ADVERTISEMENT

ಆಳ–ಅಗಲ| ‘ರಸ್ತೆಯಲ್ಲಿ ರೋಷಾವೇಶ’ನಿಯಂತ್ರಣಕ್ಕೆ ಕಾನೂನಿಲ್ಲ

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 19:30 IST
Last Updated 23 ಜನವರಿ 2023, 19:30 IST
ಬೆಂಗಳೂರಿನಲ್ಲಿ ಕಾರಿನ ಬಾನೆಟ್‌ ಮೇಲೆ ಬಿದ್ದ ವ್ಯಕ್ತಿಯೊಬ್ಬನನ್ನು ಹೊತ್ತೊಯ್ದಿದ್ದ ಕಾರು ಚಾಲಕಿ
ಬೆಂಗಳೂರಿನಲ್ಲಿ ಕಾರಿನ ಬಾನೆಟ್‌ ಮೇಲೆ ಬಿದ್ದ ವ್ಯಕ್ತಿಯೊಬ್ಬನನ್ನು ಹೊತ್ತೊಯ್ದಿದ್ದ ಕಾರು ಚಾಲಕಿ    

ರಸ್ತೆಯಲ್ಲಿ ವಾಹನಗಳ ಚಾಲನೆ ವೇಳೆ ಇತರರ ಮೇಲೆ ರೋಷಾವೇಶ ತೋರುವ (ರೋಡ್‌ ರೇಜ್‌) ಪ್ರವೃತ್ತಿ ಹೆಚ್ಚುತ್ತಿದೆ. ಇತರ ವಾಹನಗಳ ಚಾಲಕರು ಮತ್ತು ಪ್ರಯಾಣಿಕರನ್ನು ಅಪಾಯಕ್ಕೆ ದೂಡುವ ಇಂತಹ ವರ್ತನೆಯ ಹಲವು ಪ್ರಕರಣಗಳು ಈಚಿನ ದಿನಗಳಲ್ಲಿ ವರದಿಯಾಗಿವೆ. ಅಮೆರಿಕ, ಬ್ರಿಟನ್‌ ಮತ್ತು ಆಸ್ಟ್ರೇಲಿಯಾಗಳಲ್ಲಿ ಇಂತಹ ವರ್ತನೆಗಳನ್ನು ‘ಕ್ರಿಮಿನಲ್ ಅಪರಾಧ’ ಎಂದೇ ಪರಿಗಣಿಸಲಾಗುತ್ತಿದೆ. ಇಂತಹ ವರ್ತನೆಗಳ ತಡೆಗೆ ಕಠಿಣ ಕಾನೂನುಗಳೂ ಇವೆ. ಆದರೆ, ಭಾರತದ ಕಾನೂನುಗಳಲ್ಲಿ ‘ರಸ್ತೆಯಲ್ಲಿ ರೋಷಾವೇಶ’ದ ವರ್ತನೆಯನ್ನು ವ್ಯಾಖ್ಯಾನಿಸಿಲ್ಲ. ಇಂತಹ ವರ್ತನೆಗಳ ನಿಯಂತ್ರಣಕ್ಕೆ ಮತ್ತು ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಲು ಭಾರತದಲ್ಲಿ ನಿರ್ದಿಷ್ಟ ಕಾನೂನು ಇಲ್ಲ.

ರಸ್ತೆಯಲ್ಲಿ ಚಾಲನೆ ವೇಳೆ ಇತರೆ ವಾಹನಗಳ ಚಾಲಕರು ಮತ್ತು ಪ್ರಯಾಣಿಕರನ್ನು ಹೆದರಿಸಲು ಉದ್ದೇಶಪೂರ್ವಕವಾಗಿ ಅಪಾಯಕ್ಕೆ ದೂಡುವ ವರ್ತನೆಯೇ ರೋಡ್‌ ರೇಜ್‌. ಅಮೆರಿಕದ ‘ನ್ಯಾಷನಲ್ ಹೈವೇ ಟ್ರಾಫಿಕ್ ಸೇಫ್ಟಿ ಅಡ್ಮಿನಿಸ್ಟ್ರೇಷನ್‌’ ನೀಡಿರುವ ವ್ಯಾಖ್ಯಾನವಿದು. ಬ್ರಿಟನ್‌ ಮತ್ತು ಆಸ್ಟ್ರೇಲಿಯಾದಲ್ಲೂ ಇದೇ ಸ್ವರೂಪದ ವ್ಯಾಖ್ಯಾನವಿದೆ. ರಸ್ತೆಯಲ್ಲಿ ಅನಗತ್ಯವಾಗಿ ಹಾರ್ನ್‌ ಮಾಡುವುದು, ಇತರರನ್ನು ಬೈಯುವುದು, ಇತರರೆಡೆಗೆ ಅಸಭ್ಯವಾಗಿ ಸನ್ನೆ ಮಾಡುವುದು, ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆಯುವಂತಹ ವರ್ತನೆಗಳನ್ನು ರಸ್ತೆಯಲ್ಲಿ ರೋಷಾವೇಷ ತೋರುವುದು ಎಂದು ಪರಿಗಣಿಸಲಾಗುತ್ತದೆ.

2018ರ ಮೇ 22ರಂದು ಜಾನ್‌ ಅಬ್ರಹಾಂ ನಟನೆಯ ‘ಪರಮಾಣು’ ಸಿನಿಮಾದ ಪ್ರಚಾರದ ಜೀಪ್‌ ದೆಹಲಿಯಲ್ಲಿ ಬೈಕ್‌ ಒಂದಕ್ಕೆ ಡಿಕ್ಕಿ ಹೊಡೆದಿತ್ತು. ಬೈಕ್‌ ಸವಾರ ಮತ್ತು ಜೀಪ್‌ ಚಾಲಕನ ಮಧ್ಯೆ ವಾಗ್ವಾದ ನಡೆದಿತ್ತು. ವಾಗ್ವಾದ ಜೋರಾಗಿ ಬೈಕ್‌ ಸವಾರ, ಜೀಪ್‌ ಚಾಲಕನಿಗೆ ಥಳಿಸಿದ್ದ –ಪಿಟಿಐ ಚಿತ್ರ

ಆಕಸ್ಮಿಕವಾಗಿ ಸಂಭವಿಸುವ ಆಪಘಾತಗಳಿಗೂ, ಉದ್ದೇಶಪೂರ್ವಕವಾಗಿ ಮಾಡುವ ಅಪಘಾತಗಳಿಗೂ ವ್ಯತ್ಯಾಸವಿದೆ. ಅಮೆರಿಕದಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಅಪಘಾತಗಳನ್ನು ರಸ್ತೆ ಸಂಚಾರ ನಿಯಮಗಳ ಉಲ್ಲಂಘನೆ ಪ್ರಕರಣ ಎಂದೂ, ಉದ್ದೇಶಪೂರ್ವಕವಾಗಿ ಮಾಡುವ ಅಪಘಾತಗಳನ್ನು ಕ್ರಿಮಿನಲ್‌ ಅಪರಾಧವೆಂದೂ ಪರಿಗಣಿಸಲಾಗುತ್ತದೆ. ಆದರೆ, ಭಾರತದಲ್ಲಿ ಇದನ್ನು ಅಪಾಯಕಾರಿ ಚಾಲನೆ ಎಂದು ಮಾತ್ರ ಪರಿಗಣಿಸಲಾಗುತ್ತದೆ. ಉದ್ದೇಶಪೂರ್ವಕವಾಗಿ ತೋರುವ ಇಂತಹ ವರ್ತನೆಯು ಜೀವಹಾನಿಗೆ ಕಾರಣವಾದ ನಿದರ್ಶನಗಳೂ ಭಾರತದಲ್ಲಿ ಇವೆ. ಆದರೆ, ಈ ಹಿಂದೆ ಹಲವು ಭಾರಿ ಇವನ್ನು ರಸ್ತೆ ಸಂಚಾರ ನಿಯಮಗಳ ಉಲ್ಲಂಘನೆ ಪ್ರಕರಣ ಎಂದೇ ಪರಿಗಣಿಸಲಾಗಿದೆ. ಅಗತ್ಯ ಕಾನೂನು ಇಲ್ಲದೇ ಇದ್ದ ಕಾರಣ, ನ್ಯಾಯಾಲಯಗಳೂ ಇವನ್ನು ಉದ್ದೇಶಪೂರ್ವಕವಲ್ಲದ ಕೊಲೆ ಎಂದೇ ಪರಿಗಣಿಸಿದ ಉದಾಹರಣೆಗಳು ಸಾಕಷ್ಟಿವೆ. ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್‌ ಸಿಧು ಪ್ರಕರಣವು ಇದಕ್ಕೆ ಉತ್ತಮ ನಿದರ್ಶನ.

ADVERTISEMENT

1988ರ ಡಿಸೆಂಬರ್ 27ರಂದು ಪಟಿಯಾಲದ ರಸ್ತೆಯೊಂದರ ಮಧ್ಯದಲ್ಲಿ ಸಿಧು ಅವರು ತಮ್ಮ ಜಿಪ್ಸಿಯನ್ನು ನಿಲ್ಲಿಸಿದ್ದರು. ರಸ್ತೆಗೆ ಅಡ್ಡವಾಗಿ ವಾಹನ ನಿಲ್ಲಿಸಿದ್ದನ್ನು ಪ್ರಶ್ನಿಸಿದ್ದ ಗುರುನಾಮ್ ಸಿಂಗ್ ಎಂಬುವವರ ಮೇಲೆ ಸಿಧು ಹಲ್ಲೆ ನಡೆಸಿದ್ದರು. ಹಲ್ಲೆಯ ತೀವ್ರತೆಗೆ ಗುರುನಾಮ್‌ ಸಾವನ್ನಪ್ಪಿದ್ದರು. ಇದನ್ನು ಉದ್ದೇಶಪೂರ್ವಕವಲ್ಲದ ನರಹತ್ಯೆ ಎಂದೇ ಪ್ರಕರಣದಲ್ಲಿ ಉಲ್ಲೇಖಿಸಲಾಗಿತ್ತು ಮತ್ತು ಆ ಪ್ರಕಾರವೇ ಸಿಧು ಅವರಿಗೆ ಶಿಕ್ಷೆ ವಿಧಿಸಲಾಗಿತ್ತು. ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿದ್ದರೂ, 1999ರಲ್ಲಿ ಪಟಿಯಾಲಾ ನ್ಯಾಯಾಲಯವು ಕೊಲೆಯ ಸೆಕ್ಷನ್‌ಗಳನ್ನು ಕೈಬಿಟ್ಟು ಶಿಕ್ಷೆ ನೀಡಿತ್ತು. ರಸ್ತೆ ಅಪಘಾತ ಅಥವಾ ಇತರೆ ಅಪಘಾತ ಪ್ರಕರಣಗಳಲ್ಲಿ ನೀಡುವಂತೆ ಈ ಪ್ರಕರಣಗಳಲ್ಲೂ ₹1,000 ದಂಡ ವಿಧಿಸಿತ್ತು. 2006ರಲ್ಲಿ ಪಂಜಾಬ್‌–ಹರಿಯಾಣ ಹೈಕೋರ್ಟ್‌ ಕೃತ್ಯವನ್ನು ‘ಉದ್ದೇಶಪೂರ್ವಕವಲ್ಲದ ನರಹತ್ಯೆ’ ಎಂದು ಪರಿಗಣಿಸಿತು. 2018–21ರ ಮಧ್ಯೆ ಈ ತೀರ್ಪನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್‌, ‘ಉದ್ದೇಶಪೂರ್ವಕವಾಗಿ ನೋವುಂಟು ಮಾಡಿದ್ದು’ ಎಂದು ಪರಿಗಣಿಸಿ, ಸಿಧು ಅವರಿಗೆ ಒಂದು ವರ್ಷ ಜೈಲುಶಿಕ್ಷೆ ನೀಡಿತು.

ರಸ್ತೆಯಲ್ಲಿ ರೋಷಾವೇಶ ತೋರಿದ್ದನ್ನು ನಮ್ಮ ಕಾನೂನಿನಲ್ಲಿ ವ್ಯಾಖ್ಯಾನಿಸದೇ ಇರುವ ಮತ್ತು ಅದಕ್ಕೆ ಶಿಕ್ಷೆಯನ್ನು ನಿಗದಿಪಡಿಸದೇ ಇರುವ ಕಾರಣಕ್ಕೆ ಇಂತಹ ಕೃತ್ಯಗಳಿಗೆ ಸರಿಯಾದ ಶಿಕ್ಷೆ ಆಗುತ್ತಿಲ್ಲ ಎಂಬುದನ್ನು ಈ ಪ್ರಕರಣವು ಸೂಚಿಸುತ್ತದೆ. ಲಖೀಂಪುರ ಖೀರಿ ರೈತರ ಹತ್ಯೆ ಪ್ರಕರಣದಲ್ಲೂ ಆರಂಭದಲ್ಲಿ ‘ಅಪಾಯಕಾರಿ ಚಾಲನೆ ಮತ್ತು ಉದ್ದೇಶಪೂರ್ವಕವಲ್ಲದ ನರಹತ್ಯೆ’ ಎಂಬ ಸೆಕ್ಷನ್‌ಗಳ ಅಡಿಯಲ್ಲೇ ಪ್ರಕರಣ ದಾಖಲಿಸಲಾಗಿತ್ತು. ನ್ಯಾಯಾಲಯದ ಮಧ್ಯಪ್ರವೇಶದ ನಂತರ ಕೊಲೆ ಮತ್ತು ಕೊಲೆಯತ್ನ ಪ್ರಕರಣವನ್ನು ದಾಖಲಿಸಲಾಗಿತ್ತು.

ವಿಮೆ ಪರಿಹಾರ?

ರೋಡ್‌ ರೇಜ್‌ ಅಥವಾ ರಸ್ತೆಯಲ್ಲಿ ರೋಷಾವೇಶ ತೋರಿದ್ದರಿಂದ ಅಪಘಾತ ಸಂಭವಿಸಿದರೆ ಮತ್ತು ಚಾಲಕ ಉದ್ದೇಶಪೂರ್ವಕವಾಗಿ ವಾಹನವನ್ನು ಡಿಕ್ಕಿ ಹೊಡೆಸಿದ್ದರೆ ಅಂತಹ ಪ್ರಕರಣಗಳಲ್ಲಿ, ಬಹುತೇಕ ಸಂದರ್ಭಗಳಲ್ಲಿ ವಾಹನಕ್ಕೆ ವಿಮೆ ಪರಿಹಾರ ದೊರೆಯುವುದಿಲ್ಲ. ಭಾರತದಲ್ಲಿ ರಸ್ತೆಯಲ್ಲಿ ರೋಷಾವೇಶ ಕೃತ್ಯವನ್ನು ದಾಖಲು ಮಾಡುವುದಿಲ್ಲವಾದ್ದರಿಂದ, ವಿಮಾ ಕಂಪನಿಗಳೂ ತಮ್ಮ ಪಾಲಿಸಿಗಳಲ್ಲಿ ಇದನ್ನು ಉಲ್ಲೇಖಿಸುವುದಿಲ್ಲ. ಹಲವು ವಿಮಾ ಕಂಪನಿಗಳು ತಮ್ಮ ಮೋಟಾರು ವಾಹನ ವಿಮಾ ಪಾಲಿಸಿಗಳಲ್ಲಿ,‘ಉದ್ದೇಶಪೂರ್ವಕವಾಗಿ ನಡೆಸಿದ ಅಪಘಾತಗಳಲ್ಲಿ ಪರಿಹಾರ ಅನ್ವಯವಾಗುವುದಿಲ್ಲ’ ಎಂದು ಉಲ್ಲೇಖಿಸಿರುತ್ತವೆ. ಆದರೆ, ಬೇರೊಬ್ಬ ಚಾಲಕನ ಉದ್ದೇಶಪೂರ್ವಕ ಕೃತ್ಯಕ್ಕೆ ತುತ್ತಾದವರು, ತಮ್ಮ ವಾಹನದ ವಿಮೆಯನ್ನು ಪಡೆಯಬಹುದು.

ಸದ್ದು ಮಾಡಿದ ಪ್ರಕರಣಗಳು

ಜನವರಿ ತಿಂಗಳ ಮೊದಲ 22 ದಿನಗಳಲ್ಲಿ, ರಸ್ತೆಯಲ್ಲಿ ರೋಷಾವೇಶ ತೋರಿದ ಮೂರು ಪ್ರಕರಣಗಳು ದೇಶದಾದ್ಯಂತ ಹೆಚ್ಚು ಸದ್ದು ಮಾಡುತ್ತಿವೆ. ಅಂತಹ ಪ್ರಕರಣಗಳ ಮಾಹಿತಿ ಇಲ್ಲಿದೆ

* ಬೆಂಗಳೂರಿನ ವಿಜಯನಗರದ ಬಳಿ ಪಿಕ್‌ಅಪ್‌ ಟ್ರಕ್‌ ಮತ್ತು ಸ್ಕೂಟರ್‌ ಮಧ್ಯೆ ಸಣ್ಣ ಅಪಘಾತ ನಡೆದಿತ್ತು. ಅಪಘಾತದ ನಂತರ ವಾಗ್ವಾದ ನಡೆದು, ಸ್ಕೂಟರ್‌ ಸವಾರ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದ. ಪಿಕ್‌ಅಪ್‌ ಚಾಲಕ, ಸ್ಕೂಟರ್‌ನ ಗ್ರ್ಯಾಬ್‌ರೇಲ್‌ಗೆ ಜೋತುಬಿದ್ದಿದ್ದರು. ಇದನ್ನು ಕಡೆಗಣಿಸಿದ್ದ ಸವಾರ, ಆ ಚಾಲಕನನ್ನು 600 ಮೀಟರ್‌ಗೂ ಹೆಚ್ಚು ದೂರ ಎಳೆದೊಯ್ದಿದ್ದ

* ಬೆಂಗಳೂರಿನ ಕೆಂಗೇರಿ ಬಳಿಯ ಉಲ್ಲಾಳ ಮುಖ್ಯ ರಸ್ತೆಯಲ್ಲಿ ಎರಡು ಕಾರುಗಳ ಮಧ್ಯೆ ಸಣ್ಣ ಅಪಘಾತ ಸಂಭವಿಸಿತ್ತು. ಎರಡೂ ಕಾರುಗಳಿಗೆ ಹಾನಿಯಾಗಿತ್ತು. ಒಂದು ಕಾರಿನ ಚಾಲಕ, ಇನ್ನೊಂದು ಕಾರಿನ ಮುಂದೆ ನಿಂತಿದ್ದ. ವಾಗ್ವಾದ ಕೈಮೀರಿ, ಇನ್ನೊಂದುಕಾರಿನ ಚಾಲಕಿ ಕಾರು ಗುದ್ದಿಸಿದ್ದರು. ಕಾರಿನ ಬಾನೆಟ್‌ ಮೇಲೆ ಯುವಕ ಜೋತುಬಿದ್ದಿದ್ದರೂ, ಹಲವು ಕಿಲೋಮೀಟರ್‌ವರೆಗೆ ಕಾರನ್ನು ಚಲಾಯಿಸಿಕೊಂಡು ಹೋಗಿದ್ದರು

* ಬಿಹಾರದ ಕೊಟ್ವಾದಲ್ಲಿ 70 ವರ್ಷದ ವೃದ್ಧರೊಬ್ಬರಿಗೆ ಕಾರು ಡಿಕ್ಕಿ ಹೊಡೆದಿತ್ತು. ವೃದ್ದ ಕಾರಿನ ಬಾನೆಟ್‌ಗೆ ಜೋತು ಬಿದ್ದಿದ್ದರೂ, ಅವರನ್ನು ಎಂಟು ಕಿ.ಮೀ.ವರೆಗೆ ಚಾಲಕ ಹೊತ್ತೊಯ್ದಿದ್ದ. ಆನಂತರ ದಿಢೀರ್ ಎಂದು ಬ್ರೇಕ್‌ ಹಾಕಿದ್ದರಿಂದ ವೃದ್ಧ ನೆಲೆಕ್ಕೆ ಬಿದ್ದಿದ್ದರು. ಚಾಲಕ, ಅವರ ಮೇಲೆ ಕಾರು ಚಲಾಯಿಸಿಕೊಂಡು ಹೋದ. ತೀವ್ರ ಗಾಯಗಳಿಂದ ವೃದ್ಧ ಮೃತಪಟ್ಟರು

* 2022ರ ನವೆಂಬರ್ 25ರಂದು ಬೆಂಗಳೂರಿನ ಯಲಹಂಕದ ವ್ಯಾಪ್ತಿಯಲ್ಲಿ ಬಸ್‌ ಚಾಲಕ ಮತ್ತು ಬೈಕ್‌ ಸವಾರನ ಮಧ್ಯೆ ಮಾರಾಮಾರಿ ನಡೆದಿತ್ತು. ಬಸ್‌ ಅನ್ನು ಹಿಂದಿಕ್ಕುವ ಸಂದರ್ಭದಲ್ಲಿ ಅಡ್ಡ ಬಂದರೆಂದು ಬಸ್‌ ಚಾಲಕ ಮತ್ತು ಬೈಕ್ ಸವಾರನ ಮಧ್ಯೆ ವಾಗ್ವಾದ ನಡೆದಿತ್ತು. ಇಬ್ಬರು ಪರಸ್ಪರ ಹೊಡೆದಾಡಿದ ಮತ್ತು ಬಸ್‌ ಚಾಲಕನು ಬೈಕ್‌ ಸವಾರನಿಗೆ ಹಿಗ್ಗಾಮುಗ್ಗಾ ಥಳಿಸಿದ ದೃಶ್ಯಗಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗಿತ್ತು

ಆಧಾರ: ಭಾರತೀಯ ದಂಡ ಸಂಹಿತೆ, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊವಿನ ‘ಭಾರತದಲ್ಲಿ ಅಪಘಾತ: 2021’ ವರದಿ, ಅಮೆರಿಕದ ‘ನ್ಯಾಷನಲ್ ಹೈವೇ ಟ್ರಾಫಿಕ್ ಸೇಫ್ಟಿ ಅಡ್ಮಿನಿಸ್ಟ್ರೇಷನ್‌’ ವರದಿ, ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.