ಸುನಿತಾ ವಿಲಿಯಮ್ಸ್
ಬುಧವಾರ ನಸುಕು 3.27ಕ್ಕೆ ಭಾರತೀಯರು ಸೇರಿದಂತೆ ಜಗತ್ತಿನ ಕೋಟ್ಯಂತರ ಖಗೋಳ ಆಸಕ್ತರ ನಿರೀಕ್ಷೆ ಫಲಿಸಿತು. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್) ತ್ರಿಶಂಕು ಸ್ಥಿತಿಯಲ್ಲಿದ್ದ ಭಾರತ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಹಾಗೂ ಮತ್ತೊಬ್ಬ ಗಗನಯಾತ್ರಿ ಬುಚ್ ವಿಲ್ಮೋರ್ ಅವರು ಸುರಕ್ಷಿತವಾಗಿ ಭೂಮಿಗೆ ಮರಳುವುದರೊಂದಿಗೆ ಒಂಬತ್ತೂವರೆ ತಿಂಗಳ ‘ಅಂತರಿಕ್ಷ ವಾಸ’ದಿಂದ ಮುಕ್ತರಾಗಿದ್ದಾರೆ.
ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ಕೋಶದ (ಸ್ಪೇಸ್ ಕ್ಯಾಪ್ಸೂಲ್) ಮಾನವ ಸಹಿತ ಪರೀಕ್ಷಾರ್ಥ ಪ್ರಯಾಣದ ಭಾಗವಾಗಿ ಎಂಟು ದಿನಗಳ ಕೆಲಸಕ್ಕೆ ಐಎಸ್‌ಎಸ್‌ಗೆ ತೆರಳಿದ್ದ ಸುನಿತಾ ಮತ್ತು ಬುಚ್ ಅವರು ಕೋಶದಲ್ಲಿ ಕಂಡು ಬಂದ ತಾಂತ್ರಿಕ ದೋಷದ ಕಾರಣಕ್ಕೆ ಬಾಹ್ಯಾಕಾಶ ನಿಲ್ದಾಣದಲ್ಲೇ ಉಳಿಯಬೇಕಾಯಿತು. ಅವರನ್ನು ವಾಪಸ್ ಕರೆತರುವ ವಿಚಾರದಲ್ಲಿ ನಾಸಾ ತಕ್ಷಣಕ್ಕೆ ನಿರ್ಧಾರ ಕೈಗೊಳ್ಳದೇ ಇದ್ದುದರಿಂದ ಬಾಹ್ಯಾಕಾಶದಲ್ಲಿ ಅವರ ಸುರಕ್ಷತೆ ಮತ್ತು ಅವರು ಭೂಮಿಗೆ ವಾಪಸ್ ಮರಳುವ ಬಗ್ಗೆ ಅನಿಶ್ಚಿತತೆ ಉಂಟಾಗಿತ್ತು. ಇದು ಜಾಗತಿಕ ಮಟ್ಟದಲ್ಲಿ ಖಗೋಳ ಆಸಕ್ತರಲ್ಲಿ, ಅದರಲ್ಲೂ ವಿಶೇಷವಾಗಿ ಭಾರತೀಯರಲ್ಲಿ ಆತಂಕ ಉಂಟು ಮಾಡಿತ್ತು. ಗಗನಯಾನಿಯಾಗಿ ಹೆಸರು ಮಾಡಿದ್ದ ಭಾರತ ಮೂಲದವರೇ ಆದ ಕಲ್ಪನಾ ಚಾವ್ಲಾ ಅವರು ಭೂಮಿಗೆ ಮರಳುವ ಹಾದಿಯಲ್ಲಿ ಮೃತಪಟ್ಟಿದ್ದು ಭಾರತೀಯರು ಸುನಿತಾ ಬಗ್ಗೆ ಕಳವಳ ಪಡುವುದಕ್ಕೆ ಕಾರಣ.
ಆ ಆತಂಕ ಈಗ ದೂರವಾಗಿದೆ. ಸುನಿತಾ ಅವರ ತಂದೆಯ ಹುಟ್ಟೂರಾಗಿರುವ ಗುಜರಾತ್‌ನ ಝುಲಾಸನ್‌ನ ಗ್ರಾಮಸ್ಥರು ಬುಧವಾರ ಮಾಡಿರುವ ಸಂಭ್ರಮಾಚರಣೆಯೇ ಇದಕ್ಕೆ ಸಾಕ್ಷಿ.
ಇಬ್ಬರ ಆಗಮನವು ಸಾಗರದಲ್ಲಿದ್ದ ಡಾಲ್ಫಿನ್‌ಗಳಿಗೂ ಖುಷಿ ತಂದಿರಬೇಕು. ‘ಡ್ರ್ಯಾಗನ್’ ಬಾಹ್ಯಾಕಾಶ ಕೋಶ ನೀರನ್ನು ಸ್ಪರ್ಶಿಸಿದ ನಂತರ ಕೋಶದ ಸುತ್ತಲೂ ಡಾಲ್ಫಿನ್‌ಗಳು ಜಿಗಿಯುತ್ತಿದ್ದವು.
ಐಎಸ್‌ಎಸ್ ವಾಸ ಸುನಿತಾ ಮತ್ತು ಬುಚ್ ಅವರಿಗೆ ಹೊಸದೇನಲ್ಲ. ಇಬ್ಬರೂ ಈ ಹಿಂದೆ ಅಲ್ಲಿಗೆ ಹೋದವರೆ. ತಿಂಗಳುಗಟ್ಟಲೆ ಇದ್ದವರೆ. ಆದರೆ, ಈ ಬಾರಿ ಅವರು ಐಎಸ್ಎಸ್‌ನಲ್ಲಿ ಎಂಟು ದಿನಗಳನ್ನು ಕಳೆಯುವುದಕ್ಕೆ ಮಾನಸಿಕವಾಗಿ ಸಜ್ಜಾಗಿದ್ದರು. ಆದರೆ, ನಂತರ ನಡೆದ ಬೆಳವಣಿಗೆಗಳಿಂದಾಗಿ ಅವರು ವಾಪಸ್ ಆಗುವ ಸಮಯ ವಿಸ್ತರಿಸುತ್ತಲೇ ಇತ್ತು. ಹೆಚ್ಚು ಗುರುತ್ವಾಕರ್ಷಣೆ ಶಕ್ತಿ ಇಲ್ಲದ ವಾತಾವರಣದಲ್ಲಿ ವಾಸ ಸುಲಭವಲ್ಲ. ಇಬ್ಬರೂ ತರಬೇತಿ ಪಡೆದವರಾದರೂ ದಿಢೀರ್ ಎದುರಾದ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವುದು ಬಹಳ ಮುಖ್ಯ. ಈ ದೀರ್ಘ ಅವಧಿಯಲ್ಲಿ ಇಬ್ಬರೂ ತೋರಿದ ಸಂಯಮ, ಪ್ರದರ್ಶಿಸಿದ ಧೈರ್ಯ, ಛಲ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಗುರುತ್ವಾಕರ್ಷಣೆ, ವಾತಾವರಣದ ಒತ್ತಡ ಇಲ್ಲದ, ಭೂಮಿ ಮೇಲೆ ಇರುವಂಥ ಊಟ, ನೀರು ದುರ್ಲಭವಾಗಿರುವ ಐಎಸ್‌ಎಸ್‌ನಲ್ಲಿ ಒಂಬತ್ತು ತಿಂಗಳು ಬದುಕುವುದು ಸುಲಭದ ಮಾತಲ್ಲ.
ಐಎಸ್‌ಎಸ್ ಭೂಮಿಯ ಸುತ್ತ 24 ಗಂಟೆಯಲ್ಲಿ 16 ಬಾರಿ (90 ನಿಮಿಷಕ್ಕೊಮ್ಮೆ) ಸುತ್ತುತ್ತದೆ. ಅಂದರೆ, 24 ಗಂಟೆಯಲ್ಲಿ ಐಎಸ್‌ಎಸ್‌ನಲ್ಲಿ ಇರುವವರು 16 ಸೂರ್ಯಾಸ್ತ, 16 ಸೂರ್ಯೋದಯಗಳನ್ನು ನೋಡುತ್ತಾರೆ. ಆದರೂ ಗಗನಯಾತ್ರಿಗಳು 24 ಗಂಟೆಯ ಲೆಕ್ಕದಲ್ಲೇ ತಮ್ಮ ದಿನಚರಿ ಅಳವಡಿಸಿಕೊಂಡಿರುತ್ತಾರೆ
ಗಗನಯಾತ್ರಿಗಳು ಧಾನ್ಯಗಳು, ಮೊಟ್ಟೆ, ಓಟ್ಸ್, ಮಾಂಸ, ಹಾಲಿನ ಪುಡಿ, ಫಿಜ್ಜಾ ಇತ್ಯಾದಿ ಸೇವಿಸುತ್ತಾರೆ. ಹೆಚ್ಚು ಕಾಲ ಕೆಡದಿರಲು ಆಹಾರ ಪದಾರ್ಥಗಳಲ್ಲಿನ ನೀರಿನ ಅಂಶವನ್ನು ತೆಗೆದು ಶೇಖರಿಸಿಟ್ಟುಕೊಂಡಿರುತ್ತಾರೆ
ಗಗನಯಾತ್ರಿಗಳು ತಮ್ಮ ಬೆವರು ಮತ್ತು ಮೂತ್ರವನ್ನು ಸಂಸ್ಕರಿಸಿ, ಶುದ್ಧೀಕರಿಸಿ, ಕುಡಿಯಲು ಮತ್ತು ಇತರ ಕೆಲಸಗಳಿಗೆ ಬಳಸುತ್ತಾರೆ. ಶೌಚಾಲಯದ ಸೌಲಭ್ಯವೂ ಇರುತ್ತದೆ. ತೇವದ ಬಟ್ಟೆಯಿಂದ ಮೈ ಒರೆಸಿಕೊಳ್ಳುವುದೇ ಅಲ್ಲಿ ಸ್ನಾನ
ಗುರುತ್ವಾಕರ್ಷಣೆ ಇಲ್ಲದಿರುವುದರಿಂದ ಅಡುಗೆ ಸಿದ್ಧಪಡಿಸುವುದು, ಊಟ ಮಾಡುವುದು, ನೀರು ಕುಡಿಯುವುದು ಎಲ್ಲವೂ ತ್ರಾಸದ ಕೆಲಸ
ಹಲ್ಲು ಉಜ್ಜಿ ಕೊನೆಯಲ್ಲಿ ಅದನ್ನು ನುಂಗಿಬಿಡುತ್ತಾರೆ. ಅಂತರಿಕ್ಷದಲ್ಲಿಯೂ ವಾರದ ದಿನ, ವಾರಾಂತ್ಯ ಇರುತ್ತದೆ
ವರ್ಷದಲ್ಲಿ ಹಲವು ಬಾರಿ ಸರಕು ಸಾಗಣೆಯ ನೌಕೆ ಐಎಸ್ಎಸ್ ಬಳಿ ತೆರಳುತ್ತದೆ. ಅದರಲ್ಲಿ ತಾಜಾ ಹಣ್ಣು ಮತ್ತಿತರ ಆಹಾರ ಪದಾರ್ಥಗಳನ್ನು ಒಯ್ಯಲಾಗುತ್ತದೆ
ಗಗನಯಾತ್ರಿಗಳು ನಿದ್ದೆ ಮಾಡಲು ಟೆಲಿಫೋನ್ ಬೂತ್ ರೀತಿಯ ಒಂದು ಕಂಪಾರ್ಟ್‌ಮೆಂಟ್ ಇರುತ್ತದೆ. ಅದರಲ್ಲಿರುವ ಸ್ಲೀಪಿಂಗ್ ಬ್ಯಾಗ್ಸ್‌ನಲ್ಲಿ ಮಲಗುತ್ತಾರೆ
ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಾರೆ
ಅಲ್ಲಿನ ಗುರುತ್ವರಹಿತ ವಾತಾವರಣದಲ್ಲಿ ಗಗನಯಾತ್ರಿಗಳ ದೇಹ ಮತ್ತು ಮನಸ್ಸು ಅನೇಕ ಬಗೆಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಿಕಿರಣಕ್ಕೆ ತೆರೆದುಕೊಳ್ಳುತ್ತಾರೆ. ಇದು ಭವಿಷ್ಯದಲ್ಲಿ ಕ್ಯಾನ್ಸರ್‌ನಂತಹ ರೋಗಕ್ಕೂ ಕಾರಣವಾಗಬಹುದು ಜತೆಗೆ, ಮೂಳೆ ಸಾಂದ್ರತೆ ಕಡಿಮೆ ಆಗುವುದು, ಕಣ್ಣಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ದೀರ್ಘಾವಧಿ ಬಾಹ್ಯಾಕಾಶದಲ್ಲಿದ್ದು ಭೂಮಿಗೆ ಮರಳಿದ ನಂತರ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದು ಗಗನಯಾತ್ರಿಗಳಿಗೆ ಕಷ್ಟವಾಗುತ್ತದೆ. ಭೂಮಿಯ ಮೇಲಿನ ಸಹಜ ಬದುಕಿಗೆ ಹೊಂದಿಕೊಳ್ಳಲು 45 ದಿನಗಳ ಕಾಲ ಹಲವು ರೀತಿಯ ಪುನಃಶ್ಚೇತನ ಚಿಕಿತ್ಸೆ ಮತ್ತು ತರಬೇತಿ ನೀಡಲಾಗುತ್ತದೆ. ದೈಹಿಕವಾಗಿ ಹಾಗೂ ಮಾನಸಿಕವಾಗಿ ಅವರು ಬಳಲಿರುತ್ತಾರೆ. ನಡೆಯುವುದು, ಸ್ನಾಯುಗಳ ಬಲವರ್ಧನೆ, ಮೂಳೆ ಚೇತರಿಕೆ, ಹೃದಯದ ಆರೋಗ್ಯ ಉತ್ತಮಪಡಿಸಿಕೊಳ್ಳಲು ಮೂರು ಹಂತಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ.
ಭೂಮಿಗೆ ಮರಳಿದ ಸುನಿತಾ ಮತ್ತು ಇತರ ಗಗನಯಾತ್ರಿಗಳು ಮೇಲ್ನೋಟಕ್ಕೆ ಆರೋಗ್ಯವಾಗಿ ಇದ್ದಂತೆ ಕಂಡರೂ, ಅವರೆಲ್ಲರೂ ಇನ್ನೂ ಕೆಲವು ದಿನ ವೈದ್ಯಕೀಯ ಪರೀಕ್ಷೆಗಳು ಮತ್ತು ಚಿಕಿತ್ಸೆಗೆ ಒಳಪಡಲಿದ್ದಾರೆ.
ಸಾಧಕಿ ಸುನಿತಾ
59 ವರ್ಷದ ಸುನಿತಾ ವಿಲಿಯಮ್ಸ್ ಅವರು ಗಗನಯಾನ ಕ್ಷೇತ್ರದ ಬಹುದೊಡ್ಡ ಸಾಧಕಿ. ಅತ್ಯಂತ ಅನುಭವಿ ಗಗನಯಾತ್ರಿ. ಆಕೆ ಭಾರತ ಮೂಲದವರು ಎನ್ನುವುದು ಭಾರತೀಯರ ಹೆಮ್ಮೆ. ಐಎಸ್‌ಎಸ್‌ಗೆ ತೆರಳಿದ ಭಾರತ ಮೂಲದ ಎರಡನೇ ಮಹಿಳಾ ಗಗನಯಾತ್ರಿ ಅವರು. ಕಲ್ಪನಾ ಚಾವ್ಲಾ ಮೊದಲಿನವರು.
ಸುನಿತಾ ತಂದೆ ಡಾ.ದೀಪಕ್ ಅವರು ಗುಜರಾತ್‌ನ ಝುಲಾಸನ್ ಜಿಲ್ಲೆಯವರು. 1965ರ ಸೆ.19ರಂದು ಅಮೆರಿಕದ ಒಹಿಯೊದಲ್ಲಿ ಜನಿಸಿದ್ದ ಸುನಿತಾ, ಅಮೆರಿಕ ನೌಕಾ ಪಡೆಯಲ್ಲಿ ಕ್ಯಾಪ್ಟನ್ ಆಗಿದ್ದವರು. 1998ರಲ್ಲಿ ನಾಸಾವು ಅವರನ್ನು ಗಗನಯಾತ್ರಿಯನ್ನಾಗಿ ಆಯ್ಕೆ ಮಾಡಿತ್ತು.
ಸುನಿತಾ ಐಎಸ್‌ಎಸ್‌ಗೆ ಹೋಗಿ ಬಂದಿರುವುದು ಇದು ಮೂರನೇ ಬಾರಿ
ಮೊದಲ ಬಾರಿ ಹೋಗಿದ್ದಾಗ ನಾಲ್ಕು ಬಾರಿ ಬಾಹ್ಯಾಕಾಶ ನಡಿಗೆ ಮಾಡಿ ಅತಿ ಹೆಚ್ಚು ಬಾಹ್ಯಾಕಾಶ ನಡಿಗೆ ಕೈಗೊಂಡ ಮಹಿಳಾ ಗಗನಯಾನಿ ಎಂದು ದಾಖಲೆ ಬರೆದಿದ್ದರು. ಎರಡು ಅವಧಿಯಲ್ಲಿ ಅವರು ಒಟ್ಟು 322 ದಿನಗಳನ್ನು ಬಾಹ್ಯಾಕಾಶ ನಿಲ್ದಾಣದಲ್ಲಿ ಕಳೆದಿದ್ದರು
ಈವರೆಗೆ ಅವರು ಒಟ್ಟು 608 ದಿನಗಳನ್ನು ಐಎಸ್‌ಎಸ್‌ನಲ್ಲಿ ಕಳೆದಿದ್ದಾರೆ. 62 ಗಂಟೆ 6 ನಿಮಿಷಗಳ ಬಾಹ್ಯಾಕಾಶ ನಡಿಗೆ ಕೈಗೊಂಡು ನಾಸಾದ ಅಧ್ಯಯನಕ್ಕೆ ನೆರವಾಗಿದ್ದಾರೆ. ಆ ಮೂಲಕ ಅತಿ ಹೆಚ್ಚು ಅವಧಿಗೆ ಬಾಹ್ಯಾಕಾಶ ನಡಿಗೆ ಕೈಗೊಂಡ ಮಹಿಳೆ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ
ಭೂಮಿಯಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಇರುವ ದೂರ 420 ಕಿ.ಮೀ. ಸುನಿತಾ ವಿಲಿಯಮ್ಸ್ ಮತ್ತು ಇತರ ಮೂವರು ಗಗನಯಾನಿಗಳಿದ್ದ ‘ಡ್ರ್ಯಾಗನ್’ ಬಾಹ್ಯಾಕಾಶ ಕೋಶವು ಭೂಮಿ ತಲುಪಲು 17 ಗಂಟೆಗಳನ್ನು ತೆಗೆದುಕೊಂಡಿದೆ. ಕಳೆದ ವರ್ಷ ರಷ್ಯಾದ ಸೋಯುಜ್ ಬಾಹ್ಯಾಕಾಶ ಕೋಶವು ಕೇವಲ 3.5 ಗಂಟೆಗಳಲ್ಲಿ ಮೂವರು ಗಗನಯಾನಿಗಳನ್ನು ಭೂಮಿಗೆ ಕರೆತಂದಿತ್ತು. ಆದರೆ, ಇದು ಹೆಚ್ಚು ಅಪಾಯಕಾರಿ.
ಗಗನಯಾನಿಗಳ ಮತ್ತು ಬಾಹ್ಯಾಕಾಶ ಕೋಶದ ಸುರಕ್ಷತೆ ಮತ್ತು ನಿಗದಿತ ಸ್ಥಳದಲ್ಲೇ ಬಾಹ್ಯಾಕಾಶ ಕೋಶವನ್ನು ಇಳಿಸುವ ಉದ್ದೇಶದಿಂದ ನಾಸಾ ಮತ್ತು ‘ಸ್ಪೇಸ್ ಎಕ್ಸ್’ ಅತ್ಯಂತ ವ್ಯವಸ್ಥಿತವಾಗಿ ಹಂತ ಹಂತವಾಗಿ ‘ಡ್ರ್ಯಾಗನ್’ ಬಾಹ್ಯಾಕಾಶ ಕೋಶವು ಭೂಮಿಗೆ ತಲುಪುವಂತೆ ನೋಡಿಕೊಂಡವು. ಈ ಕಾರಣಕ್ಕೆ ಡ್ರ್ಯಾಗನ್ 17 ಗಂಟೆಗಳನ್ನು ತೆಗೆದುಕೊಂಡಿದೆ.
ಐಎಸ್‌ಎಸ್‌ನಲ್ಲಿ ಕೆಲಸ ನಿರತ ಸುನಿತಾ ಮತ್ತು ಬುಚ್
1. ಐಎಸ್ಎಸ್ ಭೂಮಿಗೆ ಪ್ರತಿಗಂಟೆಗೆ 28 ಸಾವಿರ ಕಿ.ಮೀ. ವೇಗದಲ್ಲಿ ಸುತ್ತುತ್ತಿರುತ್ತದೆ. ಅದರಿಂದ ಬೇರ್ಪಟ್ಟ ಡ್ರ್ಯಾಗನ್ ಬಾಹ್ಯಾಕಾಶ ಕೋಶವು ಅಷ್ಟೇ ವೇಗದಲ್ಲಿ ಭೂಮಿಯನ್ನು ಸುತ್ತುತ್ತಾ, ನಂತರ ಆ ಕಕ್ಷೆಯಿಂದ ಜಾರಿ (ಡಿಆರ್ಬಿಟ್) ಭೂಮಿಯತ್ತ ಪ್ರಯಾಣಿಸುತ್ತದೆ. ತನ್ನ ಕಕ್ಷೆಯಿಂದ ಹೊರಬರುವುದಕ್ಕಾಗಿ ಕೋಶದಲ್ಲಿರುವ ಎಂಜಿನ್ ಚಾಲೂ ಮಾಡಲಾಗುತ್ತದೆ. ನಿಗದಿತ ಜಾಗದಲ್ಲೇ ಇಳಿಯುವುದಕ್ಕಾಗಿ ಕೋಶವನ್ನು ನಿರ್ದಿಷ್ಟ ಪಥದಲ್ಲಿ ಸಾಗುವಂತೆ ಮಾಡಲಾಗುತ್ತದೆ
2. ಕಕ್ಷೆಯಿಂದ ಜಾರಿದ ಕೋಶ ನಂತರ ಭೂಮಿಯ ವಾತಾವರಣ ಪ್ರವೇಶಿಸುತ್ತದೆ. ಈ ವೇಳೆ ಕೋಶ ಮತ್ತು ವಾತಾವರಣದ ನಡುವೆ ತೀವ್ರ ಘರ್ಷಣೆ ಉಂಟಾಗುತ್ತದೆ. ಆಗ ಕೋಶದ ಹೊರಭಾಗದಲ್ಲಿ ಉಷ್ಣಾಂಶ 3,871 ಡಿಗ್ರಿ ಸೆಲ್ಸಿಯಸ್‌ನವರೆಗೂ ತಲುಪುತ್ತದೆ. ಅಷ್ಟು ತೀವ್ರತೆಯ ಉಷ್ಣತೆಯನ್ನು ಕೋಶ ತಡೆದುಕೊಳ್ಳಬೇಕು. ಇಲ್ಲದಿದ್ದರೆ, ಕೋಶ ಉರಿದು ಭಸ್ಮವಾಗಬಹುದು (2003ರ ಫೆ.1ರಂದು ಕೊಲಂಬಿಯಾ ಬಾಹ್ಯಾಕಾಶ ನೌಕೆಯಲ್ಲಿ ಭೂಮಿಗೆ ಮರಳುತ್ತಿದ್ದ ಸಂದರ್ಭದಲ್ಲಿ ನೌಕೆಯ ಹೊರಮೈನಲ್ಲಿನದ್ದ ಉಷ್ಣ ನಿರೋಧಕ ಫಲಕಗಳಲ್ಲಿನ ದೋಷದಿಂದಾಗಿ ನೌಕೆ ಹೊತ್ತಿ ಉರಿದಿತ್ತು. ಭಾರತ ಮೂಲದ ಕಲ್ಪನಾ ಚಾವ್ಲಾ ಸೇರಿದಂತೆ ಏಳು ಗಗನಯಾತ್ರಿಗಳು ಮೃತಪಟ್ಟಿದ್ದರು)
3. ವೇಗವಾಗಿ ಭೂಮಿಯ ಕಡೆಗೆ ಧಾವಿಸುತ್ತಿರುವ ಕೋಶದ ವೇಗವನ್ನು ಕಡಿಮೆ ಮಾಡುವುದಕ್ಕಾಗಿ ಭೂಮಿಯಿಂದ 18 ಸಾವಿರ ಅಡಿಗಳ ಎತ್ತರದಲ್ಲಿ ಮೊದಲ ಎರಡು ಪ್ಯಾರಾಚೂಟ್‌ಗಳು ತೆರೆದುಕೊಳ್ಳುತ್ತವೆ. ಮತ್ತೆ ಕೆಳಗಿಳಿಗಿಯುತ್ತಾ 6,500 ಅಡಿ ಎತ್ತರಕ್ಕೆ ಬರುವಾಗ ಇನ್ನೆರಡು/ನಾಲ್ಕು ಪ್ಯಾರಾಚೂಟ್‌ಗಳು ಬಿಚ್ಚಿಕೊಳ್ಳುತ್ತವೆ. ಇದು ಡ್ರ್ಯಾಗನ್ ಕೋಶದ ವೇಗವನ್ನು ಗಣನೀಯವಾಗಿ ಇಳಿಸುತ್ತದೆ. ಅಂತಿಮವಾಗಿ ಸರಾಗವಾಗಿ ಅದು ಭೂಮಿ/ನೀರನ್ನು ಸ್ಪರ್ಶಿಸುವಂತೆ ಮಾಡಲಾಗುತ್ತದೆ
ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಐಎಸ್‌ಎಸ್‌ಗೆ ಹೋಗಿದ್ದು ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ಕೋಶದಲ್ಲಿ. ಆದರೆ, ಬಂದಿದ್ದು ಅದರ ಪ್ರತಿಸ್ಪರ್ಧಿ ಕಂಪನಿಯಾದ ಸ್ಪೇಸ್ ಎಕ್ಸ್‌ನ ‘ಡ್ರ್ಯಾಗನ್’ ಕೋಶದಲ್ಲಿ.
ಬೋಯಿಂಗ್ ವೈಮಾಂತರಿಕ್ಷ ಕ್ಷೇತ್ರದಲ್ಲಿ ದೊಡ್ಡ ಹೆಸರು. ರಕ್ಷಣೆ, ಬಾಹ್ಯಾಕಾಶ ಕ್ಷೇತ್ರದಲ್ಲಿ 2002ರಿಂದ ಸಕ್ರಿಯವಾಗಿದ್ದರೂ ವಿಮಾನಯಾನ ಕ್ಷೇತ್ರದಲ್ಲಿ ಅದಕ್ಕೆ ಶತಮಾನದ ಇತಿಹಾಸವಿದೆ. ಎಲಾನ್ ಮಸ್ಕ್ ಸ್ಪೇಸ್ ಎಕ್ಸ್ ಹುಟ್ಟುಹಾಕಿದ್ದು 2002ರಲ್ಲಿ. ಬಾಹ್ಯಾಕಾಶ ಕ್ಷೇತ್ರದಲ್ಲಿ ಕಂಪನಿಯು ಎಲ್ಲವನ್ನೂ ಶೂನ್ಯದಿಂದ ಆರಂಭಿಸಿದೆ. ಆದರೆ, ಮಾನವಸಹಿತ ಅಂತರಿಕ್ಷಯಾನ ಪೈಪೋಟಿಯಲ್ಲಿ ಅನುಭವಿ ಬೋಯಿಂಗ್ ಅನ್ನು ಸ್ಪೇಸ್‌ಎಕ್ಸ್ ಹಿಂದಿಕ್ಕಿದೆ.
ನಾಸಾವು ಐಎಸ್‌ಎಸ್‌ಗೆ ಗಗನಯಾತ್ರಿಗಳನ್ನು ಕಳುಹಿಸಲು ಮತ್ತು ಕರೆದುಕೊಂಡು ಬರಲು 2011ರವರೆಗೂ ಬಾಹ್ಯಾಕಾಶ ನೌಕೆಗಳನ್ನು (ಸ್ಪೇಸ್ ಷಟಲ್) ಬಳಸುತ್ತಿತ್ತು. ಆ ಬಳಿಕ ಇದರ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಿದೆ. ಈ ಸಂಬಂಧ, 2014ರಲ್ಲಿ ಬೋಯಿಂಗ್ ಮತ್ತು ಸ್ಪೇಸ್‌ಎಕ್ಸ್ ಜೊತೆ ಒಪ್ಪಂದ ಮಾಡಿಕೊಂಡಿದೆ. 2017ರ ವೇಳೆಗೆ ಗಗನಯಾತ್ರಿಗಳನ್ನು ಕರೆದುಕೊಂಡು ಹೋಗುವ ಸಾಮರ್ಥ್ಯ ಹೊಂದಿರಬೇಕು ಎಂದು ಎರಡೂ ಕಂಪನಿಗಳಿಗೆ ನಾಸಾ ಹೇಳಿತ್ತು. ಆದರೆ, ಎರಡೂ ಕಂಪನಿಗಳು ಗಡುವು ಮೀರಿದ್ದವು. ಸ್ಪೇಸ್‌ಎಕ್ಸ್ 2020ರಿಂದ ತನ್ನ ರಾಕೆಟ್, ಡ್ರ್ಯಾಗನ್ ಬಾಹ್ಯಾಕಾಶ ಕೋಶಗಳ ಮೂಲಕ ಗಗನಯಾತ್ರಿಗಳನ್ನು ಐಎಸ್‌ಎಸ್‌ಗೆ ಕಳುಹಿಸುತ್ತಿದೆ. ಅಲ್ಲಿಂದ ವಾಪಸ್ ಕರೆತರುತ್ತಿದೆ.
ಫ್ಲಾರಿಡಾದ ಮೆಕ್ಸಿಕೊ ಕೊಲ್ಲಿಯಲ್ಲಿ ಬಂದಿಳಿದ ಡ್ರ್ಯಾಗನ್ ಬಾಹ್ಯಾಕಾಶ ಕೋಶ
ಆದರೆ, ಬೋಯಿಂಗ್ ಇನ್ನೂ ಇದರಲ್ಲಿ ಪೂರ್ಣ ಯಶಸ್ಸು ಗಳಿಸಲು ಆಗಿಲ್ಲ. ಕಳೆದ ವರ್ಷದ ಜೂನ್ 5ರಂದು ಸ್ಟಾರ್‌ಲೈನರ್ ಮೂಲಕ ಸುನಿತಾ ಮತ್ತು ಬುಚ್ ವಿಲ್ಮೋರ್ ಅವರನ್ನು ಕಳುಹಿಸಿದ್ದರೂ ತಾಂತ್ರಿಕ ದೋಷದ ಕಾರಣದಿಂದ ಅವರನ್ನು ಸ್ಟಾರ್‌ಲೈನರ್‌ನಲ್ಲೇ ವಾಪಸ್ ಕರೆತರಲು ಅದಕ್ಕೆ ಸಾಧ್ಯವಾಗಿಲ್ಲ (ಇಬ್ಬರೂ ಗಗನಯಾನಿಗಳ ಸುರಕ್ಷತೆಯ ಕಾರಣದಿಂದ ಅವರನ್ನು ಐಎಸ್‌ಎಸ್‌ನಲ್ಲೇ ಬಿಟ್ಟು ಸ್ಟಾರ್‌ಲೈನರ್ ಸೆಪ್ಟೆಂಬರ್ 7ರಂದು ಭೂಮಿಗೆ ಯಶಸ್ವಿಯಾಗಿ ಮರಳಿತ್ತು). ತಾನು ಕಳುಹಿಸಿದ್ದ ಗಗನಯಾತ್ರಿಗಳನ್ನು ಸುರಕ್ಷಿತವಾಗಿ ಕರೆತರಲು ತನ್ನ ಪ್ರತಿಸ್ಪರ್ಧಿ ಸ್ಪೇಸ್‌ಎಕ್ಸ್ ಕಂಪನಿಯನ್ನು ಅದು ಅನಿವಾರ್ಯವಾಗಿ ಅವಲಂಬಿಸಬೇಕಾಗಿ ಬಂದಿದೆ.
ಆಧಾರ: ಪಿಟಿಐ, ರಾಯಿಟರ್ಸ್, ನಾಸಾ, ಸ್ಪೇಸ್‌ಎಕ್ಸ್, ಬಿಬಿಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.