
ಪ್ರವಾಸಿಗರ ಭೇಟಿ
ಭಾರತದಲ್ಲಿ ಪ್ರವಾಸಿಗರ ನೆಚ್ಚಿನ ರಾಜ್ಯಗಳ ಪೈಕಿ ಕರ್ನಾಟಕವೂ ಒಂದಾಗಿದೆ. ದೇಶಿ ಪ್ರವಾಸಿಗರನ್ನು ಸೆಳೆಯುವಲ್ಲಿ ಕರ್ನಾಟಕವು ಮುಂದಿದೆ. ಆದರೆ, ರಾಜ್ಯಕ್ಕೆ ಭೇಟಿ ನೀಡುತ್ತಿರುವ ವಿದೇಶಿ ಪ್ರವಾಸಿಗರ ಸಂಖ್ಯೆ ಕಡಿಮೆ ಇದೆ. ಮೂರು ವರ್ಷಗಳಿಂದ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದರೂ ಅದು ಕೋವಿಡ್‌ಪೂರ್ವದ ಸಂಖ್ಯೆಯನ್ನು ಇನ್ನೂ ಮುಟ್ಟಿಲ್ಲ. ಗಮನಾರ್ಹ ಅಂಶವೆಂದರೆ, ಮೈಸೂರು, ಉಡುಪಿ, ವಿಜಯನಗರ, ಕೊಪ್ಪಳ ಜಿಲ್ಲೆಗಳು ಹೆಚ್ಚು ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತಿವೆ
‘ಒಂದು ರಾಜ್ಯ, ಹಲವು ಜಗತ್ತುಗಳು’ ಎನ್ನುವ ಧ್ಯೇಯಕ್ಕೆ ತಕ್ಕಂತೆ ಕರ್ನಾಟಕದ ಪ್ರವಾಸಿ ತಾಣಗಳು ವೈವಿಧ್ಯಮಯವಾಗಿವೆ. ಪಾರಂಪರಿಕ ತಾಣಗಳು, ಗಿರಿಧಾಮಗಳು, ಕಡಲ ತೀರಗಳು, ಅರಮನೆ, ಕೋಟೆ ಕೊತ್ತಲಗಳು ರಾಜ್ಯದಲ್ಲಿದ್ದು, ಪ್ರತಿವರ್ಷ ಕೋಟ್ಯಂತರ ಪ್ರವಾಸಿಗರನ್ನು ಆಕರ್ಷಿಸುತ್ತಿವೆ.
ದೇಶದಲ್ಲಿ ಹೆಚ್ಚು ದೇಶಿ ಪ್ರವಾಸಿಗರು ಭೇಟಿ ನೀಡುವ ರಾಜ್ಯಗಳ ಪೈಕಿ ಕರ್ನಾಟಕವು 2024ನೇ ಸಾಲಿನಲ್ಲಿ ಮೂರನೇ ಸ್ಥಾನದಲ್ಲಿದೆ. 2023ರಲ್ಲಿಯೂ ರಾಜ್ಯವು ಮೂರನೇ ಸ್ಥಾನದಲ್ಲಿಯೇ ಇತ್ತು. ಆದರೆ, ವಿದೇಶಿ ಪ್ರವಾಸಿಗರನ್ನು ಸೆಳೆಯುವಲ್ಲಿ ರಾಜ್ಯವು ಹಿಂದೆ ಬಿದ್ದಿದೆ. ಅತಿ ಹೆಚ್ಚು ವಿದೇಶಿ ಪ್ರವಾಸಿಗರು ಭೇಟಿ ನಿಡುವ ಅಗ್ರ ಹತ್ತು ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವು ಸ್ಥಾನವನ್ನೇ ಪಡೆದಿಲ್ಲ. ಹೆಚ್ಚು ವಿದೇಶಿಯರು ಭೇಟಿ ನೀಡುವ ರಾಜ್ಯಗಳಲ್ಲಿ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಮುಂಚೂಣಿಯಲ್ಲಿವೆ
2024ರಲ್ಲಿ ರಾಜ್ಯಕ್ಕೆ 4.85 ಲಕ್ಷ ವಿದೇಶಿ ಪ್ರವಾಸಿಗರು ಬಂದಿದ್ದರು. 2023ರಲ್ಲಿ ಈ ಸಂಖ್ಯೆ 4.09 ಲಕ್ಷ ಆಗಿತ್ತು. ಕೋವಿಡ್ ಸಂದರ್ಭದಲ್ಲಿ ರಾಜ್ಯಕ್ಕೆ ಭೇಟಿ ನೀಡಿದ ವಿದೇಶಿ ಪ್ರವಾಸಿಗರ ಸಂಖ್ಯೆ ಕುಸಿದಿತ್ತು. ಮೂರು ವರ್ಷಗಳಿಂದ ಈ ಸಂಖ್ಯೆ ಹೆಚ್ಚುತ್ತಿದ್ದರೂ ಕೋವಿಡ್‌ಪೂರ್ವ ಸಂಖ್ಯೆಯನ್ನು ಇನ್ನೂ ಮುಟ್ಟಿಲ್ಲ. 2019ರಲ್ಲಿ ರಾಜ್ಯಕ್ಕೆ 6.09 ಲಕ್ಷ ವಿದೇಶಿಯರು ಪ್ರವಾಸಕ್ಕಾಗಿ ಬಂದಿದ್ದರು.
ವಿದೇಶಿ ಪ್ರವಾಸಿಗರು ಹೆಚ್ಚು ಭೇಟಿ ನೀಡುವ ಸ್ಥಳಗಳಲ್ಲಿ ಮೈಸೂರು (1.37 ಲಕ್ಷ), ಉಡುಪಿ (89,849) ಮತ್ತು ಕೊಪ್ಪಳ (50,000) ಜಿಲ್ಲೆಗಳು ಮೊದಲ ಮೂರು ಸ್ಥಾನ ಪಡೆದಿವೆ. ರಾಜಧಾನಿ ಬೆಂಗಳೂರಿಗೆ 45,782 ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದಾರೆ.
ವಿಜಯನಗರ ಜಿಲ್ಲೆಯ ಹಂಪಿ ಸೇರಿದಂತೆ ಉತ್ತರ ಕರ್ನಾಟಕದ ಹಲವು ತಾಣಗಳು ವಿದೇಶಿಯರನ್ನು ಸೆಳೆಯುವಲ್ಲಿ ಮುಂದಿವೆ. ವಿಶ್ವಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಹಂಪಿಯ ಜತೆಗೆ, ಐಹೊಳೆಯ ದುರ್ಗಾಂಬಾ ದೇವಸ್ಥಾನ, ಬದಾಮಿಯ ಜೈನ ಮತ್ತು ವೈಷ್ಣವ ಗುಹೆ, ಪಟ್ಟದಕಲ್ಲಿನ ವಿಶ್ವ ಪಾರಂಪರಿಕ ಸ್ಮಾರಕಗಳು, ವಿಜಯಪುರದ ಗೋಲ್‌ಗುಂಬಜ್, ಇಬ್ರಾಹಿಂ //ರೌಜಾ//, ಲಕ್ಕುಂಡಿಯ ದೇವಾಲಯಗಳು, ಬಳ್ಳಾರಿಯ ಕೋಟೆ, ಬೆಂಗಳೂರು ವಲಯ ವ್ಯಾಪ್ತಿಯ ಟಿಪ್ಪುಸುಲ್ತಾನನ ಅರಮನೆ, ಚಿತ್ರದುರ್ಗದ ಕೋಟೆ, ದರಿಯಾ ದೌಲತ್, ಕೇಶವ ದೇವಸ್ಥಾನ ಮುಂತಾದವು ಹೆಚ್ಚು ವಿದೇಶಿಯರನ್ನು ಆಕರ್ಷಿಸುತ್ತಿವೆ.
ಅಮೆರಿಕದವರೇ ಹೆಚ್ಚು
ದೇಶದ ಚಿತ್ರಣ ಭಿನ್ನವೇನಲ್ಲ. ಕೋವಿಡ್‌ಪೂರ್ವದಲ್ಲಿ, 2019ರಲ್ಲಿ 1.09 ಕೋಟಿ ವಿದೇಶಿ ಪ್ರವಾಸಿಗರು ಭಾರತಕ್ಕೆ ಭೇಟಿ ನೀಡಿದ್ದರು. ಕೋವಿಡ್ ಕಾಲದಲ್ಲಿ ಈ ಸಂಖ್ಯೆ ಗಣನೀಯವಾಗಿ ಕುಸಿದಿತ್ತು. ನಂತರದ ದಿನಗಳಲ್ಲಿ ಈ ಸಂಖ್ಯೆ ನಿಧಾನಕ್ಕೆ ಹೆಚ್ಚಾಗತೊಡಗಿತು. ವಿದೇಶಿಯರಿಗೆ ಹೋಲಿಸಿದರೆ ಅನಿವಾಸಿ ಭಾರತೀಯರೇ (ಎನ್‌ಆರ್‌ಐ) ಭಾರತಕ್ಕೆ ಹೆಚ್ಚು ಭೇಟಿ ನೀಡುತ್ತಿದ್ದು, ಇವರಿಂದಾಗಿ ಅಂತರರಾಷ್ಟ್ರೀಯ ಪ್ರವಾಸಿಗರ ಒಟ್ಟು ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ.
ಭಾರತಕ್ಕೆ ಭೇಟಿ ನೀಡುವ ವಿದೇಶಿಯರ ಪೈಕಿ ಅಮೆರಿಕದವರು ಮೊದಲ ಸ್ಥಾನದಲ್ಲಿದ್ದಾರೆ. 2024ರಲ್ಲಿ ಇವರ ಸಂಖ್ಯೆಯು 18 ಲಕ್ಷವಿದ್ದು, ಒಟ್ಟು ವಿದೇಶಿ ಪ್ರವಾಸಿಗರಲ್ಲಿ ಇವರ ಪ್ರಮಾಣವು ಶೇ 18.13ರಷ್ಟು ಇದೆ. ಇವರ ನಂತರದ ಸ್ಥಾನದಲ್ಲಿ ಬಾಂಗ್ಲಾದೇಶದವರು (ಶೇ 17.59) ಇದ್ದಾರೆ. ಮೂರನೇ ಸ್ಥಾನದಲ್ಲಿ ಬ್ರಿಟನ್ (ಶೇ 10.28), ನಾಲ್ಕನೇ ಸ್ಥಾನದಲ್ಲಿ ಆಸ್ಟ್ರೇಲಿಯಾ (ಶೇ 5.2) ಇವೆ. ಮಲೇಷ್ಯಾ, ಜರ್ಮನಿ, ಫ್ರಾನ್ಸ್ ಮತ್ತು ಸಿಂಗಪುರಗಳಿಂದಲೂ ಭಾರತಕ್ಕೆ ಹೆಚ್ಚು ಪ್ರವಾಸಿಗರು ಬರುತ್ತಿದ್ದಾರೆ.
ವಿದೇಶಿ ಪ್ರವಾಸಿಗರ ಪೈಕಿ ದೇಶಕ್ಕೆ ಭೇಟಿ ನೀಡುವ ಹೆಚ್ಚಿನವರ (ಶೇ 45ರಷ್ಟು) ಉದ್ದೇಶವು ರಜೆ ಕಳೆಯುವುದು, ಹೊಸ ಸ್ಥಳಗಳನ್ನು ನೋಡುವುದು ಮತ್ತು ಮನರಂಜನೆ ಪಡೆಯುವುದು. ಶೇ 28.49ರಷ್ಟು ಮಂದಿ ಭಾರತದಲ್ಲಿರುವ ತಮ್ಮ ಬಂಧುಮಿತ್ರರನ್ನು ಭೇಟಿ ಮಾಡಲು, ಶೇ 10.52ರಷ್ಟು ಮಂದಿ ತಮ್ಮ ಉದ್ಯೋಗ/ವ್ಯಾಪಾರದ ನಿಮಿತ್ತ ದೇಶಕ್ಕೆ ಬರುತ್ತಿದ್ದಾರೆ.
ಅವಕಾಶ ಸಾಕಷ್ಟು, ಸುಧಾರಿಸಬೇಕು ಇನ್ನಷ್ಟು
ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ ಅವಕಾಶಗಳಿವೆ. ದೇಶದಲ್ಲಿ ವ್ಯವಸ್ಥೆ ಸುಧಾರಣೆಯಾದರೆ ಇನ್ನಷ್ಟು ವಿದೇಶಿ ಪ್ರವಾಸಿಗರನ್ನು ಸೆಳೆಯಬಹುದು.
ಭಾರತವು ಸದ್ಯ 57 ರಾಷ್ಟ್ರಗಳ ಜನರಿಗೆ ಮಾತ್ರ ಬಂದಿಳಿದ ತಕ್ಷಣ ವೀಸಾ ನೀಡುವ ಸೌಲಭ್ಯವನ್ನು ಕಲ್ಪಿಸಿದೆ. ಈ ಕಾರಣಕ್ಕಾಗಿಯೇ ಜಾಗತಿಕ ಹೆನ್ಲೀ ಪಾಸ್‌ಪೋರ್ಟ್ ಸೂಚ್ಯಂಕದಲ್ಲಿ ಭಾರತದ ಸ್ಥಾನ ತುಂಬಾ ಕೆಳಮಟ್ಟದಲ್ಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸೂಚ್ಯಂಕದಲ್ಲಿ ಈ ವರ್ಷ ದೇಶವು ಐದು ಸ್ಥಾನ ಕುಸಿದಿದೆ. 199 ರಾಷ್ಟ್ರಗಳ ಪಾಸ್‌ಪೋರ್ಟ್‌ಗಳ ಪೈಕಿ ಭಾರತದ ಪಾಸ್‌ಪೋರ್ಟ್ 85ನೇ ಸ್ಥಾನ ಪಡೆದಿದೆ. ಕಳೆದ ವರ್ಷ 80ನೇ ಸ್ಥಾನ ಪಡೆದಿತ್ತು. ಏಷ್ಯಾದ ಸಿಂಗಪುರ (ಮೊದಲ ಸ್ಥಾನ), ದಕ್ಷಿಣ ಕೊರಿಯಾ (2ನೇ ಸ್ಥಾನ) ಜಪಾನ್‌ಗೆ (ಮೂರನೇ ಸ್ಥಾನ) ಹೋಲಿಸಿದರೆ ಭಾರತದ ಸ್ಥಾನ ನಗಣ್ಯ. ಸಿಂಗಪುರವು 193 ರಾಷ್ಟ್ರಗಳ ಪ್ರಜೆಗಳಿಗೆ ವೀಸಾ ಇಲ್ಲದೆಯೇ ದೇಶವನ್ನು ಪ್ರವೇಶಿಸುವುದಕ್ಕೆ ಅವಕಾಶ ನೀಡುತ್ತದೆ. ದಕ್ಷಿಣ ಕೊರಿಯಾ 190 ಮತ್ತು ಜಪಾನ್ 189 ರಾಷ್ಟ್ರಗಳಿಗೆ ಈ ಸೌಲಭ್ಯ ಕಲ್ಪಿಸುತ್ತದೆ.
ನಿರ್ದಿಷ್ಟ ದೇಶಕ್ಕೆ ಭೇಟಿ ನೀಡುವುದಕ್ಕೂ ಮೊದಲು ಅಲ್ಲಿನ ವೀಸಾಕ್ಕೆ ಅರ್ಜಿ ಸಲ್ಲಿಸುವುದು, ಅದಕ್ಕೆ ಪೂರಕ ದಾಖಲೆಗಳನ್ನು ಒದಗಿಸುವುದು, ವೀಸಾಕ್ಕೆ ಒಪ್ಪಿಗೆ ಪಡೆಯುವುದು ಈ ಪ್ರಕ್ರಿಯೆಗಳು ಹೆಚ್ಚು ಸಮಯ ಬೇಡುತ್ತವೆ. ಇವು ಪ್ರವಾಸಿಗರಿಗೆ ಕಿರಿಕಿರಿಯಾಗಿ ಅವರು ಆ ದೇಶಕ್ಕೆ ಭೇಟಿ ನೀಡಲು ಹಿಂಜರಿಯುತ್ತಾರೆ. ಒಂದು ವೇಳೆ ವೀಸಾ ಇಲ್ಲದೆ, ದೇಶ ಪ್ರವೇಶಿಸಲು ಅನುಮತಿ ನೀಡಿ, ನಂತರ ಅವರಿಂದ ಕೆಲವು ದಾಖಲೆಗಳನ್ನು ಪಡೆದು ವೀಸಾ ನೀಡುವ ವ್ಯವಸ್ಥೆ ಮಾಡಿದರೆ ಆ ದೇಶಕ್ಕೆ ಇನ್ನಷ್ಟು ಪ್ರವಾಸಿಗರು ಭೇಟಿ ನೀಡಬಹುದು. ಕೇಂದ್ರ ಸರ್ಕಾರವು ಈ ದಿಸೆಯಲ್ಲಿ ಕ್ರಮ ಕೈಗೊಂಡರೆ ದೇಶಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಗಮನಾರ್ಹವಾಗಿ ಏರಿಕೆ ಕಾಣಬಹುದು ಎಂಬುದು ಪ್ರವಾಸೋದ್ಯಮ ಕ್ಷೇತ್ರದಲ್ಲಿ ತೊಡಗಿರುವವರ ಮಾತು.
ದೇಶ ಮತ್ತು ಕರ್ನಾಟದ ಕೆಲವೇ ಕೆಲವು ಪ್ರವಾಸಿ ತಾಣಗಳನ್ನು ಬಿಟ್ಟು ಉಳಿದ ಕಡೆಗಳಲ್ಲಿ ಮೂಲಸೌಕರ್ಯಗಳ ಕೊರತೆ ಕಾಡುತ್ತಿದೆ. ಕೆಲವೆಡೆಗಳಲ್ಲಿ ಭೇಟಿ ನೀಡುವವರಿಗೆ ತಂಗುವ ಸೌಲಭ್ಯವೂ ಇಲ್ಲ. ಸಾರಿಗೆ, ಶೌಚಾಲಯ, ಕುಡಿಯುವ ನೀರು ಮುಂತಾದ ವ್ಯವಸ್ಥೆಗಳ ಕೊರತೆಯೂ ಇದೆ. ಬಹುಪಾಲು ತಾಣಗಳಲ್ಲಿ ಸ್ವಚ್ಛ ವಾತಾವರಣವೂ ಕಾಣಸಿಗುವುದಿಲ್ಲ. ಕೇಂದ್ರ ಪ್ರವಾಸೋದ್ಯಮ ಹಾಗೂ ಆಯಾ ರಾಜ್ಯಗಳ ಪ್ರವಾಸೋದ್ಯಮ ಇಲಾಖೆಗಳು ಇವುಗಳ ಸುಧಾರಣೆಗೆ ಗಮನ ಹರಿಸಿದರೆ ಪ್ರವಾಸಿಗರ ಸಂಖ್ಯೆ ಇನ್ನಷ್ಟು ಹೆಚ್ಚುವುದು ಖಚಿತ.
ಆಧಾರ: ಇಂಡಿಯಾ ಟೂರಿಸಂ ಡೇಟಾ ಕಂಪೆಂಡಿಯಮ್ ವರದಿಗಳು, ದಿ ಹೆನ್ಲಿ ಪಾಸ್‌ಪೋರ್ಟ್ ಇಂಡೆಕ್ಸ್–2025, ಮಾಧ್ಯಮ ವರದಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.