ADVERTISEMENT

ಆಳ ಅಗಲ | ಜಿಎಸ್‌ಟಿ: ಎಂಟು ವರ್ಷಗಳ ಏರಿಳಿತದ ಹಾದಿ

ಐದು ವರ್ಷಗಳಲ್ಲಿ ದುಪ್ಪಟ್ಟು ವರಮಾನ ಸಂಗ್ರಹ; ತೆರಿಗೆದಾರರ ಸಂಖ್ಯೆಯಲ್ಲೂ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 23:21 IST
Last Updated 30 ಜೂನ್ 2025, 23:21 IST
   
ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿಗೆ ಬಂದು ಎಂಟು ವರ್ಷಗಳಾಗಿವೆ.  ಹೊಸ ತೆರಿಗೆ ಪದ್ಧತಿಯಿಂದಾಗಿ ತೆರಿಗೆ ಸಂಗ್ರಹದಲ್ಲಿ ಏರಿಕೆಯಾಗಿದೆ. ತೆರಿಗೆದಾರರ ಸಂಖ್ಯೆಯೂ ಹೆಚ್ಚಾಗಿದೆ. ಐದು ವರ್ಷಗಳಲ್ಲಿ ಜಿಎಸ್‌ಟಿ ಸಂಗ್ರಹ ದುಪ್ಪಟ್ಟಾಗಿದೆ. ಜಿಎಸ್‌ಟಿ ಅನುಷ್ಠಾನ ಯಶಸ್ವಿಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಳ್ಳುತ್ತಿದ್ದರೆ, ಅನುಷ್ಠಾನ ಸಮರ್ಪಕವಾಗಿಲ್ಲ ಎಂದು ವಿರೋಧ ಪಕ್ಷಗಳು ದೂರುತ್ತಿವೆ. ಜಿಎಸ್‌ಟಿ ವ್ಯವಸ್ಥೆಯನ್ನು ಮತ್ತಷ್ಟು ಸರಳೀಕರಣಗೊಳಿಸಬೇಕು, ಪೆಟ್ರೋಲಿಯಂ ಉತ್ಪನ್ನಗಳನ್ನೂ ಜಿಎಸ್‌ಟಿ ವ್ಯಾಪ್ತಿಗೆ ತರಬೇಕು ಎನ್ನುವ ಒತ್ತಾಯ ವಿವಿಧ ವಲಯಗಳಿಂದ ಕೇಳಿಬರುತ್ತಿದೆ. ಇದರ ನಡುವೆಯೇ ಜಿಎಸ್‌ಟಿ ವ್ಯವಸ್ಥೆಯಲ್ಲಿ ಮತ್ತೊಂದು ಸುತ್ತಿನ ಬದಲಾವಣೆ ತರಲು (ಜಿಎಸ್‌ಟಿ 2.0) ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ

ಕೇಂದ್ರ ಸರ್ಕಾರವು ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‌ಟಿ) ಜಾರಿಗೆ ತಂದಿದ್ದು 2017ರ ಜುಲೈ 1ರಂದು. ಜಿಎಸ್‌ಟಿ ಹಲವು ಸ್ತರಗಳ, ವಸ್ತು/ಸೇವೆ ಗ್ರಾಹಕರ ಕೈಸೇರುವ ಹಂತದಲ್ಲಿ ಪಾವತಿಸಬೇಕಾದ ಪರೋಕ್ಷ ತೆರಿಗೆ ಪದ್ಧತಿ.  ‘ಒಂದು ದೇಶ, ಒಂದು ತೆರಿಗೆ’ ಎಂಬ ಪರಿಕಲ್ಪನೆಯ ಅಡಿಯಲ್ಲಿ ದೇಶೀಯವಾಗಿ ಮಾರಾಟವಾಗುವ ಸರಕು ಮತ್ತು ಸೇವೆಗಳ ಮೇಲೆ ಮೌಲ್ಯವರ್ಧಿತ ತೆರಿಗೆಯಾಗಿ ಜಿಎಸ್‌ಟಿಯನ್ನು ಜಾರಿಗೆ ತರಲಾಯಿತು. 2017ರ ಜುಲೈಗೂ ಮೊದಲು ಅಬಕಾರಿ ಸುಂಕ, ಸೇವಾ ಸುಂಕ ಮತ್ತು ವ್ಯಾಟ್ ಸೇರಿದಂತೆ ಹಲವು ರೀತಿಯ ಪರೋಕ್ಷ ತೆರಿಗೆಗಳು ಚಾಲ್ತಿಯಲ್ಲಿದ್ದವು. 17 ಬಗೆಯ ಸ್ಥಳೀಯ ತೆರಿಗೆಗಳು ಮತ್ತು 13 ಬಗೆಯ ಸೆಸ್‌ಗಳನ್ನು ಸೇರಿಸಿ, ಐದು ಸ್ಲ್ಯಾಬ್‌ಗಳ ಜಿಎಸ್‌ಟಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು.

ಜಿಎಸ್‌ಟಿಗೆ ಸಂಬಂಧಿಸಿದ ತೀರ್ಮಾನಗಳನ್ನು ಕೈಗೊಳ್ಳಲು ಜಿಎಸ್‌ಟಿ ಮಂಡಳಿ ರಚನೆ ಮಾಡಲಾಗಿದ್ದು, ಕೇಂದ್ರ ಹಣಕಾಸು ಸಚಿವರು ಮತ್ತು ರಾಜ್ಯಗಳ ಹಣಕಾಸು ಸಚಿವರು ಅದರ ಭಾಗವಾಗಿರುತ್ತಾರೆ. ಜಿಎಸ್‌ಟಿ ಹಂತಗಳ ಬದಲಾವಣೆ, ಶಾಸನ ತಿದ್ದುಪಡಿ ಸೇರಿದಂತೆ ದೇಶದ ಹಣಕಾಸಿನ ಅಗತ್ಯಗಳಿಗೆ ತಕ್ಕಂತೆ ಜಿಎಸ್‌ಟಿ ವ್ಯವಸ್ಥೆಯಲ್ಲಾಗಬೇಕಾದ ಬದಲಾವಣೆಗಳ ಬಗ್ಗೆ ಜಿಎಸ್‌ಟಿ ಮಂಡಳಿ ಕಾಲದಿಂದ ಕಾಲಕ್ಕೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ.

ಆರಂಭದಲ್ಲಿ ಜಿಎಸ್‌ಟಿ ಐದು ಸ್ಲ್ಯಾಬ್‌ಗಳ ತೆರಿಗೆ ವ್ಯವಸ್ಥೆಯಾಗಿತ್ತು. ನಂತರ ಅದನ್ನು ನಾಲ್ಕು ಸ್ಲ್ಯಾಬ್‌ಗಳ (ಶೇ 5, ಶೇ 12, ಶೇ 18 ಮತ್ತು ಶೇ 28) ವ್ಯವಸ್ಥೆಯನ್ನಾಗಿ ಪರಿವರ್ತಿಸಲಾಯಿತು. ಪ್ಯಾಕ್ ಮಾಡಲಾದ ಆಹಾರ ಪದಾರ್ಥಗಳು ಮತ್ತಿತರ ಅಗತ್ಯ ವಸ್ತುಗಳು ಶೇ 5ರಷ್ಟು ಜಿಎಸ್‌ಟಿ ವ್ಯಾಪ್ತಿಯಲ್ಲಿದ್ದರೆ, ಐಷಾರಾಮಿ ವಸ್ತುಗಳು ಅತಿ ಹೆಚ್ಚಿನ ಅಂದರೆ, ಶೇ 28ರ ಜಿಎಸ್‌ಟಿ ವ್ಯಾಪ್ತಿಯಲ್ಲಿ ಬರುತ್ತವೆ. ಸಂಗ್ರಹವಾದ ಜಿಎಸ್‌ಟಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನಾಗಿ ಹಂಚಿಕೊಳ್ಳುತ್ತವೆ.     

ADVERTISEMENT

ಜಿಎಸ್‌ಟಿ ಜಾರಿಗೆ ಬಂದ ನಂತರ ಕೇಂದ್ರಗಳ ಮತ್ತು ರಾಜ್ಯಗಳ ತೆರಿಗೆ ವರಮಾನ ಹೆಚ್ಚಾಗಿದೆ. 2017–18ರಲ್ಲಿ ₹90 ಸಾವಿರ ಕೋಟಿ ಇದ್ದ ತಿಂಗಳ ಸರಾಸರಿ ಜಿಎಸ್‌ಟಿ ಸಂಗ್ರಹವು 2024–25ರಲ್ಲಿ (ಏಪ್ರಿಲ್–ಮಾರ್ಚ್‌) ₹1.84 ಲಕ್ಷ ಕೋಟಿಗೆ ಏರಿಕೆಯಾಗಿದೆ. 2025ರ ಏಪ್ರಿಲ್‌ನಲ್ಲಿ ದಾಖಲೆಯ ಜಿಎಸ್‌ಟಿ ಸಂಗ್ರಹವಾಗಿದ್ದು, ₹2.37 ಲಕ್ಷ ಕೋಟಿ ದೊರೆತಿದೆ. ಜಿಎಸ್‌ಟಿ ಸಂಗ್ರಹವು 2024–25ರಲ್ಲಿ ದಾಖಲೆಯ ಮಟ್ಟ ( ₹22.08 ಲಕ್ಷ ಕೋಟಿ) ಮುಟ್ಟಿದ್ದು, ಹಿಂದಿನ ಹಣಕಾಸಿನ ವರ್ಷಕ್ಕಿಂತಲೂ ಶೇ 9.4ರಷ್ಟು ಪ್ರಗತಿ ದಾಖಲಿಸಿದೆ. ಐದು ವರ್ಷಗಳಲ್ಲಿ ಜಿಎಸ್‌ಟಿ ಸಂಗ್ರಹ ದುಪ್ಪಟ್ಟಾಗಿದೆ. ಜಿಎಸ್‌ಟಿ ವ್ಯವಸ್ಥೆಯು ಜಾರಿಯಾದ ನಂತರ ತೆರಿಗೆದಾರರ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದೆ. 2017ರಲ್ಲಿ 65 ಲಕ್ಷ ಇದ್ದ ನೋಂದಾಯಿತ ಜಿಎಸ್‌ಟಿ ಪಾವತಿದಾರರ ಸಂಖ್ಯೆಯು 1.51 ಕೋಟಿಗೆ ಹೆಚ್ಚಾಗಿದೆ.

ಪಿಡಬ್ಲ್ಯುಸಿ ಇಂಡಿಯಾ ಸಂಸ್ಥೆಯು ಜಿಎಸ್‌ಟಿ ವ್ಯವಸ್ಥೆಯನ್ನು ಮತ್ತಷ್ಟು ಸರಳೀಕರಣಗೊಳಿಸಬೇಕೆಂದು ಶಿಫಾರಸು ಮಾಡಿದ್ದು, ಕೆಲವು ಬದಲಾವಣೆಗಳನ್ನು ತರಬೇಕು ಎಂದು ಸಲಹೆ ನೀಡಿದೆ.

ರಾಜ್ಯಗಳಿಗೂ ಇದೆ ಸಮಾನ ಹಕ್ಕು

2022ರ ಮೇನಲ್ಲಿ ಜಿಎಸ್‌ಟಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪೊಂದನ್ನು ನೀಡಿತ್ತು. ‘ತೆರಿಗೆ ವಿಧಿಸುವ ವಿಚಾರದಲ್ಲಿ ಶಾಸನ ರೂಪಿಸುವ ಸಮಾನ ಅಧಿಕಾರ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಕ್ಕೆ ಇವೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿ ಮಾಡುವ ಶಿಫಾರಸುಗಳನ್ನು ರಾಜ್ಯಗಳು ಕಡ್ಡಾಯವಾಗಿ ಪಾಲಿಸಬೇಕಾಗಿಲ್ಲ. ಅವು ‘ಮನವೊಲಿಕೆ’ಯ ಸ್ವರೂಪದ್ದು’ ಎಂದು ಪ್ರತಿಪಾದಿಸಿತ್ತು. ಆ ಮೂಲಕ, ಜಿಎಸ್‌ಟಿ ವ್ಯವಸ್ಥೆಯಲ್ಲಿ ಕೇಂದ್ರದಷ್ಟೇ ರಾಜ್ಯಗಳಿಗೂ ಸಮಾನ ಹಕ್ಕು ಇದೆ ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು. 

ಜಿಎಸ್‌ಟಿಯಿಂದ ಹೊರಗಿರುವ ವಸ್ತುಗಳು..

‘ಒಂದು ದೇಶ, ಒಂದು ತೆರಿಗೆ’ ಎಂದು ಪ್ರತಿಪಾದಿಸಿ ಜಿಎಸ್‌ಟಿ ಜಾರಿಗೊಳಿಸಲಾಯಿತಾದರೂ, ಇಂದಿಗೂ ಹಲವು ವಸ್ತು/ಸೇವೆಗಳು ಅದರಿಂದ ಹೊರಗಿವೆ. ಪೆಟ್ರೋಲ್, ಡೀಸೆಲ್, ವಿಮಾನಗಳಲ್ಲಿ ಬಳಸಲಾಗುವ ಟರ್ಬೈನ್ ಆಯಿಲ್, ನೈಸರ್ಗಿಕ ಅನಿಲ, ಮದ್ಯ, ಮತ್ತು ಕಚ್ಚಾ ಇಂಧನ ತಯಾರಿಕೆಯಲ್ಲಿ ಬಳಸಲಾಗುವ ಆಲ್ಕೊಹಾಲ್‌ ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿವೆ. ಅವುಗಳ ಮೇಲೆ, ಮಾರಾಟಕ್ಕೆ ಸಂಬಂಧಿಸಿದಂತೆ ವಿಧಿಸಲಾಗುವ ಮೌಲ್ಯವರ್ಧಿತ ತೆರಿಗೆ, ತಯಾರಿಕೆ ವೇಳೆ ವಿಧಿಸಲಾಗುವ ಅಬಕಾರಿ ತೆರಿಗೆಯನ್ನು ಕೇಂದ್ರ ಮತ್ತು ರಾಜ್ಯಗಳು,  ವಿಧಿಸುತ್ತಿವೆ. ಈ ಮೂಲಕ, ಜಿಎಸ್‌ಟಿ ಜಾರಿಯಾದ ನಂತರವೂ ವ್ಯಾಟ್ ಮತ್ತು ಅಬಕಾರಿ ತೆರಿಗೆಗಳು ತಮ್ಮ ಅಸ್ತಿತ್ವ ಉಳಿಸಿಕೊಂಡಿವೆ. ಈ ವಸ್ತುಗಳು ಕೇಂದ್ರ ಮತ್ತು ರಾಜ್ಯದ ತೆರಿಗೆ ಪಾಲಿನಲ್ಲಿ ಗಣನೀಯ ಪ್ರಮಾಣವನ್ನು ಹೊಂದಿದ್ದು, ಇವುಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುದರಿಂದ ಸರ್ಕಾರಗಳ ವರಮಾನ ಖೋತಾ ಆಗಲಿದೆ; ಹಾಗಾಗಿ ಇವುಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುತ್ತಿಲ್ಲ ಎನ್ನಲಾಗುತ್ತಿದೆ.‌

ಡೆಲಾಯ್ಟ್‌ ಸಮೀಕ್ಷೆ ಹೇಳುವುದೇನು?

ಜಿಎಸ್‌ಟಿ ವ್ಯವಸ್ಥೆಗೆ ಎಂಟು ವರ್ಷ ತುಂಬಿರುವ ಹೊತ್ತಿನಲ್ಲಿ ಡೆಲಾಯ್ಟ್‌ ಸಂಸ್ಥೆಯು ಜಿಎಸ್‌ಟಿ@8 ಎಂಬ ಸಮೀಕ್ಷೆ ನಡೆಸಿದ್ದು, ಜಿಎಸ್‌ಟಿ ವ್ಯವಸ್ಥೆ, ಅದರಲ್ಲಿರುವ ಲೋಪಗಳು, ಆಗಬೇಕಾದ ಸುಧಾರಣೆಗಳ ಬಗ್ಗೆ ದೇಶದ ಎಂಟು ಬಗೆಯ ಉದ್ದಿಮೆಗಳ ಉನ್ನತ ಮಟ್ಟದ  963 ಪ್ರತಿನಿಧಿಗಳಿಂದ ಅಭಿಪ್ರಾಯ ಸಂಗ್ರಹಿಸಿದೆ. 

ಸಮೀಕ್ಷೆಯಲ್ಲಿ ಭಾಗವಹಿಸಿದ್ದವರಲ್ಲಿ ಶೇ 85 ಮಂದಿ ಜಿಎಸ್‌ಟಿ ವ್ಯವಸ್ಥೆಯ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವರ್ಷದಿಂದ ವರ್ಷಕ್ಕೆ ತೆರಿಗೆ ವ್ಯವಸ್ಥೆಯಲ್ಲಿ ಸುಧಾರಣೆಯಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 2022ರಲ್ಲಿ ಈ ಸಮೀಕ್ಷೆ ನಡೆಸಿದ್ದಾಗ ಶೇ 59ರಷ್ಟು ಕಾರ್ಪೊರೇಟ್‌ ಮಂದಿ ಜಿಎಸ್‌ಟಿ ಬಗ್ಗೆ ಸಕಾರಾತ್ಮಕ ಭಾವನೆ ವ್ಯಕ್ತಪಡಿಸಿದ್ದರು. 

ಸಕಾರಾತ್ಮಕ ಅಭಿಪ್ರಾಯಕ್ಕೆ ಕಾರಣಗಳು

  • ತೆರಿಗೆ ಪ್ರಕ್ರಿಯೆ ಸರಳಗೊಳಿಸಿ ಹೆಚ್ಚು ಪಾರದರ್ಶಕತೆ ಅಳವಡಿಸಿಕೊಂಡಿದ್ದು

  • ಒಟ್ಟಾರೆ ತೆರಿಗೆ ಹೊರೆಯನ್ನು ತಗ್ಗಿಸಲು ಇನ್‌ಪುಟ್‌ ಟ್ಯಾಕ್ಟ್‌ ಕ್ರೆಡಿಟ್‌ ಸೌಲಭ್ಯ ಕಲ್ಪಿಸಿರುವುದು

  • ಹಳೆಯ ತೆರಿಗೆಗಳನ್ನು ಹೊಸ ವ್ಯವಸ್ಥೆಗೆ ತಂದಿರುವುದು, ತೆರಿಗೆ ನಿಯಮ ಪಾಲನೆಗೆ ತಂತ್ರಜ್ಞಾನ ಬಳಕೆ, ರಾಜ್ಯ ಚೆಕ್‌ ಪೋಸ್ಟ್‌ಗಳ ತೆರವು

  • ದೇಶದ ಎಲ್ಲ ರಾಜ್ಯಗಳಲ್ಲೂ ಒಂದೇ ರೀತಿಯ ತೆರಿಗೆ ಪ್ರಕ್ರಿಯೆ ಜಾರಿ, ಮರುಪಾವತಿಯ ವ್ಯವಸ್ಥೆಯ ಸುಧಾರಣೆ, ಪ್ರಬಲ ಸರ್ಕಾರಿ ಪೋರ್ಟಲ್‌ ಸಂಪರ್ಕ ವ್ಯವಸ್ಥೆ

ಈ ವರ್ಷದ ಸಮೀಕ್ಷೆಯಲ್ಲಿ ಶೇ 10 ಮಂದಿ ತಟಸ್ಥ ಧೋರಣೆ ತಾಳಿದ್ದರೆ, ಶೇ 5ರಷ್ಟು ಜನರು ನಕಾರಾತ್ಮಕ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. 

ಇವರು ನೀಡುವ ಕಾರಣ:

  • ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ವ್ಯವಸ್ಥೆಯಲ್ಲಿ ಇನ್ನಷ್ಟು ಸುಧಾರಣೆ ಅಗತ್ಯ

  • ಜಿಎಸ್‌ಟಿಯ ಹೊಸ ಪ್ರಸ್ತಾವಗಳ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು, ಬಹುತೇಕ ಘೋಷಣೆಗಳು ಮತ್ತು ಆದೇಶಗಳು ಪೂರ್ವಾನ್ವಯವಾಗುವಂತೆ ಜಾರಿಗೆ ಬರುವುದು

  • ಆಗಾಗ ಅನಗತ್ಯ ನೋಟಿಸ್‌ಳನ್ನು ನೀಡುವುದು, ಈಗಾಗಲೇ ಸಲ್ಲಿಸಿದ ದಾಖಲೆಗಳು ಅಥವಾ ನೀಡಿರುವ ಸ್ಪಷ್ಟನೆಗಳನ್ನು ಕಡೆಗಣಿಸುವುದು

  • ಜಿಎಸ್‌ಟಿ ಲೆಕ್ಕ ಪರಿಶೋಧನೆ ಪ್ರಕ್ರಿಯೆ ಮತ್ತು ವ್ಯಾಜ್ಯಗಳ ನಿರ್ವಹಣೆಯಲ್ಲಿ ತೆರಿಗೆ ಅಧಿಕಾರಿಗಳ ನಡವಳಿಕೆ


ಉದ್ದಿಮೆಗಳ ಸಲಹೆಗಳೇನು?

  • ರಫ್ತು ಉದಾರೀಕರಣಕ್ಕೆ ಕ್ರಮ ಕೈಗೊಳ್ಳಬೇಕು (ಸರಕು ಮತ್ತು ಸೇವೆಗಳ ರಫ್ತಿಗೆ ಸಂಬಂಧಿಸಿದಂತೆ ಸರ್ಕಾರ ಹೇರಿರುವ ನಿರ್ಬಂಧಗಳನ್ನು ತೆರವುಗೊಳಿಸಬೇಕು)

  • ಜಿಎಸ್‌ಟಿ ದರ ಸರಳೀಕರಣ ಮಾಡಬೇಕು

  • ಸಮಸ್ಯೆ ಬಗೆಹರಿಸಲು ಪ್ರಬಲವಾದ ವ್ಯವಸ್ಥೆಯ ಅಗತ್ಯ

  • ಆಡಳಿತಗಳಲ್ಲಿ ಲೆಕ್ಕ‍ಪರಿಶೋಧನೆಯನ್ನು ಇನ್ನಷ್ಟು ಸುಗಮಗೊಳಿಸುವುದು

  • ಉದ್ದಿಮೆಗಳಿಗೆ ದುಡಿಯುವ ಬಂಡವಾಳ ಹರಿದುಬರುವಂತೆ ಮಾಡಲು ಪೂರಕವಾದ ಕ್ರಮಗಳನ್ನು ಕೈಗೊಳ್ಳಬೇಕು

‘ಪಿಡಬ್ಲ್ಯುಸಿ ಇಂಡಿಯಾ’ ಶಿಫಾರಸುಗಳು 

  • ನಾಲ್ಕು ಹಂತದ ಜಿಎಸ್‌ಟಿ ವ್ಯವಸ್ಥೆಯನ್ನು ಮೂರು ಹಂತದ ವ್ಯವಸ್ಥೆಯನ್ನಾಗಿ ಬದಲಾಯಿಸಬೇಕು

  • ಹೂಡಿಕೆಸ್ನೇಹಿಯಾದ, ಜಾಗತಿಕವಾಗಿ ಸ್ಪರ್ಧಾತ್ಮಕವಾದ ವ್ಯವಸ್ಥೆಯಾಗಿ ರೂಪಿಸಬೇಕು

  • ಇ–ವಾಹನಗಳು, ವಿಮಾನಯಾನ, ಇ–ಕಾಮರ್ಸ್ ವಲಯಗಳ ಜಿಎಸ್‌ಟಿ ಸರಳೀಕರಣ

  • ವಿಮಾನ ಇಂಧನ, ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕು. ಅದರಿಂದ ಹಣದ ಹರಿವಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ

ಜಿಎಸ್‌ಟಿ ಸ್ಲ್ಯಾಬ್‌ಗಳು

ಜಿಎಸ್‌ಟಿ ಅನುಷ್ಠಾನ: ವಿರೋಧ ‍ಪಕ್ಷಗಳ ಟೀಕೆ

ಕೇಂದ್ರ ಸರ್ಕಾರವು ಜಿಎಸ್‌ಟಿ ವ್ಯವಸ್ಥೆ ಸಮರ್ಪಕವಾಗಿ ಜಾರಿಗೊಳಿಸಿಲ್ಲ ಎಂಬ ಟೀಕೆಯನ್ನು ಆರಂಭದಲ್ಲೇ ವಿರೋಧ ಪಕ್ಷಗಳು ಮಾಡಿದ್ದವು.

2016ರ ನವೆಂಬರ್‌ನಲ್ಲಿ ದೇಶದಲ್ಲಿ ನೋಟು ರದ್ದತಿ ಮಾಡಲಾಗಿತ್ತು. ಅದರಿಂದ ಜನರಲ್ಲಿ ಹಣದ ಕೊರತೆ ಉಂಟಾಗಿ, ಜನಜೀವನಕ್ಕೆ, ವ್ಯಾಪಾರ–ವಹಿವಾಟಿಗೆ ತೊಂದರೆ ಉಂಟಾಗಿತ್ತು. ಅದಾದ ಕೆಲವೇ ತಿಂಗಳಲ್ಲಿ, 2017ರ ಜುಲೈನಲ್ಲಿ ಜಿಎಸ್‌ಟಿ ಜಾರಿಗೆ ತರಲಾಗಿತ್ತು. ಆರಂಭದ ಗೊಂದಲಗಳು, ಹೊಸ ವ್ಯವಸ್ಥೆಗೆ ಸ್ಥಿತ್ಯಂತರಗೊಳ್ಳುವಾಗಿನ ಸಮಸ್ಯೆಗಳಿಂದ ಮತ್ತೊಮ್ಮೆ ವ್ಯಾಪಾರ–ವಹಿವಾಟು, ಉದ್ಯಮಗಳಿಗೆ ಪೆಟ್ಟು ಬಿದ್ದಿತ್ತು. ಇವೆರಡರಿಂದ ದೇಶದ ಆರ್ಥಿಕತೆ ಕುಸಿದಿದೆ ಎನ್ನುವ ವರದಿಗಳೂ ಬಂದವು. ಜಿಎಸ್‌ಟಿ ಅನ್ನು ಜಾರಿಗೊಳಿಸಲು ಅದು ಸಕಾಲವಾಗಿರಲಿಲ್ಲ ಎನ್ನುವ ಟೀಕೆಗಳು ವ್ಯಕ್ತವಾಗಿದ್ದವು. ಇದು ಸಾಲದು ಎಂಬಂತೆ 2019–20ರಲ್ಲಿ ಕೋವಿಡ್ ಸ್ಫೋಟಗೊಂಡು ಜನಸಾಮಾನ್ಯರು ತತ್ತರಿಸಿಹೋಗಿದ್ದರು. ಜನ ದೈನಂದಿನ ಜೀವನ ನಡೆಸಲೂ ಪರದಾಡುವಂತಾಗಿತ್ತು. ಅನೇಕ ಕಿರಿ–ಹಿರಿ ಉದ್ಯಮಗಳು ನಷ್ಟ ಭರಿಸಲಾರದೆ ಬಾಗಿಲು ಮುಚ್ಚಿದ್ದವು. 

ಕೇಂದ್ರ ಸರ್ಕಾರವು ಅಕ್ಕಿ, ಹಾಲು ಮುಂತಾದ ಆಹಾರ ಪದಾರ್ಥಗಳ ಮೇಲೆ ಜಿಎಸ್‌ಟಿ ವಿಧಿಸುವ ಪ್ರಕಟಣೆ ಮಾಡಿದಾಗಲೂ ಅದಕ್ಕೆ ತೀವ್ರ ವಿರೋಧ, ಟೀಕೆ ವ್ಯಕ್ತವಾಗಿತ್ತು. ದಿನಬಳಕೆಯ ವಸ್ತುಗಳನ್ನು ಜಿಎಸ್‌ಟಿ ಪಟ್ಟಿಯಿಂದ ಕೈಬಿಡಬೇಕು ಎಂಬ ಆಗ್ರಹ ವ್ಯಕ್ತವಾಗಿತ್ತು.  ವಿಮೆಗಳ ಕಂತಿನ ಮೇಲೆ ಜಿಎಸ್‌ಟಿ ವಿಧಿಸುವುದರ (ಶೇ 18) ಬಗ್ಗೆಯೂ ವಿರೋಧ ಕೇಳಿಬಂದಿತ್ತು. ‌

ಕರ್ನಾಟಕಕ್ಕೆ ಎರಡನೇ ಸ್ಥಾನ

ಜಿಎಸ್‌ಟಿ ಸಂಗ್ರಹದಲ್ಲಿ ದೇಶದಲ್ಲೇ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಗುಜರಾತ್‌, ತಮಿಳುನಾಡು, ಹರಿಯಾಣ, ಉತ್ತರ ಪ್ರದೇಶ, ದೆಹಲಿ, ಪಶ್ಚಿಮ ಬಂಗಾಳ, ತೆಲಂಗಾಣ ಮತ್ತು ಒಡಿಶಾ ಇವೆ. 

ಜಿಎಸ್‌ಟಿ ಸಂಗ್ರಹ: ಯಾವ ವರ್ಷ ಎಷ್ಟು?

ಹೆಚ್ಚು ಜಿಎಸ್‌ಟಿ ಸಂಗ್ರಹದ ರಾಜ್ಯಗಳು

ಆಧಾರ: ಪಿಟಿಐ, ಜಿಎಸ್‌ಟಿ ವೆಬ್‌ಸೈಟ್, ಪಿಡಬ್ಲ್ಯುಸಿ ಇಂಡಿಯಾ, ಪಿಐಬಿ, ಡೆಲಾಯ್ಟ್ ಜಿಎಸ್‌ಟಿ@8 ಸರ್ವೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.