ಅಂತರ್ಜಲ ಬಳಕೆ ಮತ್ತು ನಿರ್ವಹಣೆ ಸಂಬಂಧದ ಕೇಂದ್ರ ಅಂತರ್ಜಲ ಪ್ರಾಧಿಕಾರದ ಮಾರ್ಗಸೂಚಿಯನ್ನು ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕೊಳವೆ ಬಾವಿಗಳ ನೀರಿಗೆ ಡಿಜಿಟಲ್ ಟೆಲಿಮಿಟ್ರಿ ಅಳವಡಿಕೆ, ವಾಣಿಜ್ಯ, ಕೈಗಾರಿಕೆ, ಗಣಿಗಾರಿಕೆ, ಮೂಲಸೌಕರ್ಯ ಅಭಿವೃದ್ಧಿಗೆ ಬಳಸುವ ಕೊಳವೆಬಾವಿ ನೀರಿಗೆ ಮತ್ತು ಟ್ಯಾಂಕರ್‌ಗಳಿಗೆ ಶುಲ್ಕ ವಿಧಿಸಲು ತೀರ್ಮಾನಿಸಲಾಗಿದೆ. ಅಂತರ್ಜಲದ ಅತಿಬಳಕೆಯನ್ನು ತಡೆಗಟ್ಟಲು ತರಲಾಗುತ್ತಿರುವ ಈ ನಿಯಮಗಳಲ್ಲಿ ಕೆಲವು ಸ್ವಾಗತಾರ್ಹವೂ ಆಗಿವೆ. ಆದರೆ, ಕೇಂದ್ರ ಅಂತರ್ಜಲ ಪ್ರಾಧಿಕಾರದ ಕೆಲವು ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರ ತಿದ್ದುಪಡಿ ಮಾಡಲು ಮುಂದಾಗಿದೆ. ಇದರಿಂದ ಅಂತರ್ಜಲವು ಗಂಭೀರ ಸ್ಥಿತಿಯಲ್ಲಿರುವ ತಾಲ್ಲೂಕುಗಳಲ್ಲಿ ಪರಿಸ್ಥಿತಿ ಬಿಗಡಾಯಿಸುವ ಸಂಭವ ಇದೆ. ಜತೆಗೆ, ನಿಯಮ ಜಾರಿಯ ಹೊಣೆ ಹೊತ್ತವರ ಭ್ರಷ್ಟಾಚಾರವೂ ಸೇರಿದರೆ, ಅಂತರ್ಜಲ ಅಪಾಯಕಾರಿ ಮಟ್ಟಕ್ಕೆ ಕುಸಿಯಬಹುದು ಎನ್ನುವ ಆತಂಕ ವ್ಯಕ್ತವಾಗಿದೆ
ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ (ಎನ್‌ಜಿಟಿ) ಸೂಚನೆಯಂತೆ ಕೇಂದ್ರ ಅಂತರ್ಜಲ ಪ್ರಾಧಿಕಾರವು ಅಂತರ್ಜಲ ಬಳಕೆಯ ನಿಯಂತ್ರಣ ಮತ್ತು ನಿರ್ವಹಣೆಗಾಗಿ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡುವ ಸಂಬಂಧ ಮಾರ್ಗಸೂಚಿಗಳನ್ನು ಪ್ರಕಟಿಸಿತ್ತು. ಅದನ್ನು ಯಥಾವತ್ತಾಗಿ ಇಲ್ಲವೇ ಅಲ್ಪ ಬದಲಾವಣೆಗಳೊಂದಿಗೆ 15 ರಾಜ್ಯಗಳಲ್ಲಿ ಅಲ್ಲಿನ ಸರ್ಕಾರಗಳೇ ಜಾರಿಗೊಳಿಸುತ್ತಿವೆ. ಉಳಿದ ರಾಜ್ಯಗಳಲ್ಲಿ ಕೇಂದ್ರ ಅಂತರ್ಜಲ ಪ್ರಾಧಿಕಾರದಿಂದ ಮಾರ್ಗಸೂಚಿಯನ್ನು ಜಾರಿಗೊಳಿಸಲಾಗುತ್ತಿದೆ. ಆ ಮಾರ್ಗಸೂಚಿಗಳನ್ನು ರಾಜ್ಯದಲ್ಲಿ ಅಳವಡಿಸಿಕೊಳ್ಳುವ ಸಂಬಂಧ ರಾಜ್ಯದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯು ರಾಜ್ಯ ಸಚಿವ ಸಂಪುಟದ ಮುಂದೆ ಇಟ್ಟಿದ್ದ ಪ್ರಸ್ತಾವವನ್ನು ಇತ್ತೀಚೆಗೆ ಸಂಪುಟ ಅನುಮೋದಿಸಿದೆ. ಇದರೊಂದಿಗೆ ರಾಜ್ಯಕ್ಕೆ ಅನ್ವಯವಾಗುವಂತೆ ಕೆಲವು ಮಾರ್ಗಸೂಚಿಗಳಿಗೆ ತಿದ್ದುಪಡಿ ತರುವ ಪ್ರಸ್ತಾವಕ್ಕೂ ಸಂಪುಟ ಒಪ್ಪಿಗೆ ನೀಡಿದೆ.
ಕರ್ನಾಟಕ ಅಂತರ್ಜಲ (ಅಭಿವೃದ್ಧಿ ನಿರ್ವಹಣೆಯ ವಿನಿಮಯ ಹಾಗೂ ನಿಯಂತ್ರಣ) ಕಾಯ್ದೆ 2011ರ ಅನ್ವಯ ಇದುವರೆಗೆ ಅಂತರ್ಜಲ ಬಳಸಲು ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆದರೆ ಸಾಕಿತ್ತು; ಬಳಕೆ ಶುಲ್ಕ ಇರಲಿಲ್ಲ ಮತ್ತು ಟ್ಯಾಂಕರ್ ನೀರು ಸರಬರಾಜಿಗೆ ಪರವಾನಗಿ ಅಗತ್ಯವೂ ಇರಲಿಲ್ಲ. ಯಾರು ಎಷ್ಟು ಅಂತರ್ಜಲವನ್ನು ಹೊರತೆಗೆದು ಬಳಸುತ್ತಿದ್ದಾರೆ ಎನ್ನುವ ವಿವರಗಳೂ ಲಭ್ಯವಿರಲಿಲ್ಲ. ಆದರೆ, ಹೊಸ ಮಾರ್ಗಸೂಚಿಗಳ ಅನ್ವಯ, ಕೊಳವೆಬಾವಿಗಳಿಗೆ ‘ಡಿಜಿಟಲ್ ಟೆಲಿಮಿಟ್ರಿ’ ಮೂಲಕ ನೀರಿನ ಪ್ರಮಾಣವನ್ನು ಅಳೆಯಲಾಗುತ್ತದೆ. ಗೃಹೋಪಯೋಗಿ ಮತ್ತು ಕೃಷಿ ಕೆಲಸಗಳಿಗೆ ಕೊಳವೆಬಾವಿಗಳ ನೀರು ಬಳಸುವುದಕ್ಕೆ ಮತ್ತು ಇನ್ನಿತರ ಕೆಲವು ಉದ್ದೇಶಗಳಿಗೆ ನೀರು ಬಳಸಲು ಯಾವುದೇ ಶುಲ್ಕ ತೆರಬೇಕಿಲ್ಲ. ಆದರೆ, ವಾಣಿಜ್ಯ, ಕೈಗಾರಿಕೆ, ಗಣಿಗಾರಿಕೆ, ಮೂಲಸೌಕರ್ಯ ಅಭಿವೃದ್ಧಿಗೆ ಬಳಸುವ ಅಂತರ್ಜಲಕ್ಕೆ ಮತ್ತು ನೀರು ಪೂರೈಸುವ ಟ್ಯಾಂಕರ್‌ಗಳಿಗೆ ಶುಲ್ಕ ವಿಧಿಸಲು ತೀರ್ಮಾನಿಸ ಲಾಗಿದೆ. ಕಾಲಕಾಲಕ್ಕೆ ಹೊರಡಿಸುವ ಪರಿಷ್ಕೃತ ಮಾರ್ಗಸೂಚಿಗಳಂತೆ ಅಂತರ್ಜಲ ತೆಗೆಯಲು ಟ್ಯಾಂಕರ್‌ನವರು ಎನ್‌ಒಸಿ ಪಡೆಯಬೇಕಾಗುತ್ತದೆ.
ಕೈಗಾರಿಕೆಗಳಿಗೂ ಟ್ಯಾಂಕರ್ ನೀರು: ಟ್ಯಾಂಕರ್ ನೀರನ್ನು ಗೃಹ ಬಳಕೆ ಮತ್ತು ಕುಡಿಯುವುದಕ್ಕೆ ಮಾತ್ರ ಬಳಸಬಹುದಾಗಿದೆ ಎಂದು ಮಾರ್ಗಸೂಚಿಯಲ್ಲಿದೆ. ಈ ನಿಯಮ ಅಂತರ್ಜಲದ ನಿರ್ವಹಣೆಯ ದೃಷ್ಟಿಯಿಂದ ಸೂಕ್ತವಾಗಿಯೂ ಇದೆ. ಆದರೆ, ಕೈಗಾರಿಕಾ ಅಭಿವೃದ್ಧಿಯ ಹೆಸರಿನಲ್ಲಿ ರಾಜ್ಯದಲ್ಲಿ ಈ ನಿಯಮಕ್ಕೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ. ಕೆಲವು ಪ್ರದೇಶಗಳಲ್ಲಿ ನೀರಿನ ಕೊರತೆ ಇದೆ. ಇನ್ನೂ ಕೆಲವು ಕಡೆಗಳಲ್ಲಿನ ಅಂತರ್ಜಲ ಹೆಚ್ಚು ಲವಣಾಂಶಗಳಿಂದ ಕೂಡಿದ್ದು, ಕೈಗಾರಿಕೆಗಳ ಬಳಕೆಗೆ ಅರ್ಹವಾಗಿರುವುದಿಲ್ಲ; ಇದರಿಂದ ಕೈಗಾರಿಕೆ ಆಧಾರಿತ ಆರ್ಥಿಕತೆಗೆ ಪೆಟ್ಟಾಗುವ ಸಾಧ್ಯತೆ ಇರುವುದರಿಂದ ಟ್ಯಾಂಕರ್ ನೀರನ್ನು ಕೈಗಾರಿಕೆ, ಗಣಿಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಬಳಸಲು ಅನುಮತಿ (ನಿರಾಕ್ಷೇಪಣಾ ಪತ್ರ) ನೀಡಬಹುದು’ ಎಂದು ಮಾರ್ಗಸೂಚಿಯನ್ನು ರಾಜ್ಯದಲ್ಲಿ ಬದಲಾವಣೆ ಮಾಡಲು ನಿರ್ಧರಿಸಿದೆ.
ಅತಿ ಬಳಕೆ ತಾಲ್ಲೂಕುಗಳಲ್ಲೂ ಅನುಮತಿ: ರಾಜ್ಯದಲ್ಲಿ ಪ್ರಸ್ತುತ ಹಲವು ತಾಲ್ಲೂಕುಗಳಲ್ಲಿ ಅಂತರ್ಜಲವನ್ನು ಮಿತಿ ಮೀರಿ ಬಳಸಲಾಗುತ್ತಿದೆ. ಹಲವು ತಾಲ್ಲೂಕುಗಳಲ್ಲಿ ಅಂತರ್ಜಲ ಅಪಾಯಕಾರಿ ಮಟ್ಟದಲ್ಲಿದೆ. ಈ ತಾಲ್ಲೂಕುಗಳಲ್ಲಿ ಅಂತರ್ಜಲದ ಲಭ್ಯತೆಯ ಪ್ರಮಾಣ ಅತಿ ಕಡಿಮೆ ಇದ್ದು, ಈಗಾಗಲೇ ಅಪಾಯಕಾರಿ ಸ್ಥಿತಿ ಇದೆ. ಹೀಗಾಗಿ, ಇಂತಹ ತಾಲ್ಲೂಕುಗಳಲ್ಲಿ ಮಧ್ಯಮ, ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳನ್ನು ಹೊರತುಪಡಿಸಿ ಕೈಗಾರಿಕೆಗಳ ವಿಸ್ತರಣೆಗೆ ಮತ್ತು ಹೊಸ ಕೈಗಾರಿಕೆಗಳ ಸ್ಥಾಪನೆಗೆ ಅನುಮತಿ ನೀಡಬಾರದು ಎಂದು ಕೇಂದ್ರದ ಮಾರ್ಗಸೂಚಿಯಲ್ಲಿದೆ. ಅದಕ್ಕೆ ರಾಜ್ಯದಲ್ಲಿ ತಿದ್ದುಪಡಿ ತರಲಾಗುತ್ತಿದ್ದು, ಕೈಗಾರಿಕೆಗಳ ಅಭಿವೃದ್ಧಿಯ ದೃಷ್ಟಿಯಿಂದ ಕೈಗಾರಿಕೆಗಳ ವಿಸ್ತರಣೆ ಮತ್ತು ಹೊಸ ಕೈಗಾರಿಕೆಗಳ ಸ್ಥಾಪನೆಗೆ (ನಿರ್ದಿಷ್ಟಪಡಿಸಿದ ನಿಬಂಧನೆಗಳು ಮತ್ತು ಷರತ್ತುಗಳಿಗೊಳಪಟ್ಟು) ಅನುಮತಿ ನೀಡಬಹುದು ಎಂದು ನಿಯಮ ಬದಲಿಸಲಾಗಿದೆ. ಇದರಿಂದ ಮಾರ್ಗಸೂಚಿಗಳ ಆಶಯಕ್ಕೆ ವಿರುದ್ಧವಾಗಿ ಅಂತರ್ಜಲ ಬಳಕೆ ಹೆಚ್ಚಾಗಿ, ಭವಿಷ್ಯದಲ್ಲಿ ಕುಡಿಯುವ ನೀರಿಗೂ ಭಾರಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎನ್ನುವ ಕಳವಳ ವ್ಯಕ್ತವಾಗಿದೆ.
ಭ್ರಷ್ಟಾಚಾರದಿಂದ ಗಂಭೀರ ಪರಿಸ್ಥಿತಿ ಸಾಧ್ಯತೆ: ರಾಜ್ಯದಲ್ಲಿ ಅಂತರ್ಜಲ ಅಭಿವೃದ್ಧಿ ಮತ್ತು ನಿರ್ವಹಣೆಯ ನಿಯಮ ಜಾರಿಯ ಉಸ್ತುವಾರಿಗೆ ಕರ್ನಾಟಕ ಅಂತರ್ಜಲ ಪ್ರಾಧಿಕಾರ ರಚಿಸಲಾಗಿದೆ. ಅಂತರ್ಜಲ ಕಾಯ್ದೆಯನ್ನು ಅನುಷ್ಠಾನಗೊಳಿಸಲು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಅಂತರ್ಜಲ ಸಮಿತಿಗಳು ಇರುತ್ತವೆ. ಅದೇ ರೀತಿ ಬೆಂಗಳೂರು ವ್ಯಾಪ್ತಿಯಲ್ಲಿ ಜಲಮಂಡಳಿಯ ಪ್ರಧಾನ ಮುಖ್ಯ ಎಂಜಿನಿಯರ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ಇರುತ್ತದೆ. ವಾಣಿಜ್ಯ, ಕೈಗಾರಿಕೆ, ಮನರಂಜನೆ ಮತ್ತು ಗಣಿಗಾರಿಕೆ ಮೂಲಸೌಕರ್ಯ ಅಭಿವೃದ್ಧಿ ವಿಚಾರದಲ್ಲಿ ಅಂತರ್ಜಲ ನಿರ್ವಹಣೆ ಮತ್ತು ನಿಯಂತ್ರಣ ಮಾಡಲು ಪ್ರಸ್ತುತ ಇರುವ ನಿಯೋಜಿತ ಅಂತರ್ಜಲ ಸಮಿತಿ ಸದಸ್ಯರಿಗೆ ಅಧಿಕಾರ ನೀಡಲಾಗಿದೆ. ನಿಯಮ ಉಲ್ಲಂಘಿಸುವವರ ಮೇಲೆ ಕ್ರಮ ಜರುಗಿಸುವುದು ಇವರ ಜವಾಬ್ದಾರಿಯಾಗಿದೆ. ಈ ವಿಚಾರದಲ್ಲಿ ಭ್ರಷ್ಟಾಚಾರ ನಡೆಯಲು ಅವಕಾಶವಿದ್ದು, ಅಧಿಕಾರಿಗಳು ಅಂತರ್ಜಲದ ವಾಣಿಜ್ಯ ಬಳಕೆಗೆ, ಕೈಗಾರಿಕಾ ಬಳಕೆಗೆ ನಿಯಮ ಮೀರಿ ಅನುಮತಿ ನೀಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಹಾಗೇನಾದರೂ ಆದರೆ, ಅಂತರ್ಜಲಕ್ಕೆ ಮತ್ತಷ್ಟು ಕುತ್ತು ಬರಲಿದೆ ಎನ್ನುವ ಆತಂಕ ವ್ಯಕ್ತವಾಗಿದೆ. ಕೇಂದ್ರದ ಮಾರ್ಗಸೂಚಿಯಂತೆ ನಿಯಮ ಮೀರಿದವರಿಂದ ಸಂಗ್ರಹಿಸಬೇಕಾದ ದಂಡದ ಪ್ರಮಾಣವನ್ನೂ ರಾಜ್ಯದಲ್ಲಿ ಕಡಿಮೆ ಮಾಡಲಾಗಿದೆ.
ಅಂತರ್ಜಲದ ಅಧಿಕೃತ ಬಳಕೆಯಿಂದ ಸಂಗ್ರಹವಾಗುವ ಶುಲ್ಕವನ್ನು ಮತ್ತು ಅನಧಿಕೃತ ಬಳಕೆಯಿಂದ ಸಂಗ್ರಹವಾಗುವ ದಂಡವನ್ನು ಜಲ ಮರುಪೂರಣ, ಜಾಗೃತಿ ಮತ್ತಿತರ ಕಾರ್ಯಗಳಿಗೆ ಬಳಸುವುದು ಸರ್ಕಾರದ ಉದ್ದೇಶ. ನಿಯಮ ದಂತೆಯೇ ನಡೆದರೆ ಉತ್ತಮ ಪರಿಣಾಮ ಕಾಣಬಹುದಾಗಿದೆ. ಆದರೆ, ವಾಸ್ತವ ಸ್ಥಿತಿಗತಿ ಅವಲೋಕಿಸಿದರೆ, ಇವೆಲ್ಲಾ ಎಷ್ಟರಮಟ್ಟಿಗೆ ಕಾರ್ಯಗತವಾಗಲಿವೆ ಎನ್ನುವ ಪ್ರಶ್ನೆ ಮೂಡಿದೆ.
ವಾಸ್ತವದಲ್ಲಿ, ನೀರು ಮಾರಾಟ ಮತ್ತು ಅಂತರ್ಜಲ ಬಳಕೆ ವಿಚಾರದಲ್ಲಿ ನಿಯಮಗಳನ್ನು ಮೀರಿ ನಡೆದುಕೊಳ್ಳುತ್ತಿರುವುದು, ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿರುವುದು ವರದಿಯಾಗುತ್ತಿದೆ. ಪ್ರಸ್ತುತ ಮಾರ್ಗಸೂಚಿಗಳ ವಿಚಾರದಲ್ಲಿಯೂ ಇದೇ ಪರಿಸ್ಥಿತಿ ಮುಂದುವರಿದರೆ, ಭಾರಿ ಅಪಾಯ ಕಟ್ಟಿಟ್ಟ ಬುತ್ತಿ ಎಂದು ವಿಶ್ಲೇಷಿಸಲಾಗುತ್ತಿದೆ.
ಮಿತಿ ಮೀರಿದ ಬಳಕೆ ಎಲ್ಲಿ?
2024ರ ಮಾರ್ಚ್‌ನ ಅಂಕಿಅಂಶಗಳ ಪ್ರಕಾರ, ರಾಜ್ಯದ 15 ಜಿಲ್ಲೆಗಳ 44 ತಾಲ್ಲೂಕುಗಳಲ್ಲಿ ಅಂತರ್ಜಲವನ್ನು ಮಿತಿ ಮೀರಿ ಬಳಸಲಾಗುತ್ತಿದೆ.
ಬೆಂಗಳೂರು ನಗರದ ಐದು ತಾಲ್ಲೂಕುಗಳು, ಬೆಂಗಳೂರು ಗ್ರಾಮಾಂತರದ ನಾಲ್ಕು, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ತಲಾ ಆರು, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳ ತಲಾ ಐದು, ಬೆಳಗಾವಿ, ಚಾಮರಾಜನಗರ, ದಾವಣಗೆರೆ ಮತ್ತು ವಿಜಯಪುರ ಜಿಲ್ಲೆಗಳ ತಲಾ ಎರಡು ತಾಲ್ಲೂಕುಗಳು, ಬಾಗಲಕೋಟೆ, ಚಿಕ್ಕಮಗಳೂರು, ಗದಗ, ಹಾಸನ ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆಗಳ (ರಾಮನಗರ) ತಲಾ ಒಂದೊಂದು ತಾಲ್ಲೂಕು ಅಂತರ್ಜಲದ ಮಿತಿಮೀರಿ ಬಳಕೆ ಹೊಂದಿರುವ ತಾಲ್ಲೂಕುಗಳ ಪಟ್ಟಿಯಲ್ಲಿವೆ.
ಈ ತಾಲ್ಲೂಕುಗಳಲ್ಲಿ ವಾರ್ಷಿಕವಾಗಿ ಆಗುತ್ತಿರುವ ಜಲ ಮರುಪೂರಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅಂತರ್ಜಲವನ್ನು ಬಳಸಲಾಗುತ್ತಿದೆ.
15 ತಾಲ್ಲೂಕುಗಳಲ್ಲಿ ಅಪಾಯಕಾರಿ ಸ್ಥಿತಿ: 12 ಜಿಲ್ಲೆಗಳ 15 ತಾಲ್ಲೂಕುಗಳಲ್ಲಿ ಅಂತರ್ಜಲದ ಸ್ಥಿತಿ ಅಪಾಯಕಾರಿ ಮಟ್ಟದಲ್ಲಿದೆ ಎಂದು ಹೇಳುತ್ತವೆ ಸರ್ಕಾರದ ಅಂಕಿ ಅಂಶಗಳು. ಬಾಗಲಕೋಟೆ, ಕೊಪ್ಪಳ, ಬೆಂಗಳೂರು ದಕ್ಷಿಣ ಜಿಲ್ಲೆಗಳ ತಲಾ ಎರಡು ತಾಲ್ಲೂಕುಗಳು, ಬೆಳಗಾವಿ, ಚಿಕ್ಕಮಗಳೂರು, ದಾವಣಗೆರೆ, ಗದಗ, ಕಲಬುರಗಿ, ಹಾಸನ, ಹಾವೇರಿ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳ ತಲಾ ಒಂದು ತಾಲ್ಲೂಕಿನಲ್ಲಿ ಈ ಸ್ಥಿತಿ ಇದೆ.
ಇಲ್ಲಿ ವಾರ್ಷಿಕವಾಗಿ ಭೂಮಿಗೆ ಆಗುತ್ತಿರುವ ಜಲ ಮರುಪೂರಣದ ಪ್ರಮಾಣದಲ್ಲಿ ಶೇ 90ರಿಂದ ಶೇ 100ರಷ್ಟು ಅಂತರ್ಜಲವನ್ನು ಬಳಸಲಾಗುತ್ತಿದೆ.
‘ಪರ್ಯಾಯ ಮಾರ್ಗ ಹುಡುಕಲಿ’
ಅಂತರ್ಜಲ ಮಿತಿ ಮೀರಿದ ಬಳಕೆ ಇರುವ ತಾಲ್ಲೂಕುಗಳಲ್ಲಿ ವಾರ್ಷಿಕ ಮಳೆ ಪ್ರಮಾಣ ತುಂಬಾ ಕಡಿಮೆ ಇದೆ. 45 ಸೆಂ.ಮೀನಿಂದ 60 ಸೆಂ.ಮೀನಷ್ಟು ಮಾತ್ರ ಮಳೆಯಾಗುತ್ತದೆ. ಈ ಪ್ರದೇಶದಲ್ಲಿ ಮೇಲ್ಮೈ ಮಣ್ಣು ಕಡಿಮೆ ಇದ್ದು, ಭೂಮಿಯ ಅಡಿಯಲ್ಲಿ ಶಿಲಾ ಪದರ ಹೆಚ್ಚಿದೆ. ಹಾಗಾಗಿ ಇಲ್ಲಿ ಅಂತರ್ಜಲದ ಮಟ್ಟ ಕಡಿಮೆ. ಜತೆಗೆ, ಈ ತಾಲ್ಲೂಕುಗಳಲ್ಲಿ ವಾರ್ಷಿಕವಾಗಿ ಭೂಮಿಗೆ ಆಗುವ ಮಳೆ ನೀರಿನ ಮರುಪೂರಣಕ್ಕೂ ಅಂತರ್ಜಲದ ಬಳಕೆಗೂ ಅಜಗಜಾಂತರವಿದೆ. ಪರಿಸ್ಥಿತಿ ಹೀಗಿರುವಾಗ ಕೈಗಾರಿಕೆಗಳಿಗೆ ಕೊಳವೆಬಾವಿಗಳ ನೀರು ಬಳಸುವುದರಿಂದ ಅಂತರ್ಜಲ ಇನ್ನಷ್ಟು ಕ್ಷೀಣಿಸಲಿದೆ.
ಈಗಾಗಲೇ ಈ ತಾಲ್ಲೂಕುಗಳಲ್ಲಿ ಕುಡಿಯುವ ನೀರಿಗೆ, ಕೃಷಿ ಉದ್ದೇಶದ ಬಳಕೆಗೆ ತುಂಬಾ ಪೈಪೋಟಿ ಇದೆ. ಉದಾಹರಣೆಗೆ, ನಾವೀಗ ಜುಲೈ ಅಂತ್ಯದಲ್ಲಿದ್ದೇವೆ. ಕರಾವಳಿ, ಮಲೆನಾಡು ಹಾಗೂ ರಾಜ್ಯದ ಹಲವೆಡೆ ಮಳೆ ಅಬ್ಬರಿಸುತ್ತಿದೆ. ಆದರೆ, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಐಮಂಗಲ ಹೋಬಳಿಯಲ್ಲಿ ಕೆಲವು ದಿನಗಳಿಂದ ಸುಮಾರು 25 ಬೋರ್‌ವೆಲ್ ಯಂತ್ರಗಳು ಎಗ್ಗಿಲ್ಲದೇ ಕೊಳವೆ ಬಾವಿಗಳನ್ನು ಕೊರೆಯುತ್ತಿವೆ. 1000 ಅಡಿಗೂ ಹೆಚ್ಚು ಆಳಕ್ಕೆ ಕೊರೆಯಲಾಗುತ್ತಿದೆ. ಇಲ್ಲಿ ಮಳೆ ಬಂದಿಲ್ಲ. ರೈತರು ಬಿತ್ತನೆ ಮಾಡಿರುವ ಈರುಳ್ಳಿ ಬೆಳೆ ಒಣಗುತ್ತಿದೆ. ಅವುಗಳಿಗೆ ನೀರುಣಿಸುವ ಏಕೈಕ ಉದ್ದೇಶದಿಂದ ಕೊಳವೆಬಾವಿಗಳನ್ನು ಕೊರೆಯಲಾಗುತ್ತಿದೆ.
ಇಂತಹ ಪರಿಸ್ಥಿತಿಯಲ್ಲಿ ಸರ್ಕಾರವು ನಿಯಮಗಳನ್ನು ಸಡಿಲಿಸಿ, ಕೈಗಾರಿಕೆಗಳಿಗೆ ಕೊಳವೆಬಾವಿಗಳ ನೀರನ್ನು ಪೂರೈಸಲು ಅವಕಾಶ ಕಲ್ಪಿಸಿದರೆ ಅದು ವಾಣಿಜ್ಯೀಕರಣ ಮಾಡಿದಂತಾಗುತ್ತದೆ. ಅದಕ್ಕೆ ಪೈಪೋಟಿ ಶುರು ಆಗುತ್ತದೆ. ಇದರಿಂದ ಅಂತರ್ಜಲಕ್ಕೆ ಇನ್ನಷ್ಟು ಧಕ್ಕೆಯಾಗುತ್ತದೆ. ನೀತಿ ನಿಯಮಗಳಲ್ಲಿ ಬದಲಾವಣೆ ಮಾಡುವುದಕ್ಕಿಂತ ಸರ್ಕಾರ ಪರ್ಯಾಯ ದಾರಿಗಳ ಬಗ್ಗೆ ಗಮನಹರಿಸಬೇಕು. ಟ್ಯಾಂಕರ್‌ನಲ್ಲಿ ನೀರು ಪೂರೈಸುವವರು ಮಳೆಗಾಲದಲ್ಲಿ ಕೆರೆ, ಹೊಂಡ ಅಥವಾ ಇನ್ನಿತರ ವಿಧಾನಗಳಿಂದ ಮಳೆ ನೀರು ಸಂಗ್ರಹಿಸಲಿ. ಆ ನೀರನ್ನು ಕೈಗಾರಿಕೆಗೆ ಪೂರೈಸಲಿ.
ಇದು ಒಂದು ವಿಧಾನವಾದರೆ, ನಗರ ಪಟ್ಟಣಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ವೈಜ್ಞಾನಿಕವಾಗಿ ಶುದ್ಧೀಕರಿಸಿದರೆ ಖಂಡಿತವಾಗಿಯೂ ಆ ನೀರನ್ನು ಕೈಗಾರಿಕೆಗಳಿಗೆ ಬಳಸಬಹುದು. ಇದಲ್ಲದೇ ಶುದ್ಧ ನೀರು ಘಟಕಗಳಿಂದ ತ್ಯಾಜ್ಯವಾಗಿ ಹೊರಬರುವ ನೀರನ್ನೂ ಕೂಡ ಕೈಗಾರಿಕಾ ಉದ್ದೇಶಕ್ಕೆ ಬಳಸಬಹುದು. ಸರ್ಕಾರ ಇವುಗಳ ಬಗ್ಗೆ ಚಿಂತಿಸಬೇಕು.
ಎನ್.ಜೆ.ದೇವರಾಜ ರೆಡ್ಡಿ, ಜಲತಜ್ಞ
15 ರಾಜ್ಯಗಳಲ್ಲಿ ಜಾರಿ ಕೇಂದ್ರ ಅಂತರ್ಜಲ ಪ್ರಾಧಿಕಾರದ ಮಾರ್ಗಸೂಚಿಯನ್ನು ಯಥಾವತ್ತಾಗಿ ಅಥವಾ ಅದರಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿ ಕರ್ನಾಟಕ ಮಾತ್ರವಲ್ಲದೆ ಬೇರೆ 15 ರಾಜ್ಯಗಳು ಜಾರಿಗೊಳಿಸುತ್ತಿವೆ. ಆಂಧ್ರಪ್ರದೇಶ ಗೋವಾ ಹಿಮಾಚಲ ಪ್ರದೇಶ ಜಮ್ಮು ಮತ್ತು ಕಾಶ್ಮೀರ (ಕೇಂದ್ರಾಡಳಿತ ಪ್ರದೇಶ) ದೆಹಲಿ ತಮಿಳುನಾಡು ತೆಲಂಗಾಣ ಪಶ್ಚಿಮ ಬಂಗಾಳ ಚಂಡೀಗಢ ಪುದುಚೇರಿ ಲಕ್ಷದ್ವೀಪ (ಕೇಂದ್ರಾಡಳಿತ ಪ್ರದೇಶ) ಪಂಜಾಬ್ ಉತ್ತರ ಪ್ರದೇಶ ಮತ್ತು ಹರಿಯಾಣ ರಾಜ್ಯಗಳಲ್ಲಿನ ಸರ್ಕಾರಗಳು ಮಾರ್ಗಸೂಚಿಯನ್ನು ಅನುಷ್ಠಾನಗೊಳಿಸಿವೆ. ಉಳಿದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೇಂದ್ರ ಅಂತರ್ಜಲ ಪ್ರಾಧಿಕಾರವೇ ನಿಯಮಗಳನ್ನು ಜಾರಿಗೆ ತರುತ್ತಿದೆ.
ಅಂತರ್ಜಲ ಮಿತಿ ಮೀರಿದ ಬಳಕೆ ಇರುವ ತಾಲ್ಲೂಕುಗಳಲ್ಲಿ ವಾರ್ಷಿಕ ಮಳೆ ಪ್ರಮಾಣ ತುಂಬಾ ಕಡಿಮೆ ಇದೆ. 45 ಸೆಂ.ಮೀನಿಂದ 60 ಸೆಂ.ಮೀನಷ್ಟು ಮಾತ್ರ ಮಳೆಯಾಗುತ್ತದೆ. ಈ ಪ್ರದೇಶದಲ್ಲಿ ಮೇಲ್ಮೈ ಮಣ್ಣು ಕಡಿಮೆ ಇದ್ದು ಭೂಮಿಯ ಅಡಿಯಲ್ಲಿ ಶಿಲಾ ಪದರ ಹೆಚ್ಚಿದೆ. ಹಾಗಾಗಿ ಇಲ್ಲಿ ಅಂತರ್ಜಲದ ಮಟ್ಟ ಕಡಿಮೆ. ಜತೆಗೆ ಈ ತಾಲ್ಲೂಕುಗಳಲ್ಲಿ ವಾರ್ಷಿಕವಾಗಿ ಭೂಮಿಗೆ ಆಗುವ ಮಳೆ ನೀರಿನ ಮರುಪೂರಣಕ್ಕೂ ಅಂತರ್ಜಲದ ಬಳಕೆಗೂ ಅಜಗಜಾಂತರವಿದೆ. ಪರಿಸ್ಥಿತಿ ಹೀಗಿರುವಾಗ ಕೈಗಾರಿಕೆಗಳಿಗೆ ಕೊಳವೆಬಾವಿಗಳ ನೀರು ಬಳಸುವುದರಿಂದ ಅಂತರ್ಜಲ ಇನ್ನಷ್ಟು ಕ್ಷೀಣಿಸಲಿದೆ. ಈಗಾಗಲೇ ಈ ತಾಲ್ಲೂಕುಗಳಲ್ಲಿ ಕುಡಿಯುವ ನೀರಿಗೆ ಕೃಷಿ ಉದ್ದೇಶದ ಬಳಕೆಗೆ ತುಂಬಾ ಪೈಪೋಟಿ ಇದೆ. ಉದಾಹರಣೆಗೆ ನಾವೀಗ ಜುಲೈ ಅಂತ್ಯದಲ್ಲಿದ್ದೇವೆ. ಕರಾವಳಿ ಮಲೆನಾಡು ಹಾಗೂ ರಾಜ್ಯದ ಹಲವೆಡೆ ಮಳೆ ಅಬ್ಬರಿಸುತ್ತಿದೆ. ಆದರೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಐಮಂಗಲ ಹೋಬಳಿಯಲ್ಲಿ ಕೆಲವು ದಿನಗಳಿಂದ ಸುಮಾರು 25 ಬೋರ್‌ವೆಲ್ ಯಂತ್ರಗಳು ಎಗ್ಗಿಲ್ಲದೇ ಕೊಳವೆ ಬಾವಿಗಳನ್ನು ಕೊರೆಯುತ್ತಿವೆ. 1000 ಅಡಿಗೂ ಹೆಚ್ಚು ಆಳಕ್ಕೆ ಕೊರೆಯಲಾಗುತ್ತಿದೆ. ಇಲ್ಲಿ ಮಳೆ ಬಂದಿಲ್ಲ. ರೈತರು ಬಿತ್ತನೆ ಮಾಡಿರುವ ಈರುಳ್ಳಿ ಬೆಳೆ ಒಣಗುತ್ತಿದೆ. ಅವುಗಳಿಗೆ ನೀರುಣಿಸುವ ಏಕೈಕ ಉದ್ದೇಶದಿಂದ ಕೊಳವೆಬಾವಿಗಳನ್ನು ಕೊರೆಯಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರವು ನಿಯಮಗಳನ್ನು ಸಡಿಲಿಸಿ ಕೈಗಾರಿಕೆಗಳಿಗೆ ಕೊಳವೆಬಾವಿಗಳ ನೀರನ್ನು ಪೂರೈಸಲು ಅವಕಾಶ ಕಲ್ಪಿಸಿದರೆ ಅದು ವಾಣಿಜ್ಯೀಕರಣ ಮಾಡಿದಂತಾಗುತ್ತದೆ. ಅದಕ್ಕೆ ಪೈಪೋಟಿ ಶುರು ಆಗುತ್ತದೆ. ಇದರಿಂದ ಅಂತರ್ಜಲಕ್ಕೆ ಇನ್ನಷ್ಟು ಧಕ್ಕೆಯಾಗುತ್ತದೆ. ನೀತಿ ನಿಯಮಗಳಲ್ಲಿ ಬದಲಾವಣೆ ಮಾಡುವುದಕ್ಕಿಂತ ಸರ್ಕಾರ ಪರ್ಯಾಯ ದಾರಿಗಳ ಬಗ್ಗೆ ಗಮನಹರಿಸಬೇಕು. ಟ್ಯಾಂಕರ್‌ನಲ್ಲಿ ನೀರು ಪೂರೈಸುವವರು ಮಳೆಗಾಲದಲ್ಲಿ ಕೆರೆ ಹೊಂಡ ಅಥವಾ ಇನ್ನಿತರ ವಿಧಾನಗಳಿಂದ ಮಳೆ ನೀರು ಸಂಗ್ರಹಿಸಲಿ. ಆ ನೀರನ್ನು ಕೈಗಾರಿಕೆಗೆ ಪೂರೈಸಲಿ. ಇದು ಒಂದು ವಿಧಾನವಾದರೆ ನಗರ ಪಟ್ಟಣಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ವೈಜ್ಞಾನಿಕವಾಗಿ ಶುದ್ಧೀಕರಿಸಿದರೆ ಖಂಡಿತವಾಗಿಯೂ ಆ ನೀರನ್ನು ಕೈಗಾರಿಕೆಗಳಿಗೆ ಬಳಸಬಹುದು. ಇದಲ್ಲದೇ ಶುದ್ಧ ನೀರು ಘಟಕಗಳಿಂದ ತ್ಯಾಜ್ಯವಾಗಿ ಹೊರಬರುವ ನೀರನ್ನೂ ಕೂಡ ಕೈಗಾರಿಕಾ ಉದ್ದೇಶಕ್ಕೆ ಬಳಸಬಹುದು. ಸರ್ಕಾರ ಇವುಗಳ ಬಗ್ಗೆ ಚಿಂತಿಸಬೇಕು. ಎನ್.ಜೆ.ದೇವರಾಜ ರೆಡ್ಡಿ ಜಲತಜ್ಞ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.