
ನಾಯಕತ್ವ ಬದಲಾವಣೆ, ಕೆಪಿಸಿಸಿ ಅಧ್ಯಕ್ಷ ಗಾದಿಯ ವಿಚಾರವು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವಿನ ‘ಬಣ’ ಜಗಳವು ಸೃಷ್ಟಿಸಿದ ಗದ್ದಲ, ಗೊಂದಲವೇ ಇಡೀ ವರ್ಷ ರಾಜ್ಯ ರಾಜಕಾರಣವನ್ನು ಆವರಿಸಿಕೊಂಡಿತ್ತು.
ಸರ್ಕಾರ ಜಾರಿಗೊಳಿಸಿದ ಪಂಚಗ್ಯಾರಂಟಿಗಳ ಮೂಲಕ ತುಂಬಿಕೊಟ್ಟ ‘ಸಾಂತ್ವನ’ ಅನುರಣಿಸುವ ಬದಲು, ನಾಯಕರ ಮಧ್ಯದ ಕಚ್ಚಾಟ ನಿತ್ಯದ ಸುದ್ದಿಯಾಗುತ್ತಲೇ ಬಂತು. ನಾಯಕತ್ವಕ್ಕಾಗಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನಡುವಿನ ಸೆಣಸಾಟವೇ ಅಧಿಕಾರ ಕೇಂದ್ರದಲ್ಲಿ ರಿಂಗಣಿಸಿತು. ಇದರಿಂದಾಗಿ ಅಭಿವೃದ್ಧಿಯತ್ತ ಲಕ್ಷ್ಯ ಕೊಡಲು ಸಾಧ್ಯವಾಗಲಿಲ್ಲ. ನಾಯಕರ ಜಗಳದಿಂದಾಗಿ ಉಂಟಾದ ಅಸ್ಥಿರ ರಾಜಕೀಯ ಪರಿಸ್ಥಿತಿಯ ಲಾಭ ಪಡೆದ ಅಧಿಕಾರಿ ವರ್ಗ ನಿರ್ಲಕ್ಷ್ಯ ತಾಳಿತು.
ಬೆಳಗಾವಿ ಅಧಿವೇಶನದ ಅವಧಿಯೂ ಸೇರಿದಂತೆ ವರ್ಷದ ಅಂತ್ಯದವರೆಗೂ ಮುಖ್ಯಮಂತ್ರಿ ಬದಲಾವಣೆ ವಿಚಾರ, ಸಂಪುಟ ಪುನರ್‌ರಚನೆ ವಿಚಾರಗಳ ಚರ್ಚೆಗಳು ತಡೆ ಇಲ್ಲದೇ ನಡೆದವು.
ಯಾರ ಜತೆಗೆ ನಿಂತರೆ ಲಾಭ ಎಂಬ ಲೆಕ್ಕಾಚಾರದಲ್ಲಿರುವ ಶಾಸಕರು ಹಾಗೂ ಕಾಂಗ್ರೆಸ್ ನಾಯಕರು ಇಬ್ಬರು ನಾಯಕರನ್ನೂ ಭೇಟಿ ಮಾಡಿ, ತಮ್ಮ ಪರ ಲಾಬಿ ನಡೆಸುವಲ್ಲಿ ನಿರತರಾಗಿದ್ದರು.
ವರ್ಷದ ಆರಂಭದಲ್ಲೇ ದಲಿತ ಸಚಿವರು, ಶಾಸಕರ ಔತಣ ಕೂಟ ಸದ್ದು ಮಾಡಿತ್ತು. ಸಚಿವರಾದ ಸತೀಶ ಜಾರಕಿಹೊಳಿ, ಜಿ.ಪರಮೇಶ್ವರ, ಎಚ್.ಸಿ.ಮಹದೇವಪ್ಪ, ಕೆ.ಎನ್.ರಾಜಣ್ಣ, ಕೆ.ಎಚ್.ಮುನಿಯಪ್ಪ ಮತ್ತಿತರರ ಔತಣ ಕೂಟಗಳು ಸಂಚಲನ ಮೂಡಿಸಿದವು. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷೆಗಳೂ ಗರಿಗೆದರಿದ್ದವು. ಕೆಲ ಔತಣಕೂಟಗಳನ್ನು ತಡೆಯುವಲ್ಲಿ, ದಲಿತರು, ಹಿಂದುಳಿದ ವರ್ಗಗಳ ಹೆಸರಿನಲ್ಲಿ ನಡೆಸಲು ಹೊರಟಿದ್ದ ಸಮಾವೇಶಗಳನ್ನು ಕಾಂಗ್ರೆಸ್ ಪಕ್ಷದ ವೇದಿಕೆಯಲ್ಲೇ ನಡೆಸುವಂತೆ ಮಾಡುವಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್ ಯಶ ಕಂಡಿದ್ದರು.
ಶಿವಕುಮಾರ್ ಪರ ಒಕ್ಕಲಿಗ ಸ್ವಾಮೀಜಿ ಹಾಗೂ ಸಮುದಾಯ, ಸಿದ್ದರಾಮಯ್ಯ ಪರ ಕುರುಬ ಸಮುದಾಯದ ಸ್ವಾಮೀಜಿ ಹಾಗೂ ಅಹಿಂದ ಸಮುದಾಯದ ಮುಖಂಡರು ಧ್ವನಿ ಎತ್ತಿದ್ದರು. ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ದಿನಕ್ಕೊಂದು ಬೆಳವಣಿಗೆ, ತಂತ್ರ–ಪ್ರತಿತಂತ್ರದ ರಾಜಕಾರಣ ಕಾವೇರಿಸಿದ್ದರೂ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ವರ್ಷಪೂರ್ತಿ ಮೌನವಹಿಸಿ, ರಾಜ್ಯ ನಾಯಕರ ಮುಂದೆ ತಾನು ದುರ್ಬಲ ಎಂಬಷ್ಟರಮಟ್ಟಿಗೆ ತೋರಿಸಿಕೊಂಡಿತು.
ಆಗಾಗ್ಗೆ ಬೆಂಗಳೂರಿಗೆ ಬರುತ್ತಲೇ ಇರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ಶಾಸಕರು ಭೇಟಿ ಮಾಡಿ, ಮಾತುಕತೆ ನಡೆಸಿದರು. ಅಧಿಕಾರ ಹಂಚಿಕೆ, ಸಂಪುಟ ಪುನರ್‌ರಚನೆ ವಿಚಾರದಲ್ಲಿ ಉಂಟಾಗಿರುವ ಗೊಂದಲ ನಿವಾರಣೆ ಮಾಡುವಂತೆ ಸಚಿವರು, ಶಾಸಕರು ಆಗ್ರಹಿಸಿದರು. ದೆಹಲಿ ಯಾತ್ರೆಗಳೂ ನಿರಂತರ ನಡೆದವು. ಆದರೆ, ಶಿವಕುಮಾರ್ ಅವರಿಗೆ ಅವರು ಅಂದುಕೊಂಡಂತೆ ಎರಡೂವರೆ ವರ್ಷಗಳ ನಂತರ ಮುಖ್ಯಮಂತ್ರಿಯಾಗುವ ಯೋಗ ಒಲಿಯಲಿಲ್ಲ. ಗೊಂದಲಗಳು 2026ಕ್ಕೂ ಮುಂದುವರಿಯುವ ಲಕ್ಷಣ ಕಾಣಿಸಿದೆ.
ಕೆ.ಎನ್.ರಾಜಣ್ಣ ವಜಾ: ವಿವಾದಾಸ್ಪದ ಮಾತುಗಳಿಂದ ಸದಾ ಸದ್ದು ಮಾಡುತ್ತಿರುವ ಕೆ.ಎನ್. ರಾಜಣ್ಣ, ತಮ್ಮ ಪಕ್ಷದ ನಡೆಯ ವಿರುದ್ಧವೇ ಟೀಕೆ ಮಾಡಲು ಹೋಗಿ ಸಹಕಾರ ಸಚಿವ ಸ್ಥಾನದಿಂದ ವಜಾಗೊಂಡರು. ‘ನರೇಂದ್ರ ಮೋದಿಯವರು ಚುನಾವಣಾ ಆಯೋಗದ ಸಹಕಾರದಲ್ಲಿ ಮತ ಕಳವು ಮಾಡಿ ಪ್ರಧಾನಿ ಹುದ್ದೆಗೇರಿದ್ದಾರೆ’ ಎಂಬ ಗಂಭೀರ ಆಪಾದನೆ ಮಾಡಿದ್ದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ದೇಶವ್ಯಾಪಿ ಆಂದೋಲನಕ್ಕೆ ಚಾಲನೆ ನೀಡಿದ್ದರು. ಎಐಸಿಸಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಇದನ್ನು ಪ್ರಸ್ತಾಪಿಸಿದ್ದ ರಾಹುಲ್ ಹಾಗೂ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮೋದಿ ರಾಜೀನಾಮೆಗೆ ಆಗ್ರಹಿಸಿದ್ದರು. ಅದರ ಮಾರನೇ ದಿನವೇ ಪ್ರತಿಕ್ರಿಯಿಸಿದ್ದ ರಾಜಣ್ಣ, ‘ಲೋಕಸಭೆ ಚುನಾವಣೆ ನಡೆದದ್ದು, ಮತಪಟ್ಟಿ ಸಿದ್ಧಪಡಿಸಿದ್ದು, ನಮ್ಮ ಸರ್ಕಾರದ ಅವಧಿಯಲ್ಲೇ. ಎಲ್ಲರೂ ಆಗ ಕಣ್ಣು ಮುಚ್ಚಿಕೊಂಡು ಕುಳಿತಿದ್ದರು’ ಎಂದು ಹೇಳಿದ್ದರು. ಮತ ಕಳವಿನ ವಿರುದ್ಧ ತೊಡೆ ತಟ್ಟಿದ್ದ ರಾಹುಲ್ ಗಾಂಧಿ ಅವರನ್ನು ಟೀಕಿಸಲು ಇದು ಬಿಜೆಪಿಗೆ ನೆರವಾಗಿತ್ತು. ಇದು ಕಾಂಗ್ರೆಸ್ ಹೈಕಮಾಂಡ್‌ಗೆ ಮುಜುಗರ ತಂದಿತ್ತು.
ಮುಂಗಾರು ಅಧಿವೇಶನದ ಮೊದಲ ದಿನವೇ ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿದ್ದರಿಂದಾಗಿ, ಸರ್ಕಾರದ ವಿರುದ್ಧ ಹೋರಾಟ ರೂಪಿಸಲು ಅಣಿಯಾಗಿದ್ದ ಪ್ರತಿಪಕ್ಷಗಳಿಗೆ ಇದು ಪ್ರಬಲ ಅಸ್ತ್ರವಾಗಿ ಪರಿಣಮಿಸಿತ್ತು.
ಬಿಜೆಪಿಯ ಮೂವರು ಶಾಸಕರ ಉಚ್ಚಾಟನೆ: ಬಿಜೆಪಿಯಲ್ಲೂ ಬಣ ರಾಜಕೀಯ ವರ್ಷದ ಆರಂಭದಿಂದಲೂ ಸದ್ದು ಮಾಡಿತು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ನಿರಂತರ ಟೀಕೆ ಮಾಡುತ್ತಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಯಿತು. ಹಾಗೆಯೇ, ಶಾಸಕರಾದ ಶಿವರಾಂ ಹೆಬ್ಬಾರ್ ಮತ್ತು ಎಸ್.ಟಿ.ಸೋಮಶೇಖರ್ ಅವರನ್ನೂ ಪಕ್ಷ ವಿರೋಧ ಚಟುವಟಿಕೆಗಳ ಆರೋಪದ ಮೇಲೆ ಉಚ್ಚಾಟನೆ ಮಾಡಲಾಯಿತು. ರಾಜ್ಯ ಘಟಕದ ಅಧ್ಯಕ್ಷರ ಬದಲಾವಣೆ ವಿಚಾರ ವರ್ಷವಿಡೀ ಚರ್ಚೆಯಲ್ಲಿದ್ದರೂ ಹೊಸ ಅಧ್ಯಕ್ಷ ನೇಮಕ ಅಥವಾ ವಿಜಯೇಂದ್ರ ಮುಂದುವರಿಕೆ ಬಗ್ಗೆ ಬಿಜೆಪಿ ವರಿಷ್ಠರು ಸ್ಪಷ್ಟ ನಿರ್ಧಾರವನ್ನೇ ಪ್ರಕಟಿಸಲಿಲ್ಲ.
ಎಚ್.ಡಿ.ಕೆ ಮರುಆಯ್ಕೆ: ಪಕ್ಷದ ಪ್ರಮುಖ ನಾಯಕರ ಸಮಿತಿ ಅಧ್ಯಕ್ಷ ಸ್ಥಾನದಿಂದ ಶಾಸಕ ಜಿ.ಟಿ.ದೇವೇಗೌಡ ಅವರನ್ನು ಕೈಬಿಟ್ಟು, ಕೃಷ್ಣಾರೆಡ್ಡಿ ಅವರನ್ನು ನೇಮಕ ಮಾಡಿದ್ದು ಹೊರತುಪಡಿಸಿದರೆ ಜೆಡಿಎಸ್‌ನಲ್ಲಿ ಅಂತಹ ಯಾವ ಬದಲಾವಣೆಗಳು ಆಗಲಿಲ್ಲ. ವರ್ಷಾಂತ್ಯಕ್ಕೆ ನಡೆದ ಜೆಡಿಎಸ್ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನೇ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮರು ಆಯ್ಕೆ ಮಾಡಲಾಯಿತು. ಎಂದಿನಂತೆ ಎಚ್.ಡಿ.ದೇವೇಗೌಡರು ಪಕ್ಷದ ಕಾಯಂ ರಾಷ್ಟ್ರೀಯ ಅಧ್ಯಕ್ಷರಾಗಿ ಮುಂದುವರಿದರು.
ಹಿರಿಯ ನಾಯಕರ ನಿಧನ: ಕಾಂಗ್ರೆಸ್‌ನ ಹಿರಿಯ ಶಾಸಕರು, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಿದ್ದ ದಾವಣಗೆರೆಯ ಉದ್ಯಮಿ ಶಾಮನೂರು ಶಿವಶಂಕರಪ್ಪ ವರ್ಷಾಂತ್ಯದಲ್ಲಿ ನಿಧನರಾದರು. ಕಾಂಗ್ರೆಸ್‌ನ ಮತ್ತೊಬ್ಬ ಹಿರಿಯರಾದ ಎಚ್.ವೈ.ಮೇಟಿ ಕೂಡ ಇದೇ ವರ್ಷ ನಿಧನರಾದರು.
ಮಹದೇವಪುರ ಆಳಂದ ಮತಕಳವು
ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 14000ಕ್ಕೂ ಹೆಚ್ಚು ಅಕ್ರಮ ಮತದಾರರನ್ನು ನೋಂದಾಯಿಸಿ ಚುನಾವಣಾ ಅಕ್ರಮ ಎಸಗಲಾಗಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸುದ್ದಿಗೋಷ್ಠಿಯಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡಿದ್ದರು. ಆ ದಾಖಲೆಗಳನ್ನು ಪರಿಶೀಲಿಸಿದಾಗ ಆ ವಿಳಾಸಗಳಲ್ಲಿ ಮತದಾರರು ಇಲ್ಲದೇ ಇರುವುದನ್ನು ಮತಗಟ್ಟೆ ಅಧಿಕಾರಿಗಳು ಖಚಿತಪಡಿಸಿದರು.
ಇಬ್ಬರಷ್ಟೇ ವಾಸಿಸಬಹುದಾದೊಂದು ಸಣ್ಣ ಮನೆಯಲ್ಲಿ 83 ಮತದಾರರ ಚೀಟಿಗಳು ಸಕ್ರಿಯವಾಗಿದ್ದವು. ಅಲ್ಲಿ ವಾಸವಿಲ್ಲದ ಆ ಮತದಾರರು ಚುನಾವಣೆ ವೇಳೆ ಉತ್ತರ ಭಾರತದಿಂದ ಬಂದು ಮತ ಹಾಕಿಹೋಗುತ್ತಾರೆ ಎಂಬುದನ್ನು ಮತಗಟ್ಟೆ ಅಧಿಕಾರಿಯೇ ದೃಢಪಡಿಸಿದರು. ಇದರ ಬೆನ್ನಲ್ಲೇ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ 5994 ಮತದಾರರ ಚೀಟಿಗಳನ್ನು ಅಕ್ರಮವಾಗಿ ರದ್ದುಪಡಿಸಲು ಯತ್ನಿಸಲಾಗಿತ್ತು ಎಂಬ ವಿಚಾರವನ್ನು ರಾಹುಲ್ ಗಾಂಧಿ ಬಹಿರಂಗಪಡಿಸಿದರು. ಈ ಬಗ್ಗೆ ತನಿಖೆಗಾಗಿ ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿತು.
ಪ್ರತಿಯೊಂದು ಚೀಟಿಯನ್ನು ರದ್ದುಪಡಿಸಲು ₹80 ಪಾವತಿಸಿ ಅಕ್ರಮವಾಗಿ ಅರ್ಜಿ ಸಲ್ಲಿಸಲಾಗಿತ್ತು ಮತ್ತು ಇದಕ್ಕಾಗಿ ಆಳಂದದಲ್ಲಿ ಕಾಲ್‌ಸೆಂಟರ್ ಒಂದನ್ನು ಬಳಸಿಕೊಳ್ಳಲಾಗಿತ್ತು ಎಂಬುದು ಪತ್ತೆಯಾಯಿತು. ಜತೆಗೆ ಅರ್ಜಿಗಳನ್ನು ಸಲ್ಲಿಸಲು ಕೂಲಿ ಕಾರ್ಮಿಕರ ಸಿಮ್ ಕಾರ್ಡ್‌ಗಳನ್ನು ದುರುಪಯೋಗ ಮಾಡಿಕೊಳ್ಳಲಾಗಿತ್ತು ಮತ್ತು ಪಶ್ಚಿಮ ಬಂಗಾಳದ ವ್ಯಕ್ತಿಯೊಬ್ಬ ಒಟಿಪಿಗಳನ್ನು ಒದಗಿಸಿದ್ದ ಎಂಬದು ಗೊತ್ತಾಯಿತು. ಆತನನ್ನು ಬಂಧಿಸಲಾಯಿತು. ಈ ಬಗ್ಗೆ ತನಿಖೆ ಪ್ರಗತಿಯಲ್ಲಿದೆ. ಎಸ್ಐಟಿ ತನಿಖೆ ವೇಳೆ ಆಳಂದ ಕ್ಷೇತ್ರದ ಬಿಜೆಪಿಯ ಪರಾಜಿತ ಅಭ್ಯರ್ಥಿ ಸುಭಾಷ ಗುತ್ತೇದಾರ ಅವರ ಮನೆಯಲ್ಲಿ ಸಾವಿರಾರು ಮತದಾರರ ಚೀಟಿಗಳು ಮತ್ತು ಮತದಾರರ ಪಟ್ಟಿಗೆ ಬೆಂಕಿ ಹಚ್ಚಲಾಗಿತ್ತು. ಅದು ಪತ್ತೆಯಾಗುತ್ತಿದ್ದಂತೆ ಅರೆಬರೆ ಸುಟ್ಟ ಮತದಾರರ ಚೀಟಿ ಮತ್ತು ಪಟ್ಟಿಗಳನ್ನು ನದಿಗೆ ಎಸೆಯಲಾಗಿತ್ತು. ಈ ಬಗ್ಗೆ ವಿಧಿವಿಜ್ಞಾನ ಪರೀಕ್ಷೆಯ ವರದಿ ಬರಬೇಕಿದ್ದು ತನಿಖೆ ನಡೆಯುತ್ತಿದೆ.
ಮಸೂದೆಗಳದ್ದೇ ಸದ್ದು
* ಆರ್‌ಸಿಬಿ ತಂಡದ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 11 ಜನರು ಮೃತಪಟ್ಟ ಬೆನ್ನಲ್ಲೆ ಬೃಹತ್ ರಾಜಕೀಯ ರ‍್ಯಾಲಿ ದೊಡ್ಡ ಸಮಾವೇಶ ಸಾಮೂಹಿಕ ಸಮಾರಂಭಗಳಿಗೆ ಸೇರುವ ಜನಸಾಗರವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ ನಿಯಂತ್ರಿಸುವ ಉದ್ದೇಶದಿಂದ ‘ಕರ್ನಾಟಕ ಜನಸಂದಣಿ ನಿಯಂತ್ರಣ (ಸಾಮೂಹಿಕ ಸಭೆ ಕಾರ್ಯಕ್ರಮಗಳು ಮತ್ತು ಸ್ಥಳಗಳಲ್ಲಿ ಜನಸಂದಣಿ ನಿರ್ವಹಣೆ) ಕಾಯ್ದೆ’ಯನ್ನು ಜಾರಿಗೆ ತಂದಿದೆ
* ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಐದು ಪ್ರತ್ಯೇಕ ಪಾಲಿಕೆಗಳಾಗಿ ವಿಭಜಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ರಚನೆಗೆ ಅವಕಾಶ ಮಾಡಿಕೊಡುವ ಕಾಯ್ದೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ
* ದ್ವೇಷ ಭಾಷಣ ಮತ್ತು ದ್ವೇಷಾಪರಾಧವನ್ನು ತಡೆಯುವ ಉದ್ದೇಶದಿಂದ ರೂಪಿಸಿದ ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷಾಪರಾಧ (ಪ್ರತಿಬಂಧಕ) ಮಸೂದೆ–2025’ಕ್ಕೆ ವಿಧಾನ ಮಂಡಲದ ಉಭಯ ಸದನಗಳಲ್ಲಿ ಪ್ರತಿಪಕ್ಷಗಳ ತೀವ್ರ ವಿರೋಧದ ಮಧ್ಯೆಯೇ ಸರ್ಕಾರವು ಅಂಗೀಕಾರ ಪಡೆದುಕೊಂಡಿದೆ. ಮಸೂದೆಗೆ ರಾಜ್ಯಪಾಲರ ಅಂಕಿತವಷ್ಟೇ ಬಾಕಿ ಇದ್ದು ತಾವು ಸಹಿ ಮಾಡಬೇಡಿ ಎಂದು ಬಿಜೆಪಿಯ ಹಲವು ನಾಯಕರು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ
* ಯಾವುದೇ ವ್ಯಕ್ತಿ ಕುಟುಂಬ ಕುಟುಂಬದ ಸದಸ್ಯರನ್ನು ಸಾಮಾಜಿಕವಾಗಿ ಬಹಿಷ್ಕರಿಸಿದರೆ ₹1 ಲಕ್ಷದವರೆಗೆ ದಂಡ ಮೂರು ವರ್ಷದವರೆಗೆ ಜೈಲು ಶಿಕ್ಷೆ ಅಥವಾ ಎರಡನ್ನೂ ವಿಧಿಸಲು ಹಾಗೂ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಲು ಅವಕಾಶವಿರುವ ‘ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ ನಿಷೇಧ ಮತ್ತು ಪರಿಹಾರ) ಮಸೂದೆ–2025’ಕ್ಕೆ ವಿಧಾನ ಮಂಡಲದ ಉಭಯ ಸದನಗಳಲ್ಲಿ ಅನುಮೋದನೆ ದೊರೆತಿದೆ
ಮುಡಾ: ಸಿದ್ದರಾಮಯ್ಯಗೆ ಕ್ಲೀನ್‌ಚಿಟ್ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಸ್ವಾಧೀನಕ್ಕೆ ಪಡೆದುಕೊಂಡಿದ್ದ ಭೂಮಿಗೆ ಪರಿಹಾರದ ನಿವೇಶನಗಳನ್ನು ಅಕ್ರಮವಾಗಿ ನೀಡಿದ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರವಿಲ್ಲ ಲೋಕಾಯುಕ್ತ ಪೊಲೀಸರು ಕ್ಲೀನ್‌ಚಿಟ್ ನೀಡಿದರು. ಇದೇ ಪ್ರಕರಣದಲ್ಲಿ ಮುಡಾ ಆಯುಕ್ತರಾಗಿದ್ದ ಜಿ.ಟಿ.ದಿನೇಶ್‌ಕುಮಾರ್ ಅವರ ವಿರುದ್ಧ ತನಿಖೆ ನಡೆಯುತ್ತಿದೆ. ಇ.ಡಿ ಸಹ ತನಿಖೆ ಮುಂದುವರಿಸಿದ್ದು ಈವರೆಗೆ ₹400 ಕೋಟಿಗೂ ಹೆಚ್ಚು ಮೌಲ್ಯದ ನಿವೇಶನ ಕಟ್ಟಡಗಳು ಮತ್ತು ಕಾರುಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.
ಒಳಮೀಸಲಾತಿ ಮತ್ತು ಸಾಮಾಜಿಕ ಸಮೀಕ್ಷೆ
ಪರಿಶಿಷ್ಟ ಜಾತಿಗಳಿಗೆ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗ ನೇಮಕಾತಿಯಲ್ಲಿ ಒಳಮೀಸಲಾತಿ ನೀಡುವ ಸಂಬಂಧ ರಚಿಸಲಾಗಿದ್ದ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅಧ್ಯಕ್ಷತೆಯ ವಿಚಾರಣಾ ಆಯೋಗವು ಸಮೀಕ್ಷೆ ನಡೆಸಿ ಅದರ ಆಧಾರದಲ್ಲಿ ಒಳಮೀಸಲಾತಿ ಹಂಚಿಕೆಯ ಶಿಫಾರಸನ್ನು ಮಾಡಿತು. ಆಯೋಗವು ಮಾಡಿದ್ದ ಶಿಫಾರಸಿಗಿಂತ ಭಿನ್ನವಾಗಿ ರಾಜ್ಯ ಸರ್ಕಾರವು ಒಳಮೀಸಲಾತಿಯನ್ನು ಹಂಚಿಕೆ ಮಾಡಿತು. 101 ಉಪಜಾತಿಗಳನ್ನು ಮೂರು ಪ್ರವರ್ಗಗಳನ್ನಾಗಿ ವಿಂಗಡಿಸಿ ‘ಪ್ರವರ್ಗ ಎ’ನಲ್ಲಿ 16 ಜಾತಿಗಳನ್ನು ಸೇರಿಸಿ ಶೇ 6 ‘ಪ್ರವರ್ಗ ಬಿ’ನಲ್ಲಿ 19 ಜಾತಿಗಳನ್ನು ಸೇರಿಸಿ ಶೇ 6 ಹಾಗೂ ‘ಪ್ರವರ್ಗ ಸಿ’ನಲ್ಲಿ 63 ಜಾತಿಗಳನ್ನು ಸೇರಿಸಿ ಶೇ 5 ಮೀಸಲಾತಿ ಹಂಚಿಕೆ ಮಾಡಲಾಗಿದೆ. ಅಸ್ಪೃಶ್ಯ ಅಲೆಮಾರಿ ಸಮುದಾಯಗಳು ತಮಗೆ ಪ್ರತ್ಯೇಕ ಶೇ 1ರಷ್ಟು ಒಳ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸುತ್ತಿವೆ. ಒಳಮೀಸಲಾತಿಗೆ ಕಾನೂನಿನ ಭದ್ರತೆ ಒದಗಿಸುವ ಉದ್ದೇಶದಿಂದ ಸರ್ಕಾರವು ‘ಕರ್ನಾಟಕ ಅನುಸೂಚಿತ ಜಾತಿಗಳ (ಉಪ-ವರ್ಗೀಕರಣ) ಮಸೂದೆ– 2025’ ಅನ್ನು ವಿಧಾನ ಮಂಡಲದ ಉಭಯ ಸದನಗಳಲ್ಲಿ ಮಂಡಿಸಿ ಅಂಗೀಕಾರ ಪಡೆದುಕೊಂಡಿದೆ. ರಾಜ್ಯದ ಜನರ ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಸ್ಥತಿಗತಿಯ ಸಂಬಂಧ ದತ್ತಾಂಶ ಕಲೆಹಾಕಲು ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಚಾಲನೆ ನೀಡಿತು. ಸಮೀಕ್ಷೆಗೆ ಸಿದ್ಧತೆಯಲ್ಲಿನ ಲೋಪಗಳು ಒಂದೆಡೆ ತೊಡಕಾದರೆ ಹೈಕೋರ್ಟ್‌ನಲ್ಲಿ ಸಲ್ಲಿಕೆಯಾದ ಅರ್ಜಿಗಳೂ ತಡೆಯಾದವು. ಸಮೀಕ್ಷೆಗೆ ಮಾಹಿತಿ ನೀಡವುದು ಕಡ್ಡಾಯವಲ್ಲ ಎಂದು ಹೈಕೋರ್ಟ್ ನೀಡಿದ ಮಧ್ಯಂತರ ಆದೇಶದ ನಂತರ ಸಮೀಕ್ಷೆ ಆರಂಭವಾಯಿತು. ಆದರೆ ಲಕ್ಷಾಂತರ ಕುಟುಂಬಗಳು ಮಾಹಿತಿ ನೀಡಲು ನಿರಾಕರಿಸಿದವು
ಭೂ ಗ್ಯಾರಂಟಿ
ಭೂಮಿ ಅದರ ಹಕ್ಕು ಮತ್ತು ಮಾಲೀಕತ್ವ ಸಂಬಂಧಿತ ಗೊಂದಲ ನಿವಾರಿಸಿ ನೈಜ ಮಾಲೀಕರಿಗೆ ಮಾಲೀಕತ್ವ ಒದಗಿಸಿಕೊಡುವ ಉದ್ದೇಶದಿಂದ ರಾಜ್ಯ ಸರ್ಕಾರವು ‘ಭೂ ಗ್ಯಾರಂಟಿ’ ಆರಂಭಿಸಿದೆ. ಭೂ ಗ್ಯಾರಂಟಿ ಯೋಜನೆ ಅಡಿ ನನ್ನ ಭೂಮಿ ನನ್ನ ಹಕ್ಕು ಭೂ ಸುರಕ್ಷಾ ಇ–ಪೌತಿ ಪೋಡಿ ಮುಕ್ತ ಗ್ರಾಮ ಪಹಣಿ–ಆಧಾರ್ ಜೋಡಣೆ ಸ್ವಯಂಚಾಲಿತ ಮ್ಯುಟೇಷನ್ ಸೇರಿ ಹತ್ತಾರು ಉಪ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಜನರು ಕಚೇರಿಗಳಿಗೆ ಅಲೆಯದೇ ಸ್ಮಾರ್ಟ್‌ಫೋನ್ ಕಂಪ್ಯೂಟರ್‌ಗಳ ಮೂಲಕ ತಮ್ಮ ಭೂದಾಖಲೆಗಳನ್ನು ಪಡೆಯಬಹುದಾಗಿದೆ. ಭೂವಂಚನೆಗಳಿಗೂ ಈ ಯೋಜನೆ ಕಡಿವಾಣ ಹಾಕಲಿದೆ ಎಂಬುದು ಸರ್ಕಾರದ ಪ್ರತಿಪಾದನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.