ADVERTISEMENT

ಆಳ–ಅಗಲ: ಬೊಜ್ಜು ‘ಭಾರ’

ಜಾಗತಿಕ ಮಟ್ಟದಲ್ಲಿ ಬೊಜ್ಜು, ಹೃದಯ ಕಾಯಿಲೆಗಳಲ್ಲಿ ಭಾರತಕ್ಕೆ ಮುಂಚೂಣಿ ಸ್ಥಾನ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2025, 19:23 IST
Last Updated 26 ಫೆಬ್ರುವರಿ 2025, 19:23 IST
   
ಬೊಜ್ಜು ಈಗ ಜಾಗತಿಕ ಸಮಸ್ಯೆಯಾಗಿದೆ. ಭಾರತದಲ್ಲೂ ಜನಾರೋಗ್ಯಕ್ಕೆ ದೊಡ್ಡ ಕಂಟಕವಾಗಿದೆ. ದೇಶದಲ್ಲಿ ಬೊಜ್ಜಿನ ಸಮಸ್ಯೆ ಮೂರು ಪಟ್ಟು ಹೆಚ್ಚಾಗಿದ್ದು, ಜನರಲ್ಲಿ ಮಧುಮೇಹ, ರಕ್ತದೊತ್ತಡ, ಹೃದ್ರೋಗ ಮುಂತಾದ  ಕಾಯಿಲೆಗಳು ಹೆಚ್ಚುತ್ತಿವೆ. ಬೊಜ್ಜಿನ ಮೂಲ ಆಹಾರ ಪದ್ಧತಿಯಲ್ಲಿದೆ. ಅಧಿಕ ಉಪ್ಪು, ಸಕ್ಕರೆ, ಎಣ್ಣೆಯಲ್ಲಿ ಕರಿದ ಪದಾರ್ಥಗಳ ಸೇವನೆಯು ಸ್ಥೂಲಕಾಯಕ್ಕೆ ಕಾರಣವಾಗುವುದಲ್ಲದೆ, ತೀವ್ರಗತಿಯಲ್ಲಿ ಕಾಯಿಲೆಗಳು ಹೆಚ್ಚಾಗಲು ಕಾರಣವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿಯ ‘ಮನದ ಮಾತು’ ಕಾರ್ಯಕ್ರಮದಲ್ಲಿ ದೇಶದ ಜನರಿಗೆ ಹೊಸ ಸಂದೇಶವೊಂದನ್ನು ನೀಡಿದ್ದಾರೆ. ಬೊಜ್ಜಿನ ಸಮಸ್ಯೆ ನಿವಾರಿಸಲು ಆಹಾರದಲ್ಲಿ ಬಳಸುವ ಅಡುಗೆ ಎಣ್ಣೆಯ ಪ್ರಮಾಣವನ್ನು ಪ್ರತಿ ತಿಂಗಳು ಶೇ 10ರಷ್ಟು ಕಡಿತ ಮಾಡುವಂತೆ ಮನವಿ ಮಾಡಿದ್ದಾರೆ. ಇದಕ್ಕಾಗಿ ಒಂದು ಅಭಿಯಾನವನ್ನೇ ಆರಂಭಿಸಿದ್ದು, ಜನಜಾಗೃತಿ ಮೂಡಿಸಲು ವಿವಿಧ ಕ್ಷೇತ್ರಗಳ 10 ಮಂದಿ ಗಣ್ಯರನ್ನು ನಾಮ ನಿರ್ದೇಶನ ಮಾಡಿದ್ದಾರೆ.

ಈ ಅಭಿಯಾನವು ಬೊಜ್ಜಿನ ಸಮಸ್ಯೆಯ ತೀವ್ರತೆಯನ್ನು ಹೇಳುತ್ತಿದೆ. ಮಧುಮೇಹ, ರಕ್ತದೊತ್ತಡ, ಹೃದಯದ ಕಾಯಿಲೆಗಳಿಂದ ಮುಕ್ತವಾಗಿ ಆರೋಗ್ಯಕರ ಜೀವನ ನಡೆಸುವುದು ಭಾರತೀಯರ ಮಟ್ಟಿಗೆ ಇಂದು ಭಾರಿ ಸವಾಲೇ ಆಗಿದೆ. ಚಿಕ್ಕ ವಯಸ್ಸಿನಲ್ಲೇ ಜನರ ಪ್ರಾಣಕ್ಕೆ ಸಂಚಕಾರ ತರುತ್ತಿರುವ ಈ ಕಾಯಿಲೆಗಳ ಹಿಂದೆ ಬೊಜ್ಜಿನ ಕೊಡುಗೆ ಇದೆ. ಲಿಂಗ, ವಯಸ್ಸು, ಆರ್ಥಿಕ ಸ್ಥಿತಿಗತಿಗಳ ಭೇದವಿಲ್ಲದೇ ಎಲ್ಲರಲ್ಲೂ ಬೊಜ್ಜಿನ ಸಮಸ್ಯೆ ಹೆಚ್ಚಾಗುತ್ತಿದೆ. ಇದೆಲ್ಲಕ್ಕೂ ಮೂಲ ಜನರು ತಿನ್ನುವ ಆಹಾರ ಎನ್ನುವುದನ್ನು ಅಧ್ಯಯನ ವರದಿಗಳು ಹೇಳುತ್ತಲೇ ಇವೆ. 

ಅಂತರರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯ (ಐಎಫ್‌ಪಿಆರ್‌ಐ) ಜಾಗತಿಕ ಆಹಾರ ಪದ್ಧತಿ ವರದಿ–2024ರ ಪ್ರಕಾರ, ಭಾರತೀಯರ ಆಹಾರ ಪದ್ಧತಿಯಲ್ಲಿ ಅನಾರೋಗ್ಯಕರ ಅಂಶಗಳು ಹಲವು ಇವೆ. ದೇಶದ ಶೇ 38 ಮಂದಿ ಅಧಿಕ ಉಪ್ಪು ಇರುವ, ಎಣ್ಣೆಯಲ್ಲಿ ಕರಿದ ಪದಾರ್ಥ ಸೇರಿದಂತೆ ಅನಾರೋಗ್ಯಕರ ಆಹಾರ ‍ಸೇವಿಸುತ್ತಿದ್ದಾರೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ಐಸಿಎಂಆರ್) 2024ರ ಏಪ್ರಿಲ್‌ನಲ್ಲಿ ಆಹಾರ ಸೇವನೆ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ದೇಶದಲ್ಲಿ ಶೇ 56.4ರಷ್ಟು ಕಾಯಿಲೆಗಳು ಆರೋಗ್ಯಕರವಲ್ಲದ ಆಹಾರ ಸೇವನೆಯಿಂದಲೇ ಬರುತ್ತಿವೆ ಎಂದು ಪ್ರತಿಪಾದಿಸಿದೆ. ದೇಶದ ಜನರನ್ನು ಕಾಡುತ್ತಿರುವ ಬೊಜ್ಜಿನ ಸಮಸ್ಯೆಯ ಕುರಿತಾಗಿ 2023–24ರ ಆರ್ಥಿಕ ಸಮೀಕ್ಷೆ ತೀವ್ರ ಕಳವಳ ವ್ಯಕ್ತಪಡಿಸಿತ್ತು.

ADVERTISEMENT

ಜನರ ದೈಹಿಕ ಚಟುವಟಿಕೆ ಕಡಿಮೆಯಾಗುತ್ತಿರುವುದು, ಅಡುಗೆ ಎಣ್ಣೆ, ಕೊಬ್ಬು, ಸಕ್ಕರೆ ಬಳಸಿದ ಆಹಾರಗಳ ಸೇವನೆ ಹೆಚ್ಚಿರುವುದು, ಪಿಜ್ಜಾ, ಬರ್ಗರ್‌, ಫ್ರೆಂಚ್‌ ಫ್ರೈಗಳಂತಹ ಜಂಕ್‌ ಫುಡ್‌ ಸೇವನೆ, ಆಹಾರದಲ್ಲಿ ವೈವಿಧ್ಯ, ಸೂಕ್ಷ್ಮ ಪೋಷಕಾಂಶಗಳ ಕೊರತೆ ಇರುವ ಕಾರಣಕ್ಕೆ ಭಾರತದಲ್ಲಿ ಬೊಜ್ಜಿನ ಸಮಸ್ಯೆ ಗಣನೀಯವಾಗಿ ಹೆಚ್ಚಳವಾಗಿದೆ; ಮಕ್ಕಳಲ್ಲಿಯೂ ಸ್ಥೂಲಕಾಯದ ಏರಿಕೆ ಪ್ರಮಾಣ ಜಾಗತಿಕ ಮಟ್ಟಕ್ಕೆ ಹೋಲಿಸಿದರೆ ವಿಪರೀತ ಹೆಚ್ಚುತ್ತಿದೆ ಎಂದು ವಿಶ್ವ ಸ್ಥೂಲಕಾಯ ಒಕ್ಕೂಟ ಹೇಳಿದೆ. 

ಬೊಜ್ಜು ಜಾಗತಿಕ ಮಟ್ಟದಲ್ಲಿಯೂ ದೊಡ್ಡ ಸಮಸ್ಯೆಯಾಗಿದೆ. ಲ್ಯಾನ್ಸೆಟ್ ವರದಿ ಪ್ರಕಾರ, 1990ರಿಂದ 2022ರ ನಡುವೆ ಜಗತ್ತಿನಲ್ಲಿ ಬೊಜ್ಜು ಹೊಂದಿರುವವರ ಸಂಖ್ಯೆ ದುಪ್ಪಟ್ಟಾಗಿದೆ.

ಹಲವು ರೀತಿಯ ಕಾಯಿಲೆಗಳಿಗೆ ಕಾರಣವಾಗುವ ಬೊಜ್ಜು ದೀರ್ಘಾವಧಿಯ ಸಮಸ್ಯೆ. ಇದು ದೇಹದ ವಿವಿಧ ಅಂಗಗಳ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಮುಕ್ತಿ ಹೊಂದಿ, ಆರೋಗ್ಯಕರ ಜೀವನ ಸಾಗಿಸಬೇಕೆಂದರೆ, ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಮುಖ್ಯವಾಗಿ ಆರೋಗ್ಯಕರವಾದ ಆಹಾರ ಸೇವಿಸಬೇಕು. ನಾರಿನ ಅಂಶ ಹೆಚ್ಚಿರುವ ಪದಾರ್ಥ, ಹಸಿರು ತರಕಾರಿ, ಸೊಪ್ಪು, ಧಾನ್ಯ, ಮೊಟ್ಟೆ, ಮೀನು, ಮಾಂಸ ಉತ್ತಮ ಆರೋಗ್ಯಕ್ಕೆ ಸಹಕಾರಿ. ಕಾರ್ಬೋಹೈಡ್ರೇಟ್ಸ್‌ (ಶರ್ಕರಪಿಷ್ಠ) ಇರುವ ಆಹಾರ ಮಿತವಾಗಿ ಸೇವಿಸಬೇಕು ಎನ್ನುವುದು ತಜ್ಞರ ಸಲಹೆ.  

ಕಾಯಿಲೆಗಳನ್ನು ತಡೆಯುವಲ್ಲಿ, ಆಹಾರ ಸೇವನೆಯಷ್ಟೇ ದೈಹಿಕ ಚಟುವಟಿಕೆಯೂ ಮುಖ್ಯ ಪಾತ್ರ ವಹಿಸುತ್ತದೆ. ವಯಸ್ಕರಿಗೆ ವಾರಕ್ಕೆ 150 ನಿಮಿಷ ಮಧ್ಯಮ ತೀವ್ರತೆಯ ಅಥವಾ 75 ನಿಮಿಷ ಭಾರಿ ತೀವ್ರತೆಯ ದೈಹಿಕ ಚಟುವಟಿಕೆ ಅಥವಾ ವ್ಯಾಯಾಮ ಅಗತ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. 

ಬೊಜ್ಜಿನಿಂದ ಕಾಯಿಲೆಗಳು
ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಕಾಯಿಲೆ, ಮಿದಳು ರಕ್ತಸ್ರಾವ, ಕೊಬ್ಬಿದ ಯಕೃತ್ತಿನ ಕಾಯಿಲೆ (ಎನ್‌ಎಎಫ್‌ಎಲ್‌ಡಿ), ಸ್ತನ ಕ್ಯಾನ್ಸರ್, ನಿದ್ರಾಹೀನತೆ, ಮೂಳೆ ಸವೆತ, ಕೀಲು ನೋವು

ಬೊಜ್ಜಿನ ಪ್ರಮಾಣ ಅಳೆಯುವುದು ಹೇಗೆ? 

ಬೊಜ್ಜಿನ ಪ್ರಮಾಣವನ್ನು ಅಳೆಯಲು ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ) ಪರಿಕಲ್ಪನೆಯನ್ನು ಬಳಸಲಾಗುತ್ತದೆ. ವ್ಯಕ್ತಿಯ ವಯಸ್ಸು, ತೂಕ, ಎತ್ತರ ಮುಂತಾದ ಅಂಶಗಳ ಸರಾಸರಿಯ ಆಧಾರದಲ್ಲಿ ಬಿಎಂಐ ಲೆಕ್ಕಾಚಾರ ಹಾಕಲಾಗುತ್ತದೆ. ಬಿಎಂಐ ಪ್ರಮಾಣ ಶೇ 30ಕ್ಕಿಂತ ಹೆಚ್ಚಿದ್ದರೆ ಅದನ್ನು ಸ್ಥೂಲಕಾಯ ಎಂದು ಪರಿಗಣಿಸಲಾಗುತ್ತಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ತಜ್ಞರು ಬೊಜ್ಜು ಅಳೆಯಲು ಬಿಎಂಐ ಅಷ್ಟು ಸರಿಯಾದ ಮಾನದಂಡ ಅಲ್ಲ ಎನ್ನುತ್ತಿದ್ದಾರೆ. ಬಿಎಂಐ 30ಕ್ಕಿಂತ ಕಡಿಮೆ ಇರುವವರಲ್ಲಿಯೂ ಬೊಜ್ಜು ಇರುವುದು ಕಂಡುಬಂದಿದೆ. ಹಾಗಾಗಿ ಬೊಜ್ಜಿನ ಪ್ರಮಾಣ ಕಂಡುಹಿಡಿಯಲು ಬಿಎಂಐ ಮಾದರಿಯೊಂದನ್ನೇ ಅವಲಂಬಿಸಬಾರದು ಎಂದು ಲ್ಯಾನ್ಸೆಟ್ ವರದಿ ಅಭಿಪ್ರಾಯಪಟ್ಟಿದೆ.    

ಪ್ರಸ್ತುತ ಭಾರತದಲ್ಲಿ ತಲಾ ಅಡುಗೆ ಎಣ್ಣೆ ಬಳಕೆಯ ಪ್ರಮಾಣ ವಾರ್ಷಿಕವಾಗಿ 20 ಕೆ.ಜಿ.ಗೂ ಅಧಿಕ ಇದೆ ಎನ್ನಲಾಗಿದೆ. ಐಸಿಎಂಆರ್ ಪ್ರಕಾರ, ತಲಾ ಅಡುಗೆ ಎಣ್ಣೆ ಬಳಕೆ ವಾರ್ಷಿಕ ಮಿತಿ 12 ಕೆ.ಜಿ., ಡಬ್ಲ್ಯುಎಚ್‌ಒ ಪ್ರಕಾರ ತಲಾ 13 ಕೆ.ಜಿ. ಇರಬೇಕು.

ಕಲಬೆರಕೆ ಅಡುಗೆ ಎಣ್ಣೆಯಿಂದಲೂ ಕುತ್ತು

ಭಾರತದಲ್ಲಿ ಕಲಬೆರಕೆ ಅಡುಗೆ ಎಣ್ಣೆಯ ಸಮಸ್ಯೆಯೂ ತೀವ್ರವಾಗಿದ್ದು, ಇದು ಕೂಡ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. 

ರಿಫೈನ್ಡ್‌ ಅಡುಗೆ ಎಣ್ಣೆ ದೇಶದಲ್ಲಿ ದುಬಾರಿ. ರಿಫೈನ್ಡ್‌ ಮಾಡದೇ ಇರುವ ಎಣ್ಣೆ ಮತ್ತೂ ದುಬಾರಿ. ಆರ್ಥಿಕವಾಗಿ ದುರ್ಬಲವಾಗಿರುವವರಿಗೆ ಅಷ್ಟು ಹಣ ನೀಡಿ ಅಡುಗೆ ಎಣ್ಣೆಯನ್ನು ಅಥವಾ ಅಂತಹ ಎಣ್ಣೆಯನ್ನೇ ಬಳಸಿ ತಯಾರಿಸಿದ ಆಹಾರ ಪದಾರ್ಥಗಳನ್ನು ಖರೀದಿಸುವ ಶಕ್ತಿ ಇಲ್ಲ. ಇದೇ ಅವಕಾಶವನ್ನು ಬಳಸಿಕೊಳ್ಳುವ ಅಡುಗೆ ಎಣ್ಣೆ ಮಾಫಿಯಾವು ಕಡಿಮೆ ಬೆಲೆಗೆ ಕಲಬೆರಕೆ ಎಣ್ಣೆಯನ್ನು ಮಾರುಕಟ್ಟೆಗೆ ಬಿಡುತ್ತಿದೆ. ಅಗ್ಗ ಎನ್ನುವ ಕಾರಣಕ್ಕೆ ಬಡ ಕುಟುಂಬಗಳು, ರಸ್ತೆ ಬದಿಗಳಲ್ಲಿ ತಳ್ಳುಗಾಡಿಗಳಲ್ಲಿ ಫಾಸ್ಟ್‌ಫುಡ್‌ ಅಂಗಡಿಗಳನ್ನು ಇಟ್ಟವರು, ಸಣ್ಣಪುಟ್ಟ ಹೋಟೆಲ್‌ಗಳನ್ನು ನಡೆಸುತ್ತಿರುವವರು ಇಂತಹ ಎಣ್ಣೆಯನ್ನೇ ಅಡುಗೆಗೆ ಬಳಸುತ್ತಾರೆ. ಇದಲ್ಲದೇ, ಹೋಟೆಲ್‌, ಬೇಕರಿ, ಆಹಾರ ಮಳಿಗೆಗಳಲ್ಲಿ ಒಮ್ಮೆ ಕರಿದ ಎಣ್ಣೆಯಲ್ಲೇ ಮತ್ತೆ ಮತ್ತೆ ಆಹಾರಗಳನ್ನು ಕರಿಯುವುದು ಕೂಡ ಗ್ರಾಹಕರ ಆರೋಗ್ಯಕ್ಕೆ ಮುಳುವಾಗುತ್ತಿದೆ.

ಪ್ರಧಾನಿ ಕರೆಗೆ ಸಿಗುವುದೇ ಸ್ಪಂದನೆ?
ಪ್ರಧಾನಿ ಮೋದಿ ಅವರು ‘ಮನದ ಮಾತು’ ಕಾರ್ಯಕ್ರಮದಲ್ಲಿ ನೀಡಿರುವ ಕರೆಯನ್ನು ವೈದ್ಯರು, ಸೆಲೆಬ್ರಿಟಿಗಳು ಸೇರಿದಂತೆ ವಿವಿಧ ವಲಯಗಳ ಕೆಲವು ಗಣ್ಯರು ಸ್ವಾಗತಿಸಿದ್ದಾರೆ. 2015ರ ಮಾರ್ಚ್‌ನಲ್ಲಿ ಮೋದಿ ಅವರು ‘ಅನುಕೂಲಸ್ಥರು ಎಲ್‌ಪಿಜಿ ಸಬ್ಸಿಡಿ ಬಿಟ್ಟುಕೊಡಿ. ಇದರಿಂದ ಬಡವರಿಗೆ ಉಚಿತ ಅಡುಗೆ ಅನಿಲ ಸಂಪರ್ಕ ನೀಡಲು ಸಹಾಯವಾಗಲಿದೆ’ ಎಂದು ಕರೆ ನೀಡಿದ್ದರು. ಸುಮಾರು ಒಂದು ಕೋಟಿ ಮಂದಿ ತಮ್ಮ ಎಲ್‌ಪಿಜಿ ಸಬ್ಸಿಡಿ ಬಿಟ್ಟುಕೊಟ್ಟಿದ್ದಾರೆ ಎಂದು ವರದಿಯಾಗಿತ್ತು. ಕೊನೆಗೆ, ಸರ್ಕಾರ ಸದ್ದಿಲ್ಲದೇ ಎಲ್‌ಪಿಜಿ ಸಬ್ಸಿಡಿ ರದ್ದು ಮಾಡಿತ್ತು. ವಿವಿಧ ವಿಷಯಗಳ ಬಗ್ಗೆ ದೇಶದ ಜನರಲ್ಲಿ ಜಾಗೃತಿ ಮೂಡಿಸಲು ಮೋದಿ ಅವರು ‘ಮನದ ಮಾತು’ ವೇದಿಕೆಯನ್ನು ಬಳಸಿಕೊಳ್ಳುತ್ತಿದ್ದು, ಈ ಹಿಂದೆ ಖಾದಿ ಬಟ್ಟೆ ಬಳಕೆ, ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸುವುದು ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಪ್ರಸ್ತಾಪಿಸಿದ್ದರು.

ಎಣ್ಣೆ ಪದಾರ್ಥ ಸೇವನೆ ಕಡಿಮೆ ಮಾಡಿ

ದೊಡ್ಡವರಲ್ಲಿ ಮಾತ್ರವಲ್ಲ, ಮಕ್ಕಳಲ್ಲೂ ಸ್ಥೂಲಕಾಯದ ಸಮಸ್ಯೆ ಹೆಚ್ಚುತ್ತಿದೆ. ಎಣ್ಣೆಯಲ್ಲಿ ಕರಿದ ಪದಾರ್ಥಗಳ ಸೇವನೆ ಒಳ್ಳೆಯದಲ್ಲ. ಕುರುಕಲು ತಿಂಡಿಗಳ ಅತಿಯಾದ ಸೇವನೆಯೂ ಮುಖ್ಯ ಕಾರಣ. ಮಕ್ಕಳಲ್ಲಿ ದೈಹಿಕ ಚಟುವಟಿಕೆಗಳು ಕಡಿಮೆಯಾಗುತ್ತಿದ್ದು, ಟಿ.ವಿ. ವೀಕ್ಷಿಸುತ್ತಾ ಕುರುಕಲು ತಿಂಡಿ ತಿನ್ನುವವರ ಸಂಖ್ಯೆ ಹೆಚ್ಚುತ್ತಿದೆ. ಇದು ಮಕ್ಕಳಿಗೆ ಅಪಾಯ ತಂದೊಡ್ಡುವ ಸಾಧ್ಯತೆಯಿದೆ. ಆದ್ದರಿಂದ ಎಣ್ಣೆಯಲ್ಲಿ ಕರಿದ ತಿನಿಸುಗಳ ಸೇವನೆ ಕಡಿಮೆ ಮಾಡಬೇಕು. ಬಾಲ್ಯಾವಸ್ಥೆಯಲ್ಲಿ ಕಂಡು ಬರುವ ಸ್ಥೂಲಕಾಯವು ಬಹುಬೇಗ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ, ನಿದ್ರಾಹೀನತೆ, ಸಂಧಿವಾತ ಸೇರಿ ವಿವಿಧ ಸಮಸ್ಯೆಗಳಿಗೆ ಕಾರಣವಾಗಬಹುದು..
–ಡಾ.ಸಂಜಯ್ ಕೆ.ಎಸ್., ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.