ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಮತ್ತು ಅಂಕೋಲಾ ತಾಲ್ಲೂಕಿನಲ್ಲಿ ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ವಾಣಿಜ್ಯ ಬಂದರುಗಳ ನಿರ್ಮಾಣಕ್ಕೆ ಸ್ಥಳೀಯ ಮೀನುಗಾರರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗೆ ಅವರು ನಡೆಸಿದ್ದ ತೀವ್ರ ಪ್ರತಿಭಟನೆ ರಾಷ್ಟ್ರೀಯ ಮಟ್ಟದಲ್ಲೂ ಸುದ್ದಿಯಾಗಿತ್ತು. ಪ್ರತಿಭಟನೆಗಳನ್ನು ಹತ್ತಿಕ್ಕಲು ಪೊಲೀಸರು ಮಾಡಿದ್ದ ಬಲಪ್ರಯೋಗ ಕೂಡ ಚರ್ಚೆಗೆ ಗ್ರಾಸವಾಗಿತ್ತು. ಬಂದರುಗಳು ನಿರ್ಮಾಣವಾದರೆ ತಾವು ಶಾಶ್ವತವಾಗಿ ನೆಲೆ ಕಳೆದುಕೊಳ್ಳಬೇಕಾಗುತ್ತದೆ ಎಂಬ ಆತಂಕ ಮೀನುಗಾರರದ್ದು
‘ಮೀನುಗಾರಿಕೆಯೇ ನಮಗೆ ಬದುಕು. ಮೀನು ಹಿಡಿಯುವ ಕಸುಬು ಬಿಟ್ಟು ಹೊಟ್ಟೆ ಹೊರೆಯಲು ಬೇರೆ ಕೆಲಸ ನಮಗೆ ಗೊತ್ತಿಲ್ಲ. ನಮ್ಮ ಜೀವನಕ್ಕೆ ಏಕೈಕ ಆಸರೆಯಾಗಿರುವ ಕಡಲತೀರಗಳನ್ನು ನಮ್ಮಿಂದ ದೂರ ಮಾಡಲಾಗುತ್ತಿದೆ. ನೆಲೆ ಉಳಿಸಿಕೊಳ್ಳುವುದಕ್ಕಾಗಿ ನಾವು ಹೋರಾಡುತ್ತಿದ್ದರೆ ಸರ್ಕಾರ, ಪೊಲೀಸ್ ಬಲದ ಮೂಲಕ ನಮ್ಮನ್ನು ಹತ್ತಿಕ್ಕುತ್ತಿದೆ. ಬದುಕುವ ಹಕ್ಕಿನ ರಕ್ಷಣೆಗೆ ಅನಿವಾರ್ಯವಾಗಿ ಹೋರಾಟ ಮಾಡುತ್ತಿರುವವರ ಮೇಲೆ ಪೊಲೀಸರು ಪ್ರಕರಣ ದಾಖಲಿಸುತ್ತಿದ್ದಾರೆ. ರೌಡಿಗಳ ಪಟ್ಟಿಯಲ್ಲಿ ಹೆಸರು ಸೇರಿಸುತ್ತಿದ್ದಾರೆ. ಜೈಲಿಗೆ ಅಟ್ಟುತ್ತಿದ್ದಾರೆ’
– ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕಾಸರಕೋಡದ ಟೊಂಕ ಪ್ರದೇಶದ ಮೀನುಗಾರ ಗಣಪತಿ ತಾಂಡೇಲ ಅವರ ಮಾತಿದು. ಟೊಂಕದ ಕಡಲತೀರದಲ್ಲಿ ತಿಂಗಳುಗಳಿಂದ ಮಗುಚಿಟ್ಟಿದ್ದ ತಮ್ಮ ದೋಣಿಯನ್ನು ತೋರಿಸುತ್ತಾ ಹೇಳುವಾಗ ಅವರ ಕಣ್ಣಾಲಿಗಳು ತುಂಬಿದ್ದವು. ಮುಂದೆ ಏನು ಎಂಬ ಆತಂಕವೂ ಅವರನ್ನು ಕಾಡುತ್ತಿತ್ತು.
‘ನಸುಕಿನಲ್ಲೇ ಸಮುದ್ರಕ್ಕೆ ಇಳಿದು ಮೀನು ಹಿಡಿದು, ಸೂರ್ಯ ನೆತ್ತಿಗೆ ಏರಿ ಬರುವಷ್ಟರಲ್ಲಿ ಹಿಡಿದು ತಂದ ಮೀನನ್ನು ವ್ಯಾಪಾರ ಮಾಡಿಬಿಡುತ್ತಿದ್ದೆವು. ಅಂದಿನ ದುಡಿಮೆ, ಅಂದಿನ ಊಟಕ್ಕೆ ಸಾಲುತ್ತಿತ್ತು. ಈಗ ನಿರಾತಂಕವಾಗಿ ಸಮುದ್ರಕ್ಕೆ ಇಳಿಯುವಂತೆಯೂ ಇಲ್ಲ. ದುಡಿಮೆಯೂ ಇಲ್ಲ. ಬಂದರು ನಿರ್ಮಿಸಿ ನಮ್ಮ ಬದುಕನ್ನು ಮೂರಾಬಟ್ಟೆ ಮಾಡಲು ಸರ್ಕಾರ ಹೊರಟಿದೆ’ ಎಂದು ಹೇಳಿ ಮತ್ತೆ ಕಣ್ಣೀರಾದರು.
ಟೊಂಕ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಾಣಿಜ್ಯ ಬಂದರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಾಗಿ ಭೂಸ್ವಾಧೀನಕ್ಕೆ ಫೆ.25 ರಂದು ಸಮೀಕ್ಷೆ ನಡೆಯಿತು. ಇದನ್ನು ವಿರೋಧಿಸಿ ಹೋರಾಟಕ್ಕೆ ಇಳಿದ 45 ಮೀನುಗಾರ ಮುಖಂಡರ ಮೇಲೆ ಪೊಲೀಸರು, ಕರ್ತವ್ಯಕ್ಕೆ ಅಡ್ಡಿ, ಹಲ್ಲೆ, ಕೊಲೆಯತ್ನ ಸೇರಿದಂತೆ ಗಂಭೀರ ಪ್ರಕರಣಗಳನ್ನು ದಾಖಲಿಸಿದ್ದರು. ಅವರ ಪೈಕಿ 24 ಮಂದಿಯನ್ನು ಬಂಧಿಸಿದ್ದರು (ಈಗ ಎಲ್ಲರಿಗೂ ಜಾಮೀನು ಸಿಕ್ಕಿದೆ). ಪೊಲೀಸರ ಈ ಕ್ರಮ ಮೀನುಗಾರರಲ್ಲಿ ಆಕ್ರೋಶದ ಜೊತೆಗೆ ಆತಂಕಕ್ಕೂ ಕಾರಣವಾಗಿದೆ. ಬಂಧನದ ಭಯದಿಂದ ಸಮುದಾಯದ ಹಲವು ಮುಖಂಡರು ಊರನ್ನೇ ತೊರೆದಿದ್ದರು. ಈಗ ಅವರು ಊರಿಗೆ ವಾಪಸ್ ಆಗಿದ್ದರೂ, ಅವರಲ್ಲಿ ಆತಂಕ ಇದ್ದೇ ಇದೆ.
ಇದು ಟೊಂಕ ಪ್ರದೇಶದ ಕಥೆಯಾದರೆ, ಇಲ್ಲಿಂದ 65 ಕಿ.ಮೀ. ದೂರದಲ್ಲಿರುವ ಅಂಕೋಲಾ ತಾಲ್ಲೂಕಿನ ಕೇಣಿಯ ಮೀನುಗಾರರ ವ್ಯಥೆಯೂ ಇದೇ ರೀತಿಯದ್ದು. ಅಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬೃಹತ್ ವಾಣಿಜ್ಯ ಬಂದರು ತಮ್ಮ ಬದುಕಿಗೇ ಕೊಳ್ಳಿ ಇಡಲಿದೆ ಎಂದು ಸ್ಥಳೀಯ ಮೀನುಗಾರರು ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಬಂದರು ನಿರ್ಮಾಣ ವಾದರೆ ಮೀನುಗಾರರ ಕುಟುಂಬಗಳು ಶಾಶ್ವತವಾಗಿ ನೆಲೆ ಕಳೆದುಕೊಳ್ಳಬೇಕಾಗುತ್ತದೆ ಎಂಬ ಕಳವಳ ಅವರದ್ದು.
ಕೇಣಿ ಭಾಗದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ಮೂಲಕ ಬದುಕು ಕಟ್ಟಿಕೊಂಡಿರುವ 2,000ಕ್ಕೂ ಹೆಚ್ಚು ಮೀನುಗಾರರ ಕುಟುಂಬಗಳಿವೆ. ಬಂದರು ನಿರ್ಮಾಣದ ವಿರುದ್ಧ ದೀರ್ಘ ಅವಧಿಯಿಂದ ಹೋರಾಟ ನಡೆಸುತ್ತಿರುವ ಅವರು ಇತ್ತೀಚೆಗೆ ಹೋರಾಟ ತೀವ್ರಗೊಳಿಸಿದ್ದಾರೆ. ಹೋರಾಟ ಹತ್ತಿಕ್ಕಲು ಪೊಲೀಸರು ಈ ಭಾಗದಲ್ಲಿ ನಿಷೇಧಾಜ್ಞೆ ಅಸ್ತ್ರವನ್ನು ಬಳಸಿದ್ದಾರೆ. ಮೀನುಗಾರರು ನೆಲವನ್ನು ಬಿಟ್ಟು ಸಮುದ್ರದ ನೀರಿನಲ್ಲಿ ದೋಣಿಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಿದರು. ಅಲ್ಲೂ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸವನ್ನು ಪೊಲೀಸರು ಮಾಡಿದ್ದಾರೆ ಎಂಬುದು ಮೀನುಗಾರರ ಆರೋಪ.
‘ಹೋರಾಟ ಹತ್ತಿಕ್ಕಲು ಪೊಲೀಸರು ಗ್ರಾಮದಲ್ಲಿ ಎರಡು ವಾರ ನಿಷೇಧಾಜ್ಞೆ ಹೇರಿದರು. ನಿಷೇಧಾಜ್ಞೆ ನಡುವೆಯೂ ಹೋರಾಟ ನಡೆಸಿದವರ ಮಾಹಿತಿ ಪಡೆದು ಬೆದರಿಸಲು ಪ್ರಯತ್ನಿಸಿದರು. ನೆಲ ಬಿಟ್ಟು ಸಮುದ್ರದಲ್ಲಿ ದೋಣಿ ನಿಲ್ಲಿಸಿ ಪ್ರತಿಭಟನೆ ಮಾಡಿದೆವು. ಆಗಲೂ ಪೊಲೀಸರು ವಾಗ್ವಾದ ನಡೆಸಿದರು’ ಎಂದು ಕೇಣಿಯ ಸಂಜೀವ ಬಲೆಗಾರ ಹೇಳಿದರು.
‘ವಾಣಿಜ್ಯ ಬಂದರು ನಿರ್ಮಾಣಕ್ಕೆ ಕಿ.ಮೀ. ಉದ್ದದ ಕಡಲ ತೀರವನ್ನು ವಶಕ್ಕೆ ಪಡೆಯುತ್ತಾರೆ. ಈಗ ಮೀನುಗಾರಿಕೆಗೆ ಅಡ್ಡಿ ಏನೂ ಆಗದು ಎನ್ನುವ ಅಧಿಕಾರಿಗಳು ಕಾಲಕ್ರಮೇಣ ಮೀನುಗಾರಿಕೆ ನಡೆಸದಂತೆ ನಿರ್ಬಂಧ ಹೇರುತ್ತಾರೆ. ಮೀನುಗಾರಿಕೆ ವೃತ್ತಿಯ ಹೊರತಾಗಿ ಬೇರೆ ದುಡಿಮೆ ಇಲ್ಲದ ನಾವು ನೆಲೆ, ದುಡಿಮೆ ಕಳೆದುಕೊಂಡು ಬೀದಿಗೆ ಬರಬೇಕಾಗುತ್ತದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಜೀವನೋಪಾಯಕ್ಕೆ ಕುತ್ತು: ಇತ್ತ ಕಾಸರಕೋಡದ ಟೊಂಕ ಪ್ರದೇಶ, ಅತ್ತ ಅಂಕೋಲಾದ ಕೇಣಿ ಕಡಲತೀರ ಸದಾ ಮೀನುಗಾರಿಕೆಯಿಂದ ಗಿಜಿಗಿಡುತ್ತವೆ. ಸಾವಿರಾರು ಕುಟುಂಬಗಳಿಗೆ ಮೀನುಗಾರಿಕೆಯೇ ಜೀವನೋಪಾಯದ ದಾರಿ. ಪುರುಷರು ಸಮುದ್ರಕ್ಕೆ ಹೋಗಿ ಮೀನು ಹಿಡಿದು ತಂದರೆ, ಕುಟುಂಬದಲ್ಲಿನ ಮಹಿಳೆಯರು ಅದನ್ನು ಮಾರಾಟ ಮಾಡುತ್ತಾರೆ. ಆಯಾ ದಿನ ಹಿಡಿದ ಮೀನುಗಳನ್ನು ಕೆಲವರು ಅಂದೇ ಮಾರಾಟ ಮಾಡಿದರೆ, ಮೀನುಗಳನ್ನು ಸ್ವಚ್ಛಗೊಳಿಸಿ, ಮೂರ್ನಾಲ್ಕು ದಿನ ಅವುಗಳನ್ನು ಒಣಗಿಸಿ ನಂತರ ಮಾರುವ ಮಹಿಳೆಯರ ಸಂಖ್ಯೆ ಇಲ್ಲಿ ದೊಡ್ಡದಿದೆ.
‘ಸಮುದ್ರದ ದಂಡೆ ಇಲ್ಲದಿದ್ದರೆ ನಮ್ಮ ಜೀವನ ಇಲ್ಲ. ಮೀನು ಹಿಡಿಯುವುದು, ಮಾರಾಟ ಮಾಡುವುದು ಇಲ್ಲವೇ ಹಸಿ ಮೀನನ್ನು ಒಣಗಿಸಿ ಮಾರಾಟ ಮಾಡಿ ನಮ್ಮ ಜೀವನವನ್ನು ಕಟ್ಟಿಕೊಂಡಿದ್ದೇವೆ. ಅದು ಬಿಟ್ಟರೆ ನಮಗೆ ಬೇರೆ ಉದ್ಯೋಗ ಗೊತ್ತಿಲ್ಲ. ಬಂದರು ನಿರ್ಮಾಣ ನೆಪದಲ್ಲಿ ಮೀನುಗಾರಿಕೆಗೆ ನಿರ್ಬಂಧ ಹೇರಿದರೆ ನಮ್ಮ ಜೀವನ ನಡೆಯುವುದು ಹೇಗೆ’ ಎಂದು ಟೊಂಕ ಪ್ರದೇಶದ ರೇಣುಕಾ ತಾಂಡೇಲ ಪ್ರಶ್ನಿಸಿದರು.
‘ಈ ಮೊದಲು ಎಚ್‌ಪಿಪಿಎಲ್ ಕಂಪನಿ ಪಡೆದಿದ್ದ ಪರಿಸರ ಪರವಾನಗಿಯಲ್ಲಿ ರೈಲು, ಹೆದ್ದಾರಿ ಸಂಪರ್ಕದ ಪ್ರಸ್ತಾವ ಇರಲಿಲ್ಲ. ಕಾಸರಕೋಡ, ಟೊಂಕ ಮಾರ್ಗವಾಗಿ ಹಾದುಹೋಗುವ ಸಂಪರ್ಕ ಹೆದ್ದಾರಿಯಿಂದ ನೂರಾರು ಮೀನುಗಾರರು ನೆಲೆ ಕಳೆದುಕೊಳ್ಳಲಿದ್ದಾರೆ. ಹೊಸಪಟ್ಟಣದಿಂದ ರೈಲು ಮಾರ್ಗ ಕಲ್ಪಿಸುವ ಪ್ರಸ್ತಾಪವನ್ನೂ ಯೋಜನೆ ಒಳಗೊಂಡಿದೆ. ಇದರಿಂದಲೂ ನೂರಾರು ಮೀನುಗಾರರ ಮನೆಗಳು ನೆಲಸಮವಾಗಲಿವೆ’ ಎಂದು ಬಂದರು ಯೋಜನೆ ವಿರೋಧಿ ಹೋರಾಟಗಾರರಾದ ರಾಜು ತಾಂಡೇಲ ಹೇಳಿದರು.
ಟೊಂಕ ಕಡಲತೀರದಲ್ಲಿ ಈಗ ಮೌನ ಆವರಿಸಿದೆ. ಪೊಲೀಸ್ ಸರ್ಪಗಾವಲಿನಲ್ಲಿ ಬಂದರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕೆಲಸ ನಡೆಯುತ್ತಿದೆ.
‘ಹೊನ್ನಾವರದ ವಾಣಿಜ್ಯ ಬಂದರು ಯೋಜನೆ ವಿರೋಧಿಸುವವರ ಮೇಲೆ ಪೊಲೀಸರು ನಿಗಾ ಇರಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶ ಕಳಿಸಿದರೂ ಪ್ರಕರಣ ದಾಖಲಿಸಲಾಗುತ್ತಿದೆ. ಈಗಲೂ ನಿತ್ಯ ಪೊಲೀಸರು ಕಾಸರಕೋಡ, ಟೊಂಕದಲ್ಲಿ ಪೊಲೀಸರ ಗಸ್ತು ಮುಂದುವರಿದಿದೆ. ಪೊಲೀಸ್ ಕಾವಲಿನಲ್ಲಿ ರಾಶಿಗಟ್ಟಲೆ ಮಣ್ಣನ್ನು ಕಡಲತೀರದಲ್ಲಿ ರಸ್ತೆ ನಿರ್ಮಾಣಕ್ಕೆ ತಂದು ಸುರಿಯಲಾಗುತ್ತಿದೆ’ ಎಂದು ಮೀನುಗಾರ ರಾಜು ತಾಂಡೇಲ ಹೇಳಿದರು.
ಪರಿಸರ, ಜೀವವೈವಿಧ್ಯಕ್ಕೆ ಧಕ್ಕೆ
ನಿರ್ಮಾಣಗೊಳ್ಳುವ ಬಂದರುಗಳು ಪರಿಸರ ಮತ್ತು ಸಮುದ್ರದ ಜೀವವೈವಿಧ್ಯವನ್ನು ನಾಶ ಮಾಡಬಲ್ಲ ಯೋಜನೆ ಎಂಬುದು ಪರಿಸರವಾದಿಗಳ ಹೇಳಿಕೆ.
‘ಹೊನ್ನಾವರದಲ್ಲಿ ಸ್ಥಾಪನೆಯಾಗುವ ಬಂದರು ಕಬ್ಬಿಣದ ಅದಿರು ರಫ್ತು ಚಟುವಟಿಕೆ ನಡೆಸಲಿದೆ ಎಂಬ ಮಾಹಿತಿ ಯೋಜನೆಯ ನೀಲನಕ್ಷೆಯಲ್ಲಿದೆ. ಕಲ್ಲಿದ್ದಲು, ರಾಸಾಯನಿಕ ಗೊಬ್ಬರಗಳನ್ನು ಆಮದು ಮಾಡಿಕೊಳ್ಳುವ ಮತ್ತು ಅಲ್ಲಿಯೇ ದಾಸ್ತಾನು ಮಾಡುವ ಸೌಲಭ್ಯವನ್ನೂ ಕಲ್ಪಿಸಲಾಗುತ್ತಿದೆ. ಕೇಣಿಯ ಬಂದರು ಸ್ಥಾಪನೆಯ ಹಿಂದೆಯೂ ಅದಿರು ರಫ್ತು ಮತ್ತು ಆಮದು ಚಟುವಟಿಕೆ ನಡೆಸುವ ಉದ್ದೇಶವಿದೆ. 2006–10ರ ಅವಧಿಯಲ್ಲಿ ಬಳ್ಳಾರಿಯಿಂದ ಬೇಲೆಕೇರಿ, ಕಾರವಾರದ ಬಂದರು ಮೂಲಕ ರಫ್ತಾಗುತ್ತಿದ್ದ ಅದಿರು ಇಲ್ಲಿನ ಜನಜೀವನ ಅಸ್ತವ್ಯಸ್ತಗೊಳಿಸಿತ್ತು. ಅದಿರಿನ ದೂಳಿನಿಂದ ಪರಿಸರಕ್ಕೆ, ಜನರ ಆರೋಗ್ಯಕ್ಕೆ ಮಾರಕವಾಗಿತ್ತು. ಈಗಲೂ ಅಂತದ್ದೇ ಸ್ಥಿತಿ ಮರುಕಳಿಸಬಹುದು’ ಎಂಬುದಾಗಿ ಆತಂಕ ವ್ಯಕ್ತಪಡಿಸುತ್ತಾರೆ ಪರಿಸರವಾದಿಗಳು.
‘ಟೊಂಕ ಪ್ರದೇಶದಲ್ಲಿ ಆಲಿವ್ ರಿಡ್ಲೆ ಕಡಲಾಮೆಗಳು ಮೊಟ್ಟೆ ಇಡುವ ಸ್ಥಳಗಳಿವೆ. ಇದೇ ಮಾರ್ಗದಲ್ಲಿ ಬಂದರು ಸಂಪರ್ಕಿಸುವ ರಸ್ತೆ ಹಾದುಹೋಗಲಿದೆ. ಇದು ಅಳಿವಿನಂಚಿನಲ್ಲಿರುವ ಜೀವಿಗಳ ಹೆರಿಗೆ ತಾಣವನ್ನು ನಾಶಪಡಿಸಲಿದೆ’ ಎಂದು ಹೊನ್ನಾವರ ಫೌಂಡೇಷನ್ ಸದಸ್ಯರು ಆತಂಕ ವ್ಯಕ್ತಪಡಿಸಿದರು.
ಹೆಚ್ಚಲಿದೆ ಕಡಲು ಕೊರೆತ
‘ಬಂದರು ನಿರ್ಮಾಣದ ಭಾಗವಾಗಿ ಸಮುದ್ರದಲ್ಲಿ ನೂರಾರು ಮೀಟರ್ ಉದ್ದದ ಅಲೆ ತಡೆಗೋಡೆ ನಿರ್ಮಿಸಬೇಕಾಗುತ್ತದೆ. ಇದರಿಂದ ಅಕ್ಕಪಕ್ಕದಲ್ಲಿರುವ, ಕೆಲವು ಕಿ.ಮೀ ದೂರದಲ್ಲಿರುವ ಉಳಿದ ಕಡಲತೀರಗಳು ಮಳೆಗಾಲದಲ್ಲಿ ಕೊರೆತಕ್ಕೊಳಗಾಗುತ್ತವೆ. ಕಾರವಾರದ ವಾಣಿಜ್ಯ ಬಂದರಿಗೆ ನಿರ್ಮಿಸಿದ ತಡೆಗೋಡೆಯಿಂದ ದೇವಭಾಗ, ಮಾಜಾಳಿಯಲ್ಲಿ ಕಡಲು ಕೊರೆತದ ಸಮಸ್ಯೆ ತಲೆದೋರಿದ ನಿದರ್ಶನವಿದೆ’ ಎನ್ನುತ್ತಾರೆ ಕಡಲಜೀವಶಾಸ್ತ್ರಜ್ಞ ವಿ.ಎನ್.ನಾಯಕ.
‘ಪರಿಸರ ಸೂಕ್ಷ್ಮ ಪ್ರದೇಶವಾಗಿರುವ ಉತ್ತರ ಕನ್ನಡದಲ್ಲಿ ನಿರ್ಮಾಣಗೊಳ್ಳುವ ಬಂದರುಗಳಿಗೆ ಕಾಲಕ್ರಮೇಣ ಕಂಪನಿಗಳು ಹೆದ್ದಾರಿ ವಿಸ್ತರಣೆಯ ಬೇಡಿಕೆ ಇಡುತ್ತವೆ. ಹೊಸದಾಗಿ ರೈಲು ಸಂಪರ್ಕಕ್ಕೆ ಪ್ರಯತ್ನಿಸುತ್ತವೆ. ಇವುಗಳಿಂದ ಪಶ್ಚಿಮ ಘಟ್ಟ ಸಂಪೂರ್ಣ ನಾಶವಾಗುವ ಸ್ಥಿತಿ ಬರಲಿದೆ’ ಎಂಬುದಾಗಿ ಅವರು ವಾದಿಸುತ್ತಾರೆ.
₹4,118 ಕೋಟಿ ವೆಚ್ಚ
ಅಂಕೋಲಾದ ಕೇಣಿಯಲ್ಲಿ ₹4,118 ಕೋಟಿ ವೆಚ್ಚದಲ್ಲಿ, ವಾರ್ಷಿಕ ಮೂರು ಕೋಟಿ ಟನ್ ಸಾಮರ್ಥ್ಯದ ಗ್ರೀನ್‍ಫೀಲ್ಡ್ ಬಂದರು ನಿರ್ಮಿಸಲು ಜೆಎಸ್‌ಡಬ್ಲ್ಯು ಕೇಣಿ ಪೋರ್ಟ್ ಪ್ರೈ.ಲಿ ಕಂಪನಿ ಮುಂದಾಗಿದ್ದು, ಈಗಾಗಲೇ ಭೂವೈಜ್ಞಾನಿಕ ಸಮೀಕ್ಷೆಯನ್ನು ನಡೆಸುತ್ತಿದೆ. ಆಳ ಸಮುದ್ರದಲ್ಲಿ ಬಾರ್ಜ್ ಬಳಸಿ ಮಣ್ಣಿನ ಪರೀಕ್ಷೆ ನಡೆಸಲಾಗುತ್ತಿದೆ. ಈ ಯೋಜನೆಗೆ ಹೆಚ್ಚು ಭೂಸ್ವಾಧೀನ ಮಾಡಿಕೊಳ್ಳದೆ ಸಮುದ್ರದಲ್ಲೇ ಸುಮಾರು 450 ಎಕರೆಯಷ್ಟು ಜಾಗ ಬಳಸಿಕೊಂಡು ಬಂದರು ನಿರ್ಮಿಸಲಾಗುತ್ತದೆ. ಕಡಲತೀರದ ಅಕ್ಕಪಕ್ಕ ವಿಶೇಷ ಆರ್ಥಿಕ ವಲಯ ನಿರ್ಮಿಸಿ ಉದ್ಯೋಗ ಸೃಷ್ಟಿಸಲಾಗುತ್ತದೆ ಎಂಬುದಾಗಿ ಕಂಪನಿ ಹೇಳುತ್ತಿದೆ.
ಬಂದರು ನಿರ್ಮಾಣವಾದರೆ ಜಿಲ್ಲೆಯ ಮೂಲಕ ಆಮದು–ರಫ್ತು ಚಟುವಟಿಕೆ ನಡೆಯಲಿದ್ದು, ಇದು ಉದ್ಯೋಗ ಸೃಷ್ಟಿಯ ಜೊತೆಗೆ ಉತ್ತರ ಕರ್ನಾಟಕ, ಕರಾವಳಿ ನಡುವೆ ಸಂಪರ್ಕ ಬಲಗೊಳಿಸಲಿದೆ. ವಾಣಿಜ್ಯ ಚಟುವಟಿಕೆಗಳು ಗರಿಗೆದರುತ್ತವೆ. ಹೀಗಾಗಿ ಯೋಜನೆ ಅಗತ್ಯವಿದೆ ಎಂಬುದಾಗಿ ಜಿಲ್ಲೆಯ ಹಲವು ಉದ್ಯಮಿಗಳು ಪ್ರತಿಪಾದಿಸುತ್ತಿದ್ದಾರೆ.
ದಶಕದ ಹಿಂದಿನ ಯೋಜನೆ
ಕಾಸರಕೋಡ ಟೊಂಕ ಪ್ರದೇಶದಲ್ಲಿ ವಾರ್ಷಿಕ 49 ಲಕ್ಷ ಟನ್ ಸಾಮರ್ಥ್ಯದ ವಾಣಿಜ್ಯ ಬಂದರು ನಿರ್ಮಿಸಲು ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ (ಎಚ್‌ಪಿಪಿಎಲ್) ಕಂಪನಿ ಕೆಲಸ ಆರಂಭಿಸಿದೆ.
2010ರಲ್ಲೇ ರಾಜ್ಯ ಸರ್ಕಾರವು ಹೊನ್ನಾವರದಲ್ಲಿ ವಾಣಿಜ್ಯ ಬಂದರು ಸ್ಥಾಪಿಸಲು ಹೈದರಾಬಾದ್‌ನ ಎಚ್‍ಪಿಪಿಎಲ್‌ಗೆ ಲೀಸ್ ಆಧಾರದಲ್ಲಿ 93 ಎಕರೆ ಭೂಮಿ ಹಸ್ತಾಂತರಿಸಿತ್ತು. 2012ರಲ್ಲಿ 400 ಮೀಟರ್ ಉದ್ದದಲ್ಲಿ ಎರಡು ಹಡಗು ಕಟ್ಟೆ (ಬರ್ತ್), 850 ಮೀಟರ್ ಉದ್ದದ ಎರಡು ಅಲೆ ತಡೆಗೋಡೆ, 15 ಮೀಟರ್ ಆಳದ ಹಡಗು ಸಂಚರಿಸುವ ಕಾಲುವೆ ನಿರ್ಮಿಸಲು ಒಪ್ಪಿಗೆ ಪಡೆದುಕೊಂಡ ಕಂಪನಿಯು ಯೋಜನೆ ಆರಂಭಿಸಲು ಮುಂದಾಗಿತ್ತು.
2016ರಲ್ಲಿ ಕೋರ್ಟ್ ಮೆಟ್ಟಿಲೇರಿದ್ದ ಮೀನುಗಾರರು ಯೋಜನೆಗೆ ನೀಡಿದ್ದ ಪರಿಸರ ಅನುಮತಿ ರದ್ದುಪಡಿಸಲು ಕೋರಿದ್ದರು. ಕೋರ್ಟ್‌ನಲ್ಲಿ ಸುದೀರ್ಘ ವಿಚಾರಣೆ ನಡೆದು, ಕಂಪನಿ ಪರ ತೀರ್ಪು ಹೊರಬಿತ್ತಾದರೂ, 2021ರ ವೇಳೆಗೆ ಯೋಜನೆಗೆ ನೀಡಿದ್ದ ಪರಿಸರ ಅನುಮತಿ ಅವಧಿ ಮುಗಿದಿದ್ದರಿಂದ ಕಾಮಗಾರಿ ಪುನರಾರಂಭಕ್ಕೆ ಅಡ್ಡಿಯಾಯಿತು. 2022ರಲ್ಲಿ ಪುನಃ ಪರಿಸರ ಅನುಮತಿ ಕೋರಿ ಕಂಪನಿ ಅರ್ಜಿ ಸಲ್ಲಿಸಿದ್ದು, 2024ರ ಡಿ. 31ರಂದು ಪರಿಸರ ಅನುಮತಿ ನವೀಕರಿಸಲಾಯಿತು.
‘ಯೋಜನೆಗೆ ಮೀನುಗಾರರ ಮನೆ, ಜಾಗಗಳು ಸ್ವಾಧೀನವಾಗುವುದನ್ನು ತಡೆಯಲು ರಸ್ತೆಯ ಅಗಲದ ಮಿತಿಯನ್ನು 50 ಮೀ. ಬದಲಿಗೆ 35 ಮೀ.ಗೆ ಇಳಿಸಲಾಗಿದೆ. ಬಂದರಿಗೆ ಸಂಪರ್ಕ ಕಲ್ಪಿಸಲು ರೈಲು ಮಾರ್ಗದ ಪ್ರಸ್ತಾವ ಕೈಬಿಡಲಾಗಿದೆ. ಯೋಜನೆಗೆ 100 ಮನೆಗಳಿರುವ ಜಾಗ ಸ್ವಾಧೀನಗೊಳ್ಳಲಿದ್ದು, ಸರ್ಕಾರ ಸೂಚಿಸಿದ ಮೊತ್ತದಷ್ಟು ಪರಿಹಾರವನ್ನು ಕಂಪನಿಯೇ ಸಂತ್ರಸ್ತರಿಗೆ ನೀಡಲಿದೆ’ ಎಂದು ಎಚ್‌ಪಿಪಿಎಲ್ ಕಂಪನಿಯ ಯೋಜನಾ ನಿರ್ದೇಶಕ ಟಿ.ಎಸ್.ಫಾಯದೆ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.