ADVERTISEMENT

ಆಳ ಅಗಲ: ಮಕ್ಕಳ ಬಾಲ್ಯ, ಭವಿಷ್ಯ ಕಸಿಯುವ ಮೊಬೈಲ್

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 19:30 IST
Last Updated 5 ಫೆಬ್ರುವರಿ 2026, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   
ಆನ್‌ಲೈನ್/ಮೊಬೈಲ್ ಗೇಮ್‌ಗಳ ಚಟ ಮತ್ತು ಅದು ಹುಟ್ಟಿಸಿದ ಭ್ರಮೆ, ಒತ್ತಡದಿಂದ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಘಟನೆಗಳು ದೇಶದಲ್ಲಿ ವರದಿಯಾಗುತ್ತಲೇ ಇವೆ. ಮಕ್ಕಳು ಮತ್ತು ಹದಿಹರೆಯದವರಲ್ಲಿ ಮೊಬೈಲ್ ಗೇಮ್‌ಗಳ ವ್ಯಸನವು ಗಂಭೀರ ಸ್ವರೂಪ ತಾಳುತ್ತಿದೆ. ಇಂಟರ್ನೆಟ್ ಗೇಮಿಂಗ್ ಡಿಸಾರ್ಡರ್ (ಐಜಿಡಿ) ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರಿ, ಅವರ ಬಾಲ್ಯ, ಭವಿಷ್ಯ ಮುರುಟುತ್ತಿದೆ. ಮಕ್ಕಳನ್ನು ಆನ್‌ಲೈನ್ ಗೇಮಿಂಗ್ ವ್ಯಸನದಿಂದ ಮುಕ್ತ ಮಾಡಲು ಸರ್ಕಾರ, ಸಮಾಜ, ಶಾಲೆಗಳು, ಪೋಷಕರು ಎಲ್ಲರೂ ಒಟ್ಟಿಗೆ ಕಾರ್ಯೋನ್ಮುಖರಾಗಬೇಕಾದ ಸಂದರ್ಭ ಇದಾಗಿದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.

ಮೊಬೈಲ್ ಗೇಮ್‌ಗಳು, ಮೊಬೈಲ್‌ನ ಅತಿಯಾದ ಬಳಕೆ ಸೃಷ್ಟಿಸಿದ ಭ್ರಮಾಧೀನ ಮನಸ್ಸಿನಿಂದ ವಾಸ್ತವಕ್ಕೆ ಕುರುಡಾಗಿ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಹದಿಹರೆಯದ ಮೂವರು ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೊಬೈಲ್‌ ಗೀಳಿನಿಂದ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಹೊಸ ವಿದ್ಯಮಾನವೇನಲ್ಲ. ಆದರೆ, ಇತ್ತೀಚೆಗೆ ಈ ವ್ಯಸನವು ತೀವ್ರ ಸ್ವರೂಪ ಪಡೆದಿರುವುದು ಕಳವಳಕ್ಕೆ ಕಾರಣವಾಗಿದೆ. 2026–27ರ ಆರ್ಥಿಕ ಸಮೀಕ್ಷೆಯೂ ಡಿಜಿಟಲ್ ವ್ಯಸನದ ಬಗ್ಗೆ ಆತಂಕ ವ್ಯಕ್ತಪಡಿಸಿದೆ.

ಜಗತ್ತಿನ ಬಹುತೇಕ ದೇಶಗಳಲ್ಲಿ ಮೊಬೈಲ್ ಫೋನ್ ಮಕ್ಕಳ ನೆಚ್ಚಿನ ಆಟದ ಸಾಧನವಾಗಿದೆ. ಅವರ ಆಟ, ಪಾಠ, ಊಟ ಎಲ್ಲ ಚಟುವಟಿಕೆಗಳಲ್ಲಿಯೂ ಮೊಬೈಲ್ ಇರಲೇಬೇಕು ಎನ್ನುವಂತಾಗಿದೆ. ಇಂಟರ್‌ನೆಟ್‌ ಗೇಮಿಂಗ್ ಡಿಸಾರ್ಡರ್ (ಐಜಿಡಿ) ಮಕ್ಕಳನ್ನು ಬಾಧಿಸುತ್ತಿದೆ. ನಗರಗಳಲ್ಲಿ, ಇಬ್ಬರೂ ಪೋಷಕರು ಉದ್ಯೋಗಸ್ಥರಾಗಿರುವ ಕುಟುಂಬಗಳಲ್ಲಿ, ಮಕ್ಕಳ ಮೇಲೆ ಹೆಚ್ಚು ನಿಗಾ ಇಡಲಾಗದ, ಅವರನ್ನು ಇತರೆ ಚಟುವಟಿಕೆಗಳಲ್ಲಿ ತೊಡಗಿಸಲಾಗದ ಕುಟುಂಬಗಳ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ಪೋಷಕರ ಅತಿಪ್ರೀತಿ, ಮಕ್ಕಳನ್ನು ಸಂಭಾಳಿಸುವ ಕಷ್ಟವೂ ಅವರು ಮೊಬೈಲ್ ಚಟ ಅಂಟಿಸಿಕೊಳ್ಳಲು ಕಾರಣವಾಗುತ್ತಿದೆ. ಕೋವಿಡ್‌ ಕಾಲದಲ್ಲಿ ಆನ್‌ಲೈನ್ ತರಗತಿಗಳನ್ನು ಕೇಳಲು ಮೊಬೈಲ್ ಕೈಗೆತ್ತಿಕೊಂಡ ಬಹುತೇಕ ಮಕ್ಕಳು, ನಂತರ ಅದನ್ನು ಕೆಳಗಿಟ್ಟಿಲ್ಲ. ಅದೇ ಅವರ ಶಾಲೆ, ಆಟದ ಮೈದಾನ, ರಂಜನೆಯ ತಾಣ ಎಲ್ಲವೂ ಆಗಿಹೋಗಿದೆ‌. ಕೆಲವು ಮಕ್ಕಳ ಬುದ್ಧಿ ಇದರಿಂದ ಚುರುಕಾಗಿರುವುದೂ ಉಂಟು. ಅಂಥ ಮಕ್ಕಳ ಸಂಖ್ಯೆ ಅತ್ಯಲ್ಪ. ಹಿತಮಿತವಾಗಿ ಮೊಬೈಲ್ ಬಳಸುವ ವಿವೇಚನೆ ಮಕ್ಕಳಲ್ಲಿ ಕಾಣುವುದು ಕಷ್ಟ.  

ಮಕ್ಕಳನ್ನು ಸೆಳೆಯಲೆಂದೇ ಅವರ ಕುತೂಹಲ, ಆಸಕ್ತಿ ಕೆರಳಿಸುವಂಥ ಮೊಬೈಲ್ ಗೇಮ್‌ಗಳನ್ನು ಕಂಪನಿಗಳು ಅಭಿವೃದ್ಧಿ ಪಡಿಸುತ್ತಿವೆ. ಆಟಗಳಲ್ಲಿ ಗೆದ್ದವರಿಗೆ ಇಂತಿಷ್ಟು ಪಾಯಿಂಟ್‌ಗಳು, ಅಂಕಗಳು, ಶ್ರೇಯಾಂಕಗಳು ಎಂದು ನಿಗದಿಪಡಿಸಲಾಗುತ್ತದೆ. ಹೆಚ್ಚು ಶ್ರೇಯಾಂಕಗಳನ್ನು ಗಳಿಸುವುದೇ ಅವರ ಪರಮೋದ್ದೇಶವಾಗುತ್ತದೆ. ಮಕ್ಕಳು ಹೆಚ್ಚು ಆಟವಾಡಿದಷ್ಟೂ ಅವರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಡೋಪಮೈನ್ ಎನ್ನುವ ರಾಸಾಯನಿಕ ಬಿಡುಗಡೆಯಾಗುತ್ತದೆ. ಇದು ಅವರಲ್ಲಿ ಒಂದು ಬಗೆಯ ಸಂತೃಪ್ತ ಭಾವವನ್ನು ಉಂಟುಮಾಡುವುದಲ್ಲದೇ, ಆಟಗಳನ್ನು ಪುನರಾವರ್ತಿಸುವಂತೆ ಪ್ರೇರೇಪಿಸುತ್ತದೆ. ಹೀಗೆ ಮಕ್ಕಳು ಮೊಬೈಲ್‌ ಗೇಮ್‌ಗಳ ಚಟಕ್ಕೆ ಬೀಳುತ್ತಿದ್ದಾರೆ. ಈ ವ್ಯಸನಕ್ಕೆ ಸಿಲುಕಿದ ಮಕ್ಕಳು ತಮ್ಮ ಮನೆ, ಪೋಷಕರು, ಸ್ನೇಹಿತರು, ಸುತ್ತಲಿನ ಜನ, ಪರಿಸರ, ಓದು ಎಲ್ಲವನ್ನೂ ಮರೆಯತೊಡಗುತ್ತಾರೆ. ಅವರ ವರ್ತನೆಯಲ್ಲಿ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. 

ADVERTISEMENT

ಬುದ್ಧಿ ಅಷ್ಟಾಗಿ ವಿಕಾಸವಾಗದ, ವಿವೇಚನಾ ಶಕ್ತಿಯ ಕೊರತೆ ಇರುವ ಮಕ್ಕಳಲ್ಲಿ ಮತ್ತು ಹದಿಹರೆಯದವರ ಮೇಲೆ ಆನ್‌ಲೈನ್ ಗೇಮ್‌ಗಳು ಹೆಚ್ಚು ಪರಿಣಾಮ ಬೀರುತ್ತಿವೆ. ಈ ದಿಸೆಯಲ್ಲಿ ಸಾಮಾಜಿಕ ಜಾಲತಾಣಗಳು, ಆನ್‌ಲೈನ್ ಸಾಧನಗಳ ಬಳಕೆಗೆ ವಯಸ್ಸಿನ ಮಿತಿ ಹೇರಬೇಕು ಎಂದು ಆರ್ಥಿಕ ಸಮೀಕ್ಷೆ 2026–27 ಪ್ರತಿಪಾದಿಸಿದೆ. ವಿಶ್ವ ಆರೋಗ್ಯ ಸಂಸ್ಥೆಗಳಂಥ (ಡಬ್ಲ್ಯುಎಚ್‌ಒ) ಪರಿಣತ ಸಂಸ್ಥೆಗಳು ಆನ್‌ಲೈನ್ ಆಟಗಳ ಬಗ್ಗೆ ಎಚ್ಚರಿಕೆ ನೀಡಿವೆ. ಮಕ್ಕಳ ದೈನಿಕ ಚಟುವಟಿಕೆಗಳಲ್ಲಿ ವ್ಯತ್ಯಾಸಗಳು ಕಂಡುಬಂದಲ್ಲಿ ಅವರಿಗೆ ತಜ್ಞರ ನೆರವು/ಚಿಕಿತ್ಸೆ ಅಗತ್ಯ ಎಂದು ಡಬ್ಲ್ಯುಎಚ್‌ಒ ಹೇಳಿದೆ.

ಪರಿಣಾಮಗಳು?

ಮೊಬೈಲ್ ಗೇಮ್‌ಗಳು ಮಕ್ಕಳ ಮನೋಲೋಕವನ್ನು ಇನ್ನಿಲ್ಲದಂತೆ ಆವರಿಸಿವೆ. ಮಕ್ಕಳಲ್ಲಿ ಈ ಗೀಳು ಹೆಚ್ಚಾದಂತೆ ಅವರಲ್ಲಿ ಒಂಟಿತನ, ಅಸಹಿಷ್ಣುತೆ, ನಿರಾಸಕ್ತಿ, ಹಟಮಾರಿತನ ಹೆಚ್ಚುತ್ತವೆ. ಆಟ, ಪಾಠಗಳಲ್ಲಿ ಆಸಕ್ತಿ ಕುಂದುತ್ತದೆ. ಊಟ, ನಿದ್ದೆ, ದೈನಿಕ ಚಟುವಟಿಕೆಗಳಲ್ಲಿ ವ್ಯತ್ಯಾಸಗಳು ಉಂಟಾಗುತ್ತವೆ. ಸದಾ ಮೊಬೈಲ್‌ ಬೇಕು ಎನ್ನುತ್ತಿರುತ್ತಾರೆ. ಅದು ಕೈಯಲ್ಲಿ ಇಲ್ಲದಿದ್ದರೆ, ಅಸಹಜವಾಗಿ ವರ್ತಿಸುತ್ತಾರೆ. ಕೆಲವೊಮ್ಮೆ ಹಿಂಸೆಗೆ ಕಾರಣರಾಗುತ್ತಾರೆ ಇಲ್ಲವೇ ತಮಗೆ ತಾವೇ ಹಾನಿ ಮಾಡಿಕೊಳ್ಳುತ್ತಾರೆ.

ಮೊಬೈಲ್ ಆಟಗಳ ಚಟವು ಖಿನ್ನತೆ, ಆತಂಕ, ಒತ್ತಡಗಳಿಗೂ ಕಾರಣವಾಗುತ್ತಿದೆ. ಬಹುತೇಕ ಮಕ್ಕಳಲ್ಲಿ ತೀವ್ರ ಸ್ವರೂಪದ ದೈಹಿಕ ಹಾಗೂ ಮಾನಸಿಕ ವ್ಯಾಧಿಗಳನ್ನು ಉಂಟುಮಾಡುತ್ತಿದೆ. ಮಕ್ಕಳ ಮಿದುಳಿನ ಕಾರ್ಯಶೈಲಿಯ ಮೇಲೆ ಪರಿಣಾಮ ಬೀರಿ, ಅವರ ಆಲೋಚನಾ ಶಕ್ತಿಯನ್ನು ಕುಗ್ಗಿಸುತ್ತಿದೆ. ಹಲವು ಮಕ್ಕಳಿಗೆ ಈ ಗೀಳು ಆತ್ಮಹತ್ಯೆಗೂ ಪ್ರಚೋದಿಸುತ್ತಿದೆ.

ನಿಮ್ಹಾನ್ಸ್‌ನಿಂದ ಶಟ್‌ ಕ್ಲಿನಿಕ್‌
ಜನರನ್ನು ಡಿಜಿಟಲ್ ವ್ಯಸನದಿಂದ ಹೊರತರುವುದಕ್ಕಾಗಿ ನಿಮ್ಹಾನ್ಸ್‌ ‘ಶಟ್‌ ಕ್ಲಿನಿಕ್‌’ ಅನ್ನು ತೆರೆದಿದ್ದು, ಪ್ರತಿ ಶುಕ್ರವಾರ ಬೆಳಿಗ್ಗೆ 9.30ರಿಂದ ಸಂಜೆ 4.30ರವರೆಗೆ ಕಾರ್ಯಾಚರಿಸುವ ಸಹಾಯವಾಣಿ (9480829675) ಆರಂಭಿಸಿದೆ. ಅಗತ್ಯವಿದ್ದವರು ಈ ಸಂಖ್ಯೆಯನ್ನು ಸಂಪರ್ಕಿಸಬಹುದು.

ಲೋಕಲ್‌ ಸರ್ಕಲ್ಸ್‌ ಸಮೀಕ್ಷೆ ಹೇಳುವುದೇನು?

ಭಾರತದ ಸಮುದಾಯ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ ಲೋಕಲ್‌ಸರ್ಕಲ್ಸ್‌, ನಗರ ಪ್ರದೇಶಗಳ 9ರಿಂದ 17 ವರ್ಷ ವಯಸ್ಸಿನ ಮಕ್ಕಳಲ್ಲಿ ಸಾಮಾಜಿಕ ಜಾಲತಾಣಗಳು, ಆನ್‌ಲೈನ್‌ ಗೇಮಿಂಗ್‌, ಒಟಿಟಿ/ವಿಡಿಯೊ ವೀಕ್ಷಣೆ ವ್ಯಸನದ ಬಗ್ಗೆ ಸಮೀಕ್ಷೆ ನಡೆಸಿದ್ದು, 2025ರ ಡಿಸೆಂಬರ್‌ನಲ್ಲಿ ವರದಿಯನ್ನು ಪ್ರಕಟಿಸಿದೆ. 

ಸಮೀಕ್ಷೆಯ ಭಾಗವಾಗಿ ದೇಶದ 302 ನಗರ ಜಿಲ್ಲೆಗಳ ಶಾಲಾ ಮಕ್ಕಳ 57 ಸಾವಿರ ಪೋಷಕರನ್ನು ಸಂಪರ್ಕಿಸಿ, ಮಕ್ಕಳು ಸಾಮಾಜಿಕ ಜಾಲತಾಣ, ಆನ್‌ಲೈನ್‌ ಗೇಮಿಂಗ್‌ ಒಟಿಟಿ ವಿಡಿಯೊ ವೀಕ್ಷಣೆಯಲ್ಲಿ ತೊಡಗಿರುವ ಬಗ್ಗೆ ಪ್ರಶ್ನೆಗಳನ್ನು ಕೇಳಿದೆ. ಪೋಷಕರು ನೀಡಿದ ಮಾಹಿತಿ ಆಧಾರದಲ್ಲಿ ದತ್ತಾಂಶಗಳನ್ನು ವಿಶ್ಲೇಷಣೆಗೆ ಒಳಪಡಿಸಿದೆ. 

ಅದರ ಪ್ರಕಾರ, 

  • ತಮ್ಮ ಮಕ್ಕಳು ಸಾಮಾಜಿಕ ಜಾಲತಾಣ, ಆನ್‌ಲೈನ್‌ ಗೇಮಿಂಗ್‌, ಒಟಿಟಿ ವಿಡಿಯೊ ವೀಕ್ಷಣೆಯ ಚಟಕ್ಕೆ ದಾಸರಾಗಿದ್ದಾರೆ ಎಂದು ಇಬ್ಬರಲ್ಲಿ ಒಬ್ಬರು ಪೋಷಕರು ಅಭಿಪ್ರಾಯಪಟ್ಟಿದ್ದಾರೆ

  • ಮಕ್ಕಳು ಪ್ರತಿ ದಿನ ಸರಾಸರಿ 3 ಗಂಟೆ ಮತ್ತು ಅದಕ್ಕಿಂತ ಹೆಚ್ಚು ಹೊತ್ತು ಆನ್‌ಲೈನ್‌ನಲ್ಲಿ ಸಾಮಾಜಿಕ ಜಾಲತಾಣ, ಒಟಿಟಿ/ವಿಡಿಯೊ, ಆನ್‌ಲೈನ್‌ ಗೇಮಿಂಗ್‌ಗೆ ವ್ಯಯಿಸುತ್ತಿದ್ದಾರೆ ಎಂದು ಶೇ 49ರಷ್ಟು ಪೋಷಕರು ಹೇಳಿದ್ದಾರೆ

  • ಹೆಚ್ಚು ಸಮಯ ವ್ಯಯಿಸುತ್ತಿರುವುದರಿಂದ ಮಕ್ಕಳ ವರ್ತನೆ ಬದಲಾಗಿದ್ದು, ಮಕ್ಕಳು ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ, ಹೆಚ್ಚು ಆಕ್ರಮಣಶೀಲರಾಗುತ್ತಿದ್ದಾರೆ ಎಂದು ಪೋಷಕರು ನುಡಿದಿದ್ದಾರೆ.

‘ಮನಸ್ಸಿನ ನಿಯಂತ್ರಣ ತಪ್ಪುವ ಮಕ್ಕಳು’

ಮೊಬೈಲ್‌ನಂತಹ ಡಿಜಿಟಲ್ ಸಾಧನಗಳ ಅತಿಯಾದ ಬಳಕೆ ವ್ಯಸನವಾಗಿ ಮಾರ್ಪಟ್ಟಿದೆ. ನಡವಳಿಕೆ ಆಧಾರಿತ ಈ ವ್ಯಸನದಿಂದ ಹೊರಬರಲು ಸಾಧ್ಯವಾಗದ ಮಕ್ಕಳು, ಜೀವಕ್ಕೆ ಅಪಾಯ ತಂದುಕೊಳ್ಳುತ್ತಿದ್ದಾರೆ. ಈ ವ್ಯಸನಕ್ಕೆ ಒಳಗಾದವರ ಲಕ್ಷಣಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸುವುದು ಕಷ್ಟಸಾಧ್ಯ. ಸುತ್ತಮುತ್ತಲಿನವರಿಗೂ ಇದರ ಗಂಭೀರತೆ ಅರಿವಿಗೆ ಬರುವುದಿಲ್ಲ. ಮನಸ್ಸಿನ ಮೇಲೆ ನಿಗ್ರಹವಿಲ್ಲದೆ ಉತ್ತುಂಗಕ್ಕೆ ತಲುಪಿದಾಗ, ವಾಸ್ತವ ಪ್ರಪಂಚದಿಂದ ದೂರವಾಗಿ ಕಲ್ಪನಾ ಪ್ರಪಂಚದಲ್ಲಿ ವಿಹರಿಸುತ್ತಾರೆ. ಆಗ ಗೇಮ್‌ಗಳಲ್ಲಿ ನೀಡಲಾಗುವ ಸೂಚನೆಗಳನ್ನು ತಮ್ಮವರೇ ನೀಡುತ್ತಿದ್ದಾರೆ ಎಂದು ಭಾವಿಸಿ, ಅದನ್ನು ಚಾಚೂತಪ್ಪದೆ ಪಾಲಿಸುತ್ತಾರೆ. ಮಾನಸಿಕವಾಗಿ ಅವರು ವಾಸ್ತವ ಪ್ರಪಂಚದಿಂದ ಸಾಕಷ್ಟು ದೂರ ಸಾಗಿರುತ್ತಾರೆ. ಆದ್ದರಿಂದ ಆ ವೇಳೆ ಯೋಚಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ. ಗೇಮ್‌ಗಳ ಹಿಡಿತಕ್ಕೆ ಸಿಲುಕಿಕೊಂಡಿರುತ್ತಾರೆ. ಅದರಿಂದ ಅವರಿಗೆ ಹೊರಬರಲು ಸಾಧ್ಯವಾಗುವುದಿಲ್ಲ. ದುರ್ಬಲ ಮನಃಸ್ಥಿತಿಯೂ ಇದಕ್ಕೆ ಕಾರಣ. ಈ ರೀತಿ ವ್ಯಸನಕ್ಕೆ ಒಳಗಾಗುವ ಮಕ್ಕಳು ಪಾಲಕರಿಂದಲೂ ಪ್ರಭಾವಿತರಾಗಿರುತ್ತಾರೆ. ಆದ್ದರಿಂದ ಪಾಲಕರ ನಡವಳಿಕೆ ಮುಖ್ಯ. ಮಕ್ಕಳಲ್ಲಿನ ವ್ಯತ್ಯಾಸವನ್ನು ಅವರ ಅರಿವಿಗೆ ಬಾರದಂತೆ ಗುರುತಿಸಬೇಕಾಗುತ್ತದೆ. ಸಮಸ್ಯೆ ಗಂಭೀರ ಸ್ವರೂಪ ಪಡೆದಲ್ಲಿ ಥೆರೆಪಿ, ಸಮಾಲೋಚನೆ ಮೂಲಕ ಅವರನ್ನು ಈ ವ್ಯಸನದಿಂದ ಹೊರತರಬೇಕಾಗುತ್ತದೆ.
– ಡಾ. ಶಶಿಧರ್ ಎಚ್.ಎನ್., ನಿಮ್ಹಾನ್ಸ್‌ನ ಸ್ಥಾನಿಕ ವೈದ್ಯಾಧಿಕಾರಿ 

‘ವ್ಯಸನಕ್ಕೆ ಕಾರಣವಾಗುವ ಏಕಾಂಗಿತನ’

ಬಹುತೇಕ ಕುಟುಂಬಗಳಲ್ಲಿ ಪಾಲಕರು ತಮ್ಮ ತಮ್ಮ ಕೆಲಸದಲ್ಲಿ ನಿರತರಾಗಿರುವುದರಿಂದ ಮಕ್ಕಳಿಗೆ ಏಕಾಂಗಿತನ ಕಾಡುತ್ತದೆ. ಇದರಿಂದಾಗಿ ಮಕ್ಕಳು ದಿನದ ಬಹುತೇಕ ಅವಧಿ ಮೊಬೈಲ್‌ ಬಳಸುತ್ತಾ, ಮೊಬೈಲ್‌ ಗೇಮ್ ವ್ಯಸನಕ್ಕೆ ಒಳಗಾಗುತ್ತಿದ್ದಾರೆ. ಪಾಯಿಂಟ್ಸ್‌ಗಳು ಬರುತ್ತವೆ ಎಂಬ ಕಾರಣಕ್ಕೆ ಈ ಗೇಮ್‌ಗಳ ಹಿಂದೆ ಬಿದ್ದು, ತಮ್ಮನ್ನು ತಾವು ಮರೆಯುತ್ತಾರೆ. ದೈಹಿಕ ಚಟುವಟಿಕೆಗಳು ಇಲ್ಲದಿರುವುದು, ಸಂವಹನ ಕೊರತೆಯೂ ಈ ವ್ಯಸನಕ್ಕೆ ಹಾದಿ ಮಾಡಿಕೊಡಲಿದೆ. ಸ್ನೇಹಿತರು ಮೊಬೈಲ್‌ ಗೇಮ್‌ಗಳನ್ನು ಆಡುತ್ತಾರೆ, ಸಾಮಾಜಿಕ ಜಾಲತಾಣಗಳಲ್ಲಿ ಇರುತ್ತಾರೆ ಎಂಬ ಕಾರಣಕ್ಕೂ ಹಲವರು ಒಬ್ಬರನ್ನೊಬ್ಬರು ಅನುಸರಿಸಿ ಸಮಸ್ಯೆ ತಂದುಕೊಳ್ಳುತ್ತಿದ್ದಾರೆ. ಈ ರೀತಿ ವ್ಯಸನದಿಂದ ಹೊರಬರಲು ಮಕ್ಕಳು ಮೊಬೈಲ್‌ ಬಳಕೆ ಕಡಿಮೆ ಮಾಡಿ, ದೈಹಿಕ ಚಟುವಟಿಕೆಯಲ್ಲಿ ಹೆಚ್ಚಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಪಾಲಕರು ಮಕ್ಕಳ ಜತೆಗೆ ಸಮಾಲೋಚನೆ ನಡೆಸುತ್ತಾ ಇರಬೇಕು.
–ಡಾ. ಮನೋಜ್ ಕುಮಾರ್ ಶರ್ಮಾ, ನಿಮ್ಹಾನ್ಸ್‌ನ ‘ಶಟ್‌’ (ಸರ್ವಿಸ್‌ ಫಾರ್‌ ಹೆಲ್ದಿ ಯೂಸ್‌ ಆಫ್‌ ಟೆಕ್ನಾಲಜಿ) ಕ್ಲಿನಿಕ್ ಮುಖ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.