ADVERTISEMENT

ಆಳ–ಅಗಲ | ಚೀನಾ ಎದುರಾಳಿ: ಎದುರಿಸಲು ಹೇಗಿದೆ ಭಾರತದ ಸಿದ್ಧತೆ?

​ಪ್ರಜಾವಾಣಿ ವಾರ್ತೆ
Published 26 ಮೇ 2025, 23:30 IST
Last Updated 26 ಮೇ 2025, 23:30 IST
   
ಜಾಗತಿಕ ಮಟ್ಟದಲ್ಲಿ ವಿವಿಧ ರಾಷ್ಟ್ರಗಳ ನಡುವೆ ಎಂತಹ ಸಂಬಂಧವಿದೆ ಮತ್ತು ರಕ್ಷಣೆಗೆ ಸಂಬಂಧಿಸಿದಂತೆ ಅವುಗಳ ಮುಖ್ಯ ಕಾಳಜಿ ಏನು ಎನ್ನುವುದರ ಬಗ್ಗೆ ಅಮೆರಿಕದ ರಕ್ಷಣಾ ಗುಪ್ತಚರ ಸಂಸ್ಥೆ (ಆರ್‌ಡಿಎ) ವರದಿಯೊಂದನ್ನು ಬಿಡುಗಡೆ ಮಾಡಿದೆ. ಭಾರತವು ಚೀನಾವನ್ನು ತನ್ನ ಪ್ರಮುಖ ಎದುರಾಳಿ ಎಂದು ಪರಿಗಣಿಸಿದ್ದರೆ, ಪಾಕಿಸ್ತಾನವು ಭಾರತವನ್ನು ತನ್ನ ಅಸ್ತಿತ್ವಕ್ಕೆ ದೊಡ್ಡ ಬೆದರಿಕೆ ಎಂದು ಪರಿಗಣಿಸಿದೆ ಎಂದು ವರದಿ ಉಲ್ಲೇಖಿಸಿದೆ. ಚೀನಾದೊಂದಿಗಿನ ಭಾರತದ ಸಂಬಂಧ ಸದ್ಯ ತಟಸ್ಥ ಸ್ಥಿತಿಯಲ್ಲಿದ್ದರೂ ಅದು ಭಾರತದ ಪಾಲಿಗೆ ಎಂದಿಗೂ ಮಗ್ಗುಲ ಮುಳ್ಳು ಎಂದಿದೆ. ಅದನ್ನು ಸಮರ್ಥವಾಗಿ ಎದುರಿಸಲು ಭಾರತ ಯಾವ ರೀತಿಯ ಸಿದ್ಧತೆಯಲ್ಲಿ ತೊಡಗಿದೆ ಎನ್ನುವುದನ್ನೂ ವರದಿಯಲ್ಲಿ ವಿವರಿಸಲಾಗಿದೆ

ಪಹಲ್ಗಾಮ್ ಘಟನೆಯ ನಂತರ ಭಾರತ–ಪಾಕಿಸ್ತಾನದ ನಡುವೆ ಆರಂಭವಾಗಿದ್ದ ಸಂಘರ್ಷ ಮುಗಿದಿದೆ. ಕದನ ವಿರಾಮ ಏರ್ಪಟ್ಟಿದೆ. ಆದರೆ, ರಾಷ್ಟ್ರದ ಭದ್ರತೆಯ ವಿಚಾರದಲ್ಲಿ ಭಾರತ ನಿರಾಳವಾಗಿರುವ ಸ್ಥಿತಿಯಲ್ಲಿ ಇಲ್ಲ. ನೆರೆಯ ರಾಷ್ಟ್ರಗಳಾದ ಚೀನಾ ಮತ್ತು ಪಾಕಿಸ್ತಾನದ ಜತೆ ಭಾರತದ ಸಂಘರ್ಷಮಯ ಸಂಬಂಧ ಮುಂದುವರಿಯುತ್ತಿದೆ ಎಂದು ಅಮೆರಿಕದ ರಕ್ಷಣಾ ಗುಪ್ತಚರ ಸಂಸ್ಥೆ (ಡಿಐಎ) ವರದಿ ಹೇಳಿದೆ. ಪಾಕಿಸ್ತಾನದೊಂದಿಗೆ ನಿರಂತರ ಸಂಘರ್ಷ ನಡೆಯುತ್ತಿದ್ದರೂ ಭಾರತವು ಚೀನಾವನ್ನು ತನ್ನ ಪ್ರಮುಖ ಎದುರಾಳಿಯಾಗಿ ಪರಿಗಣಿಸಿದೆ. ಪಾಕಿಸ್ತಾನವು ದೇಶದ ಭದ್ರತೆಗೆ ಬೆದರಿಕೆಯಾಗಿದ್ದು, ಅದನ್ನು ನಿರ್ವಹಿಸಬಹುದಾಗಿದೆ ಎಂಬ ಅಭಿಪ್ರಾಯವನ್ನು ಭಾರತ ಹೊಂದಿದೆ ಎಂದು ವರದಿ ಹೇಳಿದೆ.

ಆದರೆ, ಪಾಕಿಸ್ತಾನವು ಭಾರತವನ್ನು ತನ್ನ ಅಸ್ತಿತ್ವಕ್ಕೆ ಇರುವ ದೊಡ್ಡ ಬೆದರಿಕೆ ಎಂದೇ ಪರಿಗಣಿಸಿದೆ. ಎರಡೂ ದೇಶಗಳು ತಮ್ಮ ಸೇನಾ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಕಾರ್ಯದಲ್ಲಿ ನಿರತವಾಗಿವೆ. ಪಾಕಿಸ್ತಾನಕ್ಕೆ ಚೀನಾವು ಉದಾರ ಆರ್ಥಿಕ, ರಕ್ಷಣಾ ನೆರವು ನೀಡುತ್ತಿದೆ. ಅದರ ಸೇನಾ ಆಧುನೀಕರಣಕ್ಕೆ ಚೀನಾ ಬೆಂಬಲವಾಗಿ ನಿಂತಿದೆ ಎಂದು ವರದಿ ವಿವರಿಸಿದೆ.  

ಅಮೆರಿಕದ ಸಂಸತ್ತಿನ ಸಶಸ್ತ್ರ ಸೇವೆಗಳ ಉಪಸಮಿತಿಗಾಗಿ ಇದೇ ಮೇ 11ರವರೆಗಿನ ಮಾಹಿತಿ–ಅಂಕಿಅಂಶ ಆಧರಿಸಿ ಡಿಐಎ ವರದಿ ಸಿದ್ಧಪಡಿಸಿದೆ. ಜಾಗತಿಕ ಮಟ್ಟದಲ್ಲಿ ನಾಯಕತ್ವವನ್ನು ಪ್ರದರ್ಶಿಸುವುದು, ಚೀನಾವನ್ನು ಎದುರಿಸುವುದು ಮತ್ತು ದೇಶದ ಸೇನಾ ಶಕ್ತಿಯನ್ನು ಬಲಪಡಿಸುವುದು ಪ್ರಧಾನಿ ನರೇಂದ್ರ ಮೋದಿ ಅವರ ರಕ್ಷಣಾ ಆದ್ಯತೆಗಳಾಗಿವೆ ಎಂದು ವರದಿ ಉಲ್ಲೇಖಿಸಿದೆ. 

ADVERTISEMENT
ಬಗೆಹರಿಯದ ಚೀನಾ ಗಡಿ ವಿವಾದ:
ಪೂರ್ವ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಯ ವಿವಾದಾಸ್ಪದ ಪ್ರದೇಶದಿಂದ ತಮ್ಮ ಪಡೆಗಳನ್ನು ಹಿಂತೆಗೆದುಕೊಳ್ಳುವ ಬಗ್ಗೆ 2024ರ ಅಕ್ಟೋಬರ್‌ನಲ್ಲಿ ಚೀನಾ ಮತ್ತು ಭಾರತದ ನಡುವೆ ಒಪ್ಪಂದ ಏರ್ಪಟ್ಟಿತ್ತು. ಅದರಿಂದ 2020ರ ನಂತರದಲ್ಲಿ ಎರಡೂ ದೇಶಗಳ ನಡುವೆ ಉಂಟಾಗಿದ್ದ ಉದ್ವಿಗ್ನ ಸ್ಥಿತಿ ಶಮನಗೊಂಡಿತ್ತು. ಆದರೆ, ದೀರ್ಘಕಾಲದಿಂದ ಇರುವ ಗಡಿ ಗುರುತಿಸುವಿಕೆಯ ವಿವಾದ ಇನ್ನೂ ಬಗೆಹರಿದಿಲ್ಲ ಎಂದಿದೆ.

ಚೀನಾದ ಪ್ರಭಾವವನ್ನು ಎದುರಿಸಲು ಮತ್ತು ತನ್ನ ಜಾಗತಿಕ ನಾಯಕತ್ವದ ಪಾತ್ರವನ್ನು ಸಮರ್ಥವಾಗಿ ಪೋಷಿಸಲು ಭಾರತವು ಸೇನಾ ಅಭ್ಯಾಸ, ತರಬೇತಿ, ಶಸ್ತ್ರಾಸ್ತ್ರ ಮಾರಾಟ ಮತ್ತು ಮಾಹಿತಿ ಹಂಚಿಕೆಯ ಮೂಲಕ ಹಿಂದೂ ಮಹಾಸಾಗರ ಪ್ರದೇಶದಲ್ಲಿ ದ್ವಿಪಕ್ಷೀಯ ರಕ್ಷಣಾ ಸಹಭಾಗಿತ್ವಕ್ಕೆ ಆದ್ಯತೆ ನೀಡುತ್ತಿದೆ; ಹಾಗೆಯೇ ಭಾರತವು ಹಿಂದೂ ಮಹಾಸಾಗರ– ಪೆಸಿಫಿಕ್ ಪ್ರದೇಶದಲ್ಲಿ ತ್ರಿಪಕ್ಷೀಯ ಪಾಲುದಾರಿಕೆಗೆ ಒತ್ತು ನೀಡುತ್ತಿದ್ದು, ಬ್ರಿಕ್ಸ್, ಶಾಂಘೈ ಸಹಕಾರ ಸಂಘಟನೆ ಮತ್ತು ಆಸಿಯಾನ್‌ನಂಥ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದೆ ಎಂದು ವರದಿ ಹೇಳಿದೆ.

ಸೇನಾ ಆಧುನೀಕರಣಕ್ಕೆ ಒತ್ತು:
ಭಾರತವು 2024ರಲ್ಲಿ ಅಣ್ವಸ್ತ್ರ ಸಾಮರ್ಥ್ಯದ ಹೊಸ ಪೀಳಿಗೆಯ ಖಂಡಾಂತರ ಕ್ಷಿಪಣಿ ಅಗ್ನಿ–1 ಪ್ರೈಮ್, ಅಗ್ನಿ–5 ಮತ್ತು ಪರಮಾಣು ಚಾಲಿತ, ಗುರಿ ನಿರ್ದೇಶಿತ ಎರಡನೇ ‍ಜಲಾಂತರ್ಗಾಮಿ ನೌಕೆಯನ್ನು ಯಶಸ್ವಿಯಾಗಿ ಪರೀಕ್ಷಿಸುವ ಮೂಲಕ ಸೇನೆಯ ಆಧುನೀಕರಣ ಕಾರ್ಯವನ್ನು ಮುಂದುವರಿಸಿತ್ತು. ಈ ವರ್ಷವೂ ದೇಶೀಯ ರಕ್ಷಣಾ ಉದ್ಯಮವನ್ನು ಬಲಪಡಿಸಲು, ಅವುಗಳ ಪೂರೈಕೆ ವ್ಯವಸ್ಥೆಯಲ್ಲಿರುವ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಮತ್ತು ತನ್ನ ಸೇನೆಯನ್ನು ಆಧುನಿಕಗೊಳಿಸಲು ‘ಮೇಡ್ ಇನ್ ಇಂಡಿಯಾ’ಕ್ಕೆ ಉತ್ತೇಜನ ನೀಡಲಿದೆ ಎಂದು ಡಿಐಎ ಹೇಳಿದೆ.      

ರಷ್ಯಾ ಜತೆಗಿನ ಸಂಬಂಧ:

 ವರದಿಯ ಪ್ರಕಾರ, 2025ರಲ್ಲೂ ಭಾರತವು ರಷ್ಯಾದೊಂದಿಗೆ ತನ್ನ ಸಂಬಂಧವನ್ನು ಮುಂದುವರಿಸಲಿದ್ದು, ರಷ್ಯಾ ಜತೆಗಿನ ಒಪ್ಪಂದಗಳು ತನ್ನ ಆರ್ಥಿಕ ಮತ್ತು ರಕ್ಷಣಾ ಉದ್ದೇಶಗಳ ಈಡೇರಿಕೆಯ ದೃಷ್ಟಿಯಿಂದ ಮುಖ್ಯವಾಗಿವೆ ಎಂದು ಭಾವಿಸಿದೆ. ಅಲ್ಲದೇ ರಷ್ಯಾ–ಚೀನಾ ಸಂಬಂಧವು ಆಳವಾಗುತ್ತಿದ್ದು, ಈ ದೃಷ್ಟಿಯಿಂದಲೂ ಭಾರತಕ್ಕೆ ರಷ್ಯಾ ಜೊತೆಗಿನ ಸಂಬಂಧ ಮುಖ್ಯವಾಗಿದೆ. ಮೋದಿ ಆಡಳಿತದಲ್ಲಿ ರಷ್ಯಾ ಮೂಲದ ಶಸ್ತ್ರಾಸ್ತ್ರ ಖರೀದಿ ಕಡಿಮೆಯಾಗಿದೆ. ಆದರೂ, ಭಾರತವು ಚೀನಾ ಮತ್ತು ಪಾಕಿಸ್ತಾನವನ್ನು ಎದುರಿಸಲು ಅಗತ್ಯವಾದ ರಷ್ಯಾ ನಿರ್ಮಿತ ಸೇನಾ ಟ್ಯಾಂಕ್‌ಗಳು, ಯುದ್ಧವಿಮಾನಗಳ ಬಿಡಿಭಾಗಗಳಿಗಾಗಿ ರಷ್ಯಾವನ್ನು ಅವಲಂಬಿಸಿದೆ ಎಂದು ವರದಿ ಹೇಳಿದೆ.

ಚೀನಾದ ಉದ್ದೇಶ ಮತ್ತು ಪ್ರಯತ್ನ:
ಅಮೆರಿಕದ ಪ್ರಮುಖ ಎದುರಾಳಿ ಎಂದೇ ಗುರುತಿಸಲಾಗುವ ಚೀನಾದ ಚಟುವಟಿಕೆಗಳ ಬಗ್ಗೆಯೂ ವರದಿಯಲ್ಲಿ ದೀರ್ಘವಾಗಿ ಪ್ರಸ್ತಾಪಿಸಲಾಗಿದೆ. ಚೀನಾವು ಪೂರ್ವ ಏಷ್ಯಾದ ಪ್ರಬಲ ಶಕ್ತಿಯಾಗಿ ಹೊರಹೊಮ್ಮುವ ಗುರಿಯೊಂದಿಗೆ ಮುನ್ನುಗ್ಗುತ್ತಿದೆ; ಶತಮಾನದ ಮಧ್ಯಭಾಗದ ಹೊತ್ತಿಗೆ ಚೀನಾದೊಂದಿಗೆ ತೈವಾನ್ ಅನ್ನು ವಿಲೀನ ಮಾಡುವುದು, ಆರ್ಥಿಕತೆಯಲ್ಲಿ ಪ್ರಗತಿ ಮತ್ತು ಸ್ಥಿರತೆ ಸಾಧಿಸುವುದು, ತಾಂತ್ರಿಕವಾಗಿ ಸ್ವಾವಲಂಬನೆ ಸಾಧಿಸುವುದು ಅವರ ಮುಖ್ಯ ಉದ್ದೇಶವಾಗಿದೆ ಎಂದಿದೆ.

ಜಾಗತಿಕವಾಗಿ ರಾಜತಾಂತ್ರಿಕ ನೆಲೆಯಲ್ಲಿ, ಮಾಹಿತಿ, ಸೇನಾ ಮತ್ತು ಆರ್ಥಿಕ ವಲಯಗಳಲ್ಲಿ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳನ್ನು ಎದುರಿಸಲು ಚೀನಾ ತನ್ನ ಸಿದ್ಧತೆಗಳನ್ನು ಮುಂದುವರಿಸಿದೆ. ಜತೆಗೆ, ಅಮೆರಿಕದ ‌ರಕ್ಷಣಾ ಪಾಲುದಾರರಿಗೆ ಸಹಕಾರ ನೀಡದಿರುವುದೂ ಅದರ ಆದ್ಯತೆಯಾಗಿದೆ. ಚೀನಾ ಅಮೆರಿಕದ ಬಗ್ಗೆ ಗಮನ ನೆಟ್ಟಿದ್ದು, ಅಮೆರಿಕ ಏನಾದರೂ ಈ ವರ್ಷ ಸಂಘರ್ಷಕ್ಕೆ ಮುಂದಾದರೆ, ಅದನ್ನು ಎದುರಿಸಲು, ಮಣಿಸಲು ಸಿದ್ಧತೆ ಮಾಡಿಕೊಳ್ಳಲಿದೆ. ಚೀನಾವು ತನ್ನ ಹಿಡಿತದಲ್ಲಿರುವ ಫಿಲಿಪ್ಪೀನ್ಸ್, ತೈವಾನ್ ಮತ್ತು ಇತರ ರಾಷ್ಟ್ರಗಳ ಮೇಲೆ ಒತ್ತಡ ತಂತ್ರಗಳನ್ನು ಮುಂದುವರಿಸಲಿದೆ. ಮುಖ್ಯವಾಗಿ, ಬಿಕ್ಕಟ್ಟು ನಿವಾರಣೆಗೆ ಅಮೆರಿಕ ಅಸಮರ್ಥವಾಗಿದೆ ಎಂದು ನಿರೂಪಿಸುವ ಮೂಲಕ ತಾನು ಹೆಚ್ಚು ಜವಾಬ್ದಾರಿಯುತ ಜಾಗತಿಕ ನಾಯಕ ಎಂದು ಬಿಂಬಿಸಿಕೊಳ್ಳುವ ಉದ್ದೇಶ ಹೊಂದಿದೆ ಎಂದು ರಕ್ಷಣಾ ಗುಪ್ತಚರ ಸಂಸ್ಥೆ ಹೇಳಿದೆ.

ಪಾಕಿಸ್ತಾನಕ್ಕೆ ಚೀನಾ ಅಭಯ

  • ಪಾಕಿಸ್ತಾನ ಸೇನೆಯು ಮುಂದಿನ ವರ್ಷವೂ ನೆರೆ ರಾಷ್ಟ್ರಗಳೊಂದಿಗಿನ ಗಡಿಯಾಚೆಗಿನ ಸಂಘರ್ಷ‌ಕ್ಕೇ ಪ್ರಮುಖ ಆದ್ಯತೆ ನೀಡುವ ಸಾಧ್ಯತೆ ಹೆಚ್ಚಿದೆ. ಇದರೊಂದಿಗೆ, ಹೆಚ್ಚುತ್ತಿರುವ ತೆಹ್ರಿಕ್‌ ಎ–ತಾಲಿಬಾನ್‌ ಸಂಘಟನೆಯ ದಾಳಿಗಳು, ಬಲೂಚ್‌ ರಾಷ್ಟ್ರೀಯವಾದಿ ತೀವ್ರವಾದಿಗಳು ನಡೆಸುತ್ತಿರುವ ದಾಳಿಗಳು, ಭಯೋತ್ಪಾದನೆ ನಿಗ್ರಹ ಕ್ರಮಗಳು ಮತ್ತು ಅಣ್ವಸ್ತ್ರಗಳ ಆಧುನೀಕರಣಕ್ಕೆ ಹೆಚ್ಚಿನ ಒತ್ತು ನೀಡಬಹುದು

  • ಭಾರತವು ತನ್ನ ಅಸ್ತಿತ್ವಕ್ಕೆ ಅತ್ಯಂತ ದೊಡ್ಡ ಬೆದರಿಕೆ ಎಂದು ನಂಬಿರುವ ಪಾಕಿಸ್ತಾನವು ಸೇನೆಯ ಆಧುನೀಕರಣಕ್ಕೆ ಹಾಕುತ್ತಿರುವ ಶ್ರಮವನ್ನು ಮುಂದುವರಿಸಲಿದೆ. ಸೇನಾ ಸಾಮರ್ಥ್ಯದಲ್ಲಿ ಭಾರತ ಹೊಂದಿರುವ ಮೇಲುಗೈಯನ್ನು ಸರಿದೂಗಿಸುವುದಕ್ಕಾಗಿ ಪರಮಾಣು ಅಸ್ತ್ರಗಳ ಅಭಿವೃದ್ಧಿ ಸೇರಿದಂತೆ ಇನ್ನಿತರ ಕ್ರಮಗಳನ್ನು ಅದು ಕೈಗೊಳ್ಳಲಿದೆ

  • ಪಾಕಿಸ್ತಾನವು ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ಆಧುನೀಕರಣಗೊಳಿಸುತ್ತಿದೆ. ಪರಮಾಣು ವಸ್ತುಗಳನ್ನು, ಪರಮಾಣು ಅಸ್ತ್ರಗಳ ನಿಯಂತ್ರಣ ಹಾಗೂ ಅವುಗಳ ಭದ್ರತೆಯನ್ನು ನಿರ್ವಹಿಸುತ್ತಿದೆ. ಅದು ವಿದೇಶಿ ಪೂರೈಕೆದಾರರು ಮತ್ತು ಮಧ್ಯಸ್ಥಿಕೆ ವಹಿಸುವ ರಾಷ್ಟ್ರಗಳಿಂದ ಸಾಮೂಹಿಕ ವಿಧ್ವಂಸಕ ಅಸ್ತ್ರಗಳ (ಡಬ್ಲ್ಯುಎಂಡಿ) ಸರಕುಗಳನ್ನು ಖರೀದಿ ಮಾಡುತ್ತಿದೆ

  • ಪಾಕಿಸ್ತಾನವು ಚೀನಾದ ಉದಾರ ಆರ್ಥಿಕ ಮತ್ತು ಸೇನಾ ಕೊಡುಗೆಯ ಮೊದಲ ಫಲಾನುಭವಿ. ಚೀನಾ ಸೇನೆ, ಪೀಪಲ್ಸ್‌ ಲಿಬರೇಷನ್‌ ಆರ್ಮಿ (ಪಿಎಲ್‌ಎ) ಜೊತೆ ಸೇರಿಕೊಂಡು ಪ್ರತಿ ವರ್ಷ ಸೇನಾ ತಾಲೀಮು ನಡೆಸುತ್ತಿದೆ. ಸಾಮೂಹಿಕ ವಿಧ್ವಂಸಕ ಅಸ್ತ್ರಗಳ ಅಭಿವೃದ್ಧಿಗೆ ಪೂರಕವಾದ ವಿದೇಶಿ ವಸ್ತುಗಳು ಮತ್ತು ತಂತ್ರಜ್ಞಾನ ನೆರವನ್ನು ಅದು ಚೀನಾದಿಂದಲೇ ಪಡೆದಿರುವ ಸಾಧ್ಯತೆ ಹೆಚ್ಚಿದೆ.

ಚೀನಾದ ಸೇನಾ ಸಾಮರ್ಥ್ಯ

  • ಚೀನಾವು ಸೇನೆಯ ಆಧುನೀಕರಣವನ್ನು ತ್ವರಿತಗೊಳಿಸುತ್ತಿದೆ. ಬಲವಂತವಾಗಿ ತೈವಾನ್‌ ಅನ್ನು ವಶಪಡಿಸಿಕೊಳ್ಳುವುದಕ್ಕಾಗಿ, ಪಶ್ಚಿಮ ಪೆಸಿಫಿಕ್‌ ವ್ಯಾಪ್ತಿಯಲ್ಲಿ ತಾನು  ಶಕ್ತಿಯುತ ರಾಷ್ಟ್ರ ಎಂದು ಬಿಂಬಿಸುವುದಕ್ಕಾಗಿ ಮತ್ತು ಹಿಂದೂ ಮಹಾಸಾಗರ–ಪೆಸಿಫಿಕ್‌ ಪ್ರದೇಶದ ಬಿಕ್ಕಟ್ಟಿನಲ್ಲಿ ಮಧ್ಯಪ್ರವೇಶಿಸುವ ಅಥವಾ ಅಲ್ಲಿ ತನ್ನ ಉಪಸ್ಥಿತಿಗೆ ಅಮೆರಿಕ ಮಾಡುತ್ತಿರುವ ಯತ್ನವನ್ನು ತಡೆಯುವ ಉದ್ದೇಶದಿಂದ ಚೀನಾವು ಯುದ್ಧದ ಎಲ್ಲ ವಿಭಾಗಗಳಲ್ಲೂ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ. 2027 ಮತ್ತು 2035ರ ಹೊತ್ತಿಗೆ ಸೇನೆಯಲ್ಲಿ ಭಾರಿ ಪರಿವರ್ತನೆ ತರುವುದಕ್ಕೆ ಹಾಕಿಕೊಂಡಿರುವ ಗುರಿಗಳನ್ನು ತಲುಪುವ ನಿಟ್ಟಿನಲ್ಲಿ ಚೀನಾದ ನಾಯಕರು ಒತ್ತಡ ಹಾಕುತ್ತಿದ್ದಾರೆ.

  • ಪಿಎಲ್‌ಎಯ ವಾಯು ಪಡೆ ಮತ್ತು ನೌಕಾ ವಿಮಾನ ಪಡೆಗಳು ತಾಂತ್ರಿಕವಾಗಿ ಇನ್ನಷ್ಟು ಆಧುನೀಕರಣಗೊಂಡಿದ್ದು, ಹೆಚ್ಚು ಪರಿಣಾಮಕಾರಿಯೂ ಆಗಿವೆ.

  • ಜಾಗತಿಕ ಮಟ್ಟದಲ್ಲಿ ತನ್ನ ಸೇನೆಯ ಉಪಸ್ಥಿತಿ ಇರುವಂತೆ ಮಾಡಲು ಚೀನಾ ಬಯಸುತ್ತಿದ್ದು ವಿವಿಧ ದೇಶಗಳಲ್ಲಿ ಸೇನಾ ಕಾರ್ಯಾಚರಣೆ, ಸೇನಾ ನೆಲೆಗಳನ್ನು ಸ್ಥಾಪಿಸಲು ಯೋಜನೆ ರೂಪಿಸುತ್ತಿದೆ. 2024ರಲ್ಲಿ ತಾಂಜಾನಿಯಾದಲ್ಲಿ ದೊಡ್ಡ ಮಟ್ಟಿನ ಸೇನಾ ತಾಲೀಮನ್ನು ಚೀನಾ ನಡೆಸಿತ್ತು. ಈ ವರ್ಷ ಕಾಂಬೋಡಿಯಾದ ರೀಮ್‌ ನೌಕಾ ನೆಲೆಯಲ್ಲಿ ಸರಕು ಮತ್ತು ತರಬೇತಿ ಕೇಂದ್ರವನ್ನು ಚೀನಾ ಮತ್ತು ಕಾಂಬೋಡಿಯಾ ಜಂಟಿಯಾಗಿ ಉದ್ಘಾಟನೆ ಮಾಡಿವೆ. ಅಲ್ಲಿ ಎರಡು ಯುದ್ಧ ನೌಕೆಗಳನ್ನೂ ಚೀನಾ ನಿಯೋಜಿಸಿತ್ತು. ಮ್ಯಾನ್ಮಾರ್‌, ಥಾಯ್ಲೆಂಡ್‌, ಇಂಡೊನೇಷ್ಯಾ, ಪಾಕಿಸ್ತಾನ, ಶ್ರೀಲಂಕಾ, ಯುಎಇ, ಕ್ಯೂಬಾ, ಕೆನ್ಯಾ, ಗಿನಿಯಾ, ಸೀಶಲ್ಸ್‌ ತಾಂಜಾನಿಯಾ, ಅಂಗೋಲಾ, ನೈಜೀರಿಯಾ, ನಮೀಬಿಯಾ, ಮೊಜಾಂಬಿಕ್‌, ಗಾಬನ್‌, ಬಾಂಗ್ಲಾದೇಶ, ಪಪುವಾ ನ್ಯೂ ಗಿನಿಯಾ, ಸೊಲೊಮನ್‌ ದ್ವೀಪಗಳು ಮತ್ತು ತಜಕಿಸ್ತಾನಗಳಲ್ಲಿ ಸೇನಾ ನೆಲೆ ಸ್ಥಾಪಿಸಲು ಚೀನಾ ಉದ್ದೇಶಿಸಿದೆ

600ಕ್ಕೂ ಹೆಚ್ಚು ಕಾರ್ಯಾಚರಣೆ ಸನ್ನದ್ಧ ಅಣ್ವಸ್ತ್ರ ಸಿಡಿತಲೆಗಳಿದ್ದು 2030ರ ಹೊತ್ತಿಗೆ ಈ ಸಂಖ್ಯೆ 1,000 ದಾಟಲಿದೆ

ಆಧಾರ: ಅಮೆರಿಕದ ರಕ್ಷಣಾ ಗುಪ್ತಚರ ಸಂಸ್ಥೆಯ ‘2025 ವರ್ಲ್ಡ್‌ವೈಡ್ ಥ್ರೆಟ್ ಅಸೆಸ್‌ಮೆಂಟ್’ ವರದಿ     

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.