ADVERTISEMENT

ಆಳ ಅಗಲ | ಭಾರತಕ್ಕೆ ಸ್ಟಾರ್‌ಲಿಂಕ್: ಭದ್ರತೆಗೆ ಬೆದರಿಕೆಯೇ?

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2025, 23:30 IST
Last Updated 16 ಮಾರ್ಚ್ 2025, 23:30 IST
<div class="paragraphs"><p>ಸುಲಭವಾಗಿ ಹೊತ್ತೊಯ್ಯಬಹುದಾದ ಸ್ಟಾರ್‌ಲಿಂಕ್‌ ಆ್ಯಂಟೆನಾ </p></div>

ಸುಲಭವಾಗಿ ಹೊತ್ತೊಯ್ಯಬಹುದಾದ ಸ್ಟಾರ್‌ಲಿಂಕ್‌ ಆ್ಯಂಟೆನಾ

   

ಚಿತ್ರ: ಸ್ಟಾರ್‌ಲಿಂಕ್‌ ವೆಬ್‌ಸೈಟ್‌

ಅಮೆರಿಕದ ಉದ್ಯಮಿ ಎಲಾನ್ ಮಸ್ಕ್ ಮಾಲೀಕತ್ವದ ಸ್ಪೇಸ್‌ಎಕ್ಸ್ ಕಂಪನಿಯ ಸ್ಟಾರ್‌ಲಿಂಕ್ ಇಂಟರ್‌ನೆಟ್‌ ಸೇವೆ ಭಾರತಕ್ಕೂ ಶೀಘ್ರದಲ್ಲಿ ಬರಲಿದೆ. ಹಿಂದೆ ಭಾರತ ಪ್ರವೇಶಿಸಲು ಮಸ್ಕ್‌ ಮಾಡಿದ್ದ ಯತ್ನ ಸಫಲವಾಗಿರಲಿಲ್ಲ. ಅಮೆರಿಕಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಮಸ್ಕ್‌ ಅವರನ್ನು ಭೇಟಿ ಮಾಡಿದ ಬಳಿಕ ಸ್ಟಾರ್‌ಲಿಂಕ್‌ ಭಾರತ ಪ್ರವೇಶದ ಸುದ್ದಿ ಹೊರಬಿದ್ದಿದೆ. ಸ್ಟಾರ್‌ಲಿಂಕ್‌ ಉಪಗ್ರಹಗಳು,  ಸ್ಟಾರ್‌ಲಿಂಕ್‌ ಮೇಲೆ ಕೇಂದ್ರ ಸರ್ಕಾರ ಹೆಚ್ಚು ನಿಯಂತ್ರಣ ಹೊಂದಿದಂತೆ ಕಾಣುತ್ತಿಲ್ಲ. ಇದು ದೇಶದ ಭದ್ರತೆಗೆ ಅಪಾಯಕಾರಿಯಾಗಬಹುದು ಎಂಬ ಆತಂಕವೂ ವ್ಯಕ್ತವಾಗಿದೆ  

ಜಗತ್ತಿನಲ್ಲಿಯೇ ಅತಿ ಹೆಚ್ಚು ಜನಸಂಖ್ಯೆ ಇರುವ ಭಾರತವು ಎರಡನೇ ಅತಿ ದೊಡ್ಡ ಇಂಟರ್‌ನೆಟ್ ಮಾರುಕಟ್ಟೆಯೂ ಆಗಿದೆ. ದೇಶದ ಸುಮಾರು 67 ಕೋಟಿ ಮಂದಿ ಇಂಟರ್‌ನೆಟ್ ಸೇವೆ ಪಡೆದಿಲ್ಲ ಎಂದು 2024ರ ವರದಿಯೊಂದು ಹೇಳಿದೆ. ಈ ದಿಸೆಯಲ್ಲಿ ಹೆಚ್ಚು ಗ್ರಾಹಕರನ್ನು ಸೆಳೆಯಲು ಮತ್ತು ಉತ್ತಮ ಇಂಟರ್‌ನೆಟ್ ಸೇವೆ ಕಲ್ಪಿಸಲು ಏರ್‌ಟೆಲ್, ಜಿಯೋದಂಥ ದೇಶೀಯ ಕಂಪನಿಗಳ ನಡುವೆ ಪೈಪೋಟಿ ಇದೆ. ಇವರ ಜತೆಗೆ ಈಗ ಜಾಗತಿಕ ದೈತ್ಯ ಕಂಪನಿಯೊಂದು, ಭಾರತದ ದೂರಸಂಪರ್ಕ ರಂಗಕ್ಕೆ ಅಡಿಯಿಡಲು ಸಜ್ಜಾಗಿದೆ. ಅದು ಅಮೆರಿಕದ ಉದ್ಯಮಿ ಎಲಾನ್ ಮಸ್ಕ್ ಒಡೆತನದ ಸ್ಪೇಸ್‌ಎಕ್ಸ್. ತನ್ನ ಸ್ಟಾರ್‌ಲಿಂಕ್‌ ಸರ್ವಿಸಸ್‌ ಕಂಪನಿಯ ಮೂಲಕ ಟವರ್, ಕೇಬಲ್‌ ರಹಿತವಾಗಿ ಉಪಗ್ರಹದ  ಮೂಲಕ ನೇರ ಇಂಟರ್‌ನೆಟ್ ಸೇವೆ ಒದಗಿಸಲು ಮುಂದಾಗಿದೆ. 

ADVERTISEMENT

5ಜಿ ಇಂಟರ್‌ನೆಟ್‌ಗಿಂತ ಇದು ಉತ್ತಮ ಎನ್ನಲಾಗದಿದ್ದರೂ ಟವರ್ ಅಥವಾ ಕೇಬಲ್‌ ಅಳವಡಿಸಲು ಸಾಧ್ಯವಿಲ್ಲದ ಪ್ರದೇಶಗಳಲ್ಲಿ, ಕುಗ್ರಾಮಗಳಲ್ಲಿ, ಮರುಭೂಮಿ ಗಳಲ್ಲಿ, ಗುಡ್ಡಗಾಡು ಪ್ರದೇಶಗಳಲ್ಲಿ ಸ್ಟಾರ್‌ಲಿಂಕ್ ಮೂಲಕ ಇಂಟರ್‌ನೆಟ್ ಸೇವೆ ಲಭ್ಯವಾಗುವಂತೆ ಮಾಡಬಹುದು.

ಸ್ಟಾರ್‌ಲಿಂಕ್‌ ಈಗ ಭಾರತಕ್ಕೆ ಅಡಿಯಿಡುತ್ತಿದೆಯಾದರೂ ಮಸ್ಕ್ ಇದನ್ನು ಆರಂಭಿಸಿ ದಶಕವೇ ಕಳೆದಿದೆ. 2015ರ ಜನವರಿಯಲ್ಲಿ ವಾಷಿಂಗ್ಟನ್‌ನಲ್ಲಿ ಸ್ಟಾರ್‌ಲಿಂಕ್ ಘೋಷಣೆಯಾಯಿತು. ಫೆಡರಲ್ ಕಮ್ಯುನಿಕೇಷನ್ ಕಮಿಷನ್‌ನಿಂದ (ಎಫ್‌ಸಿಸಿ) ಮತ್ತು ಇತರ ಇಲಾಖೆಗಳ ಅನುಮತಿ ಪಡೆದ ನಂತರ ಕಂಪನಿಯು 2018ರಲ್ಲಿ ಮೊದಲ ಬಾರಿಗೆ ಎರಡು ಉಪಗ್ರಹಗಳನ್ನು, 2019ರ ಮೇನಲ್ಲಿ 60 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿತು. ಈಗ ಸ್ಟಾರ್‌ಲಿಂಕ್‌ನ 7,086 ಉಪಗ್ರಹಗಳು ಭೂಮಿಗೆ ಹತ್ತಿರದ ಕಕ್ಷೆಯಲ್ಲಿ ಕಾರ್ಯಾಚರಣೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಇದನ್ನು 42 ಸಾವಿರಕ್ಕೆ ಹೆಚ್ಚಿಸುವುದು ಕಂಪನಿಯ ಗುರಿ.

ಸದ್ಯ ಸ್ಟಾರ್‌ಲಿಂಕ್ ಉತ್ತರ ಅಮೆರಿಕ, ಯುರೋಪ್, ಆಸ್ಟ್ರೇಲಿಯಾ, ಇಂಡೊನೇಷ್ಯಾ, ಶ್ರೀಲಂಕಾ, ಭೂತಾನ್ ಸೇರಿದಂತೆ ಜಗತ್ತಿನ 125ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯಾಚರಿಸುತ್ತಿದೆ. ಸ್ಟಾರ್‌ಲಿಂಕ್ ಸದ್ಯ 50 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದೆ ಎಂದು ಕಂಪನಿ ಪ್ರತಿಪಾದಿಸಿದೆ. ಸ್ಟಾರ್‌ಲಿಂಕ್ ಭಾರತ ಪ್ರವೇಶಿಸಲು 2021ರಲ್ಲೇ ತೀವ್ರ ಪ್ರಯತ್ನ ನಡೆಸಿತ್ತು. ಆದರೆ, ರಾಷ್ಟ್ರೀಯ ಭದ್ರತೆಯ ಕಾರಣದಿಂದ ಪರವಾನಗಿ ನಿರಾಕರಿಸಲಾಗಿತ್ತು.

ಮೋದಿ ಭೇಟಿ ನಂತರ ಸಮ್ಮತಿ: ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸದಲ್ಲಿ ಎಲಾನ್ ಮಸ್ಕ್ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಅವರು ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಇತರ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದರು ಎನ್ನಲಾಗಿತ್ತು. ಆ ಭೇಟಿ ನಂತರ ಸ್ಟಾರ್‌ಲಿಂಕ್‌ಗೆ ಭಾರತದಲ್ಲಿ ಕಾರ್ಯಾಚರಿಸಲು ಸಮ್ಮತಿ ನೀಡಲಾಗಿದೆ. ಸ್ಟಾರ್‌ಲಿಂಕ್ 20 ವರ್ಷಕ್ಕೆ ಪರವಾನಗಿ ಬಯಸಿದ್ದು, ಮೊದಲು ಐದು ವರ್ಷಕ್ಕೆ ಮಾತ್ರ ನೀಡಬೇಕು ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಶಿಫಾರಸು ಮಾಡಲು ನಿರ್ಧರಿಸಿದೆ ಎನ್ನಲಾಗಿದೆ.

ಇನ್ನೊಂದು ಮುಖ್ಯ ಬೆಳವಣಿಗೆ ಎಂದರೆ, ದೇಶೀಯ ಮಟ್ಟದಲ್ಲಿ ಭಾರ್ತಿ ಏರ್‌ಟೆಲ್ ಮತ್ತು ರಿಲಯನ್ಸ್ ಎರಡೂ ಪ್ರತಿಸ್ಪರ್ಧಿಗಳಾಗಿದ್ದು, ಎರಡೂ ಕಂಪನಿಗಳು ದೇಶದಲ್ಲಿ ಉಪಗ್ರಹ ಆಧರಿತ ಇಂಟರ್‌ನೆಟ್ ಸೇವೆ ಒದಗಿಸುವ ಸಂಬಂಧ ಸ್ಟಾರ್‌ಲಿಂಕ್ ಜತೆಗೆ ಒಪ್ಪಂದ ಮಾಡಿಕೊಂಡಿವೆ. ಈ ಹಿಂದೆ ರಿಲಯನ್ಸ್‌ನ ಮುಕೇಶ್ ಅಂಬಾನಿ ಮತ್ತು ಎಲಾನ್ ಮಸ್ಕ್ ನಡುವೆ ಉಪಗ್ರಹ ತರಂಗಾಂತರ ಹಂಚಿಕೆ ಕುರಿತು ತಿಕ್ಕಾಟ ನಡೆದಿತ್ತು. ಇದೀಗ ಎರಡೂ ಕಂಪನಿಗಳು ಸ್ಪೇಸ್‌ಎಕ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿವೆ. ಈ ಒಪ್ಪಂದದಿಂದ ಏರ್‌ಟೆಲ್ ಮತ್ತು ಜಿಯೋ ಕಂಪನಿಗಳಿಗೆ ಲಾಭವಾಗಿದೆ. ಅದಕ್ಕಿಂತಲೂ ಹೆಚ್ಚಿನ ಅನುಕೂಲ ಮಸ್ಕ್‌ಗೆ  ಆಗಲಿದೆ. ಭಾರತದ ಶೇ 70ರಷ್ಟು ಮೊಬೈಲ್ ಬಳಕೆದಾರರ ಸಂಪರ್ಕ ಅವರಿಗೆ ಈ ಮೂಲಕ ಸಿಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆದರೆ, ಸ್ಟಾರ್‌ಲಿಂಕ್‌ ಇಂಟರ್‌ನೆಟ್‌ ಸೇವೆ ದುಬಾರಿಯಾಗಿದ್ದು, ಎಷ್ಟರಮಟ್ಟಗೆ ಇದು ಭಾರತದಲ್ಲಿ ಯಶಸ್ವಿಯಾಗಲಿದೆ ಎನ್ನುವ ಬಗ್ಗೆಯೂ ಚರ್ಚೆಯೂ ನಡೆಯುತ್ತಿದೆ.

ಕಾರ್ಯನಿರ್ವಹಣೆ ಹೇಗೆ?

ಸರಳವಾಗಿ ಹೇಳಬೇಕೆಂದರೆ ಡೈರೆಕ್ಟ್‌ ಟು ಹೋಮ್‌ (ಡಿಟಿಎಚ್‌) ಮಾದರಿಯಲ್ಲಿ ಸ್ಟಾರ್‌ಲಿಂಕ್‌ ಇಂಟರ್‌ನೆಟ್‌ ಕೆಲಸ ಮಾಡುತ್ತದೆ. ಭೂಮಿಯ ಕೆಳ ಕಕ್ಷೆಯಲ್ಲಿ ಸುತ್ತುತ್ತಿರುವ ಸ್ಟಾರ್‌ಲಿಂಕ್‌ ಉಪಗ್ರಹಗಳ ಗುಚ್ಛಗಳ ಮೂಲಕ ನೇರವಾಗಿ ಬಳಕೆದಾರರ ಮನೆಗೆ ಇಂಟರ್‌ನೆಟ್‌ ಸಿಗುತ್ತದೆ.  ಇದಕ್ಕಾಗಿ ಬಳಕೆದಾರರು ಸ್ಟಾರ್‌ಲಿಂಕ್‌ನ ಆ್ಯಂಟೆನಾ, ರೌಟರ್‌ ಹೊಂದಿರಬೇಕು. ಸ್ಟಾರ್‌ಲಿಂಕ್‌ ಇಂಟರ್‌ನೆಟ್‌ ಸಂಪರ್ಕ ಪಡೆಯುವಾಗ ಕಂಪನಿಯು ಇದೆಲ್ಲವನ್ನೂ ಒಳಗೊಂಡ ಕಿಟ್‌ ಅನ್ನು ಒದಗಿಸುತ್ತದೆ. ಈ ಆ್ಯಂಟೆನಾ ಚಿಕ್ಕದಾಗಿದ್ದು, ಬೇಕಾದಲ್ಲಿಗೆ ಒಯ್ಯಬಹುದು. ಮನೆಗೆ ಇಂಟರ್‌ನೆಟ್‌ ಸಂಪರ್ಕ ಪಡೆದಿರುವವರು, ಈ ಆ್ಯಂಟೆನಾವನ್ನು ಆಕಾಶದೆಡೆಗೆ ಮುಖಮಾಡಿ ಮನೆಯ ಚಾವಣಿ ಅಥವಾ ಬೇರೆಕಡೆಗಳಲ್ಲಿ ಅಳವಡಿಸಬೇಕು. ಈ ಆ್ಯಂಟೆನಾ ಕೇಬಲ್‌ ಅನ್ನು ಮನೆಯಲ್ಲಿರುವ ವೈ–ಫೈ ರೌಟರ್‌ಗೆ ಸಂಪರ್ಕ ಕಲ್ಪಿಸಲಾಗುತ್ತದೆ. ಇವು ಕಾರ್ಯಾಚರಿಸಲು ವಿದ್ಯುತ್‌ ಸಂಪರ್ಕವೂ ಇರಬೇಕು. ರೌಟರ್‌ ಮೂಲಕ ಮೊಬೈಲ್‌, ಕಂಪ್ಯೂಟರ್‌, ಟ್ಯಾಬ್‌ ಸೇರಿದಂತೆ ಇನ್ನಿತರ ಸಾಧನಗಳಿಗೆ ಇಂಟರ್‌ನೆಟ್‌ ಸಂಪರ್ಕ ಕಲ್ಪಿಸಬಹುದು. 

ಪ್ರಯೋಜನ ಏನೇನು?

  • 5ಜಿಯಷ್ಟು ಇಂಟರ್‌ನೆಟ್‌ ವೇಗ ಸ್ಟಾರ್‌ಲಿಂಕ್‌ನಲ್ಲಿ ಇಲ್ಲ. ಹಾಗಿದ್ದರೂ ಇದರ ವೇಗ ಕಡಿಮೆ ಏನಲ್ಲ  

  • ಸ್ಟಾರ್‌ಲಿಂಕ್‌ ಉಪಗ್ರಹ ಆಧಾರಿತ ಇಂಟರ್‌ನೆಟ್‌ ಸೇವೆ ಆಗಿರುವುದರಿಂದ ಮೊಬೈಲ್‌ ಟವರ್‌ಗಳಿಲ್ಲದ ಕಡೆಗಳಲ್ಲಿ ಅಂದರೆ, ಮೂಲಸೌಕರ್ಯಗಳಿಲ್ಲದ ಕುಗ್ರಾಮಗಳಲ್ಲಿ ಕೂಡ ಇಂಟರ್‌ನೆಟ್‌ ಸೌಲಭ್ಯ ಹೊಂದಬಹುದು

  • ಆ್ಯಂಟೆನಾ ಚಿಕ್ಕದಾಗಿರುವುದರಿಂದ ಸುಲಭವಾಗಿ ಒಂದೆಡೆಯಿಂದ ಇನ್ನೊಂದೆಡೆ ಹೊತ್ತೊಯ್ಯಬಹುದು

  •  ಭೂಕಂಪ, ಚಂಡಮಾರುತ ಸೇರಿದಂತೆ ನೈಸರ್ಗಿಕ ವಿಪತ್ತು ಸಂಭವಿಸಿದ ಸಂದರ್ಭಗಳಲ್ಲಿ ಕೂಡ ಬಳಸಬಹುದು. ಉಕ್ರೇನ್‌–ರಷ್ಯಾ ಯುದ್ಧ ಆರಂಭಗೊಂಡ ನಂತರ ರಷ್ಯಾವು ಉಕ್ರೇನ್‌ನಲ್ಲಿ ಇಂಟರ್‌ನೆಟ್‌ ಬಳಕೆಗೆ ತಡೆ ಒಡ್ಡಿತ್ತು. ಅದೇ ಸಂದರ್ಭದಲ್ಲಿ ಸ್ಟಾರ್‌ಲಿಂಕ್‌ ಸೇವೆ ಉಕ್ರೇನ್‌ನಲ್ಲಿ ಆರಂಭಗೊಂಡು, ತಡೆರಹಿತ ಇಂಟರ್‌ನೆಟ್‌ ಸೌಲಭ್ಯ ಉಕ್ರೇನ್‌ಗೆ ಸಿಗುವಂತಾಯಿತು  

  • ಸಮುದ್ರ, ದಟ್ಟ ಕಾನನ ಸೇರಿದಂತೆ ಸೌಕರ್ಯಗಳಿಲ್ಲದ ಪ್ರದೇಶಗಳಲ್ಲೂ ತುರ್ತು ಪರಿಸ್ಥಿತಿಯಲ್ಲಿ ಬಳಸಬಹುದು

ದೇಶದ ಭದ್ರತೆ: ಕಳವಳ

ಸ್ಟಾರ್‌ಲಿಂಕ್‌ನ ಭಾರತ ಪ್ರವೇಶದ ಬಗ್ಗೆ ಕಳವಳವೂ ವ್ಯಕ್ತವಾಗಿದೆ. 

ದೇಶದಲ್ಲಿ ಈ ಇಂಟರ್‌ನೆಟ್‌ ಸೇವೆ ಪಡೆದ ಬಳಕೆದಾರರ ಖಾಸಗಿತನ, ಮಾಹಿತಿ ಗೋಪ್ಯತೆ ರಕ್ಷಣೆಯ ವಿಷಯದಲ್ಲಿ ಸ್ಪಷ್ಟತೆ ಇಲ್ಲ. ಸದ್ಯ ಸ್ಟಾರ್‌ಲಿಂಕ್‌ ಅಮೆರಿಕದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಉಪಗ್ರಹಗಳನ್ನು ಮಸ್ಕ್‌ ಒಡೆತನದ ಕಂಪನಿಯೇ ನಿರ್ವಹಿಸುತ್ತದೆ. ಕಂಪನಿಯು ಸಂಗ್ರಹಿಸುವ ಬಳಕೆದಾರರ ಮಾಹಿತಿಗೆ ಅದು ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದಿಲ್ಲ. ವಾಣಿಜ್ಯ ಉದ್ದೇಶಕ್ಕೆ ಬಳಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಸ್ಟಾರ್‌ಲಿಂಕ್‌ ಸೇವೆಗಳ ಮೇಲೆ ಕೇಂದ್ರ ಸರ್ಕಾರ ಯಾವ ರೀತಿ ನಿಯಂತ್ರಣ ಹೊಂದಲಿದೆ ಎಂಬ ಬಗ್ಗೆಯೂ ಸ್ಪಷ್ಟವಾದ ಮಾಹಿತಿ ಇಲ್ಲ. 

ವಿರೋಧ ಪಕ್ಷಗಳು ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಕೇಂದ್ರ ಸರ್ಕಾರವು ರಾಷ್ಟ್ರದ ಭದ್ರತೆಯೊಂದಿಗೆ ರಾಜಿ ಮಾಡಿಕೊಂಡು ಸ್ಟಾರ್‌ಲಿಂಕ್‌ಗೆ ಅವಕಾಶ ನೀಡಿದೆ ಎಂದು ಕಾಂಗ್ರೆಸ್, ಸಿಪಿಎಂ ಆರೋಪಿಸಿವೆ. ಸ್ಟಾರ್‌ಲಿಂಕ್ ಜತೆಗೆ ಜಿಯೋ ಮತ್ತು ಏರ್‌ಟೆಲ್ ಒಪ್ಪಂದ ಮಾಡಿಕೊಳ್ಳಲು ಪ್ರಧಾನಿ ಮೋದಿ ಅವರೇ ಕಾರಣ ಎಂದು ಆರೋಪಿಸಿರುವ ಕಾಂಗ್ರೆಸ್ ಮುಖಂಡ ಜೈರಾಂ ರಮೇಶ್, ಇದು ಎಲಾನ್ ಮಸ್ಕ್ ಮೂಲಕ ಡೊನಾಲ್ಡ್ ಟ್ರಂಪ್ ಅವರ ವಿಶ್ವಾಸ ಗಳಿಸಲು ಮೋದಿ ಅವರು ನಡೆಸಿದ ಪ್ರಯತ್ನ ಎಂದಿದ್ದಾರೆ. 

‘ರಾಷ್ಟ್ರೀಯ ಭದ್ರತೆಗಾಗಿ ಇಂಟರ್‌ನೆಟ್ ಸಂಪರ್ಕ ಕಲ್ಪಿಸಬೇಕು ಅಥವಾ ಕಡಿತಗೊಳಿಸಬೇಕು ಎನ್ನುವ ಸಂದರ್ಭ ಬಂದರೆ, ಆ ಅಧಿಕಾರವು ಯಾರ ಕೈಯಲ್ಲಿರುತ್ತದೆ? ಸ್ಟಾರ್‌ಲಿಂಕ್ ಕೈಯಲ್ಲೋ ಅಥವಾ ಅದರ ಭಾರತೀಯ ಪಾಲುದಾರರ ಕೈಯಲ್ಲೋ’ ಎಂದು ಜೈರಾಂ ರಮೇಶ್ ಪ್ರಶ್ನಿಸಿದ್ದಾರೆ.  

ಉಕ್ರೇನ್‌ ಸೇನೆಯ ಬೆನ್ನೆಲುಬಾಗಿರುವ ಸ್ಟಾರ್‌ಲಿಂಕ್ ಸಂಪರ್ಕವನ್ನು ಕಡಿತಗೊಳಿಸುವುದಾಗಿ ಎಲಾನ್ ಮಸ್ಕ್ ಇತ್ತೀಚೆಗೆ ಬೆದರಿಕೆ ಒಡ್ಡಿದ್ದರು. ಈ ದಿಸೆಯಲ್ಲಿ, ಭಾರತದಲ್ಲಿ ಸ್ಟಾರ್‌ಲಿಂಕ್ ಅನ್ನು ರಕ್ಷಣಾ ವಲಯವೂ ಸೇರಿದಂತೆ ಸರ್ಕಾರದ ಮಹತ್ವದ ವಲಯಗಳಲ್ಲಿ ಬಳಸಬೇಕೇ ಬೇಡವೇ ಎನ್ನುವ ಚರ್ಚೆಗಳು ಹುಟ್ಟಿಕೊಂಡಿವೆ.

ವಿಜ್ಞಾನಿಗಳ ಆಕ್ಷೇಪ‌

ಸ್ಟಾರ್‌ಲಿಂಕ್‌ ಇಂಟರ್‌ನೆಟ್‌ ಸೇವೆಗೆ ವಿವಿಧ ದೇಶಗಳ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಆಕ್ಷೇಪ ವ್ಯಕ್ತಪಡಿಸುತ್ತಿವೆ. ಸ್ಟೇಸ್‌ಎಕ್ಸ್‌, ಸ್ಟಾರ್‌ಲಿಂಕ್‌ ಉಪಗ್ರಹಗಳ ಗುಚ್ಛಗಳನ್ನು ಭೂಮಿಯ ಕೆಳಕಕ್ಷೆಯಲ್ಲಿ ಇರಿಸಿರುವುದರಿಂದ ಇದು ಖಗೋಳವಿಜ್ಞಾನದ ಅಧ್ಯಯನಕ್ಕೆ ಅಡ್ಡಿ ಉಂಟುಪಡಿಸುತ್ತದೆ ಎಂಬುದು ಖಗೋಳ ವಿಜ್ಞಾನಿಗಳ ತಕರಾರು. ‌ಭಾರಿ ಸಂಖ್ಯೆಯಲ್ಲಿ ಉಪಗ್ರಹಗಳು ಭೂ ಕಕ್ಷೆಯಲ್ಲಿ ಸುತ್ತುತ್ತಿರುವುದರಿಂದ ಬ್ರಹ್ಮಾಂಡದ ಮೇಲೆ ಕಣ್ಣಿಟ್ಟಿರುವ ವಿಜ್ಞಾನಿಗಳ ಅಧ್ಯಯನಕ್ಕೆ ಅಡಚಣೆಯಾಗುತ್ತಿದೆ. ಉಪಗ್ರಹಗಳು ಹೊರಸೂಸುವ ರೇಡಿಯೋ ತರಂಗಾಂತರಗಳು, ಅಂತರಿಕ್ಷದತ್ತ ನಿರಂತರವಾಗಿ ದೃಷ್ಟಿ ನೆಟ್ಟಿರುವ ರೇಡಿಯೋ ದೂರದರ್ಶಕಗಳ ವೀಕ್ಷಣೆಗೆ ತಡೆ ಒಡ್ಡುತ್ತಿವೆ. ಇದರಿಂದ ಮಹತ್ವದ ಮಾಹಿತಿಗಳನ್ನು ತಿಳಿಯುವುದಕ್ಕೆ ತೊಂದರೆಯಾಗುತ್ತದೆ ಎಂಬುದು ವಿಜ್ಞಾನಿಗಳ ಹೇಳಿಕೆ. 

ಹೆಚ್ಚು ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವುದರಿಂದ ಇವು ವಿವಿಧ ರಾಷ್ಟ್ರಗಳ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳ ಗಗನನೌಕೆಗಳು, ಉಪಗ್ರಹಗಳಿಗೆ ಡಿಕ್ಕಿ ಹೊಡೆಯಬಹುದು ಎನ್ನುವುದು ವಿಜ್ಞಾನಿಗಳ ಮತ್ತೊಂದು ಆತಂಕ.

7,086 ಸ್ಟಾರ್‌ಲಿಂಕ್‌ ಉಪಗ್ರಹಗಳು ಈಗಾಗಲೇ ಭೂಮಿಯ ಕಕ್ಷೆಯಲ್ಲಿವೆ. ಈ ಸಂಖ್ಯೆಯನ್ನು 42 ಸಾವಿರಕ್ಕೆ ಹೆಚ್ಚಿಸಲು ಸ್ಪೇಸ್‌ಎಕ್ಸ್‌ ಯೋಜಿಸುತ್ತಿದೆ. ಅದರ ಪ್ರತಿಸ್ಪರ್ಧಿ ಕಂಪನಿ ಒನ್‌ವೆಬ್‌ ಸಾವಿರಕ್ಕೂ ಹೆಚ್ಚು ಉಪಗ್ರಹಗಳನ್ನು ಕಕ್ಷೆಗೆ ಬಿಟ್ಟಿದೆ. ಅಮೆರಿಕದ ಅಮೆಜಾನ್‌ ಕಂಪನಿಯೂ ತನ್ನದೇ ಆದ ಜಾಲವನ್ನು ಅಭಿವೃದ್ಧಿಪಡಿಸುತ್ತಿದ್ದು, ಮುಂದಿನ ವರ್ಷಗಳಲ್ಲಿ 3,000 ಉಪಗ್ರಹಗಳನ್ನು ಉಡಾವಣೆ ಮಾಡುವ ಯೋಜನೆ ಹಾಕಿಕೊಂಡಿದೆ. 2030ರ ವೇಳೆಗೆ ಭೂ ಕಕ್ಷೆಯಲ್ಲಿರುವ ಉಪಗ್ರಹಗಳ ಸಂಖ್ಯೆ 1 ಲಕ್ಷ ದಾಟುವ ಅಂದಾಜು ಇದೆ. 

ಉಪಗ್ರಹಗಳು ಹತ್ತಿರದಲ್ಲಿರುವುದು ಏಕೆ?

ಉಪಗ್ರಹಗಳು ಕೆಳ ಕಕ್ಷೆಯಲ್ಲಿರುವುದರಿಂದ ಇಂಟರ್‌ನೆಟ್‌ನ ವೇಗ ಹೆಚ್ಚು. ಇದರಿಂದಾಗಿ ಬಳಕೆದಾರರಿಗೆ ತಡೆರಹಿತ ಇಂಟರ್‌ನೆಟ್‌ ಬಳಕೆ ಸಾಧ್ಯ ಎಂದು ಸ್ಟಾರ್‌ಲಿಂಕ್‌ ಹೇಳುತ್ತದೆ.

ಸಾಮಾನ್ಯವಾಗಿ ಸಂವಹನ ಉದ್ದೇಶದ ಉಪಗ್ರಹಗಳು ಭೂಮಿಯಿಂದ 35,786 ಕಿ.ಮೀ ದೂರದಲ್ಲಿರುವ ಭೂಸ್ಥಿರ ಕಕ್ಷೆಯಲ್ಲಿರುತ್ತವೆ (ಜಿಇಒ). ಸ್ಟಾರ್‌ಲಿಂಕ್‌ ಉಪಗ್ರಹಗಳು ಭೂಮಿಯಿಂದ 550 ಕಿ.ಮೀ ದೂರದಲ್ಲಿವೆ. ಹೀಗಾಗಿ, ಬಳಕೆದಾರ ಮತ್ತು ಉಪಗ್ರಹಗಳ ನಡುವೆ ದತ್ತಾಂಶಗಳ ವರ್ಗಾವಣೆ ಬಹು ಬೇಗ ಆಗುತ್ತದೆ. ಉಪಗ್ರಹಗಳು ದೂರದಲ್ಲಿದ್ದರೆ ದತ್ತಾಂಶಗಳ ವರ್ಗಾವಣೆ ನಿಧಾನವಾಗುತ್ತದೆ ಎಂಬುದು ಸ್ಟಾರ್‌ಲಿಂಕ್‌ ವಿವರಣೆ.

ಎಲಾನ್ ಮಸ್ಕ್

ಸ್ಟಾರ್‌ಲಿಂಕ್‌ ಒಂದೇ ಅಲ್ಲ

ಉಪಗ್ರಹ ಆಧಾರಿತ ಇಂಟರ್‌ನೆಟ್‌ ಸೌಲಭ್ಯ ಕಲ್ಪಿಸುತ್ತಿರುವುದು ಸ್ಟಾರ್‌ಲಿಂಕ್‌ ಮಾತ್ರ ಅಲ್ಲ. ಯುಟೆಲ್‌ಸ್ಯಾಟ್‌ ಸಮೂಹವು ‘ಒನ್‌ ವೆಬ್‌’ ಎಂಬ ಉಪಗ್ರಹ ಆಧಾರಿತ ಇಂಟರ್‌ನೆಟ್‌ ಸೌಲಭ್ಯವನ್ನೂ ಕಲ್ಪಿಸುತ್ತಿದೆ. ಭಾರತದ ಭಾರ್ತಿ ಸಮೂಹವು ಕೂಡ ಇದರ ಪಾಲುದಾರ ಕಂಪನಿಯಾಗಿದೆ.

ಆಧಾರ: ಪಿಟಿಐ, ಬಿಬಿಸಿ, ಸ್ಟಾರ್‌ಲಿಂಕ್ ವೆಬ್‌ಸೈಟ್ ಹಾಗೂ ಸ್ಪೇಸ್ ಎಕ್ಸ್ ವೆಬ್‌ಸೈಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.