
ತಿ.ನರಸೀಪುರದ ಕೆಎಸ್‌ಐಸಿ ನೂಲು ತೆಗೆಯುವ ಕಾರ್ಖಾನೆಯ ಒಂದು ನೋಟ
ಪ್ರಜಾವಾಣಿ ಚಿತ್ರ/ಅನೂಪ್ ರಾಘ. ಟಿ.
ಪಾರಂಪರಿಕ ಹಿರಿಮೆಯ ಜೊತೆಗೆ ಶ್ರೀಮಂತಿಕೆಯ ಗರಿಮೆ ಹೊಂದಿರುವ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತದ (ಕೆಎಸ್‌ಐಸಿ) ರೇಷ್ಮೆ ನೂಲು ತೆಗೆಯುವ ಘಟಕ ಮೈಸೂರು ಜಿಲ್ಲೆಯ ತಿ.ನರಸೀಪುರದ ಕಬಿನಿ ನದಿಯ ದಂಡೆಯಲ್ಲಿದೆ. ಕ್ರೀಡಾಂಗಣ ನಿರ್ಮಾಣದ ಉದ್ದೇಶಕ್ಕಾಗಿ ಅದರ ಆವರಣದ ಅರ್ಧದಷ್ಟು ಭಾಗವನ್ನು ಜಿಲ್ಲಾಡಳಿತವು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ವರ್ಗಾಯಿಸಿದೆ. ಸರ್ಕಾರದ ಈ ಕ್ರಮದಿಂದ ಐತಿಹಾಸಿಕ ಕಾರ್ಖಾನೆ ಮುಚ್ಚುವ ಆತಂಕ ಎದುರಾಗಿದೆ. ಇದು ರೇಷ್ಮೆ ಸೀರೆ ತಯಾರಿಕೆಯ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದ್ದು, ‘ಮೈಸೂರು ರೇಷ್ಮೆ ಸೀರೆ’ ಎಂಬ ಬ್ರ್ಯಾಂಡ್‌ನ ಹೊಳಪು ಮಾಸುವ ಕಳವಳ ವ್ಯಕ್ತವಾಗಿದೆ.
ಹೂವಿನಂತೆ ಕೋಮಲ, ಧರಿಸಲು ಹಗುರವಾದ ಗುಣದಿಂದ ಮೈಸೂರು ರೇಷ್ಮೆ ಸೀರೆ ಅಂತರರಾಷ್ಟ್ರೀಯ ಖ್ಯಾತಿ ಪಡೆದಿದೆ. ಪಾರಂಪರಿಕ ಹಿರಿಮೆಯ ಜೊತೆಗೆ ಶ್ರೀಮಂತಿಕೆಯ ಗರಿಮೆ ಹೊಂದಿರುವ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತದ (ಕೆಎಸ್‌ಐಸಿ) ರೇಷ್ಮೆ ನೂಲು ತೆಗೆಯುವ ಘಟಕ ಮೈಸೂರು ಜಿಲ್ಲೆಯ ತಿ.ನರಸೀಪುರದ ಕಬಿನಿ ನದಿಯ ದಂಡೆಯಲ್ಲಿದೆ. ಕ್ರೀಡಾಂಗಣ ನಿರ್ಮಾಣದ ಉದ್ದೇಶಕ್ಕಾಗಿ ಅದರ ಆವರಣದ ಅರ್ಧದಷ್ಟು ಭಾಗವನ್ನು ಜಿಲ್ಲಾಡಳಿತವು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ವರ್ಗಾಯಿಸಿದೆ. ಸರ್ಕಾರದ ಈ ಕ್ರಮದಿಂದ ಐತಿಹಾಸಿಕ ಕಾರ್ಖಾನೆ ಮುಚ್ಚುವ ಆತಂಕ ಎದುರಾಗಿದೆ. ಇದು ರೇಷ್ಮೆ ಸೀರೆ ತಯಾರಿಕೆಯ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದ್ದು, ‘ಮೈಸೂರು ರೇಷ್ಮೆ’ ಎಂಬ ಬ್ರ್ಯಾಂಡ್‌ನ ಹೊಳಪು ಮಾಸುವ ಕಳವಳ ವ್ಯಕ್ತವಾಗಿದೆ.
ಶುದ್ಧವಾದ ನೀರಿನ (ನದಿಯ) ಕೊರತೆ ಮತ್ತು ಕೊಳವೆಬಾವಿ ನೀರಿನ ಬಳಕೆ ಕಾರಣ ಚಾಮರಾಜನಗರ, ಕೊಳ್ಳೇಗಾಲ ಮತ್ತು ದಾವಣಗೆರೆಯಲ್ಲಿದ್ದ ನಿಗಮದ ರೇಷ್ಮೆ ನೂಲು ತೆಗೆಯುವ ಕಾರ್ಖಾನೆಗಳು ಮುಚ್ಚಿದ್ದು, ಈಗ ಉಳಿದಿರುವುದು 1912ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿದ ತಿ.ನರಸೀಪುರ ಪಟ್ಟಣದ ಬೈರಾಪುರದಲ್ಲಿರುವ ರೇಷ್ಮೆ ನೂಲು ತೆಗೆಯುವ ಕಾರ್ಖಾನೆ ಮಾತ್ರ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ವರುಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಇದೂ ಮುಚ್ಚಿದರೆ ಮೈಸೂರು ಮತ್ತು ಚನ್ನಪಟ್ಟಣದಲ್ಲಿರುವ ಕೆಎಸ್‌ಐಸಿ ನೇಯ್ಗೆ ಕಾರ್ಖಾನೆಗಳು ಖಾಸಗಿ ನೂಲು ತೆಗೆಯುವ ಕಾರ್ಖಾನೆಗಳನ್ನು ಅವಲಂಬಿಸಬೇಕು. ಅದರಿಂದ ನಿಗಮಕ್ಕೆ ಹೊರೆಯಾಗುವುದು ಖಚಿತ ಎನ್ನುತ್ತಾರೆ ಇಲ್ಲಿನ ಕಾರ್ಮಿಕ ಮುಖಂಡರು.
ಕನಸಾದ ಮೇಲ್ದರ್ಜೆ: ತಿ.ನರಸೀಪುರ ಕಾರ್ಖಾನೆಯನ್ನು ಮೇಲ್ದರ್ಜೆಗೇರಿಸಲು ನಿಗಮವು ಎಲ್ಲ ಸಿದ್ಧತೆ ಮಾಡಿತ್ತು. ಇದೀಗ ಕ್ರೀಡಾಂಗಣಕ್ಕಾಗಿ ಇಡೀ ಆವರಣವನ್ನು ಎರಡು ಹೋಳು ಮಾಡಲಾಗಿದೆ. ನೀರು ಸಂಸ್ಕರಣಾ ಘಟಕ, ಬೂದಿ ನಿರ್ವಹಣೆ, ಕ್ಯಾಂಟೀನ್, ನೂಲು ಸಂಗ್ರಹ ಉಗ್ರಾಣ ಸ್ಥಾಪಿಸಲು ನೀಲನಕ್ಷೆಯನ್ನು ತಯಾರಿಸಿದ್ದ ನಿಗಮವು, ಚೀನಾದಿಂದ ಮತ್ತೆರಡು 400 ಎಂಡ್ ಆಟೊಮ್ಯಾಟಿಕ್ ರೀಲಿಂಗ್ ಮಷೀನ್ ಖರೀದಿಗೆ ಯೋಜನೆ ಹಾಕಿಕೊಂಡಿತ್ತು. ಸರ್ಕಾರದ ನಿರ್ದೇಶನದಂತೆ ಕಂದಾಯ ಇಲಾಖೆಯು ನಿಗಮದಿಂದ ಕ್ರೀಡಾ ಇಲಾಖೆಗೆ 5 ಎಕರೆ 8 ಗುಂಟೆ ಜಾಗವನ್ನು ವರ್ಗಾಯಿಸಿದೆ. ಇದೀಗ ಕಾರ್ಖಾನೆಯನ್ನು ಮೇಲ್ದರ್ಜೆಗೇರಿಸುವ ಈ ಎಲ್ಲ ಯೋಜನೆಗಳು ತಲೆಕೆಳಕಾಗಿವೆ.
‘192 ಕಾರ್ಮಿಕರಿದ್ದು, ಹೊಸ ಎರಡು ಯಂತ್ರಗಳು ಬಂದರೆ 35 ಕಾರ್ಮಿಕರ ನೇಮಕ ಆಗಲಿದೆ. ಎಆರ್‌ಎಂ ಯಂತ್ರಗಳು ಬಂದರೆ ಮತ್ತೆ 80 ಕಾರ್ಮಿಕರಿಗೆ ಕೆಲಸ ನೀಡಬಹುದು. ಸದ್ಯ 400 ಎಂಡ್‌ನ 2 ಯಂತ್ರಗಳಿದ್ದು, ಮತ್ತೆರಡು ಬಂದರೆ ಕಾರ್ಮಿಕರ ಸಂಖ್ಯೆ 350ಕ್ಕೆ ಹೆಚ್ಚಲಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
‘ರೇಷ್ಮೆ ಗೂಡುಗಳ ತ್ಯಾಜ್ಯದಿಂದ ಹಾರ, ಆಲಂಕಾರಿಕ ವಸ್ತುಗಳನ್ನು ತಯಾರಿಸುವ ಘಟಕಗಳನ್ನು ಆರಂಭಿಸುವ ಆಲೋಚನೆ ನಿಗಮಕ್ಕಿದೆ. ಸರ್ಕಾರ ಅವಕಾಶ ಕೊಟ್ಟರೆ ಮತ್ತಷ್ಟು ಉದ್ಯೋಗಾವಕಾಶ ಸೃಷ್ಟಿಸಲಿದೆ’ ಎಂದರು.
552 ಮರ ಹನನ: ಕ್ರೀಡಾಂಗಣಕ್ಕೆ ನೀಡಲಾದ ಜಾಗದಲ್ಲಿ 552 ಮರಗಳಿದ್ದು, ಕಾರ್ಖಾನೆಯನ್ನು ತಂಪಾಗಿರಿಸಿದ್ದಲ್ಲದೇ ಬಾಯ್ಲರ್ ಹಾಗೂ ಪೈಪ್‌ಗಳಿಂದ ಆಗುವ ತಾಪವನ್ನು ಶಮನ ಮಾಡುತ್ತಿದ್ದವು. ಕಾರ್ಖಾನೆಯ ಮಾಲಿನ್ಯವನ್ನೂ ತಗ್ಗಿಸುತ್ತಿದ್ದವು. ಈ ಎಲ್ಲ ಮರಗಳು ಹನನವಾದರೆ ಇಡೀ ವಾತಾವರಣ ಬಿಸಿಯಾಗಲಿದೆ. ಕಾರ್ಮಿಕರ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಉಂಟಾಗಲಿದೆ.
‘ನೂಲು ತೆಗೆಯುವ ಘಟಕವಾದ್ದರಿಂದ ಸೂಕ್ಷ್ಮ ರೇಷ್ಮೆ ಕಣಗಳು ಶ್ವಾಸಕೋಶಕ್ಕೆ ಪ್ರವೇಶಿಸುತ್ತವೆ. ಈಗಾಗಲೇ ಎಷ್ಟೋ ಮಂದಿ ಅಸ್ತಮಾ ತೊಂದರೆ ಅನುಭವಿಸುತ್ತಿದ್ದಾರೆ. ಮರಗಳ ಹನನ ನಡೆದರೆ ಶುದ್ಧಗಾಳಿಯೂ ಸಿಗುವುದಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಬಯಸದ, ಪ್ರತಿಭಟನೆನಿರತ ಕಾರ್ಮಿಕರೊಬ್ಬರು ಅಳಲು ತೋಡಿಕೊಂಡರು.
ಕಲ್ಲಿದ್ದಲು ಸಾಗಾಟಕ್ಕೆ ತೊಂದರೆ: ಬಾಯ್ಲರ್ ಘಟಕವು ಕಾರ್ಖಾನೆಯ ಹಿಂಭಾಗದಲ್ಲಿದ್ದು, ಅಲ್ಲಿಗೆ ಲಾರಿಗಳು ಪ್ರವೇಶಿಸಲು ಜಾಗವಿಲ್ಲದಂತಾಗುತ್ತದೆ. ಕಾರ್ಖಾನೆಗೆ ನಿತ್ಯ 4.5 ಟನ್ ಕಲ್ಲಿದ್ದಲು ಬೇಕು. ಅದನ್ನು ಅರ್ಧ ಎಕರೆ ಜಾಗದಲ್ಲಿ ಸಂಗ್ರಹಿಸಲಾಗುತ್ತಿದ್ದು, ಬಳಸಿದ ಕಲ್ಲಿದ್ದಲಿನ ಬಿಸಿ ಬೂದಿಯನ್ನೂ ಅಲ್ಲಿಯೇ ಹಾಕಲಾಗುತ್ತಿದೆ. ಅದರ ಹರಾಜು ವರ್ಷಕ್ಕೊಮ್ಮೆ ನಡೆಯುತ್ತಿದೆ. ಹೀಗಾಗಿ ಹೆಚ್ಚು ಜಾಗವು ಬೇಕಾಗಿದೆ.
ನೀಲನಕ್ಷೆ ಇಲ್ಲ: ಕಾರ್ಖಾನೆಗೆ ಕಬಿನಿ ನದಿಯಿಂದ ನೀರು ಸರಬರಾಜು ಮಾಡುವ ಪೈಪ್‌ಲೈನ್ ಕ್ರೀಡಾಂಗಣ ನಿರ್ಮಿಸಲು ಉದ್ದೇಶಿಸಿರುವ ಜಾಗದ ಮಧ್ಯಭಾಗದಲ್ಲಿಯೇ ಹಾದುಹೋಗಿರುವ ಅನುಮಾನವಿದೆ. 1912ರ ನೀಲನಕ್ಷೆ ಪ್ರಸ್ತುತ ಲಭ್ಯವಿಲ್ಲ. ಕಾಮಗಾರಿ ಆರಂಭಿಸಿದರೆ ಜೆಸಿಬಿಯಿಂದ ಸ್ವಲ್ಪವೇ ಹಾನಿಯಾದರೂ ನೀರಿನ ಅಭಾವದಿಂದ ಕಾರ್ಖಾನೆ ನಿಲ್ಲಿಸಬೇಕಾಗುತ್ತದೆ. ಕೊಳವೆಬಾವಿ ನೀರನ್ನು ಬಳಸಿದರೆ ಯಂತ್ರಗಳು ಹಾಳಾಗಲಿವೆ. ನೂಲು ಗಟ್ಟಿಯಾಗಿ ಹಾಗೂ ಹಗುರವಾಗಿ ಬರುವುದಿಲ್ಲ ಎನ್ನುತ್ತಾರೆ ಇಲ್ಲಿನ ಅಧಿಕಾರಿಗಳು.
‘ವಾತಾವರಣ ಕಲುಷಿತವಾಗಿದ್ದು, ಹೆಚ್ಚು ಮರಗಳನ್ನು ನೆಡಬೇಕು. ನೀರು ಪುನರ್ಬಳಕೆ ಘಟಕ ಆರಂಭಿಸಬೇಕೆಂದು ಕಾರ್ಖಾನೆಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿದೆ’ ಎಂದರು.
‘2025ರ ಫೆಬ್ರುವರಿಯಿಂದಲೇ ಕ್ರೀಡಾಂಗಣಕ್ಕೆ ಜಾಗ ವರ್ಗಾಯಿಸುವ ಪ್ರಕ್ರಿಯೆ ನಡೆದಿದೆ. ಸರ್ವೆಯನ್ನು ಈಚೆಗೆ ಮುಗಿಸಿದ್ದಾರೆ. ಆಳೆತ್ತರದ ಗೋಡೆ ನಿರ್ಮಾಣ ಮಾಡುತ್ತೇವೆ ಎಂದಿದ್ದಾರೆ. ಪಕ್ಕದಲ್ಲೇ ಬಾಯ್ಲರ್‌ಗಳಿವೆ. ಅಪಘಾತವಾದರೆ ಯಾರು ಹೊಣೆ? ಯಾರ ಬಳಿ ಮನವಿ ಮಾಡುವುದೆಂದು ತಿಳಿಯುತ್ತಿಲ್ಲ. ಒಮ್ಮೆ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಜಾಗ ನೋಡಿಕೊಂಡು ಹೋದರು. ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಕ್ರೀಡಾಂಗಣ ಮಾಡಬಹುದೆಂದು ವರದಿ ಕೊಟ್ಟಿದ್ದಾರಂತೆ. ಕಾರ್ಮಿಕರ ಮನವಿಯನ್ನು ಆಲಿಸುತ್ತಿಲ್ಲ’ ಎನ್ನುವುದು ಕಾರ್ಮಿಕರ ದೂರು.
‘ಕಾರ್ಖಾನೆ ಸ್ಥಾಪನೆಯಾದಾಗ ಯಾವ ವಸತಿ ಪ್ರದೇಶವೂ ಸುತ್ತ ಇರಲಿಲ್ಲ. ನಗರಸಭೆ ಮತ್ತು ತಾಲ್ಲೂಕು ಆಡಳಿತವು ವಸತಿ ಬಡಾವಣೆಗಳಿಗೆ ಅನುಮತಿ ಹಾಗೂ ಮಂಜೂರಾತಿ ನೀಡಿದ್ದೇಕೆ? 15–20 ವರ್ಷಗಳಿಂದ ಈಚೆಗೆ ಅಕ್ರಮವಾಗಿ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಅವರನ್ನೇ ಬೇರೆಡೆಗೆ ಸ್ಥಳಾಂತರಿಸಲಿ’ ಎಂದರು.
ಸಂಸದ ಮನವಿ: ಕ್ರೀಡಾಂಗಣ ನಿರ್ಮಾಣಕ್ಕೆ ಕೆಎಸ್‌ಐಸಿ ಜಾಗ ನೀಡಿರುವ ಸರ್ಕಾರದ ತೀರ್ಮಾನ ಮರುಪರಿಶೀಲಿಸುವಂತೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಕಾರ್ಖಾನೆ ಸ್ಥಗಿತಗೊಳ್ಳುವ ಆತಂಕ
ಅವೈಜ್ಞಾನಿಕ ಕ್ರೀಡಾಂಗಣ ನಿರ್ಮಾಣದಿಂದ ಭವಿಷ್ಯದಲ್ಲಿ ಕಾರ್ಖಾನೆ ಮುಚ್ಚುವ ಆತಂಕದಲ್ಲಿರುವ ಕಾರ್ಮಿಕರು ರೈತ, ಕಾರ್ಮಿಕ ಸಂಘಟನೆಗಳ ಬೆಂಬಲದೊಂದಿಗೆ ಮುಷ್ಕರ ಆರಂಭಿಸಿದ್ದು, 12ನೇ ದಿನಕ್ಕೆ ಕಾಲಿಟ್ಟಿದೆ. ನೂಲು ತೆಗೆಯದೇ ಇರುವುದರಿಂದ ಸೀರೆಗಳ ತಯಾರಿಕೆಯ ಮೇಲೆ ಪರಿಣಾಮ ಬೀರಿದ್ದು, ಮಳಿಗೆಗಳಿಗೆ ಅಗತ್ಯ ಪ್ರಮಾಣದಲ್ಲಿ ಸೀರೆಗಳ ಪೂರೈಕೆ ಆಗುತ್ತಿಲ್ಲ. ಮೈಸೂರು ಮತ್ತು ಚನ್ನಪಟ್ಟಣದಲ್ಲಿನ ಮೀಸಲು ನೂಲು ದಾಸ್ತಾನು 15 ದಿನಕ್ಕೆ ಸಾಕಾಗುತ್ತದೆ. ನೂಲು ತೆಗೆಯುವ ಈ ಕಾರ್ಖಾನೆ ಮುಷ್ಕರದಿಂದ ಕೆಲವೇ ದಿನಗಳಲ್ಲಿ ಇಡೀ ನಿಗಮದ ಕಾರ್ಖಾನೆಗಳು ಸ್ಥಗಿತಗೊಳ್ಳಲಿವೆ. ವಾರ್ಷಿಕ ₹100 ಕೋಟಿಯಷ್ಟು ಲಾಭದಲ್ಲಿರುವ ಕೆಎಸ್‌ಐಸಿ ನಷ್ಟದ ಹಾದಿಗೆ ಹೊರಳಲಿದೆ. ಅಲ್ಲದೇ, ‘ಜಿಐ ಟ್ಯಾಗ್’ (ಭೌಗೋಳಿಕ ಸೂಚ್ಯಂಕ) ಶ್ರೇಯದ ಗರಿಮೆ ಕಮರಲಿದೆ ಎಂಬ ಆತಂಕವೂ ಕಾಡುತ್ತಿದೆ.
ಜೀವವೈವಿಧ್ಯದ ತಾಣ
13 ಎಕರೆ ವಿಸ್ತೀರ್ಣದ ಕೆಎಸ್‌ಐಸಿ ನೂಲು ತೆಗೆಯುವ ಕಾರ್ಖಾನೆ ಆವರಣದಲ್ಲಿ ಕ್ರೀಡಾ ಇಲಾಖೆಗೆ ನೀಡಿರುವ 5 ಎಕರೆ 8 ಗುಂಟೆ ಪ್ರದೇಶದಲ್ಲಿ 80 ವರ್ಷಕ್ಕೂ ಹಳೆಯ 552 ಮರಗಳಿವೆ. ‘ಜೀವವೈವಿಧ್ಯ’ ಸಮೀಕ್ಷೆ ನಡೆಸಿರುವ ಪರಿಸರವಾದಿಗಳು 50ಕ್ಕೂ ಹೆಚ್ಚು ಪ್ರಭೇದದ ಪಕ್ಷಿ ಹಾಗೂ ಪತಂಗಗಳನ್ನು ಗುರುತಿಸಿದ್ದಾರೆ. ಪಕ್ಷಿ ವೀಕ್ಷಕರಾದ ಸಂಜಯ್ ದತ್ತಾತ್ರಿ, ಸಹನಾ, ಕಶ್ಯಪ್ ಅವರು ಸಮೀಕ್ಷೆ ನಡೆಸಿ ಸದರಿ ಜಾಗವನ್ನು ಆವಾಸಸ್ಥಾನವಾಗಿ ಮಾಡಿಕೊಂಡಿರುವ 39 ಪಕ್ಷಿಗಳು ಹಾಗೂ 10ಕ್ಕೂ ಜಾತಿಯ ಚಿಟ್ಟೆಗಳನ್ನು ಗುರುತಿಸಿದ್ದಾರೆ.
55 ತೇಗ, 24 ಗಂಧ, ತಲಾ 7 ಅರಳಿ, ಮಹಾಗನಿ, 12 ಬೇವು, 53 ತೆಂಗು, 82 ಅಡಿಕೆ, 14 ಸಿಲ್ವರ್, ತಲಾ 11 ಹುಣಸೆ, ಸೀಬೆ, ನೇರಳೆ ಸೇರಿದಂತೆ ವಿವಿಧ ಜಾತಿಯ 552 ಮರಗಳಿವೆ. ಕಾಜಾಣ, ನವಿಲು, ಚೋರೆ ಹಕ್ಕಿ, ಕೆಂಬೂತ, ಕೋಗಿಲೆ, ನೀರು ಕಾಗೆ, ಕರಿ ಕೆಂಬರಲು, ಕೊಕ್ಕರೆ, ಕತ್ತಲಗುಪ್ಪಿ, ಗೋವಕ್ಕಿ, ಜೇನುಗಿಡುಗ, ಮಚ್ಚೆಗೂಬೆ, ಬೂದು ಮಂಗಟ್ಟೆ, ಕಳ್ಳಿಪೀರ, ಮಿಂಚುಳ್ಳಿ, ಮರಕುಟಿಗ, ರಾಮಗಿಳಿ, ಬುರುಡೆ ಹಕ್ಕಿ, ಬಾಲದಂಡೆ ಹಕ್ಕಿ, ಪಿಕಳಾರ (ಬುಲ್‌ಬುಲ್), ಮೈನಾ, ಮಡಿವಾಳ, ಗುಬ್ಬಚ್ಚಿಗಳಿದ್ದು ಜೀವ ವೈವಿಧ್ಯದ ತಾಣವಾಗಿದೆ.
‘ಬುದ್ಧಿಗೇಡಿ ಕೆಲಸ ಬೇಡ, ಬೇರೆ ಜಾಗ ಕೊಡಿ’
ಕ್ರೀಡಾಂಗಣಕ್ಕೆ ನೀಡಲು ಬೇರೆ ಜಾಗ ಹುಡುಕಿ, ಪಾರಂಪರಿಕ ಕಾರ್ಖಾನೆಯ ಜಾಗವೇ ಏಕೆ ಬೇಕು. ಜೀವವೈವಿಧ್ಯದ ಸ್ಥಳದಲ್ಲಿ ಮರಗಳನ್ನು ಕಡಿದರೆ ಅಲ್ಲಿನ ಜೀವಜಾಲವನ್ನು ನಾಶ ಮಾಡಿದಂತಾಗುತ್ತದೆ. ಇಲ್ಲಿ ಕ್ರೀಡಾಂಗಣ ಕಟ್ಟುವುದು ಅತ್ಯಂತ ಬುದ್ದಿಗೇಡಿ ಕೆಲಸ’ ಎನ್ನುತ್ತಾರೆ ಕಾರ್ಮಿಕರ ಜೊತೆಗೂಡಿ ಪ್ರತಿಭಟನೆ ಮುನ್ನಡೆಸುತ್ತಿರುವ ‘ಪರಿಸರಕ್ಕಾಗಿ ನಾವು’ ಸಂಘಟನೆಯ ಪರಶುರಾಮೇಗೌಡ.
‘ಕ್ರೀಡಾಂಗಣ ನಿರ್ಮಾಣ ಮಾಡಿದರೆ ಕಾರ್ಖಾನೆ ಕಿಷ್ಕಿಂಧೆಯಾಗುತ್ತದೆ. ಈ ಕಾರ್ಖಾನೆಯಲ್ಲಿ ಉತ್ಪಾದನೆ ಆಗುವ ರೇಷ್ಮೆ ನೂಲು ಗುಣಮಟ್ಟದ್ದಾಗಿದ್ದು, ಇದೇ ನೂಲನ್ನು ಬಳಸಿ ವಿಶ್ವ ವಿಖ್ಯಾತ ರೇಷ್ಮೆ ಸೀರೆಗಳನ್ನು ತಯಾರಿಸುತ್ತಾರೆ. ಕಾರ್ಖಾನೆ ಮುಚ್ಚಿದರೆ ರೇಷ್ಮೆ ಸೀರೆ ತಯಾರಿಕೆಗೂ ತೊಂದರೆ ಆಗುತ್ತದೆ. ಸಿಬ್ಬಂದಿ ಮತ್ತು ಕಾರ್ಮಿಕರೂ ಕೆಲಸ ಕಳೆದುಕೊಳ್ಳುತ್ತಾರೆ’ ಎಂದರು.
‘ಯಾವುದೇ ತೊಂದರೆ ಇಲ್ಲ’
ಕ್ರೀಡಾಂಗಣದಿಂದ ನೂಲು ತಯಾರಿಕಾ ಕೈಗಾರಿಕೆಗೆ ಯಾವುದೇ ತೊಂದರೆ ಇರುವುದಿಲ್ಲ. ಹಲವು ವರ್ಷಗಳಿಂದ ತಾಲ್ಲೂಕು ಕ್ರೀಡಾಂಗಣಕ್ಕೆ ಬೇಡಿಕೆ ಇತ್ತು. ಕಳೆದ ಬಜೆಟ್‌ನಲ್ಲಿ ₹6 ಕೋಟಿ ಬಿಡುಗಡೆಯಾಗಿದೆ. ತಿ.ನರಸೀಪುರ ತಾಲ್ಲೂಕಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಕೊಕ್ಕೊ, ಅಥ್ಲೆಟಿಕ್ಸ್, ಕಬಡ್ಡಿ ಕ್ರೀಡಾಪಟುಗಳಿದ್ದಾರೆ. ಕ್ರೀಡಾ ಸಂಸ್ಕೃತಿ ಬೆಳೆಯುತ್ತಿದೆ. ಈ ಕಾರಣವೇ ಸರ್ಕಾರವು ಭೂಮಿ ಗುರುತಿಸಿ ಇಲಾಖೆಗೆ ಹಸ್ತಾಂತರಿಸಿದೆ. ಕ್ರೀಡಾಂಗಣದಿಂದ ಕೆಎಸ್‌ಐಸಿಗೆ ಯಾವುದೇ ಅನನುಕೂಲವಾಗದು. ನಮ್ಮ ಇಲಾಖೆ ಪರಿಸರ ಸ್ನೇಹಿ’ ಎಂದು ಹೇಳುತ್ತಾರೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಭಾಸ್ಕರ್ ನಾಯ್ಕ್.
‘200 ಮೀಟರ್ಸ್ ಅಥ್ಲೆಟಿಕ್ಸ್ ಟ್ರ್ಯಾಕ್, ಬ್ಯಾಸ್ಕೆಟ್‌ಬಾಲ್, ವಾಲಿಬಾಲ್, ಕೊಕ್ಕೊ ಕಿರು ಅಂಗಳಗಳನ್ನು ನಿರ್ಮಿಸಲಾಗುವುದು. ಪೆವಿಲಿಯನ್‌ಗೆ 8ರಿಂದ 10 ಎಕರೆ ಬೇಕಾಗುತ್ತದೆ. ತಾಲ್ಲೂಕು ಮಟ್ಟದ ಕ್ರೀಡಾಂಗಣಕ್ಕೆ ಈ ಸೌಲಭ್ಯವೇನೂ ಬೇಡ. ಕಾರ್ಖಾನೆ ಮುಚ್ಚುವುದೆಂಬ ಗೊಂದಲ ಸೃಷ್ಟಿಯಾಗಿದೆ. ಸತ್ಯಕ್ಕೆ ದೂರವಾದ ಮಾತುಗಳನ್ನು ಕೆಲವರು ಕಾರ್ಮಿಕರಿಗೆ ತುಂಬಿಬಿಟ್ಟಿದ್ದಾರೆ. ಕಾರ್ಖಾನೆಗೆ 7 ಎಕರೆ ಈಗಾಗಲೇ ಇದೆ. ಹೊಸ ಯಂತ್ರಗಳನ್ನು ಖರೀದಿಸಿ ಕಾರ್ಖಾನೆಯನ್ನು ಮೇಲ್ದರ್ಜೆಗೇರಿಸಿಕೊಳ್ಳಬೇಕು. ಇನ್ನೂ ನೂರು ವರ್ಷದ ಹಿಂದಿನ ತಂತ್ರಜ್ಞಾನದಲ್ಲಿಯೇ ಕಾರ್ಖಾನೆಯಿದೆ. ಹೊಸ ಅಭಿವೃದ್ಧಿ ಕಾರ್ಯ ಕೈಗೊಳ್ಳಲಿ’ ಎಂಬುದು ಅವರ ಮಾತು.
ಕಾರ್ಖಾನೆ ಮುಚ್ಚುವುದಿಲ್ಲ: ಮಹದೇವಪ್ಪ
ಮೈಸೂರು: ‘ತಿ.ನರಸೀಪುರದಲ್ಲಿ ಇರುವ ‘ಮೈಸೂರು ರೇಷ್ಮೆ ಕಾರ್ಖಾನೆ’ಯನ್ನು ಮುಚ್ಚುವ ಪ್ರಶ್ನೆಯೇ ಇಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಸೋಮವಾರ ಇಲ್ಲಿ ಹೇಳಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ರೇಷ್ಮೆ ಮಾರುಕಟ್ಟೆಗೆ ಮೀಸಲಿಟ್ಟಿದ್ದ ಹಾಗೂ ಬಳಸದಿದ್ದ ಒಂದೂವರೆ ಎಕರೆ ಜಾಗವನ್ನು ಕ್ರೀಡಾಂಗಣಕ್ಕೆ ಬಳಸಲು ತೀರ್ಮಾನಿಸಿದ್ದೇವೆ. ಈಗ, ಆ ಆದೇಶವನ್ನೂ ಮರು ಪರಿಶೀಲಿಸುತ್ತೇವೆ’ ಎಂದು ತಿಳಿಸಿದರು.
‘ಕಾರ್ಖಾನೆಗೆ ತೊಂದರೆ ಆದಲ್ಲಿ ಕ್ರೀಡಾಂಗಣ ನಿರ್ಮಿಸುವುದಿಲ್ಲ. ನಮಗೆ ರೇಷ್ಮೆ ಕಾರ್ಖಾನೆ ಮುಖ್ಯ. ಸರ್ಕಾರಕ್ಕೆ ಈ ವಿಚಾರದಲ್ಲಿ ಪ್ರತಿಷ್ಠೆ ಇಲ್ಲ. ಕಾರ್ಖಾನೆಯ ಕಾರ್ಮಿಕರು ಹಾಗೂ ಸಾರ್ವಜನಿಕರಿಗೆ ಆತಂಕ ಬೇಡ’ ಎಂದರು.
‘ಕಾರ್ಖಾನೆ ಪ್ರಗತಿಗೆ ಸರ್ಕಾರ ಒತ್ತುಕೊಟ್ಟಿದೆ. ರೇಷ್ಮೆ ಕಾರ್ಖಾನೆಗೆ ಧಕ್ಕೆ ಆಗದಂತೆ ರಕ್ಷಿಸುವುದು ನಮ್ಮ ಹೊಣೆ. ಇದರಲ್ಲಿ ಅನುಮಾನ ಬೇಡ. ಬಿಜೆಪಿಯವರು ರಾಜಕೀಯಕ್ಕಾಗಿ ಗೊಂದಲ ಸೃಷ್ಟಿಸಿದ್ದಾರೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.