ADVERTISEMENT

ಆಳ ಅಗಲ | ಅನ್ನ ಗಿಟ್ಟಿಸಿಕೊಳ್ಳಲು ಲಾಟರಿ ಹೊಡಿಬೇಕ್ರಿ: ಕಾರ್ಮಿಕರ ಅಳಲು

ಕಾರ್ಮಿಕರ ದಿನ ಇಂದು

ವೆಂಕಟೇಶ ಜಿ.ಎಚ್.
Published 30 ಏಪ್ರಿಲ್ 2020, 20:00 IST
Last Updated 30 ಏಪ್ರಿಲ್ 2020, 20:00 IST
ಕೆಲಸದಲ್ಲಿ ನಿರತ ಕಾರ್ಮಿಕರು
ಕೆಲಸದಲ್ಲಿ ನಿರತ ಕಾರ್ಮಿಕರು    

ಜೇಬುಗಳೆಲ್ಲ ಹೇಗೆ ಖಾಲಿಯೋ ಹಾಗೆಯೇ ಅಡುಗೆ ಮನೆಯ ಡಬ್ಬಿಗಳೆಲ್ಲ ಖಾಲಿ, ಖಾಲಿ. ದುಡಿಯೋಕೆ ಕೆಲಸವಿಲ್ಲ. ಭವಿಷ್ಯದ ಹಾದಿ ತಿಳಿದಿಲ್ಲ. ಕಾರ್ಮಿಕರ ಬದುಕು ಕೊರೊನಾ ಸೋಂಕಿನ ಬಿರುಗಾಳಿಗೆ ಸಿಕ್ಕ ಈ ಸನ್ನಿವೇಶದಲ್ಲಿ ಮತ್ತೊಂದು ಮೇ ದಿನ ಬಂದಿದೆ...

‘ಕೊರೊನಾ ಐತ್ರಿ... ಹಂಗಾಗಿ ಅರ್ಜಿ ಕೊಟ್ಟ ಎಲ್ಲರಿಗೂ ಕೆಲಸ ಕೊಡೋಕೆ ಆಗೊಲ್ಲ.. ಸುರಕ್ಷಿತ ಅಂತರದಾಗ ಕೆಲಸ ಆಗಬೇಕ್ರಿ. ಕೆಲಸ ಯಾರಿಗೆ ಕೊಡಬೇಕು ನೀವೇ ನಿರ್ಧರಿಸಿ...’

–ಇದು ಹುನಗುಂದ ತಾಲ್ಲೂಕಿನ ಬಲಕುಂದಿಯಲ್ಲಿ ನರೇಗಾ ಅಡಿ ಕೆರೆ ಹೂಳೆತ್ತುವ ಕೆಲಸಕ್ಕೆ ಅರ್ಜಿಹಾಕಿದ್ದ ಕೂಲಿ ಕಾರ್ಮಿಕರಿಗೆ ಪಂಚಾಯಿತಿ ಅಧಿಕಾರಿಗಳಿಂದ ಎದುರಾದ ಪ್ರಶ್ನೆ.

ADVERTISEMENT

ಬಲಕುಂದಿ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಕೇಳಿಕೊಂಡು ತಲಾ 20 ಮಂದಿಯ 11 ಕೂಲಿ ಕಾರ್ಮಿಕರ ಗುಂಪುಗಳು ಹೆಸರು ನೋಂದಾಯಿಸಿದ್ದವು. ಕೊರೊನಾ ಸೋಂಕಿನ ಕಾರಣ ಎರಡು ಗುಂಪುಗಳಿಗೆ ಮಾತ್ರ ಕೆಲಸ ಕೊಡಲು ಸಾಧ್ಯ ಎಂದು ಹೇಳಲಾಯಿತು. ಹಾಗಾದರೆ ಕೆಲಸ ಮಾಡಬೇಕಾದವರು ಯಾರು ಎಂಬ ಪ್ರಶ್ನೆ ಎದುರಾಯಿತು. ಲಾಕ್‌ಡೌನ್‌ನಿಂದ ತಿಂಗಳೊಪ್ಪತ್ತು ಮನೆಯಲ್ಲಿ ಕುಳಿತಿದ್ದ ಎಲ್ಲರಿಗೂ ನರೇಗಾ ಕೆಲಸವೇ ತುತ್ತಿನ ಮಾರ್ಗ. ಹೀಗಾಗಿ ಬಹಳಷ್ಟು ಪೈಪೋಟಿ, ಒತ್ತಡ ಎದುರಾಯಿತು. ಕೊನೆಗೆ ಕೆಲಸ ಮಾಡುವವರ ಆಯ್ಕೆಗೆ ಅಧಿಕಾರಿಗಳು ಲಾಟರಿ ಎತ್ತಿದರು.

ಇದು ಕೊರೊನಾ ತಂದಿತ್ತ ಸಂಕಷ್ಟದ ಫಲ. ಬರೀ ಬಲಕುಂದಿ ಅಲ್ಲ; ಇದು ಇಡೀ ಭಾರತದ ಕಾರ್ಮಿಕರ ಬದುಕಿನ ಹೊಸ ಚಿತ್ರಣವೂ ಹೌದು. ‘ದಿನದ ಅನ್ನ ಗಿಟ್ಟಿಸಿಕೊಳ್ಳಲು ನಿಮಗೆ ಲಾಟರಿ ಹೊಡಿಬೇಕ್ರಿ. ಅದೃಷ್ಟ ಬೆನ್ನಿಗಿದ್ದರೆ ಕೆಲಸ, ಇಲ್ಲದಿದ್ದರೆ ಇಲ್ಲ. ಇಂತಹ ಸಂಪತ್ತಿನಲ್ಲಿ ಕಾರ್ಮಿಕರ ದಿನ ಆಚರಣೆಗೆ ಏನು ಅರ್ಥವಿದೆ’ ಎನ್ನುತ್ತಲೇ ಹುನಗುಂದದ ಗ್ರಾಮೀಣ ಕೂಲಿಕಾರ್ಮಿಕರ ಸಂಘದ (ಗ್ರಾಕೂಸ್) ಮುಖಂಡ ಮಹಾಂತೇಶ ಹೊಸಮನಿ ಮಾತಿಗೆ ಸಿಕ್ಕರು.

ಈಗ ಬೇಸಿಗೆ. ರೈತರಿಗೇ ಹೊಲದಲ್ಲಿ ಕೆಲಸವಿಲ್ಲ. ಇನ್ನು ಕೂಲಿ ಕಾರ್ಮಿಕರಿಗೆ ಎಲ್ಲಿ ಕೊಡುತ್ತಾರೆ? ಮಂಗಳೂರು, ಉಡುಪಿ, ಕೇರಳ, ಗೋವಾ ಕಡೆಗೆಲ್ಲಾ ಬದುಕು ಅರಸಿ ಹೋದವರೆಲ್ಲಾ ಊರಿಗೆ ಮರಳಿದ್ದಾರೆ. ಅವರೆಲ್ಲರಿಗೂ ಈಗ ನರೇಗಾ ಕೆಲಸವೇ ದಿಕ್ಕು. ಅರ್ಜಿ ಕೊಟ್ಟ ಎಲ್ಲರಿಗೂ ಕೆಲಸ ಕೊಡುತ್ತೇವೆ ಎಂಬ ಮಾತೆಲ್ಲಾ ಕಾಗದಕ್ಕಷ್ಟೇ ಸೀಮಿತ ಎಂದು ಮಹಾಂತೇಶ ವಾಸ್ತವ ಸ್ಥಿತಿ ಬಿಚ್ಚಿಟ್ಟರು.

ದೇವರಿಗೆ ಬಿಟ್ಟ ಮಾತು...!

‘ಏನೋ ದೇವರಿಗೆ ಬಿಟ್ಟ ಮಾತು ಸರ್. ಫ್ಯೂಚರ್ ಏನಾಗುತ್ತೋ ಏನೋ. ಲಾಕ್‌ಡೌನ್ ಕಾರಣ ಈಗ ಕೆಲಸವಂತೂ ಇಲ್ಲ. ಮುಂದೆ ಇರುತ್ತದೆಯೋ ಇಲ್ಲ’ – ಇದು ಈ ಭಾಗದ ಸಿಮೆಂಟ್ ಕಾರ್ಖಾನೆಯೊಂದರ ನೌಕರನ ಮಾತು.

ಸಿಮೆಂಟ್‌ಗೆ ಬೇಡಿಕೆ ಕುಸಿದಿದೆ ಎಂದು ನಮ್ಮ ಮಾಲೀಕರು ಫ್ಯಾಕ್ಟರಿಯನ್ನು ಸಿಕ್ ಇಂಡಸ್ಟ್ರಿ ಎಂದು ಘೋಷಿಸಿಕೊಂಡಿದ್ದಾರೆ. ಇದೇ ಕಾರಣ ಮುಂದಿಟ್ಟು ನವೆಂಬರ್‌ನಲ್ಲಿ 160 ಮಂದಿಯನ್ನು ಕೆಲಸದಿಂದ ತೆಗೆದರು.

‘ಇಲ್ಲಿ 10 ವರ್ಷ ಕೆಲಸ ಮಾಡಿರುವೆ. ನನ್ನ ಕೆಲಸದ ಮೇಲೂ ತೂಗುಗತ್ತಿ ಇದೆ. ಸಿಕ್ ಇಂಡಸ್ಟ್ರಿ ಕಾರಣವೊಂದೇ ಸಾಕಾಗಿತ್ತು. ಇಷ್ಟೊತ್ತಿಗೆ ನನ್ನ ಉದ್ಯೋಗವನ್ನು ಅದು ಕಸಿದು ಬಿಡುತ್ತಿತ್ತು. ಕೊರೊನಾ ಬಂದಿದ್ದರಿಂದ ಅದನ್ನು ತಾತ್ಕಾಲಿಕವಾಗಿ ಮುಂದೂಡಿದೆ. ಇಲ್ಲಿಯವರೆಗೆ 15 ಸಾವಿರ ರೂಪಾಯಿ ಪಗಾರ ಬರುತ್ತಿತ್ತು. ಲಾಕ್‌ಡೌನ್ ಅವಧಿಯಲ್ಲಿ ಏಳು ಸಾವಿರ ಕೊಟ್ಟಿದ್ದಾರೆ. ಮುಂದಿನ ತಿಂಗಳು ಅದೂ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ’ ಎಂದು ಮುಗಿಲತ್ತ ಮುಖಮಾಡಿದರು.

ಒಲೆಯ ಕೆಂಡ ಆರುವಂತಿಲ್ಲ

ಬಾದಾಮಿ ತಾಲ್ಲೂಕು ತಳಕವಾಡದ ನಿಂಗಪ್ಪ ರಾಮನಗೌಡ, ಕುಳಗೇರಿ ಕ್ರಾಸ್‌ ಬಳಿ ರಾಷ್ಟ್ರೀಯ ಹೆದ್ದಾರಿಯ ದಾಬಾದಲ್ಲಿ ಬಾಣಸಿಗ. ‘ಲಾಕ್‌ಡೌನ್‌ಗೆ ಮುನ್ನ ಹಗಲು–ರಾತ್ರಿ ವ್ಯತ್ಯಾಸವಿಲ್ಲದೇ ದುಡಿಮೆ, ಕೈತುಂಬ ಪಗಾರ ಇತ್ತು. ಆ ದಿನ ಮತ್ತೆ ಬರುತ್ತದೆಯೋ ಇಲ್ಲವೋ ಗೊತ್ತಿಲ್ಲ. ದಾಬಾದಲ್ಲಿ ಒಲೆ ಉರಿಯದಿದ್ದರೂ ನಮ್ಮ ಮನೆಯ ಒಲೆಯ ಕೆಂಡ ಆರುವಂತಿಲ್ಲ. ಈಗ ಬೇರೆಯವರ ಹೊಲಕ್ಕೆ ಮೆಕ್ಕೆಜೋಳದ ತೆನೆ ಮುರಿಯಲು, ಕಟ್ಟಿಗೆ ಕಡಿ ಯಲು ಹೋಗುತ್ತಿದ್ದೇನೆ. ಆಡು ಮೇಯಿಸುತ್ತೇನೆ. ಕೆಲಸ ಯಾವುದಾದರೇನು ಬದುಕ ಬೇಕಷ್ಟೇ’ ಎಂದು ಅವರು ಹೇಳಿದರು.

ಸಂಕಷ್ಟದ ಕಾಲ

46.5 ಕೋಟಿಕಾರ್ಮಿಕರು ದೇಶದ ವಿವಿಧ ವಲಯಗಳಲ್ಲಿ ಸದ್ಯ ಉದ್ಯೋಗದಲ್ಲಿದ್ದಾರೆ

90.7%ಕಾರ್ಮಿಕರು ಅಸಂಘಟಿತ ವಲಯಕ್ಕೆ ಸೇರಿದವರು

13.6 ಕೋಟಿಕಾರ್ಮಿಕರು ತಕ್ಷಣ ಉದ್ಯೋಗ ಕಳೆದುಕೊಳ್ಳುವ ಭೀತಿ ಇದೆ

(ಆಧಾರ: ಪಂಜಾಬ್‌ ಸೆಂಟ್ರಲ್‌ ವಿಶ್ವವಿದ್ಯಾಲಯದ ಅಧ್ಯಯನ ವರದಿ)

‘ನಿಮ್ಮ ದಮ್ಮಯ್ಯ, ಕೆಲಸದಿಂದ ತೆಗೀಬೇಡಿ’

‘ಅಗತ್ಯವಾಗಿರುವುದನ್ನು ಕೊಡಿ’ ಎಂಬುದು ಕೊರೊನಾದ ಈ ಸಂದರ್ಭದಲ್ಲಿ ಕಾರ್ಮಿಕರ ಅತೀ ಮುಖ್ಯ ಬೇಡಿಕೆ. ದಾನಿಗಳಿಂದ, ಕಾರ್ಪೊರೇಟ್‌ ಕಂಪನಿಗಳಿಂದ ಸರ್ಕಾರದ ನೆರವಿನ ನಿಧಿಗೆ ದೇಣಿಗೆ ಹರಿದು ಬರುತ್ತಿದ್ದರೂ ತೀರಾ ಅಗತ್ಯವಾಗಿ ಬೇಕಾಗಿರುವುದೇ ಸಿಗುತ್ತಿಲ್ಲ ಎನ್ನುತ್ತಾರೆ ಕಾರ್ಮಿಕ ಮುಖಂಡರು.

‘ಕಾರ್ಮಿಕರಿಗೆ ದಿನಸಿ ನೀಡಲಾಗುತ್ತಿದೆ. ಆದರೆ, ಅದನ್ನು ಬೇಯಿಸಿಕೊಂಡು ತಿನ್ನಲು ಅಡುಗೆ ಅನಿಲ ಅಥವಾ ಸೀಮೆಎಣ್ಣೆ ನೀಡುತ್ತಿಲ್ಲ. ಎಷ್ಟೋ ಉದ್ಯಮಿಗಳು, ಹೋಟೆಲ್‌ ಸಂಘಟನೆಗಳು ಆಹಾರ ನೀಡುತ್ತಿವೆ. ಆದರೆ, ಅವರವರ ಆಹಾರ ಸಂಸ್ಕೃತಿಗೆ ಪೂರಕವಾದ ಊಟ–ತಿಂಡಿ ಸಿಗುತ್ತಿಲ್ಲ’ ಎನ್ನುತ್ತಾರೆ ಸಿಐಟಿಯು ಕಾರ್ಯದರ್ಶಿ ಮಹಾಂತೇಶ್.

ಬೆಂಗಳೂರು ನಗರವೊಂದರಲ್ಲೇ ಒಂದು ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರಿದ್ದಾರೆ. ಅವರಲ್ಲಿ ಬಹುತೇಕರು ಬಿಹಾರ, ಅಸ್ಸಾಂ, ಪಶ್ಚಿಮ ಬಂಗಾಳದವರು. ಅದಮ್ಯ ಚೇತನ, ಇಸ್ಕಾನ್‌ ಅಥವಾ ಯಾವುದೇ ಹೋಟೆಲ್‌ನಿಂದ ಸಹೃದಯರು ಕೊಡುತ್ತಿರುವ ಆಹಾರವು ಇಂತಹ ಕಾರ್ಮಿಕರಿಗೆ ಹಿಡಿಸುತ್ತಿಲ್ಲ. ಈ ವಿಷಯದಲ್ಲಿ ಕೇರಳ ಮಾದರಿಯನ್ನು ಪಾಲಿಸಬೇಕು ಎಂಬುದು ಕಾರ್ಮಿಕರ ಒತ್ತಾಯ.

ಕೇರಳದಲ್ಲಿ ಕುಟುಂಬಶ್ರೀ ಯೋಜನೆಯಡಿ ಪೂರೈಸುತ್ತಿದ್ದ ಆಹಾರ ಇಷ್ಟವಾಗದೇ ಹೋದಾಗ ಅಲ್ಲಿನ ವಲಸೆ ಕಾರ್ಮಿಕರು ಗಲಾಟೆ ಮಾಡಿದರು. ನಂತರ ಸರ್ಕಾರವು ‘ಬಂಗಾಳಿ ಕಿಚನ್’, ‘ನಾರ್ಥ್‌ ಈಸ್ಟ್‌ ಕಿಚನ್‌’ ತೆರೆಯಿತು. ಇಂತಹ ಕಾರ್ಮಿಕರಲ್ಲಿ ಬಹುಪಾಲು ಜನ ಸ್ವತಃ ಆಹಾರ ತಯಾರಿಸುವ ಸಾಮರ್ಥ್ಯ ಹೊಂದಿದ್ದರು. ಅಂಥವರನ್ನೇ ಈ ಕ್ಯಾಂಟೀನ್‌ಗಳಲ್ಲಿ ಆಹಾರ ತಯಾರಿಸಲು ನಿಯೋಜಿಸಲಾಯಿತು. ಈಗ ಅಲ್ಲಿನ ಕಾರ್ಮಿಕರಿಗೆ, ಅವರಿಗೆ ಬೇಕಾದ ಆಹಾರ ಪೂರೈಸುವ ವ್ಯವಸ್ಥೆ ಆಗಿದೆ. ಕೆಲವರಿಗೆ ಉದ್ಯೋಗವೂ ದೊರೆತಂತಾಗಿದೆ. ಈ ಕೆಲಸ ರಾಜ್ಯದಲ್ಲಿಯೂ ಆಗಬೇಕು ಎಂಬುದು ಕಾರ್ಮಿಕರ ಆಗ್ರಹ.

ಎಲ್ಲಕ್ಕಿಂತ ಹೆಚ್ಚಾಗಿ, ‘ನಿಮ್ಮ ದಮ್ಮಯ್ಯ, ಕೆಲಸ ಹೋಗದಂತೆ ತಡೆಯಿರಿ’ ಎಂದು ಬಹುತೇಕ ಕಾರ್ಮಿಕರು ಅಂಗಲಾಚುವುದನ್ನು ಕಂಡಾಗ ಕರುಳು ಹಿಂಡುವಂತೆ ಮಾಡುತ್ತದೆ.

ಕಾರ್ಮಿಕರ ಪ್ರಮುಖ ಬೇಡಿಕೆಗಳೇನು?

* ಕೋವಿಡ್‌ ಲಾಕ್‌ಡೌನ್‌ ಸಂತ್ರಸ್ತರು ಮತ್ತು ಅಸಂಘಟಿತ ಕಾರ್ಮಿಕರಿಗೆ ತಕ್ಷಣ ಆರ್ಥಿಕ ನೆರವು ಘೋಷಿಸಬೇಕು

* ಲಾಕ್‌ಡೌನ್‌ ಮುಗಿದ ಬಳಿಕ ಉದ್ಯೋಗ ಕಡಿತ ಪ್ರವಾಹೋಪಾದಿಯಲ್ಲಿ ನಡೆಯಲಿದೆ ಎಂಬ ವರದಿಗಳು ಉದ್ಯಮ ವಲಯದಿಂದ ಬರುತ್ತಿವೆ. ಕಾರ್ಮಿಕರ ಉದ್ಯೋಗಕ್ಕೆ ಕುತ್ತು ಬರದಂತೆ ನೋಡಿಕೊಳ್ಳಬೇಕು

* ಸಂಬಳದಲ್ಲಿ ಕಡಿತ ಮಾಡದಂತೆ ಕಂಪನಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು

* ಬಡವರ ನೆರವಿಗೆ ಧಾವಿಸಲು ನಿಧಿ ಸ್ಥಾಪಿಸಬೇಕು. ಅಗತ್ಯವಾದರೆ ಈ ಉದ್ದೇಶಕ್ಕಾಗಿ ತೆರಿಗೆ ಮೂಲಕ ಹಣ ಸಂಗ್ರಹಿಸಬೇಕು

* ಎಲ್ಲ ಕಾರ್ಮಿಕರಿಗೆ ಕೋವಿಡ್‌–19 ಪರೀಕ್ಷೆ ನಡೆಸಿ, ಅಗತ್ಯವಿರುವವರಿಗೆ ಚಿಕಿತ್ಸೆ ಕೊಡಿಸಬೇಕು

* ಸರ್ವರಿಗೂ ಉಚಿತ ಹಾಗೂ ಸುರಕ್ಷಿತ ಚಿಕಿತ್ಸಾ ಸೌಲಭ್ಯವನ್ನು ಕಲ್ಪಿಸಬೇಕು

* ಕೇಂದ್ರ ಸರ್ಕಾರ ದಿನದ ಕೆಲಸವನ್ನು 12 ಗಂಟೆ ಮಾಡಿ ಕಾನೂನು ಬದ್ಧಗೊಳಿಸಲು ಹೊರಟ ಕ್ರಮ ಸರಿಯಲ್ಲ. ಇದರಿಂದ ಕಾರ್ಮಿಕರ ಶೋಷಣೆಗೆ ದಾರಿ ಮಾಡಿಕೊಟ್ಟಂತಗುತ್ತದೆ. ಮೊದಲಿನಂತೆ ದಿನಕ್ಕೆ 8 ಗಂಟೆ ಮಾತ್ರ ಕೆಲಸವಿರಬೇಕು

* ಮಾನಸಿಕ ಒತ್ತಡದಲ್ಲಿರುವ ಎಲ್ಲ ಕಾರ್ಮಿಕರಿಗೆ ಮನೋವೈದ್ಯರು ಕೌನ್ಸಲಿಂಗ್‌ ನಡೆಸಬೇಕು

* ವಲಸೆ ಕಾರ್ಮಿಕರು ಇರುವ ಕಡೆಗಳಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು

* ಕಾರ್ಮಿಕರ ರಕ್ಷಣೆ ಮತ್ತು ಜೀವನ ನಿರ್ವಹಣೆಗೆ ಬೇಕಾದ ವ್ಯವಸ್ಥೆ ಮಾಡಬೇಕು

ತೀರಾ ಸಂಕಷ್ಟದಲ್ಲಿ ಸಿಲುಕಿದವರು

ವಲಸೆ ಕಾರ್ಮಿಕರು, ಕೃಷಿ ಕಾರ್ಮಿಕರು, ಗಾರ್ಮೆಂಟ್‌ ಘಟಕಗಳ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಹಮಾಲಿಗಳು, ಕ್ಯಾಬ್‌ ಚಾಲಕರು, ಪ್ರವಾಸೋದ್ಯಮ ಕಾರ್ಮಿಕರು, ಆಟೊಮೊಬೈಲ್‌ ಕಾರ್ಮಿಕರು, ಓಲಗದವರು, ಬಳೆ ತಯಾರು ಮಾಡುವವರು, ಬೀಡಿ ಕಟ್ಟುವವರು, ಸೈಕಲ್‌ ರಿಪೇರಿ ಮಾಡುವವರು, ಕಮ್ಮಾರರು, ಬಡಗಿಗಳು, ಕುಂಬಾರರು, ಕ್ಷೌರಿಕರು, ದೋಬಿಗಳು, ನೇಕಾರರು, ಆಹಾರ ಪೂರೈಸುವವರು (ಕೇಟರರ್ಸ್‌), ಸಿನಿಮಾ ಕಾರ್ಮಿಕರು, ಬಟ್ಟೆಗಳಿಗೆ ಬಣ್ಣ ಹಾಕುವವರು, ಕೋರಿಯರ್‌ ಬಾಯ್‌ಗಳು, ಮನೆಗೆಲಸದವರು, ನರ್ಸರಿ ಕೆಲಸಗಾರರು, ಪತ್ರಿಕಾ ವಿತರಕರು, ಪ್ಯಾಕಿಂಗ್‌ ಕಾರ್ಮಿಕರು, ಪಾನ್‌ವಾಲಾಗಳು, ಹಪ್ಪಳ ತಯಾರಕರು, ಮಿಲ್‌ಗಳ ಕಾರ್ಮಿಕರು, ಸೆಕ್ಯುರಿಟಿ ಗಾರ್ಡ್‌ಗಳು, ಮಕ್ಕಳ ಆಟಿಕೆ ತಯಾರಕರು, ಹಣ್ಣು–ತರಕಾರಿ ಮಾರುವವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.