ಯದ ಕೊರತೆ ಸೇರಿದಂತೆ ಹಲವು ಕಾರಣಗಳು.  

ನಗರಗಳ ಮೇಲ್ಮಧ್ಮಮ ಮತ್ತು ಮಧ್ಯಮ ವರ್ಗದ ಮಹಿಳೆಯರಲ್ಲಿ ಕಡಿಮೆ ದೈಹಿಕ ದುಡಿಮೆಯ ಜೀವನ ಶೈಲಿಯಿಂದ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಹೀಗಾಗಿ ಶ್ರೀಮಂತ ಮತ್ತು ಮಧ್ಯಮ ಆದಾಯದ ಪ್ರದೇಶ ಮತ್ತು ಕುಟುಂಬಗಳಲ್ಲಿ ಹಾಗೂ ಸುಶಿಕ್ಷಿತರಲ್ಲಿ ಸಿಸೇರಿಯನ್ ಹೆರಿಗೆ ಪ್ರಮಾಣ ಹೆಚ್ಚಾಗಿದೆ. ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ, ನಗರ ಪ್ರದೇಶಗಳಲ್ಲಿ ಈ ಪ್ರಮಾಣ ಹೆಚ್ಚು. ಕೆಲವು ಪ್ರದೇಶ ಅಥವಾ ವರ್ಗಗಳಲ್ಲಿ ಸಕಾಲಕ್ಕೆ ಸಿಸೇರಿಯನ್ ಹೆರಿಗೆ ಸೌಲಭ್ಯ ಸಿಗದೇ ತಾಯಿ, ಮಗುವಿನ ಸಾವು ಸೇರಿದಂತೆ ಹಲವು ರೀತಿಯ ಸಮಸ್ಯೆಗಳು ಉಂಟಾಗುತ್ತಿವೆ. ಮತ್ತೆ ಕೆಲವು ವಲಯಗಳಲ್ಲಿ ಅಗತ್ಯವಿಲ್ಲದಿದ್ದರೂ ಸಿಸೇರಿಯನ್ ಮಾಡುತ್ತಿರುವುದರಿಂದ ತಾಯಿ ಆರೋಗ್ಯದ ಮೇಲೆ ಪರಿಣಾಮಗಳಾಗುತ್ತಿವೆ. 

ವೈದ್ಯಕೀಯವಾಗಿ ಅನಗತ್ಯವಾಗಿದ್ದರೂ ಸಿಸೇರಿಯನ್ ಪ್ರಕ್ರಿಯೆ ನಡೆಸುವುದರಿಂದ ಸೋಂಕು, ರಕ್ತಸ್ರಾವ, ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಇವುಗಳ ಜತೆಗೆ ಹಣದ ಅಪವ್ಯಯವಾಗುತ್ತಿದೆ. ಸಿಸೇರಿಯನ್ ಹೆರಿಗೆಗೆ ಸಹಜ ಹೆರಿಗೆಗಿಂತ ಎಂಟು ಪಟ್ಟು ಮತ್ತು ಅದಕ್ಕಿಂತ ಹೆಚ್ಚು ಮೊತ್ತವನ್ನು ಮಹಿಳೆಯ ಕುಟುಂಬ ಭರಿಸಬೇಕಾಗುತ್ತದೆ. ಅದರಿಂದ ಬಡ ಕುಟುಂಬಗಳ ಮೇಲೆ ಆರ್ಥಿಕ ಹೊರೆ ಹೆಚ್ಚಾಗುತ್ತದೆ. ಇದು ಕೂಡ ಸಿಸೇರಿಯನ್ ಹೆರಿಗೆಗಳಲ್ಲಿ ವಿವಿಧ ವರ್ಗಗಳ ನಡುವೆ ಅಸಮಾನತೆಗೆ ಕಾರಣವಾಗಿದೆ.  

ಭಾರತದಲ್ಲಿ ಸಿಸೇರಿಯನ್ ಹೆರಿಗೆಯು ಗಂಭೀರ ಆರೋಗ್ಯ ಸಮಸ್ಯೆಯಾಗಿ ಮಾರ್ಪಟ್ಟಿದ್ದು, ಬಹುತೇಕ ರಾಜ್ಯಗಳಲ್ಲಿ ಪ್ರತಿ ಐದು ಹೆರಿಗೆಗಳಲ್ಲಿ ಒಂದು ಸಿಸೇರಿಯನ್ ಆಗಿದೆ. 2030ರ ಹೊತ್ತಿಗೆ ದೇಶವು ಜಾಗತಿಕ ಮಟ್ಟದಲ್ಲಿ ಅಗ್ರ ಸ್ಥಾನ ಪಡೆಯಲಿದೆ ಎಂದು ಅಂದಾಜಿಸಲಾಗಿದೆ. ದೇಶದಲ್ಲಿ ಅನಗತ್ಯ ಸಿಸೇರಿಯನ್ ಮೂಲಕ ಹೆರಿಗೆಗಳನ್ನು ತಡೆಯುವ  ದಿಸೆಯಲ್ಲಿ ಸರ್ಕಾರದ ಆರೋಗ್ಯ ನೀತಿ ನಿರೂಪಕರು ಸೂಕ್ತ ನಿಯಮಗಳನ್ನು ಜಾರಿ ಮಾಡಬೇಕಿದೆ. ಪ್ರಕರಣಗಳು ಹೆಚ್ಚಾಗಿರುವ ರಾಜ್ಯಗಳಲ್ಲಿ ಸಮುದಾಯ ಆರೋಗ್ಯ ಕಾರ್ಯಕರ್ತರು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿಗೆ ಅರಿವು ಮೂಡಿಸುವ ಕೆಲಸ ಆಗಬೇಕಿದೆ ಎಂದೂ ಅಧ್ಯಯನ ವರದಿಗಳು ಪ್ರತಿಪಾದಿಸಿವೆ.    

ದಕ್ಷಿಣ ರಾಜ್ಯಗಳಲ್ಲಿ ಹೆಚ್ಚು

ದೇಶದಲ್ಲಿ ಸಿಸೇರಿಯನ್ ಹೆರಿಗೆಗಳ ಪ್ರಮಾಣವು ನಾಗಾಲ್ಯಾಂಡ್‌ನಲ್ಲಿ ಅತಿ ಕಡಿಮೆ (ಶೇ 5.2) ಇದ್ದರೆ, ತೆಲಂಗಾಣದಲ್ಲಿ ಅತಿ ಹೆಚ್ಚು (ಶೇ 60.7) ಇದೆ.  ದೇಶದ ಉತ್ತರ, ಈಶಾನ್ಯ ರಾಜ್ಯಗಳಿಗೆ ಹೋಲಿಸಿದರೆ ದಕ್ಷಿಣದ ರಾಜ್ಯಗಳಲ್ಲಿ ಹೆಚ್ಚು ಸಿಸೇರಿಯನ್‌ ಹೆರಿಗೆಗಳು ನಡೆಯುತ್ತಿವೆ. ಅದರಲ್ಲೂ ತೆಲಂಗಾಣ, ಕೇರಳ, ಆಂಧ್ರಪ್ರದೇಶ, ತಮಿಳುನಾಡುಗಳಲ್ಲಿ ಹೆಚ್ಚು ಗರ್ಭಿಣಿಯರು ಸಿಸೇರಿಯನ್‌ ಹೆರಿಗೆಗಳ ಮೂಲಕ ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ. ಈ ರಾಜ್ಯಗಳಿಗೆ ಹೋಲಿಸಿದರೆ ಉತ್ತರ ಪ್ರದೇಶ, ಬಿಹಾರ ಮತ್ತು ರಾಜಸ್ಥಾನದಲ್ಲಿ ಸಹಜ ಹೆರಿಗೆಗಳು ಹೆಚ್ಚು.

ದೇಶದಲ್ಲಿ ಸಿಸೇರಿಯನ್‌ ಹೆರಿಗೆ  (ಶೇಕಡಾವಾರು)

ಕರ್ನಾಟಕದಲ್ಲಿ ಕಡಿಮೆ

ಕರ್ನಾಟಕದಲ್ಲೂ ಸಿಸೇರಿಯನ್‌ ಹೆರಿಗೆಗಳು ಹೆಚ್ಚಾಗುತ್ತಿದ್ದರೂ ದಕ್ಷಿಣದ ಇತರ ರಾಜ್ಯಗಳಿಗೆ ಹೋಲಿಸಿದರೆ ಸರಾಸರಿ ಪ್ರಮಾಣ ಕಡಿಮೆ ಇದೆ. 2015–16ರಲ್ಲಿ ನಡೆದಿದ್ದ ನಾಲ್ಕನೇ ರಾಷ್ಟ್ರೀಯ ಆರೋಗ್ಯ ಕುಟುಂಬ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಸರಾಸರಿ ಸಿಸೇರಿಯನ್‌ ಹೆರಿಗೆ ಪ್ರಮಾಣ ಶೇ 23.6ರಷ್ಟಿತ್ತು. 2019–21ರಲ್ಲಿ ನಡೆದಿದ್ದ ಐದನೇ ಸಮೀಕ್ಷೆಯ ವೇಳೆಗೆ ಈ ಪ್ರಮಾಣ ಶೇ 31.5ಕ್ಕೆ ಏರಿಕೆ ಕಂಡಿದೆ. 

ಜಗತ್ತಿನಲ್ಲೂ ಏರುಮುಖ

ಸಿಸೇರಿಯನ್‌ ಹೆರಿಗೆಗಳ ಸಂಖ್ಯೆ ಕರ್ನಾಟಕ, ಭಾರತದಲ್ಲಿ ಮಾತ್ರ ಹೆಚ್ಚಳವಾಗುತ್ತಿಲ್ಲ. ಜಾಗತಿಕ ಮಟ್ಟದಲ್ಲೂ ಇದೇ ಪ್ರವೃತ್ತಿ ಕಂಡು ಬರುತ್ತಿದೆ. ಜಾಗತಿಕ ಮಟ್ಟದಲ್ಲಿ 1990ರಲ್ಲಿ ಸಿಸೇರಿಯನ್‌ ಹೆರಿಗೆಗಳ ಪ್ರಮಾಣ ಶೇ 7ರಷ್ಟು ಇದ್ದಿದ್ದರೆ, ಈಗ ಅದು ಶೇ 21ರಷ್ಟಿದೆ. 2030ರ ವೇಳೆಗೆ ಇದು ಶೇ 29ಕ್ಕೆ ಏರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. 

ಒಟ್ಟು ಹೆರಿಗೆಗಳಲ್ಲಿ ಸಿಸೇರಿಯನ್‌ ಪ್ರಮಾಣ ಶೇ 10ರಿಂದ 15ರ ಒಳಗೆ ಇರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆದರೆ, ಭಾರತವು ನಾಲ್ಕನೇ ಆರೋಗ್ಯ ಕುಟುಂಬ ಸಮೀಕ್ಷೆ ಸಂದರ್ಭದಲ್ಲಿಯೇ ಈ ಮಿತಿ ದಾಟಿದೆ. ಆಗ ದೇಶದ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ 22ರಲ್ಲಿ ಈ ಮಿತಿಗಿಂತಲೂ ಹೆಚ್ಚು ಸಿಸೇರಿಯನ್‌ ಹೆರಿಗೆಗಳು ನಡೆದಿವೆ. 2019–21ರ ಹೊತ್ತಿಗೆ ಈ ಮಿತಿ ದಾಟಿದ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ 28ಕ್ಕೆ ಏರಿದೆ.

ಹೆಚ್ಚಳಕ್ಕೆ ಕಾರಣ, ಪರಿಣಾಮ ಏನು?

*ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಈಗ ನಡೆಯುತ್ತಿರುವ ಸಿಸೇರಿಯನ್‌ ಹೆರಿಗೆಗಳಲ್ಲಿ ಎಲ್ಲವೂ ವೈದ್ಯಕೀಯ ಕಾರಣಗಳಿಗಾಗಿ ಆಗುತ್ತಿಲ್ಲ

*ಗರ್ಭಿಣಿ, ಅವರ ಪೋಷಕರ ಮನವಿ ಮೇರೆಗೆ ವೈದ್ಯರು ಸಿಸೇರಿಯನ್‌ ಹೆರಿಗೆ ನಡೆಸುವ ನಿದರ್ಶನಗಳು ಹೆಚ್ಚಾಗುತ್ತಿವೆ

*ಸಿಸೇರಿಯನ್‌ ಹೆರಿಗೆಯಲ್ಲಿ ಹೆಚ್ಚು ನೋವು ಅನುಭವಿಸಬೇಕಿಲ್ಲ, ಅಪಾಯವೂ ಕಡಿಮೆ ಎಂಬ ಧೋರಣೆ ಕೆಲವು ಗರ್ಭಿಣಿಯರಲ್ಲಿದೆ

*ನಿರ್ದಿಷ್ಟ ದಿನ, ಸಮಯದಂದೇ ಮಗುವಿಗೆ ಜನ್ಮ ನೀಡಬೇಕು ಎಂಬ ನಂಬಿಕೆ, ವೈದ್ಯರ ಅನುಕೂಲ, ಸಿಸೇರಿಯನ್ ಹೆರಿಗೆ ಮಾಡಿಸಿದರೆ ಆಸ್ಪತ್ರೆಯ ಆಡಳಿತ ಮಂಡಳಿ ವೈದ್ಯರಿಗೆ ನೀಡುವ ಇನ್ಸೆಂಟಿವ್‌ಗಳು ಕೂಡ ಸಿಸೇರಿಯನ್‌ ಪ್ರಕರಣಗಳ ಹೆಚ್ಚಳಕ್ಕೆ ಕಾರಣ. ಇದೇ ಕಾರಣಕ್ಕೆ ಸರ್ಕಾರಿ ಆಸ್ಪತ್ರೆಗಳಿಗಿಂತ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚು ಸಿಸೇರಿಯನ್‌ ಹೆರಿಗೆಗಳು ನಡೆಯುತ್ತಿವೆ

*ಸಹಜ ಹೆರಿಗೆ ಸಂದರ್ಭದಲ್ಲಿ ಏನಾದರೂ ವ್ಯತ್ಯಾಸವಾದರೆ ಎದುರಾಗಬಹುದಾದ ಸಂದರ್ಭಗಳು, ಕಾನೂನು ತೊಡಕುಗಳು ಕೂಡ ವೈದ್ಯರು ಸಿಸೇರಿಯನ್‌ ಹೆರಿಗೆಯತ್ತ ಮುಖಮಾಡಲು ಕಾರಣವಾಗುತ್ತಿವೆ

*ಸಹಜ ಹೆರಿಗೆ ಸಾಧ್ಯವಿದ್ದರೂ ಸಿಸೇರಿಯನ್‌ ಹೆರಿಗೆ ಮಾಡಿದರೆ ಅದು ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಅಲ್ಪಾವಧಿ ಮತ್ತು ದೀರ್ಘಾವಧಿ ಪರಿಣಾಮ ಬೀರುತ್ತದೆ. ಮಕ್ಕಳಲ್ಲಿ ಸಾಂಕ್ರಾಮಿಕವಲ್ಲದ ಕಾಯಿಲೆಗಳು ಮತ್ತು ರೋಗ ಪ್ರತಿರೋಧಕ್ಕೆ ಸಂಬಂಧಿಸಿದ ಸಮಸ್ಯೆಗಳು ನಂತರ ತಲೆ ತೋರಬಹುದು

ಆಧಾರ: ಭಾರತದಲ್ಲಿ ಸಿಸೇರಿಯನ್‌ ಹೆರಿಗೆ ಪ್ರಮಾಣದಲ್ಲಿ ರಾಜ್ಯವಾರು ವ್ಯತ್ಯಾಸ ಮತ್ತು ಅಸಮಾನತೆಗಳ ಕುರಿತು ಲ್ಯಾನ್ಸೆಟ್‌ ಅಧ್ಯಯನ ವರದಿ, ಮದ್ರಾಸ್‌ ಐಐಟಿಯ ಅಧ್ಯಯನ ವರದಿ, ಅಮೆರಿಕದ ನ್ಯಾಷನಲ್ ಲೈಬ್ರೆರಿ ಆಫ್‌ ಮೆಡಿಸಿನ್‌ನಲ್ಲಿ ಪ್ರಕಟಿತ ವರದಿಗಳು, ವಿಶ್ವ ಆರೋಗ್ಯ ಸಂಸ್ಥೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.