ADVERTISEMENT

ಆಳ–ಅಗಲ: ಸರಿದೂಗುವುದೇ ಟ್ರಂಪ್‌ ಸುಂಕ ಹೇರಿಕೆಯ ನಷ್ಟ?

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 1:20 IST
Last Updated 16 ಜನವರಿ 2026, 1:20 IST
<div class="paragraphs"><p>ಭಾರತ-ಅಮೆರಿಕ</p></div>

ಭಾರತ-ಅಮೆರಿಕ

   

ಭಾರತ ಮತ್ತು 27 ರಾಷ್ಟ್ರಗಳನ್ನೊಳಗೊಂಡ ಐರೋಪ್ಯ ಒಕ್ಕೂಟದ ನಡುವೆ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ನಡೆಯುವುದು ನಿಚ್ಚಳವಾಗಿದೆ. ಇದೇ 27ರಂದು ನವದೆಹಲಿಯಲ್ಲಿ ನಡೆಯಲಿರುವ ಭಾರತ–ಐರೋಪ್ಯ ಒಕ್ಕೂಟ ಶೃಂಗಸಭೆಯಲ್ಲಿ ಒಪ್ಪಂದಕ್ಕೆ ಸಹಿ ಬೀಳುವುದು ಬಹುತೇಕ ಖಚಿತವಾಗಿದೆ. ಐರೋಪ್ಯ ಕಮಿಷನ್‌ನ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಮತ್ತು ಐರೋಪ್ಯ ಕೌನ್ಸಿಲ್‌ನ ಅಧ್ಯಕ್ಷ ಆ್ಯಂಟೋನಿಯೊ ಕೋಸ್ಟಾ ಅವರು 26ರಂದು ನಡೆಯಲಿರುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮರು ದಿನವೇ ಶೃಂಗಸಭೆ ಆರಂಭವಾಗಲಿದೆ.

ಮಹತ್ವ ಏಕೆ?

ಮುಕ್ತ ವ್ಯಾಪಾರ ಒಪ್ಪಂದಕ್ಕಾಗಿ ಭಾರತ ಮತ್ತು ಐರೋಪ್ಯ ಒಕ್ಕೂಟಗಳು 2007ರಲ್ಲೇ  ಮಾತುಕತೆ ಆರಂಭಿಸಿದ್ದವು. ಆದರೆ, ಮುಕ್ತ ಮಾರುಕಟ್ಟೆಯ ಲಭ್ಯತೆ ಯಾವ ಪ್ರಮಾಣದಲ್ಲಿ ಇರಬೇಕು ಎಂಬುದೂ ಸೇರಿದಂತೆ ವಿವಿಧ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಉಂಟಾಗಿದ್ದರಿಂದ 2013ರಲ್ಲಿ ಮಾತುಕತೆ ನಿಂತಿತ್ತು. 9 ವರ್ಷಗಳ ಬಳಿಕ, 2022ರ ಜೂನ್‌ನಲ್ಲಿ ಮಾತುಕತೆ ಪುನರಾರಂಭಗೊಂಡಿತ್ತು. ಈವರೆಗೆ ಉಭಯ ಪಕ್ಷಗಳು 16 ಸುತ್ತು ಮಾತುಕತೆ ನಡೆಸಿವೆ.

ADVERTISEMENT

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಭಾರತದ ಮೇಲೆ ಶೇ 50ರಷ್ಟು ಸುಂಕ ಹೇರಿದ ನಂತರ ಎರಡೂ ದೇಶಗಳ ನಡುವಿನ ಬಾಂಧವ್ಯ ಹಳಸಿರುವುದು ಮತ್ತು ವ್ಯಾಪಾರ ಒಪ್ಪಂದ ಮಾತುಕತೆಯು ಫಲಪ್ರದವಾಗದ ಸಂದರ್ಭದಲ್ಲಿ ಈ ಒಪ್ಪಂದ ನಡೆಯುತ್ತಿರುವುದು ಹೆಚ್ಚು ಮಹತ್ವ ಪಡೆದಿದೆ.

ಒಪ್ಪಂದವು ಐರೋಪ್ಯ ಸದಸ್ಯ ರಾಷ್ಟ್ರಗಳಿಗೆ ಭಾರತ ಮಾಡುವ ರಫ್ತಿನ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಲಿದೆ ಮತ್ತು ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ. 

ನಾಲ್ಕನೇ ಒಪ್ಪಂದ

ರಷ್ಯಾದಿಂದ ತೈಲ ಖರೀದಿಸುತ್ತಿದೆ ಎಂಬ ನೆಪದಲ್ಲಿ ಭಾರತದ ಮೇಲೆ ಟ್ರಂಪ್‌ ಆಡಳಿತ ಹೇರಿರುವ ಹೆಚ್ಚುವರಿ ಸುಂಕದಿಂದಾಗಿ ಭಾರತದ ರಫ್ತು ಉದ್ಯಮಕ್ಕೆ ಹೊಡೆತ ಬಿದ್ದಿದೆ. ಟ್ರಂಪ್‌ ಸುಂಕವು ಜಾಗತಿಕ ಮಟ್ಟದಲ್ಲಿ ಸರಕುಗಳ ಪೂರೈಕೆಯ ಮೇಲೂ ಪರಿಣಾಮ ಬೀರಿದೆ. ಸುಂಕದ ಕಾರಣಕ್ಕೆ ಅಮರಿಕದೊಂದಿಗಿನ ವ್ಯಾಪಾರದಲ್ಲಿ ಆಗುತ್ತಿರುವ ನಷ್ಟವನ್ನು ಬೇರೆ ದೇಶಗಳೊಂದಿಗೆ ಹೆಚ್ಚು ವ್ಯಾಪಾರ ನಡೆಸಿ ಸರಿದೂಗಿಸಲು ಭಾರತ ಪ್ರಯತ್ನಿಸುತ್ತಿದೆ. ಇದಕ್ಕಾಗಿ ಬೇರೆ ದೇಶಗಳೊಂದಿಗೆ ವ್ಯಾಪಾರ ಮಾತುಕತೆಯನ್ನು ತೀವ್ರಗೊಳಿಸಿದೆ. 

ಕಳೆದ ವರ್ಷದ ಅಕ್ಟೋಬರ್‌ನಿಂದ ಭಾರತವು ಮೂರು ಎಫ್‌ಟಿಎಗಳನ್ನು (ಯುರೋಪಿನ ಮುಕ್ತ ವ್ಯಾಪಾರ ಒಕ್ಕೂಟ, ಒಮಾನ್‌, ನ್ಯೂಜಿಲೆಂಡ್‌) ಅಂತಿಮಗೊಳಿಸಿದೆ (ಕಳೆದ ವರ್ಷದ ಜುಲೈನಲ್ಲಿ ಬ್ರಿಟನ್‌ ಜೊತೆಗೂ ಒಪ್ಪಂದ ಮಾಡಿಕೊಂಡಿದೆ). ಐರೋಪ್ಯ ಒಕ್ಕೂಟದೊಂದಿಗೆ ಒಪ್ಪಂದ ಏರ್ಪಟ್ಟರೆ ನಾಲ್ಕನೆಯದ್ದಾಗುತ್ತದೆ.  ‌

ಒಪ್ಪಂದದಿಂದಾಗುವ ಲಾಭ ಏನು?

ಸರಕು ವ್ಯಾಪಾರದಲ್ಲಿ ಐರೋಪ್ಯ ಒಕ್ಕೂಟವು ಭಾರತದ ಅತಿ ದೊಡ್ಡ ಪಾಲುದಾರ. ಆಮದು ಮಾಡುತ್ತಿರುವ ವಸ್ತುಗಳ ಮೇಲೆ ಹೇರಲಾಗುತ್ತಿರುವ ಸುಂಕಗಳು ಒಪ್ಪಂದದಿಂದಾಗಿ ಕಡಿಮೆಯಾಗಲಿವೆ, ಇಲ್ಲವೇ ಸಂಪೂರ್ಣವಾಗಿ ರದ್ದಾಗಲಿವೆ. ಇದರಿಂದಾಗಿ ತಂತ್ರಜ್ಞಾನ, ಔಷಧಿ, ವಾಹನೋದ್ಯಮ ಮತ್ತು ಜವಳಿ ಸೇರಿದಂತೆ ಹಲವು ಕೈಗಾರಿಕಾ ಕ್ಷೇತ್ರಗಳಿಗೆ ಪ್ರಯೋಜನ ಸಿಗಲಿದೆ. 

ಜವಳಿ, ಚರ್ಮೋದ್ಯಮ, ಔಷಧ, ಉಕ್ಕು, ಪೆಟ್ರೋಲಿಯಂ ಉತ್ಪನ್ನಗಳು, ಎಲೆಕ್ಟ್ರಿಕಲ್‌ ಯಂತ್ರೋಪಕರಣಗಳು  ಸೇರಿದಂತೆ ಕಾರ್ಮಿಕರ ಶ್ರಮವನ್ನು ಹೆಚ್ಚು ಬೇಡುವ ಉದ್ದಿಮೆಗಳ ಉತ್ಪನ್ನಗಳಿಗೆ ಸುಂಕ ವಿಧಿಸಬಾರದು ಎಂಬ ಬೇಡಿಕೆಯನ್ನು ಭಾರತ ಮುಂದಿಟ್ಟಿದೆ. ಸುಂಕ ಕಡಿಮೆಯಾದರೆ, ಈ ಉತ್ಪನ್ನಗಳಿಗೆ ಯುರೋಪ್‌ ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಯಾಗಲಿದೆ. ಜವಳಿ ಉತ್ಪನ್ನಗಳಿಗೆ ಸದ್ಯ ಅಲ್ಲಿ ಶೇ 12–ಶೇ 13 ಸುಂಕ ವಿಧಿಸಲಾಗುತ್ತಿದೆ.

ಐರೋಪ್ಯ ಒಕ್ಕೂಟವು ವಾಹನಗಳು, ವೈದ್ಯಕೀಯ ಸಲಕರಣೆಗಳು, ವೈನ್‌, ಸ್ಪಿರಿಟ್‌ಗಳು, ಮಾಂಸ, ಕುಕ್ಕುಟೋದ್ಯಮ ಮತ್ತು ಬೌದ್ಧಿಕ ಆಸ್ತಿ ಹಕ್ಕಿನ ಸಂರಕ್ಷಣೆಗೆ ಸಂಬಂಧಿಸಿದಂತೆ ಹೆಚ್ಚು ಸುಂಕ ಕಡಿತ ಮಾಡುವಂತೆ ಒತ್ತಾಯ ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ. 

ಭಾರತವು ಅಲ್ಲಿಂದ ಯಂತ್ರೋಪಕರಣಗಳು, ಕಂಪ್ಯೂಟರ್‌ಗಳು, ಎಲೆಕ್ಟ್ರಾನಿಕ್ಸ್‌, ವಿಮಾನಗಳು ಮತ್ತು ಬಿಡಿಭಾಗಗಳು, ವೈದ್ಯಕೀಯ ಸಲಕರಣೆಗಳು, ವೈಜ್ಞಾನಿಕ ಉಪಕರಣಗಳು, ಪಾಲಿಷ್‌ ಮಾಡದ ವಜ್ರ, ಇಂಗಾಲಯುಕ್ತ ರಾಸಾಯನಿಕಗಳು, ಪ್ಲಾಸ್ಟಿಕ್‌, ಕಬ್ಬಿಣ ಮತ್ತು ಉಕ್ಕು, ಕಾರುಗಳು ಹಾಗೂ ವಾಹನಗಳ ಬಿಡಿ ಭಾಗಗಳನ್ನು ಆಮದು ಮಾಡಿಕೊಳ್ಳುತ್ತದೆ. 

ಸೇವಾ ವಲಯದಲ್ಲಿ ಭಾರತವು ಉದ್ಯಮ ಸೇವೆಗಳು, ದೂರ ಸಂಪರ್ಕ ಮತ್ತು ಐಟಿ, ಸಾರಿಗೆ ಸೇವೆಗಳನ್ನು ರಪ್ತು ಮಾಡಿದರೆ, ಬೌದ್ಧಿಕ ಆಸ್ತಿ ಸೇವೆಗಳು, ದೂರಸಂಪರ್ಕ ಮತ್ತು ಐಟಿ ಸೇವೆಗಳನ್ನು ಆಮದು ಮಾಡಿಕೊಳ್ಳುತ್ತದೆ. ಉಭಯ ದೇಶಗಳ ನಡುವೆ ಆಲ್ಕೋಹಾಲ್‌ ವ್ಯಾಪಾರವೂ ಗಣನೀಯ ಪ್ರಮಾಣದಲ್ಲಿದೆ.

ಕೃಷಿ ಹೊರಕ್ಕೆ

ಎಫ್‌ಟಿಎನಿಂದ ಕೃಷಿ ಉತ್ಪನ್ನಗಳನ್ನು ಕೈಬಿಡಲಾಗಿದೆ ಎಂದು ಐರೋಪ್ಯ ಕಮಿಷನ್‌ನ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಹೇಳಿರುವುದಾಗಿ ಯುರೋಪಿನ ಮಾಧ್ಯಮಗಳು ವರದಿ ಮಾಡಿವೆ. ಮಾತುಕತೆಯ ಆರಂಭದಿಂದಲೂ ಕೃಷಿ ಕ್ಷೇತ್ರವನ್ನು ಹೊರಗಿಡಲಾಗಿತ್ತು ಎಂದು ಅವರು ಹೇಳಿದ್ದಾರೆ

ಎಫ್‌ಡಿಐ ಹೆಚ್ಚಳ ನಿರೀಕ್ಷೆ

ಒಪ್ಪಂದ ನಡೆದರೆ  ಎರಡೂ ಕಡೆಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಹರಿವು ಇನ್ನಷ್ಟು ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. 

ಐರೋಪ್ಯ ಒಕ್ಕೂಟದ ಸುಮಾರು 6,000 ಕಂಪನಿಗಳು ಭಾರತದಲ್ಲಿ ಕಾರ್ಯಾಚರಿಸುತ್ತಿದ್ದು, 2000ದ ಏಪ್ರಿಲ್‌ನಿಂದ 2024ರ ಸೆಪ್ಟೆಂಬರ್‌ ವರೆಗೆ ₹10.59 ಲಕ್ಷ ಕೋಟಿ (ಡಾಲರ್‌ ಎದುರು ಈಗಿನ ರೂಪಾಯಿ ಮೌಲ್ಯದ ಅಂದಾಜು) ಬಂಡವಾಳ ಹೂಡಿವೆ. ಈ ಅವಧಿಯಲ್ಲಿ ಭಾರತಕ್ಕೆ ಬಂದ ಎಫ್‌ಡಿಐನಲ್ಲಿ ಐರೋಪ್ಯ ಒಕ್ಕೂಟದ ಪಾಲು ಶೇ 16.6.‌

ಚಿಂತಕರ ಚಾವಡಿ ಜಿಟಿಆರ್‌ಐ ಪ್ರಕಾರ 2000 ಏಪ್ರಿಲ್‌ನಿಂದ 2024ರ ಮಾರ್ಚ್‌ವರೆಗೆ ಭಾರತದ ಕಂಪನಿಗಳು ಯೂರೋಪ್‌ ರಾಷ್ಟ್ರಗಳಿಗೆ  ₹3.61 ಲಕ್ಷ ಕೋಟಿ ನೇರ ಹೂಡಿಕೆ ಮಾಡಿವೆ. 

2014ರ ನಂತರ ಏಳು ಎಫ್‌ಟಿಎ

2014ರ ನಂತರ ಭಾರತವು ಏಳು ರಾಷ್ಟ್ರಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಅಂತಿಮಗೊಳಿಸಿದೆ.

1.  ಮಾರಿಷಸ್‌ (2021 ಏಪ್ರಿಲ್‌) 

2. ಆಸ್ಟ್ರೇಲಿಯಾ (2022 ಡಿಸೆಂಬರ್‌)

3.  ಯುಎಇ (2022 ಮೇ)

4. ಒಮಾನ್‌ (2025 ಡಿಸೆಂಬರ್‌)

5. ಬ್ರಿಟನ್‌ (2025 ಜುಲೈ)

6. ಯುರೋಪಿನ ಮುಕ್ತ ವ್ಯಾಪಾರ ಒಕ್ಕೂಟ (ಇಎಫ್‌ಟಿಎ) (ಸ್ವಿಟ್ಜರ್ಲೆಂಡ್‌, ಐಸ್‌ಲೆಂಡ್‌, ಲಿಕ್ಟೆನ್‌ಸ್ಟೈನ್, ನಾರ್ವೆ) (2025– ಅಕ್ಟೋಬರ್‌)   

7. ನ್ಯೂಜಿಲೆಂಡ್‌ (2025 ಡಿಸೆಂಬರ್‌ನಲ್ಲಿ ಮಾತುಕತೆ ಅಂತಿಮವಾಗಿದೆ)

* ಮಾರಿಷನ್‌, ಆಸ್ಟ್ರೇಲಿಯಾ, ಯುಎಇಯೊಂದಿಗಿನ ಒಪ್ಪಂದ ಜಾರಿಯಾಗಿದೆ. ನ್ಯೂಜಿಲೆಂಡ್‌ ಬಿಟ್ಟು ಉಳಿದ ರಾಷ್ಟ್ರಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ

2014ಕ್ಕೂ ಮೊದಲು ಭಾರತವು ಶ್ರೀಲಂಕಾ, ದಕ್ಷಿಣ ಏಷ್ಯಾ ಮುಕ್ತ ವ್ಯಾಪಾರ ಒಪ್ಪಂದ (ಎಸ್‌ಎಎಫ್‌ಟಿಎ) (ಪಾಕಿಸ್ತಾನ, ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶ, ಭೂತಾನ್‌, ಮಾಲ್ದೀವ್ಸ್‌ ಮತ್ತು ಅಫ್ಗಾನಿಸ್ತಾನ), ನೇಪಾಳ, ಭೂತಾನ್‌, ಥಾಯ್ಲೆಂಡ್‌, ಸಿಂಗಪುರ, ಆಸಿಯಾನ್‌ (ಬ್ರೂನೈ, ಕಾಂಬೋಡಿಯಾ, ಇಂಡೊನೇಷ್ಯಾ, ಲಾವೊಸ್‌, ಮಲೇಷ್ಯಾ, ಮ್ಯಾನ್ಮಾರ್‌, ಫಿಲಿಪ್ಪೀನ್ಸ್‌, ಸಿಂಗಪುರ, ಥಾಯ್ಲೆಂಡ್‌ ಮತ್ತು ವಿಯೆಟ್ನಾಂ) ರಾಷ್ಟ್ರಗಳೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಂಡಿತ್ತು. 

ಆಧಾರ: ಪಿಟಿಐ, ಐರೋಪ್ಯ ಒಕ್ಕೂಟ ವೆಬ್‌ಸೈಟ್‌, ಯುರಾಕ್ಟಿವ್‌.ಕಾಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.