ADVERTISEMENT

ಆಳ ಅಗಲ | ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಕಿವಿಯಾಗುವುದೇ ಸರ್ಕಾರ?

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 1:48 IST
Last Updated 8 ಡಿಸೆಂಬರ್ 2025, 1:48 IST
<div class="paragraphs"><p>‘ಉತ್ತರ’ದ ಸಮಸ್ಯೆಗಳಿಗೆ ಕಿವಿಯಾಗುವುದೇ ಸರ್ಕಾರ?</p></div>

‘ಉತ್ತರ’ದ ಸಮಸ್ಯೆಗಳಿಗೆ ಕಿವಿಯಾಗುವುದೇ ಸರ್ಕಾರ?

   
ವಿಧಾನಸಭೆಯ ಚಳಿಗಾಲದ ಅಧಿವೇಶನಕ್ಕೆ ಬೆಳಗಾವಿಯ ಸುವರ್ಣ ವಿಧಾನಸೌಧ ಸಜ್ಜುಗೊಂಡಿದೆ. ರಾಜ್ಯದ ಉತ್ತರದ ಜಿಲ್ಲೆಗಳು, ಅಲ್ಲಿನ ಜನರ ಸಂಕಷ್ಟಗಳ ಬಗ್ಗೆ ಚರ್ಚಿಸುವ ಉದ್ದೇಶದಿಂದ ಬೆಳಗಾವಿಯಲ್ಲಿ ಪ್ರತಿ ವರ್ಷ ಅಧಿವೇಶನ ನಡೆಸಲಾಗುತ್ತದೆ. ಆದರೆ, ಪ್ರತಿ ಬಾರಿಯೂ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವಿನ ವಾಗ್ವಾದ, ಕಲಹಗಳಲ್ಲೇ ಅಧಿವೇಶನ ಮುಗಿದು ಹೋಗುತ್ತಿದೆ. ಈ ಬಾರಿಯಾದರೂ ಹಲವು ವರ್ಷಗಳಿಂದ ಪರಿಹಾರವಾಗದೇ ಉಳಿದಿರುವ ತಮ್ಮ ಸಮಸ್ಯೆಗಳು, ಅಭಿವೃದ್ಧಿಗೆ ಪೂರಕವಾದ ಚರ್ಚೆಗಳು ನಡೆಯಲಿ ಎಂಬುದು ಉತ್ತರ ಕರ್ನಾಟಕದ ಜಿಲ್ಲೆಗಳ ಜನರ ಆಶಯ.

ರಾಜ್ಯದ ದಕ್ಷಿಣದ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರದ ಹಲವು ಜಿಲ್ಲೆಗಳು ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿವೆ. ಸರ್ಕಾರವು ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳುವುದಿಲ್ಲ ಎನ್ನುವುದು ಈ ಜಿಲ್ಲೆಗಳ ಹೋರಾಟಗಾರರ ಆರೋಪ. ಚುನಾವಣೆಯಲ್ಲಿ ಗೆಲವು ಸಾಧಿಸಿದ ಶಾಸಕರು, ಸಂಸದರು ಕೂಡ ತಮ್ಮ ಜಿಲ್ಲೆಗಳು ಎದುರಿಸುವ ಸಮಸ್ಯೆಗಳನ್ನು ವಿಧಾನಸಭೆ, ಲೋಕಸಭೆಗಳಲ್ಲಿ ಪ್ರಸ್ತಾಪಿಸುವುದಿಲ್ಲ. ಹೀಗಾಗಿ ತಮ್ಮ ನೋವು ನೀಗುವುದೆಂದು, ಅಭಿವೃದ್ಧಿಯ ಪ್ರಶ್ನೆಗಳಿಗೆ ಉತ್ತರ ಸಿಗುವುದೆಂದು ಎಂದು ಜನ ನೋವು ತೋಡಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೇ ಆಗಾಗ ‍ಪ್ರತ್ಯೇಕ ರಾಜ್ಯದ ಕೂಗು ಏಳುತ್ತಿರುತ್ತದೆ. 

ಕಲ್ಯಾಣ ಕರ್ನಾಟಕಕ್ಕೆ ಸಂವಿಧಾನ ಕಲಂ 371 (ಜೆ) ಅಡಿಯಲ್ಲಿ ವಿಶೇಷ ಸವಲತ್ತುಗಳನ್ನು ಕಲ್ಪಿಸಿದರೂ ಈ ಭಾಗದ ಜಿಲ್ಲೆಗಳು ಇನ್ನೂ ಅಭಿವೃದ್ಧಿಯತ್ತ ಹೆಜ್ಜೆ ಹಾಕಿಲ್ಲ. ಮೂಲಸೌಕರ್ಯ, ಕೈಗಾರಿಕೆ, ಶಿಕ್ಷಣ, ಕೃಷಿ, ನೀರಾವರಿ, ನಗರ ಅಭಿವೃದ್ಧಿ, ಪ್ರವಾಸೋದ್ಯಮ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಮಸ್ಯೆಗಳು ಹಾಗೆಯೇ ಉಳಿದುಕೊಂಡಿವೆ. 

ADVERTISEMENT

ವಿಧಾನಸಭೆಯ ಚಳಿಗಾಲದ ಅಧಿವೇಶನಕ್ಕೆ ಬೆಳಗಾವಿಯ ಸುವರ್ಣ ವಿಧಾನಸೌಧ ಸಜ್ಜುಗೊಂಡಿದೆ. ರಾಜ್ಯದ ಉತ್ತರದ ಜಿಲ್ಲೆಗಳು, ಅಲ್ಲಿನ ಜನರ ಸಂಕಷ್ಟಗಳ ಬಗ್ಗೆ ಚರ್ಚಿಸುವ ಉದ್ದೇಶದಿಂದ ಬೆಳಗಾವಿಯಲ್ಲಿ ಪ್ರತಿ ವರ್ಷ ಅಧಿವೇಶನ ನಡೆಸಲಾಗುತ್ತದೆ. ಆದರೆ, ಪ್ರತಿ ಬಾರಿಯೂ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವಿನ ವಾಗ್ವಾದ, ಕಲಹಗಳಲ್ಲೇ ಅಧಿವೇಶನ ಮುಗಿದು ಹೋಗುತ್ತಿದೆ. ಈ ಬಾರಿಯಾದರೂ ಹಲವು ವರ್ಷಗಳಿಂದ ಪರಿಹಾರವಾಗದೇ ಉಳಿದಿರುವ ತಮ್ಮ ಸಮಸ್ಯೆಗಳು, ಅಭಿವೃದ್ಧಿಗೆ ಪೂರಕವಾದ ಚರ್ಚೆಗಳು ನಡೆಯಲಿ ಎಂಬುದು ಉತ್ತರ ಕರ್ನಾಟಕದ ಜಿಲ್ಲೆಗಳ ಜನರ ಆಶಯ.

ಈ ಭಾಗದ ಜಿಲ್ಲೆಗಳು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಆಗಬೇಕಿರುವ ಕೆಲಸಗಳನ್ನು ಇಲ್ಲಿ ನೀಡಲಾಗಿದೆ.  

ಬೆಳಗಾವಿ

  • ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ, ಗೋಕಾಕ ಹಾಗೂ ಚಿಕ್ಕೋಡಿ ಕೇಂದ್ರಗಳಾಗಿ ಇನ್ನೆರಡು ಹೊಸ ಜಿಲ್ಲೆ ರಚಿಸಬೇಕು ಎಂಬ ಬೇಡಿಕೆ ಎರಡು ದಶಕಗಳಿಂದ ಇದ್ದು, ಹೋರಾಟ ಮುಂದುವರಿದಿದೆ

  • ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಮಾದರಿಯಲ್ಲೇ ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ಮಾಡಲಾಗುವುದು ಎಂದು ಹಿಂದಿನ ಬಿಜೆಪಿ ಸರ್ಕಾರ ಘೋಷಿಸಿತ್ತು. ಕಾಂಗ್ರೆಸ್‌ ಸರ್ಕಾರ ಈ ಬೇಡಿಕೆಗೆ ಸ್ಪಂದಿಸಿಲ್ಲ 

  • ಹಿಂದಿನ ಸರ್ಕಾರವು ಬೆಳಗಾವಿ ಜಿಲ್ಲೆಯ 14 ಏತ ನೀರಾವರಿಗಳಿಗೆ ಅನುಮೋದನೆ ನೀಡಿ, ₹5,000 ಕೋಟಿ ಅನುದಾನ ಒದಗಿಸಿತ್ತು. ಹಾಲಿ ಸರ್ಕಾರ ಬಂದ ಮೇಲೆ ಯಾವೊಂದು ಏತ ನೀರಾವರಿಗೂ ಹಣ ನೀಡಿಲ್ಲ

  • ಗೋಕಾಕ ಜಲಪಾತವನ್ನು ಜೋಗದ ಮಾದರಿಯಲ್ಲಿ ಅಂತರರಾಷ್ಟ್ರೀಯ ಪ್ರವಾಸಿತಾಣವಾಗಿಸಬೇಕು ಎಂಬ ಕೂಗು ಮೂರು ದಶಕಗಳಿಂದ ಇದೆ

  • ಬೆಳಗಾವಿ ಜಿಲ್ಲೆಯ ಅಥಣಿ, ರಾಯಬಾಗ, ಕಾಗವಾಡ ಹಾಗೂ ನೆರೆಯ ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ದ್ರಾಕ್ಷಿ ಬೆಳೆಯಲಾಗುತ್ತದೆ. ಇದರಲ್ಲಿ ಶೇ 80ರಷ್ಟು ‌ದ್ರಾಕ್ಷಿಯನ್ನು ಒಣಗಿಸಿ ಮಾರಾಟ ಮಾಡಲಾಗುತ್ತದೆ. ಶೇ 20ರಷ್ಟು ಮಾತ್ರ ಸ್ಥಳೀಯ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ದ್ರಾಕ್ಷಿ ಶೀಥಲೀಕರಣ ಘಟಕ ನಿರ್ಮಾಣ ಮಾಡುವುದು ಹಾಗೂ ರಫ್ತು ಮಾಡಲು ಕಾರ್ಗೊ ವಿಮಾನ ವ್ಯವಸ್ಥೆ ಮಾಡಬೇಕು ಎಂಬ ಬೇಡಿಕೆ ಇನ್ನೂ ಈಡೇರಿಲ್ಲ

ಧಾರವಾಡ

  • ಧಾರವಾಡದ ವಿದ್ಯಾಲಯಗಳಲ್ಲಿ ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳು ವಿವಿಧ ಕೋರ್ಸ್‌ಗಳನ್ನು ಮಾಡುತ್ತಿದ್ದಾರೆ. ಹಾಸ್ಟೆಲ್‌ಗಳ ಕೊರತೆಯಿಂದ ಬಹಳಷ್ಟು ವಿದ್ಯಾರ್ಥಿಗಳು ಪಿ.ಜಿ, ಬಾಡಿಗೆ ಕೊಠಡಿ ಮೊದಲಾದವನ್ನು ಅವಲಂಬಿಸಬೇಕಾದ ಸ್ಥಿತಿ ಇದೆ

  • ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚನೆ ಘೋಷಣೆಯಾಗಿದೆ. ಆದರೆ, ಈವರೆಗೆ ಅಂತಿಮ ಅಧಿಸೂಚನೆ ಪ್ರಕಟವಾಗಿಲ್ಲ. ಧಾರವಾಡಕ್ಕೆ ವರ್ತುಲ ರಸ್ತೆ ನಿರ್ಮಾಣ ಪ್ರಸ್ತಾವ, ಮಹದಾಯಿ ಯೋಜನೆ ನನೆಗುದಿಗೆ ಬಿದ್ದಿವೆ

  • ಕ್ಯಾನ್ಸರ್‌ ರೋಗಿಗಳ ಚಿಕಿತ್ಸೆಗಾಗಿ ಹುಬ್ಬಳ್ಳಿಯಲ್ಲಿ ಪ್ರಾದೇಶಿಕ ಕ್ಯಾನ್ಸರ್‌ ಕೇಂದ್ರ ಸ್ಥಾಪನೆಗೆ ಇಲ್ಲಿನ ಕೆಎಂಸಿಆರ್‌ಐ ಆಸ್ಪತ್ರೆಯಿಂದ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು, ಅನುಮೋದನೆ ಸಿಕ್ಕಿಲ್ಲ

  • ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ಜವಳಿ ಪಾರ್ಕ್‌ ನಿರ್ಮಿಸುವುದಾಗಿ 2022ರ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಈವರೆಗೂ ಅದು ಕಾರ್ಯಗತವಾಗಿಲ್ಲ

  • ಉತ್ತರ ಕರ್ನಾಟಕ ಭಾಗದ ಜನಪದ ಕಲೆಗಳನ್ನು ಉಳಿಸಿ, ಬೆಳೆಸಲು ಹುಬ್ಬಳ್ಳಿಯ ನೃಪತುಂಗ ಬೆಟ್ಟದ ಸಮೀಪದ ಅಧ್ಯಾಪಕ ನಗರದಲ್ಲಿ ನಿರ್ಮಿಸಲಾಗುತ್ತಿರುವ ‘ಜಾನಪದ ಜಗತ್ತು’ ಕಾಮಗಾರಿ 14 ವರ್ಷಗಳಿಂದ ನನೆಗುದಿಗೆ ಬಿದ್ದಿದೆ

ಬಳ್ಳಾರಿ

  • ಜಿಲ್ಲೆಯಲ್ಲಿ ವ್ಯಾಪಕವಾಗಿ ಮೆಣಸಿನಕಾಯಿ ಬೆಳೆಯುತ್ತಿದ್ದರೂ ಮೆಣಸಿನಕಾಯಿ ಮಾರುಕಟ್ಟೆ ಇಲ್ಲ

  • ಸಂಡೂರಿನಲ್ಲಿ ಮೈನಿಂಗ್ ಕಾಲೇಜು ಆರಂಭಿಸುವುದಾಗಿ ಹೇಳಿದ್ದ ಸರ್ಕಾರ ಈವರೆಗೆ ಕ್ರಮ ಜರುಗಿಸಿಲ್ಲ 

ವಿಜಯನಗರ

  • ಹೊಸಪೇಟೆಯಲ್ಲಿ 250 ಹಾಸಿಗೆಗಳ ಸುಸಜ್ಜಿತ ಜಿಲ್ಲಾ ಆಸ್ಪತ್ರೆ ಇನ್ನೂ ಆರಂಭವಾಗದ ಕಾರಣ ಆರೋಗ್ಯ ಸೇವೆಗಳ ಸ್ಥಿತಿಯು ಚಿಂತಾಜನಕ ಸ್ಥಿತಿಯಲ್ಲಿದೆ

  • ರಾಜ್ಯದಲ್ಲಿಯೇ ಅತ್ಯಧಿಕ ಪ್ರಮಾಣದಲ್ಲಿ ಮಾಜಿ ದೇವದಾಸಿಯರು ಇರುವ ಜಿಲ್ಲೆ ಇದು. ಅಪೌಷ್ಟಿಕತೆ ಸಮಸ್ಯೆ ಇಲ್ಲಿನ ಮಕ್ಕಳನ್ನು ಕಾಡುತ್ತಿದ್ದು, ಸದ್ಯ ಜಿಲ್ಲೆಯಲ್ಲಿ 580 ಅಪೌಷ್ಟಿಕ ಮಕ್ಕಳಿರುವುದನ್ನು ಗುರುತಿಸಲಾಗಿದೆ. ಸುಮಾರು 100 ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಇಲ್ಲ. ಶಾಲಾ ಕಟ್ಟಡಗಳ ಸ್ಥಿತಿಯೂ ಅಷ್ಟೇ

  • ಹಂಪಿ ಕನ್ನಡ ವಿಶ್ವವಿದ್ಯಾಲಯವು ಭಾಷೆಯ ಅಭಿವೃದ್ಧಿ, ಸಂಶೋಧನೆಗಾಗಿ ಸ್ಠಾಪನೆಯಾಗಿರುವ ದೇಶದ ಏಕೈಕ ವಿಶ್ವವಿದ್ಯಾಲಯ. ಇಲ್ಲಿ ಬೋಧಕರು, ಅನುದಾನದ ಕೊರತೆ ಕಾಡುತ್ತಿದೆ

ವಿಜಯಪುರ

  • ಜಿಲ್ಲೆಯವರೇ ಆದ ಎಂ.ಬಿ.ಪಾಟೀಲ ಅವರು ಬೃಹತ್‌ ಕೈಗಾರಿಕಾ ಸಚಿವರಾಗಿದ್ದರೂ ಇದುವರೆಗೆ ಕೈಗಾರಿಕೆಗಳು ಆರಂಭವಾಗಿಲ್ಲ. ಮೈಸೂರು ಸ್ಯಾಂಡಲ್‌ ಸೋಪ್‌ ಘಟಕ ಮಾಡುತ್ತೇವೆ ಎಂದು ಘೋಷಣೆ ಮಾಡಿದ್ದರೂ ಆರಂಭವಾಗಿಲ್ಲ

  • ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಆರಂಭಿಸಬೇಕು, ಉದ್ದೇಶಿತ ಖಾಸಗಿ ಸಹಭಾಗಿತ್ವವನ್ನು (ಪಿಪಿಪಿ) ಕೈಬಿಡಬೇಕು ಎಂದು ಆಗ್ರಹಿಸಿ ವಿವಿಧ ವಿದ್ಯಾರ್ಥಿಪರ, ದಲಿತ ಪರ, ಮಹಿಳಾ ಪರ, ರೈತ, ಕಾರ್ಮಿಕ ಪರ, ರಾಜಕೀಯ ಪಕ್ಷಗಳು ಹಾಗೂ ವಿವಿಧ ಸಂಘಟನೆಗಳು ಒಗ್ಗೂಡಿ ಮೂರು ತಿಂಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿವೆ

  • ವಿಜಯಪುರ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ ಕಾರ್ಯಾರಂಭಿಸಿಲ್ಲ

  • ವಿಜಯಪುರದ ಇಟ್ಟಂಗಿಹಾಳದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಫುಡ್‌ ಪಾರ್ಕ್‌ ಸ್ಥಾಪನೆ ಕಾರ್ಯ ಹಾಗೂ ಆಲಮೇಲದಲ್ಲಿ ತೋಟಗಾರಿಕೆ ಕಾಲೇಜು ಸ್ಥಾಪನೆ ಅನುಷ್ಠಾನವಾಗದೇ ನನೆಗುದಿಗೆ ಬಿದ್ದಿವೆ

ಗದಗ

  • ಕಪ್ಪತ್ತಗುಡ್ಡವನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವಂತೆ ಜನರ ಕೂಗಿಗೆ ಇನ್ನೂ ಬಲ ಬಂದಿಲ್ಲ. ನೀಲನಕ್ಷೆ ಸಿದ್ಧವಾಗಿದ್ದರೂ ಅನುದಾನ ಬಿಡುಗಡೆ ಆಗಿಲ್ಲ

  • ಗದಗ ಜಿಲ್ಲೆಯಲ್ಲಿ ಪ್ರವಾಸಿ ಕೇಂದ್ರಗಳ ಸಮಗ್ರ ಅಭಿವೃದ್ಧಿಗಾಗಿ ತಜ್ಞರು ಅಧ್ಯಯನ ನಡೆಸಿ ಅಂದಾಜು ₹804 ಕೋಟಿ ಅನುದಾನ ಬೇಕು ಎಂದು ಸರ್ಕಾರಕ್ಕೆ ವರದಿ ಕೊಟ್ಟಿದ್ದಾರೆ. ಆದರೆ, ಈವರೆಗೆ ಹಣ ಬಿಡುಗಡೆಯಾಗಿಲ್ಲ

  • ಗದಗ -ಬೆಟಗೇರಿ ಅವಳಿ ನಗರದಲ್ಲಿ 24/7 ಕುಡಿಯುವ ನೀರಿನ ಯೋಜನೆ ಲೋಕಾರ್ಪಣೆಗೊಂಡು ಹಲವು ವರ್ಷಗಳು ಕಳೆದರೂ ಪ್ರತಿದಿನವೂ ನೀರು ಸಿಗುತ್ತಿಲ್ಲ. ಕೆಲವೊಮ್ಮೆ ಮಳೆಗಾಲದಲ್ಲೂ ನೀರಿಗೆ ತತ್ವಾರ ಎದುರಾಗುತ್ತಿದೆ

  • ಗದಗ, ಬೆಳಗಾವಿ, ಧಾರವಾಡ, ಬಾಗಲಕೋಟೆ ಸೇರಿದಂತೆ ನಾಲ್ಕು ಜಿಲ್ಲೆಯ 11 ತಾಲ್ಲೂಕುಗಳಲ್ಲಿ ಹರಿಯುತ್ತಿರುವ ಮಲಪ್ರಭಾ ನದಿಗೆ ಮಹದಾಯಿ ನದಿ ಹಾಗೂ ಕಳಸಾ ಬಂಡೂರಿ ನಾಲೆಗಳನ್ನು ಜೋಡಿಸಿ ಈ ಭಾಗದ ಜಮೀನುಗಳಿಗೆ ನೀರಾವರಿ ರೂಪಿಸುವ ಮಹದಾಯಿ, ಕಳಸಾ ಬಂಡೂರಿ ಯೋಜನೆ ಎರಡು ದಶಕಗಳಿಂದ ಈಡೇರಿಲ್ಲ

ಬಾಗಲಕೋಟೆ

1964ರಲ್ಲಿ ಆರಂಭಗೊಂಡ ಕೃಷ್ಣಾ ಮೇಲ್ದಂಡೆ ಯೋಜನೆ ಆರು ದಶಕಗಳು ಕಳೆದರೂ ಪೂರ್ಣಗೊಂಡಿಲ್ಲ. ಇದು ವಿಜಯಪುರ, ಕಲಬುರ್ಗಿ, ರಾಯಚೂರು, ಯಾದಗಿರಿ, ಕೊಪ್ಪಳ, ಬಾಗಲಕೋಟೆ ಸೇರಿದಂತೆ ಹಲವು ಜಿಲ್ಲೆಗಳ 12.14 ಲಕ್ಷ‌ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸುವ ಬೃಹತ್ ಯೋಜನೆಯಾಗಿದೆ. ಮೊದಲ ಹಾಗೂ ಎರಡನೇ ಹಂತದಲ್ಲಿ ಈಗಾಗಲೇ 6.12 ಲಕ್ಷ ಹೆಕ್ಟೇರ್‌ಗೆ ನೀರು ಒದಗಿಸಲಾಗಿದೆ. ಇನ್ನೂ 6 ಲಕ್ಷ‌ ಹೆಕ್ಟೇರ್‌ಗೆ ನೀರು ಒದಗಿಸುವ ಮೂರನೇ ಹಂತದ ಕಾಮಗಾರಿ ಆಗಬೇಕಿದೆ

ಹಾವೇರಿ

  • ಅಖಂಡ ಧಾರವಾಡ ಜಿಲ್ಲೆಯಿಂದ ವಿಭಜನೆಗೊಂಡು ಹೊಸ ಜಿಲ್ಲೆಯಾಗಿ 28 ವರ್ಷವಾದರೂ ಹಾವೇರಿ ನಗರಕ್ಕೆ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ವರದಾ, ತುಂಗಭದ್ರಾ ನದಿಗಳು ಹರಿದಿರುವ ಜಿಲ್ಲೆಯಲ್ಲಿ, ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಯೋಜನೆಗಳಿಲ್ಲ

  • ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಗೊಟಗೋಡಿಯಲ್ಲಿ ವಿಶ್ವದ ಏಕೈಕ ಜಾನಪದ ವಿಶ್ವವಿದ್ಯಾಲಯವಿದೆ. ಹಾವೇರಿಯಲ್ಲಿಯೂ ನೂತನವಾಗಿ ಹಾವೇರಿ ವಿಶ್ವವಿದ್ಯಾಲಯ ಸ್ಥಾಪಿಸಲಾಗಿದೆ. ಎರಡು ವಿಶ್ವವಿದ್ಯಾಲಯಗಳಿಗೂ ಅನುದಾನವಿಲ್ಲ

  • ಹಾವೇರಿ, ರಾಣೆಬೆನ್ನೂರು, ಹಿರೇಕೆರೂರು, ಬ್ಯಾಡಗಿ, ರಟ್ಟೀಹಳ್ಳಿ, ಶಿಗ್ಗಾವಿ ಹಾಗೂ ಸವಣೂರು ತಾಲ್ಲೂಕುಗಳು ಸಾಕಷ್ಟು ಹಿಂದುಳಿದಿವೆ. ಎಲ್ಲ ತಾಲ್ಲೂಕುಗಳ ಸಮಗ್ರ ಅಭಿವೃದ್ಧಿಗೆ ಹೊಸ ಯೋಜನೆಗಳ ಅಗತ್ಯವಿರುವುದಾಗಿ ಜನರು ಒತ್ತಾಯಿಸುತ್ತಿದ್ದಾರೆ

ಕಲಬುರಗಿ

  • ಜಿಲ್ಲೆಯ ಬಹುತೇಕ ನೀರಾವರಿ ಯೋಜನೆಗಳು ವಿಫಲವಾಗಿದ್ದು, ಅಫಜಲಪುರ ತಾಲ್ಲೂಕಿನ ಸೊನ್ನ ಭೀಮಾ ಬ್ಯಾರೇಜ್, ಚಿಂಚೋಳಿ ತಾಲ್ಲೂಕಿನ ನಾಗರಾಳ, ಚಂದ್ರಂಪಳ್ಳಿ ಜಲಾಶಯದ ನೀರು ಹರಿಸಲು ವಿತರಣಾ ಜಾಲವನ್ನು ಬಲಪಡಿಸಲು ಅನುದಾನದ ಅಗತ್ಯವಿದೆ

  • ಕಲಬುರಗಿ ತಾಲ್ಲೂಕಿನ ಹೊನ್ನಕಿರಣಗಿ ಬಳಿ ಪಿಎಂ ಮಿತ್ರಾ ಯೋಜನೆಯಡಿ ಆರಂಭಿಸಲು ಉದ್ದೇಶಿಸಿರುವ ಜವಳಿ ಪಾರ್ಕ್ ಅನುಷ್ಠಾನ ಮಾಡಲು ಅನುದಾನಕ್ಕಾಗಿ ಕೇಂದ್ರದ ಮೇಲೆ ಒತ್ತಡ ಹೇರಬೇಕಾಗಿದೆ

  • ಹೊಸದಾಗಿ ರಚನೆಯಾದ ಶಹಬಾದ್, ಕಾಳಗಿ, ಕಮಲಾಪುರ, ಯಡ್ರಾಮಿ ತಾಲ್ಲೂಕುಗಳಿಗೆ ತಾಲ್ಲೂಕು ಆಸ್ಪತ್ರೆಗಳನ್ನು ಮಂಜೂರು ಮಾಡಬೇಕು ಎಂಬುದು ಇಲ್ಲಿನ ಜನರ ಆಗ್ರಹ

ಕೊಪ್ಪಳ

  • ಕೊಪ್ಪಳ ಸಮೀಪದಲ್ಲಿ ಬಲ್ಡೋಟಾ, ಕಿರ್ಲೋಸ್ಕರ್‌, ಕಲ್ಯಾಣಿ ಸ್ಟೀಲ್, ಮುಕುಂದ ಸುಮಿ, ಎಕ್ಸ್‌ ಇಂಡಿಯಾ ಕಾರ್ಖಾನೆಗಳು ವಿಸ್ತರಣೆಗೆ ಮುಂದಾಗಿದ್ದು, ಈ ಕಾರ್ಖಾನೆಗಳು ಆರಂಭವಾದರೆ ಜಿಲ್ಲಾ ಕೇಂದ್ರ ದೂಳುಮಯವಾಗುತ್ತದೆ. ಈಗಾಗಲೇ ಇರುವ ಕಾರ್ಖಾನೆಗಳಿಂದ ಕೊಪ್ಪಳ ತಾಲ್ಲೂಕಿನ 20 ಹಳ್ಳಿಗಳು ನಲುಗಿ ಹೋಗಿವೆ. ಅದೇ ಪರಿಸ್ಥಿತಿ ಜಿಲ್ಲಾ ಕೇಂದ್ರಕ್ಕೂ ಬರುತ್ತದೆ ಎನ್ನುವ ಆತಂಕ ಜನರಲ್ಲಿದ್ದು ಜಿಲ್ಲಾ ಬಚಾವೊ ಆಂದೋಲನ ಸಮಿತಿ ಅನಿರ್ದಿಷ್ಟ ಅವಧಿ ಧರಣಿ ನಡೆಸುತ್ತಿದೆ. ಜಿಲ್ಲೆಯ ಎಲ್ಲ ಪಕ್ಷಗಳ ಜನಪ್ರತಿನಿಧಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಈಗಾಗಲೇ ಭೇಟಿಯಾಗಿದ್ದಾರೆ. ಬಲ್ಡೋಟಾ ವಿಸ್ತರಣೆ ನಿಲ್ಲಿಸಬೇಕು ಎಂದು ಮೌಖಿಕವಾಗಿ ಹೇಳಿದ್ದಾರೆ. ಈ ಕುರಿತು ಸರ್ಕಾರ ಸ್ಪಷ್ಟನಿರ್ಧಾರ ಕೈಗೊಳ್ಳಬೇಕು, ಲಿಖಿತವಾಗಿ ಆದೇಶ ಹೊರಡಿಸಬೇಕು ಎಂಬುದು ಜಿಲ್ಲೆಯ ಜನರ ಆಗ್ರಹ

  • ತುಂಗಭದ್ರಾ ಜಲಾಶಯದಲ್ಲಿ ಅಂದಾಜು 30 ಟಿಎಂಸಿ ಅಡಿಯಷ್ಟು ಹೂಳು ತುಂಬಿಕೊಂಡಿದೆ. ಜಲಾಶಯ ತುಂಬಿದ ಬಳಿಕ ವ್ಯರ್ಥವಾಗಿ ಹರಿಯುವ ನೀರು ನದಿ ಪಾಲಾಗುವ ಬದಲು ಸಂಗ್ರಹಿಸಲು ಜಿಲ್ಲೆಯ ಕನಕಗಿರಿ ತಾಲ್ಲೂಕಿನ ನವಲಿ ಗ್ರಾಮದ ಬಳಿ ಸಮಾನಾಂತರ ಜಲಾಶಯ ನಿರ್ಮಿಸಲು ₹13,040 ಕೋಟಿ ಮೊತ್ತದ ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲಾಗಿದೆ. ತುಂಗಭದ್ರಾ ಜಲಾಶಯದ ನೀರಿನಲ್ಲಿ ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳು ಪಾಲು ಹೊಂದಿದ್ದು, ಆ ರಾಜ್ಯಗಳಿಂದ ಸ್ಪಂದನೆ ಸಿಗದ ಕಾರಣ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ 

ಬೀದರ್

  • 1987ರಲ್ಲಿ ಕಾರಂಜಾ ಯೋಜನೆಯಲ್ಲಿ ಜಮೀನು ಕಳೆದುಕೊಂಡು ಸಂತ್ರಸ್ತರಾದ ರೈತರಿಗೆ ಪರಿಹಾರ ನೀಡಬೇಕೆನ್ನುವುದು ನಾಲ್ಕು ದಶಕಗಳ ಪ್ರಮುಖ ಬೇಡಿಕೆಯಾಗಿದೆ. ಹೋದ ವರ್ಷ ರೈತರು ಸುದೀರ್ಘ ಒಂದು ವರ್ಷ ಧರಣಿ ನಡೆಸಿದ್ದರು. ಸರ್ಕಾರ ವಿವಿಧ ರೀತಿಯ ನೆಪಗಳನ್ನು ಒಡ್ಡಿ ಪರಿಹಾರ ವಿಳಂಬ ಮಾಡುತ್ತಲೇ ಇದೆ

  • ಕಾರಂಜಾ–ಮಾಂಜ್ರಾ ನದಿ ಜಲಾನಯನ ಪ್ರದೇಶದಲ್ಲಿ ಎರಡು ಏತ ನೀರಾವರಿ ವ್ಯವಸ್ಥೆಗಳನ್ನು ನಿರ್ಮಿಸುವ ಪ್ರಸ್ತಾವ ರಾಜ್ಯ ಸರ್ಕಾರದ ಮುಂದಿದೆ. ಈ ಯೋಜನೆಗಳು ಕೃಷ್ಣಾ ನದಿ ಜಲಾನಯನ ಪ್ರದೇಶದಿಂದ 8.4 ಟಿಎಂಸಿ ಅಡಿ ನೀರನ್ನು ಮತ್ತು ಬಚಾವತ್ ನದಿ ನೀರು ಹಂಚಿಕೆ ಪ್ರಕಾರ ಗೋದಾವರಿ ಜಲಾನಯನ ಪ್ರದೇಶದಿಂದ ಬಳಕೆಯಾಗದ ನೀರನ್ನು ಬಳಸಲು ಉದ್ದೇಶಿಸಲಾಗಿದೆ. ಆದರೆ, ಇದಕ್ಕೆ ಅನುದಾನ ನೀಡಿಲ್ಲ.

  • ಕಲ್ಯಾಣ ಕರ್ನಾಟಕಕ್ಕೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ವಿಶೇಷ ಮೀಸಲಾತಿ ಸೌಲಭ್ಯ ಕಲ್ಪಿಸುವ 371 (ಜೆ) ಸಮರ್ಪಕ ಅನುಷ್ಠಾನಗೊಳಿಸಬೇಕು. ಬ್ಯಾಕ್‌ಲಾಗ್‌ ಸೇರಿದಂತೆ ಎಲ್ಲಾ ರೀತಿಯ ಹುದ್ದೆಗಳನ್ನು ಕಾಲಕಾಲಕ್ಕೆ ಭರ್ತಿ ಮಾಡಬೇಕು ಎನ್ನುವ ಆಗ್ರಹವೂ ಇದೆ

ಯಾದಗಿರಿ

  • ಯಾದಗಿರಿ ಜಿಲ್ಲೆಯಾಗಿ 15 ವರ್ಷಗಳು ಕಳೆದರೂ ಜಿಲ್ಲಾ ಕೇಂದ್ರದಲ್ಲಿ ಒಳಚರಂಡಿ ವ್ಯವಸ್ಥೆಯೇ ಇಲ್ಲ. ಕೊಳಚೆ ನೀರನ್ನು ಸಂಸ್ಕರಣೆ ಮಾಡದೆ ಭೀಮಾ ನದಿಗೆ ಬಿಡಲಾಗುತ್ತಿದೆ. ಇದರ ಜೊತೆಗೆ ಯಾದಗಿರಿ ನಗರಕ್ಕೆ ರಿಂಗ್ ರಸ್ತೆಯೂ ಇಲ್ಲ

  • ಯಾದಗಿರಿ ತಾಲ್ಲೂಕಿನ ಕಡೇಚೂರು–ಬಾಡಿಯಾಳ ಸೀಮೆಯಲ್ಲಿ ಕೈಗಾರಿಕಾ ವಲಯ ಸ್ಥಾಪನೆಗೆ 3,300 ಎಕರೆ ಜಮೀನು ವಶಪಡಿಸಿಕೊಳ್ಳಲಾಗಿದೆ. ಆದರೆ, ಸೂಕ್ತ ಕೈಗಾರಿಕೆಗಳು ಬರದೆ ಇದು ಈಗ ರಾಸಾಯನಿಕ ಔಷಧಿ ಕಂಪನಿಗಳಿಗೆ ಜಾಗ ಮಾಡಿಕೊಟ್ಟಂತೆ ಆಗಿದೆ. ಭೂಮಿ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರವೂ ಬಂದಿಲ್ಲ

  • ಜಿಲ್ಲೆಯು ಭತ್ತದ ಕಣಜ‌ ಎಂದು ಕರೆಸಿಕೊಳ್ಳುತ್ತಿದ್ದರೂ ಅಕ್ಕಿ ಗಿರಣಿಗಳು ಸ್ಥಾಪನೆಯಾಗಿಲ್ಲ. ರೈತರು ಹೆಚ್ಚಾಗಿ ಹತ್ತಿ ಮತ್ತು ಬ್ಯಾಡಗಿ ಮೆಣಸಿನಕಾಯಿ ಬೆಳೆ ಬೆಳೆಯುತ್ತಾರೆ. ಆದರೆ ಸೂಕ್ತ ಮಾರುಕಟ್ಟೆ ಇಲ್ಲವಾಗಿದೆ. ಹತ್ತಿ ಸಂಶೋಧನಾ ಕೇಂದ್ರ ಸ್ಥಾಪಿಸುವ ಬೇಡಿಕೆಗೆ ಮನ್ನಣೆ ಸಿಗುತ್ತಿಲ್ಲ

ರಾಯಚೂರು

  • ಜಿಲ್ಲೆಯ ನದಿ ತೀರದ ಗ್ರಾಮಗಳ ರೈತರ ಹೊಲಗಳಿಗೆ ಪ್ರಸ್ತುತ ಮಾರ್ಚ್‌ 30ರ ವರೆಗೆ ಮಾತ್ರ ನೀರು ಪೂರೈಕೆಯಾಗುತ್ತಿದೆ. ಆಲಮಟ್ಟಿ ಡ್ಯಾಂ ಎತ್ತರಿಸಿದರೆ ಏಪ್ರಿಲ್ 15ರ ವರೆಗೂ ನೀರು ಲಭಿಸಲಿದೆ. ಇದರಿಂದ ಬೇಸಿಗೆಯಲ್ಲಿ ನೀರಿನ ಕೊರತೆ ನೀಗಲಿದೆ. ಜಿಲ್ಲೆಯಲ್ಲಿ ಮುಖ್ಯ ಕಾಲುವೆಗಳು ನಿರ್ಮಾಣವಾಗಿವೆ. ಇದರ ಜತೆಗೆ ಹೊಲಗಾಲುವೆಗಳೂ ನಿರ್ಮಾಣವಾಗಬೇಕು ಎಂಬುದು ರೈತರ ಒತ್ತಾಯ

  • ಜಿಲ್ಲೆಯಲ್ಲಿ ಕೃಷ್ಣ ಭಾಗ್ಯ ಜಲ ನಿಗಮದ ‘ಬಿ’ ಸ್ಕೀಮ್ (ಅಣೆಕಟ್ಟು ಎತ್ತರ ಕಾಮಗಾರಿ ನಡೆದಾಗ ನೀರು ಹರಿಸುವುದು) ಯೋಜನೆಯಡಿ ನಾರಾಯಣಪುರ ಬಲದಂಡೆ 9 (ಎ) ವಿತರಣಾ ಕಾಲುವೆ ಕಾಮಗಾರಿ 13 ವರ್ಷಗಳಿಂದ ನನೆಗುದಿಗೆ ಬಿದ್ದಿದೆ

  • ಯುಕೆಪಿ–3ರಲ್ಲಿ ನಾರಾಯಣಪುರ ಬಲದಂಡೆ ಕಾಲುವೆ 150 ಕಿಮೀ ವರೆಗೆ ವಿಸ್ತರಣೆ ಹಾಗೂ ರಾಂಪುರ ಏತ ನೀರಾವರಿ ಯೋಜನೆ 20ರಿಂದ 27 ಕಿ.ಮೀ ವರೆಗೆ ವಿಸ್ತರಣೆ ಕಾಮಗಾರಿ ಮುಗಿದಿದೆ. ಲಿಂಗಸುಗೂರು ತಾಲ್ಲೂಕಿನ ಹೊನ್ನಹಳ್ಳಿ, ಯರಡೋಣಾ, ಗುಡದನಾಳ ಸೇರಿದಂತೆ ಇತರೆ ಗ್ರಾಮಗಳಲ್ಲಿನ ರೈತರ ಜಮೀನು ದಾಖಲೆಯಲ್ಲಿ ಕೆಲ ದೋಷಗಳು ಇರುವುದರಿಂದ ಭೂ ಪರಿಹಾರ ಬಂದಿಲ್ಲ

  • ಜಿಲ್ಲೆಯಲ್ಲಿ ಹೆದ್ದಾರಿ ನಿರ್ಮಾಣ ಕಾಮಗಾರಿ ನಿಧಾನಗತಿಯಲ್ಲಿ ಸಾಗಿರುವ ಕಾರಣ ಸಾರಿಗೆ ಸಂಪರ್ಕ ಹಾಗೂ ವ್ಯಾಪಾರ ವಹಿವಾಟಿನ ಮೇಲೆ ಪರಿಣಾಮ ಬೀರಿದೆ. ರಸ್ತೆಗಳು ಸರಿಯಾಗಿ ಇಲ್ಲದ ಕಾರಣ ರೈತರರು ಕೃಷಿ ಉತ್ಪನ್ನಗಳನ್ನು ಎಪಿಎಂಸಿಗೆ ಸಾಗಿಸಲು ನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ

  • ಜಿಲ್ಲೆಯಲ್ಲಿ 110 ಜಿನ್ನಿಂಗ್‌ ಫ್ಯಾಕ್ಟರಿಗಳಿದ್ದರೂ ಜವಳಿ ಪಾರ್ಕ್‌ ನಿರ್ಮಿಸಲು ಉದ್ಯಮಿಗಳು ಮುಂದೆ ಬರುತ್ತಿಲ್ಲ. ಸಾರಿಗೆ ಸಮಸ್ಯೆಯೇ ಅಭಿವೃದ್ಧಿಗೆ ತೊಡಕಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.