ADVERTISEMENT

ಆಳ-ಅಗಲ | ತೈಲ ದೊರೆಗಳಿಗೆ ಬಿಸಿ ತಾಗಿಸುವ ತಂತ್ರ

ಜಯಸಿಂಹ ಆರ್.
Published 24 ನವೆಂಬರ್ 2021, 21:00 IST
Last Updated 24 ನವೆಂಬರ್ 2021, 21:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಮೆರಿಕದ ನೇತೃತ್ವದಲ್ಲಿ ಭಾರತ, ಬ್ರಿಟನ್, ಚೀನಾ, ಜಪಾನ್ ಮತ್ತು ದಕ್ಷಿಣ ಕೊರಿಯಾ ದೇಶಗಳು ತಮ್ಮ ರಾಷ್ಟ್ರೀಯ ತೈಲ ತುರ್ತು ಬಳಕೆ ಮೀಸಲಿನಿಂದ 7–8 ಕೋಟಿ ಬ್ಯಾರೆಲ್‌ ಕಚ್ಚಾತೈಲವನ್ನು ಎರಡು ತಿಂಗಳ ಅವಧಿಯಲ್ಲಿ, ಮಾರುಕಟ್ಟೆಗೆ ಪೂರೈಸಲು ನಿರ್ಧರಿಸಿವೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯನ್ನು ಇಳಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಮೆರಿಕವು ಹೇಳಿದೆ.

2020ರಲ್ಲಿ ಜಗತ್ತಿನ ವಿವಿಧ ಭಾಗಗಳಲ್ಲಿ ಕೋವಿಡ್‌ ಲಾಕ್‌ಡೌನ್‌ ಜಾರಿಯಾ ಗುವುದಕ್ಕೂ ಮುನ್ನ ಪೆಟ್ರೋಲಿಯಂ ರಫ್ತು ದೇಶಗಳ ಸಂಘಟನೆಯ (ಒಪೆಕ್‌+) ಸದಸ್ಯ ರಾಷ್ಟ್ರಗಳು ಪ್ರತಿದಿನ 3 ಕೋಟಿ ಬ್ಯಾರೆಲ್‌ಗೂ ಹೆಚ್ಚು ಕಚ್ಚಾತೈಲವನ್ನು ಉತ್ಪಾದಿಸುತ್ತಿದ್ದವು. ಲಾಕ್‌ಡೌನ್‌ ಅವಧಿಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲಕ್ಕೆ ಬೇಡಿಕೆ ಕುಸಿಯಿತು, ಜತೆಗೆ ಕಚ್ಚಾತೈಲದ ದರವೂ ನೆಲಕಚ್ಚಿತು. ಇದರಿಂದಾಗಿ ಒಪೆಕ್+ ದೇಶಗಳು ತಮ್ಮ ದೈನಂದಿನ ಕಚ್ಚಾತೈಲ ಉತ್ಪಾದನೆಯನ್ನು ಗಣನೀಯ ಪ್ರಮಾಣದಲ್ಲಿ ಕಡಿತ ಮಾಡಿದವು.

ಲಾಕ್‌ಡೌನ್‌ ತೆರವಾದಂತೆ ಕಚ್ಚಾತೈಲಕ್ಕೆ ಬೇಡಿಕೆ ಹೆಚ್ಚಾಯಿತು. ಆದರೆ ಒಪೆಕ್‌+ ದೇಶಗಳು ತಮ್ಮ ದೈನಂದಿನ ಉತ್ಪಾದನೆಯನ್ನು ಹೆಚ್ಚಿಸಲಿಲ್ಲ. ಒಪೆಕ್‌+ ದೇಶಗಳು ಈಗ ಪ್ರತಿದಿನ 2.7 ಕೋಟಿ ಬ್ಯಾರೆಲ್‌ ಕಚ್ಚಾತೈಲವನ್ನು ಮಾತ್ರ ಉತ್ಪಾದಿಸುತ್ತಿವೆ. ಇದರಿಂದ ಬೇಡಿಕೆ ಹೆಚ್ಚಾಗಿ, ಪೂರೈಕೆ ಕಡಿಮೆಯಾಯಿತು. ಪರಿಣಾಮವಾಗಿ ಕಚ್ಚಾತೈಲದ ದರ ವಿಪರೀತ ಪ್ರಮಾಣದಲ್ಲಿ ಏರಿಕೆಯಾಯಿತು.

ADVERTISEMENT

ಕಚ್ಚಾತೈಲದ ದರವನ್ನು ಇಳಿಸಲು ಉತ್ಪಾದನೆಯನ್ನು ಹೆಚ್ಚಿಸುವಂತೆ ತೈಲ ಆಮದು ರಾಷ್ಟ್ರಗಳು, ಒಪೆಕ್‌+ ದೇಶಗಳನ್ನು ಕೇಳಿಕೊಂಡವು. ಈ ಬೇಡಿಕೆಯನ್ನು ಒಪೆಕ್‌+ ದೇಶಗಳು ಮಾನ್ಯ ಮಾಡಲಿಲ್ಲ. ಒಪೆಕ್‌+ ದೇಶಗಳ ಮೇಲೆ ಒತ್ತಡ ಹೇರುವ ಸಲುವಾಗಿ ಅಮೆರಿಕದ ನೇತೃತ್ವದಲ್ಲಿ ಆರು ದೇಶಗಳು ತಮ್ಮ ತುರ್ತು ಬಳಕೆ ಮೀಸಲಿನಲ್ಲಿರುವ ಕಚ್ಚಾತೈಲವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಮುಂದಾಗಿವೆ.

ಅನುಕೂಲ

ಅಮೆರಿಕವು ಈ ಘೋಷಣೆ ಮಾಡಿದ ನಂತರ ಜಾಗತಿಕ ಮಾರುಕಟ್ಟೆಯಲ್ಲಿ ಪ್ರತೀ ಬ್ಯಾರೆಲ್ ಬ್ರೆಂಕ್ಟ್‌ ಕಚ್ಚಾತೈಲದ ಬೆಲೆ ಶೇ 0.4ರಷ್ಟು ಇಳಿಕೆಯಾಗಿದೆ. ಅಮೆರಿಕದ ವೆಸ್ಟ್‌ ಟೆಕ್ಸಾಸ್ ಇಂಟರ್‌ಮೀಡಿಯೇಟ್ ಕಚ್ಚಾತೈಲದ ಬೆಲೆ, ಪ್ರತೀ ಬ್ಯಾರೆಲ್‌ಗೆ ಶೇ 0.2ರಷ್ಟು ಇಳಿಕೆಯಾಗಿದೆ. ಆದರೆ ಈ ಬೆಲೆ ಇಳಿಕೆ ಗ್ರಾಹಕರಿಗೆ ತಕ್ಷಣವೇ ವರ್ಗವಾಗುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ.

ಸಾಮಾನ್ಯವಾಗಿ ತೈಲ ಕಂಪನಿಗಳು ಕಚ್ಚಾತೈಲವನ್ನು ಎರಡು ತಿಂಗಳು ಮುಂಗಡವಾಗಿ ಖರೀದಿಸುತ್ತವೆ. ಮುಂದಿನ ಎರಡು ತಿಂಗಳಿಗೆ ಅಗತ್ಯವಿರುವ ಕಚ್ಚಾತೈಲವನ್ನು ಈಗಾಗಲೇ ಖರೀದಿಸಿರುವ ಕಾರಣ, ಈಗ ಇಳಿಕೆಯಾದ ಬೆಲೆಯಲ್ಲಿ ಕಚ್ಚಾತೈಲವನ್ನು ಖರೀದಿಸಿದರೂ ಅದರ ಲಾಭ ಗ್ರಾಹಕನಿಗೆ ತಲುಪಲು ಎರಡು ತಿಂಗಳು ಬೇಕಾಗುತ್ತದೆ ಎಂದು ತಜ್ಞರು ವಿವರಿಸಿದ್ದಾರೆ.

‘ದುಷ್ಪರಿಣಾಮವೇ ಹೆಚ್ಚು’

‘ಈಗ ತಮ್ಮ ತುರ್ತು ಬಳಕೆ ಮೀಸಲಿನಲ್ಲಿ ಇರುವ ಕಚ್ಚಾತೈಲವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಘೋಷಿಸಿರುವ ದೇಶಗಳೆಲ್ಲವೂ, ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುವ ದೇಶಗಳಾಗಿವೆ. ಒಪೆಕ್+ ದೇಶಗಳ ಮೇಲೆ ಒತ್ತಡ ಹೇರಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಇಂದೊಂದು ರೀತಿಯಲ್ಲಿ, ದೈತ್ಯರ ವಿರುದ್ಧ ಅಸಮರ್ಥರು ಹೋರಾಟಕ್ಕೆ ಇಳಿದಂತೆ’ ಎಂದು ಅಮೆರಿಕದ ರಿಸ್ಟೆಡ್ ಎನೆರ್ಜಿಯ ಕ್ಲಾಡೊ ಗಾಲಿಂಬರ್ಟಿ ವಿಶ್ಲೇಷಿಸಿದ್ದಾರೆ.

‘ಒಪೆಕ್‌+ ದೇಶಗಳು ಪ್ರತಿದಿನ 2.7 ಕೋಟಿಗೂ ಹೆಚ್ಚು ಬ್ಯಾರೆಲ್ ಕಚ್ಚಾತೈಲವನ್ನು ಉತ್ಪಾದಿಸುತ್ತಿವೆ. ಅಮೆರಿಕ ಮತ್ತು ಇತರ ರಾಷ್ಟ್ರಗಳು ತಮ್ಮ ತುರ್ತು ಬಳಕೆ ಮೀಸಲಿನಿಂದ ಎರಡು ತಿಂಗಳವರೆಗೆ ಬಿಡುಗಡೆ ಮಾಡಲು ಯೋಜಿಸಿರುವ ಬ್ಯಾರೆಲ್‌ಗಳ ಸಂಖ್ಯೆ 7–8 ಕೋಟಿ ಮಾತ್ರ. ಇದರಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಬದಲಿಗೆ ಇದು ಒಪೆಕ್‌+ ದೇಶಗಳನ್ನು ಕೆರಳಿಸಿದಂತೆ ಆಗುತ್ತದೆ’ ಎಂದು ಅವರು ವಿವರಿಸಿದ್ದಾರೆ.

‘ಡಿಸೆಂಬರ್‌ 2ರಂದು ಒಪೆಕ್‌+ ದೇಶಗಳು ಸಭೆ ನಡೆಸಲಿವೆ. ಎರಡು ತಿಂಗಳ ಅವಧಿಯಲ್ಲಿ ಮಾರುಕಟ್ಟೆಗೆ ಹೆಚ್ಚುವರಿಯಾಗಿ ಬರಲಿರುವ 7–8 ಕೋಟಿ ಬ್ಯಾರೆಲ್‌ಗಳಿಂದ ಬೆಲೆ ಕುಸಿಯುತ್ತದೆ ಎಂದು ಒಪೆಕ್‌ ದೇಶಗಳು ಭಾವಿಸಿದರೆ, ಅವು ಉತ್ಪಾದನೆಯನ್ನು ಮತ್ತಷ್ಟು ಕಡಿತ ಮಾಡುವ ಸಾಧ್ಯತೆ ಇದೆ. ಇದರಿಂದ ಕಚ್ಚಾತೈಲದ ಬೆಲೆ ಮತ್ತಷ್ಟು ಹೆಚ್ಚುವ ಅಪಾಯವಿದೆ’ ಎಂದು ಅವರು ವಿವರಿಸಿದ್ದಾರೆ.

ಭಾರತದ ತುರ್ತು ಬಳಕೆ ಮೀಸಲು

ಭಾರತವು ಯುದ್ಧ, ಪೂರೈಕೆ ಸ್ಥಗಿತದಂತಹ ತುರ್ತು ಸಂದರ್ಭಗಳಲ್ಲಿ ತನ್ನ ಕಚ್ಚಾತೈಲದ ಅಗತ್ಯವನ್ನು ಪೂರೈಸಿಕೊಳ್ಳಲು ದೇಶದ ಮೂರು ಕಡೆ ‘ತುರ್ತು ಬಳಕೆ ಮೀಸಲು’ ಸಂಗ್ರಹಾಗಾರಗಳನ್ನು ಸ್ಥಾಪಿಸಿದೆ. ಮಂಗಳೂರು, ಉಡುಪಿ ಬಳಿಯ ಪಡೂರು ಮತ್ತು ವಿಶಾಖಪಟ್ಟಣದ ಬಳಿ ಒಂದೊಂದು ನೆಲದಡಿಯ ಸಂಗ್ರಹಾಗಾರಗಳನ್ನು ನಿರ್ಮಿಸಿದೆ. ಅವುಗಳಲ್ಲಿ ತುರ್ತು ಬಳಕೆ ಮೀಸಲನ್ನು ಸಂಗ್ರಹಿಸಲಾಗಿದೆ. ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ ಲಿಮಿಟೆಡ್ (ಐಎಸ್‌ಪಿಆರ್‌ಎಲ್‌) ಇವುಗಳನ್ನು ನಿರ್ವಹಿಸುತ್ತದೆ.

‘3.91 ಕೋಟಿ ಬ್ಯಾರೆಲ್‌ಗಳಷ್ಟು ಕಚ್ಚಾತೈಲವನ್ನು ಸಂಗ್ರಹಿಸುವ ಸಾಮರ್ಥ್ಯ ಈ ಸಂಗ್ರಹಾಗಾರಗಳಿಗಿದೆ. ಇದರಲ್ಲಿ 50 ಲಕ್ಷ ಬ್ಯಾರೆಲ್‌ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಯೋಜಿಸಲಾಗಿದೆ. ಇದು ದೇಶದ ಒಂದು ದಿನದ ಅಗತ್ಯವನ್ನಷ್ಟೇ ಪೂರೈಸಲು ಸಾಕಾಗುತ್ತದೆ’ ಎಂದು ಸರ್ಕಾರದ ಮೂಲಗಳು ಹೇಳಿವೆ.

ಭಾರತದಲ್ಲಿನ ಈ ಮೂರೂ ತುರ್ತು ಬಳಕೆ ಮೀಸಲು ಸಂಗ್ರಹಾಗಾರಗಳನ್ನು ಸ್ಥಾಪಿಸಲು ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಕ್ರಮ ತೆಗೆದುಕೊಂಡಿತ್ತು. ಇವುಗಳ ಕಾಮಗಾರಿ 2010ಕ್ಕೂ ಮುನ್ನ ಆರಂಭವಾಗಿತ್ತು. ಆದರೆ ಈಗ ದೇಶದ ತೈಲ ಬಳಕೆ ಹೆಚ್ಚಾಗಿದೆ. ಈಗಿರುವ ತುರ್ತು ಬಳಕೆ ಮೀಸಲಿನಲ್ಲಿ ಇರುವ ತೈಲವು ದೇಶದ ಬೇಡಿಕೆಯನ್ನು 7–8 ದಿನವಷ್ಟೇ ಪೂರೈಸಬಲ್ಲದು. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಇಂತಹ ಸಂಗ್ರಹಾಗಾರಗಳನ್ನು ನಿರ್ಮಿಸಲು ಮುಂದಾಗಿಲ್ಲ. ಬದಲಿಗೆ ಇವುಗಳಲ್ಲಿರುವ ಸಂಗ್ರಹವನ್ನು ಮಾರಾಟ ಮಾಡಿ, ಜಾಗವನ್ನು ಬಾಡಿಗೆಗೆ ನೀಡಲು ಮುಂದಾಗಿದೆ.

‘1.3 ಕೋಟಿ ಬ್ಯಾರೆಲ್‌ನಷ್ಟುಖಾಸಗಿ ಕಂಪನಿಗಳಿಗೆ ಬಾಡಿಗೆಗೆ ನೀಡಲು ಸರ್ಕಾರ ಒಪ್ಪಂದ ಮಾಡಿಕೊಂಡಿದೆ. ಅದರಲ್ಲಿ 55 ಲಕ್ಷ ಬ್ಯಾರೆಲ್‌ ಜಾಗವನ್ನು ಈಗಾಗಲೇ ತೆರವು ಮಾಡಲಾಗಿದೆ. ಈಗ ಇನ್ನೂ 50 ಲಕ್ಷ ಬ್ಯಾರೆಲ್‌ನಷ್ಟು ಜಾಗ ತೆರವಾಗಲಿದೆ’ ಎಂದು ಐಎಸ್‌ಪಿಆರ್‌ಎಲ್‌ನ ಅಧಿಕಾರಿಯೊಬ್ಬರು ಹೇಳಿದ್ದಾರೆ.

ವಿಶಾಖಪಟ್ಟಣದ ತುರ್ತು ಬಳಕೆ ಮೀಸಲಿನ ಸಾಮರ್ಥ್ಯ:9.77 ಲಕ್ಷ ಬ್ಯಾರೆಲ್‌
ಮಂಗಳೂರಿನ ತುರ್ತು ಬಳಕೆ ಮೀಸಲಿನ ಸಾಮರ್ಥ್ಯ:1.1 ಕೋಟಿ ಬ್ಯಾರೆಲ್
ಉಡುಪಿಯ ಪಡೂರು ತುರ್ತು ಬಳಕೆ ಮೀಸಲಿನ ಸಾಮರ್ಥ್ಯ:1.83 ಕೋಟಿ ಬ್ಯಾರೆಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.