ADVERTISEMENT

ಆಳ–ಅಗಲ | ನ್ಯಾಯಮೂರ್ತಿಗಳ ವಜಾ: ಹಲವು ಹಂತಗಳ ಸಂಕೀರ್ಣ ಪ್ರಕ್ರಿಯೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 23:30 IST
Last Updated 13 ಆಗಸ್ಟ್ 2025, 23:30 IST
   
ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಯಶವಂತ ವರ್ಮಾ ಅವರ ಮನೆಯಲ್ಲಿ ನಗದು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಪದಚ್ಯುತಿಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ. ಹೈಕೋರ್ಟ್ ಮತ್ತು ಸು‍ಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ವಜಾ ಪ್ರಕ್ರಿಯೆ ಬಹು ಹಂತಗಳಿಂದ ಕೂಡಿದ್ದು, ಸಂಕೀರ್ಣವಾಗಿದೆ. ಸಂಸತ್ತಿನ ಉಭಯ ಸದನಗಳಲ್ಲಿ ವಿಶೇಷ ಬಹುಮತದೊಂದಿಗೆ ಗೊತ್ತುವಳಿ ಅಂಗೀಕಾರವಾದರೆ ಮಾತ್ರ ನ್ಯಾಯಮೂರ್ತಿಗಳನ್ನು ವಜಾ ಮಾಡಲು ಅವಕಾಶವಿದೆ. ಇದುವರೆಗೆ ನ್ಯಾಯಮೂರ್ತಿಗಳನ್ನು ಪದಚ್ಯುತಗೊಳಿಸುವ ಏಳು ಪ್ರಯತ್ನಗಳು ನಡೆದಿವೆ. ಆದರೆ, ಒಮ್ಮೆಯೂ ಯಶಸ್ವಿಯಾಗಿಲ್ಲ     

ಹೈಕೋರ್ಟ್‌ ಅಥವಾ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯನ್ನು ಹುದ್ದೆಯಿಂದ ಪದಚ್ಯುತಗೊಳಿಸಲು, ಅವರ ದುರ್ನಡತೆ ಅಥವಾ ಅಸಮರ್ಥತೆ ಸಾಬೀತಾಗಬೇಕು. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯನ್ನು ವಜಾಗೊಳಿಸುವ ಸಂಬಂಧದ ನಿಯಮಗಳು ಸಂವಿಧಾನದ 124(4)ನೇ ವಿಧಿಯಲ್ಲಿ ಮತ್ತು ಹೈಕೋರ್ಟ್‌ಗಳ ನ್ಯಾಯಮೂರ್ತಿಯನ್ನು ಪದಚ್ಯುತಗೊಳಿಸುವ ಬಗೆಗಿನ ನಿಯಮಗಳು ಸಂವಿಧಾನದ 218ನೇ ವಿಧಿಯಲ್ಲಿ ಅಡಕವಾಗಿವೆ. 

ನಿಯಮಗಳ ಪ್ರಕಾರ, ಸಂಸತ್‌ನ ಎರಡೂ ಸದನಗಳಲ್ಲಿ ಅಂಗೀಕರಿಸಿರುವ ನಿರ್ಣಯವನ್ನು ಆಧರಿಸಿ ರಾಷ್ಟ್ರಪತಿಯವರು ನ್ಯಾಯಮೂರ್ತಿಯನ್ನು ಹುದ್ದೆಯಿಂದ ವಜಾ ಮಾಡುವ ಅಧಿಕಾರ ಹೊಂದಿರುತ್ತಾರೆ. ಈ ಪ್ರಕ್ರಿಯೆಯನ್ನು ‘ನ್ಯಾಯಮೂರ್ತಿಗಳ (ತನಿಖಾ) ಕಾಯ್ದೆ–1968’ರಲ್ಲಿ ವಿವರಿಸಲಾಗಿದೆ. ನ್ಯಾಯಮೂರ್ತಿಯ ಪದಚ್ಯುತಿಯು ಹಲವು ಹಂತಗಳಲ್ಲಿ ನಡೆಯುವ ಸಂಕೀರ್ಣ ಪ್ರಕ್ರಿಯೆಯಾಗಿದೆ.  

ಆಂತರಿಕ ತನಿಖೆ:

ಅತ್ಯುನ್ನತ ನ್ಯಾಯಾಲಯಗಳ ನ್ಯಾಯಮೂರ್ತಿ ವಿರುದ್ಧ ಆರೋಪ ಕೇಳಿಬಂದರೆ, ಮೊದಲು ಆಂತರಿಕ ತನಿಖೆ ಮಾಡಲಾಗುತ್ತದೆ. 1999ರಲ್ಲಿ ಸುಪ್ರೀಂ ಕೋರ್ಟ್ ಆಂತರಿಕ ತನಿಖೆಗೆ ಮಾರ್ಗಸೂಚಿಗಳನ್ನು ಪ್ರಕಟಿಸಿತ್ತು.  

ADVERTISEMENT

ಒಂದು ವೇಳೆ ನ್ಯಾಯಮೂರ್ತಿ ವಿರುದ್ಧದ ಆರೋಪಗಳು ಸತ್ಯ ಎಂದು ಆಂತರಿಕ ಸಮಿತಿಯ ತನಿಖೆಯಲ್ಲಿ ಕಂಡುಬಂದು, ಅವು ಗಂಭೀರ ಸ್ವರೂಪದವಲ್ಲದಿದ್ದರೆ, ಮುಖ್ಯ ನ್ಯಾಯಮೂರ್ತಿಯು ಆರೋಪಿ ನ್ಯಾಯಮೂರ್ತಿಯೊಂದಿಗೆ ಚರ್ಚೆ ಮಾಡಲು ಅವಕಾಶವಿದೆ. ಆರೋಪ‍ಗಳು ಸುಳ್ಳು ಎನ್ನುವುದು ಕಂಡುಬಂದರೆ, ಆ ವಿಷಯ ಅಲ್ಲಿಗೆ ಮುಕ್ತಾಯವಾಗುತ್ತದೆ.

ಆಂತರಿಕ ಸಮಿತಿಯ ತನಿಖೆಯಲ್ಲಿ ಆರೋಪಗಳು ಸತ್ಯ ಎನ್ನುವುದು ಕಂಡುಬಂದರೆ, ಮುಖ್ಯನ್ಯಾಯಮೂರ್ತಿಯು ತಪ್ಪಿತಸ್ಥ ನ್ಯಾಯಮೂರ್ತಿಯ ರಾಜೀನಾಮೆ ಕೇಳಬಹುದು. ಆ ನ್ಯಾಯಮೂರ್ತಿ ರಾಜೀನಾಮೆ ನೀಡಲು ನಿರಾಕರಿಸಿದರೆ, ಅವರನ್ನು ಸಂಸದೀಯ ಪ್ರಕ್ರಿಯೆ ಮೂಲಕ ವಜಾ ಮಾಡಲು ಪ್ರಧಾನಿ ಮತ್ತು ರಾಷ್ಟ್ರಪತಿಗೆ ಮುಖ್ಯ ನ್ಯಾಯಮೂರ್ತಿಯು ಮನವಿ ಸಲ್ಲಿಸಬಹುದು.  

ಸಂಸದೀಯ ಪ್ರಕ್ರಿಯೆ:

ಸಂಸತ್ತಿನ ಯಾವುದಾದರೂ ಸದನದಲ್ಲಿ ಪದಚ್ಯುತಿ ಪ್ರಕ್ರಿಯೆ ಆರಂಭಿಸಬಹುದು. ಈ ಸಂಬಂಧದ ಗೊತ್ತುವಳಿಯನ್ನು ಲೋಕಸಭೆಯಲ್ಲಿ ಮಂಡಿಸಿದರೆ, ಕನಿಷ್ಠ 100 ಮಂದಿ ಸದಸ್ಯರು, ರಾಜ್ಯಸಭೆಯಲ್ಲಿ ಮಂಡಿಸಿದರೆ ಕನಿಷ್ಠ 50 ಸದಸ್ಯರ ಸಹಿಯ ಅಗತ್ಯವಿರುತ್ತದೆ. ಲೋಕಸಭೆಯ ಸ್ಪೀಕರ್/ರಾಜ್ಯಸಭೆಯ ಸಭಾಪತಿ ಗೊತ್ತುವಳಿಯನ್ನು ಅಂಗೀರಿಸಬಹುದು ಇಲ್ಲವೇ ತಿರಸ್ಕರಿಸಬಹುದು. ಗೊತ್ತುವಳಿಯನ್ನು ಅಂಗೀಕರಿಸಿದರೆ, ನ್ಯಾಯಮೂರ್ತಿ ವಿರುದ್ಧದ ಆರೋಪಗಳನ್ನು ತನಿಖೆ ಮಾಡಲು ಮೂವರು ಸದಸ್ಯರ ಸಮಿತಿಯನ್ನು ನೇಮಿಸಲಾಗುತ್ತದೆ. ಅದರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ಒಬ್ಬ ಕಾನೂನು ತಜ್ಞ ಇರುತ್ತಾರೆ. 

ನ್ಯಾಯಮೂರ್ತಿ ತಪ್ಪಿತಸ್ಥರಲ್ಲ ಎಂದು ಸಮಿತಿ ವರದಿ ನೀಡಿದರೆ, ಪ್ರಕ್ರಿಯೆಯು ಅಲ್ಲಿಗೇ ಅಂತ್ಯವಾಗುತ್ತದೆ. ನ್ಯಾಯಮೂರ್ತಿಯು ಅಪರಾಧಿ ಎಂದು ಸಮಿತಿ ಹೇಳಿದರೆ, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅದರ ಬಗ್ಗೆ ಚರ್ಚೆ ಮತ್ತು ಮತ ಚಲಾವಣೆ ನಡೆಯುತ್ತದೆ. ಆ ಸಂದರ್ಭದಲ್ಲಿ ಸದನದಲ್ಲಿ ವಾದ ಮಂಡಿಸಲು ಆರೋಪಿ ಅಥವಾ ಅವರ ವಕೀಲರಿಗೆ ಅವಕಾಶ ನೀಡಲಾಗುತ್ತದೆ. ಮತದಾನದ ವೇಳೆ ಸದನದ ಒಟ್ಟು ಬಲಾಬಲದಲ್ಲಿ ಶೇ 50ರಷ್ಟು ಹಾಜರಿರಬೇಕು ಮತ್ತು ಹಾಜರಿರುವವರ ಪೈಕಿ ಮೂರನೇ ಎರಡರಷ್ಟು ಸದಸ್ಯರು ಗೊತ್ತುವಳಿಯ ಪರವಾಗಿ ಮತ ಚಲಾವಣೆ ಮಾಡಬೇಕು. 

ಮತ್ತೊಂದು ಸದನದಲ್ಲಿಯೂ ಇದೇ ಪುನರಾವರ್ತನೆ ಆಗುತ್ತದೆ. ಎರಡೂ ಸದನಗಳಲ್ಲಿ ಗೊತ್ತುವಳಿಯು ಅಂಗೀಕಾರವಾದರೆ, ನ್ಯಾಯಮೂರ್ತಿಯನ್ನು ವಜಾಗೊಳಿಸುವ ಸಂಸತ್ತಿನ ನಿರ್ಣಯವನ್ನು ರಾಷ್ಟ್ರಪತಿಗೆ ತಿಳಿಸಲಾಗುತ್ತದೆ. ರಾಷ್ಟ್ರಪತಿ ವಜಾ ಆದೇಶ ಹೊರಡಿಸುತ್ತಾರೆ.

ಮತ್ತೊಬ್ಬ ನ್ಯಾಯಮೂರ್ತಿ ವಿರುದ್ಧ ನೋಟಿಸ್‌
ನ್ಯಾಯಮೂರ್ತಿ ಯಶವಂತ್‌ ವರ್ಮಾ ಅವರ ಪದಚ್ಯುತಿಗೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಪ್ರಕ್ರಿಯೆ ಆರಂಭವಾಗಿದೆ. ಇದೇ ಹೊತ್ತಿನಲ್ಲಿ ಕೋಮು ಪ್ರಚೋದಿತ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಅಲಹಾಬಾದ್‌ ಹೈಕೋರ್ಟ್‌ನ ಮತ್ತೊಬ್ಬ ನ್ಯಾಯಮೂರ್ತಿ ಶೇಖರ್‌ ಯಾದವ್‌ ಅವರ ಪದಚ್ಯುತಿಗೆ ಒತ್ತಾಯಿಸಿ ವಿರೋಧ ಪಕ್ಷಗಳ ಸದಸ್ಯರು ರಾಜ್ಯಸಭೆಯಲ್ಲಿ ಗೊತ್ತುವಳಿ ನೋಟಿಸ್‌ ನೀಡಿದ್ದಾರೆ. ಈ ಬಗ್ಗೆ ಸಭಾಪತಿಯವರು ಇನ್ನಷ್ಟೇ ನಿರ್ಧಾರ ಕೈಗೊಳ್ಳಬೇಕಾಗಿದೆ.
ಏಳು ಯತ್ನಗಳೂ ವಿಫಲ

ದೇಶದ ಸಂಸತ್ತಿನ ಇತಿಹಾಸದಲ್ಲಿ ಇದುವರೆಗೆ ಏಳು ಮಂದಿ ಹೈಕೋರ್ಟ್‌ ಅಥವಾ
ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳನ್ನು ಪದಚ್ಯುತಿಗೊಳಿಸುವ ಯತ್ನ ನಡೆದಿತ್ತು. ಆದರೆ, ಎಲ್ಲವೂ ಒಂದಿಲ್ಲೊಂದು ಕಾರಣಕ್ಕೆ ವಿಫಲವಾಗಿದ್ದವು

  1. ನ್ಯಾ. ವಿ.ರಾಮಸ್ವಾಮಿ: ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿಯಾಗಿದ್ದ ವಿ.ರಾಮಸ್ವಾಮಿ ಅವರನ್ನು 1993ರಲ್ಲಿ ವಜಾ ಮಾಡಲು ಯತ್ನಿಸಿದ್ದು ದೇಶದ ಮೊದಲ ಪ್ರಕರಣ. ಅವರು 1990ರಲ್ಲಿ ಮುಖ್ಯನ್ಯಾಯಮೂರ್ತಿಯಾಗಿದ್ದಾಗ ಅಧಿಕೃತ ನಿವಾಸಕ್ಕಾಗಿ ಅನಗತ್ಯ ವೆಚ್ಚ ಮಾಡಿ ಹಣ ದುರ್ಬಳಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ತನಿಖೆ ನಡೆಸುವುದಕ್ಕಾಗಿ ರಚಿಸಿದ್ದ ಸಮಿತಿಯು ರಾಮಸ್ವಾಮಿ ಅವರು ತಪ್ಪಿತಸ್ಥ ಎಂದು ಹೇಳಿತ್ತು. ಆದರೆ, ಗೊತ್ತುವಳಿಯನ್ನು ಲೋಕಸಭೆಯಲ್ಲಿ ಮಂಡಿಸಿದಾಗ ಆಗಿನ ಆಡಳಿತಾರೂಢ ಕಾಂಗ್ರೆಸ್‌ ಸಂಸದರು ಮತದಾನದಿಂದ ಹಿಂದೆ ಸರಿದಿದ್ದರು. ಇದರಿಂದಾಗಿ ಮೂರನೇ ಎರಡರಷ್ಟು ಬಹುಮತ ಇಲ್ಲದೆ ಗೊತ್ತುವಳಿ ಸೂಚನೆ ಅಂಗೀಕಾರವಾಗಿರಲಿಲ್ಲ. ಹಾಗಾಗಿ, ರಾಮಸ್ವಾಮಿಯವರ ಪದಚ್ಯುತಿ ಸಾಧ್ಯವಾಗಿರಲಿಲ್ಲ. 

  2. ನ್ಯಾ. ಸೌಮಿತ್ರ ಸೇನ್‌: 2011ರಲ್ಲಿ ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿದ್ದ ಸೌಮಿತ್ರ ಸೇನ್‌ ಅವರ ವಿರುದ್ಧ ರಾಜ್ಯಸಭೆಯಲ್ಲಿ ಪದಚ್ಯುತಿ ಗೊತ್ತುವಳಿ ಸೂಚನೆಯನ್ನು ಅಂಗೀಕರಿಸಲಾಗಿತ್ತು. ಸೇನ್‌ ಅವರು ವಕೀಲರಾಗಿದ್ದಾಗ ಪ್ರಕರಣವೊಂದರಲ್ಲಿ ನ್ಯಾಯಾಲಯವು ಅವರನ್ನು ರಿಸೀವರ್ ಆಗಿ ನೇಮಿಸಿತ್ತು. ಆಗ ಅವರ ವಿರುದ್ಧ ₹33.23 ಲಕ್ಷ ಹಣವನ್ನು ದುರ್ಬಳಕೆ ಮಾಡಿದ ಆರೋಪ ಕೇಳಿಬಂದಿತ್ತು. ತನಿಖಾ ಸಮಿತಿಯು ಅವರನ್ನು ತಪ್ಪಿತಸ್ಥ ಎಂದು ಹೇಳಿತ್ತು. ಮೇಲ್ಮನೆಯಲ್ಲಿ ಗೊತ್ತುವಳಿ ಅಂಗೀಕಾರಗೊಂಡು, ಅದನ್ನು ಚರ್ಚೆಗೆ ಕೈಗೆತ್ತಿಕೊಳ್ಳುವುದಕ್ಕೂ ಮುನ್ನ ಸೇನ್‌ ಅವರು ನ್ಯಾಯಮೂರ್ತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗೆ ಪದಚ್ಯುತಿಯಿಂದ ಅವರು ತಪ್ಪಿಸಿಕೊಂಡಿದ್ದರು. 

  3.  ನ್ಯಾ. ಪಿ.ಡಿ.ದಿನಕರನ್‌: ಭೂಕಬಳಿಕೆ, ಭ್ರಷ್ಟಾಚಾರ ನಡೆಸಿರುವ ಆರೋಪ ಹೊತ್ತಿದ್ದ ಸಿಕ್ಕಿಂ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿಯಾಗಿದ್ದ ಪಿ.ಡಿ.ದಿನಕರನ್‌ ವಿರುದ್ಧ ರಾಜ್ಯಸಭೆಯಲ್ಲಿ 2011ರಲ್ಲಿ ಪದಚ್ಯುತಿ ನೋಟಿಸ್‌ ನೀಡಲಾಗಿತ್ತು. ಅಂದಿನ ಸಭಾಪತಿ ಅವರು ತನಿಖೆಗೆ ಸಮಿತಿಯನ್ನೂ ರಚಿಸಿದ್ದರು. ಆದರೆ, ಪದಚ್ಯುತಿ ಪ್ರಕ್ರಿಯೆ ಆರಂಭವಾಗುವುದಕ್ಕೂ ಮೊದಲೇ, ಆ ವರ್ಷದ ಜುಲೈನಲ್ಲಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. 

  4.  ನ್ಯಾ. ಜೆ.ಬಿ.ಪಾರ್ದೀವಾಲಾ: ಹಾಲಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಜೆ.ಬಿ.ಪಾರ್ದೀವಾಲಾ ಅವರು 2015ರಲ್ಲಿ ಗುಜರಾತ್‌ನ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿಯಾಗಿದ್ದಾಗ, ಪ್ರಕರಣವೊಂದರ ತೀರ್ಪಿನಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ವ್ಯಕ್ತಪಡಿಸಿದ ಅಭಿಪ್ರಾಯ (ಭಾರತ ಅಭಿವೃದ್ಧಿ ಹೊಂದದೇ ಇರಲು ಮೀಸಲಾತಿ ವ್ಯವಸ್ಥೆ ಕಾರಣ ಎಂಬರ್ಥದಲ್ಲಿ ಹೇಳಿದ್ದರು) ವಿವಾದ ಸೃಷ್ಟಿಸಿತ್ತು. ಈ ಹೇಳಿಕೆಯನ್ನು ಖಂಡಿಸಿ ರಾಜ್ಯಸಭೆಯಲ್ಲಿ ಅವರ ವಿರುದ್ಧ ಪದಚ್ಯುತಿ ನೋಟಿಸ್‌ ನೀಡಲಾಗಿತ್ತು. ನಂತರ ಪಾರ್ದೀವಾಲಾ ಅವರು ತೀರ್ಪಿನಿಂದ ಆ ಅಭಿಪ್ರಾಯವನ್ನು ತೆಗೆದುಹಾಕಿದ್ದರಿಂದ ಅವರ ವಿರುದ್ಧದ ಪದಚ್ಯುತಿ ಗೊತ್ತುವಳಿ ನೋಟಿಸ್‌ ಕೈಬಿಡಲಾಗಿತ್ತು. 

  5. ನ್ಯಾ. ಎಸ್‌.ಕೆ.ಗಂಗೆಲೆ: 2015ರಲ್ಲಿ ಮಧ್ಯಪ್ರದೇಶ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿದ್ದ ಎಸ್‌.ಕೆ.ಗಂಗೆಲೆ ಅವರ ಪದಚ್ಯುತಿಗಾಗಿ ರಾಜ್ಯಸಭೆಯಲ್ಲಿ ಗೊತ್ತುವಳಿ ಸೂಚನೆ ನೀಡಲಾಗಿತ್ತು. ಗಂಗೆಲೆ ಅವರು ತಮ್ಮೊಂದಿಗೆ ಲೈಂಗಿಕ ದುರ್ನಡತೆ ತೋರಿದ್ದಾರೆ ಎಂದು ಜಿಲ್ಲಾ ಮಟ್ಟದ ಮಹಿಳಾ ನ್ಯಾಯಾಧೀಶರೊಬ್ಬರು ಆರೋಪಿಸಿದ್ದರು. 58 ಸಂಸದರ ಸಹಿ ಇದ್ದ ಸೂಚನೆಯನ್ನು ಆಗಿನ ಸಭಾಪತಿ ಹಮೀದ್‌ ಅನ್ಸಾರಿ ಅಂಗೀಕರಿಸಿದ್ದರು. ಪ್ರಕರಣದ ತನಿಖೆಗಾಗಿ ಸಮಿತಿಯನ್ನೂ ರಚಿಸಲಾಗಿತ್ತು. ಆದರೆ, ಸಮಿತಿಯು ಅವರು ತಪ್ಪು ಮಾಡಿಲ್ಲ ಎಂದು ಹೇಳಿದ್ದರಿಂದ ಸಂಸತ್ತಿನಲ್ಲಿ (2017ರಲ್ಲಿ) ಗೊತ್ತುವಳಿ ಸೂಚನೆ ಬಿದ್ದು ಹೋಗಿತ್ತು.

  6. ನ್ಯಾ. ಸಿ.ವಿ.ನಾಗಾರ್ಜುನ ರೆಡ್ಡಿ: ದಲಿತ ನ್ಯಾಯಾಧೀಶರೊಬ್ಬರ ವಿಚಾರದಲ್ಲಿ ತಾರತಮ್ಯ ಎಸಗಿದ ಆರೋಪದಲ್ಲಿ ಆಂಧ್ರ ಪ್ರದೇಶ ಮತ್ತು ತೆಲಂಗಾಣ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿದ್ದ ಸಿ.ವಿ.ನಾಗಾರ್ಜುನ ರೆಡ್ಡಿ ಅವರ ಪದಚ್ಯುತಿಗಾಗಿ 2016 ಮತ್ತು 2017ರಲ್ಲಿ ರಾಜ್ಯಸಭೆಯಲ್ಲಿ ಗೊತ್ತುವಳಿ ನೋಟಿಸ್‌ ನೀಡಲಾಗಿತ್ತು. ಆದರೆ, ನೋಟಿಸ್‌ಗೆ ಸಹಿಹಾಕಿದ್ದ ಕೆಲವು ಸಂಸದರು ಎರಡೂ ಬಾರಿಯೂ ತಮ್ಮ ಒಪ್ಪಿಗೆಯನ್ನು ವಾಪಸ್‌ ಪಡೆದಿದ್ದರಿಂದ ಪದಚ್ಯುತಿ ಪ್ರಕ್ರಿಯೆ ಮುಂದುವರಿಯಲಿಲ್ಲ.

  7. ನ್ಯಾ. ದೀಪಕ್‌ ಮಿಶ್ರಾ: ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ದೀಪಕ್‌ ಮಿಶ್ರಾ ಅವರ ಕಾರ್ಯವೈಖರಿ ಮತ್ತು ಅವರು ಪ್ರಕರಣಗಳನ್ನು ಹಂಚುವ ರೀತಿಯನ್ನು ಟೀಕಿಸಿ 2018ರಲ್ಲಿ ಐವರು ನ್ಯಾಯಮೂರ್ತಿಗಳು ಬಹಿರಂಗವಾಗಿ ಸುದ್ದಿ ಗೋಷ್ಠಿ ನಡೆಸಿದ ಬಳಿಕ ಕೆಲವು ಸಂಸದರು ಮಿಶ್ರಾ ಪದಚ್ಯುತಿಗೆ ಒತ್ತಾಯಿಸಿ ಗೊತ್ತುವಳಿ ನೋಟಿಸ್‌ ನೀಡಿದ್ದರು. ಆದರೆ, ಅಂದಿನ ಸಭಾಪತಿ ವೆಂಕಯ್ಯನಾಯ್ಡು ಅವರು, ಇದು ಸುಪ್ರೀಂ ಕೋರ್ಟ್‌ನ ಆಂತರಿಕ ವಿಚಾರ ಎಂದು ಹೇಳಿ ನೋಟಿಸ್‌ ತಿರಸ್ಕರಿಸಿದ್ದರು. 

ಆಧಾರ: ಪಿಟಿಐ   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.