
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್) ಬದಲಾವಣೆಯ ಹಾದಿಯಲ್ಲಿದೆ. ಈ ವ್ಯವಸ್ಥೆಯಿಂದ ಹೊರಬರುವ ಮತ್ತು ಅದರಲ್ಲಿ ತೊಡಗಿಸಿರುವ ಹಣ ಹಿಂಪಡೆಯುವ ಸಂಬಂಧದ ನಿಯಮಗಳನ್ನು ಸರಳೀಕರಣಗೊಳಿಸಲು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ಕರಡು ಪ್ರಕಟಿಸಿದೆ. ಮುಖ್ಯವಾಗಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೌಕರರನ್ನು ಹೊರತುಪಡಿಸಿ ಉಳಿದೆಲ್ಲಾ ಟೈರ್–1 ಚಂದಾದಾರರಿಗೆ ಪಿಂಚಣಿ ಯೋಜನೆಯಿಂದ ಹೊರಬರಲು ಪ್ರಸ್ತುತ ಇರುವ 60 ವರ್ಷ ವಯಸ್ಸಿನ ಮಿತಿಯನ್ನು ಕಡಿಮೆ ಮಾಡಲು ಪ್ರಸ್ತಾವಿಸಲಾಗಿದೆ. ಇದೇ ರೀತಿ, ಚಂದಾದಾರರ ಅಗತ್ಯಗಳಿಗೆ ತಕ್ಕಂತೆ ಹೆಚ್ಚು ಹಣ ಹಿಂಪಡೆಯಲು ಅವಕಾಶ ಕಲ್ಪಿಸುವ ಪ್ರಸ್ತಾವವನ್ನೂ ಕರಡು ಒಳಗೊಂಡಿದೆ
ಖಾಸಗಿ ವಲಯದ ಬಹುತೇಕ ಉದ್ಯೋಗಿಗಳು ಬಾಳಿನ ಮುಸ್ಸಂಜೆಯಲ್ಲಿ ಜೀವನ ನಿರ್ವಹಣೆಗೆ ಇಡುಗಂಟು ಇಲ್ಲದೆ ತೊಂದರೆಗೆ ಸಿಲುಕುತ್ತಾರೆ. ನಿವೃತ್ತಿ ನಂತರದ ಬದುಕಿನ ಬಂಡಿ ಎಳೆಯಲು ಪೂರ್ವಸಿದ್ಧತೆ ಇಲ್ಲದವರ ಕೊರಳಿಗೆ ಸಂಕಷ್ಟಗಳ ಸಂಕೋಲೆ ಬೀಳುತ್ತದೆ. ಅಂಥವರಿಗೆ ನೆರವಾಗಲೆಂದೇ ಕೇಂದ್ರ ಸರ್ಕಾರವು ಪಿಂಚಣಿ ಯೋಜನೆಯನ್ನು ಖಾಸಗಿಯವರಿಗೂ ವಿಸ್ತರಿಸಿತ್ತು.
2004ರಲ್ಲಿ ಕೇಂದ್ರ ಸರ್ಕಾರವು ಹಳೆಯ ಪಿಂಚಣಿ ವ್ಯವಸ್ಥೆಯನ್ನು (ಒಪಿಎಸ್) ರದ್ದುಪಡಿಸಿ, ಸಾಮಾಜಿಕ ಭದ್ರತೆಯ ಭಾಗವಾಗಿ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು (ಎನ್‌ಪಿಎಸ್) ಜಾರಿಗೊಳಿಸಿತು. ಆರಂಭದಲ್ಲಿ ಈ ಯೋಜನೆಯು ಕೇಂದ್ರ ಸರ್ಕಾರಿ ನೌಕರರಿಗಷ್ಟೆ ಸೀಮಿತವಾಗಿತ್ತು. 2009ರಿಂದ ಖಾಸಗಿ ವಲಯದ ಉದ್ಯೋಗಿಗಳಿಗೂ ಇದನ್ನು ವಿಸ್ತರಿಸಿತು. ಪ್ರಸ್ತುತ ಈ ಯೋಜನೆಯು ಸಾರ್ವಜನಿಕ, ಖಾಸಗಿ, ಅಸಂಘಟಿತ ವಲಯದ ಉದ್ಯೋಗಿಗಳು ಮತ್ತು ಮಕ್ಕಳೂ ಸೇರಿದಂತೆ ಎಲ್ಲಾ ನಾಗರಿಕರಿಗೂ ಮುಕ್ತವಾಗಿದೆ. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಪಿಎಫ್‌ಆರ್‌ಡಿಎ) ಇದರ ನಿರ್ವಹಣೆಯ ಹೊಣೆ ಹೊತ್ತಿದೆ.
ಎನ್‌ಪಿಎಸ್, ಷೇರು ಮಾರುಕಟ್ಟೆ ಸಂಯೋಜಿತ ಹೂಡಿಕೆ ಮತ್ತು ಉಳಿತಾಯ ಯೋಜನೆ. ನಿವೃತ್ತಿ ನಂತರವೂ ನಿಯಮಿತ ಆದಾಯವನ್ನು ಒದಗಿಸುತ್ತದೆ. ಜೊತೆಗೆ, ಚಂದಾದಾರರಿಗೆ ಆರ್ಥಿಕ ಸ್ಥಿರತೆ ಮತ್ತು ಭದ್ರತೆಯನ್ನೂ ಖಾತರಿಪಡಿಸುತ್ತದೆ. ಇದರಡಿ ಹೂಡಿಕೆ ಮಾಡುವವರಿಗೆ ಆದಾಯ ತೆರಿಗೆಯ ವಿನಾಯಿತಿ ಲಭಿಸುತ್ತದೆ. ಎನ್‌ಪಿಎಸ್‌ನಡಿ ಹೂಡಿಕೆ ಮಾಡಿದರೆ ಸೆಕ್ಷನ್ 80ಸಿ ಅಡಿ ₹1.50 ಲಕ್ಷ ಹಾಗೂ ಸೆಕ್ಷನ್ 80ಸಿಸಿಡಿ (1ಬಿ) ಅಡಿ ₹50 ಸಾವಿರ ವಿನಾಯಿತಿ ದೊರೆಯುತ್ತದೆ.
ಮತ್ತೊಂದೆಡೆ, ಮ್ಯೂಚುವಲ್ ಫಂಡ್‌ಗಳ ನಿರ್ವಹಣಾ ಶುಲ್ಕಕ್ಕೆ ಹೋಲಿಸಿದರೆ ಎನ್‌ಪಿಎಸ್ ನಿರ್ವಹಣಾ ಶುಲ್ಕ ಅತ್ಯಲ್ಪ. ಮ್ಯೂಚುವಲ್ ಫಂಡ್‌ಗಳ ವಾರ್ಷಿಕ ನಿರ್ವಹಣಾ ಶುಲ್ಕ ಶೇ 1ರಿಂದ ಶೇ 2.5ರಷ್ಟಿದೆ. ಎನ್‌ಪಿಎಸ್‌ನಲ್ಲಿ ವಾರ್ಷಿಕ ನಿರ್ವಹಣಾ ಶುಲ್ಕ ಶೇ 0.09ರಷ್ಟಿದೆ. ಅಂದರೆ ₹1 ಲಕ್ಷ ಹೂಡಿಕೆ ಮೊತ್ತಕ್ಕೆ ಚಂದಾದಾರರು ಕೇವಲ ₹90 ಶುಲ್ಕವನ್ನಷ್ಟೆ ಭರಿಸುತ್ತಾರೆ. ಈ ಯೋಜನೆಯಡಿ ಇಂಥ ಸಾಕಷ್ಟು ಅನುಕೂಲಗಳಿದ್ದರೂ ಅರಿವಿನ ಕೊರತೆಯಿಂದಾಗಿ ಹೆಚ್ಚು ಜನಪ್ರಿಯತೆ ಪಡೆದಿಲ್ಲ.
ಪಿಎಫ್‌ಆರ್‌ಡಿಎ ಪ್ರಕಟಿಸಿರುವ ಹೊಸ ಪ್ರಸ್ತಾವದನ್ವಯ ಚಂದಾದಾರರಿಗೆ ಹೆಚ್ಚಿನ ಅನುಕೂಲ ಲಭಿಸಲಿದೆ. ಹಾಲಿ ನಿಯಮದ (ಸಾಮಾನ್ಯ ಯೋಜನೆ) ಅನ್ವಯ ಚಂದಾದಾರರಿಗೆ ಯೋಜನೆಯಿಂದ ಹೊರಬರಲು ನಿವೃತ್ತಿಯ ವಯಸ್ಸು ಅಂದರೆ 60 ವರ್ಷದ ಮಿತಿ ನಿಗದಿಪಡಿಸಲಾಗಿತ್ತು. ಈ ವೇಳೆ ದೊರೆಯುವ ಪಿಂಚಣಿಯ ಇಡುಗಂಟಿನಲ್ಲಿ (ಕಾರ್ಪಸ್) ಶೇ 60ರಷ್ಟು ಮೊತ್ತ ಹಿಂಪಡೆಯಲು ಅವಕಾಶವಿತ್ತು. ಈ ಮೊತ್ತವು ಆದಾಯ ತೆರಿಗೆಯಿಂದ ಮುಕ್ತವಾಗಿದೆ. ಉಳಿದ ಶೇ 40ರಷ್ಟು ನಿಧಿಯನ್ನು ನಿಯಮಿತವಾಗಿ ಆದಾಯ ತರುವ ಯೋಜನೆಯಲ್ಲಿ (ಪರ್ಚೇಸ್ ಆಫ್ ಆ್ಯನುಟಿ) ಕಡ್ಡಾಯವಾಗಿ ಹೂಡಿಕೆ ಮಾಡಬೇಕಿತ್ತು.
ಪ್ರಸ್ತಾವಿತ ತಿದ್ದುಪಡಿಯಲ್ಲಿ ಇಡುಗಂಟು ಹಿಂಪಡೆಯುವಿಕೆ ಪ್ರಮಾಣವನ್ನು ಶೇ 80ಕ್ಕೆ ಹೆಚ್ಚಿಸುವ ಕುರಿತು ಪ್ರಸ್ತಾಪಿಸಲಾಗಿದೆ (ಈ ಪೈಕಿ ಶೇ 60ರಷ್ಟು ಮೊತ್ತಕ್ಕೆ ತೆರಿಗೆ ವಿನಾಯಿತಿ ಇದ್ದರೆ, ಉಳಿದ ಶೇ 20ರಷ್ಟು ಮೊತ್ತವು ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡುತ್ತದೆ). ಉಳಿದ ಶೇ 20ರಷ್ಟು ಮೊತ್ತವನ್ನು ಚಂದಾದಾರರು ನಿಯಮಿತವಾಗಿ ಆದಾಯ ತರುವ ಯೋಜನೆಯಲ್ಲಿ (purchase of annuity) ಹೂಡುವುದು ಕಡ್ಡಾಯ. ಹೊಸ ಪ್ರಸ್ತಾವವು ಖಾತೆದಾರರಿಗೆ ಹೆಚ್ಚಿನ ಆರ್ಥಿಕ ಭದ್ರತೆ ಒದಗಿಸಲಿದೆ. ಅಲ್ಲದೆ, ಆರ್ಥಿಕ ಸಂಕಷ್ಟಗಳನ್ನು ಪರಿಹರಿಸಿಕೊಳ್ಳಲು ನೆರವಾಗಲಿದೆ ಎನ್ನುತ್ತಾರೆ ಹೂಡಿಕೆ ತಜ್ಞರು.
ಸಾಮಾನ್ಯ ಚಂದಾದಾರಿಕೆ ಹೊರಬರುವ ವ್ಯವಸ್ಥೆಯಡಿ (60 ವರ್ಷಕ್ಕೆ) ಚಂದಾದಾರರ ಖಾತೆಯಲ್ಲಿ ₹2.5 ಲಕ್ಷ ಇಡುಗಂಟು ಇದ್ದರೆ, ಇಡೀ ಮೊತ್ತ ಹಿಂಪಡೆಯಲು ಹಾಲಿ ನಿಯಮದಲ್ಲಿ ಅವಕಾಶವಿದೆ. ಈ ಮೊತ್ತದ ಪ್ರಮಾಣ ಹೆಚ್ಚಿಸಲು ತಿದ್ದುಪಡಿಯಲ್ಲಿ ಪ್ರಸ್ತಾಪಿಸಲಾಗಿದೆ. ಇಡುಗಂಟು ₹12 ಲಕ್ಷಕ್ಕಿಂತ ಕಡಿಮೆ ಇದ್ದರೆ ಆ ಮೊತ್ತದಲ್ಲಿ ಶೇ 50ರಷ್ಟನ್ನು ಒಂದೇ ಬಾರಿಗೆ ಹಿಂಪಡೆಯಬಹುದಾಗಿದೆ. ಉಳಿದ ಶೇ 50ರಷ್ಟು ಮೊತ್ತವನ್ನು ಐದು ವರ್ಷಗಳಲ್ಲಿ ವ್ಯವಸ್ಥಿತವಾಗಿ ಹಿಂಪಡೆಯಲು ಅವಕಾಶವಿದೆ ಅಥವಾ ಚಂದಾದಾರರು ಇಚ್ಛಿಸಿದರೆ ಈ ಮೊತ್ತವನ್ನು ನಿಯಮಿತವಾಗಿ ಆದಾಯ ತರುವ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ.
ಕೆಲವು ಚಂದಾದಾರರು ಅವಧಿ ಮುಗಿಯುವ ಮೊದಲೇ ಇಡುಗಂಟು ಹಿಂಪಡೆಯಲು ಇಚ್ಛಿಸುವುದುಂಟು. ಹಾಲಿ ನಿಯಮದಡಿ ₹2.5 ಲಕ್ಷ ಇಡುಗಂಟು ಇದ್ದರೆ ಇಡೀ ಮೊತ್ತವನ್ನು ಹಿಂಪಡೆಯಬಹುದಾಗಿದೆ. ಈ ಮೊತ್ತ ಹೆಚ್ಚಿಸುವ ಕುರಿತು ತಿದ್ದುಪಡಿಯಲ್ಲಿ ಉಲ್ಲೇಖಿಸಲಾಗಿದೆ. ₹4 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಮೊತ್ತ ಇದ್ದರೆ ಸಂಪೂರ್ಣವಾಗಿ ಹಿಂಪಡೆಯಲು ಅವಕಾಶ ಕಲ್ಪಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಅಂತಹ ಚಂದಾದಾರರು ನಿಯಮಿತವಾಗಿ ಆದಾಯ ತರುವ ಯೋಜನೆಯಲ್ಲಿ ಹೂಡಿಕೆ ಮಾಡುವ ಪ್ರಮೇಯ ಇರುವುದಿಲ್ಲ.
ಪ್ರಸ್ತುತ ಎನ್‌ಪಿಎಸ್ ಸೇರ್ಪಡೆಗೆ ಗರಿಷ್ಠ ವಯಸ್ಸು 70 ವರ್ಷ. 75 ವರ್ಷದವರೆಗೂ ಖಾತೆ ಮುಂದುವರಿಸಬಹುದು. ತಿದ್ದುಪಡಿಯಲ್ಲಿ ಸೇರ್ಪಡೆ ಮತ್ತು ಖಾತೆ ಮುಂದುವರಿಸುವ ಅವಧಿಯನ್ನು 85 ವರ್ಷದವರೆಗೆ ವಿಸ್ತರಿಸುವ ಕುರಿತು ಉಲ್ಲೇಖಿಸಲಾಗಿದೆ. ಪ್ರಸ್ತುತ ಚಂದಾದಾರರ ಎನ್‌ಪಿಎಸ್ ಮೊತ್ತಕ್ಕೆ ಸಾಲ ಸೌಲಭ್ಯವಿಲ್ಲ. ಕರಡಿನಲ್ಲಿ, ಸಾಲ ನೀಡುವ ಬಗ್ಗೆಯೂ ಪ್ರಸ್ತಾಪಿಸಲಾಗಿದೆ.
ಪಿಂಚಣಿ ನಿಧಿ ಲಾಂಛನ
ಎನ್‌ಪಿಎಸ್ ಬಲವರ್ಧನೆಗೆ ಪ್ರಾಧಿಕಾರವು ಬಹು ಯೋಜನೆ ಚೌಕಟ್ಟು (ಎಂಎಸ್‌ಎಫ್) ರೂಪಿಸಿದೆ. ಇದರಡಿ ಅನುಷ್ಠಾನಗೊಳಿಸಿರುವ ಹೊಸ ಯೋಜನೆಯು ಚಂದಾದಾರರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ.
ಪ್ರಸ್ತುತ ಎನ್‌ಪಿಎಸ್ ಚಂದಾದಾರರ ಕೊಡುಗೆಯನ್ನು ಷೇರುಪೇಟೆ, ಸರ್ಕಾರಿ ಬಾಂಡ್, ಕಾರ್ಪೊರೇಟ್ ಬಾಂಡ್ ಮತ್ತು ಇತರ ನಿಧಿಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಯಾವ ಹೂಡಿಕೆಗೆ ಎಷ್ಟು ಮೊತ್ತ ಹಂಚಿಕೆ ಮಾಡಬೇಕು ಎಂಬುದನ್ನು ಚಂದಾದಾರರೇ ನಿರ್ಧರಿಸಬಹುದು. ಚಂದಾದಾರರ ಸೂಚನೆ ಅನ್ವಯ ಫಂಡ್ ಮ್ಯಾನೇಜರ್‌ಗಳು ಹೂಡಿಕೆಯನ್ನು ನಿರ್ವಹಣೆ ಮಾಡುತ್ತಾರೆ.
ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯಾಗಿರುವ ಎನ್‌ಪಿಎಸ್ ಮೊತ್ತವು ವಾರ್ಷಿಕ ಶೇ 13ರಷ್ಟು ರಿಟರ್ನ್ಸ್ ತಂದುಕೊಟ್ಟಿದೆ. ಕಾರ್ಪೊರೇಟ್ ಬಾಂಡ್ ಮತ್ತು ಸರ್ಕಾರಿ ಬಾಂಡ್‌ಗಳಲ್ಲಿನ ಹೂಡಿಕೆಯು ಶೇ 9ರಷ್ಟು ರಿಟರ್ನ್ಸ್ ನೀಡಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಸದ್ಯ ಎನ್‌ಪಿಎಸ್ ಚಂದಾದಾರರು ತಮ್ಮ ಕೊಡುಗೆಯ ಶೇ 75ರಷ್ಟು ಮೊತ್ತವನ್ನಷ್ಟೇ ಷೇರುಪೇಟೆಯಲ್ಲಿ ಹೂಡಲು ಅವಕಾಶವಿದೆ. ಆದರೆ, ಬಹಳಷ್ಟು ಚಂದಾದಾರರು ಹೆಚ್ಚಿನ ರಿಟರ್ನ್ಸ್ ಅನ್ನು ಅಪೇಕ್ಷಿಸುತ್ತಾರೆ. ಅಂತಹ ಚಂದಾದಾರರಿಗೆ ತಮ್ಮ ಕೊಡುಗೆಯ ಶೇ 100ರಷ್ಟು ಮೊತ್ತವನ್ನೂ ಷೇರುಪೇಟೆಯಲ್ಲಿ ಹೂಡಿಕೆಗೆ ಬಹು ಯೋಜನೆ ಚೌಕಟ್ಟಿನಡಿ ಅವಕಾಶ ಕಲ್ಪಿಸಲಾಗಿದೆ. ಅಕ್ಟೋಬರ್ 1ರಿಂದಲೇ ಇದು ಜಾರಿಗೆ ಬಂದಿದೆ.
‘ಜೆನ್-ಝೀ’ ಪೀಳಿಗೆ ಮತ್ತು ಗಿಗ್ ಕಾರ್ಮಿಕರು ಎನ್‌ಪಿಎಸ್‌ನಿಂದ ದೂರವಿದ್ದಾರೆ. ಅವರನ್ನು ಈ ಯೋಜನೆಯತ್ತ ಆಕರ್ಷಿಸುವ ಉದ್ದೇಶದಿಂದ ಪಿಎಫ್‌ಆರ್‌ಡಿಎ ಈ ಚೌಕಟ್ಟು ರೂಪಿಸಿದೆ. ಆದರೆ, ಜಾಗತಿಕ ಹಾಗೂ ದೇಶೀಯ ವಿದ್ಯಮಾನಗಳು ದೇಶೀಯ ಷೇರುಪೇಟೆ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ, ಹೆಚ್ಚಿನ ರಿಟರ್ನ್ಸ್ ನಿರೀಕ್ಷಿಸುವ ಚಂದಾದಾರರು ರಿಸ್ಕ್ ಭರಿಸಲೂ ಸಿದ್ಧವಿರಬೇಕಿದೆ.
ಎನ್‌ಪಿಎಸ್ –ವಾತ್ಸಲ್ಯ ಚಂದಾದಾರರಿಗೆ ಸಂಬಂಧಿಸಿದಂತೆ ಮಕ್ಕಳಿಗೆ 18 ವರ್ಷ ತುಂಬಿದ ಬಳಿಕಷ್ಟೇ ಅವರು ಚಂದಾದಾರಿಕೆಯಿಂದ ಹೊರಬರಬಹುದು ಎಂದು ಕರಡು ನಿಯಮದಲ್ಲಿ ಹೇಳಲಾಗಿದೆ. ಎನ್‌ಪಿಎಸ್ ಚಂದಾದಾರಿಕೆ ಅಂತ್ಯಗೊಳಿಸಿದ ನಂತರ ನಿಧಿಯಲ್ಲಿ ಸಂಗ್ರಹವಾಗಿರುವ ಮೊತ್ತದಲ್ಲಿ ಶೇ 80ರಷ್ಟನ್ನು ನಿಯಮಿತವಾಗಿ ಆದಾಯ ತರುವ ಯೋಜನೆಯಲ್ಲಿ ಹೂಡಿಕೆ ಮಾಡಬೇಕು. ಶೇ 20ರಷ್ಟನ್ನು ಇಡುಗಂಟು ರೂಪದಲ್ಲಿ ನೀಡಲಾಗುತ್ತದೆ. ಒಂದು ವೇಳೆ, ಎನ್‌ಪಿಎಸ್ ಖಾತೆಯಲ್ಲಿ ಸಂಗ್ರಹವಾದ ಮೊತ್ತ ₹4 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಇದ್ದರೆ, ಒಂದೇ ಸಲಕ್ಕೆ ಪೂರ್ಣ ಮೊತ್ತವನ್ನು ವಾಪಸ್ ಪಡೆಯುವುದಕ್ಕೂ ಅವಕಾಶ ಇದೆ. ಇದನ್ನು ಆಯ್ಕೆ ಮಾಡಿಕೊಂಡವರಿಗೆ ನಂತರ ಪಿಂಚಣಿ ಆದಾಯ ಸಿಗುವುದಿಲ್ಲ.
ಮಕ್ಕಳಿಗೆ 18 ವರ್ಷ ಪೂರ್ಣವಾದ ನಂತರವೂ ಚಂದಾದಾರಿಕೆಯಿಂದ ಹೊರಬಾರದೇ ಇದ್ದ ಪಕ್ಷದಲ್ಲಿ ಚಂದಾದಾರಿಕೆಯು ಎನ್‌ಪಿಎಸ್‌ನ ಎಲ್ಲ ನಾಗರಿಕರು (All citizens) ವಿಭಾಗದಲ್ಲಿ ಮುಂದುವರಿಯುತ್ತದೆ.
ಆಧಾರ: ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ವೆಬ್‌ಸೈಟ್, ಎನ್‌ಪಿಸ್‌ಟ್ರಸ್ಟ್.ಒಆರ್‌ಜಿ.ಇನ್,
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.