ಮಹಿಳೆಯರ ವೈಯಕ್ತಿಕ ಆರೋಗ್ಯ ಕಾಯ್ದುಕೊಳ್ಳಲು ಅಗತ್ಯವಾದ ಸ್ಯಾನಿಟರಿ ನ್ಯಾಪ್ಕಿನ್‌ಗಳ ಕೊರತೆ ಕೆಲವು ದಿನಗಳಿಂದ ರಾಜ್ಯದಾದ್ಯಂತ ತೀವ್ರವಾಗಿ ಕಾಡಲಾರಂಭಿಸಿದೆ. ಲಾಕ್‌ಡೌನ್ ಜಾರಿಯಾದ ಬಳಿಕ ಪೂರೈಕೆ ಸಂಪೂರ್ಣವಾಗಿ ಏರು–ಪೇರು ಆಗಿರುವುದೇ ಇದಕ್ಕೆ ಕಾರಣವಾಗಿದೆ. ಬೇರೆ ದಾರಿಯಿಲ್ಲದೆ ಬಹುಪಾಲು ಮಹಿಳೆಯರು ಬಟ್ಟೆ ಬಳಸಬೇಕಾದ ಪ್ರಮೇಯ ಬಂದೊದಗಿದೆ.
ದೇಶವೇನೋ ಲಾಕ್‌ಡೌನ್‌ನಲ್ಲಿದೆ. ಆದರೆ, ಋತುಸ್ರಾವದಂತಹ ನೈಸರ್ಗಿಕ ಪ್ರಕ್ರಿಯೆಗಳಿಗೆ ಎಲ್ಲಿದೆ ತಡೆ? ಇಂತಹ ಸಂದರ್ಭದಲ್ಲಿ ತಮಗೆ ಅಗತ್ಯವಾದ ನ್ಯಾಪ್ಕಿನ್‌ಗಳು ಸಿಗದಿರುವುದು ಮಹಿಳೆಯರನ್ನು ಕಳವಳಕ್ಕೆ ಈಡುಮಾಡಿದೆ. ಪ್ರಕೃತಿ ವಿಕೋಪ ಅಥವಾ ಇಂತಹ ಯಾವುದೇ ಅಸಾಮಾನ್ಯ ದಿನಗಳು ಎದುರಾದಾಗಲೆಲ್ಲ ಮಹಿಳೆಯರ ಅಗತ್ಯಗಳನ್ನು ಸಂಪೂರ್ಣ ಅಲಕ್ಷ್ಯ ಮಾಡಲಾಗುತ್ತದೆ ಎಂಬ ಆಕ್ರೋಶವೂ ವ್ಯಕ್ತವಾಗಿದೆ.
ಬೆಂಗಳೂರಿನ ಹಲವು ಬಡಾವಣೆಗಳ ಅಂಗಡಿಗಳಲ್ಲಾಗಲಿ, ಔಷಧ ಮಳಿಗೆಗಳಲ್ಲಾಗಲಿ ಸ್ಯಾನಿಟರಿ ನ್ಯಾಪ್ಕಿನ್‌ಗಳು ಸಿಗುತ್ತಿಲ್ಲ. ಇನ್ನು ಕೆಲವೆಡೆ ಸ್ಯಾನಿಟರಿ ನ್ಯಾಪ್ಕಿನ್‌ಗಳು ಅಲ್ಪ ಪ್ರಮಾಣದಲ್ಲಿ ಲಭ್ಯವಿದ್ದರೂ ಆಯ್ಕೆಯ ಅವಕಾಶ ಇಲ್ಲ ಎನ್ನುವುದು ಮಹಿಳೆಯರಿಂದ ಸದ್ಯ ಕೇಳಿಬರುತ್ತಿರುವ ಸಾಮಾನ್ಯ ದೂರು. ರಾಜಧಾನಿಯ ಸ್ಥಿತಿ ಇದಾಗಿದ್ದು, ರಾಜ್ಯದ ಇತರ ಭಾಗಗಳಲ್ಲಿ ಮಹಿಳೆಯರು ಇದಕ್ಕಿಂತಲೂ ಹೆಚ್ಚಿನ ಸಮಸ್ಯೆ ಎದುರಿಸಬೇಕಾಗಿದೆ.
‘ನನಗೆ ಲಾರ್ಜ್‌ಸೈಜ್‌ನ ನ್ಯಾಪ್ಕಿನ್ ಬೇಕು. ಆದರೆ, ನಮ್ಮ ಮನೆ ಬಳಿ ಇರೋ ಯಾವುದೇ ಮೆಡಿಕಲ್ ಶಾಪ್‌ನಲ್ಲೂ ಅಂತಹ ನ್ಯಾಪ್ಕಿನ್ ಸಿಗುತ್ತಿಲ್ಲ. ಅಂಗಡಿಯವರು ಸಪ್ಲೈ ಇಲ್ಲ ಎನ್ನುತ್ತಾರೆ. ಬೇರೆ ಬ್ರ್ಯಾಂಡ್‌ನ ನ್ಯಾಪ್ಕಿನ್ ಬಳಸಿದರೆ ಅಲರ್ಜಿಯಾಗುತ್ತದೆ. ಸಿಕ್ಕಿದ್ದನ್ನೇ ಅನಿವಾರ್ಯವಾಗಿ ಬಳಸುವ ಸ್ಥಿತಿ ಈ ಇದೆ’ ಎಂದು ಬೆಂಗಳೂರಿನ ವಿಜಯನಗರದ ಯುವತಿಯೊಬ್ಬರು ಹೇಳುತ್ತಾರೆ.
ಉಲ್ಲಾಳುವಿನಲ್ಲೂ ಇದೇ ಸ್ಥಿತಿ ಇದೆ. ‘ಸುತ್ತಮುತ್ತಲಿನ ಬಡಾವಣೆಯ ಅಂಗಡಿಗಳಿಗೆ ನ್ಯಾಪ್ಕಿನ್ ಪೂರೈಕೆಯಾಗಿಲ್ಲ. ಯಾವ ಅಂಗಡಿಗೆ ಹೋದರೂ ಸ್ಟಾಕ್ ಇಲ್ಲ ಎನ್ನುತ್ತಾರೆ. ಆನ್‌ಲೈನ್‌ನಲ್ಲಿ ತರಿಸಿಕೊಳ್ಳಲು ನೋಡಿದರೆ, ಅಲ್ಲೂ ಲಭ್ಯವಿಲ್ಲ’ ಎನ್ನುತ್ತಾರೆ ಅಲ್ಲಿನ ನಿವಾಸಿ ಸುಷ್ಮಾ.
‘ನಾನು ಈಗ ಎರಡು ತಿಂಗಳಿಗಾಗುವಷ್ಟು ನ್ಯಾಪ್ಕಿನ್ ಖರೀದಿ ಮಾಡಿದ್ದೇನೆ. ಆದರೆ, ಅಂಗಡಿಯವರು, ಸ್ಟಾಕ್ ಖಾಲಿ ಆಗುತ್ತಿದ್ದು, ಮುಂದಿನ ತಿಂಗಳು ಸಿಗುತ್ತದೋ ಇಲ್ಲವೋ ಎನ್ನುತ್ತಿದ್ದರು’ ಎಂದು ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ಪೇಟೆಯ ಗ್ರಾಮವೊಂದರ ಮಹಿಳೆ ವಿವರಿಸುತ್ತಾರೆ.
ಕೋವಿಡ್–19ರ ಹೋರಾಟ ದಲ್ಲಿ ಮುಂದಾಳುಗಳಾಗಿ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆ ಯರೂ ಈ ಸಮಸ್ಯೆ ಎದುರಿಸುತ್ತಿದ್ದಾರೆ. ರಾಜ್ಯದ ಹಲವೆಡೆ ಆಶಾ ಕಾರ್ಯಕರ್ತೆಯರು ವಾರದ ಎಲ್ಲಾ ದಿನ ಮನೆಮನೆಗೆ ಹೋಗಿ, ಸಮೀಕ್ಷೆ ನಡೆಸುತ್ತಿದ್ದಾರೆ. ಕೊರೊನಾವೈರಸ್ ಹರಡುವಿಕೆ ತಡೆಗಟ್ಟುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಈ ಕೆಲಸಗಳಿಗೆ ಅವರೆಲ್ಲಾ ನಡೆದುಕೊಂಡೇ ಹೋಗಬೇಕಾದ ಸ್ಥಿತಿ ಇದೆ.
‘ನಮ್ಮದು ದಿನಾ ಮನೆ ಮನೆಗೆ ಓಡಾಡುವ ಕೆಲಸ. ಈ ಸಂದರ್ಭದಲ್ಲಂತೂ ತುಂಬಾ ಕೆಲಸ ಇದೆ. ಕೆಲವು ಕಡೆ, ನಡೆದುಕೊಂಡೇ ಹೋಗಬೇಕು. ಋತುಸ್ರಾವದ ಸಮಯದಲ್ಲಿ ಹೀಗೆ ಓಡಾಡುವುದು ತ್ರಾಸದಾಯಕ. ಅದರಲ್ಲೂ ನ್ಯಾಪ್ಕಿನ್ಸ್ ಕೊರತೆಯಿಂದ ನಾವು ಮತ್ತೆ ಬಟ್ಟೆಯನ್ನೇ ಉಪಯೋಗಿಸಬೇಕಾಗಿದೆ. ಸರ್ಕಾರ ತಿನ್ನಲು ಎಲ್ಲಾ ನೀಡುತ್ತಿದೆ. ಆದರೆ, ಮಹಿಳೆಯ ಅಗತ್ಯಗಳನ್ನು ಪೂರೈಸುವಲ್ಲಿ ವಿಫಲವಾಗಿದೆ’ ಎಂದು ಶಿವಮೊಗ್ಗ ಜಿಲ್ಲೆಯ ಆಶಾ ಕಾರ್ಯಕರ್ತೆಯೊಬ್ಬರು ಬೇಸರ ವ್ಯಕ್ತಪಡಿಸುತ್ತಾರೆ.
ಲಾಕ್‌ಡೌನ್ ಮಾಡಿರುವುದರಿಂದ ವೈಯಕ್ತಿಕ ಮತ್ತು ಸಾರ್ವಜನಿಕ ವಾಹನ ಸಂಚಾರವನ್ನು ನಿಲ್ಲಿಸಲಾಗಿದೆ. ಆದ್ದರಿಂದ ಗ್ರಾಮೀಣ ಭಾಗದ ಕೆಲವು ಹೆಣ್ಣುಮಕ್ಕಳು, ತಮ್ಮ ತಂದೆ ಅಥವಾ ಸಹೋದರರ ಬಳಿ ನ್ಯಾಪ್ಕಿನ್ ತಂದುಕೊಂಡಿ ಎಂದು ಕೇಳಲೂ ಆಗದೆ, ತಾವೂ ಹೋಗಲಾಗದೆ, ಬಟ್ಟೆಯನ್ನೇ ಉಪಯೋಗಿಸಲು ಪ್ರಾರಂಭಿಸಿದ್ದಾರೆ.
ಚಿಂತನೆ ನಡೆಸಲು ಸಕಾಲ
‘ಸ್ವಚ್ಛವಾಗಿ ಇಟ್ಟುಕೊಳ್ಳುವುದಾದರೆ ನ್ಯಾಪ್ಕಿನ್‌ಗಳಿಗಿಂತ ಬಟ್ಟೆಗಳೇ ಉತ್ತಮ. ನಮ್ಮ ಮಹಿಳೆಯರಿಗೆ ಬಟ್ಟೆ ಉಪಯೋಗಿಸುವಾಗ ವಹಿಸಬೇಕಾದ ಸ್ವಚ್ಛತೆಯ ಕುರಿತು ತಿಳಿದಿಲ್ಲ. ನ್ಯಾಪ್ಕಿನ್ ಬಳಸುವವರಿಗೆ ಅದರ ವಿಲೇವಾರಿಯ ತಿಳಿವಳಿಕೆಯೂ ಇಲ್ಲ. ಇದೇ ಮುಖ್ಯ ಸಮಸ್ಯೆ’ ಎಂದುಅಭಿಪ್ರಾಯಪಡುತ್ತಾರೆ ವೈದ್ಯೆ ಎಚ್.ಎಸ್.ಅನುಪಮ.
‘ನ್ಯಾಪ್ಕಿನ್‌ಗಳು ಪರಿಸರಕ್ಕೆ ಪೂರಕವಲ್ಲ. ಆದ್ದರಿಂದ ಪರಿಸರಸ್ನೇಹಿ ಆಗಿರುವ ಮಾರ್ಗೋಪಾಯಗಳನ್ನು ನಾವು ಕಂಡುಕೊಳ್ಳ ಬೇಕಿದೆ. ಕೊರೊನಾ ಸಂಕಷ್ಟದ ಈ ಸಂದರ್ಭ ಅದಕ್ಕೆ ಸಕಾಲ’ ಎಂದು ಸಲಹೆ ನೀಡುತ್ತಾರೆ.
‘ಕಪ್‌ಗಳ ಬಳಕೆಯನ್ನು ಉತ್ತೇಜಿಸಲೂ ಈ ಸಂದರ್ಭವನ್ನು ಬಳಸಿಕೊಳ್ಳಬಹುದು. ನಮ್ಮ ಸಂಘಟನೆಯ ಮೂಲಕ ಸರ್ಕಾರಕ್ಕೆ ಕಪ್‌ಗಳ ಬಳಕೆಯ ಕುರಿತು ಹಲವಾರು ಬಾರಿ ಹಕ್ಕೊತ್ತಾಯ ಮಾಡಿದ್ದೇವೆ. ಆದರೆ, ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ. ಎಲ್ಲ ಮೆಡಿಕಲ್ ಶಾಪ್‌ಗಳಲ್ಲಿ ಕಪ್‌ಗಳು ಸಿಗುವಂತಾಗಬೇಕು. ಸದ್ಯಕ್ಕೆ ಆನ್‌ಲೈನ್‌ನಲ್ಲಿ ಮಾತ್ರ ಸಿಗುತ್ತಿದೆ’ ಎಂದು ಹೇಳುತ್ತಾರೆ.
ಕೊರತೆಗೆ ಕಾರಣಗಳು
* ಮಾರ್ಚ್ 24ರಂದು ಲಾಕ್‌ಡೌನ್ ಜಾರಿಯಾಯಿತು. ಅಗತ್ಯವಸ್ತುಗಳ ಪಟ್ಟಿಯಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ಇರದಿದ್ದ ಕಾರಣ, ಅವುಗಳ ತಯಾರಿಕೆ ಮತ್ತು ಸಾಗಾಟ ಸ್ಥಗಿತಗೊಂಡಿತು
* ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾದ ಬಳಿಕ ಮಾರ್ಚ್ 29ರಂದು ಕೇಂದ್ರ ಸರ್ಕಾರ ಅಗತ್ಯವಸ್ತುಗಳ ಪಟ್ಟಿಯನ್ನು ಪರಿಷ್ಕರಿಸಿ, ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ಸೇರಿಸಿತು. ಆದರೆ, ಅಷ್ಟರಲ್ಲಿ ತಯಾರಿಕೆ ಸ್ಥಗಿತಗೊಂಡಿದ್ದ ಕಾರಣ, ತಯಾರಿಕಾ ಘಟಕಗಳು ಕಾರ್ಮಿಕರ ಕೊರತೆ ಎದುರಿಸಿದವು. ಹೀಗಾಗಿ ಪೂರ್ಣಪ್ರಮಾಣದಲ್ಲಿ ತಯಾರಿಕೆ ಆರಂಭವಾಗಿಲ್ಲ
* ಲಾಕ್‌ಡೌನ್‌ಗೂ ಮೊದಲೇ ಗೋದಾಮುಗಳಿಂದ ಹೊರಟಿದ್ದ ಟ್ರಕ್‌ಗಳಲ್ಲಿ ಶೇ 40ರಷ್ಟು ಟ್ರಕ್‌ಗಳು ಲಾಕ್‌ಡೌನ್‌ನಲ್ಲಿ ಸಿಲುಕಿವೆ. ಹೀಗಾಗಿ ಅಂಗಡಿಗಳಿಗೆ, ಔಷಧ ಅಂಗಡಿಗಳಿಗೆ ಅವುಗಳು ಪೂರೈಕೆಯಾಗಿಲ್ಲ
* ಲಾಕ್‌ಡೌನ್ ಆರಂಭವಾಗುತ್ತಿದ್ದಂತೆಯೇ ಕೆಲವರು 2–3 ತಿಂಗಳಿಗಾಗುವಷ್ಟು ನ್ಯಾಪ್ಕಿನ್‌ಗಳನ್ನು ಒಮ್ಮೆಗೇ ಖರೀದಿಸಿದ್ದಾರೆ. ಹೀಗಾಗಿ ನಂತರದ ದಿನಗಳಲ್ಲಿ ನ್ಯಾಪ್ಕಿನ್ ದೊರೆಯುತ್ತಿಲ್ಲ
ಬಟ್ಟೆ ಬಳಕೆಯ ಅಪಾಯಗಳು
ಬಟ್ಟೆ ಬಳಕೆಯಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳು ಆಗುತ್ತವೆ ಎನ್ನುತ್ತಾರೆ ಬೆಂಗಳೂರಿನ ಸ್ತ್ರೀ ಜನನೇಂದ್ರೀಯ ಕ್ಯಾನ್ಸರ್ ತಜ್ಞ ಡಾ. ಎನ್.ರೂಪೇಶ್. ಅವರು ಕೊಡುವ ಕೆಲವು ಕಾರಣಗಳು ಹೀಗಿವೆ:
1. ಋತುಸ್ರಾವದಂತಹ ವಿಷಯಗಳಲ್ಲಿ ಸ್ವಚ್ಛತೆಯೇ ಮುಖ್ಯವಾದುದು. ಬ್ಯಾಕ್ಟೀರಿಯಾ ಹರಡಲು ರಕ್ತ ಉತ್ತಮ ಮಾಧ್ಯಮ
2. ನ್ಯಾಪ್ಕಿನ್ ಬದಲು ಬಟ್ಟೆ ಬಳಸುವುದರಿಂದ ಆರೋಗ್ಯ ಸಂಬಂಧಿ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಒಂದೇ ಬಟ್ಟೆಯನ್ನು ಮತ್ತೆ ಮತ್ತೆ ಬಳಸುವುದರಿಂದ ಟಾಕ್ಸಿಕ್ ಶಾಕ್ ಸಿಂಡ್ರೋಮ್ ಬರುತ್ತದೆ
3.ಕೆಲವರಿಗೆ ಬಿಳಿ ಮುಟ್ಟಾಗುತ್ತದೆ. ಜ್ವರ ಬರುತ್ತದೆ, ಜನನೇಂದ್ರೀಯ ಸೋಂಕು ಉಂಟಾಗುತ್ತದೆ. ಅಪರೂಪದ ಪ್ರಕರಣಗಳಲ್ಲಿ ಪ್ರಾಣಾಪಾಯದ ಸಂಭವವೂ ಇರುತ್ತದೆ
4. ಬಟ್ಟೆ ಬಳಸುವುದಾದರೂ ಶುಚಿತ್ವದ ಬಗ್ಗೆ ಗಮನಹರಿಸಬೇಕು. ಬಿಸಿ ನೀರಿನಲ್ಲಿ ತೊಳೆದು, ಬಿಸಿಲಿನಲ್ಲಿ ಒಣಗಿಸಿ ನಂತರ, ಬಳಸಬಹುದು. ಇದು, ತಾತ್ಕಾಲಿಕವಷ್ಟೆ. ಬಟ್ಟೆಬಳಕೆ ಅಷ್ಟು ಸುರಕ್ಷಿತ ಮಾರ್ಗವಲ್ಲ
5. ಕಪ್‌ಗಳ ಬಳಕೆ ಬಗ್ಗೆ ಹಲವರಿಗೆ ತಿಳಿದಿಲ್ಲ. ಇದು ಹೆಚ್ಚು ಸೂಕ್ತವಾದುದು. ಇದರ ಬಳಕೆಯನ್ನು ಉತ್ತೇಜಿಸಿ, ಸಣ್ಣ ಕೈಪಿಡಿಯೊಂದಿಗೆ ಜನರಿಗೆ ತಲುಪಿಸುವ ಕೆಲಸವನ್ನು ಸರ್ಕಾರ ಮಾಡಬೇಕು
‘ತಯಾರಿಕೆ ಆರಂಭ ಕಷ್ಟ’
‘ಅಗತ್ಯ ವಸ್ತುಗಳ ಪಟ್ಟಿಯಲ್ಲಿ ನ್ಯಾಪ್ಕಿನ್‌ಗಳನ್ನು ಕೈಬಿಟ್ಟಿದ್ದ ಕಾರಣ, ತಯಾರಿಕೆ ಮತ್ತು ಸಾಗಣೆ ನಿಂತಿದ್ದವು. ಈಗ ಅಗತ್ಯ ವಸ್ತುಗಳ ಪಟ್ಟಿಗೆ ಸೇರಿಸಲಾಗಿದೆ. ಆದರೂ, ಬೇಡಿಕೆಗೆ ಅನುಗುಣವಾಗಿ ತಯಾರಿಕೆ ಸಾಧ್ಯವಾಗುವುದಿಲ್ಲ. ಇದಕ್ಕೆಲ್ಲಾ ತುಂಬ ಸಮಯ ಬೇಕಾಗುತ್ತದೆ’ ಎಂದು ಫೆಮಿನೈನ್ ಅಂಡ್ ಇನ್‌ಫೆಂಟ್ ಹೈಜೀನ್ ಅಸೋಸಿಯೇಷನ್ ಆಫ್ ಇಂಡಿಯಾದ ರಾಜೇಶ್ ಶಾ ಅಭಿಪ್ರಾಯಪಡುತ್ತಾರೆ. ‘ಪುನಃ ಘಟಕಗಳನ್ನು ಪ್ರಾರಂಭ ಮಾಡಲು ಹಲವು ದಿನಗಳೇ ಬೇಕಾಗುತ್ತವೆ. ಇದಕ್ಕೆ ರಾಜ್ಯಮಟ್ಟದ, ಜಿಲ್ಲಾಮಟ್ಟದ ಪ್ರಾಧಿಕಾರ, ನಗರಾಡಳಿತ ಮತ್ತು ಸ್ಥಳೀಯ ಸಂಸ್ಥೆಗಳ ಅನುಮತಿ ಪಡೆಯಬೇಕು. ಜತೆಗೆ, ಸ್ಥಳೀಯ ಪೊಲೀಸರ ಅನುಮತಿಯೂ ಬೇಕು. ಈ ಬಗ್ಗೆ ಸ್ಪಷ್ಟ ನಿರ್ದೇಶನ ಇಲ್ಲ. ಈ ಕಾರಣದಿಂದ ಹಲವೆಡೆ ಅನುಮತಿ ದೊರೆತಿಲ್ಲ. ಲಾಕ್‌ಡೌನ್ ಘೋಷಣೆಯಾಗುತ್ತಿದ್ದಂತೆಯೇ ಬಹುತೇಕ ಕಾರ್ಮಿಕರು ತಮ್ಮ ಊರುಗಳಿಗೆ ಮರಳಿದ್ದಾರೆ. ಹೀಗಾಗಿ ಅನುಮತಿ ದೊರೆತಿದ್ದರೂ ತಯಾರಿಕೆ ಆರಂಭಿಸಲು ಸಾಧ್ಯವಾಗಿಲ್ಲ’ ಎಂದು ಅವರು ವಿವರಿಸುತ್ತಾರೆ.
‘ಕಾರ್ಮಿಕರು ಲಭ್ಯವಿದ್ದರೂ, ಅವರನ್ನು ತಯಾರಿಕಾ ಘಟಕಗಳಿಗೆ ಕರೆತರಲು ಸಾಧ್ಯವಾಗುತ್ತಿಲ್ಲ. ಇದರಿಂದ ಬೇಡಿಕೆಗೆ ತಕ್ಕಂತೆ ತಯಾರಿಕೆ ಸಾಧ್ಯವಾಗುವುದಿಲ್ಲ’ ಎಂದು ಅವರು ಹೇಳುತ್ತಾರೆ.
**
ನಾವು ದಿನಸಿಯನ್ನು ಮಾತ್ರಮನೆ–ಮನೆಗೆ ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ಆದರೆ, ಎಲ್ಲ ರಾಜ್ಯ ಸರ್ಕಾರಗಳು ಸ್ಯಾನಿಟರಿ ನ್ಯಾಪ್ಕಿನ್ ಅನ್ನೂ ಮನೆ–ಮನೆಗೆ ವಿತರಿಸುವ ಕೆಲಸ ಮಾಡಬೇಕು.
-ಬಿಬಿಎಂಪಿ ಉದ್ಯೋಗಿ
**
33.6 ಕೋಟಿ:ಭಾರತದಲ್ಲಿ ಋತುಸ್ರಾವ ವಯೋಮಾನದ ಮಹಿಳೆಯರ ಸಂಖ್ಯೆ
36 %:ನ್ಯಾಪ್ಕಿನ್ ಬಳಸುವವರ ಪ್ರಮಾಣ
12.1 ಕೋಟಿ:ನ್ಯಾಪ್ಕಿನ್ ಬಳಸುತ್ತಿರುವ ಮಹಿಳೆಯರ ಸಂಖ್ಯೆ
ಆಧಾರ: ಮೆನುಸ್ಟ್ರಿಯಲ್ ಹೈಜಿನ್ ಅಲಯನ್ಸ್ ಆಫ್ ಇಂಡಿಯಾ ಸಮೀಕ್ಷೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.