ADVERTISEMENT

ವಿದೇಶ ವಿದ್ಯಮಾನ | ಗಾಜಾದಲ್ಲಿ ‘ಹೊಸ ಬೆಳಕು’?

ಟ್ರಂಪ್ ಒತ್ತಡದಿಂದ ಒಪ್ಪಂದ; ಶಾಂತಿ ಸ್ಥಾಪನೆ ಮತ್ತು ವ್ಯವಸ್ಥೆಯ ಮರುನಿರ್ಮಾಣವೇ ಸವಾಲು

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 1:19 IST
Last Updated 15 ಅಕ್ಟೋಬರ್ 2025, 1:19 IST
<div class="paragraphs"><p>ಕದನ ವಿರಾಮ ಘೋಷಣೆ ನಂತರ ನಿರಾಶ್ರಿತರ ಕೇಂದ್ರದಲ್ಲಿದ್ದ ಗಾಜಾದ ನಾಗರಿಕರು ಅವಶೇಷಗಳ ನಡುವಿನ ರಸ್ತೆಯಲ್ಲಿ&nbsp;ತಮ್ಮ ಮನೆಗಳತ್ತ ಸಾಗಿದರು</p></div>

ಕದನ ವಿರಾಮ ಘೋಷಣೆ ನಂತರ ನಿರಾಶ್ರಿತರ ಕೇಂದ್ರದಲ್ಲಿದ್ದ ಗಾಜಾದ ನಾಗರಿಕರು ಅವಶೇಷಗಳ ನಡುವಿನ ರಸ್ತೆಯಲ್ಲಿ ತಮ್ಮ ಮನೆಗಳತ್ತ ಸಾಗಿದರು

   
ಹಮಾಸ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದಿಂದ ಜರ್ಜರಿತವಾಗಿದ್ದ ಗಾಜಾ ಪಟ್ಟಿಯಲ್ಲಿ ಹೊಸ ಬೆಳಕು ಮೂಡುವ ಸಾಧ್ಯತೆಗಳು ಗೋಚರಿಸುತ್ತಿವೆ. ಅಮೆರಿಕ ಮತ್ತಿತರ ದೇಶಗಳ ಮಧ್ಯಸ್ಥಿಕೆಯಲ್ಲಿ ಶಾಂತಿ ಒಪ್ಪಂದ ಏರ್ಪಟ್ಟಿದ್ದು, ಎರಡೂ ಗುಂಪುಗಳು ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿವೆ. ಗಾಜಾ ಪಟ್ಟಿಯ ಶೇ 80ರಷ್ಟು ಕಟ್ಟಡಗಳು ಹಾನಿಗೊಳಗಾಗಿದ್ದು, ಆಹಾರ, ವೈದ್ಯಕೀಯ ನೆರವು, ಶಾಂತಿಗಾಗಿ ಅಲ್ಲಿನ ಜನರು ಎದುರು ನೋಡುತ್ತಿದ್ದಾರೆ. ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿಯ ಪ್ರಮುಖ ‘ಸ್ಪರ್ಧಿ’ಯಾಗಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾತ್ರ ಈ ಒಪ್ಪಂದದಲ್ಲಿ ಪ್ರಮುಖವಾಗಿದೆ

ಒಂದು ಕಡೆ ಕಣ್ಣೀರು. ಮತ್ತೊಂದು ಕಡೆ ಹರ್ಷೋದ್ಗಾರ. ಕೆಲವರಂತೂ ಮಾತೇ ಹೊರಡದೇ ಗದ್ಗದಿತ ರಾಗಿದ್ದರು. ಇನ್ನೆಂದಿಗೂ ಮುಖ ಕಾಣಲು ಸಾಧ್ಯವಿಲ್ಲ ಎಂದು ಕೊಂಡಿದ್ದಂಥವರು, ಜೀವಂತ ಇರಲಾರರು ಎಂದುಕೊಂಡಿದ್ದ ಪ್ರೀತಿಪಾತ್ರರು ಎದುರಿಗೆ ಬಂದು ನಿಂತ ಗಳಿಗೆ ಅದು. ಯಾವುದು ಅಸಾಧ್ಯ ಎಂದು ಭಾವಿಸಲಾಗಿತ್ತೋ, ಅದು ಸಾಧ್ಯವಾಗಿದ್ದ ಕ್ಷಣ...

ಎರಡು ವರ್ಷಗಳ ಯುದ್ಧದಿಂದ ಜರ್ಜರಿತವಾಗಿರುವ ಗಾಜಾ ಪಟ್ಟಿಯಲ್ಲಿ ಈಗ ಮನ ಕಲುಕುವ ದೃಶ್ಯಗಳು ಕಾಣುತ್ತಿವೆ. ಅಮೆರಿಕ ಮತ್ತು ಇತರ ದೇಶಗಳ ಪ್ರಯತ್ನದಿಂದ ಶಾಂತಿ ಒಪ್ಪಂದ ಏರ್ಪಟ್ಟಿದ್ದು, ಒಪ್ಪಂದಕ್ಕೆ ಅಮೆರಿಕದೊಂದಿಗೆ ಈಜಿಪ್ಟ್, ಕತಾರ್, ಟರ್ಕಿ ದೇಶಗಳೂ ಸಾಕ್ಷಿದಾರರಾಗಿ ಸಹಿ ಹಾಕಿವೆ. ಸೋಮವಾರ, ಹಮಾಸ್ ತನ್ನ ವಶದಲ್ಲಿದ್ದ 20 ಇಸ್ರೇಲಿಗರನ್ನು ಬಿಡುಗಡೆ ಮಾಡಿದ್ದರೆ, ಇಸ್ರೇಲ್ 2,000 ಕೈದಿಗಳು ಮತ್ತು ತಾನು ವಶಕ್ಕೆ ಪಡೆದಿದ್ದ ಪ್ಯಾಲೆಸ್ಟೀನ್‌ನ 1,700 ಮಂದಿಯನ್ನು ಬಿಡುಗಡೆ ಮಾಡಿದೆ.

ADVERTISEMENT

ಈ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿಗೆ ತಾನು ಅರ್ಹ ವ್ಯಕ್ತಿ ಎಂದು ಸ್ವಯಂ ಪ್ರತಿಪಾದಿಸಿಕೊಂಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಶಾಂತಿ ಒಪ್ಪಂದದಲ್ಲಿ ಮುಖ್ಯ ಪಾತ್ರ ವಹಿಸಿದ್ದು ಗಮನಾರ್ಹ. ಆದರೆ, ಗಾಜಾ ಪಟ್ಟಿಯಲ್ಲಿ ಸಂಪೂರ್ಣ ಶಾಂತಿ ಸ್ಥಾಪನೆ, ಮರು ನಿರ್ಮಾಣ ಸುಲಭದ ಕೆಲಸವಲ್ಲ. ಅದು ಬಹು ದೊಡ್ಡ ಸವಾಲು. ಅಂತರರಾಷ್ಟ್ರೀಯ ಸಮುದಾಯದ ಆಶಯದಂತೆ ಅಲ್ಲಿ ಪೂರ್ಣ ಪ್ರಮಾಣದಲ್ಲಿ ಶಾಂತಿ ನೆಲಸುವಂತೆ ಮಾಡಲು ಅವರು ಇದುವರೆಗೆ ವಹಿಸಿದ ಪಾತ್ರಕ್ಕಿಂತಲೂ ಹೆಚ್ಚಿನ ಶ್ರಮವನ್ನು ಮುಂದಿನ ದಿನಗಳಲ್ಲಿ ಹಾಕಬೇಕಿದೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವಿಶ್ಲೇಷಿಸಿವೆ.

ಯಾಕೆಂದರೆ, ಈ ಹಿಂದೆಯೂ ಇಸ್ರೇಲ್‌ ಮತ್ತು ಹಮಾಸ್‌ ನಡುವೆ ಕದನ ವಿರಾಮ ಘೋಷಿಸಲು ಪ್ರಯತ್ನಗಳು ನಡೆದಿದ್ದವು. ಆದರೆ, ಇಸ್ರೇಲ್‌ ಇದಕ್ಕೆ ಪೂರಕವಾಗಿ ನಡೆದುಕೊಂಡಿರಲಿಲ್ಲ. ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರ ಕೆಲವು ನಿರ್ಧಾರಗಳು ಶಾಂತಿ ಪ್ರಕ್ರಿಯೆಗೆ ತಡೆ ಒಡ್ಡಿದ ನಿದರ್ಶನಗಳುಂಟು.

ಮಾತು ಬದಲಿಸುವರೇ ನೆತನ್ಯಾಹು?: ನೆತನ್ಯಾಹು ಅವರೊಂದಿಗೆ ವ್ಯವಹರಿಸುವುದು ಅಷ್ಟು ಸುಲಭವಲ್ಲ. ಅಮೆರಿಕದ ಹಿಂದಿನ ಅಧ್ಯಕ್ಷರಾದ ಬಿಲ್ ಕ್ಲಿಂಟನ್ ಮತ್ತು ಜೋ ಬೈಡನ್ ಅವರಿಗೂ ಇದರ ಅನುಭವ ಆಗಿದೆ. ಅಮೆರಿಕದ ಸಲಹೆಯನ್ನೂ ಮೀರಿ ಹಲವು ಬಾರಿ ಗಾಜಾ ಪಟ್ಟಿಯ ಮೇಲೆ ಸೇನಾ ದಾಳಿ ನಡೆಸುವ ಮೂಲಕ ಟ್ರಂಪ್ ಅವರ ಆಡಳಿತಕ್ಕೂ ನೆತನ್ಯಾಹು ಹಲವು ಸಂದರ್ಭಗಳಲ್ಲಿ ತಲೆನೋವು ತಂದಿದ್ದರು.

ಆದರೆ, ಈ ಬಾರಿ ಟ್ರಂಪ್ ಬಿಗಿ ಪಟ್ಟು ಹಿಡಿದು ನೆತನ್ಯಾಹು ಅವರನ್ನು ಕದನ ವಿರಾಮಕ್ಕೆ ಒಪ್ಪಿಸಿದ್ದಾರೆ. ತಮ್ಮ ಮಿತ್ರ ಪಕ್ಷಗಳ ವಿರೋಧದ ನಡುವೆಯೂ ನೆತನ್ಯಾಹು ಅವರು ಒಲ್ಲದ ಮನಸ್ಸಿನಿಂದಲೇ ಕದನವಿರಾಮಕ್ಕೆ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಅದೇ ರೀತಿಯಲ್ಲಿ ಇತ್ತ,  ಒತ್ತೆಯಾಳುಗಳ ಬಿಡುಗಡೆಗೆ ಹಮಾಸ್ ಅನ್ನು ಒಪ್ಪಿಸುವಂತೆ ಪಶ್ಚಿಮ ಏಷ್ಯಾದ ರಾಷ್ಟ್ರಗಳ ಮುಖಂಡರ ಮೇಲೆ ಟ್ರಂಪ್ ಒತ್ತಡ ಹಾಕಿದ್ದರು. ಟ್ರಂಪ್ ಅವರ ಪ್ರಯತ್ನ ಫಲಿಸಿ, ಒಪ್ಪಂದ ಏರ್ಪಟ್ಟಿದೆ. ಆದರೆ, ಮುಂದಿನ ದಾರಿ ಇಷ್ಟು ಸುಲಭವಿಲ್ಲ ಎನ್ನಲಾಗುತ್ತಿದೆ.

ಟ್ರಂಪ್ ಉಸ್ತುವಾರಿಯಲ್ಲಿ ರೂಪು ತಳೆದಿರುವ ಒಪ್ಪಂದದ 20 ಅಂಶಗಳಲ್ಲಿ ಕೆಲವು ವಿಚಾರಗಳ ಬಗ್ಗೆ ಹಮಾಸ್ ಮತ್ತು ಇಸ್ರೇಲ್ ಭಿನ್ನಮತ ವ್ಯಕ್ತಪಡಿಸಿವೆ. ಜತೆಗೆ, ಇಸ್ರೇಲ್‌ನಲ್ಲಿ ಮುಂದಿನ ವರ್ಷ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ತಮ್ಮ ಬಲಪಂಥೀಯ ಮಿತ್ರರನ್ನು ಉಳಿಸಿಕೊಳ್ಳಲು, ವಿರೋಧಿಗಳನ್ನು ಅಧಿಕಾರದಿಂದ ದೂರವಿಡಲು ನೆತನ್ಯಾಹು ಕದನ ವಿರಾಮ ಕುರಿತ ತಮ್ಮ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಯೂ ಇದೆ. 

ಟ್ರಂಪ್ ರೂಪಿಸಿರುವ ಶಾಂತಿ ಸೂತ್ರದ ಸಾಮರ್ಥ್ಯವೇ ಅದರ ದೌರ್ಬಲ್ಯವೂ ಆಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಒಪ್ಪಂದದಲ್ಲಿ ಅನೇಕ ಅಂಶಗಳನ್ನು ವಿವರವಾಗಿ ನಮೂದಿಸಿಲ್ಲ. ವಾಸ್ತವವಾಗಿ, ಅದರಲ್ಲಿನ ಅಸ್ಪಷ್ಟತೆಯೇ ಎರಡೂ ಗುಂಪುಗಳು ಕದನ ವಿರಾಮಕ್ಕೆ ಸಮ್ಮತಿಸಲು ಕಾರಣವಾಗಿದೆ. ಟ್ರಂಪ್ ಒಪ್ಪಂದದ ಬಗ್ಗೆ ಅತ್ಯುತ್ಸಾಹ ತೋರುತ್ತಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ಶಾಂತಿ ನೆಲೆಸಿದೆ ಎಂದೂ, ಇದು ಚಾರಿತ್ರಿಕ ಎಂದೂ ಪ್ರತಿಪಾದಿಸುತ್ತಿದ್ದಾರೆ. ಆದರೆ, ಶಾಂತಿ ಮಾತುಕತೆಯ ಮುಖ್ಯ ಭಾಗ ಈಗಷ್ಟೇ ಆರಂಭವಾಗಿದೆ ಎಂದು ಪರಿಣತರು ಹೇಳುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಗಾಜಾ ಜನರ ಶಾಂತಿಯ ಕನಸು ನನಸಾಗುವುದೇ ಇಲ್ಲಾ, ಕನಸಾಗಿಯೇ ಉಳಿಯುವುದೇ ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ. 

ಮರುನಿರ್ಮಾಣದ ಸವಾಲು

ಗಾಜಾವನ್ನು ಮರುನಿರ್ಮಿಸುವುದು ಒಂದು ಸವಾಲಾಗಿದೆ. ಸಂಘರ್ಷದಿಂದ ಗಾಜಾ ಪಟ್ಟಿಯಲ್ಲಿ ಶೇ 10ರಷ್ಟು ಮಂದಿ ಸತ್ತಿದ್ದರೆ, ಶೇ 90ರಷ್ಟು ಮಂದಿ ನಿರ್ವಸಿತರಾಗಿದ್ದಾರೆ. ಈ ಪ್ರದೇಶದ ಶೇ 80ರಷ್ಟು ಕಟ್ಟಡಗಳು ಹಾನಿಗೊಳಗಾಗಿವೆ. ಶೇ 95ರಷ್ಟು ಆಸ್ಪತ್ರೆಗಳು, ಶೇ 90ರಷ್ಟು ಶಾಲೆಗಳು ಹಾನಿಗೊಳಗಾಗಿವೆ. ಗಾಜಾ ನಗರದಲ್ಲಿ ಹಾನಿಯ ಪ್ರಮಾಣ ಶೇ 92ರಷ್ಟು ಎನ್ನಲಾಗಿದೆ. ವಿಶ್ವಸಂಸ್ಥೆ ಯು ಪರಿಹಾರ ಕಾರ್ಯಗಳನ್ನು ನಡೆಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯು ಸಂತ್ರಸ್ತರಿಗೆ ವೈದ್ಯಕೀಯ ನೆರವು ನೀಡುವ ತನ್ನ ಚಟುವಟಿಕೆಗಳನ್ನು ತೀವ್ರಗೊಳಿಸಿದೆ. 

ಈ ಪ್ರದೇಶದಲ್ಲಿ ಕನಿಷ್ಠ 5.5 ಕೋಟಿ ಟನ್‌ಗಳಷ್ಟು ಅವಶೇಷಗಳನ್ನು ತೆರವುಗೊಳಿಸಬೇಕಿದೆ. ಅವಶೇಷಗಳಡಿ ಶವಗಳು ಸಿಗುತ್ತಿದ್ದು, ಅವುಗಳನ್ನು ಪತ್ತೆ ಹಚ್ಚುವುದು, ಸಂಬಂಧಪಟ್ಟವರನ್ನು ಹುಡುಕಿ ಹಸ್ತಾಂತರಿಸುವುದು ಪ್ರಯಾಸದ ಕೆಲಸವಾಗಿದೆ. ಗಾಜಾ ವನ್ನು ವಾಸಯೋಗ್ಯ ಪ್ರದೇಶವನ್ನಾಗಿ ರೂಪಿಸಲು 7,000 ಕೋಟಿ ಡಾಲರ್ (₹6.21 ಲಕ್ಷ ಕೋಟಿ) ಅಗತ್ಯವಿದೆ ಎಂದು ವಿಶ್ವಸಂಸ್ಥೆ, ಐರೋಪ್ಯ ಒಕ್ಕೂಟ ಮತ್ತು ವಿಶ್ವಬ್ಯಾಂಕ್ ಅಂದಾಜಿಸಿವೆ.

ಮಧ್ಯಂತರ ಸರ್ಕಾರ 

2007ರಿಂದ ಗಾಜಾವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿರುವ ಹಮಾಸ್‌ ಬಂಡುಕೋರ ಸಂಘಟನೆಯು ಶಾಂತಿ ಒಪ್ಪಂದಕ್ಕೆ ಸಮ್ಮತಿ ಸೂಚಿಸಿದ್ದರೂ, ಗಾಜಾದ ನಿಯಂತ್ರಣವನ್ನು ಬಿಟ್ಟುಕೊಡಲು ಅದಕ್ಕೆ ಮನಸ್ಸಿಲ್ಲ ಎಂದು ಹೇಳಲಾಗುತ್ತಿದೆ. 

ಗಾಜಾ ಪಟ್ಟಿಯನ್ನು ಭಯೋತ್ಪಾದನೆ ಮುಕ್ತ ವಲಯವನ್ನಾಗಿ ಮಾಡಲಾಗುವುದು; ಅದು ನೆರೆ ರಾಷ್ಟ್ರಗಳಿಗೆ ಇನ್ನು ಮುಂದೆ ಬೆದರಿಕೆ ಒಡ್ಡದು ಎಂಬುದು 20 ಅಂಶಗಳ ಒಪ್ಪಂದದ ಮೊದಲ ಅಂಶ. ಬಂಡುಕೋರರು ಶಸ್ತ್ರ ತ್ಯಜಿಸಬೇಕು. ಅಂತಹವರಿಗೆ ಕ್ಷಮಾದಾನ ನೀಡಲಾಗುವುದು ಎಂದೂ ಒಪ್ಪಂದದಲ್ಲಿ ಹೇಳಲಾಗಿದೆ. 

ಗಾಜಾದಲ್ಲಿ ತಾತ್ಕಾಲಿಕವಾಗಿ ಮಧ್ಯಂತರ ಸರ್ಕಾರ ರಚನೆಯಾಗಲಿದ್ದು, ರಾಜಕೀಯಯೇತರ ವ್ಯಕ್ತಿಗಳಿಂದ ಕೂಡಿದ ಪ್ಯಾಲೆಸ್ಟೀನ್‌ ಸಮಿತಿಯು ಗಾಜಾಪಟ್ಟಿ ಆಡಳಿತ ನಿರ್ವಹಿಸಲಿದೆ. ಪ್ಯಾಲೆಸ್ಟೀನ್‌ ಮತ್ತು ಅಂತರರಾಷ್ಟ್ರೀಯ ತಜ್ಞರು ಈ ಸಮಿತಿಯಲ್ಲಿರಲಿದ್ದಾರೆ.  ಡೊನಾಲ್ಡ್‌ ಟ್ರಂಪ್‌ ಅಧ್ಯಕ್ಷತೆಯ ‘ಶಾಂತಿ ಸ್ಥಾಪನಾ ಮಂಡಳಿ’ಯು ಮಧ್ಯಂತರ ಸರ್ಕಾರದ ಮೇಲ್ವಿಚಾರಣೆ ನಡೆಸಲಿದೆ. ಪ್ಯಾಲೆಸ್ಟೀನ್‌ ಪ್ರಾಧಿಕಾರದ ಸುಧಾರಣಾ ಕಾರ್ಯಕ್ರಮಗಳು ಪೂರ್ಣಗೊಳ್ಳುವವರೆಗೆ ಈ ಮಂಡಳಿಯು ಗಾಜಾದ ಮರು ಅಭಿವೃದ್ಧಿಯ ಚೌಕಟ್ಟನ್ನು ರೂಪಿಸಲಿದೆ ಮತ್ತು ಹಣಕಾಸಿನ ನಿರ್ವಹಣೆ ಮಾಡಲಿದೆ ಎಂದು ಒಪ್ಪಂದಲ್ಲಿ ವಿವರಿಸಲಾಗಿದೆ. 

ಪ್ಯಾಲೆಸ್ಟೀನ್‌ಗೆ ಸಿಗುವುದೇ ದೇಶದ ಸ್ಥಾನಮಾನ?

ಇಸ್ರೇಲ್‌ ಮತ್ತು ಹಮಾಸ್‌ ನಡುವೆ ಕದನ ವಿರಾಮ ಒಪ್ಪಂದ ಏರ್ಪಡುತ್ತಿದ್ದಂತೆಯೇ ಪ್ಯಾಲೆಸ್ಟೀನ್‌ಗೆ ರಾಷ್ಟ್ರದ ಸ್ಥಾನಮಾನ ನೀಡುವ ಬಗ್ಗೆ ಚರ್ಚೆ ಆರಂಭವಾಗಿದೆ. ಅಮೆರಿಕವನ್ನು ಬಿಟ್ಟು ಇತರೆ ಪಶ್ಚಿಮದ ರಾಷ್ಟ್ರಗಳು ಕೂಡ ಪ್ಯಾಲೆಸ್ಟೀನ್‌ ಅನ್ನು ರಾಷ್ಟ್ರವಾಗಿ ಘೋಷಿಸುವುದಕ್ಕೆ ಬೆಂಬಲ ಸೂಚಿಸಿವೆ. ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳ ಪೈಕಿ 157 ದೇಶಗಳು ಪ್ಯಾಲೆಸ್ಟೀನ್‌ ಅನ್ನು ‘ಸಾರ್ವಭೌಮ ರಾಷ್ಟ್ರ’ ಎಂದು ಪರಿಗಣಿಸಿವೆ. ವಿಶ್ವಸಂಸ್ಥೆಯ ಸದಸ್ಯತ್ವ ಪಡೆಯಲು ಪ್ಯಾಲೆಸ್ಟೀನ್‌ ದಶಕಗಳಿಂದ ಯತ್ನಿಸುತ್ತಿದೆಯಾದರೂ, ಅಮೆರಿಕ ಈ ನಿರ್ಣಯವನ್ನು ವಿರೋಧಿಸುತ್ತಿರುವುದರಿಂದ ಪ್ಯಾಲೆಸ್ಟೀನ್‌ ಈಗಲೂ ವಿಶ್ವಸಂಸ್ಥೆಯಲ್ಲಿ ಸದಸ್ಯಯೇತರ ವೀಕ್ಷಕ ರಾಷ್ಟ್ರವಾಗಿಯೇ ಇದೆ. 

ಈಗ ಇಸ್ರೇಲ್‌ ಮತ್ತು ಹಮಾಸ್‌ ನಡುವೆ ಏರ್ಪಟ್ಟಿರುವ 20 ಅಂಶಗಳ ಕದನವಿರಾಮ ಒಪ್ಪಂದದಲ್ಲಿ ಪ್ರತ್ಯೇಕ ರಾಷ್ಟ್ರದ ಸ್ಥಾನಮಾನ ನೀಡುವ ಬಗ್ಗೆ ಸ್ಪಷ್ಟವಾಗಿ ಉಲ್ಲೇಖ ಮಾಡಿಲ್ಲ. ಆದರೆ, 19ನೇ ಅಂಶದಲ್ಲಿ ಇದರ ಬಗ್ಗೆ ಪ್ರಸ್ತಾಪವಿದೆ.   

ಗಾಜಾದ ಮರು ಅಭಿವೃದ್ಧಿ ಮತ್ತು ಪ್ಯಾಲೆಸ್ಟೀನ್ ಪ್ರಾಧಿಕಾರದ (ಪಿಎ) ಸುಧಾರಣಾ ಕಾರ್ಯಕ್ರಮಗಳು ಯೋಜಿಸಿದಂತೆಯೇ ಪೂರ್ಣವಾದಾಗ, ಜನರ ಬಯಕೆಯಂತೆ ಪ್ಯಾಲೆಸ್ಟೀನಿಯನ್ನರ ದೃಢ ಸಂಕಲ್ಪ ಮತ್ತು ರಾಷ್ಟ್ರದ ಸ್ಥಾನಮಾನ ಹೊಂದುವ ವಿಶ್ವಾಸಾರ್ಹ ಸನ್ನಿವೇಶಗಳು ನಿರ್ಮಾಣವಾಗಲಿವೆ ಎಂದು ಒಪ್ಪಂದದ 19ನೇ ಅಂಶ ಹೇಳುತ್ತದೆ. 

‍ಶಾಂತಿಯುತ ಮತ್ತು ಸಮೃದ್ಧ ಸಹಬಾಳ್ವೆಗಾಗಿ ರಾಜಕೀಯ ವ್ಯವಸ್ಥೆಯೊಂದನ್ನು ರೂಪಿಸುವುದಕ್ಕಾಗಿ ಇಸ್ರೇಲ್‌ ಮತ್ತು ಪ್ಯಾಲೆಸ್ಟೀನಿಯನ್ನರ ನಡುವೆ ಮಾತುಕತೆ ನಡೆಯುವಂತೆ ಅಮೆರಿಕ ನೋಡಿಕೊಳ್ಳಲಿದೆ ಎಂದು ಒಪ್ಪಂದದ 20ನೇ ಅಂಶದಲ್ಲಿ ಹೇಳಲಾಗಿದೆ. 

ಇಸ್ರೇಲ್‌ ವಿರೋಧ

ಪ್ಯಾಲೆಸ್ಟೀನ್‌ಗೆ ರಾಷ್ಟ್ರದ ಸ್ಥಾನಮಾನ ನೀಡುವುದಕ್ಕೆ ಇಸ್ರೇಲ್‌ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ. 

ಇಸ್ರೇಲ್‌ ಮತ್ತು ಪ್ಯಾಲೆಸ್ಟೀನ್‌ ನಡುವಿನ ಬಿಕ್ಕಟ್ಟಿಗೆ ಶತಮಾನದ ಇತಿಹಾಸವಿದೆ. ಪಶ್ಚಿಮ ಏಷ್ಯಾದಲ್ಲಿ ಯಹೂದಿಗಳಿಗೆ ನೆಲಸಲು ಅವಕಾಶ ನೀಡಿದಾಗಿನಿಂದಲೂ ಸ್ಥಳೀಯ ಅರಬರು ಹಾಗೂ ಯಹೂದಿಗಳ ನಡುವೆ ಸಂಘರ್ಷ ನಡೆಯುತ್ತಿದೆ. 

ಮೊದಲ ವಿಶ್ವ ಮಹಾಯುದ್ಧದಲ್ಲಿ ಬ್ರಿಟನ್‌ ಒಟ್ಟೊಮನ್‌ ಸಾಮ್ರಾಜ್ಯವನ್ನು ಸೋಲಿಸಿದ ನಂತರ ಪ್ಯಾಲೆಸ್ಟೀನ್‌ ಎಂಬ ಪ್ರದೇಶವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ಆ ಪ್ರದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ಅರಬರು ಮತ್ತು ಕಡಿಮೆ ಸಂಖ್ಯೆಯಲ್ಲಿ ಯಹೂದಿಗಳು ನೆಲಸಿದ್ದರು.

ಪ್ಯಾಲೆಸ್ಟೀನ್‌ ಅನ್ನು ಯಹೂದಿಗಳ ನೆಲವನ್ನಾಗಿ ಮಾಡುವುದಕ್ಕೆ ಬ್ರಿಟನ್‌ ಒಪ್ಪಿದಾಗ ಅರಬರು ಮತ್ತು ಯಹೂದಿಗಳ ನಡುವೆ ಘರ್ಷಣೆ ಆರಂಭವಾಯಿತು.

1947ರ ಹೊತ್ತಿಗೆ ಬ್ರಿಟಿಷರ ಆಡಳಿತ ವಿರುದ್ಧದ ಹೋರಾಟ ಮತ್ತು ಅರಬರು–ಯಹೂದಿಗಳ ನಡುವಿನ ಸಂಘರ್ಷ ಹೆಚ್ಚಾದ ನಂತರ ಪ್ಯಾಲೆಸ್ಟೀನ್‌ ಅನ್ನು ವಿಭಾಗಿಸಿ ಪ್ರತ್ಯೇಕ ಯಹೂದಿಗಳ ಮತ್ತು ಅರಬರ ರಾಷ್ಟ್ರವನ್ನಾಗಿ ಮಾಡುವುದಕ್ಕೆ ವಿಶ್ವಸಂಸ್ಥೆ ನಿರ್ಧರಿಸಿತು. ಇತರ ಅರಬ್‌ ರಾಷ್ಟ್ರಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದವು. 1948ರಲ್ಲಿ ಅಲ್ಲಿ ತನ್ನ ಆಡಳಿತವನ್ನು ಕೊನೆಗೊಳಿಸಲು ನಿರ್ಧರಿಸಿದ ಬ್ರಿಟನ್‌, ಈ ಬಿಕ್ಕಟ್ಟನ್ನು ಪರಿಹರಿಸುವ ಹೊಣೆಯನ್ನು ವಿಶ್ವಸಂಸ್ಥೆಗೆ ಹಸ್ತಾಂತರಿಸಿತು. 

ಬ್ರಿಟಿಷ್‌ ಆಡಳಿತ ಕೊನೆಗೊಳ್ಳುವುದಕ್ಕೂ ಕೆಲವು ಗಂಟೆಗಳ ಮೊದಲು ಪ್ಯಾಲೆಸ್ಟೀನ್‌ನಲ್ಲಿದ್ದ ಯಹೂದಿ ಮುಖಂಡರು ಇಸ್ರೇಲ್‌ ಎಂಬ ಸ್ವತಂತ್ರ ರಾಷ್ಟ್ರವನ್ನು ಘೋಷಿಸಿಕೊಂಡರು. ಮರುವರ್ಷವೇ ವಿಶ್ವಸಂಸ್ಥೆ ಇಸ್ರೇಲ್‌ ಒಂದು ರಾಷ್ಟ್ರ ಎಂದು ಅಂಗೀಕರಿಸಿತು. 

ಆ ನಂತರ ಇಸ್ರೇಲ್‌ ಹಾಗೂ ನೆರೆಯ ಅರಬ್‌ ರಾಷ್ಟ್ರಗಳ (ಈಜಿಪ್ಟ್‌, ಜೋರ್ಡನ್‌, ಸಿರಿಯಾ) ನಡುವೆ ಯುದ್ಧಗಳು (1948, 1967) ನಡೆದವು. ಯುದ್ಧದಲ್ಲಿ ಇಸ್ರೇಲ್‌ ಇಡೀ ಪ್ಯಾಲೆಸ್ಟೀನ್‌ ಅನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ಪ್ಯಾಲೆಸ್ಟೀನ್‌ನ ಬಹುಪಾಲು ಭೂಪ್ರದೇಶ ಇಸ್ರೇಲ್‌ ನಿಯಂತ್ರಣದಲ್ಲಿದೆ.   

ಪೂರ್ವ ಜೆರುಸಲೇಂ, ವೆಸ್ಟ್‌ಬ್ಯಾಂಕ್‌ ಮತ್ತು ಗಾಜಾ ತನಗೆ ಸೇರಿದ್ದು ಎಂಬುದು ಪ್ಯಾಲೆಸ್ಟೀನ್‌ನ ವಾದ. ಆದರೆ, ಇದನ್ನು ಇಸ್ರೇಲ್‌ ಒಪ್ಪುತ್ತಿಲ್ಲ. ಹಾಲಿ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಈ ಹಿಂದೆ ಪ್ರಧಾನಿಯಾಗಿದ್ದಾಗಲೂ ಪ್ಯಾಲೆಸ್ಟೀನ್‌ ಪ್ರತ್ಯೇಕ ರಾಷ್ಟ್ರ ಸ್ಥಾನಮಾನ ನೀಡುವುದನ್ನು ವಿರೋಧಿಸುತ್ತಲೇ ಬಂದಿದ್ದಾರೆ. 

ಆಧಾರ: ರಾಯಿಟರ್ಸ್, ಬಿಬಿಸಿ, ಟೈಮ್ ಮ್ಯಾಗಜಿನ್, ಸಂಘರ್ಷದ ಕುರಿತ ಬ್ರೌನ್‌ ವಿವಿ ವರದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.