ADVERTISEMENT

ಆಳ–ಅಗಲ: ಕವಿರಾಜಮಾರ್ಗಕಾರನ ಎಲ್ಲೆಯನ್ನೂ ಮೀರಿದ ಕನ್ನಡಿಗರ ನೆಲೆ

ಕವಿರಾಜಮಾರ್ಗಕಾರ ಹೇಳಿದ್ದ ಎಲ್ಲೆಯನ್ನೂ ಮೀರಿ ಕನ್ನಡಿಗರ ನೆಲೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2024, 3:17 IST
Last Updated 6 ಫೆಬ್ರುವರಿ 2024, 3:17 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕನ್ನಡನಾಡು ಕಾವೇರಿಯಿಂದ ಗೋದಾವರಿವರೆಗೂ ಹಬ್ಬಿದೆ ಎಂದು ಕವಿರಾಜಮಾರ್ಗಕಾರ 10ನೇ ಶತಮಾನದಲ್ಲಿಯೇ ಹೇಳಿದ್ದ. ಈ ಬಗ್ಗೆ ತಮ್ಮ ಸಂಶೋಧನಾ ಗ್ರಂಥಗಳಲ್ಲಿ, ಸಂಶೋಧನಾ ಪತ್ರಿಕೆಗಳಲ್ಲಿ ಉಲ್ಲೇಖಿಸಿದವರ ಸಂಖ್ಯೆಗೆ ಲೆಕ್ಕವಿಲ್ಲ. ಆದರೆ ದೇಶದ ಜನಗಣತಿಯ ದತ್ತಾಂಶಗಳನ್ನು ವಿಶ್ಲೇಷಿಸಿರುವ ಸಂಶೋಧಕರೊಬ್ಬರು, ಕವಿರಾಜಮಾರ್ಗಕಾರ ಹೇಳಿದ್ದ ಎಲ್ಲೆಯನ್ನೂ ಮೀರಿ ಕನ್ನಡಿಗರ ನೆಲೆ ಇದೆ ಎಂದಿದ್ದಾರೆ

ದೇಶದ ಬೇರೆ ರಾಜ್ಯಗಳಲ್ಲಿ ನೆಲೆಸಿರುವ ಕನ್ನಡ ಭಾಷಿಕರ ಸಂಖ್ಯೆ 30 ಲಕ್ಷಕ್ಕೂ ಅಧಿಕ. ಹಾಗೆಂದು ಇವರೆಲ್ಲರೂ ಕರ್ನಾಟಕದಿಂದ ಅಲ್ಲಿಗೆ ಹೋಗಿ ನೆಲೆಸಿದವರು ಅಲ್ಲ. ಬದಲಿಗೆ ಅದೇ ನೆಲದಲ್ಲಿರುವ ಕನ್ನಡ ಭಾಷಿಕ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಕರ್ನಾಟಕದ ನೆರೆಯ ರಾಜ್ಯಗಳ ಜಿಲ್ಲೆಗಳಲ್ಲಿ ಕನ್ನಡ ಭಾಷಿಕ ಸಮುದಾಯವನ್ನು ಕಾಣಬಹುದಾಗಿದೆ. ಜಿಲ್ಲೆಯೊಂದರಲ್ಲಿ ಕನ್ನಡ ಭಾಷಿಕ ಸಮುದಾಯದ ಸಂಖ್ಯೆ 10,000ಕ್ಕೂ ಹೆಚ್ಚು ಇರುವ ಒಟ್ಟು 37 ಜಿಲ್ಲೆಗಳನ್ನು 2011ರ ಜನಗಣತಿಯಲ್ಲಿ ಗುರುತಿಸಲಾಗಿದೆ. ಕರ್ನಾಟಕದ ಜಿಲ್ಲೆಗಳು ಬಿಟ್ಟರೆ, ಹೊರರಾಜ್ಯದಲ್ಲಿ ಕನ್ನಡ ಭಾಷಿಕರು ಅತಿಹೆಚ್ಚು ಇರುವ ಜಿಲ್ಲೆ ಮಹಾರಾಷ್ಟ್ರದ ಸೊಲ್ಲಾಪುರ. ಸೊಲ್ಲಾಪುರದಲ್ಲಿ ಕನ್ನಡ ಮಾತನಾಡುವ 4 ಲಕ್ಷಕ್ಕೂ ಹೆಚ್ಚು ಜನರು ಇದ್ದಾರೆ.

ADVERTISEMENT

ಜನಗಣತಿಯ ವೇಳೆ ಭಾಷಿಕ ಸಮುದಾಯದ ಸಂಖ್ಯೆಯನ್ನೂ ಲೆಕ್ಕ ಮಾಡಲಾಗುತ್ತದೆ. ಯಾವುದೇ ಭಾಷಿಕ ಸಮುದಾಯದ ಸಂಖ್ಯೆ 10,000ಕ್ಕಿಂತ ಹೆಚ್ಚು ಇದ್ದರೆ, ಅದನ್ನು ಪ್ರತ್ಯೇಕವಾಗಿ ಗುರುತಿಸಲಾಗುತ್ತದೆ. ಅವುಗಳ ಆಧಾರದಲ್ಲಿ ಸಿದ್ಧಪಡಿಸಲಾಗುವ ಭಾರತದ ಭಾಷಾ ಅಟ್ಲಾಸ್‌ ಮತ್ತು ಭಾರತೀಯ ಮಾತೃಭಾಷಾ ಸಮೀಕ್ಷೆಯ ವರದಿಗಳನ್ನು ಸಿದ್ಧಪಡಿಸಲಾಗುತ್ತದೆ. ಆ ವರದಿಗಳನ್ನು ವಿಶ್ಲೇಷಿಸಿರುವ ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಂಶೋಧಕರಾಗಿರುವ ಬಸವರಾಜ ಕೊಡಗುಂಟಿ ಅವರು ದೇಶದ 67 ಜಿಲ್ಲೆಗಳಲ್ಲಿ, ಕನ್ನಡ ಭಾಷಿಕರ ಸಂಖ್ಯೆ 10,000ಕ್ಕಿಂತ ಹೆಚ್ಚು ಇದೆ ಎಂಬುದನ್ನು ಗುರುತಿಸಿದ್ದಾರೆ. ಇವುಗಳಲ್ಲಿ ಹೊರರಾಜ್ಯಗಳ 37 ಜಿಲ್ಲೆಗಳು ಸೇರಿವೆ. 

ರಾಜ್ಯದ 17 ಜಿಲ್ಲೆಗಳಲ್ಲಿ ಕನ್ನಡ ಭಾಷಿಕರ ಸಂಖ್ಯೆ 10 ಲಕ್ಷಕ್ಕಿಂತಲೂ ಹೆಚ್ಚು ಇದ್ದರೆ, 13 ಜಿಲ್ಲೆಗಳಲ್ಲಿ ಕನ್ನಡ ಭಾಷಿಕರ ಸಂಖ್ಯೆ 10 ಲಕ್ಷಕ್ಕಿಂತ ಕಡಿಮೆ ಇದೆ. ಕೆಲವು ಜಿಲ್ಲೆಗಳಲ್ಲಿ ಕನ್ನಡ ಭಾಷಿಕರ ಸಂಖ್ಯೆ 5 ಲಕ್ಷಕ್ಕಿಂತ ಕಡಿಮೆ ಇದೆ. ಕನ್ನಡ ಭಾಷಿಕರ ಸಂಖ್ಯೆ ಕಡಿಮೆ ಇರುವ ಜಿಲ್ಲೆಗಳಲ್ಲಿ ದ್ವಿಭಾಷಿಕರ ಸಂಖ್ಯೆ ಹೆಚ್ಚು ಇದೆ. ಆ ಜಿಲ್ಲೆಗಳಲ್ಲಿನ ಜನರು ಮನೆಭಾಷೆಯಾಗಿ ತಮ್ಮ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯನ್ನು ಬಳಸುತ್ತಾರೆ. ಆಡಳಿತ ಭಾಷೆಯಾಗಿ ಕನ್ನಡವನ್ನು ಬಳಸುತ್ತಾರೆ.

ಕರ್ನಾಟಕದಾಚೆ ಕನ್ನಡ ಭಾಷಿಕರ ಸಂಖ್ಯೆ ಅತಿಹೆಚ್ಚು ಇರುವುದು ತಮಿಳುನಾಡಿನಲ್ಲಿ. ಕರ್ನಾಟಕಕ್ಕೆ ಹೊಂದಿಕೊಂಡಿರುವ ಕೃಷ್ಣಗಿರಿ, ಈರೋಡ್‌, ನೀಲಗಿರಿ ಜಿಲ್ಲೆಗಳಲ್ಲಿ ಕನ್ನಡ ಭಾಷಿಕರ ಸಂಖ್ಯೆ ಅತ್ಯಧಿಕವಾಗಿದೆ. ಈ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಸೇಲಂ, ತಿರುಪ್ಪೂರು, ಕೊಯಮತ್ತೂರು ಮತ್ತು ಥೇಣಿ ಜಿಲ್ಲೆಗಳಲ್ಲೂ ಕನ್ನಡ ಭಾಷಿಕರ ಸಂಖ್ಯೆ ಗಣನೀಯ ಮಟ್ಟದಲ್ಲೇ ಇದೆ. ಮಹಾರಾಷ್ಟ್ರದ ಸೊಲ್ಲಾಪುರ, ಕೊಲ್ಲಾಪುರ, ಸಾಂಗ್ಲಿ, ಪುಣೆ ಮತ್ತು ಠಾಣೆ ಜಿಲ್ಲೆಗಳಲ್ಲೂ ಕನ್ನಡ ಭಾಷಿಕರ ಸಂಖ್ಯೆ ದೊಡ್ಡದೇ ಇದೆ ಎನ್ನುತ್ತದೆ ಬಸವರಾಜ ಅವರ ಸಂಶೋಧನಾ ದತ್ತಾಂಶಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.