
ಪ್ರೌಢಶಾಲಾ ಹಂತದವರೆಗಿನ ಮಕ್ಕಳುಮೊಬೈಲ್ ಬಳಸುವುದನ್ನು ನಿರ್ಬಂಧಿಸಲು ಕರ್ನಾಟಕಸರ್ಕಾರವು ಮು೦ದಾಗಿದೆ.ಮಕ್ಕಳ ಸ್ಟೀನ್ ಟೈಮ್ ಹೆಚ್ಚಾಗುತ್ತಿದ್ದು,ಅದು ಅವರಶಿಕ್ಷಣ,ಆರೋಗ್ಯಮತ್ತು ಸಾಮಾಜಿಕಜೀವನದಮೇಲೆ ವ್ಯತಿರಿಕ್ತ ಪರಿಣಾಮಬೀರುತ್ತಿದೆ. ಹೀಗಾಗಿ ಪೋಷಕರು ಮೊಬೈಲ್ ನಿರ್ಬಂಧಕ್ಕೆ ಒತ್ತಡ ಹೇರುತ್ತಿದ್ದಾರೆ ಎಂದು ಸರ್ಕಾರ ಹೇಳಿದೆ.ಆದರೆ, ಸರ್ಕಾರವು ಇದನ್ನು ಹೇಗೆಜಾರಿ ಮಾಡುತ್ತದೆ,ಇದು ಎಷ್ಟರಮಟ್ಟಿಗೆ ಕಾರ್ಯಸಾಧ್ಯಎನ್ನುವಬಗ್ಗೆ ಪ್ರಶ್ನೆಗಳು ಮೂಡಿವೆ
ಇತ್ತೀಚೆಗೆ ದೆಹಲಿಯಲ್ಲಿ ನಡೆದ ‘ಎಐ ಇಂಪ್ಯಾಕ್ಟ್ ಶೃಂಗಸಭೆ’ಯಲ್ಲಿ ಭಾಗವಹಿಸಿದ್ದ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಅವರು, 15 ವರ್ಷದವರೆಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳನ್ನು ನಿರ್ಬಂಧಿಸಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದರು. ಈ ವಿಚಾರದಲ್ಲಿ ಭಾರತವು ಫ್ರಾನ್ಸ್ ಮತ್ತು ಇತರ ದೇಶಗಳೊಂದಿಗೆ ಕೈಜೋಡಿಸಲಿದೆ ಎಂದೂ ಅವರು ಭರವಸೆ ವ್ಯಕ್ತಪಡಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಮ್ಯಾಕ್ರನ್ ಅವರ ಮಾತುಗಳಿಗೆ ಸಹಮತ ವ್ಯಕ್ತಪಡಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಕರ್ನಾಟಕ ಸರ್ಕಾರವು ಮಕ್ಕಳ ಮೊಬೈಲ್ ಬಳಕೆ ನಿರ್ಬಂಧಿಸುವ ವಿಚಾರದಲ್ಲಿ ಒಂದು ಹೆಜ್ಜೆ ಮುಂದಿಟ್ಟಿದೆ. 16 ವರ್ಷದವರೆಗಿನ ಮಕ್ಕಳ ಮೊಬೈಲ್ ಬಳಕೆಯ ಮೇಲೆ ನಿರ್ಬಂಧ ಹೇರುವುದರ ಬಗ್ಗೆ ಪರಿಶೀಲನೆ ನಡೆಸಲು ಸಮಿತಿಯನ್ನು ರಚಿಸಲಾಗುವುದು ಎಂದು ಸರ್ಕಾರ ಹೇಳಿದೆ.
ರಾಜ್ಯದಲ್ಲಿ ಮೊಬೈಲ್ ನಿರ್ಬಂಧದ ಅಗತ್ಯವನ್ನು ಪ್ರತಿಪಾದಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಆಸ್ಟ್ರೇಲಿಯಾದ ನಿದರ್ಶನವನ್ನು ಉಲ್ಲೇಖಿಸಿದ್ದಾರೆ. ಜಗತ್ತಿನಲ್ಲಿ ಮೊಬೈಲ್ ದುಷ್ಪರಿಣಾಮಗಳನ್ನು ತಡೆಯುವ ದಿಸೆಯಲ್ಲಿ ಕ್ರಮ ಕೈಗೊಂಡ ಮೊದಲ ದೇಶ ಆಸ್ಟ್ರೇಲಿಯಾ. ದೇಶದ 10ರಿಂದ 15 ವರ್ಷದವರೆಗಿನ ಶೇ 96ರಷ್ಟು ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದಾರೆ ಎಂದು, ಈ ಪೈಕಿ ಶೇ 10ರಷ್ಟು ಮಕ್ಕಳು ಹಾನಿಕಾರಕ ಮಾಹಿತಿ/ವಿಡಿಯೊ ಇತ್ಯಾದಿಗಳ ಸಂಪರ್ಕಕ್ಕೆ ಬಂದಿದ್ದಾರೆ ಎಂದು ಅಧ್ಯಯನವೊಂದು ಹೇಳಿತ್ತು. ಈ ಕಾರಣಕ್ಕೆ 16 ವರ್ಷದ ಒಳಗಿನ ಮಕ್ಕಳು ಕೆಲವು ಸಾಮಾಜಿಕ ಜಾಲತಾಣಗಳನ್ನು ಬಳಸುವುದು ನಿಷೇಧಿಸಿ 2025ರ ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾ ಸರ್ಕಾರ ಆದೇಶ ಹೊರಡಿಸಿತು.
ಮಕ್ಕಳ ಚಾಲ್ತಿಯಲ್ಲಿರುವ ಖಾತೆಗಳನ್ನು ಬಂದ್ ಮಾಡಲಾಗುವುದು ಮತ್ತು ಹೊಸ ಖಾತೆಗಳನ್ನು ತೆರೆಯುವುದನ್ನು ನಿರ್ಬಂಧಿಸಲಾಗುವುದು ಎಂದು ಘೋಷಿಸಿತು. ನಿಯಮದ ಮೀರಿದರೆ ಮಕ್ಕಳಿಗೆ, ಅವರ ಪೋಷಕರಿಗೆ ಯಾವುದೇ ಶಿಕ್ಷೆ ಇಲ್ಲ. ಬದಲಿಗೆ, ಸಾಮಾಜಿಕ ಜಾಲತಾಣಗಳ ಕಂಪನಿಗಳಿಗೆ ದಂಡ ವಿಧಿಸಲಾಗುತ್ತದೆ ಎಂದಿತು. ಪರಿಣಾಮವಾಗಿ, ಮೆಟಾ ಮತ್ತು ಇತರ ಕಂಪನಿಗಳು ಲಕ್ಷಾಂತರ ಮಕ್ಕಳ ಖಾತೆಗಳನ್ನು ನಿರ್ಬಂಧಿಸಿದವು. ವಯಸ್ಸು ಖಚಿತಪಡಿಸಿಕೊಳ್ಳುವುದು ಹೇಗೆ, ದತ್ತಾಂಶದ ಸುರಕ್ಷತೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಕಂಪನಿಗಳ ತಕರಾರುಗಳೂ ವ್ಯಕ್ತವಾಗಿವೆ. ಅದರ ಬೆನ್ನಲ್ಲೇ, ಸರ್ಕಾರದ ಕ್ರಮದಿಂದ ಹೆಚ್ಚಿನ ಪ್ರಯೋಜವೇನೂ ಇಲ್ಲ ಎನ್ನುವ ಮಾತುಗಳೂ ಕೇಳಿಬಂದಿವೆ. ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿಷೇಧಿಸುವುದಕ್ಕಿಂತ ಅದರ ಪರಿಣಾಮಕಾರಿ ಬಳಕೆಗೆ ಕ್ರಮ ಜರುಗಿಸಬೇಕಿತ್ತು ಎನ್ನುವ ಅಭಿಪ್ರಾಯ ಅಲ್ಲಿ ಬಲವಾಗಿದೆ.
ಚಿಲಿಯು ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸಿದೆ. 2026ರ ಶೈಕ್ಷಣಿಕ ವರ್ಷದಿಂದ ನಿಷೇಧವು ಜಾರಿಗೆ ಬರಲಿದೆ ಎಂದು ಸರ್ಕಾರ ಪ್ರಕಟಿಸಿದೆ. ದಕ್ಷಿಣ ಕೊರಿಯಾ ದೇಶದಾದ್ಯಂತ ಶಾಲೆಗಳಲ್ಲಿ ಮೊಬೈಲ್ ಫೋನ್‌ಗಳನ್ನು ಮತ್ತು ಸ್ಮಾರ್ಟ್ ಸಾಧನಗಳನ್ನು ನಿಷೇಧಿಸಿದೆ. 2026ರ ಮಾರ್ಚ್‌ನಿಂದ ನಿಷೇಧ ಜಾರಿಗೆ ಬರಲಿದೆ. ಫ್ರಾನ್ಸ್, ಬ್ರೆಜಿಲ್, ಹಂಗರಿ, ನೆದರ್ಲೆಂಡ್ಸ್, ಚೀನಾ ಶಾಲೆಗಳಲ್ಲಿ ಮೊಬೈಲ್ ಬಳಕೆಯನ್ನು ವಿವಿಧ ಹಂತಗಳಲ್ಲಿ ನಿಷೇಧಿಸಿವೆ.
ಆದರೆ, ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆ ನಿರ್ಬಂಧಿಸುವುದರ ಬಗ್ಗೆ ವಿವಿಧ ದೇಶಗಳಲ್ಲಿ ಅಧ್ಯಯನ– ಪ್ರಯೋಗಗಳು ನಡೆದಿದ್ದು, ಭಿನ್ನವಾದ ಫಲಿತಾಂಶ/ನಿಲುವುಗಳು ವ್ಯಕ್ತವಾಗಿವೆ. ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವುದು ಎಷ್ಟರ ಮಟ್ಟಿಗೆ ಕಾರ್ಯಸಾಧು ಎನ್ನುವ ಪ್ರಶ್ನೆ ಮೂಡಿದೆ. ಮೊಬೈಲ್ ನಿಷೇಧಕ್ಕಿಂತ ಅದರ ಪರಿಣಾಮಕಾರಿ ಬಳಕೆಗೆ ನಿಯಮ ರೂಪಿಸಬೇಕು; ಸಾಮಾಜಿಕ ಜಾಲತಾಣಗಳ ಬಳಕೆಯ ಮೇಲೆ ನಿಯಂತ್ರಣ ಹೇರಬೇಕು; ಮಕ್ಕಳು ಹಾನಿಕಾರಕ ವಿಷಯಗಳ ಸಂಪರ್ಕಕ್ಕೆ ಬಾರದಂತೆ ಕ್ರಮ ಜರುಗಿಸಬೇಕು ಎನ್ನುವುದು ತಜ್ಞರ ಅಭಿಪ್ರಾಯ.
ಡೆನ್ಮಾರ್ಕ್: 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸುವುದಕ್ಕೆ ನಿರ್ಬಂಧ ಹೇರುವ ಕಾನೂನು ತರಲಾಗುವುದು ಎಂದು ಡೆನ್ಮಾರ್ಕ್ ಸರ್ಕಾರ 2025ರ ನವೆಂಬರ್‌ನಲ್ಲಿ ಘೋಷಿಸಿದೆ. ಸರ್ಕಾರದ ಈ ಪ್ರಸ್ತಾವಕ್ಕೆ ಅಲ್ಲಿನ ರಾಜಕೀಯ ಪಕ್ಷಗಳು ಬೆಂಬಲಿಸಿವೆ. ಈ ವರ್ಷದ ಮಧ್ಯಭಾಗದಲ್ಲಿ ಹೊಸ ಕಾನೂನು ಜಾರಿಯಾಗುವ ನಿರೀಕ್ಷೆಯಿದೆ.
ಫ್ರಾನ್ಸ್: 2018ರಲ್ಲೇ ಶಾಲೆಗಳಲ್ಲಿ ಮಕ್ಕಳು ಫೋನ್ ಬಳಸುವುದನ್ನು ಫ್ರಾನ್ಸ್ ನಿರ್ಬಂಧಿಸಿದೆ. ಮಕ್ಕಳ ಸ್ಕ್ರೀನ್ ಟೈಮ್ ಅನ್ನು ಕಡಿಮೆ ಮಾಡುವ ಉದ್ದೇಶದಿಂದ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸಾಮಾಜಿಕ ಜಾಲತಾಣಗಳ ಬಳಸುವುದಕ್ಕೆ ನಿಷೇಧ ಹೇರುವ ಮಸೂದೆಯನ್ನು ಫ್ರಾನ್ಸ್‌ನ ಜನಪ್ರತಿನಿಧಿಗಳು ಅಂಗೀಕರಿಸಿದ್ದಾರೆ. ಮಸೂದೆ ಅಲ್ಲಿನ ಕೆಳಮನೆಯಲ್ಲಿ ಅಂಗೀಕಾರ ಆಗುವುದಕ್ಕೂ ಮುನ್ನ ಸೆನೆಟ್‌ನ ಒಪ್ಪಿಗೆ ಸಿಗಬೇಕಿದೆ.
ಜರ್ಮನಿ: 13ರಿಂದ 16 ವರ್ಷದೊಳಗಿನ ಮಕ್ಕಳು ಅವರ ಪೋಷಕರ ಅನುಮತಿ ಇದ್ದರೆ ಮಾತ್ರ ಸಾಮಾಜಿಕ ಜಾಲತಾಣಗಳನ್ನು ಬಳಸುವುದಕ್ಕೆ ಜರ್ಮನಿಯಲ್ಲಿ ಅವಕಾಶ ನೀಡಲಾಗಿದೆ.
16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳಿಂದ ದೂರ ಉಳಿಯುವಂತೆ ಮಾಡುವ ನಿಯಮ ರೂಪಿಸುವ ಬಗ್ಗೆ ಸರ್ಕಾರ ಚರ್ಚೆ ನಡೆಸಿದೆ.
ಗ್ರೀಸ್: 15 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸದಂತೆ ಮಾಡಲು ಕಾನೂನು ರೂಪಿಸುವ ಅಂತಿಮ ಹಂತದಲ್ಲಿ ಗ್ರೀಸ್ ಆಡಳಿತ ಇದೆ.
ಮಲೇಷ್ಯಾ: ಪ್ರೌಢಶಾಲೆ ಹಂತದವರೆಗಿನ ಮಕ್ಕಳು (16 ವರ್ಷ) ಸಾಮಾಜಿಕ ಜಾಲತಾಣಗಳನ್ನು ಬಳಸುವುದಕ್ಕೆ ನಿರ್ಬಂಧ ಹೇರುವುದಾಗಿ ಮಲೇಷ್ಯಾ ಸರ್ಕಾರ 2025ರ ನವೆಂಬರ್‌ನಲ್ಲಿ ಹೇಳಿತ್ತು. ಈ ವರ್ಷ ಅದನ್ನು ಜಾರಿಗೊಳಿಸುವ ಯೋಚನೆಯಲ್ಲಿದೆ.
ಸ್ಲೊವೇನಿಯಾ: 15 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿರ್ಬಂಧಿಸುವುದಕ್ಕಾಗಿ ಕರಡು ಶಾಸನ ಸಿದ್ಧಪಡಿಸುತ್ತಿದೆ.
ಸ್ಪೇನ್: 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಕೆ ತಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪೇನ್ ಪ್ರಧಾನಿ ಹೇಳಿದ್ದಾರೆ. ಆದರೆ, ಅದನ್ನು ಜಾರಿ ಮಾಡಬೇಕಾದರೆ ಸಂಸತ್ತಿನ ಒಪ್ಪಿಗೆ ಬೇಕು.
ಬ್ರಿಟನ್: ಮಕ್ಕಳು ಸಾಮಾಜಿಕ ಜಾಲತಾಣಗಳಿಂದ ದೂರ ಉಳಿಯುವಂತೆ ಮಾಡಲು ಕಾನೂನು ರೂಪಿಸಲು ಬ್ರಿಟನ್ ಕೂಡ ಮುಂದಾಗಿದೆ. 2023ರಲ್ಲಿ ಆನ್‌ಲೈನ್ ಸುರಕ್ಷತಾ ಕಾಯ್ದೆಯನ್ನು ಅಲ್ಲಿ ರೂಪಿಸಲಾಗಿತ್ತು. ಕಳೆದ ವರ್ಷದಿಂದ ಇದು ಜಾರಿಗೆ ಬಂದಿದೆ. ಇದರ ಅಡಿಯಲ್ಲಿ ಸಾಮಾಜಿಕ ಜಾಲತಾಣಗಳಿಗೆ ಕಠಿಣ ಮಾನದಂಡಗಳನ್ನು ನಿಗದಿಪಡಿಸಲಾಗಿದೆ. ಮಕ್ಕಳಿಗೆ ಅಪಾಯಕಾರಿ ವಿಷಯಗಳ ಸಂಪರ್ಕ ತಪ್ಪಿಸುವುದು ಸೇರಿದಂತೆ ಹಲವು ನಿರ್ಬಂಧಗಳು ಈ ಕಾನೂನಿನಲ್ಲಿವೆ. ಆದರೆ, ಸಾಮಾಜಿಕ ಜಾಲತಾಣಗಳ ಬಳಕೆಗೆ ವಯಸ್ಸಿನ ಮಿತಿ ನಿಗದಿಪಡಿಸಲಾಗಿಲ್ಲ.
ಇಟಲಿ: 14 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣ ಗಳನ್ನು ಬಳಸಲು ಪೋಷಕರ ಅನುಮತಿ ಇಟಲಿಯಲ್ಲಿ ಬೇಕು.
ನಾರ್ವೆ: 15 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳನ್ನು ನಿರ್ಬಂಧಿಸುವ ಸಂಬಂಧ ಕಾನೂನು ರೂಪಿಸಲು ನಾರ್ವೆ ಸರ್ಕಾರ ಹೊರಟಿದೆ. ಈಗ 13 ವರ್ಷದೊಳಗಿನ ಮಕ್ಕಳು ಈ ಜಾಲತಾಣಗಳನ್ನು ಬಳಸಲು ಪೋಷಕರ ಸಮ್ಮತಿ ಬೇಕು.
ಅಮೆರಿಕ: ಹಲವು ರಾಜ್ಯಗಳು ಮಕ್ಕಳು ಜಾಲತಾಣ ಬಳಸುವುದಕ್ಕೆ ಕಡಿವಾಣ ಹಾಕಿವೆ. ಮಕ್ಕಳ ಆನ್‌ಲೈನ್ ಖಾಸಗಿತನ ರಕ್ಷಣಾ ಕಾಯ್ದೆ ಜಾರಿಯಲ್ಲಿದ್ದು, ಪೋಷಕರ ಅನುಮತಿ ಇಲ್ಲದೆ 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ವೈಯಕ್ತಿಕ ಮಾಹಿತಿಗಳನ್ನು ಕಂಪನಿಗಳು ಸಂಗ್ರಹಿಸುವಂತಿಲ್ಲ.
ಏಕೆ ನಿರ್ಬಂಧಿಸಬೇಕು?
ಮಕ್ಕಳು ಮೊಬೈಲ್ ಬಳಕೆಯ ವ್ಯಸನಕ್ಕೆ ಸಿಲುಕಿದ್ದಾರೆ ಎಂಬುದು ಪೋಷಕರು, ಶಿಕ್ಷಕರ ಅಸಮಾಧಾನ.
ಚಿಕ್ಕವಯಸ್ಸಿನಲ್ಲಿಯೇ ಮಕ್ಕಳು ಹಾನಿಕಾರಕ ವಿಷಯಗಳ ಸಂಪರ್ಕಕ್ಕೆ ಬರಲು ಮೊಬೈಲ್ ಕಾರಣವಾಗುತ್ತಿದೆ. ಮೊಬೈಲ್ ಇಂಟರ್‌ನೆಟ್ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಮಕ್ಕಳ ಸುರಕ್ಷೆಗೆ ಭಂಗ ಉಂಟಾಗಿದೆ. ಹಲವು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಇತರ ದೌರ್ಜನ್ಯಗಳು ನಡೆದಿವೆ
ಮೊಬೈಲ್ ಫೋನ್‌ಗಳು ಮಕ್ಕಳ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಮಕ್ಕಳ ಓದುವ ಅವಧಿಯನ್ನು ಆವರಿಸಿವೆ; ಶೈಕ್ಷಣಿಕ ಸಾಧನೆ, ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತಿವೆ
ಮೊಬೈಲ್‌ನ ಅತಿಯಾದ ಬಳಕೆಯು ಮಕ್ಕಳ ದೈಹಿಕ, ಮಾನಸಿಕ ಬೆಳವಣಿಗೆಗೆ ತೊಡಕಾಗಿದ್ದು, ವರ್ತನೆಗೆ ಸಂಬಂಧಿಸಿದ ಸಮಸ್ಯೆಗಳಿಗೂ ಕಾರಣವಾಗುತ್ತಿದೆ; ಸಾಮಾಜಿಕ ಸಂವಹನ, ಸಂಬಂಧಗಳಿಗೆ ಅಡ್ಡಿಯಾಗಿದೆ
ಮೊಬೈಲ್ ಗೇಮಿಂಗ್ ಚಟ ಹೆಚ್ಚಾಗುತ್ತಿದ್ದು, ಮಕ್ಕಳು ಸದಾಕಾಲ ಮೊಬೈಲ್ ಹಿಡಿದಿರುತ್ತಾರೆ
ಮಕ್ಕಳು ಮೊಬೈಲ್ ಬಳಸುವುದನ್ನು ಹೇಗೆ ನಿರ್ಬಂಧಿಸಲಾಗುತ್ತದೆ ಎಂಬ ಪ್ರಶ್ನೆಯೂ ಈಗ ಉದ್ಭವವಾಗಿದೆ.
ಡಿಜಿಟಲ್ ತಂತ್ರಜ್ಞಾನ ಮುಂಚೂಣಿಯಲ್ಲಿರುವ ಈ ಕಾಲ ಘಟ್ಟದಲ್ಲಿ, ಶಿಕ್ಷಣ ಕ್ಷೇತ್ರವೂ ಅದನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಿದೆ
ಕೋವಿಡ್ ಸಾಂಕ್ರಾಮಿಕದ ನಂತರ ಮೊಬೈಲ್ ಫೋನ್‌ಗಳು ಶಿಕ್ಷಣ ವ್ಯವಸ್ಥೆಯ ಅನಿವಾರ್ಯ ಭಾಗ ಎನ್ನುವಂತಾಗಿವೆ. ಆನ್‌ಲೈನ್ ತರಗತಿಗಳು ಹೆಚ್ಚು ನಡೆಯುತ್ತಿವೆ. ಪಠ್ಯದ ವಿವರಗಳು, ಪಠ್ಯಕ್ಕೆ ಸಂಬಂಧಿಸಿದ ವಿಡಿಯೊಗಳು, ಅಸೈನ್‌ಮೆಂಟ್‌ಗಳು ಹೀಗೆ ಪಾಠಕ್ಕೆ ಸಂಬಂಧಿಸಿದ ವಿಷಯಗಳನ್ನು ಶಿಕ್ಷಕರು ಮೊಬೈಲ್‌ಗಳಲ್ಲೇ ಮಕ್ಕಳಿಗೆ ಅಥವಾ ಅವರ ಪೋಷಕರಿಗೆ ಕಳುಹಿಸುತ್ತಾರೆ
ಗ್ರಾಮೀಣ ಭಾಗದವರು, ಅಂಗವಿಕಲರು, ಸಮಾಜದ ಅಂಚಿನ ವರ್ಗಗಳಿಗೆ ಸೇರಿದ ಮಕ್ಕಳು ಕೂಡ ಕಲಿಕೆಯ ಉದ್ದೇಶಕ್ಕೆ ಮೊಬೈಲ್‌ಗಳನ್ನು ಬಳಸುತ್ತಿದ್ದಾರೆ. ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಕಂಪ್ಯೂಟರ್, ಲ್ಯಾಪ್‌ಟಾಪ್‌ಗಳನ್ನು ಖರೀದಿಸುವ ಶಕ್ತಿ ಇರುವುದಿಲ್ಲ. ಎಲ್ಲದಕ್ಕೂ ಮೊಬೈಲನ್ನೇ ಅವರು ಅವಲಂಬಿಸಿದ್ದಾರೆ. ಮೊಬೈಲ್ ನಿಷೇಧ ಅಥವಾ ನಿರ್ಬಂಧ ಅವರ ಕಲಿಕೆಯ ಅವಕಾಶವನ್ನು ಕಸಿದುಕೊಳ್ಳಬಹುದು
ನಿಯಂತ್ರಿತ ಮೊಬೈಲ್ ಬಳಕೆಗೆ ಒತ್ತು ಕೊಡಬಹುದು ಎಂಬುದು ಕೆಲವು ಶಿಕ್ಷಣ ತಜ್ಞರ ಅಭಿಪ್ರಾಯ
‘ಯುನಿಸೆಫ್’ ಹೇಳುವುದೇನು?
ಮಕ್ಕಳ ಆನ್‌ಲೈನ್ ಸುರಕ್ಷತೆಯ ಬಗ್ಗೆ ರಾಷ್ಟ್ರಗಳು ಕ್ರಮ ಕೈಗೊಳ್ಳುತ್ತಿರುವುದು ಸ್ವಾಗತಾರ್ಹವಾದರೂ, ಸಾಮಾಜಿಕ ಜಾಲತಾಣಗಳನ್ನು ಸಂಪೂರ್ಣವಾಗಿ ನಿರ್ಬಂಧಿಸುವುದು ತಿರುಗುಬಾಣವಾಗಬಹುದು
ನಗರಗಳಿಂದ ದೂರವಿರುವ, ಪ್ರತ್ಯೇಕವಾಗಿರುವ ಅಥವಾ ಅಂಚಿನ ಸಮುದಾಯದ ಹಲವು ಮಕ್ಕಳಿಗೆ ಸಾಮಾಜಿಕ ಜಾಲತಾಣಗಳು ಕಲಿಯುವಿಕೆಗೆ, ಹೊರಜಗತ್ತಿನೊಂದಿಗೆ ಸಂಪರ್ಕ ಸಾಧಿಸಲು, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ವೇದಿಕೆಯಾಗಿವೆ
ಮಕ್ಕಳಿಗೆ ಸುರಕ್ಷಿತವಾದ, ಎಲ್ಲರನ್ನೂ ಒಳಗೊಂಡ ಮತ್ತು ಮಕ್ಕಳ ಹಕ್ಕುಗಳನ್ನು ರಕ್ಷಿಸುವಂತಹ ಡಿಜಿಟಲ್ ವಾತಾವರಣವನ್ನು ಸೃಷ್ಟಿಸಲು ಸರ್ಕಾರಗಳು, ನಿಯಂತ್ರಕರು ಮತ್ತು ತಂತ್ರಜ್ಞಾನ ಕಂಪನಿಗಳು ಕ್ರಮ ಕೈಗೊಳ್ಳಬೇಕು
ಮಕ್ಕಳ ಪೋಷಕರಲ್ಲಿ ಡಿಜಿಟಲ್ ಸಾಕ್ಷರತೆಯನ್ನು ಹೆಚ್ಚು ಮಾಡಲು ಕ್ರಮ ಕೈಗೊಳ್ಳಬೇಕು
ಯುನಿಸೆಫ್ ಲೋಗೊ
ಭಾರತದಲ್ಲಿ ಆಂಧ್ರಪ್ರದೇಶ ಸರ್ಕಾರವು ಈ ದಿಸೆಯಲ್ಲಿ ಕಾರ್ಯೋನ್ಮುಖವಾದ ಮೊದಲ ರಾಜ್ಯವಾಗಿದೆ. ಮಕ್ಕಳು ಸಾಮಾಜಿಕ ಜಾಲತಾಣ ಬಳಸುವುದಕ್ಕೆ ನಿಯಂತ್ರಣ ಹೇರಲು ಮುಂದಾಗಿರುವ ತೆಲುಗು ದೇಶಂ ಪಕ್ಷದ ನೇತೃತ್ವದ ಸರ್ಕಾರವು ಈ ಸಂಬಂಧ ಚಾಲ್ತಿಯಲ್ಲಿರುವ ಕಾನೂನುಗಳನ್ನು ಪರಿಶೀಲಿಸಲು ಸಚಿವ ನಾರಾ ಲೋಕೇಶ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದೆ. ಗುಜರಾತ್ ರಾಜ್ಯವೂ ಈ ದಿಸೆಯಲ್ಲಿ ನಿಯಮ ರೂಪಿಸಲಾಗುವುದು ಎಂದಿದೆ.
ಆಧಾರ: ಯುನಿಸೆಫ್ ವೆಬ್‌ಸೈಟ್, ಬಿಬಿಸಿ,⇒ಟೆಕ್‌ಕ್ರಂಚ್.ಕಾಂ,ಮಾಧ್ಯಮ ವರದಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.