ಗ್ರಾಮೀಣ ಭಾರತದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ರಚಿಸಲಾದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಗಳು (ದಿಶಾ) ತಮ್ಮ ಆಶಯದಿಂದ ವಿಮುಖವಾಗಿವೆ. ಜಿಲ್ಲಾ ಮಟ್ಟದಲ್ಲಿ ನಿಯಮಗಳ ಪ್ರಕಾರ ಸಭೆ ನಡೆಯದಿರುವುದು ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಕೇಂದ್ರದ ಮತ್ತೊಂದು ಮಹತ್ವಾಕಾಂಕ್ಷೆಯ ಸಂಸದರ ಆದರ್ಶ ಗ್ರಾಮ ಯೋಜನೆಯ ಉದ್ದೇಶವೂ ಈಡೇರಿಲ್ಲ
ಜಿಲ್ಲಾ ಮಟ್ಟದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದಕ್ಕಾಗಿ ಸಂಸದರು, ಶಾಸಕರು ಮತ್ತು ಅಧಿಕಾರಿಗಳ ನಡುವೆ ಸಮನ್ವಯ ಸಾಧಿಸುವ ದಿಸೆಯಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಗಳನ್ನು (ದಿಶಾ) ರಚಿಸಲಾಗಿದೆ. ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ನಾಮನಿರ್ದೇಶನ ಮಾಡುವ ಆಯಾ ಜಿಲ್ಲೆಯ ಸಂಸದರ ನೇತೃತ್ವದಲ್ಲಿ ಈ ಸಮಿತಿ ಕಾರ್ಯನಿರ್ವಹಿಸುತ್ತದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವಾಲಯದ ನಿಯಮಗಳ ಪ್ರಕಾರ, ಯೋಜನೆಗಳ ಪ್ರಗತಿಯನ್ನು ಅವಲೋಕಿಸಲು ಈ ಸಮಿತಿಯು ಮೂರು ತಿಂಗಳಿಗೊಮ್ಮೆಯಂತೆ ವರ್ಷಕ್ಕೆ ನಾಲ್ಕು ಬಾರಿ ಸಭೆ ಸೇರಬೇಕು. ಆದರೆ, ಕರ್ನಾಟಕ ಸೇರಿದಂತೆ ದೇಶದ ಯಾವ ರಾಜ್ಯದಲ್ಲೂ ‘ದಿಶಾ’ ಸಭೆಗಳು ನಿಯಮಿತವಾಗಿ ನಡೆಯುತ್ತಿಲ್ಲ. ಇದರಿಂದಾಗಿ ಈ ಸಮಿತಿ ರಚನೆಯ ಉದ್ದೇಶವೇ ವಿಫಲವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವಾಲಯಕ್ಕೆ ಸಂಬಂಧಿಸಿದ ಸಂಸತ್ತಿನ ಸ್ಥಾಯಿ ಸಮಿತಿಯು ಇತ್ತೀಚೆಗೆ ಸಂಸತ್ತಿನಲ್ಲಿ ಮಂಡಿಸಿರುವ ವರದಿಯಲ್ಲಿ ಹೇಳಿದೆ.
‘ನರೇಗಾ’, ದೀನ ದಯಾಳ್ ಅಂತ್ಯೋದಯ ಯೋಜನೆ– ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್, ವಸತಿ ಸಚಿವಾಲಯದ ಅಡಿಯಲ್ಲಿ ಬರುವ ವಿವಿಧ ವಸತಿ ಯೋಜನೆಗಳು ಸೇರಿದಂತೆ 26 ಇಲಾಖೆಗಳ 67 ಯೋಜನೆಗಳ ಅನುಷ್ಠಾನ ಪ್ರಗತಿಯ ಮೇಲುಸ್ತುವಾರಿ ಮಾಡುವ ಜವಾಬ್ದಾರಿ ಈ ಸಮಿತಿಗೆ ಇದೆ. ಕೇಂದ್ರ ಸರ್ಕಾರ 2016ರಲ್ಲಿ ‘ದಿಶಾ’ ಸಮಿತಿ ರಚನೆ ಮಾಡಿತ್ತು. ಜಿಲ್ಲಾ ಮಟ್ಟದಲ್ಲಿ ಮಾತ್ರವಲ್ಲ; ರಾಜ್ಯ ಮಟ್ಟದಲ್ಲೂ ಪ್ರತ್ಯೇಕ ಸಮಿತಿ ಇದೆ. ಈ ಸಮಿತಿಯ ಸಭೆಗಳನ್ನು ಆಯೋಜಿಸುವುದಕ್ಕಾಗಿ ಕೇಂದ್ರವು ಅನುದಾನವನ್ನೂ ಬಿಡುಗಡೆ ಮಾಡುತ್ತದೆ.
ನಿಯಮಗಳ ಪ್ರಕಾರ, ಜಿಲ್ಲಾ ಮಟ್ಟದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ದಿಶಾ ಸಭೆ ನಡೆಯಬೇಕು. ರಾಜ್ಯ ಮಟ್ಟದಲ್ಲಿ ಆರು ತಿಂಗಳಿಗೆ ಒಮ್ಮೆ ಈ ಸಭೆ ನಡೆಯಬೇಕು. ಆದರೆ, ಎರಡೂ ಕಡೆ ನಿಗದಿಯಂತೆ ಸಭೆ ನಡೆಯುತ್ತಿಲ್ಲ ಎಂದು ಸ್ಥಾಯಿ ಸಮಿತಿ ತಿಳಿಸಿದೆ.
ರಾಜ್ಯದಲ್ಲಿ 31 ಜಿಲ್ಲೆಗಳಿವೆ. ಒಂದು ಜಿಲ್ಲೆಯಲ್ಲಿ ವರ್ಷಕ್ಕೆ ನಾಲ್ಕು ಸಭೆಗಳಂತೆ ಎಲ್ಲ ಜಿಲ್ಲೆಗಳಲ್ಲೂ ಸೇರಿ 124 ದಿಶಾ ಸಭೆಗಳು ನಡೆಯಬೇಕು. ದಿಶಾ ಸಮಿತಿ ರಚನೆಯಾದಾಗಿನಿಂದ (2016) ಇಲ್ಲಿಯವರೆಗೆ ವರ್ಷವಾರು ಅದರ ಅರ್ಧದಷ್ಟು ಸಂಖ್ಯೆಯ ಸಭೆಗಳೂ ನಡೆದಿಲ್ಲ. 2022–23ನೇ ಸಾಲಿನಲ್ಲಿ 57 ಸಭೆಗಳು ನಡೆದಿರುವುದೇ ಗರಿಷ್ಠ ಸಂಖ್ಯೆ. 2016–17ನೇ ಸಾಲಿನಿಂದ 2024ರ ಡಿಸೆಂಬರ್ 17ರವರೆಗೆ ಒಟ್ಟು 419 ಸಭೆಗಳು ನಡೆದಿವೆ.
2024ರ ಏಪ್ರಿಲ್ ನಂತರದ ಎಂಟು ತಿಂಗಳಲ್ಲಿ 24 ಜಿಲ್ಲೆಗಳಲ್ಲಿ ತಲಾ ಒಂದೊಂದು ಸಭೆ ನಡೆದಿದೆ. ವಿಜಯಪುರ, ಉಡುಪಿ, ಚಿಕ್ಕಮಗಳೂರು, ಕೊಪ್ಪಳ, ಉತ್ತರ ಕನ್ನಡ, ಚಿತ್ರದುರ್ಗ, ಕಲಬುರಗಿ ಜಿಲ್ಲೆಗಳಲ್ಲಿ ಸಭೆ ನಡೆದಿಲ್ಲ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಖಾತೆ ರಾಜ್ಯ ಸಚಿವ ಕಮಲೇಶ್ ಪಾಸ್ವಾನ್ ಅವರು ಲೋಕಸಭೆಗೆ 2024ರ ಡಿಸೆಂಬರ್ 17ರಂದು ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ರಾಜ್ಯದ ಜಿಲ್ಲೆಗಳ ಪೈಕಿ, ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ‘ದಿಶಾ’ ಸಭೆಗಳು ನಡೆದಿವೆ. ಐದು ವರ್ಷಗಳಲ್ಲಿ 15 ಸಭೆಗಳು ನಡೆದಿವೆ. 2020–21 ಮತ್ತು 2021–22 ಸಾಲಿನಲ್ಲಿ ನಿಯಮಾನುಸಾರ ತಲಾ ನಾಲ್ಕು ಸಭೆಗಳು ನಡೆದಿದ್ದರೆ, ನಂತರದ ಎರಡು ವರ್ಷಗಳಲ್ಲಿ ತಲಾ ಮೂರು ಸಭೆಗಳು ಆಯೋಜನೆಗೊಂಡಿದ್ದವು. 2024 ಏಪ್ರಿಲ್‌ನಿಂದ ಈವರೆಗೆ ಒಂದು ಸಭೆ ನಡೆದಿದೆ. 13 ಸಭೆಗಳು ನಡೆದಿರುವ ತುಮಕೂರು ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ದಕ್ಷಿಣ ಕನ್ನಡ, ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ತಲಾ 11, ದಾವಣಗೆರೆಯಲ್ಲಿ 10 ದಿಶಾ ಸಭೆಗಳು ನಡೆದಿವೆ. ವಿಜಯಪುರ ಜಿಲ್ಲೆಯಲ್ಲಿ ಐದು ವರ್ಷಗಳಲ್ಲಿ ಕೇವಲ ನಾಲ್ಕು ಸಭೆಗಳು ನಡೆದಿವೆ. ಬೆಂಗಳೂರು ನಗರ, ಚಾಮರಾಜನಗರ, ಧಾರವಾಡ, ರಾಯಚೂರು ಜಿಲ್ಲೆಗಳಲ್ಲಿ ತಲಾ ಐದು ಸಭೆಗಳು, ಯಾದಗಿರಿಯಲ್ಲಿ ಆರು ಸಭೆಗಳು ನಡೆದಿವೆ. ಒಬ್ಬ ಸಂಸದರ ವ್ಯಾಪ್ತಿಗೆ ಬರುವ ಚಿಕ್ಕಮಗಳೂರು–ಉಡುಪಿ ಜಿಲ್ಲೆಗಳಲ್ಲಿ ಕ್ರಮವಾಗಿ 3 ಮತ್ತು 4 ಸಭೆಗಳು ಆಯೋಜನೆಗೊಂಡಿವೆ.
ಭಾರತದ ಉಳಿದ ರಾಜ್ಯಗಳ ಸ್ಥಿತಿಯೂ ಭಿನ್ನವಾಗಿಲ್ಲ. ಕರ್ನಾಟಕದ 31 ಜಿಲ್ಲೆಗಳನ್ನೂ ಸೇರಿಸಿ ದೇಶದಾದ್ಯಂತ ಒಟ್ಟು 785 ಜಿಲ್ಲೆಗಳಿದ್ದು, ಅಲ್ಲೂ ನಿಯಮಿತವಾಗಿ ದಿಶಾ ಸಭೆಗಳು ಜರುಗುತ್ತಿಲ್ಲ.
ಐದು ವರ್ಷಗಳಲ್ಲಿ 3,821 ಸಭೆಗಳು ನಡೆದಿವೆ. ವರ್ಷಕ್ಕೆ ನಾಲ್ಕರಂತೆ ಇಷ್ಟೂ ಜಿಲ್ಲೆಗಳಲ್ಲಿ ಐದು ವರ್ಷಕ್ಕೆ 19,105 (ಒಂದು ವರ್ಷಕ್ಕೆ 3,140ರಂತೆ) ಸಭೆಗಳು ನಡೆಯಬೇಕು (785 ಜಿಲ್ಲೆಗಳ ಪೈಕಿ ಕೆಲವು ಜಿಲ್ಲೆಗಳು ಐದು ವರ್ಷಗಳ ಅವಧಿಯಲ್ಲಿ ರಚನೆಯಾಗಿವೆ. ಹಾಗಾಗಿ, 2021ರಿಂದ ಇಲ್ಲಿಯವರೆಗೆ ಪ್ರತಿ ವರ್ಷ 3,140 ಸಭೆಗಳೇ ನಡೆಯಬೇಕಿತ್ತು ಎಂದು ಹೇಳಲು ಸಾಧ್ಯವಿಲ್ಲ. ಆದರೆ, ರಚನೆಯಾದ ಜಿಲ್ಲೆಗಳ ಸಂಖ್ಯೆ ಬೆರಳೆಣಿಕೆಯಷ್ಟು. ಈ ಹೊಸ ಜಿಲ್ಲೆಗಳನ್ನು ಪರಿಗಣಿಸದಿದ್ದರೂ ನಿಯಮಾನುಸಾರ ಸಭೆಗಳು ನಡೆದಿಲ್ಲ ಎನ್ನುವುದು ಗಮನಾರ್ಹ ಸಂಗತಿ).
ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು, ಇಲಾಖೆಯ ಕಾರ್ಯದರ್ಶಿಯವರು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ, ಸಂಬಂಧಿಸಿದ ಸಂಸದರಿಗೆ ಪತ್ರ ಬರೆದು ನಿಗದಿಯಂತೆ ಸಭೆ ನಡೆಸಲು ಸಂಬಂಧಿಸಿದ ಜಿಲ್ಲಾಧಿಕಾರಿಗಳು, ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸುವಂತೆ ಹೇಳಿದರೂ ಸಭೆಗಳು ನಿಯಮಿತವಾಗಿ ನಡೆಯುತ್ತಿಲ್ಲ. ಇದರಿಂದ ಯೋಜನೆಗಳ ಅನುಷ್ಠಾನ, ಅನುದಾನ ಬಳಕೆ ಪರಿಣಾಮಕಾರಿಯಾಗಿ ಆಗುತ್ತಿಲ್ಲ.
ನಿಯಮಾನುಸಾರ ದಿಶಾ ಸಭೆಗಳು ನಡೆಯದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸಂಸದೀಯ ಸ್ಥಾಯಿ ಸಮಿತಿಯು ಅಧಿಕಾರಿಗಳ ನಿರ್ಲಕ್ಷ್ಯದತ್ತ ಬೊಟ್ಟು ಮಾಡಿದೆ. ಸಭೆಗಳಿಗೆ ಜವಾಬ್ದಾರಿಯುತ ಹಿರಿಯ ಅಧಿಕಾರಿಗಳು ಗೈರಾಗುತ್ತಿದ್ದು, ಯೋಜನೆಗಳ ಬಗ್ಗೆ ಮಾಹಿತಿ ಇಲ್ಲದ ಕಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಸಮಿತಿಯು ವರದಿಯಲ್ಲಿ ಉಲ್ಲೇಖಿಸಿದೆ. ಈ ವರ್ಷ ರಾಜ್ಯ ಮಟ್ಟದಲ್ಲಿ ಒಂದೂ ಸಭೆ ನಡೆಯದಿರುವುದನ್ನೂ ಅದು ಪ್ರಸ್ತಾಪಿಸಿದೆ.
‘ಗ್ರಾಮೀಣ ಭಾಗಗಳಲ್ಲಿ ವಿವಿಧ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ದಿಶಾ ಸಭೆಗಳು ಮಹತ್ವದ ಪಾತ್ರವಹಿಸುತ್ತವೆ. ಇಲಾಖೆಗಳ ಹಿರಿಯ ಮತ್ತು ಯೋಜನೆ ಅನುಷ್ಠಾನ ಜವಾಬ್ದಾರಿ ಹೊತ್ತ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸದೇ ಇರುವುದರಿಂದ ದಿಶಾ ಸಮಿತಿ ರಚನೆಯ ಉದ್ದೇಶಕ್ಕೇ ಸೋಲಾಗಿದೆ’ ಎಂದು ಸಮಿತಿ ವರದಿಯಲ್ಲಿ ಹೇಳಿದೆ.
‘ಮಾರ್ಗಸೂಚಿಯ ಅನುಸಾರವಾಗಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಗಳು ನಿಯಮಿತವಾಗಿ ನಡೆಯುವುದನ್ನು ಖಾತರಿ ಪಡಿಸಬೇಕು ಮತ್ತು ಸಂಬಂಧಿಸಿದ ಇಲಾಖೆಗಳ ಹಿರಿಯ ಅಧಿಕಾರಿಗಳು ಸಮಿತಿ ಸಭೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಮಾಡಬೇಕು’ ಎಂದು ಸಮಿತಿಯು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯಕ್ಕೆ ಸಲಹೆ ನೀಡಿದೆ.
ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ನಾಮನಿರ್ದೇಶನ ಮಾಡುವ, ಆಯಾ ಜಿಲ್ಲೆಗಳ ಸಂಸದರು ದಿಶಾ ಸಮಿತಿ ಅಧ್ಯಕ್ಷರಾಗಿರುತ್ತಾರೆ. ಜಿಲ್ಲೆಯಲ್ಲಿ ಒಬ್ಬರಿಗಿಂತ ಹೆಚ್ಚು ಸಂಸದರಿದ್ದರೆ, ಹಿರಿಯ ಸಂಸದರನ್ನು ಅಧ್ಯಕ್ಷರನ್ನಾಗಿ ನಾಮ ನಿರ್ದೇಶನ ಮಾಡಲಾಗುತ್ತದೆ. ಉಳಿದವರು ಸಹ–ಅಧ್ಯಕ್ಷರಾಗಿರುತ್ತಾರೆ. ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸಮಿತಿಯ ಸದಸ್ಯ ಕಾರ್ಯದರ್ಶಿ ಆಗಿರುತ್ತಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯದ ವ್ಯಾಪ್ತಿಗೆ ಬರುವ, ಗ್ರಾಮಗಳನ್ನು ಮಾದರಿಯಾಗಿ ಅಭಿವೃದ್ಧಿ ಪಡಿಸುವುದಕ್ಕಾಗಿ ರೂಪಿಸಲಾದ ‘ಸಂಸದರ ಆದರ್ಶ ಗ್ರಾಮ ಯೋಜನೆ’ ಕೂಡ ತನ್ನ ಉದ್ದೇಶ ಈಡೇರಿಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದೂ ಸಂಸದೀಯ ಸ್ಥಾಯಿ ಸಮಿತಿ ಅಭಿಪ್ರಾಯಪಟ್ಟಿದೆ.
2014ರ ಅಕ್ಟೋಬರ್ 11ರಂದು ಈ ಯೋಜನೆಗೆ ಚಾಲನೆ ನೀಡಲಾಗಿತ್ತು. ಸಂಸದರೇ ಈ ಯೋಜನೆಯಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಆದರ್ಶ ಗ್ರಾಮಗಳನ್ನಾಗಿ ಅಭಿವೃದ್ಧಿ ಪಡಿಸಲು ಅವರೇ ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಯೋಜನೆಗಾಗಿ ಪ್ರತ್ಯೇಕ ಅನುದಾನವನ್ನು ಕೇಂದ್ರ ಸರ್ಕಾರ ನೀಡುವುದಿಲ್ಲ. ಬದಲಿಗೆ ಈಗಾಗಲೇ ಜಾರಿಯಲ್ಲಿರುವ ಅಭಿವೃದ್ಧಿ ಯೋಜನೆಗಳನ್ನು ಪರಸ್ಪರ ಸಮನ್ವಯದಿಂದ ಆದ್ಯತೆ ಮೇರೆಗೆ ಆಯ್ಕೆ ಮಾಡಿದ ಗ್ರಾಮಗಳಲ್ಲಿ ಅನುಷ್ಠಾನಗೊಳಿಸಲಾಗುತ್ತದೆ.
ಆದರೆ, ಯೋಜನೆಗಾಗಿ ಆಯ್ಕೆ ಮಾಡಿಕೊಂಡ ಗ್ರಾಮಗಳಲ್ಲಿ ಯಾವುದೇ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಅನುಷ್ಠಾನಗೊಳಿಸಿರುವುದು ಸಂಸದರ ಗಮನಕ್ಕೆ ಬಂದಿಲ್ಲ. ಒಂದಲ್ಲ ಒಂದು ಕಾರಣಕ್ಕೆ ಈ ಯೋಜನೆಯ ಆಶಯವು ಪೂರ್ಣವಾಗಿ ಈಡೇರಿಲ್ಲ. ಗ್ರಾಮಗಳ ಅಭಿವೃದ್ಧಿಯಾಗಿಲ್ಲ ಎಂದು ಸಮಿತಿಯು ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಈ ಯೋಜನೆಯನ್ನು ತಳಮಟ್ಟದಲ್ಲಿ ಆದ್ಯತೆ ಮೇರೆಗೆ ಅನುಷ್ಠಾನಗೊಳಿಸುವ ತುರ್ತು ಇದೆ ಎಂದು ಅದು ಪ್ರತಿಪಾದಿಸಿದೆ.
ಯೋಜನೆಗಳನ್ನು ಗ್ರಾಮ ಮಟ್ಟದಲ್ಲಿ ಅನುಷ್ಠಾನಗೊಳಿಸುವಾಗ ಸಂಸದರು ಸಕ್ರಿಯವಾಗಿ ತೊಡಗಿಕೊಳ್ಳಬೇಕು. ಸಂಸತ್ ಸದಸ್ಯರಿಗೆ ತಳಮಟ್ಟದಲ್ಲಿರುವ ಅನುಭವಗಳನ್ನು ಯೋಜನೆ ಅನುಷ್ಠಾನದ ಸಂದರ್ಭದಲ್ಲಿ ಅಧಿಕಾರಿಗಳು ಬಳಸಿಕೊಳ್ಳಬೇಕು. ಯೋಜನೆ ಜಾರಿ ಪ್ರಗತಿಯ ಬಗ್ಗೆ ಅವರಿಗೆ ಸದಾ ಮಾಹಿತಿ ನೀಡುತ್ತಿರಬೇಕು ಎಂದು ಸಮಿತಿ ತನ್ನ ಶಿಫಾರಸಿನಲ್ಲಿ ಹೇಳಿದೆ.
ಆಧಾರ: ಸಂಸದೀಯ ಸ್ಥಾಯಿ ಸಮಿತಿ ವರದಿ, ಸಂಸತ್ತಿನಲ್ಲಿ ಸಚಿವರ ಹೇಳಿಕೆ, ದಿಶಾ ವೆಬ್‌ಸೈಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.