ADVERTISEMENT

ಆಳ ಅಗಲ| ಚೀನಾಕ್ಕೆ ಹತ್ತಿರ, ಭಾರತಕ್ಕೆ ದೂರವಾದ ಬಾಂಗ್ಲಾದೇಶ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2025, 23:31 IST
Last Updated 1 ಏಪ್ರಿಲ್ 2025, 23:31 IST
ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೊಂದಿಗೆ ಯೂನುಸ್  
ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೊಂದಿಗೆ ಯೂನುಸ್     

–ಪಿಟಿಐ ಚಿತ್ರ

ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನುಸ್ ತಮ್ಮ ಭಾರತ ವಿರೋಧಿ ಮನೋಭಾವವನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ. ಭಾರತದ ಏಳು ಈಶಾನ್ಯ ರಾಜ್ಯಗಳಿಗೆ ಸಮುದ್ರ ಮಾರ್ಗದ ನೇರ ಸಂಪರ್ಕ ಇಲ್ಲದಿರುವ ಬಗ್ಗೆ ಅವರು ಪ್ರಸ್ತಾಪಿಸಿದ್ದಾರೆ. ಬಾಂಗ್ಲಾದ ಕರಾವಳಿಯನ್ನು ಬಳಸಿಕೊಂಡು ತನ್ನ ಆರ್ಥಿಕ ಚಟುವಟಿಕೆ ವಿಸ್ತರಿಸಿಕೊಳ್ಳುವಂತೆ ಚೀನಾಕ್ಕೆ ಆಹ್ವಾನ ನೀಡಿದ್ದಾರೆ. ಯೂನುಸ್ ಅವರ ಹೇಳಿಕೆಯಿಂದ ಎರಡು ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಹದಗೆಡುವ ಆತಂಕ ಎದುರಾಗಿದೆ.

15 ವರ್ಷ ಬಾಂಗ್ಲಾದೇಶದ ಪ್ರಧಾನಿಯಾಗಿದ್ದ ಶೇಖ್ ಹಸೀನಾ ಅವರ ಸರ್ಕಾರ ಪತನಗೊಂಡ ನಂತರ ರಚನೆಯಾದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರರಾಗಿ ಆರ್ಥಿಕ ತಜ್ಞ, ನೊಬೆಲ್ ಪ್ರಶಸ್ತಿ ಪುರಸ್ಕೃತ ಮೊಹಮ್ಮದ್ ಯೂನುಸ್ ನೇಮಕವಾದಾಗ ಭಾರತವೂ ಸೇರಿ ಅನೇಕ ರಾಷ್ಟ್ರಗಳು ನಿಟ್ಟುಸಿರುಬಿಟ್ಟಿದ್ದವು. ಬಾಂಗ್ಲಾದ ಅರಾಜಕ ಸ್ಥಿತಿಯನ್ನು ತಹಬಂದಿಗೆ ತಂದು, ನೆರೆಯ ರಾಷ್ಟ್ರಗಳೊಂದಿಗೆ ಸೌಹಾರ್ದ ಸಂಬಂಧ ಮುಂದುವರಿಸುತ್ತಾರೆ ಎನ್ನುವುದು ಭಾರತದ ನಿರೀಕ್ಷೆಯಾಗಿತ್ತು. ಆದರೆ, ಯೂನುಸ್ ಅದಕ್ಕೆ ತದ್ವಿರುದ್ಧ ದಿಕ್ಕಿನಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಚೀನಾದ ನೆಲದಲ್ಲಿ ನಿಂತು ಭಾರತದ ಬಗ್ಗೆ ಅವರು ಆಡಿರುವ ಮಾತುಗಳು ಇದಕ್ಕೆ ಇತ್ತೀಚಿನ ನಿದರ್ಶನ. 

‘ಭಾರತದ ಏಳು ಸಹೋದರಿಯರು ಎಂದು ಕರೆಯಲಾಗುವ ಈಶಾನ್ಯ ರಾಜ್ಯಗಳಿಗೆ ಸಮುದ್ರದೊಂದಿಗೆ ನೇರ ಸಂಪರ್ಕ ಇಲ್ಲ. ನಾವೇ ಸಮುದ್ರದ ಮೇಲೆ ನಿಯಂತ್ರಣ ಹೊಂದಿದ್ದೇವೆ. ಇದು ವಿಪುಲ ಅವಕಾಶಗಳನ್ನು ಸೃಷ್ಟಿಸಿದೆ. ಚೀನಾ ದೇಶವು ಈ ಸಮುದ್ರ ಭಾಗವನ್ನು ತನ್ನ ಆರ್ಥಿಕ ಚಟುವಟಿಕೆಗಳ ವಿಸ್ತರಣೆಗೆ ಬಳಸಿಕೊಳ್ಳಬಹುದು. ಚೀನಾ ಇಲ್ಲಿ ತಮ್ಮ ಉತ್ಪನ್ನಗಳನ್ನು ತಯಾರಿಕೆ ಮಾಡಬಹುದು, ಮಾರಾಟ ಮಾಡಬಹುದು. ಇಡೀ ಜಗತ್ತಿಗೆ ಇಲ್ಲಿಂದ ವಸ್ತುಗಳನ್ನು ಪೂರೈಕೆ ಮಾಡಬಹುದು’ ಎಂದು ಚೀನಾಕ್ಕೆ ಭೇಟಿ ನೀಡಿದ್ದ ಯೂನುಸ್ ಅವರು ಹೇಳಿದ್ದಾರೆ. ಭಾರತದ ಆ ನಿರ್ದಿಷ್ಟ ಪ್ರಾಂತ್ಯದ ಭೌಗೋಳಿಕ ರಚನೆಯ ಅನನುಕೂಲವೇ ತಮಗೆ ಒದಗಿದ ಅವಕಾಶ ಎನ್ನುವಂತೆ ಅವರು ಮಾತನಾಡಿದ್ದಾರೆ. ಭಾರತ ಹಾಗೂ ಬಾಂಗ್ಲಾ ನಡುವಿನ ಸೌಹಾರ್ದ ಇತಿಹಾಸವನ್ನು ಯೂನುಸ್ ಮರೆತಂತೆ ವರ್ತಿಸಿದ್ದಾರೆ. 

ADVERTISEMENT

ಯೂನುಸ್ ಅವರ ಹೇಳಿಕೆಯ ವಿರುದ್ಧ ಭಾರತದಲ್ಲಿ ಆಕ್ರೋಶ ವ್ಯಕ್ತವಾಗಿದೆ. ‘ಚಿಕನ್‌ ನೆಕ್‌’ಗೆ ಪರ್ಯಾಯ ಮಾರ್ಗ ಹುಡುಕುವುದೂ ಸೇರಿದಂತೆ ಹಲವು ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಕೆಲವು ಮುಖಂಡರು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಆದರೆ, ಬಾಂಗ್ಲಾದ ಪರಿಸ್ಥಿತಿ ಸಂಕೀರ್ಣವಾಗಿದ್ದು, ಅದರೊಂದಿಗೆ ಭಾರತ ಯಾವ ರೀತಿಯ ಸಂಬಂಧ ಮುಂದುವರಿಸಬೇಕು ಎನ್ನುವ ಬಗ್ಗೆ ಎಚ್ಚರಿಕೆಯಿಂದ ಪರಿಶೀಲಿಸಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸಂಬಂಧದಲ್ಲಿ ಮತ್ತಷ್ಟು ಬಿರುಕು

ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾರತವೂ ಮಹತ್ವದ ಪಾತ್ರ ವಹಿಸಿತ್ತು. ಪಾಕಿಸ್ತಾನದಿಂದ ಹೊರಬಂದು ಪ್ರತ್ಯೇಕ ರಾಷ್ಟ್ರವಾದ ಮೇಲೆ ಅದಕ್ಕೆ ಹಲವು ವಿಧದಲ್ಲಿ ನೆರವು ನೀಡಿದ್ದು ಭಾರತ. ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಉತ್ತಮವಾಗಿತ್ತು. ಜತೆಗೆ, ಎರಡೂ ದೇಶಗಳ ನಡುವೆ ವ್ಯಾಪಾರ ವ್ಯವಹಾರಗಳು ನಡೆಯುತ್ತಿದ್ದವು. ಅದಕ್ಕಿಂತಲೂ ಹೆಚ್ಚಾಗಿ, ಮುಸ್ಲಿಂ ಬಾಹುಳ್ಯದ ಬಾಂಗ್ಲಾ ದೇಶವು ಭಾರತದ ಮಟ್ಟಿಗೆ ಉತ್ತಮ ನೆರೆಯ ರಾಷ್ಟ್ರವಾಗಿತ್ತು. ಶೇಖ್ ಹಸೀನಾ ಅವರು ಪ್ರಧಾನಿ ಆಗಿರುವವರೆಗೂ ಭಾರತ–ಬಾಂಗ್ಲಾ ಸಂಬಂಧ ಉತ್ತಮವಾಗಿಯೇ ಇತ್ತು. ಆದರೆ, ಕಾಲೇಜು ವಿದ್ಯಾರ್ಥಿಗಳ ದಂಗೆಯಿಂದ ಹಸೀನಾ ಪದಚ್ಯುತರಾಗಿ ನಿರ್ಣಾಯಕ ಸ್ಥಾನಕ್ಕೆ ಮೊಹಮ್ಮದ್ ಯೂನಸ್ ಏರಿದ ನಂತರ ಭಾರತ ವಿರೋಧಿ ಭಾವನೆ ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿದೆ. ಅದನ್ನು ಯೂನುಸ್ ಅವರೂ ನೀರೆರೆದು ಪೋಷಿಸುತ್ತಿದ್ದಾರೆ.

ಹಿಂದೂಗಳ ಪ್ರಾಬಲ್ಯದ ಭಾರತವು ನೆರೆಯ ಶೋಷಕ ರಾಷ್ಟ್ರವಾಗಿದೆ ಎನ್ನುವ ಭಾವನೆಯನ್ನು ಅಲ್ಲಿನ ಯುವಜನರಲ್ಲಿ ಬಿತ್ತಲಾಗುತ್ತಿದೆ. ಮುಸ್ಲಿಂ ಮೂಲಭೂತವಾದಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ಯೂನುಸ್ ಅವರು ದೇಶದ ವಿದೇಶಾಂಗ ನೀತಿಯನ್ನು ಬದಲಿಸಿದ್ದು, ನೆರೆಯ ಪಾಕಿಸ್ತಾನದೊಂದಿಗೆ ವಾಣಿಜ್ಯ, ಸೇನೆ ಮತ್ತು ಸಾಂಸ್ಕೃತಿಕ ಸಂಬಂಧವನ್ನು ಉತ್ತಮಪಡಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ.

ಭಾರತದ ಮೇಲೆ ಮುನಿಸೇಕೆ?

  • ಹಿಂದೂ ಬಾಹುಳ್ಯದ ರಾಷ್ಟ್ರ ತನ್ನ ಮೇಲೆ ನಿಯಂತ್ರಣ ಹೇರಲು ಯತ್ನಿಸುತ್ತಿದೆ ಎನ್ನುವ ಮನೋಭಾವ

  • ದೇಶದಿಂದ ಪಲಾಯನ ಮಾಡಿದ ಪದಚ್ಯುತ ಪ್ರಧಾನಿ ಶೇಖ್‌ ಹಸೀನಾಗೆ ಭಾರತ ನೀಡಿದ ಆಶ್ರಯ

  • ಬಾಂಗ್ಲಾದಲ್ಲಿ ಸರ್ಕಾರ ಬದಲಾದ ನಂತರ ಅಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿ, ಅದರಲ್ಲೂ ಪ್ರಮುಖವಾಗಿ ಹಿಂದೂಗಳ ಮೇಲೆ ನಡೆದ ದಾಳಿಯನ್ನು ಭಾರತ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತಾಪಿಸಿದ್ದು

  • ಶೇಖ್‌ ಹಸೀನಾ ಅವರನ್ನು ವಾಪಸ್‌ ಕಳುಹಿಸುವಂತೆ ಮಾಡಿದ ಮನವಿಗೆ ಭಾರತ ಸಕಾರಾತ್ಮಕವಾಗಿ ಸ್ಪಂದಿಸದೇ ಇರುವುದು

  • ಶೇಖ್‌ ಹಸೀನಾ ಅವರು ಇತ್ತೀಚೆಗೆ ಭಾರತದಿಂದಲೇ ಬಾಂಗ್ಲಾದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ್ದು 

ಹೆಚ್ಚುತ್ತಿರುವ ಚೀನಾ ಪ್ರಭಾವ

ಯೂನುಸ್ ಮುಖ್ಯ ಸಲಹೆಗಾರರಾದ ನಂತರ ಬಾಂಗ್ಲಾದೇಶದ ಮೇಲೆ ಚೀನಾದ ಪ್ರಭಾವ ಹೆಚ್ಚಾಗುತ್ತಿದೆ. ಯೂನುಸ್ ಅವರು ಚೀನಾ ತಮ್ಮ ಅತ್ಯುತ್ತಮ ಸ್ನೇಹಿತ ಎಂದು ಪುನರುಚ್ಚರಿಸುತ್ತಲೇ ಇದ್ದಾರೆ. ತಮ್ಮ ಸ್ನೇಹವು ಎರಡೂ ದೇಶಗಳ ಸೇನೆ ಮತ್ತು ವಾಣಿಜ್ಯ ಒಪ್ಪಂದ, ವ್ಯವಹಾರಗಳಿಗೆ ದಾರಿಯಾಗಬೇಕು ಎಂದೂ ಅವರು ಪ್ರತಿಪಾದಿಸುತ್ತಿದ್ದಾರೆ. ಚೀನಾ, ಪಾಕಿಸ್ತಾನಕ್ಕೆ ಹತ್ತಿರವಾದಷ್ಟೂ ಅವರು ಭಾರತದಿಂದ ದೂರ ಸರಿಯುತ್ತಿದ್ದಾರೆ ಎನ್ನುವುದು ಇಲ್ಲಿ ಗಮನಾರ್ಹ. ಅಲ್ಲಿನ ಚಿತ್ತಗಾಂಗ್ ಮತ್ತು ಮೊಂಗ್ಲಾ ಬಂದರುಗಳ ಮೂಲಕ ಸರಕುಗಳನ್ನು ಸಾಗಿಸಲು ಭಾರತಕ್ಕೆ ಅವಕಾಶ ನೀಡುವುದಾಗಿ ಈ ಹಿಂದೆ ಭರವಸೆ ನೀಡಿದ್ದ ಬಾಂಗ್ಲಾ, ಈಗ ಈ ಬಂದರುಗಳ ಸೌಲಭ್ಯ ವಿಸ್ತರಣೆ ಮತ್ತು ಆಧುನೀಕರಣದಲ್ಲಿ ಪಾಲ್ಗೊಳ್ಳುವಂತೆ ಚೀನಾಕ್ಕೆ ಆಹ್ವಾನ ನೀಡಿದೆ. ತೀಸ್ತಾ ನದಿಗೆ ಸಂಬಂಧಿಸಿದಂತೆಯೂ ಭಾರತದೊಂದಿಗೆ ಬಾಂಗ್ಲಾ ಇದೇ ರೀತಿ ವ್ಯವಹರಿಸಿದೆ. 

ಮುಸ್ಲಿಂ ಮೂಲಭೂತವಾದಿಗಳಿಗೆ ಬಲ

ಶೇಖ್ ಹಸೀನಾ ಅವರ ಪದಚ್ಯುತಿಯ ನಂತರ ಬಾಂಗ್ಲಾದಲ್ಲಿ ಜಮಾತ್ ಎ ಇಸ್ಲಾಮಿ ಪಕ್ಷದ ಮೇಲಿನ ನಿಷೇಧವನ್ನು ಮಧ್ಯಂತರ ಸರ್ಕಾರ ತೆರವುಗೊಳಿಸಿತ್ತು. ಅನೇಕ ಇಸ್ಲಾಮಿಸ್ಟ್ ಮುಖಂಡರನ್ನು ಜೈಲುಗಳಿಂದ ಬಿಡುಗಡೆ ಮಾಡಲಾಗಿತ್ತು. ಭಾರತ ವಿರೋಧಿ, ಹಿಂದೂ ವಿರೋಧಿ ಮನೋಭಾವದಿಂದ ಕೆಲವು ಪ್ರದೇಶಗಳಲ್ಲಿ ಹಿಂದೂಗಳ ಮೇಲೆ ದಾಳಿಗಳು ನಡೆದಿದ್ದವು.

‘ಚಿಕನ್‌ ನೆಕ್‌’ ಪ್ರಾಮುಖ್ಯ ಏನು?

ಭಾರತದ ಈಶಾನ್ಯ ದಿಕ್ಕಿನಲ್ಲಿರುವ  ರಾಜ್ಯಗಳನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಏಕೈಕ ಕೊಂಡಿ ಚಿಕನ್‌ ನೆಕ್‌ ಪ್ರದೇಶ. ಪಶ್ಚಿಮ ಬಂಗಾಳದ ಸಿಲಿಗುರಿ ವ್ಯಾಪ್ತಿಯಲ್ಲಿ ಈ ಜಾಗ ಇದೆ. ಅಲ್ಲಿನ ಭೌಗೋಳಿಕ ರಚನೆ ಕೋಳಿಯ ಕತ್ತಿನ ಆಕಾರದಲ್ಲಿರುವುದರಿಂದ ಅದನ್ನು ‘ಚಿಕನ್‌ ನೆಕ್‌’ ಎಂದು ಕರೆಯಲಾಗಿದೆ. ಈ ಪ್ರದೇಶವನ್ನು ‘ಸಿಲಿಗುರಿ ಕಾರಿಡಾರ್‌’ ಎಂದೂ ಕರೆಯಲಾಗುತ್ತದೆ. ಈ ಕಾರಿಡಾರ್‌ 60 ಕಿ.ಮೀ ಉದ್ದವಿದ್ದು, 22 ಕಿ.ಮೀನಷ್ಟು ಅಗಲವಿದೆ. ಕೆಲವು ಕಡೆಗಳಲ್ಲಿ ಈ ಅಗಲ 17 ಕಿ.ಮೀ.ವರೆಗೂ ಕುಗ್ಗುತ್ತದೆ.  ರಕ್ಷಣಾ ಕಾರ್ಯತಂತ್ರದ ಉದ್ದೇಶದಿಂದಲೂ ಭಾರತದ ಪಾಲಿಗೆ ಈ ಪ್ರದೇಶ ಮುಖ್ಯವಾಗುತ್ತದೆ.

ಸಿಲಿಗುರಿ ಕಾರಿಡಾರ್‌ ಒಂದು ಕಡೆಯಲ್ಲಿ ನೇಪಾಳ, ಇನ್ನೊಂದು ಬದಿಯಲ್ಲಿ ಬಾಂಗ್ಲಾದೇಶ ಮತ್ತು ಮತ್ತೊಂದು ಕಡೆಯಲ್ಲಿ ಭೂತಾನ್‌ಗೂ ಹೊಂದಿಕೊಂಡಿದೆ. ಸಿಕ್ಕಿಂ ಮತ್ತು ಭೂತಾನ್‌ನ ಮಧ್ಯ ಇರುವ ಟಿಬೆಟ್‌ ಪ್ರದೇಶದ ಚಂಬಿ ಕಣಿವೆಯ ಹಿಡಿತವನ್ನು ಚೀನಾ ಹೊಂದಿದೆ. ಭಾರತದ ಅರುಣಾಚಲ ಪ್ರದೇಶವನ್ನು ಚೀನಾ ತನ್ನದೆಂದು ಹೇಳಿಕೊಳ್ಳುತ್ತಿದೆ. ಸಿಲಿಗುರಿ ಕಾರಿಡಾರ್‌, ಚೀನಾ ನಿಯಂತ್ರಣದಲ್ಲಿರುವ ಪ್ರದೇಶದಿಂದ 130 ಕಿ.ಮೀನಷ್ಟು ದೂರದಲ್ಲಿದೆಯಷ್ಟೆ. ಒಂದು ವೇಳೆ ಚೀನಾ ಸೇನೆಗೆ ಈ ಪ್ರದೇಶದ ನಿಯಂತ್ರಣ ಸಾಧ್ಯವಾದರೆ, ಈಶಾನ್ಯ ರಾಜ್ಯಗಳೊಂದಿಗೆ ಸಂಪರ್ಕ ಕಡಿತಗೊಳ್ಳುತ್ತದೆ. ಇದು ದೇಶದ ಭದ್ರತೆಗೆ ಧಕ್ಕೆ ಉಂಟುಮಾಡಲಿದೆ ಎಂಬುದು ಭಾರತದ ಕಳವಳ.

ತೀಸ್ತಾ ನದಿ ಯೋಜನೆ; ಭಾರತದ ಆತಂಕ ಏನು?

ಸಿಕ್ಕಿಂನಲ್ಲಿ ಹುಟ್ಟಿ, ಪಶ್ಚಿಮ ಬಂಗಾಳದ ಮೂಲಕ ಬಾಂಗ್ಲಾದತ್ತ ಹರಿದು ನಂತರ ಬ್ರಹ್ಮಪುತ್ರ ನದಿಯನ್ನು ಸೇರುವ ತೀಸ್ತಾ ನದಿಯನ್ನು ಸಂರಕ್ಷಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳುವಂತೆ ಯೂನುಸ್‌ ಅವರು ಚೀನಾಕ್ಕೆ ಮನವಿ ಮಾಡಿರುವುದು ಕೂಡ ಭಾರತದ ಕಳವಳಕ್ಕೆ ಕಾರಣವಾಗಿದೆ. ಬಾಂಗ್ಲಾದೇಶವು ₹8,500 ಕೋಟಿ ವೆಚ್ಚದಲ್ಲಿ ತೀಸ್ತಾ ನದಿ ಸಮಗ್ರ ನಿರ್ವಹಣೆ ಮತ್ತು ಪುನರುಜ್ಜೀವನ ಯೋಜನೆಯನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಿದೆ. ತೀಸ್ತಾ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಎರಡೂ ರಾಷ್ಟ್ರಗಳು ಮಾತುಕತೆಯಲ್ಲಿ ತೊಡಗಿರುವುದರಿಂದ ಈ ಯೋಜನೆ ಬಗ್ಗೆ ಭಾರತ ಆಸಕ್ತಿ ಹೊಂದಿದೆ. ಈ ಯೋಜನೆಗೆ ಹಣಕಾಸು ನೆರವು ನೀಡುವುದರ ಜೊತೆಗೆ, ಅನುಷ್ಠಾನದ ಹೊಣೆ ಹೊರಲು ಚೀನಾ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಶೇಖ್‌ ಹಸೀನಾ ನೇತೃತ್ವದ ಹಿಂದಿನ ಸರ್ಕಾರವು ಭಾರತ ಈ ಯೋಜನೆ ಕೈಗೆತ್ತಿಕೊಳ್ಳಬೇಕು ಎಂದು ಬಯಸಿತ್ತು. ಈ ಯೋಜನೆಗೆ ಸಂಬಂಧಿಸಿದಂತೆ ಬಾಂಗ್ಲಾದ ಮಧ್ಯಂತರ ಸರ್ಕಾರದ ನಿಲುವು ಬದಲಾಗಿದ್ದು, ಅದು ಚೀನಾದತ್ತ ವಾಲಿದೆ. 

ತೀಸ್ತಾ ನದಿ ಹರಿಯುವ ಪ್ರದೇಶ ಚಿಕನ್‌ ನೆಕ್‌ ಪ್ರದೇಶಕ್ಕೆ ಸಮೀಪದಲ್ಲೇ ಇದ್ದು, ಚೀನಾವು ಈ ಯೋಜನೆಯನ್ನು ಕೈಗೆತ್ತಿಕೊಂಡರೆ ಆ ಪ್ರದೇಶದಲ್ಲಿ ಚೀನಾದ ನಾಗರಿಕರ ಉಪಸ್ಥಿತಿ ಇರಲಿದ್ದು, ಇದು ದೇಶದ ಭದ್ರತೆಯ ದೃಷ್ಟಿಯಿಂದ ಒಳಿತಲ್ಲ. ಜೊತೆಗೆ ತೀಸ್ತಾ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಒಪ್ಪಂದ 2011ರಿಂದಲೂ ನನೆಗುದಿಗೆ ಬಿದ್ದಿದೆ. ನೀರು ಹಂಚಿಕೆ ಒಪ್ಪಂದಕ್ಕೆ ಪಶ್ಚಿಮ ಬಂಗಾಳ ತೀವ್ರ ವಿರೋಧ ವ್ಯಕ್ತಪಡಿಸಿರುವುದರಿಂದ ಮಾತುಕತೆ ಮುಂದುವರಿದಿಲ್ಲ. ಒಂದು ವೇಳೆ ತೀಸ್ತಾ ನದಿ ಯೋಜನೆಯನ್ನು ಚೀನಾ ಅನುಷ್ಠಾನಗೊಳಿಸಿದರೆ, ಅದು ನದಿ ನೀರು ಹಂಚಿಕೆ ಮಾತುಕತೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ ಎನ್ನುವ ಕಳವಳ ಭಾರತದ್ದು.

‘ಆ್ಯಕ್ಟ್ ಈಸ್ಟ್’ ನೀತಿ ಮೇಲೆ ಪರಿಣಾಮ

ಮೊದಲೇ ಕುಂಟುತ್ತಾ ಸಾಗುತ್ತಿದ್ದ ಭಾರತದ ‘ಆ್ಯಕ್ಟ್ ಈಸ್ಟ್’ (ಪೂರ್ವಭಾಗದ ದೇಶಗಳ ಜತೆಗಿನ ಸಂಬಂಧ ವೃದ್ಧಿ) ನೀತಿಯ ಮೇಲೂ ಬಾಂಗ್ಲಾದೇಶದ ಬೆಳವಣಿಗೆಗಳು ಪರಿಣಾಮ ಬೀರಲಿವೆ. ‌ಏಷ್ಯಾದ ಪ್ರಬಲ ರಾಷ್ಟ್ರವಾಗುವ ದಿಸೆಯಲ್ಲಿ ಹೆಜ್ಜೆ ಇಡುತ್ತಿದ್ದ ಭಾರತದ ಮಹತ್ವಾಕಾಂಕ್ಷೆಗೆ ಬಾಂಗ್ಲಾ ಅಡ್ಡಿಯಾಗಬಹುದು ಎನ್ನುವ ವಿಶ್ಲೇಷಣೆ ಇದೆ. 

ಬಾಂಗ್ಲಾದಲ್ಲಿ ಅರಾಜಕ, ಅಸ್ಥಿರ ವಾತಾವರಣ ಇದ್ದು, ಕೋಮುವಾದ ಹೆಚ್ಚಾಗುತ್ತಿದೆ. ಸಾಮಾಜಿಕ, ಆರ್ಥಿಕ ಪರಿಸ್ಥಿತಿಯು ಹದಗೆಡುತ್ತಿದ್ದು, ಮಾನವ ಹಕ್ಕುಗಳ ಸ್ಥಿತಿ ಕಳವಳಕಾರಿಯಾಗಿದೆ. ದೇಶದಲ್ಲಿ 2025ರ ಒಳಗೆ ಚುನಾವಣೆಗಳು ನಡೆದು ಹೊಸ ಸರ್ಕಾರ ರಚನೆಯಾಗಬೇಕು. ಆದರೆ, ಅದು ಸಾಧ್ಯವಾಗುವ ಬಗ್ಗೆಯೂ ಅನುಮಾನಗಳಿವೆ.

ಶೇಖ್ ಹಸೀನಾ ಅವರ ಪದಚ್ಯುತಿಯ ನಂತರ ಬಾಂಗ್ಲಾದಲ್ಲಿ ಜಮಾತ್ ಎ ಇಸ್ಲಾಂ ಪಕ್ಷದ ಮೇಲಿನ ನಿಷೇಧವನ್ನು ಮಧ್ಯಂತರ ಸರ್ಕಾರ ತೆರವುಗೊಳಿಸಿತ್ತು. ಅನೇಕ ಇಸ್ಲಾಮಿಸ್ಟ್ ಮುಖಂಡರನ್ನು ಜೈಲುಗಳಿಂದ ಬಿಡುಗಡೆ ಮಾಡಲಾಗಿತ್ತು. ಭಾರತ ವಿರೋಧಿ ಹಿಂದೂ ವಿರೋಧಿ ಮನೋಭಾವದಿಂದ ಕೆಲವು ಪ್ರದೇಶಗಳಲ್ಲಿ ಹಿಂದೂಗಳ ಮೇಲೆ ದಾಳಿಗಳು ನಡೆದಿದ್ದವು.

ಆಧಾರ: ಪಿಟಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.