ಗಡೀಪಾರು
ಅಮೆರಿಕದ ಡೊನಾಲ್ಡ್ ಟ್ರಂಪ್ ಸರ್ಕಾರದ ಹಾದಿಯಲ್ಲಿಯೇ ಬ್ರಿಟನ್‌ನ ಕೀರ್ ಸ್ಟಾರ್ಮರ್ ಸರ್ಕಾರ ಕೂಡ ಅಕ್ರಮ ವಲಸಿಗರ ವಿರುದ್ಧ ತೀವ್ರವಾದ ಕ್ರಮಗಳನ್ನು ಜರುಗಿಸುತ್ತಿದೆ. ಅಮೆರಿಕದ ರೀತಿಯಲ್ಲಿಯೇ ಬ್ರಿಟನ್‌ನಿಂದಲೂ ಅಕ್ರಮ ವಲಸಿಗರನ್ನು ವಿಮಾನಗಳಲ್ಲಿ ದೇಶದಿಂದ ಹೊರಕ್ಕೆ ಕಳುಹಿಸಲಾಗಿದೆ. ಮತ್ತೂ ಮುಂದುವರಿದು, ಅಮೆರಿಕದ ರೀತಿಯಲ್ಲಿಯೇ ಈ ಬಗ್ಗೆ ವಿಡಿಯೊಗಳನ್ನೂ ಬಿಡುಗಡೆ ಮಾಡಲಾಗಿದೆ. ಬ್ರಿಟನ್‌ನ ಲೇಬರ್ ಪಾರ್ಟಿಯ ಸರ್ಕಾರದ ಈ ಕ್ರಮದಿಂದ ಅಲ್ಲಿರುವ ಭಾರತ ಮೂಲದ ಸಾವಿರಾರು ಅಕ್ರಮ ವಲಸಿಗರಲ್ಲಿ ಆತಂಕ ಸೃಷ್ಟಿಯಾಗಿದೆ
ಅಮೆರಿಕದ ನಂತರ ಬ್ರಿಟನ್ ಸರ್ಕಾರವು ಅಕ್ರಮ ವಲಸೆ ಮತ್ತು ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ. ಅಕ್ರಮ ವಲಸಿಗರನ್ನು ಅವರ ಮೂಲದೇಶಗಳಿಗೆ ತಲುಪಿಸಲು ಸಜ್ಜಾಗಿರುವ ವಿಮಾನಗಳ ವಿಡಿಯೊ ಅನ್ನು ಫೆ.10ರಂದು ಅಲ್ಲಿನ ಗೃಹ ಇಲಾಖೆ ಹಂಚಿಕೊಂಡಿದೆ. ಅಕ್ರಮ ವಲಸೆಯ ವಿರುದ್ಧ ತಾನು ದೃಢ ನಿಲುವು ಹೊಂದಿರುವುದನ್ನು ಸಾಬೀತು ಪಡಿಸುವುದಕ್ಕಾಗಿ ಲೇಬರ್ ಪಾರ್ಟಿ ಸರ್ಕಾರವು ಈ ರೀತಿ ಮಾಡಿರುವುದಾಗಿ ಹೇಳಲಾಗುತ್ತಿದ್ದು, ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮಗಳನ್ನು ಮುಂದುವರಿಸಲಾಗುವುದು ಎಂಬ ಸಂದೇಶವನ್ನೂ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಈ ಮೂಲಕ ರವಾನಿಸಿದ್ದಾರೆ.
ಜನವರಿ ತಿಂಗಳಲ್ಲಿ ಬ್ರಿಟನ್‌ನ ವಲಸೆ ವಿಭಾಗದ ಅಧಿಕಾರಿಗಳು ದೇಶದ 828 ಸ್ಥಳಗಳಲ್ಲಿ ದಾಳಿ ನಡೆಸಿ ಅಲ್ಲಿದ್ದವರ ವಲಸೆಯ ದಾಖಲೆಗಳನ್ನು ಪರಿಶೀಲಿಸಿದ್ದರು. ಅದರಲ್ಲಿ ಭಾರತ ಮೂಲದವರಿಗೆ ಸೇರಿದ ಒಂದು ರೆಸ್ಟೊರೆಂಟ್ ಕೂಡ ಇತ್ತು. ಈ ವೇಳೆ ಏಳು ಮಂದಿಯನ್ನು ಬಂಧಿಸಿ, ನಾಲ್ವರನ್ನು ವಶಕ್ಕೆ ಪಡೆದಿದ್ದರು.
ಐದು ವರ್ಷಗಳಲ್ಲಿ ಬ್ರಿಟನ್‌ನಲ್ಲಿ ಅಕ್ರಮ ವಲಸಿಗರ ವಿರುದ್ಧ ನಡೆಸಲಾದ ಅತಿ ದೊಡ್ಡ ಕಾರ್ಯಾಚರಣೆ ಇದು. ನಾಲ್ಕು ‘ದೊಡ್ಡ ವಿಮಾನಗಳ’ಲ್ಲಿ 850ಕ್ಕೂ ಹೆಚ್ಚು ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕಲಾಗಿದೆ ಎಂದು ಕೀರ್ ಸ್ಟಾರ್ಮರ್ ಸರ್ಕಾರ ಹೇಳಿಕೊಂಡಿದೆ. 2024ರ ಜುಲೈನಲ್ಲಿ ಸ್ಟಾರ್ಮರ್ ಸರ್ಕಾರ ಬಂದ ನಂತರ, ಇಲ್ಲಿಯವರೆಗೆ ಸುಮಾರು 19 ಸಾವಿರ ಅಕ್ರಮ ವಲಸಿಗರನ್ನು ದೇಶದಿಂದ ಹೊರಕ್ಕೆ ಕಳುಹಿಸಲಾಗಿದೆ ಎಂದು ಗೃಹ ಸಚಿವಾಲಯ ಹೇಳಿದೆ. 2018ರ ನಂತರ ಇಷ್ಟು ದೊಡ್ಡ ಪ್ರಮಾಣದಲ್ಲಿ ಅಕ್ರಮವಾಗಿ ನೆಲಸಿದ್ದವರನ್ನು ಅವರ ದೇಶಕ್ಕೆ ಕಳುಹಿಸಿದ್ದು ಇದೇ ಮೊದಲು.
ಒಂದು ಕಡೆ ದೇಶದೊಳಗಿನ ಅಕ್ರಮ ವಲಸಿಗರನ್ನು ಹೊರಹಾಕಲಾಗುತ್ತಿದೆ. ಇನ್ನೊಂದು ಕಡೆ, ದೇಶದೊಳಗೆ ವಲಸಿಗರು ಅಕ್ರಮವಾಗಿ ಪ್ರವೇಶಿಸುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ. ಉದ್ಯೋಗದ ಆಸೆಯೊಂದಿಗೆ ಸಣ್ಣ ದೋಣಿಗಳ ಮೂಲಕ ಬ್ರಿಟನ್‌ಗೆ ಬರುತ್ತಿರುವ ಕಾರ್ಮಿಕರ ವಿರುದ್ಧ ಬಿಗಿ ನಿಲುವು ತಳೆಯುವುದಾಗಿಯೂ ಪ್ರಧಾನಿ ಸ್ಟಾರ್ಮರ್ ಹೇಳಿದ್ದಾರೆ.
ಚುನಾವಣಾ ವಿಷಯ: ಇಂಗ್ಲಿಷ್ ಕಡಲ್ಗಾಲುವೆಯನ್ನು ಸಣ್ಣ ದೋಣಿಗಳಲ್ಲಿ ದಾಟಿ ಬ್ರಿಟನ್ ಸೇರುವವರ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ಅಮೆರಿಕಕ್ಕೆ ಕೆನಡಾ ಮತ್ತು ಮೆಕ್ಸಿಕೊ ಮೂಲಕ ಡಂಕಿ ಮಾರ್ಗಗಳಿದ್ದಂತೆ ಇದು ಬ್ರಿಟನ್ ಅನ್ನು ಅಕ್ರಮವಾಗಿ ಪ್ರವೇಶಿಸಲು ಬಯಸುವ ಹೆಚ್ಚಿನ ಜನ ಬಳಸುವ ದಾರಿಯಾಗಿದೆ. 2023ರಲ್ಲಿ ಬ್ರಿಟನ್‌ನ ಸಾರ್ವತ್ರಿಕ ಚುನಾವಣೆಯ ವೇಳೆ ಅಕ್ರಮ ವಲಸೆಯ ಪ್ರಮುಖ ವಿಷಯವಾಗಿತ್ತು. ಲೇಬರ್ ಪಾರ್ಟಿಯ ಎದುರು ಸೋಲುವ ಸೂಚನೆ ಸಿಕ್ಕಿದ್ದರಿಂದ ಆಗ ಪ್ರಧಾನಿಯಾಗಿದ್ದ ರಿಷಿ ಸುನಕ್ ಅವರು ತಮ್ಮ ಕನ್ಸರ್ವೇಟಿವ್ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ, ಇಂಗ್ಲಿಷ್ ಕಡಲ್ಗಾಲುವೆಯ ಮೂಲಕ ದೇಶದೊಳಗೆ ಪ್ರವೇಶಿಸುವ ದೋಣಿಗಳನ್ನು ನಿರ್ಬಂಧಿಸುವುದಾಗಿ ಭರವಸೆ ನೀಡಿದ್ದರು.
ಲೇಬರ್ ಪಾರ್ಟಿ ಅಧಿಕಾರಕ್ಕೆ ಬಂದ ನಂತರ ಅಕ್ರಮ ವಲಸಿಗರ ವಿರುದ್ಧ ಕಾರ್ಯಾಚರಣೆ ಚುರುಕುಗೊಂಡಿದೆ. ಸ್ಟಾರ್ಮರ್ ಸರ್ಕಾರವು ಏಳು ತಿಂಗಳಲ್ಲಿ ದೇಶದಿಂದ ಹೊರ ಹಾಕಲಾದ ಅಕ್ರಮ ವಲಸಿಗರಲ್ಲಿ ಏಷ್ಯಾ, ಯೂರೋಪ್, ಆಫ್ರಿಕಾ, ದಕ್ಷಿಣ ಅಮೆರಿಕ ರಾಷ್ಟ್ರದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರ ಪೈಕಿ ಬ್ಯೂಟಿ ಸಲೂನ್‌ಗಳಲ್ಲಿ ಕೆಲಸ ಮಾಡುವವರು, ಕಾರು ತೊಳೆಯುವವರು, ದಾಸ್ತಾನು ಮಳಿಗೆಗಳಲ್ಲಿ ಕೆಲಸ ಮಾಡುವವರು, ರೆಸ್ಟೊರೆಂಟ್‌ನಲ್ಲಿ ಕೆಲಸ ಮಾಡುವ ಕಾರ್ಮಿಕರೇ ಹೆಚ್ಚು.
ಬ್ರಿಟನ್‌ಗೆ ಅಕ್ರಮವಾಗಿ ವಲಸೆ ಹೋಗುವವರಲ್ಲಿ ಬಹುತೇಕ ಮಂದಿ ಆಯ್ಕೆ ಮಾಡಿಕೊಳ್ಳುವ ಮಾರ್ಗ ಇಂಗ್ಲಿಷ್ ಕಡಲ್ಗಾಲುವೆ. ವಿವಿಧ ರಾಷ್ಟ್ರಗಳ ಜನರು ತಂಡೋಪತಂಡವಾಗಿ ಯುರೋಪ್ ಖಂಡದಿಂದ ಪುಟ್ಟ ಪುಟ್ಟ ದೋಣಿಗಳಲ್ಲಿ ಇಂಗ್ಲಿಷ್ ಕಡಲು ಕಾಲುವೆಯನ್ನು ದಾಟಿ ಬ್ರಿಟನ್ ಪ್ರವೇಶಿಸುತ್ತಾರೆ. 2021ರಿಂದೀಚೆಗೆ ಈ ಮಾರ್ಗದಲ್ಲಿ ಬರುತ್ತಿರುವ ಅನಧಿಕೃತ ವಲಸಿಗರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿರುವುದನ್ನು ಬ್ರಿಟನ್‌ನ ಗೃಹ ಇಲಾಖೆಯ ಅಂಕಿ ಅಂಶಗಳು ಹೇಳುತ್ತವೆ. ಅಫ್ಗಾನಿಸ್ತಾನ (2023ರಲ್ಲಿ 5,511 ಮಂದಿ), ವಿಯೆಟ್ನಾಂ (2024ರಲ್ಲಿ 3,132 ಜನರು), ಇರಾನ್ (2023ರಲ್ಲಿ 3,588 ಜನರು), ಸಿರಿಯಾ, ಸುಡಾನ್, ಎರಿಟ್ರಿಯಾ, ಇರಾಕ್, ಟರ್ಕಿ ಮುಂತಾದ ರಾಷ್ಟ್ರಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಅನಧಿಕೃತವಾಗಿ ವಲಸೆ ಹೋಗುತ್ತಾರೆ. ಇವರಲ್ಲಿ ಬಹುತೇಕರು ನಿರಾಶ್ರಿತರು.
ಮೂರು ವರ್ಷಗಳಿಂದ ಭಾರತದಿಂದಲೂ ಈ ಹಾದಿಯಲ್ಲಿ ಅಕ್ರಮವಾಗಿ ಬ್ರಿಟನ್ ಪ್ರವೇಶಿಸುತ್ತಿರುವ ಸಂಖ್ಯೆ ಜಾಸ್ತಿಯಾಗುತ್ತಿದೆ. ಉಳಿದಂತೆ, ಸಮರ್ಪಕ ದಾಖಲೆಗಳಿಲ್ಲದೆ ಅಥವಾ ನಕಲಿ ದಾಖಲೆಗಳನ್ನು ಸೃಷ್ಟಿಸಿ ವಿಮಾನದ ಮೂಲಕ ಬ್ರಿಟನ್‌ಗೆ ಬಂದಿಳಿರುವವರೂ ಇದ್ದಾರೆ. ಹಡಗುಗಳಲ್ಲಿ ಬಂದು ಬಂದರುಗಳ ಮೂಲಕ ಅಕ್ರಮವಾಗಿ ಪ್ರವೇಶಿಸುವ ವಲಸಿಗರೂ ಇದ್ದಾರೆ.
ಅಕ್ರಮವಾಗಿ ವಲಸೆ ಹೋದವರಲ್ಲಿ ಹಲವರು ಬ್ರಿಟನ್‌ನ ಆಶ್ರಯಕ್ಕಾಗಿ, ಪೌರತ್ವಕ್ಕಾಗಿ ಮನವಿ ಮಾಡುತ್ತಾರೆ. ಭಾರತದಿಂದ ಅಕ್ರಮವಾಗಿ ವಲಸೆ ಹೋದವರ ಪೈಕಿ 2023ರಲ್ಲಿ 4,942 ಮಂದಿ ಮನವಿ ಮಾಡಿದ್ದರು. ಕಳೆದ ವರ್ಷ ಸೆಪ್ಟೆಂಬರ್ ತಿಂಗಳವರೆಗೆ 4,176 ಮಂದಿ ಅರ್ಜಿ ಹಾಕಿದ್ದರು. ಇದೇ ರೀತಿ ವಿವಿಧ ರಾಷ್ಟ್ರಗಳಿಂದ ಬಂದಿರುವ ನಿರಾಶ್ರಿತರೂ ಅರ್ಜಿ ಸಲ್ಲಿಸುತ್ತಾರೆ. ಬ್ರಿಟನ್ ಸರ್ಕಾರ ಪರಿಶೀಲನೆ ನಡೆಸಿ ನಿರ್ಧಾರ ಕೈಗೊಳ್ಳುತ್ತದೆ. ಆದರೆ, ಕೆಲವು ದಿನಗಳ ಹಿಂದೆಯಷ್ಟೇ ಅಕ್ರಮವಾಗಿ ವಲಸೆ ಬಂದವರಿಗೆ ಪೌರತ್ವ ನೀಡದಿರಲು ಸರ್ಕಾರ ನಿರ್ಧರಿಸಿದೆ. ಗೃಹ ಇಲಾಖೆಯು ವಾರದ ಹಿಂದೆಯಷ್ಟೇ ಹೊಸ ಮಾರ್ಗಸೂಚಿ ಹೊರಡಿಸಿದೆ.
ಇತ್ತೀಚಿನ ವರ್ಷಗಳಲ್ಲಿ ಭಾರತದಿಂದ ಬ್ರಿಟನ್‌ಗೆ ಅಕ್ರಮ ಮಾರ್ಗಗಳ ಮೂಲಕ ಪ್ರವೇಶಿಸುವವರ ಸಂಖ್ಯೆ ಹೆಚ್ಚಾಗಿದೆ. ಅಲ್ಲಿನ ಗೃಹ ಇಲಾಖೆಯ ಅಂಕಿ ಅಂಶಗಳು ಇದನ್ನು ಹೇಳುತ್ತವೆ. 2023ರಲ್ಲಿ ಈ ಸಂಖ್ಯೆಯಲ್ಲಿ ಭಾರಿ ಹೆಚ್ಚಳ ಕಂಡುಬಂದಿತ್ತು. ಅದರ ಜತೆಗೆ, ಬ್ರಿಟನ್‌ನಲ್ಲಿ ಆಶ್ರಯ ಕೋರಿ ಅರ್ಜಿ ಸಲ್ಲಿಸುವ ಭಾರತ ಮೂಲದವರ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದೆ. 2023ರಲ್ಲಿ ಆಶ್ರಯಕ್ಕಾಗಿ ಅರ್ಜಿ ಸಲ್ಲಿಸಿದ ಭಾರತೀಯರ ಸಂಖ್ಯೆ ಮೊದಲ ಬಾರಿಗೆ 5,000 ಗಡಿ ತಲುಪಿತ್ತು.
ವಿಮಾನಗಳಲ್ಲಿ ದೇಶದಿಂದ ಹೊರಗೆ ಕಳುಹಿಸಲಾದ ಅಕ್ರಮ ವಲಸಿಗರ ಪೈಕಿ ಯಾವ ದೇಶದವರು ಎಷ್ಟು ಎನ್ನುವ ಮಾಹಿತಿ ಇನ್ನೂ ಬಹಿರಂಗಗೊಂಡಿಲ್ಲ. ಆದರೆ, ಈ ಹಿಂದಿನ ದತ್ತಾಂಶ ಪರಿಶೀಲಿಸಿದರೆ, ಬ್ರಿಟನ್‌ನಿಂದ ಹೊರಗೆ ಕಳಿಸಲಾದ ಆಶ್ರಯ ಕೋರಿ ಅರ್ಜಿ ಸಲ್ಲಿಸಿದ್ದ ವಲಸಿಗರ ಪೈಕಿ (2024ರ ಸೆಪ್ಟೆಂಬರ್ ಅಂತ್ಯದ ದತ್ತಾಂಶ) 118 ಮಂದಿ ಭಾರತೀಯರಿದ್ದು, ಎರಡನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಅಲ್ಬೇನಿಯಾ ಮೂಲದವರಿದ್ದಾರೆ.
ಆಶ್ರಯ ಕೋರಿ ಅರ್ಜಿ ಸಲ್ಲಿಸದೇ ಇರುವವರ ವಿಭಾಗದಲ್ಲಿ ಮೊದಲ ಸ್ಥಾನದಲ್ಲಿ ರೊಮಾನಿಯಾದವರು ಇದ್ದರೆ, ಎರಡನೇ ಸ್ಥಾನದಲ್ಲಿ ಭಾರತ ಮೂಲದವರು ಇದ್ದಾರೆ (203). ಒಟ್ಟಾರೆ 321 ಮಂದಿ ಭಾರತ ಮೂಲದವರನ್ನು ಬ್ರಿಟನ್‌ನಿಂದ ವಾಪಸ್ ಕಳುಹಿಸಲಾಗಿದೆ.
ಜತೆಗೆ ಅಕ್ರಮವಾಗಿ ನೆಲಸಿದ್ದ, ಆಶ್ರಯ ಕೋರಿ ಅರ್ಜಿ ಸಲ್ಲಿಸದ 5,594 ಮಂದಿ ಭಾರತ ಮೂಲದವರು ಸ್ವಯಂಪ್ರೇರಿತರಾಗಿ ಬ್ರಿಟನ್‌ನಿಂದ ವಾಪಸ್ ಆಗಿದ್ದಾರೆ. ಇದೇ ವೇಳೆ ಆಶ್ರಯ ಕೋರಿ ಅರ್ಜಿ ಸಲ್ಲಿಸಿದ್ದ 504 ಮಂದಿ ಭಾರತೀಯರು ಬ್ರಿಟನ್‌ನಿಂದ ಭಾರತಕ್ಕೆ ತಾವಾಗಿಯೇ ಹಿಂದಿರುಗಿದ್ದಾರೆ.
ಅಕ್ರಮ ವಲಸಿಗರನ್ನು ಅವರ ದೇಶಗಳಿಗೆ ಕಳುಹಿಸಬೇಕು ಎಂಬ ನಿಲುವನ್ನು ಯುರೋಪ್‌ನ ಹಲವು ರಾಷ್ಟ್ರಗಳು ಹೊಂದಿವೆ. ಕೆಲವು ರಾಷ್ಟ್ರಗಳು ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿವೆ. ಫ್ರಾನ್ಸ್ ಕಳೆದ ವರ್ಷ 22 ಸಾವಿರ ಅನಧಿಕೃತ ವಲಸಿಗರನ್ನು ದೇಶದಿಂದ ಕಳುಹಿಸಿತ್ತು. ಐರ್ಲೆಂಡ್ ಕೂಡ ಕಳೆದ ವರ್ಷದ ನವೆಂಬರ್ ಹೊತ್ತಿಗೆ ದಾಖಲೆಗಳನ್ನು ಹೊಂದಿರದ 2000 ವಲಸಿಗರನ್ನು ಹೊರಗೆ ಹಾಕಿತ್ತು. ಇಟಲಿ ಕೂಡ ಬಿಗಿ ಕ್ರಮ ಕೈಗೊಳ್ಳುತ್ತಿದೆ.
ಆಧಾರ: ಪಿಟಿಐ, ಬಿಬಿಸಿ, ಬ್ರಿಟನ್ ಗೃಹ ಇಲಾಖೆಯ ವೆಬ್‌ಸೈಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.