ADVERTISEMENT

ಆಳ–ಅಗಲ| ಧರ್ಮದ ಮತ್ತು: ಅಮಾಯಕರಿಗೆ ಕುತ್ತು

ಪ್ರವೀಣ್‌ ಕುಮಾರ್‌ ಪಿ.ವಿ
Published 29 ಮೇ 2025, 23:30 IST
Last Updated 29 ಮೇ 2025, 23:30 IST
ಮಂಗಳೂರು ನಗರದ ವೈಮಾನಿಕ ನೋಟ
ಮಂಗಳೂರು ನಗರದ ವೈಮಾನಿಕ ನೋಟ   
ಶಿಕ್ಷಣ, ಆರೋಗ್ಯ, ಕೈಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆ  ಕೋಮು ದಳ್ಳುರಿಯಿಂದ ನಲುಗುತ್ತಿದೆ. ಒಂದು ಹತ್ಯೆಗೆ ಪ್ರತೀಕಾರವಾಗಿ ಇನ್ನೊಂದು ಹತ್ಯೆ ಎಂಬಂತೆ ಧರ್ಮಾಧಾರಿತವಾಗಿ ಸರಣಿ ಕೊಲೆಗಳು ನಡೆಯುತ್ತಿವೆ. ಮೂರು ದಶಕಗಳಿಂದೀಚೆಗೆ ಇಂತಹ ಪ್ರಕರಣಗಳು ಪುನರಾವರ್ತನೆಯಾಗುತ್ತಲೇ ಇವೆ. ಬಲಿಯಾದವರಲ್ಲಿ ಅಮಾಯಕರೂ ಇದ್ದಾರೆ. ಈ ಹಿಂದೆ ನಡೆದ ಕೋಮು ಗಲಭೆಗಳಲ್ಲಿ ಮುಗ್ಧ ಜನರು ಪ್ರಾಣಕಳೆದುಕೊಂಡಿದ್ದಾರೆ. ಧರ್ಮದ ಆಧಾರದ ಕೃತ್ಯಗಳು ಸಂಘಟಿತವಾಗಿ ನಡೆಯುತ್ತಿದ್ದು, ಈಗ ಅದರೊಳಗೆ ರಾಜಕೀಯವೂ ಬೆರೆತು ಹೋಗಿದೆ. ಸರಣಿ ಕೊಲೆಗಳು ದಕ್ಷಿಣ ಕನ್ನಡದಲ್ಲಿ ಕೋಮು ಸಾಮರಸ್ಯವನ್ನು ಕದಡುವಂತೆ ಮಾಡಿವೆ. ಜಿಲ್ಲೆಯಾದ್ಯಂತ ಕೋಮುದ್ವೇಷಮಯ ವಾತಾವರಣ ಇರುವುದರಿಂದ ಸಾರ್ವಜನಿಕರು ಭಯದಿಂದಲೇ ಓಡಾಡುವ, ಬದುಕುವ ಪರಿಸ್ಥಿತಿ ಬಂದೊದಗಿದೆ

ದಕ್ಷಿಣ ಕನ್ನಡ ಜಿಲ್ಲೆಯ ಕೇಂದ್ರ ಸ್ಥಾನ ಮಂಗಳೂರಿನ ಹೊರವಲಯದ ಕುಡುಪುವಿನಲ್ಲಿ ಏಪ್ರಿಲ್ 27ರಂದು ಗುಂಪು ಹಲ್ಲೆಗೆ ಕೇರಳದ ವಯನಾಡಿನ ಅಶ್ರಫ್ ಎಂಬವರ ಬಲಿಯಾಗಿ ಸರಿಯಾಗಿ ಒಂದು ತಿಂಗಳು ಮುಗಿಯುವಷ್ಟರಲ್ಲಿ ಕೋಮುದ್ವೇಷಕ್ಕೆ ಮತ್ತಿಬ್ಬರು ಜೀವ ಕಳೆದುಕೊಂಡಿದ್ದಾರೆ. ಹಲವಾರು ಮಂದಿ ವಿನಾಕಾರಣ ಹಲ್ಲೆಗೊಳಗಾಗಿದ್ದಾರೆ. ಕೆಲವರು ಇನ್ನೂ ಆಸ್ಪತ್ರೆಯಿಂದ ಮನೆಗೆ ಹೋಗಿಲ್ಲ. ಮತಾಂಧ ಗುಂಪುಗಳು ನಡೆಸಿದ ದುಷ್ಕೃತ್ಯಗಳು ಜಿಲ್ಲೆಯ ಶಾಂತಿಪ್ರಿಯರನ್ನು ಆತಂಕದ ಮಡುವಿಗೆ ದೂಡಿವೆ.

ಮೂರು ದಶಕಗಳಿಗೂ ಹಿಂದೆ ನಡೆದ ಕೋಮುಗಲಭೆಗಳು ಹಾಗೂ ಅದರಲ್ಲಿ ಮೃತಪಟ್ಟವರ ಬಗ್ಗೆ ನಿಖರ ಮಾಹಿತಿ ಕಲೆ ಹಾಕುವುದು ಕಷ್ಟ. ಆದರೆ, 1998 ಹಾಗೂ ನಂತರ ನಡೆದ ಕೋಮು ಗಲಭೆಗಳ ಚಿತ್ರಣ ಕೆಲವು ನಿವೃತ್ತ ಪೊಲೀಸ್ ಅಧಿಕಾರಿಗಳ ಹಾಗೂ ಹಿರಿಯರ ನೆನಪಿನಲ್ಲಿ ಈಗಲೂ ಹಸಿಯಾಗಿದೆ.  

ಜಿಲ್ಲೆಯಲ್ಲಿ 1998- 99ರಲ್ಲಿ ನಡೆದ ಕೋಮು ಗಲಭೆ ಆರು ಮುಸ್ಲಿಮರು ಹಾಗೂ ಇಬ್ಬರು ಹಿಂದೂಗಳನ್ನು ಬಲಿ ಪಡೆದಿತ್ತು. ಚೊಕ್ಕಬೆಟ್ಟುವಿನಲ್ಲಿ1998ರ ಡಿಸೆಂಬರ್ 29ರಂದು ಕ್ಷುಲ್ಲಕ (ಮನೆಯಿಂದ ಗುಜರಿ ಕಳವು ಮಾಡಿದ್ದು) ಕಾರಣಕ್ಕೆ  ಶುರುವಾದ ಗಲಾಟೆ ಬೈಕಂಪಾಡಿ, ಕುಳಾಯಿ, ಕೃಷ್ಣಾಪುರ, ಹೊಸಬೆಟ್ಟು, ತಡಂಬೈಲ್, ಕಾನ, ಕಾಟಿಪಳ್ಳ, ಮಂಗಳೂರು, ಬಂಟ್ವಾಳ ಮತ್ತು ಪುತ್ತೂರು ಮೊದಲಾದ ಪ್ರದೇಶಗಳಿಗೆ ಹಬ್ಬಿತ್ತು. ಈ ಗಲಾಟೆಯಲ್ಲಿ 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ವಿವಿಧ ಠಾಣೆಗಳಲ್ಲಿ 300ಕ್ಕೂ ಹೆಚ್ಚು ಎಫ್‌ಐಆರ್ ದಾಖಲಾಗಿತ್ತು ಎಂದು ನಿವೃತ್ತ ಎಸಿಪಿಯೊಬ್ಬರು ನೆನಪಿಸಿಕೊಳ್ಳುತ್ತಾರೆ.

ADVERTISEMENT

ಕೋಮು ದ್ವೇಷಕ್ಕೆ 2001ರಲ್ಲಿ ಕಂದಾವರದಲ್ಲಿ ಆಟೊ ಚಾಲಕ ಹಾಗೂ 2002ರಲ್ಲಿ ಕುದ್ರೋಳಿಯಲ್ಲಿ ಬಡಗಿಯೊಬ್ಬರು ಬಲಿಯಾಗಿದ್ದರು. 

ದಕ್ಷಿಣ ಕನ್ನಡ ಜಿಲ್ಲೆ 2003ರಲ್ಲಿ ಕೋಮುಗಲಭೆಯಿಂದ ಮತ್ತೊಮ್ಮೆ ತತ್ತರಿಸಿತ್ತು. ಹುಡುಗಿಯನ್ನು ಚುಡಾಯಿಸಿದ್ದಕ್ಕೆ ಶುರುವಾದ ಈ ಗಲಾಟೆ ಹತ್ತು ಮಂದಿಯನ್ನು ಬಲಿ ಪಡೆದಿತ್ತು. ಒಬ್ಬ ಪೊಲೀಸ್ ಕಾನ್‌ಸ್ಟೆಬಲ್ ಕ್ಲಾಕ್ ಟವರ್ ಬಳಿ ಹತ್ಯೆಯಾಗಿದ್ದರು. ನರಸಿಂಹ ಶೆಟ್ಟಿಗಾರ್ ಎಂಬಾತನ ಹತ್ಯೆಗೆ ಪ್ರತಿಯಾಗಿ ಮಾರ್ಗನ್ಸ್ ಗೇಟ್‌ನಲ್ಲಿ ರಿಕ್ಷಾ ಚಾಲಕ ಮುಸ್ಲಿಂ ಯುವಕನ ಹತ್ಯೆ ನಡೆಯಿತು. ಇದರಿಂದ ಶುರುವಾದ ಗಲಭೆ ನಗರದಾದ್ಯಂತ ವ್ಯಾಪಿಸಿ ಕೆಲವೇ ದಿನಗಳಲ್ಲಿ ಇನ್ನಷ್ಟು ಅಮಾಯಕರ ಬಲಿ ಪಡೆಯಿತು. ಕರ್ಫ್ಯೂ ವಿಧಿಸಬೇಕಾಗಿ ಬಂದಿತ್ತು. 

2005ರಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾಗಿದ್ದ ಜಬ್ಬಾರ್ ಹತ್ಯೆ ಮತ್ತೊಂದು ಕೋಮುಗಲಭೆಗೆ ಕಿಡಿಹಚ್ಚಿತು. ಒಬ್ಬ ರಿಕ್ಷಾ ಚಾಲಕ ಹಾಗೂ ಅಡ್ಡೂರಿನಲ್ಲಿ ಒಬ್ಬ ಲಾರಿ ಕ್ಲೀನರ್ ಇದಕ್ಕೆ ಬಲಿಯಾದರು. 

2006ರಲ್ಲಿ ದನದ ಸಾಗಾಟ ವಿಷಯಕ್ಕೆ ಸಂಬಂಧಿಸಿ ಬಿಜೈನಲ್ಲಿ ಧರ್ಮಗುರುವೊಬ್ಬರನ್ನು ಹತ್ಯೆ ಮಾಡಲಾಗಿತ್ತು. ಅದಕ್ಕೆ ಪ್ರತಿಯಾಗಿ ನಗರದಲ್ಲಿ ಇನ್ನೊಬ್ಬನ ಕೊಲೆ ನಡೆಯಿತು. ಅದರ ಬೆನ್ನಲ್ಲೇ ರಿಕ್ಷಾ ಚಾಲಕನನ್ನು ಹತ್ಯೆ ಮಾಡಲಾಯಿತು. ಈ ಗಲಾಟೆ ತಣ್ಣಗಾಯಿತು ಎನ್ನುವಾಗ ಸುರತ್ಕಲ್ ಬಳಿಯ ಚೊಕ್ಕಬೆಟ್ಟುವಿನಲ್ಲಿ ಬಿಜೆಪಿ ಮುಖಂಡ ಸುಖಾನಂದ ಶೆಟ್ಟಿ ಅವರ ಕೊಲೆ ನಡೆಯಿತು. ಅವರ ಅಂತಿಮ ಯಾತ್ರೆ ಸಂದರ್ಭದಲ್ಲಿ ಕೆಲವು ಯುವಕರು ಪೊಲೀಸರ ಮೇಲೆ ಆಕ್ರೋಶ ವ್ಯಕ್ತಪಡಿಸಲು ಮುಂದಾದರು. ಆಗ ನಡೆದ ಗೋಲಿಬಾರ್‌ನಲ್ಲಿ ಇಬ್ಬರು ಯುವಕರು ಮೃತಪಟ್ಟಿದ್ದರು. ಇದು ಜಿಲ್ಲೆಯಾದ್ಯಂತ ಕೋಮು ದ್ವೇಷದ ಜ್ವಾಲೆ ಇನ್ನಷ್ಟು ಹಬ್ಬಲು ಕಾರಣವಾಯಿತು. ಬಳಿಕ ಉಳ್ಳಾಲ, ಮಾಸ್ತಿಕಟ್ಟೆ, ಫರಂಗಿಪೇಟೆಯಲ್ಲಿ ಹತ್ಯೆಗಳು ನಡೆದವು. ಆಗ ಅನೇಕ  ದಿನ ಕರ್ಫ್ಯೂ ಜಾರಿಗೊಳಿಸಲಾಗಿತ್ತು. ಬಳಿಕ ಪೊಲೀಸರು ಈ ಪ್ರಕರಣದ ಆರೋಪಿ ಮೂಲ್ಕಿ ರಫೀಕ್‌ ಹಾಗೂ ಬುಲೆಟ್‌ ಸುಧೀರ್‌ ಎಂಬವರನ್ನು ಎನ್‌ಕೌಂಟರ್‌ ಮಾಡಿದ್ದರು. 2008ರಲ್ಲಿ ನಡೆದ ಪೊಳಲಿ ಅನಂತು ಕೊಲೆ ಮತ್ತೆ ಜಿಲ್ಲೆಯು ಹೊತ್ತಿ ಉರಿಯಲು ಕಾರಣವಾಯಿತು. 2015ರ ಅಕ್ಟೋಬರ್‌ನಲ್ಲಿ ಮೂಡುಬಿದಿರೆಯ ಹೂವಿನ ವ್ಯಾಪಾರಿ ಪ್ರಶಾಂತ್‌ ಪೂಜಾರಿ ಅವರನ್ನು ಹತ್ಯೆ ಮಾಡಲಾಯಿತು. ಅಂತ್ಯಕ್ರಿಯೆ ವೇಳೆ ಶುರುವಾದ ಗಲಭೆ ಮತ್ತೆ ಕೋಮು ಸಂಘರ್ಷಕ್ಕೆ ಎಡೆ ಮಾಡಿತು. ನವೆಂಬರ್‌ನಲ್ಲಿ ಬಂಟ್ವಾಳದಲ್ಲಿ ಹರೀಶ್ ಪೂಜಾರಿಯ ಕೊಲೆಯಾಯಿತು. 

ಸುಖಾನಂದ ಶೆಟ್ಟಿ ಕೊಲೆ ಆರೋಪಿ ಮಾಡೂರು ಇಸುಬು 2016ರಲ್ಲಿ ಜೈಲಿನೊಳಗೆ ಕೊಲೆಯಾಗಿದ್ದ. ಅದೇ ವರ್ಷ ನಗರದಲ್ಲಿ ಮತ್ತೆರಡು ಕೊಲೆಗಳಾದವು. 2017ರ ಜೂನ್‌ನಲ್ಲಿ ಎಸ್‌ಡಿಪಿಐ ನಾಯಕ ಅಶ್ರಫ್ ಕಲಾಯಿ ಹತ್ಯೆಯಾಯಿತು. ಕರಾವಳಿ ಮತ್ತೆ ಉದ್ವಿಗ್ನವಾಯಿತು. ಇದರ ಬೆನ್ನಲ್ಲೇ, ಜುಲೈನಲ್ಲಿ ಬಿ.ಸಿ.ರೋಡ್‌ನಲ್ಲಿ ಆರ್‌ಎಸ್ಎಸ್ ಕಾರ್ಯಕರ್ತ ಶರತ್‌ ಮಡಿವಾಳ ಕೊಲೆ ನಡೆಯಿತು. ಈ ಗಲಭೆ ತಣ್ಣಗಾಯಿತು ಎನ್ನುವಷ್ಟರಲ್ಲಿ 2018ರಲ್ಲಿ ಸುರತ್ಕಲ್‌ನಲ್ಲಿ ದೀಪಕ್ ರಾವ್ ಎಂಬವರ ಹತ್ಯೆ ಆಯಿತು. ಇದಕ್ಕೆ ಪ್ರತೀಕಾರವಾಗಿ ಕೆಲವೇ ದಿನಗಳಲ್ಲಿ ಕೊಟ್ಟಾರದಲ್ಲಿ ಬಷೀರ್ ಎಂಬವರ ಕೊಲೆ ಮಾಡಲಾಯಿತು.     

2022ರಲ್ಲಿ ಜಿಲ್ಲೆ ಮತ್ತೆ ಕೋಮು ದಳ್ಳುರಿಯಲ್ಲಿ ಸಿಲುಕಿತು. ಜುಲೈ 19ರಂದು ಬೆಳ್ಳಾರೆ ಬಳಿಯ ಕಳೆಂಜದಲ್ಲಿ ಮಸೂದ್‌ ಮೇಲೆ ಹಲ್ಲೆ ನಡೆದಿತ್ತು. ಅವರು ಜುಲೈ 21ರಂದು ಅಸುನೀಗಿದ್ದರು. ಇದಕ್ಕೆ ಪ್ರತೀಕಾರವಾಗಿ ಐದು ದಿನಗಳ ಬಳಿಕ ಅಂದರೆ, 26ರಂದು ಬಿಜೆಪಿ ಯುವಮೋರ್ಚಾ ಜಿಲ್ಲಾ ಘಟಕದ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆ ನಡೆಯಿತು. ಅದಕ್ಕೆ ಪ್ರತೀಕಾರವಾಗಿ ಜುಲೈ 28ರಂದು ಯುವಕ ಮೊಹಮ್ಮದ್ ಫಾಝಿಲ್‌ನನ್ನು ಸುರತ್ಕಲ್‌ನಲ್ಲಿ ಜನನಿಬಿಡ ಪ್ರದೇಶದಲ್ಲಿ ಕೊಲೆ ಮಾಡಲಾಯಿತು. 

2025ರ ಏ. 27ರಂದು ಕುಡುಪುವಿನಲ್ಲಿ ನಡೆದ ಗುಂಪು ಹಲ್ಲೆ ಕೇರಳ ವಯನಾಡಿನ ಅಶ್ರಫ್ ಎಂಬವರ ಬಲಿ ಪಡೆ ಬೆನ್ನಲ್ಲೇ ಬಜಪೆಯಲ್ಲಿ ಮೇ 1ರಂದು ರೌಡಿಶೀಟರ್‌, ಹಿಂದುತ್ವವಾದಿ ಸಂಘಟನೆಯ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ನಡೆಯಿತು. ಮೇ 27ರಂದು ಬಂಟ್ವಾಳ ತಾಲ್ಲೂಕಿನ ಇರಾಕೋಡಿಯಲ್ಲಿ ಅಬ್ದುಲ್ ರಹಿಮಾನ್ ಎಂಬ ಯುವಕನ ಕೊಲೆಯಾಗಿದೆ...

30 ವರ್ಷಗಳಿಂದ ಈಚೆಗೆ ಜಿಲ್ಲೆಯಲ್ಲಿ 45ಕ್ಕೂ ಹೆಚ್ಚು ಮಂದಿ ಕೋಮುದ್ವೇಷಕ್ಕೆ ಬಲಿಯಾಗಿದ್ದಾರೆ. ಅವರಲ್ಲಿ ಕಾರಣ ಇಲ್ಲದೇ ಕೊಲೆಯಾದವರೇ ಜಾಸ್ತಿ. ಇಷ್ಟು ಜೀವಗಳ ಆಪೋಷನ ಪಡೆದರೂ ದ್ವೇಷದ ಜ್ವಾಲೆ ತಣ್ಣಗಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಏಕೆ ಇಷ್ಟೊಂದು ಕೋಮು ದ್ವೇಷ ಎಂಬುದು ಇನ್ನೂ ಉತ್ತರ ಸಿಗದ ಪ್ರಶ್ನೆ. 

1960ರ ದಶಕದಲ್ಲೇ ನಲುಗಿದ್ದ ಜಿಲ್ಲೆ 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ವಾತಂತ್ರ್ಯ ನಂತರದಲ್ಲಿ ನಡೆದ ಕೋಮು ಗಲಭೆಗಳ ಇತಿಹಾಸವನ್ನು ಕೆದಕುತ್ತಾ ಹೋದರೆ ಅದು 1960ರ ದಶಕದ ಹಿಂದಕ್ಕೆ ಹೋಗುತ್ತದೆ. 1968ರಲ್ಲಿ ಮಂಗಳೂರಿನ ಬಂದರಿನಲ್ಲಿ ವ್ಯಕ್ತಿಯೊಬ್ಬರು ಕೋಮುದ್ವೇಷಕ್ಕೆ ಬಲಿಯಾಗಿದ್ದರು. ಹಿಂದೂ ಮಹಿಳೆ ಮತ್ತು ಬ್ಯಾರಿ ಯುವಕ ನಡುವಿನ ಪ್ರೇಮ ಸಂಬಂಧ ಎರಡು ಧರ್ಮಗಳ ನಡುವೆ ದ್ವೇಷ ಹುಟ್ಟಲು ಕಾರಣವಾಗಿತ್ತು. 1979– 80ರಲ್ಲಿ ಮುಸ್ಲಿಂ ಯುವಕ ಮತ್ತು ಹಿಂದೂ ಯುವತಿಯ ನಡುವೆ ನಡೆಯುವ ಪ್ರೇಮ ಕಥಾನಕವನ್ನು ಆಧರಿಸಿದ ಸಿನಿಮಾವೊಂದು ‘ಕರಾವಳಿ’ಯಲ್ಲಿ ಕೋಮು ಗಲಭೆಗೆ ಕಾರಣವಾಗಿತ್ತು. ಮುಸ್ಲಿಂ ಹಾಗೂ ಹಿಂದೂಗಳ ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿತ್ತು. ಹೊಯ್ಗೆಬಜಾರ್, ಕುದ್ರೋಳಿ, ಬಂದರು ಮುಂತಾದ ಪ್ರದೇಶಗಳಲ್ಲಿ ನಡೆದ ಈ ಗಲಭೆಯಲ್ಲಿ ಕೆಲವರು ಪ್ರಾಣ ಕಳೆದುಕೊಂಡಿದ್ದರು
ಎಂದು ಹಿರಿಯರು ನೆನಪಿಸಿಕೊಳ್ಳುತ್ತಾರೆ. 

ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸ ಮಾಡಿದ ಸಂದರ್ಭದಲ್ಲಿ ಮಂಗಳೂರಿನಲ್ಲೂ ಗಲಭೆಗಳು ನಡೆದಿದ್ದರೂ ಆಗ ಪ್ರಾಣ ಹಾನಿ ಸಂಭವಿಸಿರಲಿಲ್ಲ ಎಂದು ಹೇಳುತ್ತಾರೆ ಇಲ್ಲಿನ ಹಿರಿಯರು. 

ಮೂರು ದಶಕಗಳಲ್ಲಿ ನಡೆದ ಧರ್ಮಾಧಾರಿತ ಪ್ರಮುಖ ಹತ್ಯೆ ಪ್ರಕರಣಗಳು

‘ಈಗಿನದ್ದು ಸಂಘಟಿತ ಕೃತ್ಯಗಳು’

‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1980ರ ದಶಕದವರೆಗೂ ಕೋಮುಗಲಭೆಗಳು ನಡೆಯುತ್ತಿದ್ದವಾದರೂ ಅವು ಸಂಘಟಿತ ಕೃತ್ಯಗಳಾಗಿರಲಿಲ್ಲ. ಆಕಸ್ಮಿಕವಾಗಿ ನಡೆಯುವ ಆ ಘಟನೆಗಳು ಸಹಜವಾಗಿಯೇ ತಣ್ಣಗಾಗುತ್ತಿದ್ದವು. ಆದರೆ ಈಗ ಹಾಗಲ್ಲ. ನಡೆಯುವ ಕೃತ್ಯಗಳ ಹಿಂದೆ ಸಂಘಟನೆಗಳ ಕೈವಾಡ ಇದೆ. ಅವರಿಗೆ ಹಣಕಾಸಿನ ಬೆಂಬಲ ನೀಡುವವರಿದ್ದಾರೆ. ವದಂತಿ ಹಬ್ಬಿಸಲು ಸಾಮಾಜಿಕ ಮಾಧ್ಯಮಗಳಿವೆ. ಕೋಮುದಳ್ಳುರಿಯನ್ನು ಹೊತ್ತಿಸಿ ಅದರಿಂದ ಲಾಭ ಪಡೆಯಲು ಕಾಯುವ ನಾಯಕರಿದ್ದಾರೆ. ಇವೆಲ್ಲವನ್ನು ಮಟ್ಟಹಾಕಲು ಪ್ರಬಲ ರಾಜಕೀಯ ಇಚ್ಛಾಶಕ್ತಿ ಬೇಕು. ಆದರೆ ರಾಜಕೀಯ ನಾಯಕರಿಗೂ ಕೋಮು ದ್ವೇಷ ಜೀವಂತವಾಗಿರಬೇಕು. ಪರಿಸ್ಥಿತಿ ಹೀಗಿರುವಾಗ  ಬೆಕ್ಕಿಗೆ ಗಂಟೆ ಕಟ್ಟುವವರು ಯಾರು’ ಎಂದು ಪ್ರಶ್ನಿಸುತ್ತಾರೆ ಸಾಮಾಜಿಕ ಕಾರ್ಯಕರ್ತರೊಬ್ಬರು.

‘ಕಣ್ಣಿಗೆ ಕಟ್ಟುವ ಕಣ್ಣೀರ ಕತೆಗಳು’

‘ಪ್ರತಿ ಕೋಮು ಗಲಭೆಯಲ್ಲಿ ಅಮಾಯಕರು ಸತ್ತಾಗ ನೋವಾಗುತ್ತದೆ. ಏನೂ ತಪ್ಪೆಸಗದ ಮನೆಯ ಮಗನನ್ನು ಕಳೆದುಕೊಂಡ ತಂದೆ– ತಾಯಿ, ಬಂಧುಗಳು ಅನುಭವಿಸುವ ಕಷ್ಟವನ್ನು ಹತ್ತಿರದಿಂದ ನೋಡಿದ್ದೇನೆ. 2003ರಲ್ಲಿ ಮಂಗಳೂರಿನಲ್ಲಿ ನಡೆದ ಕೋಮುಗಲಭೆಯಲ್ಲಿ ರಿಕ್ಷಾ ಚಾಲಕನ ಹತ್ಯೆ ನಡೆದಿತ್ತು. ಆತನ ತಂದೆ ನಶ್ಯ ಪುಡಿ ಮಾರಿ ಬದುಕುತ್ತಿದ್ದ ಬಡಪಾಯಿ. ಮಗ ಸತ್ತಿದ್ದೇ ಅವರಿಗೆ ಗೊತ್ತಿಲ್ಲ. ಅವರಿಗೆ ವಿಷಯ ತಿಳಿಸಬೇಕಾಗಿ ಬಂದಾಗ ಬಹಳ ಸಂಕಟವಾಯಿತು. ಅವರ ಕುಟುಂಬ ಈಗಲೂ ಸಂಕಟ ಅನುಭವಿಸುತ್ತಿದೆ. ಇಂತಹ ಅನೇಕ ಕಣ್ಣೀರ ಕತೆಗಳು ಕಣ್ಣಿಗೆ ಕಟ್ಟಿದಂತಿವೆ’ ಎಂದು ಮಂಗಳೂರಿನಲ್ಲಿ ಎಸಿಪಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ಪೊಲೀಸ್ ಅಧಿಕಾರಿ ತಿಲಕಚಂದ್ರ ಮೆಲುಕು ಹಾಕುತ್ತಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.