ADVERTISEMENT

ಆಳ ಅಗಲ | ಆನ್‌ಲೈನ್‌ ಗೇಮಿಂಗ್‌: ಬೇಕಿದೆ ಅಂಕುಶ

ಹೆಚ್ಚುತ್ತಿದೆ ಡಿಜಿಟಲ್ ಜೂಜಿನ ಗೀಳು; ಕಾನೂನಿನ ಅಸ್ಪಷ್ಟತೆ; ಹಲವು ರಾಜ್ಯಗಳಲ್ಲಿ ‌ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2025, 0:11 IST
Last Updated 1 ಏಪ್ರಿಲ್ 2025, 0:11 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   
ಆನ್‌ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್ ಜಾಹೀರಾತುಗಳಲ್ಲಿ ಕಾಣಿಸಿಕೊಂಡ ಸಿನಿಮಾ ನಟರು ಮತ್ತು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುವ ಮೂಲಕ ಉತ್ತೇಜಿಸಿದ ಯುಟ್ಯೂಬರ್‌ಗಳ ವಿರುದ್ಧ ತೆಲಂಗಾಣದಲ್ಲಿ ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ಆನ್‌ಲೈನ್ ಗೇಮಿಂಗ್ ವಿಚಾರ ಮುನ್ನೆಲೆಗೆ ಬಂದಿದೆ. ಇವುಗಳ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಕೆಲವು ನಿಯಮಗಳನ್ನು ರೂಪಿಸಿದ್ದರೂ ಇದರ ಬಗ್ಗೆ ರಾಜ್ಯಗಳೇ ಕ್ರಮ ಕೈಗೊಳ್ಳಬೇಕು ಎಂದು ಹೇಳುತ್ತಿದೆ. ಕೆಲವು ರಾಜ್ಯಗಳಲ್ಲಿ ನಿರ್ಬಂಧ ಹೇರಲಾಗಿದೆ. ಈ ಬಗ್ಗೆ ಕಾನೂನಿನಲ್ಲಿ ಸ್ಪಷ್ಟತೆಯ ಕೊರತೆ ಇದೆ. ಅತ್ಯಂತ ಬೇಗ ಹಣ ಮಾಡುವ ಆಸೆಯಿಂದ ಜನ ಅತ್ಯಂತ ಶೀಘ್ರವಾಗಿ ಹಣ ಕಳೆದುಕೊಳ್ಳುತ್ತಲೇ ಇದ್ದಾರೆ

ಆನ್‌ಲೈನ್ ಗೇಮಿಂಗ್‌ (ಆಟ) ಮಾರುಕಟ್ಟೆ ಭಾರತದಲ್ಲಿ ಭಾರಿ ವೇಗವಾಗಿ ಬೆಳವಣಿಗೆ ಕಾಣುತ್ತಿದೆ. ದೇಶದಲ್ಲಿ ಡಿಜಿಟಲ್ ಕ್ರಾಂತಿ ಸಂಭವಿಸಿದ ನಂತರ ಗೇಮಿಂಗ್ ಆ್ಯಪ್‌ಗಳು ಮತ್ತು ವೆಬ್‌ಸೈಟ್‌ಗಳು ಅತ್ಯಂತ ತ್ವರಿತವಾಗಿ ಬೆಳವಣಿಗೆ ಕಂಡವು. ದೇಶದಲ್ಲಿ ಯುವಜನರೇ‌ ಬಹುಸಂಖ್ಯಾತರಾಗಿದ್ದು, ಈ ಪೈಕಿ ಹೆಚ್ಚಿನವರ ಬಳಿ ಸ್ಮಾರ್ಟ್‌ ಫೋನ್‌ಗಳಿವೆ. ಆನ್‌ಲೈನ್ ಗೇಮಿಂಗ್ ಉದ್ಯಮ ಬಹುಬೇಗ ಬೆಳೆಯಲು ಇದು ಪ್ರಮುಖ ಕಾರಣ.

‌ಡಿಜಿಟಲ್ ಪೇಮೆಂಟ್ ಆ್ಯಪ್‌ಗಳು ಬಳಕೆಗೆ ಬಂದ ನಂತರ ಇದು ಮತ್ತಷ್ಟು ಹೆಚ್ಚಾಯಿತು. ಅನೇಕ ದೇಶೀಯ ಮತ್ತು ವಿದೇಶಿ ಮೂಲದ ಕಂಪನಿಗಳು ಗೇಮಿಂಗ್‌ ಆ್ಯಪ್‌ಗಳನ್ನು ಅಭಿವೃದ್ಧಿ‍ಪಡಿಸಿ, ವಾರ್ಷಿಕವಾಗಿ ಸಾವಿರಾರು ಕೋಟಿ ರೂಪಾಯಿಗಳ ವ್ಯವಹಾರ ಮಾಡುತ್ತಿವೆ. ಸೆಲೆಬ್ರೆಟಿಗಳು, ಕ್ರೀಡಾಪಟುಗಳು, ನಟ ನಟಿಯರು ಇದರ ಜಾಹೀರಾತು ಪ್ರಚಾರಕರಾಗಿದ್ದಾರೆ. ಆನ್‌ಲೈನ್ ಗೇಮಿಂಗ್ ಮೂಲಕ ಮನೆಯಲ್ಲಿಯೇ ಕುಳಿತು ಸುಲಭವಾಗಿ ಮತ್ತು ಶೀಘ್ರವಾಗಿ ಹಣ ಮಾಡಬಹುದು ಎಂದು ಪ್ರಚಾರ ಮಾಡಲಾಗುತ್ತಿದೆ. ಹಲವು ರೀತಿಯ ಬೆಟ್ಟಿಂಗ್ ಆ್ಯಪ್‌ಗಳು ಚಾಲ್ತಿಯಲ್ಲಿದ್ದು, ಒಂದೊಂದರಲ್ಲೂ ಹಲವು ರೀತಿಯ ಆಟಗಳಿವೆ.

ADVERTISEMENT

ಇದರ ಬೆನ್ನಲ್ಲೇ, ಇದರಿಂದ ಹಣ ಕಳೆದುಕೊಂಡು ಬೀದಿಗೆ ಬಿದ್ದವರು, ಐಪಿಎಲ್‌ ಸೇರಿದಂತೆ ಇನ್ನಿತರ ಕ್ರೀಡೆಗಳ ಬೆಟ್ಟಿಂಗ್‌ನಲ್ಲಿ ತೊಡಗಿ ಸಾಲ ಮಾಡಿಕೊಂಡು ಕೌಟುಂಬಿಕ ಕಲಹಗಳಿಗೆ ಗುರಿಯಾದವರು, ಕುಟುಂಬಸಮೇತ ಆತ್ಮಹತ್ಯೆ ಮಾಡಿಕೊಂಡವರ ಬಗ್ಗೆ ವರದಿಗಳು ಹೆಚ್ಚಾಗಿವೆ. ಅನೇಕ ಯುವಕರಿಗೆ ಇದು ಒಂದು ಗೀಳಾಗಿ ಮಾರ್ಪಟ್ಟಿದ್ದು, ಮಾನಸಿಕ ಅಸ್ವಸ್ಥತೆಗೂ ಒಳಗಾಗುತ್ತಿದ್ದಾರೆ. ಇಂಥವರ ಸಂಖ್ಯೆ ಕೋಟಿಗಳ ಲೆಕ್ಕದಲ್ಲಿ ಇದೆ.

ಈ ವಿಚಾರ ಸಂಸತ್ತಿನಲ್ಲಿಯೂ ಇತ್ತೀಚೆಗೆ ಪ್ರತಿಧ್ವನಿಸಿ, ಎಲ್ಲ ಆನ್‌ಲೈನ್ ವೆಬ್‌ಸೈಟ್‌, ಆ್ಯಪ್‌ಗಳನ್ನು ನಿರ್ಬಂಧಿಸಬೇಕು ಎನ್ನುವ ಕೂಗೆದ್ದಿತ್ತು. ಆದರೆ, ಇದು ರಾಜ್ಯಪಟ್ಟಿಯಲ್ಲಿ ಬರುವ ವಿಚಾರವಾಗಿದ್ದು, ರಾಜ್ಯಗಳ ಮಟ್ಟದಲ್ಲೇ ಕಾನೂನು ತರಬೇಕು ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದರು. ಇಷ್ಟಾದರೂ ಕೇಂದ್ರವು ಆನ್‌ಲೈನ್ ಗೇಮಿಂಗ್ ಸಂಬಂಧ ಕೆಲವು ನಿಯಮಗಳನ್ನು ರೂಪಿಸಿದ್ದು, 1,410 ಆನ್‌ಲೈನ್‌ ಗೇಮಿಂಗ್‌ ಆ್ಯಪ್‌/ವೆಬ್‌ಸೈಟ್‌ಗಳನ್ನು (2022ರಿಂದ 2025 ಫೆಬ್ರುವರಿವರೆಗೆ) ನಿರ್ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದರು. ಅದರ ಹೊರತಾಗಿಯೂ ಇಂಥ ಪ್ರಕರಣಗಳು ವರದಿಯಾದರೆ, ತಪ್ಪಿತಸ್ಥರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) 112ರ ಅಡಿ ಕ್ರಮ ಜರುಗಿಸಲಾಗುವುದು ಎಂದಿದ್ದರು.

ಭಾರತದಲ್ಲಿ ಜೂಜು ಸಾಂಪ್ರದಾಯಿಕ ಕ್ರೀಡೆ ಎಂಬಂತೆ ನಡೆದುಬಂದಿದ್ದು, ಅದನ್ನು ನಿರ್ಬಂಧಿಸಲು 1867ರ ಸಾರ್ವಜನಿಕ ಜೂಜಾಟ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ಅದನ್ನು ಸಂವಿಧಾನದ 7ನೇ ಪರಿಚ್ಛೇದದಲ್ಲಿ ಸೇರಿಸಲಾಗಿದ್ದು, ರಾಜ್ಯಗಳು ಬಯಸಿದರೆ ಅದನ್ನು ಹಾಗೆಯೇ ಉಳಿಸಿಕೊಳ್ಳಬಹುದು ಇಲ್ಲವೇ ಬದಲಾಯಿಸಿಕೊಳ್ಳಬಹುದು ಎಂದು ಹೇಳಲಾಗಿತ್ತು. ಆನ್‌ಲೈನ್ ಗೇಮಿಂಗ್‌ಗೆ ಸಂಬಂಧಿಸಿದ ಕಾಯ್ದೆ/ನಿಯಮಗಳೂ ಬಹುತೇಕ ಹೀಗೆಯೇ ಇವೆ. ಹಲವು ರಾಜ್ಯಗಳಲ್ಲಿ ಆನ್‌ಲೈನ್ ಗೇಮಿಂಗ್ ಅನ್ನು ನಿಷೇಧಿಸಲಾಗಿದ್ದರೆ, ಕೆಲವು ರಾಜ್ಯಗಳಲ್ಲಿ ಕಾನೂನುಬದ್ಧಗೊಳಿಸಲಾಗಿದೆ. 

ತೆಲಂಗಾಣ ರಾಜ್ಯ 2017ರಲ್ಲಿ ಮೊದಲ ಬಾರಿಗೆ ಆನ್‌ಲೈನ್‌ ಕಾರ್ಡ್‌ ಆಟ ಸೇರಿದಂತೆ ಆನ್‌ಲೈನ್‌ ಗೇಮಿಂಗ್‌ಗೆ ನಿರ್ಬಂಧ ವಿಧಿಸಿತ್ತು. ನಾಗಾಲ್ಯಾಂಡ್‌ ರಾಜ್ಯವು ಕೌಶಲ ಆಧಾರಿತ ಆನ್‌ಲೈನ್‌ ಗೇಮ್‌ಗೆ ಅವಕಾಶ ಕಲ್ಪಿಸಿದೆ. ಆದರೆ, ಆನ್‌ಲೈನ್‌ ಬೆಟ್ಟಿಂಗ್‌ ನಿರ್ಬಂಧಿಸಿದೆ. ಛತ್ತೀಸಗಢ ಸೇರಿದಂತೆ ಕೆಲವು ರಾಜ್ಯಗಳು ಈ ಮಾದರಿಯನ್ನು ಅನುಸರಿಸಿವೆ. ಸಿಕ್ಕಿಂ, ಗೋವಾಗಳಲ್ಲಿ ಆನ್‌ಲೈನ್‌ ಬೆಟ್ಟಿಂಗ್‌ಗೆ ಅನುಮತಿ ಇದೆ.  

ಆನ್‌ಲೈನ್ ಆಟಗಳನ್ನು ಕೌಶಲ ಆಧಾರಿತ ಆಟ (ಸ್ಕಿಲ್ ಬೇಸ್ಡ್) ಮತ್ತು ಅದೃಷ್ಟ ಆಧಾರಿತ ಆಟ (ಚಾನ್ಸ್ ಬೇಸ್ಡ್) ಎಂದು ವಿಭಾಗಿಸಲಾಗಿದೆ. ಜೂಜಾಟದ ಉದ್ದೇಶದಿಂದ ನಡೆಯುತ್ತಿರುವ ರಿಯಲ್ ಮನಿ ಗೇಮ್‌ಗಳಿಗೆ (ಆರ್‌ಎಂಜಿ) ಮತ್ತು ಹಣವನ್ನು ಪಣಕ್ಕಿಟ್ಟು ಆಡುವ ಆನ್‌ಲೈನ್‌ ಗೇಮ್ಸ್‌ಗೆ ಅವಕಾಶವಿಲ್ಲ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ 2023ರಲ್ಲಿ ಜಾರಿಗೆ ತಂದಿರುವ ಮಾಹಿತಿ ತಂತ್ರಜ್ಞಾನ (ಮಧ್ಯಸ್ಥಿಕೆ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಸಂಹಿತೆ) ನಿಯಮಗಳು ಹೇಳುತ್ತವೆ. ಇದರ ನಿರ್ವಹಣೆಗೆ ಸರ್ಕಾರವು ಸ್ವಯಂ ನಿಯಂತ್ರಣಾ ಸಂಸ್ಥೆಗಳನ್ನು (ಎಸ್‌ಆರ್‌ಬಿ) ರೂಪಿಸಬೇಕೆಂದು, ಅದರಲ್ಲಿ ಉದ್ಯಮ ರಂಗದ ತಜ್ಞರು, ಮಕ್ಕಳ ತಜ್ಞರು, ಮಾನಸಿಕ ತಜ್ಞರು ಇರಬೇಕು ಎಂದು ಅವು ಹೇಳುತ್ತವೆ. ಎಸ್‌ಆರ್‌ಬಿಗಳು ಯಾವ ಆರ್‌ಎಂಜಿಗಳಿಗೆ ಅನುಮತಿ ನೀಡಬೇಕು ಎಂದು ಶಿಫಾರಸು ಮಾಡುವ ಅಧಿಕಾರ ಹೊಂದಿರುತ್ತವೆ.

ಇಷ್ಟಾದರೂ ಯಾವುದು ಕೌಶಲ ಆಧಾರಿತ ಆಟ, ಯಾವುದು ಅದೃಷ್ಟ ಆಧಾರಿತ ಆಟ, ಯಾವುದು ಜೂಜು ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಪ್ರಕರಣವೊಂದರಲ್ಲಿ, ಪೋಕರ್, ರಮ್ಮಿ ಇವು ಕೌಶಲ ಆಧಾರಿತ ಆಟಗಳು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆನ್‌ಲೈನ್ ಗೇಮಿಂಗ್ ಮತ್ತು ಕ್ರಿಪ್ಟೊ ಕರೆನ್ಸಿಯಂಥ ವಿಚಾರಗಳಲ್ಲಿ ಕೇಂದ್ರ ಸರ್ಕಾರವು ಕಠಿಣ ನಿಲುವು ತಳೆಯಲು ಸುಪ್ರೀಂ ಕೋರ್ಟ್ ಅಡ್ಡಿಯಾಗಿದೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಇತ್ತೀಚೆಗೆ ಹೇಳಿದ್ದರು. 

ಇದರ ನಡುವೆಯೇ ಆನ್‌ಲೈನ್ ರಿಯಲ್ ಮನಿ ಗೇಮಿಂಗ್ ಕಂಪನಿಗಳು, ಆಲ್ ಇಂಡಿಯಾ ಗೇಮಿಂಗ್ ಫೆಡರೇಷನ್ (ಎಐಜಿಎಫ್), ದ ಫೆಡರೇಷನ್ ಆಫ್ ಫ್ಯಾಂಟಸಿ ಸ್ಪೋರ್ಟ್ಸ್ (ಎಫ್‌ಐಎಫ್‌ಎಸ್‌) ಮತ್ತು
ಇ–ಗೇಮಿಂಗ್ ಫೆಡರೇಷನ್ (ಇಜಿಎಫ್) ಜಂಟಿಯಾಗಿ ನೀತಿಸಂಹಿತೆಗೆ (ಸಿಒಇ) ಸಹಿ ಹಾಕಿವೆ. ಈ ಮೂಲಕ ರಕ್ಷಣಾತ್ಮಕ ಗೇಮಿಂಗ್ ಪದ್ಧತಿಗಳು, ಆಟ ಆಡುವವರ ಸುರಕ್ಷತೆ ಮತ್ತು ಅವರ ಇ ಕೆವೈಸಿ ದೃಢೀಕರಣ, ಹಣ  ತೊಡಗಿಸುವ ಮಿತಿ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲು ತೀರ್ಮಾನಿಸಿವೆ.

ಭಾರತವು ಆನ್‌ಲೈನ್ ಗೇಮಿಂಗ್‌ನಲ್ಲಿ ವಿಶ್ವದ ಪ್ರಮುಖ ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ವಿದೇಶಿ ಗೇಮಿಂಗ್ ಕಂಪನಿಗಳಿಗೆ ನೆಚ್ಚಿನ ಸ್ಥಳವಾಗಿದೆ. ಇದರ ಬೆನ್ನಲ್ಲೇ ಇದರಿಂದ ಮನೆ–ಮಠ, ಕೊನೆಗೆ ಪ್ರಾಣವನ್ನೂ ಕಳೆದುಕೊಳ್ಳುತ್ತಿರುವವರ ಬಗ್ಗೆಯೂ ಕಳವಳ ವ್ಯಕ್ತವಾಗಿದೆ.

ದಿಢೀರ್ ಹಣ ಗಳಿಕೆಯ ಆಸೆಯಿಂದ ಯುವಕರು ಆನ್‌ಲೈನ್ ಗೇಮಿಂಗ್‌ ಬಲೆಗೆ ಬೀಳುತ್ತಿದ್ದು, ಕ್ಷಿಪ್ರಗತಿಯಲ್ಲಿ ಹಣ ಕಳೆದುಕೊಳ್ಳುತ್ತಿರುವುದು ಹೆಚ್ಚಾಗುತ್ತಿದೆ. ಈ ದಿಸೆಯಲ್ಲಿ ತಮಿಳುನಾಡು ಸರ್ಕಾರ ಆರ್‌ಎಂಜಿ ಆನ್‌ಲೈನ್ ಗೇಮ್ಸ್ ಅನ್ನು ನಿಷೇಧಿಸಿದ್ದು, ಕಠಿಣ ನಿಯಮಗಳನ್ನು ಪ್ರಕಟಿಸಿದೆ. ಆನ್‌ಲೈನ್ ಬೆಟ್ಟಿಂಗ್ ಮತ್ತು ಗೇಮಿಂಗ್‌ ಆ್ಯಪ್‌ಗಳ ಬಗ್ಗೆ ತನಿಖೆಗಾಗಿ ವಿಶೇಷ ತನಿಖಾ ದಳ (ಎಸ್‌ಐಟಿ) ರಚನೆಗೆ ತೆಲಂಗಾಣ ಸರ್ಕಾರ ಮುಂದಾಗಿದೆ. ಆನ್‌ಲೈನ್ ಗೇಮಿಂಗ್ ವಿರುದ್ಧ ಇನ್ನಷ್ಟು ಕಠಿಣ ಕ್ರಮ ಜರುಗಿಸಬೇಕು ಎನ್ನುವ ಒತ್ತಾಯ ಕರ್ನಾಟಕವೂ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಕೇಳಿಬರುತ್ತಿದೆ.

ಆನ್‌ಲೈನ್‌ ಗೇಮ್‌ ಎಂದರೆ ಬಳಕೆದಾರರು ಕಂಪ್ಯೂಟರ್‌ ಅಥವಾ ಮಧ್ಯವರ್ತಿಯೊಬ್ಬರ ಮೂಲಕ ಇಂಟರ್‌ನೆಟ್‌ನಲ್ಲಿ ಆಡುವ ಆಟವೇ ಆನ್‌ಲೈನ್‌ ಗೇಮ್‌.

ರಿಯಲ್‌ ಮನಿ ಗೇಮ್‌ ಎಂದರೆ ಬಳಕೆದಾರರೊಬ್ಬರು ನಗದು ಅಥವಾ ಇತರೆ ರೂಪದಲ್ಲಿ ಹಣವನ್ನು ಠೇವಣಿ ಇಟ್ಟು ಆ ಮೊತ್ತದಿಂದ ಲಾಭ ಗಳಿಸುವ ಉದ್ದೇಶದಿಂದ ಆನ್‌ಲೈನ್‌ನಲ್ಲಿ ಆಡುವ ಆಟ (ಇಲ್ಲಿ ಲಾಭ ಎಂದರೆ ಬಹುಮಾನ, ನಗದು ಅಥವಾ ಬೇರೆ ಯಾವುದಾದರು ವಸ್ತು).

ರಾಜ್ಯದಲ್ಲೂ ನಿಷೇಧಕ್ಕೆ ಪ್ರಯತ್ನ 

ಆನ್‌ಲೈನ್‌ ಬೆಟ್ಟಿಂಗ್‌, ಗೇಮಿಂಗ್‌ಗಳ ನಿಯಂತ್ರಣಕ್ಕೆ ಕರ್ನಾಟದಲ್ಲೂ ಸರ್ಕಾರ ಪ್ರಯತ್ನಿಸಿದೆ.

ಹಣವನ್ನು ಪಣವಾಗಿರಿಸಿ ಆನ್‌ಲೈನ್‌ ಮೂಲಕ ಆಡುವ ಎಲ್ಲ ಬಗೆಯ ಜೂಜುಗಳ ವಿರುದ್ಧ ಕ್ರಮ ಜರುಗಿಸಲು ಪೊಲೀಸರಿಗೆ ಅಧಿಕಾರ ನೀಡುವ ನಿಟ್ಟಿನಲ್ಲಿ ಕರ್ನಾಟಕ ಪೊಲೀಸ್‌ ಕಾಯ್ದೆಗೆ (1963) ತಿದ್ದುಪಡಿ ತಂದು 2021ರ ಅಕ್ಟೋಬರ್‌ 5ರಂದು ಹೊಸ ಕಾನೂನು ಜಾರಿಗೆ ತರಲಾಗಿತ್ತು.  

ತಿದ್ದುಪಡಿ ರದ್ದು ಕೋರಿ ‘ಆಲ್ ಇಂಡಿಯಾ ಗೇಮಿಂಗ್ ಫೆಡರೇಷನ್ ಆಫ್ ಇಂಡಿಯಾ’ ಹಾಗೂ ‘ಗ್ಯಾಲಕ್ಟಸ್ ಫನ್‌ವೇರ್ ಟೆಕ್ನಾಲಜೀಸ್’ ಸೇರಿದಂತೆ ಹಲವು ಗೇಮಿಂಗ್‌ ಕಂಪನಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದವು. ಕಾಯ್ದೆಗೆ ತರಲಾಗಿದ್ದ ತಿದ್ದುಪಡಿಯನ್ನು ಹೈಕೋರ್ಟ್‌ 2022ರ ಫೆಬ್ರುವರಿಯಲ್ಲಿ  ರದ್ದುಗೊಳಿಸಿತ್ತು.  

ಹೈಕೋರ್ಟ್‌ ತೀರ್ಪಿನ ವಿರುದ್ಧ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಅದಿನ್ನೂ ಇತ್ಯರ್ಥಕ್ಕೆ ಬಾಕಿ ಇದೆ.

2024ರ ಫೆಬ್ರುವರಿಯಲ್ಲಿ ಆನ್‌ಲೈನ್ ಗೇಮಿಂಗ್‌, ಬೆಟ್ಟಿಂಗ್‌ ಬಗ್ಗೆ ಸದನದಲ್ಲಿ ಚರ್ಚೆಯಾಗಿತ್ತು. ಈ ಸಂದರ್ಭದಲ್ಲಿ ಇವುಗಳ ನಿಷೇಧಕ್ಕೆ ಹೊಸ ಕಾನೂನು ತರಲು ಸರ್ಕಾರ ಯೋಜಿಸಿದೆ ಎಂದು ಗೃಹ ಸಚಿವ ಪರಮೇಶ್ವರ ಮತ್ತು ಐಟಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದರು. ಇತ್ತೀಚೆಗೆ ನಡೆದ ಹೂಡಿಕೆದಾರರ ಸಮಾವೇಶದ ಸಂದರ್ಭದಲ್ಲೂ ಪ್ರಿಯಾಂಕ್‌ ಖರ್ಗೆ ಅವರು ಹೊಸ ಕಾನೂನು ಜಾರಿಗೆ ತರುವ ಬಗ್ಗೆ ಮಾತನಾಡಿದ್ದಾರೆ. ಛತ್ತೀಸಗಢದ ಮಾದರಿಯಲ್ಲಿ ಕೌಶಲ ಆಧಾರಿತ ಗೇಮಿಂಗ್‌ಗೆ ಅವಕಾಶ ಕೊಟ್ಟು, ಅದೃಷ್ಟ ಆಧಾರಿತ ಗೇಮಿಂಗ್‌ಗೆ ನಿರ್ಬಂಧ ಹೇರುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ.

ಕ್ರಮ ಏಕಿಲ್ಲ?

ಆನ್‌ಲೈನ್ ಆಟಗಳ ಮೇಲೆ ಕೇಂದ್ರ ಸರ್ಕಾರವು ಶೇ 28ರಷ್ಟು ಜಿಎಸ್‌ಟಿ ವಿಧಿಸುತ್ತಿದೆ. ಜತೆಗೆ, ಅದರಿಂದ ಬರುವ ಆದಾಯದ ಮೇಲೆ ಶೇ 30ರಷ್ಟು ತೆರಿಗೆ ವಿಧಿಸುತ್ತಿದೆ. ‌ಆನ್‌ಲೈನ್‌ ಗೇಮಿಂಗ್‌ನಿಂದಾಗಿ ಸರ್ಕಾರಗಳಿಗೆ (ಕೇಂದ್ರ ಮತ್ತು ರಾಜ್ಯ) ವಾರ್ಷಿಕವಾಗಿ ದೊಡ್ಡ ಮೊತ್ತದ ಆದಾಯ ಬರುತ್ತದೆ. ಈ ಕಾರಣಕ್ಕಾಗಿಯೇ ಕಠಿಣ ನಿಲುವು ತಳೆಯುತ್ತಿಲ್ಲ ಎನ್ನುವ ಆರೋಪವೂ ಇದೆ.

ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆ

ಭಾರತದ ಆನ್‌ಲೈನ್‌ ಗೇಮಿಂಗ್‌ ಮಾರುಕಟ್ಟೆ ವರ್ಷದಿಂದ ವರ್ಷಕ್ಕೆ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. 2024ರಲ್ಲಿ ಭಾರತದ ಆನ್‌ಲೈನ್‌ ಗೇಮಿಂಗ್  ಮಾರುಕಟ್ಟೆಯ ಮೌಲ್ಯ
₹32 ಸಾವಿರ ಕೋಟಿಗೆ ತಲುಪಿದೆ ಎಂದು ಎರಡು ಪ್ರತ್ಯೇಕ ಅಧ್ಯಯನ ವರದಿಗಳು ಹೇಳಿವೆ. ಜಿಎಸ್‌ಟಿ ಹೊರೆಯ ನಡುವೆಯೂ ಆನ್‌ಲೈನ್‌ ಗೇಮಿಂಗ್‌ನ ವಾರ್ಷಿಕ ಸಂಯುಕ್ತ ಬೆಳವಣಿಗೆ ದರ ಶೇ 23ರಷ್ಟಿದೆ.

ಗೇಮಿಂಗ್‌ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಲುಮಿಕೈ ಸಂಸ್ಥೆಯು ಗೂಗಲ್‌ನ ಸಹಭಾಗಿತ್ವದಲ್ಲಿ ಸಿದ್ಧಪಡಿಸಿದ ವರದಿ ಪ್ರಕಾರ, 2024ರಲ್ಲಿ ಭಾರತದಲ್ಲಿ ಆನ್‌ಲೈನ್‌ ಗೇಮಿಂಗ್‌ ಮಾರುಕಟ್ಟೆ ಮೌಲ್ಯ ₹32,512 ಕೋಟಿ (380 ಕೋಟಿ ಡಾಲರ್‌). ರಿಯಲ್‌ ಮನಿ ಗೇಮಿಂಗ್‌ ವೇದಿಕೆಯಾದ ವಿನ್‌ಝೊ ಗೇಮ್ಸ್‌ ಮತ್ತು ಐಎಐಸಿ ಜಂಟಿ ವರದಿಯ ಪ್ರಕಾರ ಇದು ₹31,650 ಕೋಟಿ (370 ಕೋಟಿ ಡಾಲರ್‌). ಆನ್‌ಲೈನ್‌ ಗೇಮಿಂಗ್‌ ಮಾರುಕಟ್ಟೆಗೆ ರಿಯಲ್‌ ಮನಿ ಗೇಮಿಂಗ್‌ (ಆರ್‌ಎಂಜಿ) ಕೊಡುಗೆ ಶೇ 86ರಷ್ಟಿದೆ. 2029ರ ವೇಳೆಗೆ ಆನ್‌ಲೈನ್‌ ಗೇಮಿಂಗ್‌ ಮಾರುಕಟ್ಟೆ ಮೌಲ್ಯ ₹78 ಸಾವಿರ ಕೋಟಿಗೆ ತಲುಪಲಿದೆ ಎಂದು ಎರಡೂ ವರದಿಗಳು ಹೇಳಿವೆ. ಅಂದರೆ ವಾರ್ಷಿಕವಾಗಿ ಶೇ 20ರಷ್ಟು ಬೆಳವಣಿಗೆ ಹೊಂದಲಿದೆ. ದೇಶದಲ್ಲಿ 59 ಕೋಟಿಯಷ್ಟು ಮಂದಿ ಆನ್‌ಲೈನ್‌ ಗೇಮಿಂಗ್‌ನಲ್ಲಿ ತೊಡಗಿದ್ದಾರೆ.

ಇದು ಅಧಿಕೃತ ವಹಿವಾಟಿನ ಲೆಕ್ಕಾಚಾರ. ಆದರೆ, ಹಲವು ಗೇಮಿಂಗ್‌ ಕಂಪನಿಗಳು, ಗೇಮ್‌ಗಳೂ ಅನಧಿಕೃತವಾಗಿ ಕಾರ್ಯಾಚರಿಸುತ್ತಿವೆ. ಆನ್‌ಲೈನ್‌ ಗೇಮಿಂಗ್‌, ಬೆಟ್ಟಿಂಗ್‌ನಲ್ಲಿ ಕಪ್ಪು ಹಣದ ಚಲಾವಣೆಯೂ ದೊಡ್ಡ ಮಟ್ಟದಲ್ಲಿ ಆಗುತ್ತಿದೆ ಎಂದೂ ವಿಶ್ಲೇಷಿಸಲಾಗುತ್ತಿದೆ. 

(ಆಧಾರ: ಪಿಟಿಐ, ಲುಮಿಕೈ ವರದಿ, ಮಾಹಿತಿ ತಂತ್ರಜ್ಞಾನ ಸಚಿವಾಲಯದ ನಿಯಮಗಳು, ಪಿಡಬ್ಲ್ಯುಸಿ ಇಂಡಿಯಾ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.